Friday, 22nd November 2024

ಸಿಎಸ್‌ ರವಿಕುಮಾರ್‌ ಅವರಿಗೆ ಕನ್ನಡದ ಮೇಲೆ ಏಕೆ ದ್ವೇಷ ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರಕ್ಕೆ ಕಿಮ್ಮತ್ತು ನೀಡದ ಸಿಎಸ್

ಕನ್ನಡಿಗರ ಭಾವನೆಗಳಿಗೆ ಬೆಲೆ ಇಲ್ಲ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು

ಕನ್ನಡದಲ್ಲಿ ಸುತ್ತೋಲೆ ನೀಡುವಂತೆ ಮೂರು ಸುತ್ತೋಲೆ ನೀಡಿದರೂ, ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಕನ್ನಡಕ್ಕೆ ಬೆಲೆ ನೀಡುತ್ತಿಲ್ಲದಿರುವುದು ಕಂಡುಬರುತ್ತಿದೆ. ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯ ಎಂಬ ನಿಯಮವಿದ್ದರೂ, ಯಾವುದೇ
ಸುತ್ತೋಲೆಗಳು ಕನ್ನಡದಲ್ಲಿ ಬರುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕನ್ನಡ ಪ್ರಾಧಿಕಾರದ ಅಧ್ಯಕ್ಷರೇ ಪತ್ರ ಬರೆದರೂ ಸಿಎಸ್ ಸೂಕ್ತ ಉತ್ತರ ನೀಡುತ್ತಿಲ್ಲ.

ಕನ್ನಡದ ಬಳಕೆಯನ್ನೇ ಸಿಎಸ್ ರವಿಕುಮಾರ್ ಅವರೇ ಪಾಲನೆ ಮಾಡುತ್ತಿಲ್ಲ. ಹೀಗಾಗಿ, ಕನ್ನಡ ಬಳಕೆ ಸರಕಾರದ ಸುತ್ತೋಲೆ ಗಳಲ್ಲಿ ಕಣ್ಮರೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರವಿಕುಮಾರ್ ಅವರು ಕನ್ನಡದ ವಿರೋಧಿಯಂತೆ ನಡೆದು ಕೊಳ್ಳುತ್ತಿದ್ದು, ಪ್ರಾಧಿಕಾರದ ಮನವಿಗೂ ಬೆಲೆ ನೀಡದೆ ನಿತ್ಯ ಬಿಡುಗಡೆಯಾಗುವ ಕರೋನಾ ಸುತ್ತೋಲೆಗಳನ್ನು  ಇಂಗ್ಲಿಷ್‌ ನಲ್ಲಿಯೇ ಕೊಡುತ್ತಿರುವುದು ಕನ್ನಡಿಗರ ಆಕ್ರೋಶ ಹೆಚ್ಚಿಸಿದೆ.

ಅನ್‌ಲಾಕ್ ಮಾರ್ಗಸೂಚಿಗಳು, ಕರೋನಾಗೆ ಸಂಬಂಧಿಸಿದ ಯಾವುದೇ ಸುತ್ತೋಲೆಗಳಲ್ಲಿ ಕನ್ನಡವನ್ನು ಕಾಣುವುದೇ
ದುಸ್ತರ ವಾಗಿದೆ. ಇದಕ್ಕೆಲ್ಲ ರವಿಕುಮಾರ್ ಅವರ ಧೋರಣೆ ಮತ್ತು ಅವರ ಸುತ್ತಲೂ ಇರುವ ಕನ್ನಡ ವಿರೋಧಿ ಅಧಿಕಾರಿ ಬಳಗ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ಕನ್ನಡದಲ್ಲಿ ಸುತ್ತೋಲೆ ನೀಡಬೇಕು ಎಂಬ ಬದ್ಧತೆ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಇರುವ ಅಧಿಕಾರಿ ವರ್ಗಕ್ಕೆ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.

ಪ್ರಾಧಿಕಾರದಿಂದ ಸಿಎಂಗೆ ದೂರು: ಸಿಎಸ್ ರವಿಕುಮಾರ್ ಅವರ ಕನ್ನಡ ವಿರೋಧಿ ನಡೆಯ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ನೇತೃತ್ವದಲ್ಲಿ ಎಲ್ಲ ಮಾಜಿ ಅಧ್ಯಕ್ಷರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ದೂರು ನೀಡಲು ತೀರ್ಮಾನಿಸಿದೆ. ಶಾಸಕಾಂಗ ಏನೇ ಮಾಡಿದರೂ, ಅದನ್ನು ಕಾರ್ಯರೂಪಕ್ಕೆ ತರುವ ಕಾರ್ಯಾಂಗದ ಮುಖ್ಯಸ್ಥರು ಸಿಎಸ್ ಅವರೇ ಆಗಿದ್ದಾರೆ.

ಅವರಿಗೆ ಕನ್ನಡ ಭಾಷೆ ಕಡ್ಡಾಯ ಎಂಬ ನಿಮಯದ ಮೇಲೆ ಗೌರವ ಇಲ್ಲದಿದ್ದರೆ, ಆಡಳಿತದಲ್ಲಿ ಕನ್ನಡ ಬಳಕೆ ಸಾಧ್ಯವಾಗುವು ದಿಲ್ಲ. ಜತೆಗೆ, ಈ ನಿಟ್ಟಿನಲ್ಲಿ ಪ್ರಾಧಿಕಾರ ಅನೇಕ ಪತ್ರಗಳನ್ನು ಬರೆದು ಮನವಿ ಮಾಡಿದ್ದರೂ, ಕನ್ನಡ ಬಳಕೆ ಮಾಡದ ಅಧಿಕಾರಿ ಗಳ ಪಟ್ಟಿಯನ್ನು ಸಿಎಸ್ ಅವರಿಗೆ ಕೊಟ್ಟಿದ್ದರೂ, ಅವರು ಅದರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಮತ್ತು ಸ್ವತಃ ತಾವೇ ಹೊರಡಿಸಿದ ಸುತ್ತೋಲೆಗಳಲ್ಲಿ ಕನ್ನಡ ಬಳಕೆ ಮಾಡದಿರುವುದು ಅಕ್ಷಮ್ಯವಾಗಿದ್ದು, ಇದರ ವಿರುದ್ಧ ಹೋರಾಟ ನಡೆಸಬೇಕು ಎಂಬುದು ಕನ್ನಡ ಹೋರಾಟಗಾರರ ಅಭಿಪ್ರಾಯವಾಗಿದೆ.

ಹೋರಾಟಕ್ಕೆ ಮಣಿದ ಕೇಂದ್ರ
ಲೋಕಸಭೆ ಸಚಿವಾಲಯದ ಪಾರ್ಲಿಮೆಂಟರಿ ರಿಸರ್ಚ್ ಆಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಆಫ್ ಡೆಮಾಕ್ರಸಿ ವತಿಯಿಂದ ಸಂಸದರು, ಅಧಿಕಾರಿಗಳಿಗೆ ಭಾರತೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸುವ ಕಾರ್ಯಕ್ರಮದಲ್ಲಿ ಕನ್ನಡವನ್ನು ಕೈಬಿಡ ಲಾಗಿತ್ತು. ಈ ಬಗ್ಗೆ ರಾಜ್ಯದ ಕನ್ನಡ  ಹೋರಾಟಗಾರರು, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕೇಂದ್ರ ಸರಕಾರದ ಕನ್ನಡ ವಿರೋಧಿ ನೀತಿಯನ್ನು ವಿರೋಧಿಸಿ, ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಭಾಷೆಗಳ ಕಲಿಕಾ ಪಟ್ಟಿಯಲ್ಲಿ ಕನ್ನಡವನ್ನು ಹೊಸದಾಗಿ ಸೇರಿಸಿ, ಮರು ಆದೇಶ ಹೊರಡಿ ಸಿದೆ. ಆ ಮೂಲಕ ಕನ್ನಡಿಗರ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಂತಾಗಿದೆ.