Saturday, 14th December 2024

ಟ್ವಿಟರ್ ಇಂಡಿಯಾ ದೂರು ಸ್ಪಂದನೆ ಅಧಿಕಾರಿಯಾಗಿ ಜೆರೆಮಿ ಕೆಸೆಲ್ ನೇಮಕ

ನವದೆಹಲಿ: ಟ್ವಿಟರ್ ಚಂದಾದಾರರ ದೂರುಗಳನ್ನು ಆಲಿಸುವುದಕ್ಕೆ ನೇಮಕ ಮಾಡಲಾಗಿದ್ದ ಅಧಿಕಾರಿ ಧರ್ಮೇಂದ್ರ ಚತುರ್ ಅವರ ನಿರ್ಗಮನದ ಬೆನ್ನಲ್ಲೆ ಅಮೆರಿಕಾದ ಸಂಸ್ಥೆ ಕ್ಯಾಲಿಫೋರ್ನಿಯಾ ಮೂಲದ ವ್ಯಕ್ತಿಯೋರ್ವನನ್ನು ಆ ಹುದ್ದೆಗೆ ನೂತನವಾಗಿ ನೇಮಕ ಮಾಡಿದೆ.

ಟ್ವಿಟರ್ ಗ್ಲೋಬಲ್ ನ ಕಾನೂನು ನೀತಿ ನಿರ್ದೇಶಕ ಜೆರೆಮಿ ಕೆಸೆಲ್ ಟ್ವಿಟರ್ ಇಂಡಿಯಾದಲ್ಲಿ ದೂರು ಆಲಿಸುವ ಅಧಿಕಾರಿಯಾಗಿ ಮುಂದುವರೆಯಲಿದ್ದು, ಇದು ಭಾರತದ ಹೊಸ ಐಟಿ ನಿಯಮಗಳಿಗೆ ವಿರುದ್ಧವಾಗಿದೆ. ಎಲ್ಲಾ ನೋಡಲ್ ಅಧಿಕಾರಿಗಳು, ಭಾರತೀಯ ಮೂಲದವರೇ ಆಗಿರಬೇಕೆಂಬ ನಿಯಮವಿದೆ.

ಹೊಸ ಐಟಿ ಕಾನೂನುಗಳ ಪಾಲನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ- ಟ್ವಿಟರ್ ನಡುವೆ ಜಟಾಪಟಿ ನಡೆಯುತ್ತಿದ್ದಾಗಲೇ ಚತುರ್ ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು.

ಐಟಿ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಟ್ವಿಟರ್ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಮೇ.25 ರಂದು ಹೊಸ ಕಾನೂನು ಜಾರಿಯಾಗಿದ್ದು, ಸಾಮಾಜಿಕ ಜಾಲತಾಣ ಸಂಸ್ಥೆಗಳು ತಮ್ಮ ಗ್ರಾಹಕರಿಂದ ದೂರು ಅಥವಾ ಆಕ್ಷೇಪಣೆಗಳು ವ್ಯಕ್ತವಾದಲ್ಲಿ ಅವುಗಳನ್ನು ಆಲಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ.