Sunday, 15th December 2024

ಏನೇ ಅಗೋದಕ್ಕೆ ಮುನ್ನ ಒಳ್ಳೆಯ ವ್ಯಕ್ತಿಯಾಗೋದು ಚೆನ್ನ

ಅಭಿಪ್ರಾಯ

ಡಾ.ಕೆ.ಪಿ.ಪುತ್ತೂರಾಯ

ಜೀವನದಲ್ಲಿ ನಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ, ಸಂಪರ್ಕ ಸಂಬಂಧಗಳಿಗೆ ನಮಗೆ ಒಳ್ಳೆಯವರೇ ಬೇಕು. ಗಂಡ, ಶ್ರೀಮಂತ ನಲ್ಲದ, ಅಧಿಕಾರ ಅಂತಸ್ತು ಇಲ್ಲದ ಓರ್ವ ಸಾಮಾನ್ಯ ವ್ಯಕ್ತಿಯಾಗಿದ್ದರೂ ಪರವಾಗಿಲ್ಲ.

ತನ್ನನ್ನು ಮನಸಾರೆ ಪ್ರೀತಿಸುವ ಒಳ್ಳೆಯ ವ್ಯಕ್ತಿಯಾಗಿದ್ದರೆ, ಹೆಂಡತಿ ಏನೂ ತಕರಾರು ಇಲ್ಲದೆ, ಸುಖ ಸಂತೋಷದಿಂದ ಇರುತ್ತಾಳೆ.
ಅಂತೆಯೇ ಮಡದಿಯಾದವಳು ಹೆಚ್ಚೇನೂ ಓದದ ಸುರ ಸುಂದರಿಯಾಗಿರದಿದ್ದರೂ ಪರವಾಗಿಲ್ಲ, ಸತ್‌ಚಾರಿತ್ರ್ಯದ ಮುದ್ದಿನ ಮಡದಿಯಾಗಿ ಜೀವನ ಪರ್ಯಂತ ಕೈಬಿಡದ, ಕೈಕೊಡದ ಬಾಳ ಸಂಗಾತಿಯಾಗಿದ್ದರೆ ಸಾಕು, ಗಂಡನು ಶಾಂತಿ ನೆಮ್ಮದಿಯಿಂದ ಇರುತ್ತಾನೆ.

ಇದೇ ರೀತಿ ಮನೆಯ ಕೆಲಸದವರು ದಡ್ಡರಾಗಿದ್ದರೂ ಪರವಾಗಿಲ್ಲ, ನಂಬಿಗಸ್ಥ ಪ್ರಾಮಾಣಿಕ ಒಳ್ಳೆಯ ವ್ಯಕ್ತಿಗಳಾಗಿದ್ದರೆ, ಬಹಳ ವರ್ಷಗಳ ಕಾಲ, ನಾವು ಅವರನ್ನೇ ಮುಂದುವರಿಸುತ್ತೇವೆ. ಸಮಾಜದಲ್ಲಿ ಮಾರ್ಗದರ್ಶನ ಮಾಡಲು ನಮಗೆ ಸ್ವಾಮೀಜಿಗಳು ಬೇಕು; ಆದರೆ ಸನ್ಯಾಸವನ್ನು ಹೇರಿಸಿಕೊಂಡವರಲ್ಲ; ಆರಿಸಿಕೊಂಡ ಒಳ್ಳೆಯ ಸನ್ಯಾಸಿಗಳು ಬೇಕು. ಯತಿಗಳಿಗೆ ಭೂಷಣವಾಗಿರುವ ಜ್ಞಾನ ವೈರಾಗ್ಯಗಳಿಲ್ಲದ, ಸತ್‌ಚಾರಿತ್ರ್ಯವಿಲ್ಲದ, ಜಾತಿವಾದಿ ಸ್ವಾಮೀಜಿಗಳಿಂದ ಆಗುವ ಅನಾಹುತಗಳೇ ಜಾಸ್ತಿ. ನಿಸ್ವಾರ್ಥ ದೃಷ್ಟಿ ಯಿಂದ ಜನರ ಸೇವೆ ಮಾಡುವ ಒಳ್ಳೆಯ ರಾಜಕಾರಿಣಿಗಳು ಬೇಕು.

