Friday, 22nd November 2024

ಚಂಡೀಗಡ- ಮೊಹಾಲಿ ಗಡಿಯಲ್ಲಿ ರೈತರ ಚದುರಿಸಲು ಜಲಫಿರಂಗಿ ಪ್ರಯೋಗ

ಚಂಡೀಗಡ: ಪಂಜಾಬ್ ರಾಜ್ಯಪಾಲರ ನಿವಾಸದತ್ತ ಮೆರವಣಿಗೆ ತೆರಳಲು ಯತ್ನಿಸಿದ ರೈತರು ಚಂಡೀಗಡ- ಮೊಹಾಲಿ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಭೇದಿಸಿ ಒಳ ನುಗ್ಗಿದ್ದಾರೆ. ಈ ವೇಳೆ ಪೊಲೀಸರು ಶನಿವಾರ ಜಲಫಿರಂಗಿ ಪ್ರಯೋಗಿಸಿದರು.

ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧದ ಏಳು ತಿಂಗಳ ಆಂದೋಲನ ಪೂರ್ಣಗೊಂಡಿದ್ದು, ರೈತರು ರಾಜ್ಯಪಾಲರ ಮನೆಗೆ ಮೆರವಣಿಗೆ ನಡೆಸಿ ಜ್ಞಾಪಕ ಪತ್ರ ಸಲ್ಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಚಂಡೀಗಡದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.

ಪಂಜಾಬ್‌ನ ವಿವಿಧೆಡೆಯಿಂದ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ರೈತರು ಪಂಜಾಬ್ ರಾಜಭವನದತ್ತ ಸಾಗುವ ಮುನ್ನ ಮೊಹಾಲಿಯ ಅಂಬ್ ಸಾಹಿಬ್ ಗುರುದ್ವಾರದಲ್ಲಿ ಒಟ್ಟುಗೂಡಿದರು. ಹರಿಯಾಣದಲ್ಲಿ ರಾಜ್ಯದ ಹಲವಾರು ಭಾಗಗಳಿಂದ ರೈತರು ಪಂಚಕುಲಾದ ನಾದಾ ಸಾಹಿಬ್ ಗುರುದ್ವಾರದಲ್ಲಿ ಜಮಾಯಿಸಿ ರಾಜಭವನದತ್ತ ಹೊರಟಿದ್ದರು.

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ 2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, 2020 ಮತ್ತು ಅಗತ್ಯ ಸರಕುಗಳ ಕಾಯ್ದೆ, 2020ರ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಕಳೆದ ನವೆಂಬರ್‌ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.