Thursday, 12th December 2024

ಖಾಲಿಯಿಲ್ಲದ ಕುರ್ಚಿಗೆ ಬಡಿದಾಡಿಕೊಳ್ಳುವುದೇ ಕೈ ತಂತ್ರವೇ ?

ಅಶ್ವತ್ಥ ಕಟ್ಟೆ

ರಂಜಿತ್‌ ಎಚ್‌.ಅಶ್ವತ್ಥ

‘ಪಕ್ಕದ ತಟ್ಟೆಯಲ್ಲಿರುವ ನೊಣವನ್ನು ನೋಡಿ ಕುಹಕವಾಡುತ್ತ, ತಮ್ಮ ತಟ್ಟೆಯಲ್ಲಿ ಹಲ್ಲಿ ಬಿದ್ದಿರುವುದನ್ನು ಅಥವಾ ಬೀಳುವುದನ್ನು ನೋಡಲಿಲ್ಲ’ ಎನ್ನುವ ಮಾತಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತಾಜಾ ಉದಾಹರಣೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹೌದು, ಆಡಳಿತ ಪಕ್ಷ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಗೊಂದಲ, ಗೋಜಲು, ವಿವಾದವನ್ನು ನೋಡಿ ಅಪಹಾಸ್ಯ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಈಗ
ಕಾಂಗ್ರೆಸ್ ಸರಕಾರವಿಲ್ಲದಿದ್ದರೂ, ಬಹುಮತದ ಹತ್ತಿರಕ್ಕೆ ಹೋಗುವುದಕ್ಕೂ ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ, ‘ಮುಖ್ಯಮಂತ್ರಿ ಅಭ್ಯರ್ಥಿ’ ಎನ್ನುವ ಹೇಳಿಕೆಗಳ ಮೂಲಕ ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗುತ್ತಿದೆ. ಹೋಗಲಿ ಈ ಸಮಯದಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಕೂಗು ಕೇಳಿ ಬರುತ್ತಿರುವು ದಕ್ಕೆ ಪೂರಕ ಬೆಳವಣಿಗೆಗಳೇನಾದರೂ ನಡೆದಿವೆಯೇ ಎನ್ನುವುದನ್ನು ನೋಡುವುದಾದರೆ, ಈ ರೀತಿಯ ಯಾವುದೇ ರಾಜಕೀಯ ಬೆಳವಣಿಗೆ ಗಳಂತೂ ಕಾಣಿಸುತ್ತಿಲ್ಲ.

ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಆಗಾಗ್ಗೆ ಹೊಗೆಯಾಡುತ್ತಿರುತ್ತದೆ. ಆದರೆ ಅದು ಸರಕಾರವನ್ನು ಬೀಳಿಸಿ, ಅಲ್ಲಿರುವ ಶಾಸಕರು ಕಾಂಗ್ರೆಸ್‌ಗೆ ಬೆಂಬಲಿಸಿ, ಸರಕಾರ ನಡೆಸಬಹುದು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ, ಬಿಜೆಪಿಯಲ್ಲಿ ಏನೇ ಗೊಂದಲ, ಗೋಜಲುಗಳಿದ್ದರೂ ಪಕ್ಷಾಂತರ ಮಾಡುವ ಮಟ್ಟಕ್ಕೆ ಈ
ಹಂತದಲ್ಲಿ ಅಲ್ಲಿನ ಯಾವ ಶಾಸಕರೂ ಹೋಗುವುದಿಲ್ಲ ಎನ್ನುವುದಂತೂ ಸ್ಪಷ್ಟ. ಇನ್ನು ಕರೋನಾ ಸಮಯದಲ್ಲಿ ಈ ರೀತಿಯ ಪಕ್ಷಾಂತರ ಪರ್ವಕ್ಕೆ ಯಾರೇ ಮುಂದಾದರೂ ಜನ ಅವರನ್ನು ಸಹಿಸುವುದಿಲ್ಲ ಎನ್ನುವ ಸಾಮಾನ್ಯಜ್ಞಾನವಂತೂ ಶಾಸಕರಿಗೆ ಇದೆ.