‘ನರಾಜ ರಾಜ್ಯಂ ಕುರಾಜ ರಾಜ್ಯಂ’ ಎಂಬ ಮಾತಿನಂತೆ. ಅಪ್ರಾಮಾಣಿಕ ಭ್ರಷ್ಟ ರಾಜಕಾರಣಿಗಳಿಗಿಂತ ಅಂತಹವರು  ಇರದಿರು ವುದೇ ಲೇಸು. ನಮ್ಮ ಮಕ್ಕಳಿಗೆ ಪಾಠ ಹೇಳಲು ಒಳ್ಳೆಯ ಮೇಷ್ಟ್ರುಗಳು ಬೇಕು; ನಮ್ಮ ಮನೆ ಕಟ್ಟಲು ಒಳ್ಳೆಯ ಎಂಜಿನಿಯರ್‌ಗಳು
ಬೇಕು. ಕೋರ್ಟಲ್ಲಿ ನಮ್ಮ ಪರ ಕೇಸು ವಾದಿಸಲು ಒಳ್ಳೆಯ ಲಾಯರುಗಳು ಬೇಕು. ನಮಗೆ ಆಪರೇಷನ್ ಮಾಡಲು ಒಳ್ಳೆಯ ಡಾಕ್ಟರುಗಳು ಬೇಕು. ಈ ಎಲ್ಲಾ ಸಂದರ್ಭಗಳಲ್ಲಿ ನಾವು ಅವರ ಅರ್ಹತೆ ಮತ್ತು ಯೋಗ್ಯತೆಗಳನ್ನು ಮಾತ್ರ ನೋಡುತ್ತೇವೆಯೋ ಹೊರತು, ಅವರ ಜಾತಿ-ಮತ-ಕುಲ ಧರ್ಮಗಳನ್ನಲ್ಲ!

ಅವನ್ನೆಲ್ಲಾ ಕಟ್ಟಿಕೊಂಡು ನಮಗೇನಾಗಬೇಕು? ನಮಗೆ ನಮ್ಮ ಮನೆ, ಮಕ್ಕಳು ನಮ್ಮ ಜೀವ ಜೀವನ ಮಾತ್ರ ಮುಖ್ಯ. ಮೀಸಲಾತಿ, ನೇಮಕಾತಿ ಇಲ್ಲವೇ ಲಾಭದಾಯಕ ಜಾತ್ಯಾಧಾರಿತ ವಿಷಯಗಳು ಬಂದಾಗ ಮಾತ್ರ ನಾವು ನಮ್ಮಜಾತಿ ಬಲದಿಂದ ಅದರ ಲಾಭ ವನ್ನು ಪಡೆದುಕೊಳ್ಳುತ್ತೇವೆ. ಇದರ ಹೊರತಾಗಿ, ಎಲ್ಲಾ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಜಾತಿ ಮತ ಭೇದವಿಲ್ಲದೆ ಬರೇ ಒಳ್ಳೆಯ ವರನ್ನು ಮಾತ್ರ ಹುಡುಕಿಕೊಂಡು ಹೋಗುತ್ತೇವೆ.

