ತನ್ನಿಮಿತ್ತ
ಶ್ರೀದೇವಿ ವೈದ್ಯ
ವಜ್ರಾದಪಿ ಕಠೋರಾಣಿ ಮೃದುನಿ ಕುಸುಮಾದಪಿ
ಲೋಕೋತ್ತರಾಣಾಮ್ ಚೇತಾಂಸಿ ಕೋ ಹಿ ವಿಜ್ಞಾತುಮರ್ಹತಿ
ಅಪ್ಪ ಅನ್ನೋ ವ್ಯಕ್ತಿನೇ ಮಕ್ಕಳ ಶಕ್ತಿ, ಅಪ್ಪ ವ್ಯವಹಾರದಲ್ಲಿ ಇಂದ್ರನ ವಜ್ರಾಯುಧದಷ್ಟು ಕಠಿಣನೂ ಹೌದು ಅಂತಃಕರಣದಲ್ಲಿ ಹೂವಿನಷ್ಟು ಮೃದುನೂ ಹೌದು. ಪ್ರಸಂಗ ಹಾಗೂ ಪರಿಸ್ಥಿತಿ ಹೇಗೋ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಸಮಯಕ್ಕೆ ತಕ್ಕಂತೆ ಗಟ್ಟಿಯಾಗಿ ಹಾಗೂ ಬೇಕಾದಾವಾಗ ಹೂವಿನಷ್ಟು ಮೃದುವಾಗಿ ವರ್ತಿಸುತ್ತಾರೆ. ಈ ವೈಶಿಷ್ಟ್ಯವೇ ತಂದೆ ಯನ್ನು ಶ್ರೇಷ್ಠ ವ್ಯಕ್ತಿಯಾಗಿ ಮಾಡುತ್ತದೆ. ಅಪ್ಪ ಅನ್ನೋ ಆಲದ ಮರಕ್ಕೆ ಜೀಕಿದಷ್ಟು ಜೋತಾಡಿದಷ್ಟು ಬೇರೆ ಯಾವುದೇ ಮರಕ್ಕೆ (ಸಂಬಂಧಕ್ಕೆ) ಜೋತುಬೀಳಲ್ಲ, ಅಪ್ಪ ಅನ್ನೋದು ಸಿಹಿಯಾದ ಮಾವಿನಹಣ್ಣು ಹೌದು.
ಆದರೆ ಔಷಧಿಯಾಗಬೇಕಾದರೆ ಬೇವಿನಷ್ಟು ಕಹಿಯೂ ಹೌದು. ಅಪ್ಪನ ವ್ಯಕ್ತಿತ್ವ ತೆಂಗಿನ ಮರದಷ್ಟು ಎತ್ತರವೂ ಹೌದು ತೆಂಗಿನ ಕಾಯಿಯಷ್ಟು ಗಟ್ಟಿಯೂ ಹೌದು ಕೊಬ್ಬರಿಯಷ್ಟು ರುಚಿಯೂ ಹೌದು ಎಳನೀರಿನಷ್ಟು ಸಿಹಿಯೂ ಹೌದು. ನಾನು ಚಿಕ್ಕಂದಿ ನಿಂದಲೂ ತಾಯಿಗಿಂತ ತಂದೆಗೆ ವಾಲುವುದು ಜಾಸ್ತಿ. ಅವರ ಜತೆಗೆ ಆಟ ಊಟ ಓದು ಎ. ಹೆಚ್ಚು ಮಕ್ಕಳು ಮೊದಲ ಪದ ಅಮ್ಮ. ಆದರೆ ನಾನು ಅಪ್ಪ ಅಂತ ಕರಿದಿz ಹೇಳೋರು ನಮ್ಮಪ್ಪ.
