Thursday, 31st October 2024

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ; ಪರ್ಯಾಯ ನಾಯಕರಿಗೆ ಕೊರತೆಯಿಲ್ಲ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 5

ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅರುಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಅಂದ ಮಾತ್ರಕ್ಕೆ ರಾಜ್ಯದಲ್ಲಿ ಪರ್ಯಾಯ ನಾಯಕರಿಲ್ಲ ಎನ್ನುವ ಮಾತನ್ನು ಒಪ್ಪಲ್ಲ. ಬಿಜೆಪಿಯಲ್ಲಿ ನಾಯಕರನ್ನು ಸೃಷ್ಟಿಸುವ ಉತ್ಪಾದನಾ ಘಟಕ (production house) ಬಲವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ‘ವಿಶ್ವವಾಣಿ ಕ್ಲಬ್‌ಹೌಸ್’ ಸಂವಾದದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಅವರು, ರಾಜಕೀಯ ಪ್ರವೇಶ, ಪಕ್ಷದ ಸಿದ್ಧಾಂತ, ರಾಜ್ಯ ನಾಯಕತ್ವದ ಗೊಂದಲ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಸವಾದದ ವಿವರ ಇಲ್ಲಿದೆ.

ಪ್ರಶ್ನೆ: ಕರೋನಾ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಪ್ರಹಸನ ಬೇಕಿತ್ತಾ?
ಉತ್ತರ: ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ಯತ್ನಾಳ್ ಸೇರಿದಂತೆ ಕೆಲ ನಾಯಕರು ದೆಹಲಿಗೆ ಹೋಗುತ್ತಿದ್ದಂತೆ ಅನೇಕರು ಇದನ್ನು ನಾಯಕತ್ವ ಬದಲಾವಣೆ ಎಂದು ಚರ್ಚೆಯ ವಿಷಯವನ್ನಾಗಿ ಮಾಡಿದರು. ಏನೇ ಗೊಂದಲಗಳಿದ್ದರೂ ಕರೋನಾ ನಿಯಂತ್ರಣ ವಿಷಯದಲ್ಲಿ ಸರಕಾರ ಹಿಂದೆ ಬಿದ್ದಿಲ್ಲ. ಅಷ್ಟಕ್ಕೂ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಆಗಮಿಸಿದ್ದು ನಾಯಕತ್ವ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಎಂದು ಹೇಳಿದವರು ಯಾರು? ಒಂದು ವೇಳೆ ಅದಾಗಿದ್ದರೆ ಎಲ್ಲ ಬಿಜೆಪಿ ಶಾಸಕರ
ಅಭಿಪ್ರಾಯವನ್ನು ಅವರು ಸಂಗ್ರಹಿಸಬೇಕಿತ್ತು. ಆದರೆ ಅವರು ಕೇವಲ ೫೩ ಶಾಸಕರನ್ನು ಮಾತ್ರ ಭೇಟಿಯಾದರು.

ಅವರು ಆಗಮಿಸಿದ್ದು, ಕೆಲ ಶಾಸಕರ ಮಾತನ್ನು ಆಲಿಸಲು ಹೊರತೇ, ನಾಯಕತ್ವವನ್ನು ಬದಲಾಯಿಸಲು ಅಲ್ಲ. ಇದರೊಂದಿಗೆ ಸೇವಾ ಸಂಘಟನೆಯ ಯೋಜನೆ ಬಗ್ಗೆ ಚರ್ಚಿಸಲು ಅವರು ಆಗಮಿಸಿದ್ದರು.

ಪ್ರಶ್ನೆ: ೭೫ ವರ್ಷ ದಾಟಿದ ಬಳಿಕ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎನ್ನುವ ನಿಯಮ ಯಡಿಯೂರಪ್ಪ ಅವರಿಗೆ ಅನ್ವಯಿಸುವುದಿಲ್ಲವೇ?
ಉತ್ತರ: ನಾನಾಜಿ ದೇಶ್‌ಮುಖ್ ಅವರು 60ನೇ ವಯಸ್ಸಿಗೆ ನಿವೃತ್ತಿ ಪಡೆದುಕೊಂಡರು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.
ಅಡ್ವಾಣಿ ಅವರು 75ನೇ ವಯಸ್ಸಿಗೆ ನಿವೃತ್ತಿ ಪಡೆದರು. ನಿವೃತ್ತಿಗೆ ವಯಸ್ಸು ಕಡ್ಡಾಯವಲ್ಲ. ಆದರೆ ಈ ರೀತಿ ರಾಜಕೀಯ ನಿವೃತ್ತಿ ಪಡೆದವರು ಮೇಲ್ಪಂಕ್ತಿ ಹಾಕಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು
ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಅರುಣ್ ಸಿಂಗ್ ಹೇಳಿದ್ದಾರೆ ಎಂದರೆ, ಅದು ಪಕ್ಷದ ವರಿಷ್ಠರ ಮಾತಾಗಿರುತ್ತದೆ. ಆದ್ದರಿಂದ ಈ ವಿಷಯದಲ್ಲಿ ಪದೇ ಪದೆ ಮಾತ ನಾಡುವುದು ಸರಿಯಲ್ಲ. ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಎದ್ದಿರುವ ಊಹಾಪೋಹದ ಪ್ರಶ್ನೆಗಳಿಗೂ ಉತ್ತರ ನೀಡುವುದು
ಸರಿಯಲ್ಲ. ಆದರೆ ಕೆಲ ನಾಯಕರು ಮಾತನಾಡುವುದಕ್ಕೆ ನಮ್ಮನ್ನು ಬೆಂಬಲಿಸುವವರಿಗೆ ಬೇಸರವಾಗಿರುವುದು ಸತ್ಯ.

