Thursday, 12th December 2024

ನಗು ಕೇವಲ ಹಾಸ್ಯದ ಉಪೋತ್ಪನ್ನವಲ್ಲ, ಅದು ವ್ಯಕ್ತಿತ್ವ ಸೂಚಕ

ಶಿಶಿರ ಕಾಲ

ಶಿಶಿರ್‌ ಹೆಗಡೆ ನ್ಯೂಜೆರ್ಸಿ

ಪ್ರಾಣೇಶ್ ಯಾರಿಗೆ ಗೊತ್ತಿಲ್ಲ. ಅವರು ಬಂದು ನಿಂತರೆ, ಸುಮ್ಮನೆ ಸಭೆಯಲ್ಲಿ ಒಂದು ಸುತ್ತು ನೋಡಿದರೆ ನೆರೆದ ನೂರಾರು ಜನರೆ ನಗಲು ಶುರುಮಾಡುತ್ತಾರೆ. ಅವರು ನಂತರದಲ್ಲಿ ಮಾತು ಶುರುಮಾಡಿದರಂತೂ ಮುಗಿದೇ ಹೋಯಿತು.

ವಾಕ್ಯಕ್ಕೊಮ್ಮೆ ಜನರು ಗೊಳ್ಳ್… ಹೊಸ ಹಾಸ್ಯಗಳ ಮಧ್ಯೆ ಅದೆಲ್ಲಿಯೋ ಹಿಂದೆ ಕೇಳಿದ ಜೋಕ್ ಅನ್ನೇ ಪ್ರಾಣೇಶ್ ಬಾಯಲ್ಲಿ ಇನ್ನೊಮ್ಮೆ ಕೇಳಿದರೆ ಆ ಹಾಸ್ಯಕ್ಕೆ ಹೊಸತೊಂದು ವಿಶೇಷತೆ, ನಗು ಹುಟ್ಟಿಕೊಳ್ಳುತ್ತದೆ. ಥೇಟ್ ಅದೇ ಸನ್ನಿವೇಶ, ವಿವರಣೆ ಮತ್ತು ವಾಕ್ಯ ಪ್ರಯೋಗ ಇನ್ಯಾರೋ ಮಾಡಿದರೆ ಜನರು ನಗುತ್ತಾರೆ ಎಂದು ಗ್ಯಾರಂಟಿ ಇಲ್ಲ. ಪ್ರಾಣೇಶರು ಬಳಸುವ ಕೆಲವು ಶಬ್ದಗಳನ್ನು ಅಷ್ಟೇ ತಮಾಷೆಯಾಗಿ ಆದರೆ ಹಾಸ್ಯದ ಹಿನ್ನೆಲೆಯಿಲ್ಲದವರು – ಸಭೆಯಲ್ಲಿ, ನೂರಾರು ಮಂದಿ ನೆರೆದಲ್ಲಿ, ಮಕ್ಕಳು ಮರಿ ಇರುವಲ್ಲಿ ಬಳಸಿದರೆ ಸಭೆಯಲ್ಲಿ ಕೂತವರೇ ಎದ್ದು ಗಲಾಟೆ ಮಾಡಬಹುದು. ಆದರೆ ಪ್ರಾಣೇಶ್ ಏನನ್ನು ಹೇಳಿದರೂ ಅದನ್ನು ಹಾಸ್ಯ ವಾಗಿಯೇ ಸಭೆಯಲ್ಲಿರುವ ಎಲ್ಲರೂ ಪರಿಗಣಿಸುತ್ತಾರೆ.

ಸುಮ್ಮನೆ ಯಾವುದಾದರೂ ಪ್ರಾಣೇಶರ ವಿಡಿಯೋ ತುಣುಕನ್ನು ಒಮ್ಮೆ ನೋಡಿ – ಆದರೆ ಈ ಬಾರಿ ಅದನ್ನು ಹೇಳುತ್ತಿರುವವರು ನಮ್ಮ ಜಗದ್ಗಾಂಭೀರ್ಯ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಕೊಳ್ಳಿ. ಹಾಗೆ ಅಂದುಕೊಳ್ಳುವಾಗ ಮೊದಲು ವೈರುಧ್ಯದ ಕಾರಣಕ್ಕೆ ನಗು ಬರಬಹುದು. ಆದರೆ ಕ್ರಮೇಣ ಮನಸ್ಸು ಅದನ್ನು ಒಪ್ಪುವುದೇ ಇಲ್ಲ. ಹಾಗೆ ಕಲ್ಪಿಸಿಕೊಳ್ಳಲೂ ಕಷ್ಟವಾಗುವ ಸ್ಥಿತಿ. ಯಡಿಯೂರಪ್ಪ ನಗಿಸುವುದನ್ನು ಬಿಡಿ, ಸ್ವತಃ ನಗುವುದನ್ನೇ ಮರೆತು ಅದೆಷ್ಟು ವರ್ಷವಾಯಿ ತೇನೋ. ಅವರು ಏಕೆ ನಗುವುದನ್ನು ನಿಲ್ಲಿಸಿದರೋ ಗೊತ್ತಿಲ್ಲ. ಅವರು ನಗುವುದನ್ನು ನಿಲ್ಲಿಸಿದ್ದೆ ಅಥವಾ ನಗುವುದನ್ನೇ ಹುಟ್ಟಿದ ಲಾಗಾಯ್ತಿನಿಂದ ಅಭ್ಯಾಸ ಮಾಡಿಕೊಳ್ಳದಿದ್ದರೆ, ಅದೂ ನಿಗೂಢವೇ.

ಅವರ ರಾಜಕೀಯ ಜೀವನದ ಬಹು ದೊಡ್ಡ ಪಾಲು ವಿರೋಧ ಪಕ್ಷದಲ್ಲಿದ್ದುಕೊಂಡೇ ಕಳೆದವರಾದದ್ದರಿಂದಲೋ ಏನೋ ಗೊತ್ತಿಲ್ಲ, ಸಾಹೇಬ್ರು ನಗುವುದಿಲ್ಲ. ಯಡಿಯೂರಪ್ಪ ಮತ್ತು ಹಾಸ್ಯ ಒಂದಕ್ಕೊಂದು ವೈರುಧ್ಯ ಎನ್ನುವಂತಾಗಿ ಬಹಳ ಸಮಯವಾಯಿತು. ಅವರು ಬಿಡಿ, ಅವರ ಕಾರ್ಟೂನ್ ಕೂಡ ನಗುವುದಿಲ್ಲ, ಅಲ್ಲಿಯೂ ಸೀರಿಯಸ್ ಮುಖವೇ. ಅವರು ಪ್ರಾಣೇಶರ ಹಾಸ್ಯ ಕಾರ್ಯಕ್ರಮದಲ್ಲಿ ಬಂದು ಕೂತರೂ ನಗುವುದು ಡೌಟು.

ಚಿಕ್ಕಂದಿನಲ್ಲಿ ಚಂದಾಮಾಮದ ಇನ್ನೆ ಒಂದು ಕಥೆಯ ನೆನಪು. ಆ ರಾಜ್ಯದ ರಾಜಕುಮಾರಿ ನಗುವುದನ್ನೇ ನಿಲ್ಲಿಸಿಬಿಟ್ಟಿದ್ದಳು. ಅದು ರಾಜನಿಗೆ ತುಂಬಾ ಸಂಕಟದ ವಿಚಾರವಾಗಿತ್ತು. ಆಮೇಲೆ ಆ ರಾಜ – ರಾಜಕುಮಾರಿಯನ್ನು ನಗಿಸಿದವರಿಗೆ ಅರ್ಧರಾಜ್ಯ ಮತ್ತು ರಾಜಕುಮಾರಿ ಯನ್ನೇ ಮದುವೆ ಮಾಡಿಕೊಡುವುದಾಗಿ ಘೋಷಿಸುತ್ತಾನೆ. ಈ ಕಥೆಯ ಮುಂದಿನ ಭಾಗದಲ್ಲಿ ರಾಜಕುಮಾರಿಯನ್ನು ನಗಿಸಿದ ರೀತಿಯ ಹತ್ತಾರು ಅವತರಣಿಕೆಗಳಿವೆ. ನಮ್ಮ ಕರ್ನಾಟಕದವರ ಸ್ಥಿತಿ ಹಾಗೆಯೇ ಇದೆ. ಯಡಿಯೂರಪ್ಪ ನವರನ್ನು ನಗಿಸಿದವರಿಗೆ ಅರ್ಧ ರಾಜ್ಯ ಎಂದು ಘೋಷಿಸಿದರೆ ಅದರಲ್ಲಿ ಭಾಗವಹಿಸುವವರೆಲ್ಲ ಸೋಲುವುದು ಪಕ್ಕಾ.

ಸ್ವತಃ ಪ್ರಾಣೇಶರಿಗೂ ಸೋಲಾಗುವುದು ಗ್ಯಾರಂಟಿ. ರಾಜ್ಯ ಕೊಡುವುದು ಸಾಧ್ಯವಿಲ್ಲದಿದ್ದರೂ ಪ್ರಾಣೇಶರು ಇದೊಂದು ಚಾಲೆಂಜ್ ಅನ್ನು ಸ್ವೀಕರಿಸಬೇಕು. ಅವರಾದರೂ ನಮ್ಮ ಯಡಿಯೂರಪ್ಪ ನವರನ್ನು ಒಮ್ಮೆ ನಗಿಸಬೇಕು. ಸ್ಮೆ ಲ್ ಅಲ್ಲ – ಗಟ್ಟಿ ನಗುವಂತೆ ಮಾಡಬೇಕು. ಆಗ ರಾಜ್ಯವೇ ಹಗುರಾಗಬಹುದು. ನಗುವುದು ತಮಾಷೆಗಾದರೂ ಯಡಿಯೂರಪ್ಪನವರನ್ನು ನಗಿಸುವುದು ತಮಾಷೆ ಯಲ್ಲ.

ಅದೆಷ್ಟೋ ಇಂಥ ಯಡಿಯೂರಪ್ಪ ನಮ್ಮ ನಡುವೆಯೇ ಇರುತ್ತಾರೆ. ಅವರ ಈ ಒಂದು ಗುಣದಿಂದಾಗಿ ಅವರ ವ್ಯಕ್ತಿತ್ವವೇ ಉಳಿದವರಿಗೆ ತಿಳಿಯುವುದಿಲ್ಲ. ಕೆಲವೊಮ್ಮೆ ನಗುವುದೇ ಇಲ್ಲ ಎನ್ನುವುದೇ ಅವರ ವ್ಯಕ್ತಿತ್ವ. ಇದೊಂದು ಮಾನವ ತಳಿ. ಪ್ರಾಣೇಶರ ಹಾಸ್ಯದ ತುದಿಗೆ ಸಾಮಾನ್ಯವಾಗಿ ‘ನಗಬೇಕು ಸ್ನೇಹಿತರೇ’ ಎನ್ನುವ ಒಂದು ತಾಕೀತು ಇದ್ದೇ ಇರುತ್ತದೆ. ಅವರ ಕಾರ್ಯಕ್ರಮದಲ್ಲೂ ನಗದೇ ಹೋದ ಹತ್ತಾರು ಮಂದಿ ಕೂತಿರುತ್ತಾರೆ. ಅವರಿಗೆ ನೀವು ಅದೆಂಥ ಜೋಕ್ ಅನ್ನೇ ಹೇಳಿ – ಸುತರಾಂ ನಗುವುದಿಲ್ಲ. ಅವರ ಪಕ್ಕದಲ್ಲಿರುವವರು ಅದೆಷ್ಟೇ ನಕ್ಕರೂ ಹೆಚ್ಚೆಂದರೆ ಇವರು ಒಂದು ಸ್ಮೆ ಲ್ ಕೊಡುತ್ತಾರೆ ಅಷ್ಟೇ.