ಇದರೊಂದಿಗೆ ಬಿಜೆಪಿಯಿಂದ ಕಾಂಗ್ರೆಸ್ ಹಾರುವುದಕ್ಕೆ ಪ್ರಜ್ವಲ ಎನಿಸುವ ಯಾವ ಸಂಗತಿಗಳೂ ಸದ್ಯಕ್ಕಂತೂ ದೆಹಲಿ ಮಟ್ಟದಲ್ಲಿ ಕಾಣಿಸುತ್ತಿಲ್ಲ. ಕರ್ನಾಟಕ
ದಲ್ಲಿಯೂ ಆಡಳಿತ ಪಕ್ಷದಲ್ಲಾಗುತ್ತಿರುವ ಸಮಸ್ಯೆಗಳನ್ನು ಬಳಸಿಕೊಂಡು, ಜನರ ಮನಸಲ್ಲಿ ಆಡಳಿತ ವಿರೋಧಿ ಧೋರಣೆ ತುಂಬಬೇಕು ಎನ್ನುವ ನಿಟ್ಟಿನಲ್ಲಿ ಯಾವ
ನಾಯಕರೂ ‘ಗಂಭೀರ’ ಪ್ರಯತ್ನ ಮಾಡಿರುವುದನ್ನು ಕಂಡಿಲ್ಲ. ಹೀಗಿರುವಾಗ, ಕೈಯಲ್ಲಿರುವ ಶಾಸಕ ಸ್ಥಾನವನ್ನು ಬಿಟ್ಟು ಹೋಗಿ ‘ರಿಸ್ಕ್’ ತಗೆದುಕೊಳ್ಳುವ ಧೈರ್ಯವನ್ನು ಬಿಜೆಪಿಯಲ್ಲಿರುವ ಶಾಸಕರು ಮಾಡುವುದಿಲ್ಲ.

ಹಾಗಾದರೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಏಕ್‌ದಂ ‘ಮುಖ್ಯಮಂತ್ರಿ ಅಭ್ಯರ್ಥಿ’ ಮಾತು ಬಂದಿದ್ದು ಏಕೆ? ಇದರಿಂದ ಕಾಂಗ್ರೆಸ್ ನಾಯಕರಿಗೆ ಆಗುವ ಲಾಭವೇನು?
ವಿಧಾನಸಭಾ ಚುನಾವಣೆಗೆ ಎರಡು ವರ್ಷ ಇರುವಾಗಲೇ, ಈ ಸುದ್ದಿಯನ್ನು ಗಾಳಿಯಲ್ಲಿ ತೇಲಿಬಿಡುವುದರಿಂದ ಲಾಭವೇನಾದರೂ ಇದೆಯೇ? ಎರಡು ವರ್ಷದ ಬಳಿಕದ ರಾಜಕೀಯ ಆಗುಹೋಗುಗಳಿಗೆ ಈಗಿನಿಂದಲೇ ತಯಾರಿಯೇ ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಈ ಎಲ್ಲ ಪ್ರಶ್ನೆಗಳು ಸರಿಯೇ ಆಗಿದ್ದರೂ, ಕಾಂಗ್ರೆಸ್‌ನ ಕೆಲ ನಾಯಕರ ದೂರಾಲೋಚನೆಯಿಂದ ನಷ್ಟವಾಗಿದ್ದು ಮಾತ್ರ ಕಾಂಗ್ರೆಸ್‌ಗೆ ಎನ್ನುವುದನ್ನು ಒಪ್ಪಲೇಬೇಕು.

ಹಾಗಾದರೆ ಈ ವಿಷಯವನ್ನು ಗಾಳಿಯಲ್ಲಿ ಬಿಟ್ಟಿದ್ದಾದರೂ ಯಾರು ಎಂದರೆ ಅಲ್ಲಿಗೆ ಈ ಗೊಂದಲಕ್ಕೆ ಕಾರಣವೇನು ಎನ್ನುವುದು ಸ್ಪಷ್ಟವಾಗುತ್ತದೆ. ಕೆಲ ದಿನಗಳ ಹಿಂದೆ ‘ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ಒಬ್ಬರಾದ ಜಮೀರ್ ಹೇಳಿಕೆ ನೀಡುತ್ತಿದ್ದಂತೆ, ಈ ವಿಷಯ ಚಾಲ್ತಿಗೆ ಬಂದಿತ್ತು. ಆದರೆ ಮಾಧ್ಯಮಗಳು ಸೇರಿದಂತೆ ಬಹುತೇಕರು ಈ ಹೇಳಿಕೆಗೆ ಹೆಚ್ಚು ಪಾಶಸ್ತ್ಯ ನೀಡಲಿಲ್ಲ. ಏಕೆಂದರೆ ಜಮೀರ್ ಮೊದಲಿನಿಂದಲೂ ಈ ರೀತಿಯ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗಿರುವುದು. ಜಮೀರ್ ಈ ಹೇಳಿಕೆ ನೀಡಿದ ಬಳಿಕ ಸಿದ್ದರಾಮಯ್ಯ ಆಪ್ತ ಬಣದಲ್ಲಿರುವ ಕೆಲವರು ಈ ಮಾತಿಗೆ
ಒಪ್ಪಿ, ಬಹಿರಂಗ ಹೇಳಿಕೆ ನೀಡಲು ಶುರುಮಾಡಿದರು.

