Thursday, 12th December 2024

ಹಾಲು ಯಾವುದಾದರೇನು…ರುಚಿ ನವನವೀನ…!

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಈ ಕುಲಿ ತಿಂದು ನೋಡಿ ಎಂದ. ಮಧ್ಯಾಹ್ನ ರಣಬಿಸಿಲಿನ ನಾಲ್ವತ್ತು ಡಿಗ್ರಿ ಟೆಂಪರೇಚರಿಗೆ ಕುಲಿಯೇನು, ತಣ್ಣಗಿರೋದು ಏನು ಕೊಟ್ಟರೂ ಅದ್ಭುತವೇ. ಅದರಲ್ಲೂ ಅಪ್ಪಟ ಕೇಸರಿಯುಕ್ತ ಐಸ್ಕ್ರೀಮ್ ಯಾರಿಗೆ ಬೇಡ. ಅದಾದ ಮೇಲೂ ಬೇಗೆ ತಣಿಯುತ್ತಿಲ್ಲ. ಗೈಡ್ ಆಗಿದ್ದ ಈಶ್ವರಸಿಂಗ್ ಮಣ್ಣಿನ ಕುಡಿಕೆ ತುಂಬಾ ಮಲಾಯಿ ಭರಿತ ಲಸ್ಸಿ ತಂದುಕೊಟ್ಟ. ಅದೂ ಸಖತ್ತಾಗಿತ್ತು. ಬಿಸಿ ಗಾಳಿಯ ಫ್ಯಾನಿಗೆ ಕಾಲು ಚಾಚಿ ಕೂತಿದ್ದರೆ, ಎ ಕಣ್ಣು ಬಿಡಲಾಗದಷ್ಟು ರಣ ಬಿಸಿಲು. ದೂರದಲ್ಲಿ ಮರುಳುಗಾಡಿನ ಸಹಜ ಪ್ರಾಣಿ ಒಂಟೆಗಳ ಹಿಂಡು ಪಕ್ಕದ ಕಾಂಪೋಂಡಿನೊಳಗೆ ಹೋಗುತ್ತಿದ್ದವು, ಹಿಂಡು ಹಿಂಡಾಗಿ.

ದೊಡ್ಡ ಆವಾರದೊಳಗೆ ತಮಗಿಷ್ಟ ಬಂದಂತೆ ತಿರುಗಾಡುತ್ತಾ, ಹೂಂಕರಿಸುತ್ತಾ, ಆಗೀಗ ಚಪ್ಪಟೆ ಗೊರಸಿನಿಂದ ಧೂಳು ಹಾರಿಸುತ್ತ, ಅ ಒಂದಷ್ಟು ತುಂಬಿಸಿಟ್ಟ ಒಣ ಹುಲ್ಲಿನ ಸೂಡುಗಳಿಗೆ ಬಾಯಿ ಹಾಕುತ್ತಾ ವಿಹರಿಸುತ್ತಿದ್ದ ಒಂಟೆ ಪ್ರಪಂಚ ಕೂತಲ್ಲಿಂದಲೇ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಲವು ರೂಪ ಎತ್ತರ ಬಣ್ಣ ಆಕಾರ ಮತ್ತು ವಿಭಿನ್ನ ತಳಿಗಳ ಒಂಟೆಗಳ ದೊಡ್ಡ ಸಂತೆಯೇ ಇದ್ದಂತೆ ಅನ್ನಿಸುತಿತ್ತು. ಆಗಷ್ಟೆ ಬರುವಾಗ ಅದರ ಒಂಟೆ ಫಾರ್ಮ್ ಎಂಬ ಬೋರ್ಡು ಬೇರೆ ನೋಡಿದ್ದೇನಲ್ಲ. ನಮ್ಮ ಅನುಮಾನ ಪರಿಹರಿಸುವಂತೆ ಈಶ್ವರ್ ಸಿಂಗ್ ಇವೆಲ್ಲ ಫಾರ್ಮ್ ಒಂಟೆಗಳು.