ಚಿಕ್ಕಂದಿನಿಂದಲೂ ಅಷ್ಟೇ ನನಗೆ ಅಪ್ಪ ಅನ್ನುವುದು ಒಂದು ಅದ್ಭುತ ವ್ಯಕ್ತಿತ್ವ. ಹೋಂವರ್ಕ್ ಮಾಡುವಾಗ ಅಪ್ಪನೆ ಕ್ಯಾಲ್ಕು ಲೇಟರ್ ಅಪ್ಪ 457*153 ಎಷ್ಟು ಅಂತ ಕೇಳಿದರೆ ಅವರು ನೀನೆ ಲೆಕ್ಕ ಮಾಡು ಅಂದು 69921 ಅಂತ ಪಟ್ಟನೆ ಹೇಳೋರು. ಇಷ್ಟು ಬೇಗ ಹೇಗೆ ಲೆಕ್ಕ ಹಾಕ್ತಾರೆ ಅಂತ ಆಗಾಧ ಆ ಚಿಕ್ಕ ಮನಸ್ಸಿಗೆ, ಇಂಗ್ಲೀಷ್ ಓದುವಾಗ ಯಾವುದಾದರೂ ಪದದ ಅರ್ಥ ಕೇಳಿದರೆ ಉದಾಹರಣೆ ಸಹಿತ ಪೂರ್ತಿ ವಿವರಿಸುವರು. ಕನ್ನಡ ವ್ಯಾಕರಣವಾಗಲಿ, ಇತಿಹಾಸವಾಗಲಿ ಪಟ್ ಪಟ್ ಅಂತ ಹೇಳಿ ಬಿಡೋರು. ನಮ್ಮ ತಂದೆ ಒಂದು ತರಹ ಎನ್ಸೆ ಕ್ಲೋಪೀಡಿಯಾ.
ಗೂಗಲ್ ಇರದ ಆ ಕಾಲದಲ್ಲಿ ಅಪ್ಪಾನೇ ಗೂಗಲ. ಅಪ್ಪ ನಮ್ಮ ಸ್ಕೂಲಿನಲ್ಲಿ ಭಾಷಣ ಸರ್ಧೆ ಇದೆ ಬಾಲಗಂಗಾಧರ ತಿಲಕ್ ಅವ್ರ ಜಯಂತಿ ಅಂದ್ರೆ ತಕ್ಷಣವೇ ಹೂಂ ಬರೆದುಕೊ ಎನ್ನುವವರು, ಶಿಕ್ಷಕರ ದಿನಾಚರಣೆ ಇದೆ ನಾನು ಭಾಷಣ ಮಾಡಬೇಕು ಅಂತಿದೀನಿ ಅಂದ್ರೆ ತಕ್ಷಣವೇ ಪೆನ್ನು ಪುಸ್ತಕ ತೆಗೆದುಕೊಂಡು ಬಾ ಅನ್ನುತ್ತಲೇ ಬಾಲಗಂಗಾಧರ ತಿಲಕ್ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹುಟ್ಟಿದ ಇಸವಿ, ಓದಿದ ಶಾಲೆ, ಕಲಿತ ಕಾಲೇಜು, ಕಲಿಸಿದ ಕಾಲೇಜು ಬಗ್ಗೆ ನಿಖರವಾಗಿ ಹೇಳುವರು. ಆ ಚಿಕ್ಕ ವಯಸ್ಸಿನಲ್ಲಿ ಅಪ್ಪ ಅನ್ನೋ ಗೂಗಲ್ ಮಕ್ಕಳ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುವುದು.
ನಮ್ಮ ದೇಶದಲ್ಲಿ ತಾಯಿದೇವರು ಅಂದ್ರು ಅದರಲ್ಲಿ ಎರಡು ಮಾತಿಲ್ಲ, ಆದರೆ ಸಂಸಾರದ ನೊಗ ಹೊತ್ತು ಎಳೆಯೋದು ತಾಯಿ ಮತ್ತು ತಂದೆ ಇಬ್ಬರೂ. ತಾಯಿಗೆ ಸಿಕ್ಕ ಪ್ರಾಮುಖ್ಯತೆ ತಂದೆಗೆ ಸಿಗಲೇ ಇಲ್ಲ. ರಾಮ ಕೌಶಲ್ಯನಂದನ, ಅವನ ವ್ಯಕ್ತಿತ್ವದಲ್ಲಿ, ಅವನ
ಸಾಧನೆಯಲ್ಲಿ ಅವನ ತಂದೆಯ ಪಾತ್ರವೂ ಇದೆ. ರಾಮನ ಅಗಲುವಿಕೆ ತಾಳಲಾರದೆ ದಶರಥ ಪ್ರಾಣ ತ್ಯಾಗ ಮಾಡಿದ. ಆದರೆ ಆ ಪ್ರಾಣ ತ್ಯಾಗ ಇತಿಹಾಸದಲ್ಲಿ ಗೌಣವಾಗಿ ಹೋಯಿತು.
