ವಿಶ್ವವಾಣಿ ಕ್ಲಬ್ ಹೌಸ್ (ಸಂವಾದ – ೧೨)
ಮೋದಿ ಸರಕಾರ ಬಂದ ಮೇಲೆ ದೇಶ ಪ್ರಗತಿಯತ್ತ ಸಾಗುತ್ತಿದೆ: ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: ಅನಂತ ಕುಮಾರ್ ಅವರಂತಹ ಮೇರು ವ್ಯಕ್ತಿಯ ಸ್ಥಾನ ತುಂಬುವುದು ಸಾಧ್ಯವಿಲ್ಲ. ಅನಂತ್ ಕುಮಾರ್ ಅವರಂತೆ ಆಗಲು ಕನಿಷ್ಠ 30-40 ವರ್ಷ ಬೇಕಾಗುತ್ತದೆ. ಅವರಿಗೆ ಹೋಲಿಕೆ ಮಾಡುವುದು ಅಪ್ರಸ್ತುತ. ಅವರ ಹಾದಿಯಲ್ಲಿಯೇ ನಾನು ನಡೆಯುತ್ತೇನೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅನಂತ ಕುಮಾರ್ ಅವರ ಕಾರ್ಯವೈಖರಿ ಹತ್ತಿರದಿಂದ ಬಲ್ಲೆ. ಅವರು ನನಗೆ ಸ್ಫೂರ್ತಿಯಾಗಿದ್ದರು. ಕನ್ನಡದ ನೆಲ, ಜಲದ ವಿಷಯದಲ್ಲಿ ಅವರನ್ನು ಪ್ರತಿಯೊಬ್ಬರೂ ಸ್ಮರಿಸುತ್ತಾರೆ. ಕರ್ನಾಟಕ ಮತ್ತು ಇತರ ರಾಜ್ಯಗಳ ಕಾನೂನು ತೊಡಕು ಇತ್ಯರ್ಥಪಡಿಸುವಲ್ಲಿ ಅವರ ಕೊಡುಗೆ ಅಪಾರ ಎಂದರು. ಕರೋನಾ ಸಮಯದಲ್ಲಿ ದೇಶದಲ್ಲಿ ಆಕ್ಸಿಜನ್ ಉತ್ಪಾದನೆ 10-12 ದಿನಗಳಲ್ಲಿ 900% ರಷ್ಟು ಹೆಚ್ಚಾಯಿತು. ಹಡಗು, ರೈಲು, ವಿಮಾನ ಮೂಲಕ ಕೇಂದ್ರ ಸರಕಾರ ಆಕ್ಸಿಜನ್ ಸರಬರಾಜು ಮಾಡಿತು.
ರೆಮ್‌ಡಿಸಿವಿರ್ 25 ದಿನದಲ್ಲಿ 120% ರಷ್ಟು ಉತ್ಪಾದಿಸಲಾಯಿತು. ಲಸಿಕಾ ಅಭಿಯಾನ ಮೂಲಕ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತಿದೆ. ದೇಶದಲ್ಲಿ ಕರೋನಾಗೂ ಮುಂಚೆ 20 ಸಾವಿರ ವೆಂಟಿಲೇಟರ್ ಇತ್ತು. ಈಗ 58 ಸಾವಿರಕ್ಕೆ ಹೆಚ್ಚಾಗಿದೆ. ಮೋದಿ ಸರಕಾರ ಬರುವ ಮುಂಚೆ 54,342 ಮೆಡಿಕಲ್ ಸೀಟು ಇತ್ತು. ಏಳು ವರ್ಷಗಳಲ್ಲಿ ಇದರ ಪ್ರಮಾಣ 55% ರಷ್ಟು ಹೆಚ್ಚಾಗಿದೆ. ಕರೋನಾ ಪರೀಕ್ಷೆ ಮಾಡಲು 2,566 ಲ್ಯಾಬ್‌ಗಳು ಇವೆ ಎಂದು ಹೇಳಿದರು.
ಕರೋನಾದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕಲಾವಿದರಿಗೆ ಸಹಾಯ ಹಸ್ತ ನೀಡುವ ಉದ್ದೇಶದಿಂದ ಕಲಾನಿಧಿ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ನಿಟ್ಟಿನ ಕಲಾನಿಧಿ ಎಂಬ ಆನ್‌ಲೈನ್ ಸಿರೀಸ್ ತರುತ್ತಿದ್ದೇವೆ. ಇದಕ್ಕೆ ಜನರು ಸಹಾಯ ಮಾಡಬಹುದು. ಇದರಿಂದ
ಬರುವ ಹಣವನ್ನು ಕಲಾವಿದರಿಗೆ ಹಂಚಲಾಗುತ್ತದೆ ಎಂದು ಹೇಳಿದರು. ನಮ್ಮ ದೇಶ ಬಹಳ ವೇಗವಾಗಿ ಮುಂದುವರಿಯುತ್ತಿದೆ. ಕಳೆದ 70 ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆ ತೀರ ಹದಗೆಟ್ಟಿತ್ತು. ಭಾರತದಲ್ಲಿ ಶ್ರೀಮಂತರನ್ನು ಶ್ರೀಮಂತರನ್ನಾಗಿ, ಬಡಜನರನ್ನು ಬಡವರನ್ನಾಗಿಸಿದ್ದ ಕಾಲ ಅದು ಕಾಂಗ್ರೆಸ್ ಆಡಳಿತ. ಕೆಲಸಕ್ಕೆ ಬಾರದ 6 ಸಾವಿರ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ತೆಗೆದು ಹಾಕಿದೆ. ಕಂಪನಿ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಗೆ ಇದ್ದ ತೊಡಕುಗಳನ್ನು ಕೊನೆಗಾಣಿಸಿದೆ. ಮೋದಿ ಸರಕಾರ ಬಂದ ಮೇಲೆ ೪೮ ಕೋಟಿ ಜನರು ಬ್ಯಾಂಕ್ ಖಾತೆ ತೆರೆದರು. ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದರು.
ಟಿಕೆಟ್ ಪಡೆಯಲು ಲಾಭಿ ಮಾಡಿಲ್ಲ: ನಮ್ಮ ಪಕ್ಷದಲ್ಲಿ, ಸಂಘ ಪರಿವಾರದ ವ್ಯವಸ್ಥೆಯಲ್ಲಿ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ಕೊಡಲಾಗುತ್ತದೆ. ವಿದ್ಯಾರ್ಥಿ ಪರಿಷತ್ತಿನ ದಿನಗಳಲ್ಲಿ ನಾನು ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆ. ಹೊಸ ನಾಯಕರಿಗೆ ಅವಕಾಶ ಮಾಡಿಕೊಡುವ ಚಿಂತನೆ ಪಕ್ಷದ್ದು. ಇದು ಟಿಕೆಟ್ ದೊರೆಯಲು ನನಗೆ ಸಹಕಾರಿಯಾಯಿತು. ಟಿಕೆಟ್ ಪಡೆಯಲು ಲಾಭಿ ಮಾಡಿಲ್ಲ. ಬಿಜೆಪಿ ಬಿಟ್ಟರೆ ಇತರ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದರು.
ಗುರು ರಾಘವೇಂದ್ರ ಬ್ಯಾಂಕ್ ಹೂಡಿಕೆದಾರರು ಭಯಪಡುವ ಅಗತ್ಯವಿಲ್ಲ: ಗುರು ರಾಘವೇಂದ್ರ ಬ್ಯಾಂಕ್ ಹೂಡಿಕೆದಾರರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಶೀಘ್ರವೇ ಈ ಬಗ್ಗೆ ಆರ್‌ಬಿಐ ಅಽಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸುತ್ತೇವೆ. ಈಗಾಗಲೇ ಸರಕಾರ ಹೂಡಿಕೆದಾರರ ವಿಮಾ ಮೊತ್ತ 5 ಲಕ್ಷ ರು.ಗೆ ಏರಿಸಿದೆ. ಹೂಡಿಕೆದಾರರು ನಿರಾತಂಕವಾಗಿರಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಸಮಸ್ಯೆ ಆದಷ್ಟು ಬೇಗ ಪರಿಹಾರವಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ತೇಜಸ್ವಿ ಕಥೆಯಲ್ಲಿ ತಂದೆಯ ಪಾತ್ರ
ನಮ್ಮ ಅಮ್ಮನಷ್ಟೇ ತಂದೆ ಪ್ರೋತ್ಸಾಹ ನೀಡಿದ್ದಾರೆ. ಸಾತ್ವಿಕತೆಯ ಪ್ರತಿರೂಪ ಅವರು. ಅವರು ಮಾಡುತ್ತಿದ್ದ ವೃತ್ತಿಗೂ ವ್ಯಕ್ತಿತ್ವಕ್ಕೆ ಬಹಳ ವ್ಯತ್ಯಾಸವಿತ್ತು. ಅಧ್ಮಾತಿಕತೆಯಲ್ಲಿ ಅವರಿಗೆ ಆಸಕ್ತಿ ಇದೆ. ನನ್ನ ತಂದೆ ನೀಡಿದ್ದ ಮೂರು ಉಪದೇಶವೆಂದರೆ ನೀನು ನಿನ್ನತನ ಬೆಳೆಸಿಕೊಳ್ಳಬೇಕು, ಉತ್ತಮ ಭಾಷಣಕಾರ ರಾಗಬೇಕು, ಪ್ರಾಮಾಣಿಕ, ಸರಳ ಜೀವನ ಅಳವಡಿಸಿಕೊಳ್ಳಬೇಕು. ನನ್ನಲ್ಲಿ ಒಳ್ಳೆತನವನ್ನು ಸಮಾಜ ಗುರುತಿಸಿದ್ದರೆ ಅದು ತಂದೆ ಕೊಟ್ಟಿದ್ದು. ಅಧ್ಯಯನ,
ಅನುಷ್ಠಾನ ಎರಡೂ ನಿರಂತರವಿರಲಿ ಎಂದು ನನ್ನ ತಂದೆ ಹೇಳಿದ್ದನ್ನು ಜೀವನದಲ್ಲಿ ಮುಂದುವರಿಸಿಕೊಂಡಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಮತ್ತೇನು ಹೇಳಿದರು?
*ರಾಜಕಾರಣಕ್ಕೆ ಬರುವ ಮುನ್ನವೇ ನನ್ನನ್ನು ಯುವ ನಾಯಕನಾಗಿ ರೂಪಿಸಿದವರು ವಿಶ್ವೇಶ್ವರ ಭಟ್ಟರು.
*ಬಿಜೆಪಿ ಮತ್ತು ಸಂಘ ಪರಿವಾರದ ವಿಶೇಷತೆಯಿಂದಾಗಿಯೇ ನನಗೆ ಟಿಕೆಟ್ ಸಿಕ್ಕಿತು.
*ಯಡಿಯೂರಪ್ಪನವರ ಅಳಿವು ಉಳಿವು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕೈಯಲ್ಲಿದೆ
*ಕೋವಿಡ್ ಸಂಕಷ್ಟ ಕಡಿಮೆಯಾದ ಮೇಲೆ ಮದುವೆ ಬಗ್ಗೆ ಯೋಚಿಸುತ್ತೇನೆ
*ಕೇಂದ್ರ ಮತ್ತು ರಾಜ್ಯ ಸರಕಾರದ ವರ್ಚಸ್ಸು ಕುಂದಿಲ್ಲ.
***
ದಿ.ಅರುಣ್ ಜೇಟ್ಲಿ ಅವರು ನನಗೆ ಒಂದು ದಿನ ಕರೆ ಮಾಡಿ ಸಂಸತ್‌ನಲ್ಲಿ ನಿನ್ನ ಭಾಷಣ ತುಂಬಾ ಅದ್ಭುತವಾಗಿತ್ತು. ನನ್ನ ಸ್ಥಾನ ನೀನು ಅಲಂಕರಿಸಲು ಅರ್ಹ ಎಂದು ಹೇಳಿದ್ದರು. ಅವರು ನುಡಿದ ಮಾತುಗಳು ನಿಜಕ್ಕೂ ಅವಿಸ್ಮರಣೀಯ.
-ತೇಜಸ್ವಿಸೂರ್ಯ ಸಂಸದ