ಇನ್ನು ನಾವು ಶ್ರೀಮಂತರಾದರೆ ಜನ ನಮ್ಮನ್ನು ಪ್ರೀತಿಸೋದಿಲ್ಲ; ಸ್ಥಾನಮಾನ ಗೌರವಗಳನ್ನು ನೀಡುತ್ತಾರೆ ಅಷ್ಟೆ. ಆದರೆ ಈ ಗೌರವ ನಮ್ಮ ಶ್ರೀಮಂತಿಕೆಯನ್ನು ನೋಡಿ ಬಂದಿದ್ದು, ನಮ್ಮನ್ನಲ್ಲ! ಅಂತೆಯೇ ನಾವು ದೊಡ್ಡ ಅಧಿಕಾರಿಗಳಾಗಿದ್ದಲ್ಲಿ ಜನ ನಮಗೆ ಮಾನ ಮರ್ಯಾದೆಗಳನ್ನು ನೀಡುತ್ತಾರೆ. ಇದು ಕೂಡಾ ನಮ್ಮ ಕುರ್ಚಿಗೆ ಬಂದಿದ್ದು. ನಮಗಲ್ಲ! ಬೆಲ್ಲ ಇದ್ದಲ್ಲಿ ಮಾತ್ರ ಇರುವೆಗಳ ಸಾಲು. ಬೆಲ್ಲ ಖಾಲಿಯಾದಾಗ ಇರುವೆಗಳೂ ತಮ್ಮ ಜಾಗವನ್ನು ಖಾಲಿ ಮಾಡುತ್ತವೆ.

ಅಂತೆಯೇ ಅಧಿಕಾರ-ಅಂತಸ್ತು ಇರುವವರೆಗೆ ಜನ ನಮ್ಮ ಸುತ್ತ ಮುತ್ತ; ಇವು ಯಾವುದೂ ಇಲ್ಲವಾದಾಗ ಸುಳಿಯುವವರೇ ಇಲ್ಲ ನಮ್ಮತ್ತ. ಆದರೆ, ನಾವು ಓರ್ವ ಒಳ್ಳೆಯ ವ್ಯಕ್ತಿಯಾಗಿದ್ದಲ್ಲಿ ಜನ ನಮ್ಮನ್ನು ಇಷ್ಟ ಪಡುತ್ತಾರೆ; ಪ್ರೀತಿಸುತ್ತಾರೆ, ನಮ್ಮ ಜತೆ ಇರ ಬಯಸುತ್ತಾರೆ. ವಾಸ್ತವದಲ್ಲಿ ಯಾರೂ ಕೆಟ್ಟ ವ್ಯಕ್ತಿಗಳಾಗ ಬಯಸುವುದಿಲ್ಲ; ಆದರೆ ಆಗಿಬಿಡುತ್ತಾರೆ. ಇದು ಹುಟ್ಟುವಾಗ ಭಗವಂತ ನಮಗೆ ನೀಡಿದ ಮಗುವಿನಂತಹ ಮುಗ್ಧ ಮನಸ್ಸನ್ನು ಬೆಳೆಯುತ್ತಾ ರಾಡಿ ಮಾಡಿಕೊಳ್ಳೋದರಿಂದ, ಸದ್ಗುಣಗಳನ್ನು ಸಾಯಿಸಿ, ದುರ್ಗುಣಗಳನ್ನು ಸಾಕುವುದರಿಂದ, ಮನಸ್ಸಿನೊಳಗೆ ರಾಮನ ಜತೆ ರಾವಣ ಸ್ವಭಾವವನ್ನು ಬೆಳೆಸುವುದರಿಂದ, ಕೆಟ್ಟವರ ಸಹವಾಸ ದೋಷದಿಂದ, ದುರ್ಬಲ ಮನಸ್ಸಿನಿಂದಾಗಿ ಆಮಿಷ ಪ್ರಲೋಭನೆ- ಪ್ರಚೋದನೆಗಳಿಗೆ ಬಲಿಯಾಗೋದರಿಂದ ಹಾಗೂ ಸೂಕ್ತ ಮಾರ್ಗದರ್ಶನ ಹೀಗೆ ಕೊರತೆಯಿಂದ ನಾನಾ ಕಾರಣಗಳಿಂದ ಜನ ಕೆಟ್ಟವರಾಗುತ್ತಾರೆ.

ಅನಿವಾರ್ಯ ಸನ್ನಿವೇಷ ಸಂದರ್ಭಗಳಿಗೆ ಒಳಗಾದಾಗಲೂ ಜನ ಕೆಟ್ಟವರಾಗುತ್ತಾರೆ. ಇದನ್ನೇ ಮಹಾಭಾರತದಲ್ಲಿ ಧುರ್ಯೋ ಧನನು ಒಂದು ಕಡೆ ಹೀಗೆ ಹೇಳುತ್ತಾನೆ. ‘ಚಾನಾವಿಲಿ ಧರ್ಮಂ ನಚಮೇ ಪ್ರವೃತ್ತಿಃ; ಜಾನಾಮಿ ಅಧರ್ಮಂ ನಚಮೇ ನಿವೃತ್ತಿಃ ’ ಅರ್ತಾಥ್ ಧರ್ಮವೇನೆಂಬುದು ನನಗೆ ಗೊತ್ತು; ಆದರೆ ಆಚರಿಸುವ ಪ್ರವೃತ್ತಿ ಇಲ್ಲ; ಅಧರ್ಮವೇನೆಂಬುದು ನನಗೆ ಗೊತ್ತು; ಆದರೆ ಮಾಡದೆ ನಿವೃತ್ತಿ ಇಲ್ಲ!” ಯಾರು ಒಳ್ಳೆಯ ವ್ಯಕ್ತಿ?

* ಯಾರಲ್ಲಿ ಶಾರೀರಿಕ ಸೌಂದರ್ಯವಿರಲಿ-ವಿರದಿರಲಿ, ಆದರೆ ಒಳ್ಳೆಯ ಆಂತರಿಕ ಸೌಂದರ್ಯವಿದೆಯೇ; ಆರ್ಥಿಕ ಶ್ರೀಮಂತಿಕೆ ವಿರಲಿ ವಿರದಿರಲಿ ಹೃದಯ ಶ್ರೀಮಂತಿಕೆ ಇದೆಯೇ. * ಯಾರಲ್ಲಿ ಎಲ್ಲರ ಬಗ್ಗೆ ಆತ್ಮೀಯತೆ ಇದೆಯೇ (ಇವನಾರವ, ಇವನಾರವ ನೆಂದೆಣಿಸದಿರಯ್ಯ, ಇವನಮ್ಮವ ಇವ ನಮ್ಮವ ನೆಂದೆಣಿಸಯ್ಯ) ಎಂಬ ಭಾವನೆ ಹಾಗೂ ಅಸಹಾಯಕರ, ಅನಾಥರ ಬಡವರ, ದೀನ ದಲಿತರ ಬಗ್ಗೆ ಕೊರಳಿನಿಂದ ಬಂದ ಅಲ್ಲ, ಕರುಳಿನಿಂದ ಬಂದ, ಅನುಕಂಪ, ಅನುಭೂತಿ ಕಾಳಜಿ ಕನಿಕರ ಇದೆಯೋ
* ಯಾರಲ್ಲಿ ನೀತಿ ನ್ಯಾಯ ನಿಷ್ಠೆ ನಿಯತ್ತು ಮನೆ ಮಾಡಿದೆಯೇ.

* ಯಾರು ಪ್ರಾಮಾಣಿಕನೋ, ಪರೋಪಕಾರಿಯೋ, ಪರಿಶ್ರಮಿಯೋ, ಪರಧರ್ಮ ಸಹಿಷ್ಣುವೋ, ಪರಸ್ತ್ರೀ ಯರನ್ನು ಗೌರವಿಸು ವವನೊ, ಪರನಿಂದೆ ಪರಹಿಂಸೆ ಮಾಡದವನೋ. * ಯಾರು ಸಮರ್ಥನಾಗಿದ್ದರೂ ನಿಗರ್ವಿಯೋ, ವಿದ್ಯಾವಂತ ನಾಗಿದ್ದರೂ ವಿನಯಶೀಲನೋ, ಸುಶಿಕ್ಷಿತನಾಗೋದರ ಜತೆ ಸುಸಂಕೃತನೋ, ಯಾರಲ್ಲಿ ಸಮದೃಷ್ಟಿ, ಪ್ರೇಮದೃಷ್ಟಿ-ವಿಶಾಲ ದೃಷ್ಟಿ ಇದೆಯೋ ಹಾಗೂ  ಯಾರೂ ಸರಳತೆ-ಸಜ್ಜನಿಕೆ ಸಹೃದಯತೆ, ಸತ್ಯ ಸಂಧತೆಗಳನ್ನು ತನ್ನದಾಗಿಸಿಕೊಂಡವನೋ.