ಪ್ರಶ್ನೆ: ನಾಯಕತ್ವ ಬದಲಾಯಿಸಲು ಪರ್ಯಾಯ ನಾಯಕತ್ವದ ಸಮಸ್ಯೆಯಿದೆಯೇ?
ಉತ್ತರ: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ. ಬಿಜೆಪಿಯಲ್ಲಿ ನಾಯಕರನ್ನು ಸೃಷ್ಟಿಸುವ ಉತ್ಪಾದನಾ ಘಟಕವೇ ಇದೆ. ೧೦
ಜನರಿಂದ ಶುರುವಾಗಿರುವ ಈ ಪಕ್ಷ ಇದೀಗ 12 ಕೋಟಿ ಕಾರ್ಯಕರ್ತರನ್ನು ಒಳಗೊಂಡಿದೆ. ಆದರೆ ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ನೀಡಿರುವ ಜವಾಬ್ದಾರಿಯಲ್ಲಿ ಇರುವ ತನಕ ಅವರು ನಮ್ಮ ನಾಯಕರು. ನಾಯಕರಿಲ್ಲದೇ ಪಕ್ಷವಿಲ್ಲ. ಹಾಗೇ ನೋಡಿದರೆ ’ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು‘ ಎನ್ನುವ ಸ್ಲೋಗನ್ ಅನ್ನು ಮೊದಲು ಕಬ್ಬನ್ ಪಾರ್ಕ್‌ನಲ್ಲಿ ಹೇಳಿದ್ದು ನಾನೇ.

ಪ್ರಶ್ನೆ: ನಿಮ್ಮನ್ನು ಟ್ಯೂನ್ ಮಾಡಿದ್ದು ಯಾರು?
ಉತ್ತರ: ಆರಂಭದಲ್ಲಿ ನಾನು ರೈತ ಚಳವಳಿಯ ಮೂಲಕ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದೆ. ಹಸಿರು ಶಾಲು ಧರಿಸಿ ಹೋಗುವುದು ಎಂದರೆ ಒಂದು ಹೆಮ್ಮೆ ಇತ್ತು. ಆದರೆ ಬಳಿಕ ರೈತ ಸಂಘದಲ್ಲಿ ಉಂಟಾದ ಕೆಲವು ಸಮಸ್ಯೆಗಳಿಂದ ನಾನು
ಹೊರ ಬಂದೆ. ಆ ಸಮಯದಲ್ಲಿ ನನಗೆ ನಮ್ಮೂರಿನ ಆಟೋ ಡ್ರೈವರ್ ಚಂದ್ರು ಎನ್ನುವವರು ಬಿಜೆಪಿಗೆ ಸೇರುವಂತೆ ಹೇಳಿದರು. ಈ ವೇಳೆ ನಾನು ನನ್ನ ಮನೆಯ ಮೇಲೆ ಪಕ್ಷದ ಧ್ವಜವನ್ನು ಕಟ್ಟಿದೆ. ಆಗ ನನ್ನ ತಂದೆ ಬಂದು, ‘ನಿನ್ನದು ಯಾವ ಸೀಮೆ ಪಕ್ಷ. ದೇವೇಗೌಡರ ಪಕ್ಷ ಸೇರಿಕೋ’ ಎಂದಿದ್ದರು. ಆದರೆ ನಾನು ಅಪ್ಪನಿಗೆ ಈಗಲೂ ಹೇಳುತ್ತೇನೆ ‘ದೇವೇಗೌಡರ ಪಕ್ಷ ಸೇರಿ ದೊಡ್ಡ ಗೌಡರಿಗೆ, ಕಿರಿಗೌಡರಿಗೆ, ಚಿಕ್ಕಗೌಡರಿಗೆ ಜೈ ಎನ್ನಬೇಕಿತ್ತು. ಆದರೆ ಈಗ ಭಾರತಾಂಬೆ ಜೈ ಎಂದು, ನನಗೂ ಅನೇಕರು ಜೈ ಎನ್ನುವ ಹಂತಕ್ಕೆ ಬಂದಿದ್ದೇನೆ’. ರಾಷ್ಟ್ರ ನಾಯಕರು ಎಂದರೆ ನಮಗೆ ವಾಜಪೇಯಿ.