ಇನ್ನೊಂದು ಮನುಷ್ಯ ತಳಿ ಇದಕ್ಕೆ ಸಂಪೂರ್ಣ ವಿರುದ್ಧವಾದದ್ದು. ಅವರ ವ್ಯಕ್ತಿತ್ವದ ಗುರುತೇ ಅವರ ನಗು. ಅವರು ನಕ್ಕರೆ ಆಚೀಚೆ ಮನೆಯವರಿಗೆ ಕೇಳುತ್ತದೆ. ಅವರು ನಕ್ಕರೆ ಆ ಶಬ್ದಕ್ಕೆ ಮಕ್ಕಳು ಮನೆಯಲ್ಲಿ ಮಲಗಿದ್ದರೆ ಎದ್ದು ಕೂರುತ್ತಾರೆ. ಅವರ = ನಗುವೆಂದರೆ ಮನೆಯಲ್ಲಿರುವ ಖಾಲಿ ಸಿಲೆಂಡರ್ ಕೂಡ ಕುಯ್ ಎನ್ನುತ್ತದೆ.

ಹೀಗೇಕೆ? ಏಕೆ ಕೆಲವರು ಮುಕ್ತವಾಗಿ ನಗಬಲ್ಲರು. ಇನ್ನು ಕೆಲವರ ನಗು ಅಷ್ಟು ಅಪರೂಪವಾಗಿಬಿಡುತ್ತದೆ? ಇದು ಜಟಿಲ ಪ್ರಶ್ನೆ. ಇನ್ನು ಹಾಸ್ಯ ಎನ್ನುವ ಹಿನ್ನೆಲೆ ಯನ್ನಿಟ್ಟು ಹೇಳಿದಾಗ ಮಾತ್ರ ನಗುವುದು ಮತ್ತು ಹಾಸ್ಯವಲ್ಲದ ವೇದಿಕೆಯಲ್ಲಿ ಅದೇ ಮಾತು ನಗಿಸುವುದಕ್ಕೆ ಬದಲಿಯಾಗಿ  ಜನರನ್ನು ಸಿಟ್ಟಿಗೇಳುವಂತೆ ಮಾಡು ವುದು ಏಕೆ? ಹೀಗೆ ನಗುವಿನ ಸುತ್ತ ಕೆಲ ಪ್ರಶ್ನೆಗಳಿವೆ. ಹಾಗಾಗಿ ಈ ನಗುವನ್ನು ಸ್ವಲ್ಪ ಡೈಸೆಕ್ಟ್ ಮಾಡಿ ನೋಡೋಣ.

ನಗು ಎಂದರೆ ಏನು? ಈ ಪ್ರಶ್ನೆ ಯಾವತ್ತಾದರೂ ಕೇಳಿಕೊಂಡಿದ್ದೀರೆ? ನಗು ಎಂದಾಕ್ಷಣ ನಾವು ಅದನ್ನು ಹಾಸ್ಯದ ಪ್ರತಿಕ್ರಿಯೆ ಎಂದು  ಕೊಳ್ಳುವುದುಂಟು. ಆದರೆ ಸಾಮಾನ್ಯವಾಗಿ ತೊಂಬತ್ತಕ್ಕಿಂತ ಜಾಸ್ತಿ ಪ್ರತಿಶತ ನಾವು ನಗೋದು ಹಾಸ್ಯಕ್ಕಲ್ಲ. ಹೆಚ್ಚಿನ ಬಾರಿ ಹತ್ತಿರ ವಾದವರ ಜತೆ ಇರುವಾಗ ವಾಕ್ಯವೊಂದು ನಮ್ಮನ್ನು ನಗಿಸಲು ಹಾಸ್ಯವೇ ಆಗಿರಬೇಕೆಂದೇನಿಲ್ಲ. ನಗು ಸಾಮಾಜಿಕ ನಡವಳಿಕೆ. ನಗು ಅಂಟುರೋಗ ಕೂಡ ಹೌದು. ಗುಂಪಿನಲ್ಲಿ ಒಬ್ಬರು ನಕ್ಕರೆ ಇನ್ನೊಬ್ಬರು ನಗಲೇ ಬೇಕು. ಹಾಸ್ಯ ಕೆಲವೊಮ್ಮೆ ನೆಪ ಅಷ್ಟೆ.

ಹೆಚ್ಚಿನ ಬಾರಿ ಅದರಲ್ಲೂ ಆ ಗುಂಪಿನಲ್ಲಿ ವಿಚಿತ್ರವಾಗಿ ನಗುವ ಒಬ್ಬರಿದ್ದರೆ ಅದರಿಂದ ಇಡೀ ಮಾಹೋಲ್ ಬೇರೆಯದಾಗಿರುತ್ತದೆ. ಕೆಲಹಳೆಯ ಸ್ನೇಹಿತರು ಸಿಕ್ಕರೆ ಸುಸ್ತಾಗುವಷ್ಟು ನಗುವುದುಂಟು. ವ್ಯಕ್ತಿತ್ವ ನಗುವಿನಿಂದಾಗಿ ಇಷ್ಟವಾಗುತ್ತದೆಯೇ ಅಥವಾ ವ್ಯಕ್ತಿತ್ವ ದಿಂದಾಗಿ ಅವರ ನಗು ಸಹ್ಯ ಮತ್ತು ಪ್ರೀತಿಯದಾಗುತ್ತದೆಯೇ ಎನ್ನುವ ಬಗ್ಗೆ ವಾದ ಪ್ರತಿವಾದ ಇದೆ. ಒಟ್ಟಾರೆ ವ್ಯಕ್ತಿತ್ವ ಮತ್ತು ಅವರ ನಗು ಎರಡೂ ಇಷ್ಟವಾಗುತ್ತದೆ ಅಥವಾ ಎರಡೂ ಅಸಹ್ಯವಾಗುತ್ತದೆ. ಸಾಮಾನ್ಯವಾಗಿ ಗುಂಪಿನಲ್ಲಿ ಸ್ನೇಹಿತರ ಜತೆ ಮಾತನಾಡುವಾಗ ಹಾಸ್ಯಕ್ಕೆ ಎನ್ನುವುದಕ್ಕಿಂತ ಒಪ್ಪಿಗೆಗೆ, ಹೌದೆನ್ನಲು, ನಮ್ಮದೂ ಅದೇ ಅನುಭವ ಎಂಬಿತ್ಯಾದಿ ಕಾರಣಕ್ಕೆ ನಗುವುದೇ ಜಾಸ್ತಿ. ಈ ನಗುವೆನ್ನುವ ಒಂದು ನಡವಳಿಕೆ ಹಾಸ್ಯಕ್ಕಲ್ಲದೇ ಹತ್ತಾರು ಕಾರಣಕ್ಕೆ ನಾವು ಬಳಸಿಕೊಳ್ಳುವುದು ಅನುಭವಕ್ಕೆ ಬಂದರೂ ಗಮನಕ್ಕೆ
ಬಂದಿರುವುದಿಲ್ಲ.