ಸುಮಾರು ಸಾವಿರದ ಹತ್ತಿರ ಒಂಟೆಗಳು ಇಲ್ಲಿವೆ. ಮತ್ತೆ ಅವನ್ನೆಲ್ಲ ನೋಡೊಣ ಈಗ ಮೊದಲು ಹೇಳಿ ಈ ಐಸ್ ಕ್ರೀಮ, ಲಸ್ಸಿ, ಅದಕೂ ಮೊದಲು ಆ ‘ಹರೆಬಾಗ್ ಚೌಕಡಿ’ಯಲ್ಲಿ ನಿಲ್ಲಿಸಿ ಕುಡಿದ ಚಾಯ್ ಹೇಗಿತ್ತು..?’ ಎಂದ. ‘ಮಾರಾಯ. ಇದೆಲ್ಲಕ್ಕಿಂತ ಆ ಚಹ ನೇ ಮಸ್ತ್ ಇತ್ತು. ಬಿಸಿಲು ಬೇಗೆ ಇದ್ದರೂ ಚಹ ರುಚಿಗೆ ಇವ್ಯಾ ವುದೂ ಸಮ ಅಲ್ಲ ಬಿಡು. ಅದಕ್ಕೆ ಅಲ್ವಾ ಎರಡು ಕಟಿಂಗ್ ಕುಡಿದದ್ದು, ಅದರಲ್ಲೂ ಅಲ್ಲಿ ಘೀ ಸವರಿ ಕೊಡುವ ಬ್ರೆಡ್ ಪೀಸ್ ಚಹದ ಜತೆಗೆ ಭಾರಿ ಕಾಂಬಿನೇಶನ್ನು..’  ಎನುತ್ತಿದ್ದರೆ ಏನೋ ಗೆದ್ದವರಂತೆ ಈಶ್ವರಸಿಂಗ್ ದೊಡ್ಡದಾಗಿ ಚಪ್ಪಳೆ ಹೊಡೆಯುತ್ತಾ.

‘ಅದೇ ಮತ್ತೆ. ಈಗ ಹೇಳಿ ನಮ್ಮ ಒಂಟೆಗಳು ಯಾವುದಕ್ಕೆ ಕಮ್ಮಿ ಅಂತಾ. ರಾಜಸ್ಥಾನದ ಅದರಲ್ಲೂ ಬಿಕಾನೇರ್ ಫಾರ್ಮ್ ಐಸ್ ಕ್ರೀಮ.. ಬೇಡ ಅನ್ನುವ ನಮ್ಮ ಲೋಕಲ್ ಜನಕ್ಕೆ ಬುದ್ಧಿ ಇಲ್ಲ..’ ಎಂದು ಒಂದೇ ಸಮನೆ ದೊಡ್ಡ ದನಿಯಲ್ಲಿ ಮಾತಾಡತೊಡಗಿದ್ದ. ಏನಾಯಿತು ಎನ್ನುವಂತೆ ನೋಡಿದೆ. ‘ನೀವು ಕುಡಿದ ಚಾಯ, ಸವರಿದ್ದ ಬ್ರೆಡ್ಡಿನ ಜತೆಗೆ ಇದ್ದ ತುಪ್ಪ, ಈಗ ತಿಂದ ಐಸ್ ಕ್ರೀಮ, ಆಮೇಲಿನ ಲಸ್ಸಿ ಎಲ್ಲ ಒಂಟೆ ಹಾಲಿಂದು ಸರ್ ಜೀ ಏನಾದರೂ ವ್ಯತ್ಯಾಸ ಗೊತ್ತಾಯಿತಾ..?
ಸರಕಾರಿ ಪ್ರಾಯೋಜಿತ ಫಾರ್ಮ್ ಮತ್ತು ಹಾಲಿನ ಸಂಶೋಧನಾ ಕೇಂದ್ರ ಇದು. ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಕೆಮೆಲ್ಸ ಸರ್ ಜೀ. ಜನ ಮಾತ್ರ ಒಂಟೆ ಹಾಲಾ ಎನ್ನುತ್ತಾ, ಹಾಲಹಲ ಹಾಕಿದಂಗೆ ಆಡ್ತಾರೆ.

ನಿಜ ಹೇಳಿ ಒಂಟೆ ಹಾಲಿಂದು ಕುಡಿಸಿದೆ ಅನ್ನೋದನ್ನು ಬದಿಗಿಟ್ರೆ ನಿಮಗೆ ಏನಾದರೂ ವ್ಯತ್ಯಾಸ ರುಚಿ, ಬಣ್ಣದಲ್ಲಿ ವ್ಯತ್ಯಾಸ ಗೊತ್ತಾಗಿದ್ಯಾ..? ಸುಮ್ಮನೆ ಜನ ಯಾವುದನ್ನೂ ತತಕ್ಷಣ ನಂಬೋದಿಲ್ಲ. ಅದರೆ ಕೇಂದ್ರ ಸರಕಾರದ ಈ ಯೋಜನೆ ಏನೂ ಸುಮ್ಮನೆ ಇರೋದಿಲ್ವಲ್ಲ ಸಾರ್..’ ಎನ್ನುತ್ತಾ ಜಾಹಿರಾತು ಕೊಡ ತೊಡಗಿದ್ದ. ಕಾರಣ ಈಶ್ವರ ಸಿಂಗ್ ಹೆಚ್ಚು ಪ್ರವಾಸಿಗರನ್ನು ಒಯ್ದು ಅಲ್ಲಿ ರಿಸರ್ಚ್ ವಿಂಗ್‌ನವರೇ ಹಾಕಿಕೊಂಡಿರುವ ಐಸ್ ಕ್ರಿಂ, ಲಸ್ಸಿ ಜತೆಗೆ ಕೆಮಲ್ ಫಾರ್ಮ್ ವಿಸಿಟ್ ಮಾಡಿಸಿದಷ್ಟೂ ಅವನ ಕಮಿಷನ್ನು ಕಿಮ್ಮತ್ತು ಜಾಸ್ತಿಯಾಗುತ್ತದೆ.

