ಪ್ರವಾಸಿಗರಿಲ್ಲದೆ ಭಣಗುಡುತ್ತಿದೆ ಕನ್ನಂಬಾಡಿ ಕಟ್ಟೆಯ ಹಿನ್ನೀರಿನ ಆವರಣ
ವಿಶೇಷ ವರದಿ: ನಾಗಯ್ಯ ಲಾಳನಕೆರೆ ಮಂಡ್ಯ
ವಿಶ್ವವಿಖ್ಯಾತ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿತವಾಗಿರುವುದರಿಂದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ದೇವಾಲಯಗಳೀಗ ಗೋಚರಿಸುತ್ತಿವೆ. ಪ್ರವಾಸಿಗರಿಗೆ ಈ ಅಪರೂಪದ ದೃಶ್ಯವನ್ನು ನೋಡಲು ಸಿಗುವುದು ತೀರಾ ವಿರಳ. ಆದರೆ ಈ ಬಾರಿ ಲಾಕ್‌ಡೌನ್ ಇರುವುದರಿಂದ ಕನ್ನಂಬಾಡಿ ಕಟ್ಟೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.
೧೯೧೦-೧೧ರಲ್ಲಿ ಕೆಆರ್‌ಎಸ್ ಜಲಾಶಯವನ್ನು ನಿರ್ಮಿಸಿದ ನಂತರ ನೀರಿನ ಸಂಗ್ರಹ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಹಿನ್ನೀರಿ
ನಲ್ಲಿದ್ದ ಕನ್ನಂಬಾಡಿ ಗ್ರಾಮವೂ ಸೇರಿದಂತೆ ಸುತ್ತಲಿನ ಪ್ರದೇಶವೂ ಮುಳುಗಡೆಯಾಗಿತ್ತು. ಹೀಗೆ ಮುಳುಗಡೆಯಾದ ಗ್ರಾಮ
ದೊಳಗಿದ್ದ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯ, ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯ ಗಳು ಇದೀಗ ಕಾಣಿಸಿಕೊಳ್ಳುತ್ತಿವೆ. ಮಂಟಪ, ವಿಗ್ರಹ, ಕಲ್ಲಿನ ಚಿತ್ರಕಲೆ, ಕೆತ್ತನೆಗಳೂ ಗೋಚರಿಸುತ್ತಿವೆ. ದೇವಾಲಯಗಳು ಮಾತ್ರವಲ್ಲದೆ ಇತರ ದ್ವೀಪಗಳು ಪತ್ತೆಯಾಗಿವೆ.
ಜಲಾಶಯದ ಒಟ್ಟು ನೀರಿನ ಮಟ್ಟ 124.80 ಅಡಿಗಳು ತುಂಬಿದ ಸಂದರ್ಭದಲ್ಲಿ ಈ ಭಾಗದ ಹಿನ್ನೀರಿನಲ್ಲಿ ಯಾವುದೇ
ದ್ವೀಪಗಳು, ದೇವಾಲಯಳು ಗೋಚರವಾಗುವುದಿಲ್ಲ. ಹಿನ್ನೀರಿನ ಭಾಗ ಒಂದು ಸಮತಟ್ಟಾಗಿ ಸಮುದ್ರದಂತೆ ಕಾಣುತ್ತದೆ.
ಆದರೆ ನೀರಿನ ಮಟ್ಟ ೮೫ ಅಡಿಗಿಂತ ಕಡಿಮೆಯಾಗುತ್ತಿದ್ದಂತೆ ಕಟ್ಟೆಯೊಳಗಿನ ದೃಶ್ಯವೆಲ್ಲ ಸ್ಪಷ್ಟವಾಗಿ ಗೋಚರಿಸುತ್ತದೆ.
ಯಾವ ದೇವಸ್ಥಾನಗಳು ಗೋಚರ?
ಶ್ರೀ ಲಕ್ಷ್ಮಿ ನಾರಾಯಣ ದೇವಾಲಯ, ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯಗಳು, ಮಂಟಪ, ವಿಗ್ರಹ, ಕಲ್ಲಿನ ಚಿತ್ರಕಲೆ, ಕೆತ್ತನೆಗಳು ಮತ್ತು ದ್ವೀಪಗಳು ಪತ್ತೆಯಾಗಿವೆ.