ಈ ಹೇಳಿಕೆಗಳಿಂದ ಸಿದ್ದರಾಮಯ್ಯ ಅವರಿಗೆ ಎಷ್ಟು ಖುಷಿಯಾಯಿತೋ, ಬಿಟ್ಟಿತೋ ಎನ್ನುವುದಕ್ಕಿಂತ ಈ ಹೇಳಿಕೆಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ನುಂಗಲಾರದ ತುತ್ತಾದವು. ಅಧ್ಯಕ್ಷ ಸ್ಥಾನದ ಜತೆಜತೆಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟುಕೊಂಡೇ ಅಧ್ಯಕ್ಷ ಗಾದಿಯನ್ನು ಸ್ವೀಕರಿಸಿರುವ ಡಿ.ಕೆ.ಗೆ ಜಮೀರ್ ಸೇರಿದಂತೆ ಸಿದ್ದರಾಮಯ್ಯ ಸಂಗಡಿಗರ ಈ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಾಗಲೇ ಇಲ್ಲ. ಆದ್ದರಿಂದ ಕೂಡಲೇ ದೆಹಲಿಗೆ ತೆರಳಿ, ಹೈಕಮಾಂಡ್‌ಗೆ ಈ ಸಂಬಂಧ ದೂರು ನೀಡಿದರು. ಈ ಆತುರದ ನಡೆಯೇ ಕಾಂಗ್ರೆಸ್‌ನ ಇಂದಿನ ಗೊಂದಲದ ಪರಿಸ್ಥಿತಿ ಕಾರಣವಾಗಿದೆ.

ಮುಂದಿನ ಎರಡು ವರ್ಷದ ಚುನಾವಣೆಯ ಅಭ್ಯರ್ಥಿಗಳು ಯಾರು ಎನ್ನುವುದೇ ಗೊತ್ತಿಲ್ಲದ ಈ ಕ್ಷಣದಲ್ಲಿ ಡಿ.ಕೆ.ಶಿ ಜಮೀರ್ ಅಹಮದ್ ಹೇಳಿಕೆಯನ್ನೇ ಇಟ್ಟು ಕೊಂಡು ಪಕ್ಷದಲ್ಲಿರುವ ಎರಡು ಪ್ರಬಲ ಶಕ್ತಿ (ಡಿಕೆಶಿ ಹಾಗೂ ಸಿದ್ದರಾಮಯ್ಯ) ನಡುವಿನ ‘cold war’ ಅನ್ನು ದೊಡ್ಡದಾಗಿ ಮಾಡಿ ಜ್ವಾಲಾಮುಖಿಯನ್ನಾಗಿ
ಪರಿವರ್ತಿಸಿದರು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಜಮೀರ್ ನೀಡಿದ ಹೇಳಿಕೆಯನ್ನು ಶಿವಕುಮಾರ್ ಅವರು ಅಷ್ಟು ಗಂಭೀರವಾಗಿ ಪರಿಗಣಿಸದಿದ್ದರೆ, ಈ ಹೇಳಿಕೆ ಅಂದೇ ಗಾಳಿಸುದ್ದಿಯ ರೀತಿ ತೇಲಿ ಹೋಗಿರುತ್ತಿತ್ತು. ಆದರೆ ಆ ಹೇಳಿಕೆಯನ್ನು ಇಟ್ಟುಕೊಂಡು ಹೈಕಮಾಂಡ್ ಬಳಿ ದೂರು ನೀಡುವ ಮೂಲಕ, ‘ಮುಸುಕಿನ ಗುದ್ದಾಟ’ ಹೋಗಿ ದೆಹಲಿ ನಾಯಕರ ಎದುರು ಬಟಾಬಯಲಾಗುವಂತೆ ಮಾಡಿದರು.