ನಗು ಎನ್ನುವುದು ನಾವು ಇನ್ನೊಬ್ಬರ, ಗುಂಪಿನ ಜತೆ ಕಂಫರ್ಟ್ ಇದ್ದೇವೆ ಎನ್ನುವುದರ ಒಂದು ಸೂಚಕ. ಗುಂಪಿನಲ್ಲಿ ಹರಟುವಾಗ ನಗದಿರುವವನಿದ್ದರೆ ಅದೊಂದು ರೀತಿ ಕಾಲಿಗೆ ಹೇಸಿಗೆ ತಾಗಿಸಿಕೊಂಡ, ಪ್ರತ್ಯೇಕತೆಯ ಅನುಭವ. ಗುಂಪಿನಲ್ಲಿ ನಗದವನಿದ್ದರೆ ಆತ ಕ್ರಮೇಣ ರಗಳೆಯೆನ್ನಿಸಲು ಶುರುವಾಗುತ್ತಾನೆ. ಅದೇ ಗುಂಪಿನಲ್ಲಿ ಒಬ್ಬರೇ ಹಾ ಹಾ ಹಾ ಎಂದು ನಕ್ಕು ಉಳಿದವರು ನಕ್ಕಿಲ್ಲವೆಂದರೆ ಹಾಗೆ ನಕ್ಕವರ ಆತ್ಮಸ್ಥೆ ರ್ಯ ಅಡಗಿಹೋಗುತ್ತದೆ. ಅದು ಸಮೂಹ ಅಸಮ್ಮತಿ. ವಾತ್ಸಲ್ಯ ವೆಲ್ಲಿರುತ್ತದೆಯೋ ಅಲ್ಲಿ ಮಾತ್ರ ನಗುವಿರುತ್ತದೆ. ಅಸಮ್ಮತಿ ಯಲ್ಲಿ ಹಾಸ್ಯಕೂಡ ನಗುವನ್ನು ಹುಟ್ಟಿಹಾಕುವುದಿಲ್ಲ. ನಗು ಮತ್ತು ವ್ಯಕ್ತಿತ್ವ – ಇವೆರಡಕ್ಕೂ ಇರುವ ಸಂಬಂಧವನ್ನು ಅದ್ಯಾವ ಆರ್ಟಿಫಿಶಿಯಲ್ ವ್ಯಕ್ತಿತ್ವ ವಿಕಸನದ ಕ್ಲಾಸು, ಪುಸ್ತಕಗಳೂ ಹೇಳುವುದೇ ಇಲ್ಲ.

ಆದರೆ ವ್ಯಕ್ತಿತ್ವ ಮತ್ತು ನಗುವನ್ನು ಪ್ರತ್ಯೇಕಿಸಿ ನೋಡುವುದಕ್ಕೆ ಸಾಧ್ಯವೇ ಇಲ್ಲ. ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಮಗು ನಗಲು ಶುರುಮಾಡುತ್ತದೆ. ಮೊದಮೊದ ಲೆಲ್ಲ ಸುಮ್ಮನೆ ಹುಶ್ ಎಂದರೆ ಮಗು ನಕ್ಕುಬಿಡುತ್ತದೆ. ಮಗುವಿನ ನಗು ಹಾಸ್ಯಕ್ಕಲ್ಲ, ಅಥವಾ ಅಲ್ಲಿನ ಎದುರಿಗಿರುವ ವ್ಯಕ್ತಿಯ ಸಡನ್ ನಡೆಯಿಂದಾಗಿ ಕೂಡ ಅಲ್ಲ. ಅದು ಅಲ್ಲಿನ ಸೂಕ್ಷ್ಮ. ಮಗುವಿಗೆ ಪರಿಚಯವೇ ಇಲ್ಲದವರು ಹುಶ್ ಎಂದರೆ ಮಗು ಕಿರುಚುತ್ತದೆ. ಹೀಗೆ ಮನುಷ್ಯ ನಗುವನ್ನು ಕಲಿಯುವಾಗ ಹಾಸ್ಯದ ಅವಶ್ಯಕತೆ ಇಲ್ಲ. ಕ್ರಮೇಣ ನಗುವಿಗೆ ಒಂದು ಕಾರಣ ಬೇಕಾಗುವ ವಯಸ್ಸನ್ನು ಮನುಷ್ಯ ತಲಪುತ್ತಾನೆ.