ರಾಜ್ಯ ನಾಯಕರು ಎಂದರೆ ಯಡಿಯೂರಪ್ಪ. ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಏನು ಹೇಳಿಕೊಡದಿದ್ದರೂ, ಅವರ ಮಾಸ್ ವ್ಯಕ್ತಿತ್ವದಲ್ಲಿಯೇ ಹಲವು ವಿಷಯವನ್ನು ಕಲಿತೆ. ಆದರೆ ದಿವಂಗತ ಅನಂತಕುಮಾರ ಅವರು ನನನ್ನು ಟ್ಯೂನ್ ಮಾಡಿ ದರು. ಇನ್ನು ನಾನು ಶಾಸಕನಾದ ಸಮಯದಲ್ಲಿ ಸಖರಾಯ ಪಟ್ಟಣದ ಅವಧೂತರು ಒಮ್ಮೆ, ‘ ಮರೆಯಬೇಡ, ಮೆರೆಯಬೇಡ, ಮುರಿಯಬೇಡ’ ಎಂದಿದ್ದರು. ಈಗಲೂ ಅದನ್ನು ಪಾಲಿಸುತ್ತೇನೆ. ನಾನು ಪಕ್ಷದ ಕಾರ್ಯಕರ್ತ.

ನಿಷ್ಠಾವಂತನಾಗಿ ಕೆಲಸ ಮಾಡುತ್ತಿದ್ದೇನೆ. ಅನಂತಕುಮಾರ ಅವರು ಹೇಳಿದಂತೆ ‘ಕತ್ತೆಯಂತೆ ದುಡಿಯುತ್ತಿದ್ದೇನೆ’ ಆಯಾ
ಕಾಲಕ್ಕೆ ಪಕ್ಷ ನೀಡುವ ಜವಾಬ್ದಾರಿಯನ್ನು ಪಕ್ಷದ ಒಳಿತಿಗಾಗಿ ನಿಭಾಯಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಸಿಗುವ
ಅವಕಾಶವನ್ನು ವೈಯಕ್ತಿಕ, ಕುಟುಂಬದ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುವುದಿಲ್ಲ.

ಪ್ರಶ್ನೆ: ನಿಮ್ಮ ರಾಜಕೀಯ ಪಯಣದಲ್ಲಿ ದತ್ತ ಪೀಠದ ಪಾತ್ರ ಏನು?
ಉತ್ತರ: ಸರಕಾರಿ ದಾಖಲೆಯಲ್ಲಿ ದತ್ತಾತ್ರೇಯ ಪೀಠದ ಬಗ್ಗೆ ಸ್ಪಷ್ಟ ಮಾಹಿತಿಯಿದೆ. ಆದ್ದರಿಂದ ಅಂಗೈ ಹುಣ್ಣಿಗೆ ಕನ್ನಡಿ ಬೇಡ. ಆದರೆ ಇದನ್ನು ಕೆಲವರು ಕಗ್ಗಂಟು ಮಾಡಿದ್ದಾರೆ. ರಾಜರ ಕಾಲದಿಂದ, ಈಗಿನ ಕಂದಾಯ ಇಲಾಖೆ ದಾಖಲೆಯ ಪ್ರಕಾರ ದತ್ತಾತ್ರೇತ ದೇವರು ಎಂದಿದೆ. ಈ ದೇವಾಲಯಕ್ಕೆ ಇನಾಮು ಸಹ ಇತ್ತು. ಇಷ್ಟಾದರೂ ಬಾಬಾ ಬುಡನ್ ಎನ್ನುವುದನ್ನು ಸೇರಿಸಿ ಕಗ್ಗಂಟು ಮಾಡಿ, ಒದ್ದಾಡುವ ಸ್ಥಿತಿ ಬಂದು ನಿಂತಿದೆ. ಈಗ ಪ್ರಕರಣ ಹಿಂದೂ ಹಾಗೂ ಶಾಖಾದ್ರಿಗಳ ನಡುವೆ ಇದೆ. ಆದರೆ ಸಿದ್ದರಾಮಯ್ಯ ಅವರು ಇದನ್ನು ಕಗ್ಗಂಟು ಮಾಡಿದರು. ರಾಮಮಂದಿರ ತೀರ್ಮಾನದಂತೆ ಇಲ್ಲೂ ಹಿಂದೂ ಪರ ತೀರ್ಪು ಬರುತ್ತದೆ. ಅದಕ್ಕಾಗಿ ಬೇಕಾದ ಪ್ರಯತ್ನ ಮಾಡುತ್ತೇವೆ.