ಡಿ.ಕೆ. ಜಮೀರ್ ಹೇಳಿಕೆಯನ್ನು ಖಂಡಿಸಿ ಹೈಕಮಾಂಡ್‌ಗೆ ದೂರು ನೀಡದಿದ್ದರೆ ಸಿದ್ದರಾಮಯ್ಯ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ವೇನೋ. ದೂರು ನೀಡಿದ್ದರಿಂದ ಅನಿವಾರ್ಯವಾಗಿ ತಮ್ಮ ಆಪ್ತನ ರಕ್ಷಣೆಗೆ ಸಿದ್ದರಾಮಯ್ಯ ಬರಬೇಕಾಯಿತು. ಮುಖ್ಯಮಂತ್ರಿ ಅಭ್ಯರ್ಥಿ ವಿಷಯದ ಬಗ್ಗೆ ದೂರು
ನೀಡಿದ ಬಳಿಕ ಆದ ಪರಿಣಾಮ ಒಂದೆರಡಲ್ಲ. ಈ ಹಿಂದೆ ಕೇವಲ ಸಿದ್ದರಾಮಯ್ಯ ಇಲ್ಲವೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ವಿಷಯ ಹೋಗಿ,
ಈ ಇಬ್ಬರೊಂದಿಗೆ ಇನ್ನು ಐದು ಜನ ಈ ಪಟ್ಟಿಯಲ್ಲಿ ತಾನು ಇದ್ದೇನೆ ಎನ್ನುವ ಹೇಳಿಕೆಗಳನ್ನು ನೀಡಲು ಶುರುಮಾಡಿದರು.

ಕಾಂಗ್ರೆಸ್‌ನ ನಾಯಕರ ಈ ನೀತಿಯಿಂದ, ಬಿಜೆಪಿಯಲ್ಲಿರುವ ಗೊಂದಲ ಸೈಡ್‌ಲೈನ್ ಆಗಿ, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಸುದ್ದಿಯೇ ಭಾರಿ ಸದ್ದಾಗುತ್ತಿದೆ.
ಹೌದು, ಡಿ.ಕೆ. ಶಿವಕುಮಾರ್ ದೂರು ನೀಡಿದ ಮರುಗಳಿಯೇ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಎನ್ನುವ ಕೂಗು ಶುರುವಾಯಿತು. ಈ ಕೂಗಿನ ಜತೆಜತೆಯಲ್ಲಿಯೇ
ಡಾ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಸೇರಿ ಹಲವು ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಿದ್ಧ ಎನ್ನುವ ಪರೋಕ್ಷ ಸಂದೇಶ ರವಾನಿಸಲು
ಶುರುಮಾಡಿದರು. ಇದು ಕೇವಲ ಇಲ್ಲಿಗೆ ನಿಲ್ಲದೇ, ‘ಕಾಂಗ್ರೆಸ್ ಹೊರತು, ಇನ್ಯಾರೂ ಮುಸ್ಲಿಮರಿಗೆ ಅವಕಾಶ ನೀಡುವುದಿಲ್ಲ. ಆದ್ದರಿಂದ ಮುಸ್ಲಿಂ ಕೋಟದಲ್ಲಿ ನಾನಿದ್ದೇನೆ’ ಎಂದು ತನ್ವೀರ್ ಸೇಠ್ ತಮ್ಮದೂ ಒಂದು ಟವಲ್ ಇರಲಿ ಎಂದು ಹಾಕಿದರು. ಈ ಹೇಳಿಕೆ ಬರುತ್ತಿದ್ದಂತೆ, ಇತ್ತ ಲಿಂಗಾಯತ ಕೋಟದಲ್ಲಿ ಎಂ.ಬಿ. ಪಾಟೀಲ್ ತಾನು ಆಕಾಂಕ್ಷಿ, ಕಾಂಗ್ರೆಸ್‌ಗೆ ಲಿಂಗಾಯತ ವೋಟ್ ಮರಳಿ ಪಡೆಯಬೇಕಾದರೂ, ಲಿಂಗಾಯತ ಮುಖ್ಯಮಂತ್ರಿ ಎಂದು ಘೋಷಿಸಿ ಎನ್ನುವ ಮಾತನ್ನು ಆಡಿದ್ದಾರೆ. ಈ ಎಲ್ಲ ಗೊಂದಲಗಳು ಡಿಕೆಶಿಗೆ ಭಾರಿ ಸಮಸ್ಯೆಯನ್ನು ಒಡ್ಡುತ್ತಿದೆ.