ಶ್ರೀಕೃಷ್ಣ ದೇವಕೀನಂದನ, ಆದರೆ ಮಥುರೆಯ ಆ ಕಾರಾಗೃಹದಲ್ಲಿ ದೇವಕಿಯಷ್ಟೇ ನಿತ್ಯ ನರಕ ಅನುಭವಿಸಿದ ವಸುದೇವನ ಕಷ್ಟ ಕಾಣಲೇ ಇಲ್ಲ, ಕೃಷ್ಣನ ಜನ್ಮ ಸಮಯದಲ್ಲಿ ವಸುದೇವನು ಆ ಎಳೆ ಕೂಸನ್ನು ಗೋಕುಲಕ್ಕೆ ಬಿಟ್ಟು ಬರುವ ಗಟ್ಟಿ ನಿರ್ಧಾರ ವನ್ನು ಮಾಡದೆ ಇದ್ದರೆ ಇಂದು ಕೃಷ್ಣನ ಕಥೆ ಬೇರೇನೇ ಆಗಿರುತ್ತಿತ್ತು . ಪ್ರಪಂಚವನ್ನೇ ಜಯಿಸಿದ ವೀರಯೋಧನೊಬ್ಬ , ತಂದೆ ಯಾಗಿ ಮಕ್ಕಳ ಮುಂದೆ ಸೋಲುತ್ತಾನೆ. ಅಪ್ಪ ಎಂದರೆ ಬರಿ ಜನ್ಮದಾತನಲ್ಲ ಆತ ಬೈದು ಬುದ್ಧಿ ಹೇಳುವ ಗೆಳೆಯ, ಸಾಂತ್ವನ ಹೇಳುವ ಸಂಗಾತಿ. ತಾನು ಮಾಡಲಾರದ್ದನ್ನು ಮಕ್ಕಳು ಮಾಡಲಿ, ತಾನು ನೋಡದ್ದನ್ನು ಮಕ್ಕಳು ನೋಡಲಿ, ತಾನು ತಿನ್ನಲಾಗ ದನ್ನು ಮಕ್ಕಳು ತಿನ್ನಲಿ, ತಾನು ಸಾಧಿಸಲಾಗದ್ದನ್ನು ಮಕ್ಕಳು ಸಾಧಿಸಲಿ ಎಂದು ಹಗಲಿರುಳು ಪಟ್ಟ ಕಷ್ಟ, ಶ್ರಮ ಯಾವಾಗಲೂ ಎಲೆಮರೆಯ ಕಾಯಿಯೇ.
ಮಕ್ಕಳ ಏಳಿಗೆಗಾಗಿ ತನ್ನ ಸ್ವಂತ ಬೇಕು – ಬೇಡಗಳನ್ನೆಲ್ಲ ಕಡೆಗಣಿಸಿದ ತಂದೆಗೆ ನಮ್ಮ ಸಮಾಜದಲ್ಲಿ ತಾಯಿಯಷ್ಟು ಮಹತ್ವ ಸಿಗಲೇ ಇಲ್ಲ ಅಂತ ಬೇಜಾರು ಆಗುತ್ತದೆ. ತಂದೆ ಒಬ್ಬ ರಕ್ಷಕನಾಗಿ, ಶಿಕ್ಷಕನಾಗಿ, ಪಾಲಕನಾಗಿ, ಚಾಲಕನಾಗಿ, ಸಲಹೆಗಾರನಾಗಿ, ಕೇಳುಗನಾಗಿ, ಶಕ್ತಿಯಾಗಿ, ಯುಕ್ತಿಯಾಗಿ, ಹೆಂಡತಿ ಮಕ್ಕಳ ಒಂದು ನಗುವಿಗಾಗಿ ತನ್ನ ನಗುವನ್ನೇ ಮರೆತಿದ್ದು ಎಲ್ಲವು ನೆನಪಾಗುವುದು ಮಕ್ಕಳು ಬೆಳೆದು ದೊಡ್ಡವರಾಗಿ ತಾವು ತಂದೆಯಾದಾಗಲೇ.