ಸಾಮಾನ್ಯವಾಗಿ ಹದಿಹರೆಯದ ವಯಸ್ಸಿನಲ್ಲಿ  ಹಲವು ಮಕ್ಕಳು ನಗುವುದನ್ನು ಕೆಲ ಕಾಲ ನಿಲ್ಲಿಸಿಬಿಡುತ್ತಾರೆ.  ಅದು ಜಗತ್ತೇ ಸರಿಯಿಲ್ಲ ಎನ್ನುವ ಭಾವನೆ ಹುಟ್ಟಿಕೊಂಡ ಸಮಯ. ಆ ಸಮಯದಲ್ಲಿ ನಗು ಬಹಳ ತುಟ್ಟಿ. ಅಲ್ಲಿಂದ ಮುಂದೆ ಕೆಲ ಸಮಯ ನಗಲು ಹಾಸ್ಯ, ಒತ್ತಾಯ ಬೇಕಾಗುತ್ತದೆ. ಆಮೇಲೆ ವಯಸ್ಕ ರಾದಂತೆ ಹಾಸ್ಯ ಅಥವಾ ಸಾಂಗತ್ಯ ನಗುವಿನ ಮಟ್ಟವನ್ನು ನಿರ್ದೇಶಿಸುತ್ತದೆ. ಅದೆಲ್ಲವನ್ನು ಮೀರಿ ವ್ಯಕ್ತಿತ್ವದ ಜತೆ ನಗು ಜೋಡಿ ಯಾಗುತ್ತದೆ. ಫಿಂಗರ್‌ಪ್ರಿಂಟ್ ಹೇಗೆ ಎಲ್ಲರಿಗೂ ಪ್ರತ್ಯೇಕವೋ ಹಾಗೆಯೇ ನಗು ಕೂಡ ವ್ಯಕ್ತಿತ್ವದಷ್ಟೇ ವಿಶಿಷ್ಟ. ಕೆಲವರು ನಕ್ಕರೆ ಅವರೊಳಗೆ ಅದ್ಯಾವುದೋ ಒಂದು ಪ್ರಾಣಿ ಅವರನ್ನೇ ಅನಾಮತ್ ಹೈಜಾಕ್ ಮಾಡಿದಂತಿರುತ್ತದೆ. ಅದೆಷ್ಟೋ ಮಂದಿಯ ನಗು ಯಾವಯಾವುದೋ ಪ್ರಾಣಿಯ ಕೂಗಿನಂತೆ. ಕೆಲವರ ನಗು ಅದ್ಯಾವುದೋ ಕಾಡಿನ ಹಕ್ಕಿ ಕೂಗಿದಂತೆ. ಇನ್ನು ಕೆಲವರದು ನಾಟಕದ ಖಳನಾಯಕನ ನಗು (ನಾಟಕೀಯ ನಗು ಎಂದು ಕರೆಯುವಂತಿಲ್ಲ). ಸಾಮಾನ್ಯವಾಗಿ ಮನುಷ್ಯನಿಗೆ ತಾನು
ಮಾಡುವ ಶಬ್ದಗಳ ಮೇಲೆ ಹಿಡಿತವಿರುತ್ತದೆ. ಆದರೆ ನಗು ಮಾತ್ರ ಒಂದು ಹಂತವನ್ನು ಮೀರಿದರೆ ಅದು ಹಿಡಿತಕ್ಕೆ ಸಿಗುವುದಿಲ್ಲ. ನಗುವಿನ ಶಬ್ಧವನ್ನು ಕಂಟ್ರೋಲ್ ಮಾಡುವುದು ಕಷ್ಟ. ನಾವು ಸಾಮಾನ್ಯವಾಗಿ ಕೆಲವೊಂದು ಅರ್ಥವೇ ಇಲ್ಲದ ಆದರೆ ಬೇಕಾದ ಅರ್ಥವನ್ನು ಕೊಡುವ ಶಬ್ದವನ್ನು (ಧ್ವನಿಪೆಟ್ಟಿಗೆಯಿಂದ) ಮಾಡುತ್ತಲೇ ಇರುತ್ತೇವೆ.

ಒಹ್, ಔ, ಆಹ್ಹ್, ಔಚ್, ಆ, ಹುಹ್ಹ್ ಹೀಗೆ ಹತ್ತಾರು ಸೌಂಡ್ ಗಳನ್ನು ಆಯಾ ಭಾವನೆಯನ್ನು ಹೊರಹಾಕಲು ಬಳಕೆ ಮಾಡುತ್ತೇವೆ. ಅವೆಲ್ಲ ಶಬ್ದಗಳಿಗೆ ಶಬ್ದಕೋಶದಲ್ಲಿ ಅರ್ಥವಿಲ್ಲ. ಆದರೆ ಅವಕ್ಕೆ ನಿರ್ದಿಷ್ಟ ಸೂಚ್ಯಾರ್ಥಗಳಿವೆ. ಹಾಗೆಯೇ ನಗುವಿನಲ್ಲಿ ಅದೆಷ್ಟೋ ರೀತಿ. ಕುಹಕದ ನಗು ನಗುವಿನ ಖಳನಾಯಕ. ಅಪಹಾಸ್ಯದ ನಗು ಮಾತಿನ  ವಮಾನಕ್ಕಿಂತ ಹೆಚ್ಚಿಗೆ ತೀಕ್ಷ್ಣ. ಮಗುವಿನ ಮುಗ್ಧತೆ ಇರುವುದೇ ಅದರ ನಗುವಿನಲ್ಲಿ. ಹೀಗೆ ಪ್ರತಿ ನಗುವಿಗೂ ಅದರದೇ ವ್ಯಕ್ತಿತ್ವವಿದೆ.