ಆದರೆ ಈಗಾಗಲೇ ಡ್ಯಾಮೇಜ್ ಆಗಿದ್ದು, ಇದನ್ನು ಸರಿಪಡಿಸುವುದಕ್ಕೆ ಇರುವ ದಾರಿಗಳೇನು ಎನ್ನುವುದು ತಿಳಿಯುತ್ತಿಲ್ಲ. ಇನ್ನೊಂದು ಆಯಾಮದಲ್ಲಿ ನೋಡುವು ದಾದರೆ, ಡಿಕೆಶಿ ಅವರು ಹೈಕಮಾಂಡ್ ಬಳಿ ತೆರಳುವುದಕ್ಕಿಂತ ಮೊದಲು ಕೇವಲ ನಾಯಕರ ಹೆಸರಲ್ಲಿ ಮುಖ್ಯಮಂತ್ರಿ ಗುದ್ದಾಟ ನಡೆಯುತ್ತಿತ್ತು. ಆದರೆ ಇದೀಗ ಜಾತಿ ಲೆಕ್ಕಾಚಾರದಲ್ಲಿ ನಡೆಯುತ್ತಿದೆ. ದಲಿತ, ಲಿಂಗಾಯತ, ಅಲ್ಪಸಂಖ್ಯಾತ, ಕುರುಬ ಹಾಗೂ ಒಕ್ಕಲಿಗರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ (ಖಾಲಿಯಿಲ್ಲದ ಮುಖ್ಯಮಂತ್ರಿ ಸ್ಥಾನ) ಭಾರಿ ಲಾಬಿ ಆರಂಭಗೊಂಡಿದೆ. ಆದರೆ ಈ ಎಲ್ಲ ಸಮುದಾಯಗಳ ಮತಗಳು ಚುನಾವಣಾ ಸಮಯದಲ್ಲಿ ಭಾರಿ ವ್ಯತ್ಯಾಸ ಮಾಡುವ ಸಾಧ್ಯತೆಯಿರುವುದರಿಂದ ಯಾರ ಪರ ಅಥವಾ ವಿರೋಧ ಮಾತನಾಡುವ ಸ್ಥಿತಿಗೆ ಕಾಂಗ್ರೆಸ್ ಬಂದು ನಿಂತಿದೆ.

ಚುನಾವಣೆಗೆ ಎರಡು ವರ್ಷ ಇರುವಾಗಲೇ ಈ ಚರ್ಚೆಯನ್ನು ಹುಟ್ಟು ಹಾಕಿದ ನಾಯಕರ ವಿರುದ್ಧ ಶಿಸ್ತು ಸಮಿತಿ ನೋಟೀಸ್ ಅಥವಾ ಶಿಸ್ತು ಕ್ರಮ ಜರುಗಿಸಲು ಸಿದ್ಧತೆ ನಡೆಸಿಕೊಂಡಿದೆ. ಆದರೆ ಜಮೀರ್ ಅವರ ಹೇಳಿಕೆಯನ್ನು ‘ಬಲಗಿವಿಯಲ್ಲಿ ಕೇಳಿ ಎಡಗಿವಿಯಲ್ಲಿ’ ಡಿಕೆ ಬಿಟ್ಟಿದ್ದರೆ ಈ ಹಂತದ ಭಿನ್ನಮತ ಎದುರಾಗುತ್ತಿರಲಿಲ್ಲ. ಬಿಜೆಪಿಯಲ್ಲಿರುವ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಮಾತನಾಡಿ, ಮುಂದಿನ ಎರಡು ವರ್ಷದ ವೇಳೆಗೆ ‘ಆಡಳಿತ ವಿರೋಧಿ’ ಸೃಷ್ಟಿಸುವ ಅತ್ಯುತ್ತಮ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಆದರೆ ಕಾಂಗ್ರೆಸ್ ಮಾಡಿದ ತಪ್ಪನ್ನು ಬಿಜೆಪಿ ನಾಯಕರು ಮಾಡಿದಂತೆ ಕಾಣುತ್ತಿಲ್ಲ.