ಮಗ ಐದು ವರ್ಷದವನಿದ್ದಾಗ ಅಪ್ಪ ಕೇಳಿದ್ದೆಲ್ಲ ತಂದು ಕೊಡೊ ಸೂಪರ್ ಹೀರೋ, ಅದೇ ಮಗ ಹತ್ತು ವರ್ಷದವನಿದ್ದಾಗ ಅಪ್ಪನಿಗೆ ಎಲ್ಲಾ ಗೊತ್ತು ಅನ್ನುವ ಅದ್ಭುತ, ಇವರಿಗೆಲ್ಲ ಹೇಗೆ ಗೊತ್ತು ಅನ್ನುವ ಅಭಿಮಾನ, ಅದೇ ಮಗ ಹದಿನೈದು ವರ್ಷ ದವನಾಗಿ ಚಿಗುರು ಮೀಸೆಯೊಡೆದಾಗ ಅಪ್ಪ ತುಂಬಾ ಸ್ಟ್ರಿಕ್ಟ್, ಅದೇ ಮಗ ಇಪ್ಪತ್ತು ವರ್ಷದವನಾದಾಗ ಅಪ್ಪನ ಜನರೇಶನ್ ಬೇರೆ ನಮ್ಮ ಜನರೇಶನ್ ಬೇರೆ, ಅದೇ ಮಗ ಇಪ್ಪತೈದು ವರ್ಷದವನಾದಾಗ ಅಯ್ಯೋ ಅಪ್ಪ ಯಾವದೋ ಕಾಲದ್ದು ಏನೋ ಕಥೆ ಹೇಳ್ತಾರೆ ಅನ್ನೋ ತಾತ್ಸಾರ, ಅದೇ ಮಗ ಮೂವತ್ತು ವರ್ಷದವನಾಗಿ ತನ್ನ ಎರಡು ವರ್ಷದ ಮಗನನ್ನು ಸುಧಾರಿಸುವುದು ಕಷ್ಟವಾದಾಗ ತನ್ನಪ್ಪ ತನ್ನನ್ನು ತಲೆ ಮೇಲೆ ಕೂಡಿಸಿಕೊಂಡು ಊರು ಸುತ್ತಿಸಿದ್ದು ನೆನಪಾಗುತ್ತೆ.
ಅದೇ ಮಗ ಮೂವತ್ತೈದು ವರ್ಷದವನಾದಾಗ ತನ್ನ ಮಕ್ಕಳ ಬೇಕು – ಬೇಡಗಳನ್ನು ನೋಡುವಾಗ ಅಪ್ಪ ನಾವು ಕೇಳಿದಕ್ಕೆ ಇಲ್ಲ ಅನ್ಲೆ ಇಲ್ಲಾ ಅಂತ ನೆನಪಾಗೋದು. ಆ ಮಗನಿಗೆ ಅರವತ್ತು ವರುಷವಾದಾಗಲೇ ತನ್ನ ತಂದೆ ಅನ್ನೋ ಆಗಾಧ, ಅದ್ಭುತ ವ್ಯಕ್ತಿತ್ವದ ಅರಿವಾಗುವುದು. ಆದರೆ ಅಷ್ಟರಲ್ಲಿ ತಂದೆ ಗೋಡೆ ಮೇಲಿರೋ ಫೋಟೋದಲ್ಲಿ ಹೋಗಿ ವರ್ಷಗಳೇ ಆಗಿರುತ್ತೆ.
ಇವತ್ತಿಗೂ ನಮ್ಮಲ್ಲಿ ತಂದೆಯ ಪ್ರಭಾವದಿಂದ ಉನ್ನತಿಯ ಉತ್ತುಂಗಕ್ಕೇರಿದವರು ಸುಮಾರು ಜನ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅಮಿತಾಭ್ ಬಚ್ಚನ್, ಪಿ ವಿ. ಸಿಂಧು, ಪಿ ಟಿ. ಉಷಾ, ಕರ್ಣಮ್ ಮಶ್ವರಿ, ಹರಿಯಾಣದ ಫೋಗತ್ ಸಹೋದರಿಯರು ಹೀಗೆ
ಎಷ್ಟೊಂದು ಸಾಧಕರ ಹಿಂದೆ ತಂದೆಯ ಬೆವರು, ತ್ಯಾಗ, ಸಮಯ ನೀರಾಗಿ ಹರಿದಿರುತ್ತದೆ.