ಪ್ರಶ್ನೆ: ರಾಷ್ಟ್ರ ರಾಜಕಾರಣ ಪ್ರವೇಶದ ನಂತರ ಭಾಷೆ ಸಮಸ್ಯೆ ಆಯ್ತಾ?
ಉತ್ತರ: ನಾನು ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಚಿವನಾಗಿದ್ದಾಗ ಅಮಿತ್ ಶಾ ಅವರ ಮನೆಯ ಲ್ಯಾಂಡ್‌ಲೈನ್
ನಿಂದ ಕರೆ ಬಂತು. ನಡ್ಡಾ ಅವರು ಮಾತನಾಡಿ, ಸಂಘಟನೆ ಹಾಗೂ ಸರಕಾರದಲ್ಲಿ ಯಾವುದು ನಿಮ್ಮ ಆದ್ಯತೆ ಎಂದು ಕೇಳಿದರು. ನಾನು ಸಂಘಟನೆ ಎಂದೆ. ಬಳಿಕ ಮರುದಿನ ಯಡಿಯೂರಪ್ಪ ಅವರು ಅದೇ ಮಾತನ್ನು ಹೇಳಿದರು. ಇದಾದ ಕೆಲ ದಿನದ ಬಳಿಕ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ಕೊಟ್ಟರು. ಈ ಜವಾಬ್ದಾರಿ ಕೊಡುತ್ತಾರೆ ಎಂದು ನಿಜಕ್ಕೂ ನನಗೆ ಗೊತ್ತಿರ ಲಿಲ್ಲ. ಇನ್ನು ನನಗೆ ಭಾಷೆಯ ಸಮಸ್ಯೆಯಾಗದಂತೆ ಇಂಗ್ಲಿಷ್-ಹಿಂದಿ ಕಲಿಯುತ್ತಿದ್ದೇನೆ. ಚಿಕ್ಕಪುಟ್ಟ ತಪ್ಪಿರಬಹುದು. ಆದರೆ ಕಲಿಯುತ್ತಿದ್ದೇನೆ.

ತಮಿಳುನಾಡಿಗೆ ಹೋದಾಗ ಹಿಂದಿಯಲ್ಲಿ, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮಾತನಾಡಿದೆ. ಆದರೆ ಯಾರೂ ವಿರೋಧಿಸಲಿಲ್ಲ. ತಮಿಳು ಗೊತ್ತಿಲ್ಲ ಎಂದು ಕನ್ನಡ ಮಾತಾಡುತ್ತೇನೆ. ಅದಕ್ಕೆ ಅಲ್ಲಿರುವವರು ಒಪ್ಪಿಕೊಂಡರು. ಅನೇಕ ಬಾರಿ ತಂಗ್ಲಿಷ್ ಮಾತನಾಡುತ್ತಿದ್ದೆ. ಭಾಷೆ ತಿಳಿಯದಿದ್ದರೆ ಭಾವನೆ ಗೊತ್ತಾಗುತ್ತಿತ್ತು. ಆದ್ದರಿಂದ ಆತಂಕ ಕಾಣಲಿಲ್ಲ.

ಮೊದಲ ಬಾರಿ ಕ್ಲಬ್‌ಹೌಸ್‌ನಲ್ಲಿ ಭಾಗಿ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಇದೇ ಮೊದಲ ಬಾರಿಗೆ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗಿಯಾಗಿ, ಅನೇಕ ವಿಚಾರಗಳ ಕುರಿತು ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡರು.

***

ತಮಿಳುನಾಡಿನ ಸೋಲು ನಮಗೆ ಹಿನ್ನಡೆಯಾಗಿಲ್ಲ. ಶೂನ್ಯದಿಂದ ನಾಲ್ಕು ಸ್ಥಾನಕ್ಕೆ ಏರಿದ್ದೇವೆ. ಇದರೊಂದಿಗೆ ಅನೇಕ ಕ್ಷೇತ್ರ ಗಳಲ್ಲಿ ಶೇ.34ರಿಂದ 38ಮತ ಪಡೆದಿದ್ದೇವೆ. 10 ಜನರಿಂದ ಶುರುವಾದ ಪಕ್ಷ 12 ಕೋಟಿ ಜನರಿದ್ದಾರೆ. ನಾವು ಕಷ್ಟ ಪಟ್ಟು ತಮಿಳುನಾಡಿನಲ್ಲಿ ಮುಂದೆ ಅಧಿಕಾರಕ್ಕೆ ಬಂದೇ ಬರುತ್ತದೆ.
– ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