ತಮ್ಮಲಿರುವ ನಾಯಕತ್ವ ಗೊಂದಲಕ್ಕೆ ಹೆಚ್ಚು ಮಹತ್ವ ಕೊಡದೇ ಕಾಂಗ್ರೆಸ್ ನಲ್ಲಿ ಶುರುವಾಗಿ ಕೋಲ್ಡ್ ವಾರ್ ವಿರುದ್ಧ ವಾಕ್ಸಮರವನ್ನೇ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿರುವ ಗೊಂದಲವನ್ನು ಸಾಧ್ಯವಾದಷ್ಟು ಜನರಿಂದ ದೂರ ಇರಿಸುವ ಪ್ರಯತ್ನ ಎಂದರೂ ತಪ್ಪಾಗುವುದಿಲ್ಲ. ಆದರೆ ಈ ಎಲ್ಲ ಪ್ರಹಸನದ ನಡುವೆ, ಮುಂದಿನ ಎರಡು ವರ್ಷದ ಬಳಿಕ ಎದುರಾಗುವ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ, ಮುಖ್ಯ ಮಂತ್ರಿ ಯಾರು ಎನ್ನುವ ಸ್ಪಷ್ಟತೆ ಸಿಗುವುದು ಹೈಕಮಾಂಡ್ ಕಳಿಸುವ ‘ಲಕೋಟೆ’ಯಿಂದಲೇ ಹೊರತು ಈ ಬಹಿರಂಗ ಹೇಳಿಕೆಗಳಿಂದ ಅಲ್ಲ ಎನ್ನುವುದನ್ನು ಅರಿಯಬೇಕು. ಇನ್ನು ಈ ನಡುವೆ ಎಐಸಿಸಿ ಮಟ್ಟದಲ್ಲಿಯೂ ಮುಂದೆ ಅಧ್ಯಕ್ಷ ಗಾದಿಯನ್ನು ಯಾರು ಹಿಡಿಯುತ್ತಾರೆ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ.

ಕರ್ನಾಟಕ ಚುನಾವಣೆ ಮುಗಿಯುವ ತನಕ ಸೋನಿಯಾ ಗಾಂಧಿ ಅವರೇ ಮುಂದುವರಿಯುತ್ತಾರಾ? ಇಲ್ಲವೇ ಉತ್ತರ ಪ್ರದೇಶ ಚುನಾವಣೆ ಬಳಿಕ ಸೋನಿಯಾ
ತಮ್ಮ ಪುತ್ರ ರಾಹುಲ್ ಗಾಂಧಿ ಅವರನ್ನು ಪುನಃ ಪ್ರತಿಷ್ಠಾಪನೆ ಮಾಡುತ್ತಾರೋ ಅಥವಾ ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ ಗಾಂಧಿ ಕುಟುಂಬದ ಹೊರತಾದ ರಾಷ್ಟ್ರೀಯ ಅಧ್ಯಕ್ಷರು ಎನ್ನುವ ವಾದಕ್ಕೆ ಒಪ್ಪಿಗೆ ನೀಡಿ, ‘ಗಾಂಧಿ ಪರಿವಾರ ಅಲ್ಲದಿದ್ದರೂ, ಗಾಂಧಿ ಕುಟುಂಬಕ್ಕೆ ನಿಷ್ಠ’ರಾಗಿರುವ ಮತ್ತೊಬ್ಬರನ್ನು ಕೂರಿಸುತ್ತಾರೋ ಎನ್ನುವ ಗೊಂದಲವಿದೆ. ಹೀಗಿರುವಾಗ ಅಲ್ಲಿನ ಗೊಂದಲಗಳನ್ನು ಬಗೆಹರಿಸದೇ, ಇಲ್ಲಿನ ಸಮಸ್ಯೆ ಇತ್ಯರ್ಥವಾಗುವುದಾದರೂ ಹೇಗೆ? ಅಲ್ಲಿ ಸೋನಿಯಾ ಗಾಂಧಿ ಮುಂದುವರಿದರೆ ಡಿ.ಕೆ ಶಿವಕುಮಾರ್ ಅವರಿಗೆ ಹೆಚ್ಚು ಬಲ ಬಂದರೆ, ರಾಹುಲ್ ಗಾಂಧಿ ಪುನಃ ಬಂದರೆ ಸಿದ್ದರಾಮಯ್ಯ ಪಡೆ ರಾಜ್ಯ ಕಾಂಗ್ರೆಸ್‌ನಲ್ಲಿ ಬಲಗೊಳ್ಳು ತ್ತದೆ.

