Thursday, 19th September 2024

ಜರ್ಮನಿಯಲ್ಲಿ ಗುಡುಗು ಸಹಿತ ಮಳೆ: ಏಳು ಅಪಘಾತ, ಒಬ್ಬರಿಗೆ ಗಾಯ

ಬರ್ಲಿನ್‌: ಜರ್ಮನಿ ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಸೋಮವಾರ ತಡರಾತ್ರಿ ಗುಡುಗು ಸಹಿತ ಮಳೆಯಾಗಿದೆ.

‘ಫ್ರಾಂಕ್‌ಫರ್ಟ್ ಬಳಿಯ ಮೊಯೆಮ್ಲಿಂಗೆನ್ ಸೇರಿದಂತೆ ಬವೇರಿಯಾದ ಹಲವು ಹಳ್ಳಿಗಳಲ್ಲಿ ಭಾರಿ ಮಳೆ ಯಿಂದ ಪ್ರವಾಹ ಸಂಭವಿಸಿದೆ. ನೆಲಮಾಳಿಗೆಗಳಿಗೆ ನೀರು ಮತ್ತು ಮಣ್ಣು ನುಗ್ಗಿದೆ ನೂರಾರು ಅಗ್ನಿ ಶಾಮಕ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.

ಧಾರಾಕಾರ ಮಳೆ ಮತ್ತು ಗಾಳಿಯಿಂದಾಗಿ ಒಪೆರಾ ಹೌಸ್‌ನ ಮೇಲ್ಪಾವಣಿಗಳು ಹಾರಿ ಹೋಗಿದ್ದು, ಭಾರಿ ಹಾನಿ ಸಂಭವಿಸಿದೆ. ಸುಮಾರು 250 ಜನರು ಸಭಾಂಗಣದಲ್ಲಿ ಉಪಸ್ಥಿತರಿದ್ದು ಎಲ್ಲರೂ ಸುರಕ್ಷಿತವಾಗಿ ದ್ದಾರೆ’ ಎಂದು ಒಪೆರಾದ ವ್ಯವಸ್ಥಾಪಕ ವಿಕ್ಟರ್ ತಿಳಿಸಿದರು.

ಮಂಗಳವಾರ ಮುಂಜಾನೆ ಹಲವಾರು ರಸ್ತೆ ಅಪಘಾತಗಳು ವರದಿಯಾಗಿವೆ. ‘ಮೊಂಟಬೌರ್ ಪಟ್ಟಣದ ಬಳಿಯ ಎ3 ಮತ್ತು ಎ48 ಹೆದ್ದಾರಿಗಳಲ್ಲಿ ಏಳು ಅಪಘಾತ ಗಳು ಸಂಭವಿಸಿದೆ. ಇದರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ’ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.