ಬೇರೆ ಬೇರೆ ಪ್ರಾಣಿಗಳ ತೆರನಾಗಿ ನಗುವವರನ್ನು ನೋಡುತ್ತೇವೆ. ಆದರೆ ನಗುವುದು ಮನುಷ್ಯ ಮಾತ್ರವೇ? ಇಲ್ಲ. ಹಲವು ಪ್ರಾಣಿಗಳೂ ನಗುತ್ತವೆ. ಚಿಮ್ಪಾಂಜಿ, ಮಂಗಗಳು, ಗೊರಿ ಕೂಡ ನಗುತ್ತವೆ ಎಂದರೆ ಆಶ್ಚರ್ಯಪಡಬೇಕಿಲ್ಲ. ಚಿಮ್ಪಾಂಜಿ ಅಥವಾ ಮನುಷ್ಯ ಹತ್ತಿರದ ಪ್ರಾಣಿಗಳು ನಗುವುದು ಸಾಮಾನ್ಯವಾಗಿ ತಮಾಷೆಗೆ ಹೊಡೆದಾಡುವಾಗ, ಆಟಕ್ಕೆ ಓಡಿಸಿಕೊಂಡು ಹೋಗುವಾಗ ಅಥವಾ ಕಚಗುಳಿಗೆ. ನಾಯಿಗಳು ಕೂಡ ಆಟವಾಡುವಾಗ ಒಂದು ರೀತಿಯ ಸ್ವರವನ್ನು ತೆಗೆಯುತ್ತವೆ. ಅದು ನಾಯಿಯ ನಗು. ಆಯಾ ನಾಯಿಯ ನಗುವಿನ ಶಬ್ದವನ್ನು ರೆಕಾರ್ಡ್ ಮಾಡಿ ಮತ್ತೆ ಅದಕ್ಕೇ ಕೇಳಿಸಿದರೆ ಅವು ಆಟವಾಡಲು ರೆಡಿಯಾಗಿ ಬಿಡುತ್ತವೆ.

ಇನ್ನು ಇಲಿ – ಅದು ಕೂಡ ಕಚಗುಳಿ ಮಾಡಿದಾಗ ಅಲ್ಟ್ರಾಸೋನಿಕ್ – ನಮ್ಮ ಕಿವಿಗೆ ಕೇಳಿಸದ ಸ್ವರವನ್ನು ಹೊರಹಾಕುತ್ತವೆ. ಅದೇ ಸ್ವರ ಅವು ಆಟವಾಡುವಾಗ, ಇನ್ನೊಂದು ಇಲಿಯನ್ನು ಆಟಕ್ಕೆಂದು ಬೆನ್ನು ಬೀಳುವಾಗ ಹೊರಹಾಕುತ್ತವೆ. ಕಿತಾಪತಿ ವಿಜ್ಞಾನಿಯೊಬ್ಬ ಈ ರೀತಿ ಗುಂಪಿನಲ್ಲಿ ವಾಸಿಸುವ ಪ್ರಯೋಗ ಇಲಿಗಳಲ್ಲಿ ಒಂದರ ಧ್ವನಿಪೆಟ್ಟಿಗೆಯನ್ನು ತೆಗೆದು ಬಿಟ್ಟಾಗ ಆ ಇಲಿ ಆಟಕ್ಕೆ ಮುಂದಾದಾಗ ಉಳಿದ ಇಲಿಗಳು ಅದರ ಆಟವನ್ನು ಆಕ್ರಮಣಕಾರಿ ನಡೆಯೋ ಅಥವಾ ಆಟದ ನಡೆಯೋ ಎಂದು ವಿಶ್ಲೇಷಿಸದಂತಾಗಿ ಅದು ಅಕ್ರಮಣ ವಿರಬಹುದು ಎಂದು ಕಚ್ಚತೊಡಗಿದವಂತೆ. ಈ ಎಲ್ಲ ಉದಾಹರಣೆಗಳಲ್ಲಿ ಪ್ರಾಣಿಗಳು ಕೂಡ ನಗುವನ್ನು, ಸೌಂಡ್ ಒಂದನ್ನು ಒಪ್ಪಿಗೆ, ವಾತ್ಸಲ್ಯದ, ಒಪ್ಪಿಗೆಯ ಸೂಚಕವಾಗಿ ಮನುಷ್ಯರಂತೆ ಬಳಸುವುದು ಕಾಣಬಹುದು.

ಡಾಲ್ಫಿನ್ ಕೂಡ ನಗುವುದನ್ನು ವಿಜ್ಞಾನಿಗಳು ದಾಖಲಿಸಿದ್ದಾರೆ ಮತ್ತು ನಗುವನ್ನು ಸಹಮತಿಯ, ಮೋಜಿನ ಸೂಚಕವಾಗಿ ಬಳಸುವುದನ್ನು ಕಂಡಿದ್ದಾರೆ. ಪ್ರಾಣಿಗಳೂ ಸೇರಿದಂತೆ ಮನುಷ್ಯ ಸಮಾಜದಲ್ಲಿ ನಗು ಎನ್ನುವುದು ತೀರಾ ಮಹತ್ವದ್ದು. ದೇಶದೇಶಗಳ ಸಂಬಂಧ ಹಣೆಬರಹಗಳನ್ನು ನಗುವೇ ನಿರ್ದೇಶಿಸಿದ ಅದೆಷ್ಟೋ ಉದಾಹರಣೆಗಳಿವೆ. ಡೊನಾಲ್ಡ ಟ್ರಂಪ್ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕ್ಯಾಮೆರಾ ಎದುರು ನಕ್ಕಿದ್ದು ಟ್ರಂಪ್ ಅನ್ನು ಸಿಟ್ಟಿಗೇಳುವಂತೆ ಮಾಡಿ ಆಗ ತಾನೇ ಚಿಗುರುತ್ತಿದ್ದ ಸಂಬಂಧ ಹದಗೆಟ್ಟು ಆಮೇಲೆ ಸರಿಯಾಗಲು ಮೂರು ತಿಂಗಳು ಬೇಕಾಯಿತು.

ಬಿಬಿಸಿ ಮೊದಲಾದ ಮಾಧ್ಯಮಗಳಲ್ಲಿ ಅಲ್ಲಿನ ವಾರ್ತೆ ಓದುವವರು, ಕಾಮೆಂಟೇಟರ್‌ಗಳು ನಗುವಂತಿಲ್ಲ, ಮುಗುಳ್ನಗೆಯನ್ನು ಮೀರುವಂತಿಲ್ಲ. ಸಾಮಾನ್ಯವಾಗಿ ಟಿವಿ ಮಾಧ್ಯಮದಲ್ಲಿ ಯಾರದೇ ವರ್ತನೆ ನೋಡಿ ನಗಬಾರದು ಎನ್ನುವುದು ಅಲಿಖಿತ ಕಾನೂನು. ಪರದೆಯ ಮೇಲೆ ವರದಿಯೊಂದನ್ನು ಓದುವಾಗ ನಕ್ಕು ಕೆಲಸ ಕಳೆದುಕೊಂಡ ಅದೆಷ್ಟೋ ವಾರ್ತೆ ಓದುಗರಿzರೆ. ಇನ್ನೊಂದು ಕಡೆ ಟಿವಿಯಲ್ಲಿ ಬಂದು ನಗುವುದೇ ಕೆಲವರ ಉದ್ಯೋಗ. ಕಪಿಲ್ ಶರ್ಮಾ ಷೋನಲ್ಲಿ ಸಿದ್ದುವಿಗೆ ಅದೇ ಕೆಲಸ. ಅರ್ಚನಾ ಪೂರನ್‌ಗೆ ಸಂಬಳ ಕೊಡುವುದೇ ನಗುವುದಕ್ಕೆ. ಈ ನಗುವನ್ನು ಸ್ವೀಕರಿಸುವ ಬಗ್ಗೆ ಇನ್ನೊಂದು ಗಮನಿಸಬೇಕಾದ ವಿಚಾರವಿದೆ. ನೀವು ನಗುವಿನ ಮಾತುಕತೆಯಲ್ಲಿಭಾಗಿಯಾಗಿದ್ದರೆ ಮಾತ್ರ ಇನ್ನೊಬ್ಬರ ನಗು ಸಹ್ಯವೆನಿಸುತ್ತದೆ.

ನೀವು ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಯಾವುದಾದರೂ ಒಂದು ಗುಂಪು ದೊಡ್ಡ ಸ್ವರದಲ್ಲಿ ನಗುತ್ತಿದ್ದರೆ ಅದು ಕಿರಿಕಿರಿಯೆನ್ನಿಸುತ್ತದೆ. ಇಲ್ಲಿ ನಗುವಿನ ಕಾರಣ ಮತ್ತು ವಿವರಣೆ ನಮಗೆ ತಿಳಿದಿರುವುದಿಲ್ಲ. ನಗುವಿನ ಶಬ್ದವನ್ನು ನಮ್ಮ ಮನಸ್ಸು ಏನೋ ಒಂದು ಸಮ್ಮತಿಯ ಬೇಡಿಕೆಯಂತೆ ಗ್ರಹಿಸುತ್ತದೆ. ಆ ಸಮ್ಮತಿ ಏನು ಎಂದು ತಿಳಿಯದಾದಾಗ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಈ ಗೊಂದಲ ಕಿರಿಕಿರಿಗೆ ಕಾರಣವಾಗುತ್ತದೆ. ಒಬ್ಬರಿಗೊಬ್ಬರು ಪರಿಚಯ ದವರು ಸೇರಿದಾಗ ಹೊರಹೊಮ್ಮುವ ನಗುವಿಗೂ ಮತ್ತು ಪರಿಚಯವಿಲ್ಲದ ಆದರೆ ಹಾಸ್ಯದಿಂದಾಗಿ ಉಂಟಾಗುವ ನಗುವಿಗೂ ವ್ಯತ್ಯಾಸವಿದೆ.

ಆ ವ್ಯತ್ಯಾಸವನ್ನು ನಮ್ಮ ಮನಸ್ಸು ಏಕ್ದಂ ಸೂಕ್ಷ್ಮವಾಗಿ ಗ್ರಹಿಸಬಲ್ಲದು. ರೈಲಿನಲ್ಲಿ ಒಂದೇ ಗುಂಪಿನವರು ನಗುವಾಗ ಆಗುವ ಕಿರಿಕಿರಿ ಏನೋ ಒಂದು ಹಾಸ್ಯ ಸನ್ನಿವೇಶ ನಿರ್ಮಾಣವಾದಾಗ ಪರಿಚವಿಲ್ಲದ ಜನರ ಗುಂಪು ನಕ್ಕದ್ದು ಕೇಳಿದಾಗ ಆಗುವುದಿಲ್ಲ. ನಗುವಿನ ಇನ್ನೊಂದು ವಿಶೇಷ ಎಂದರೆ ನೀವು ಇನ್ನೊಬ್ಬರ ನಗುವನ್ನು ಪಿನ್‌ಡ್ರಾಪ್ ನಿಶ್ಶಬ್ದದಲ್ಲಿ, ಯಾರೂ ಇಲ್ಲದಿರುವಾಗ ಕೇಳಿದರೆ ಮನಸ್ಸು ಹೆದರುತ್ತದೆ. ಅದೇ ಹೆದರಿಕೆ ಹಾರರ್ ಚಲನಚಿತ್ರಗಳಲ್ಲಿ ಕಾಣುತ್ತದೆ. ಅಲ್ಲಿ ಭೂತದ ಕ್ಯಾರೆಕ್ಟರ್ ಅದೆಷ್ಟೇ ಸುಂದರವಾಗಿ ಸಿಹಿಯಾಗಿ ನಕ್ಕರೂ ಅದು ಭಯವನ್ನು ಉದ್ವೇಗವನ್ನು ಮಾತ್ರ ಉದ್ರೇಕಗೊಳಿಸಬಲ್ಲದು.

ಬೇಡದ ಜಾಗದಲ್ಲಿ, ಅಸಂಬದ್ಧ ಸಂದರ್ಭದಲ್ಲಿ ನಗುವುದು ಮಹಾ ಅಪಾಯಕಾರಿ. ಬಾಸ್ ಎದುರಿಗೆ ಬೇಡದ ಸಮಯದಲ್ಲಿ ನಕ್ಕು ಕೆಲಸವನ್ನೇ ಕಳೆದುಕೊಂಡವ
ರಿzರೆ. ಅಪರಾಽ ಶಿಕ್ಷೆಯನ್ನು ಘೋಷಿಸುವ ಸಮಯದಲ್ಲಿ ನಗುವುದನ್ನು ನೋಡಿ ಶಿಕ್ಷೆಯ ಪ್ರಮಾಣವನ್ನು ದುಪ್ಪಟ್ಟು ಮಾಡಿದ ಹಲವು ಉದಾಹರಣೆಗಳಿವೆ. ನಮ್ಮ ಧೋರಣೆ, ಭಾವ, ಪಶ್ಚಾತ್ತಾಪ ಇವೆಲ್ಲವನ್ನು ಮೀರಿ ನಗು ಭಾವವೊಂದನ್ನು ಹೊರಹಾಕಬಲ್ಲದು. ಮರೆಯಲ್ಲಿರುವ ವ್ಯಕ್ತಿತ್ವವನ್ನು ಹೊರಗೆಳೆಯಲು ನಗು ಸಾಕು. ಎಲ್ಲಿ, ಎಷ್ಟು, ಹೇಗೆ ನಗಬೇಕು ಎನ್ನುವುದು, ನಗುವನ್ನು ಒಂದು ಕಂಟ್ರೋಲ್‌ನಲ್ಲಿ ಇಡುವುದು ವ್ಯಕ್ತಿತ್ವವನ್ನು ಯತ್ – ತತ್ ಎಂದು ಹೇಳಿಬಿಡುತ್ತದೆ. ಎಲ್ಲಿ ಹೇಗೆ ನಗಬಾರದು ಎನ್ನುವುದಕ್ಕೆ ಲೋಕಸಭೆಯಲ್ಲಿ ಗಹಗಹಿಸಿ ನಕ್ಕ ರೇಣುಕಾ ಚೌಧರಿ ಉದಾಹರಣೆ. ಅಸಭ್ಯ ರೀತಿಯಲ್ಲಿ ನಕ್ಕಾಗ ಹೇಗೆ ವ್ಯವಹರಿಸಬೇಕು ಎನ್ನುವುದಕ್ಕೆ ಮೋದಿ ಪ್ರತಿಕ್ರಿಯೆ ಉದಾಹರಣೆ. ನಗುವಿನ ಸರಕಾಗಬಾರದು ಎನ್ನುವುದಕ್ಕೆ ಯಾರು ಉದಾಹರಣೆ ಎನ್ನುವುದು ನಿಮಗೆ ಗೊತ್ತು.

ನಗು ನಮ್ಮ ವ್ಯಕ್ತಿತ್ವಕ್ಕೆ, ಮೆದುಳಿಗೆ, ಆರೋಗ್ಯಕ್ಕೆ ಒಳ್ಳೆಯದು ಎನ್ನುವುದಕ್ಕೆ ಅನುಮಾನವೇ ಬೇಡ. ಆದರೆ ನಗುವನ್ನು ಸುಮ್ಮನೆ ಪಾರ್ಕ್ ನಲ್ಲಿ ಕೃತಕವಾಗಿ ಮಾಡುವುದರಿಂದಲೋ ಅಥವಾ ಗಂಟೆಗಟ್ಟಲೆ ಹಾಸ್ಯ ಕಾರ್ಯಕ್ರಮ ನೋಡಿದರೆ ಅದು ಪರಿಣಾಮಕಾರಿಯಲ್ಲವೇ ಅಲ್ಲ. ನಗುವನ್ನು ಹುಟ್ಟಿ ಹಾಕುವ, ಒಪ್ಪುವ, ಸಲುಗೆಯ ವ್ಯಕ್ತಿತ್ವವನ್ನು ಅಕ್ಕಪಕ್ಕದಲ್ಲಿರಿಸಿಕೊಳ್ಳುವ, ಅವರ ಜತೆ ವ್ಯವಹರಿಸಲು ಒಂದಿಷ್ಟು ಸಮಯ ಇವೆಲ್ಲ ಮಾಡಿಕೊಂಡಾಗ ಮಾತ್ರ ನಗುವಿನ ಒಳ್ಳೆಯ ಪ್ರಭಾವಗಳ ಅನುಭವ ವಾಗುತ್ತದೆ. ಕೇವಲ ಹಾಸ್ಯವೊಂದನ್ನೇ ನಗುವಿಗೆ ಥಳುಕು ಹಾಕಿಕೊಂಡರೆ ಆ ನಗುವಿನಿಂದ ಅಷ್ಟು ಪ್ರಯೋಜನವಿಲ್ಲ.

ಹೀಗೆ ನಗುವಿನ ಸುತ್ತ ಕೆಲವು ವಿಚಾರಗಳನ್ನು, ಸೂಕ್ಷ್ಮತೆಗಳನ್ನು ಗ್ರಹಿಸಿದಲ್ಲಿ, ಅನವಶ್ಯಕ ನಗುವನ್ನು ಒಂದಿಷ್ಟು ಹಿಡಿತದಲ್ಲಿಟ್ಟುಕೊಂಡಲ್ಲಿ, ಅವಶ್ಯಕವಿದ್ದಲ್ಲಿ ಸಡಿಲ ಗೊಳಿಸಿಕೊಂಡಲ್ಲಿ ಅದು ಒಂದು ಸುಂದರ ವ್ಯಕ್ತಿತ್ವವನ್ನು ಪೋಷಿಸಬಲ್ಲದು ಮತ್ತು ವ್ಯಕ್ತಿತ್ವದ ಸೌಂದರ್ಯವನ್ನು ಸರಿಯಾಗಿ ಪ್ರಕಟಿಸಲು ಸಹಾಯಕವಾಗಬಲ್ಲದು.