* ಯಾರು ಸದಾ ಒಳ್ಳೇದನ್ನೇ ಯೋಚಿಸುವ ನುಡಿಯುವ, ಮಾಡುವ ಹಾಗೂ ಎಲ್ಲರಿಗೂ ಒಳ್ಳೇದನ್ನೇ ಬಯಸುವ ಧೋರಣೆ ಯನ್ನಿಟ್ಟುಕೊಂಡಿರುವನೋ, ಆತನೇ ಒಳ್ಳೆಯ ವ್ಯಕ್ತಿ. ಇದನ್ನೇ ಲೇಸು ಕೇಳಿಸಲಿ ಕಿವಿಗೆ, ನಾಲಿಗೆಗೆ ಲೇಸು ನುಡಿದು ಬರಲಿ ಲೇಸ ಕಾಣಾಲಿ ಕಣ್ಗೆ, ಲೇಸಾಗಲಿ ಎಲ್ಲರಿಗೆ ಎಂದು ಬೇಂದ್ರೆಯವರು ಬಯಸಿದರು. ಈ ಸತ್ಯವನ್ನೇ ಕವಿ ಹೇಳಿದ ಏನಾದರು ಆಗು, ನೀನಂದುಕೊಂಡಂತೆ ಆಗು, ಆದರೆ ಮೊದಲು ಮಾನವನಾಗು.

ಜೀವನದಲ್ಲಿ ಗುರಿ ಮುಖ್ಯ; ಆದರೆ ಗುರಿ ತಲುಪುವ ಮಾರ್ಗವೂ ಅಷ್ಟೇ ಮುಖ್ಯ. ಅದು ನ್ಯಾಯಧರ್ಮ ಸಮ್ಮತವಾಗಿರಬೇಕು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಏನಾದರೂ ಮಾಡಿ, ಹೇಗಾದರೂ ಮಾಡಿ, ಆಸ್ತಿ ಹಣವನ್ನು ಮಾಡುವ, ಇಲ್ಲವೇ ಡಾಕ್ಟರ್, ಎಂಜಿನಿಯರ್ ಲಾಯರ್ ಇಲ್ಲವೇ ಇನ್ನೇನೋ ಮಾಡುವ ಮೊದಲು ಉತ್ತಮ ಶಿಕ್ಷಣ ಸಂಸ್ಕಾರವನ್ನು ನೀಡಿ ಓರ್ವ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿದರೆ, ಅವರು ಮನೆಯ ಸಮಾಜದ ದೇಶದ ಬಹು ದೊಡ್ಡ ಆಸ್ತಿ ಎಂದೆನಿಸಿಕೊಳ್ಳುತ್ತಾರೆ.

ರಸ್ತೆಯ ಮೇಲೆ ಕಲ್ಲು ಮುಳ್ಳುಗಳಿದ್ದರೆ ಬೂಟುಗಳನ್ನು ಹಾಕಿಕೊಂಡು ನಡೆಯಬಹುದು. ಆದರೆ ನಮ್ಮ ಬೂಟಿನ ಒಳಗೆಯೇ ಕಲ್ಲು ಮುಳ್ಳುಗಳಿದ್ದರೆ, ಒಂದು ಹೆಜ್ಜೆಯನ್ನು ಮುಂದಿಡಲಾಗದು. ಆದುದರಿಂದ ಇತರರು ಒಳ್ಳೆಯವರಾಗಬೇಕು ಎಂದು
ಕಾಯೋದಕ್ಕಿಂತ ಮೊದಲು ನಾವೇ ಒರ್ವ ಒಳ್ಳೆಯ ವ್ಯಕ್ತಿಯಾಗೋದು ಅತ್ಯಾವಶ್ಯಕ.