ಆದ್ದರಿಂದ ಎಐಸಿಸಿ ಮಟ್ಟದಲ್ಲಾಗುವ ರಾಜಕೀಯ ಸ್ಥಿತ್ಯಂತರದಿಂದಲೂ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಬದಲಾಗುತ್ತದೆ ಹಾಗೂ ಮುಂದಿನ
ಎರಡು ವರ್ಷದಲ್ಲಾಗುವ ರಾಜಕೀಯ ಸ್ಥಿತ್ಯಂತರದಿಂದಲೂ ಇದು ಬದಲಾಗುತ್ತದೆ. ಹೀಗಿರುವಾಗ ರಾಜ್ಯ ಕಾಂಗ್ರೆಸ್ ನಾಯಕರು ಎರಡು ವರ್ಷದ ಭವಿಷ್ಯದ ಬಗ್ಗೆ ಯೋಚಿಸಿ ತಮ್ಮಲ್ಲೇ ಆಂತರಿಕ ಸಂಘರ್ಷವನ್ನು ಸೃಷ್ಟಿಸಿಕೊಳ್ಳುವುದಕ್ಕಿಂತ, ಸದ್ಯ ಅಽಕಾರದಲ್ಲಿರುವ ಬಿಜೆಪಿಯ ಹುಳುಕುಗಳನ್ನು ಜನರಿಗೆ ತಿಳಿಸುವ ಹಾಗೂ ಬಿಜೆಪಿಯ ಗೊಂದಲಗಳನ್ನು ಇನ್ನಷ್ಟು expose ಮಾಡಿದರೆ ಪಕ್ಷಕ್ಕೆ ಲಾಭವಾದರೂ ಆದೀತು. ಇನ್ನು ಕಾಂಗ್ರೆಸ್ ಕೆಲ ಚುನಾವಣೆಗಳನ್ನು ಹೊರತುಪಡಿಸಿದರೆ,
ಬಹುತೇಕ ಚುನಾವಣೆಯಲ್ಲಿ ‘ಸಾಮೂಹಿಕ ನಾಯಕತ್ವ’ ಎನ್ನುವ ಸಿದ್ಧಾಂತದಲ್ಲಿ ಚುನಾವಣೆ ಎದುರಿಸಿದೆ.

ನಾಯಕರು ಏನೇ ಹೇಳಿದರೂ, ಅಂತಿಮವಾಗಿ ಹೈಕಮಾಂಡ್ ಸಾಮೂಹಿಕ ನಾಯಕತ್ವ ಎಂದರೆ, ಈ ಎಲ್ಲ ಗದ್ದಲಗಳು ‘ನೀರಿನಲ್ಲಿ ಹುಣಸೆ ತೊಳೆದಂತೆ ಆಗುವುದಿಲ್ಲವೇ?’ ಆದ್ದರಿಂದ ಕಾಂಗ್ರೆಸ್ ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವುದಕ್ಕಿಂತ’ ಈಗಿರುವ ಪ್ರತಿಪಕ್ಷ ಸ್ಥಾನದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಲಿ. ಈಗ ಪ್ರತಿಪಕ್ಷವಾಗಿ ಹೋರಾಡುವುದಕ್ಕೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳದೇ ಮುಂದೆ ಕೊರಗುವ ಬದಲು, ಪಕ್ಷದ ಆಂತರಿಕ ಸಮಸ್ಯೆ ಗಳನ್ನು ಕೆಲ ದಿನದ ಮಟ್ಟಿಗಾದರೂ ಬದಿಗಿಟ್ಟು, ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮಾಡಲಿ.

ಮುಂದಿನ ಎರಡು ವರ್ಷದ ಚುನಾವಣೆಗೆ ಈಗಿನಿಂದ ಬುನಾದಿ ಸಿದ್ಧಪಡಿಸಿಕೊಳ್ಳಬೇಕೇ ಹೊರತು, ಈಗಿನಿಂದಲೇ ಬಡಿದಾಡಿಕೊಂಡು ಬಿಜೆಪಿಗೆ ಇನ್ನಷ್ಟು
ಸುಲಭದ ದಾರಿಯನ್ನು ನೀಡದಿರಲಿ.