ಪಿತಾ ಧರ್ಮ ಪಿತಾ ಸ್ವರ್ಗ ಪಿತಾಹಿ ಪರಮಂ ತಪಃ
ಪಿತಾರೀ ಪ್ರೀತಿಮಾಪನ್ನೇ ಪ್ರಿಯಂತೆ ಸರವದೇವತಃ
ಪದ್ಮ ಪುರಾಣದ ಈ ಶ್ಲೋಕದ ಪ್ರಕಾರ, ತಂದೆಯೇ ಧರ್ಮ, ತಂದೆಯೇ ಸ್ವರ್ಗ, ತಂದೆಯೇ ಪರಮ ತ್ಯಾಗ, ತಂದೆಯೇ ಪರಮ ತಪಸ್ಸು, ತಂದೆಯ ಸ್ಥಾನವು ಎಲ್ಲಾ ದೇವತೆಗಳಿಗಿಂತ ಮೇಲೆ. ಈ ಶ್ಲೋಕವು ತಂದೆಯ ಧರ್ಮವನ್ನು, ತಂದೆಯ ಕರ್ಮವನ್ನು ತಿಳಿಸುತ್ತದೆ. ಮೊದಲೆಲ್ಲ ತಂದೆಗೆ ತೀರ್ಥರೂಪರು ಎಂದು ಸಂಭೋಧಿಸುತ್ತಿದ್ದರು ಅಂದರೆ ಸರ್ವತೀರ್ಥಗಳಿಗೂ ಸಮಾನರು ಅಂತ. ಈಗ ಕಾಲ ಬದಲಾದ ಹಾಗೆ ಸಂಬೋಧನೆಯೂ ಬದಲಾಗಿದೆ.
ತಾಯಿ ಪ್ರೀತಿ ಆದರೆ ತಂದೆ ವಿಶ್ವಾಸ
ತಾಯಿ ರೀತಿ ಆದರೆ ತಂದೆ ನೀತಿ
ತಾಯಿ ಮಮಕಾರ ಆದರೆ ತಂದೆ ಶಿಷ್ಠಾಚಾರ
ತಾಯಿ ತ್ಯಾಗ ಆದರೆ ತಂದೆ ಯಾಗ
ತಾಯಿ ಭೂಮಿ ಆದರೆ ತಂದೆ ಆಕಾಶ
ತಾಯಿ ಆಧಾರ ಆದರೆ ತಂದೆ ಆಶ್ರಯ
ಹೀಗೆ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ತಂದೆ ಮತ್ತು ತಾಯಿ ಇಬ್ಬರಿಗೂ ತಮ್ಮದೇ ಆದ ಸ್ಥಾನಮಾನ ಇದೆ. ಮಹಾಭಾರತದಲ್ಲಿ ಯಕ್ಷನ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಯುಧಿಷ್ಠಿರನು ಭೂಮಿಗಿಂತ ಭಾರವಾಗಿದ್ದು ತಾಯಿ ಹಾಗೂ ಆಕಾಶಕ್ಕಿಂತ ಉನ್ನತ ವಾದದ್ದು ತಂದೆ ಎಂದು ತಂದೆ ತಾಯಿಯ ಹಿರಿಮೆಯನ್ನು ತಿಳಿಸುವ ಪ್ರಸಂಗವಿದೆ.
ಫಾದರ್ಸ್ ಡೇ ಎಂದು ಕೇಕ್ ಕಟ್ ಮಾಡಿ ಕಾರ್ಡ್ ಕೊಟ್ಟು ವಿಶ್ ಮಾಡೋಕಿಂತ, ಪ್ರತಿದಿನ ಒಂದೈದು ನಿಮಿಷ ಅವರಪಕ್ಕ ಕುಳಿತು ಅವರ ಬಗ್ಗೆ ನಿಜವಾದ ಪ್ರೀತಿ, ಕಾಳಜಿ, ಅಂತಃಕರಣ ತೋರಿಸಿದರೆ ಅವರ ಮುಖದಲ್ಲಿ ಒಂದು ಚಿಕ್ಕ ನಗು ತರಿಸಿದರೆ ಅದೇ ನಾವು ಅವರಿಗೆ ಕೊಡುವ ಗೌರವ. ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಗೌರವ ಮತ್ತು ಪ್ರೀತಿಯನ್ನು ಹಂಚೋಣ.