ರಾಜಸ್ಥಾನದ ಪ್ರವಾಸದಲ್ಲಿದ್ದಾಗ, ಅಣುಬಾಂಬ್ ಪರೀಕ್ಷೆ ಖ್ಯಾತಿಯ ಪೋಖ್ರಾನ್ ಮರೂಭೂಮಿಯ ಬಲಕ್ಕೆ ಚಲಿಸಿದರೆ ಉದ್ದಾನುಉದ್ದದ ಮರುಳುಗಾಡಿನ ಒಣಒಣ ನೆಲದ ಮೇಲಿನ ಸಫಾರಿ ಕೊಡುವ ಮುದವೇ ಬೇರೆ. ಎಡಕ್ಕೆ ಅಲ್ಲಲ್ಲಿ ಚಿಂಕಾರಗಳ ಪ್ರಾಣಿ ಸಂರಕ್ಷಣಾ ವಲಯವಿದೆ. ಉಳಿದಂತೆ ಕಪ್ಪು ಟಾರು ರಸ್ತೆ ಬಿಟ್ಟರೆ ಉಳಿದೆಲ್ಲ ಮರಳೊ ಮರಳು. ಬಣ್ಣದ ಹೊಯ್ಗೆ ನೋಡಲಷ್ಟೆ ಚೆಂದ. ಗಾಡಿ ಬಿಟ್ಟು ಇಳಿದರೆ ಬಿಸಿಲಿನ ಹೊಡೆತಕ್ಕೆ ಯಾವುದೂ ಬೇಡ ಅನ್ನಿಸುತ್ತದೆ. ಹಾಗೆ ಪೋಖ್ರಾನ್ ನಿಂದ ಹೊರಟು ಬಿಕಾನೇರ್ ಸೇರಿ ಅಲ್ಲಿದ್ದ ಟ್ರಕ್ ಟರ್ಮಿನಲ್ ಗಳ ಲೆಕ್ಕ ತಪ್ಪಿ ಏಣಿಸುವುದೇ ಬಿಟ್ಟಿದ್ದೆ.

ವಿಪರೀತ ಎನಿಸುವಷ್ಟು ಟ್ರಕ್ಕುಗಳ ಓಡಾಟ ಬಹುಶಃ ಅಲ್ಲಿನ ವಹಿವಾಟಿನ ದಿಕ್ಕನ್ನು ಸೂಚಿಸಿದರೆ, ಈ ಒಂಟೆ ಫಾರ್ಮ್‌ನ್ನು ಸ್ಥಳೀಯ ಗೈಡ್ ಈಶ್ವರಸಿಂಗ್ ಸರಿಯಾದ ಸಮಯಕ್ಕೆ ಕೋಲ್ಡ್ ಕೊಡುವ ನೆಪದಲ್ಲಿ ಒಂಟೆ ಹಾಲಿನ ಉತ್ಪನ್ನಗಳ ರುಚಿ ಹಿಡಿಸಿದ್ದ. ತಪ್ಪೇನಿರಲಿಲ್ಲ. ವಿಶೇಷವಾಗಿ ಕುಲಿ ಮತ್ತು ಐಸ್ಕ್ರೀಮ್ ಅದ್ಭುತವಾಗೇ ಇದ್ದವು. ಯಾವ ಲೆಕ್ಕದಲ್ಲೂ ರುಚಿ ಬದಲಿಲ್ಲದ, ಚಹ ಇರಲಿ ಲಸ್ಸಿ ಇರಲಿ ಅಪ್ಪಟ ಹಾಲಿನಷ್ಟೆ ರುಚಿಕರವಾದ ಒಂಟೆ ಹಾಲಿನ ಪದಾರ್ಥ ಮತ್ತು ಜನಪ್ರಿಯತೆ ಹೆಚ್ಚಿಸಲು ಕೇಂದ್ರ ಸರಕಾರ ಒಂಟೆ ಫಾರ್ಮ್ ಮತ್ತು ಸಂಶೋಧನೆ ನಡೆಸಲು ದೊಡ್ಡ ಮತ್ತು ಅಗಾಧ ಸಂಖ್ಯೆ ತರಹೇವಾರಿ ಒಂಟೆಗಳನ್ನು ಸಾಕುತ್ತಾ ಈ ಪ್ರಯೋಗ ನಡೆಸುತ್ತಿವೆ. ಅದಕ್ಕೆ ಸರಿಯಾಗಿ 1984ರಲ್ಲಿ ನ್ಯಾಷನಲ್ ಕೆಮೆಲ್ ರಿಸರ್ಚ್ ಸೆಂಟರ್. ಬಿಕಾನೇರ್ ಸ್ಥಾಪನೆಯಾಯಿತು.

ಇದು ಒಂಟೆಗಳಿಗಾಗಿ ಸ್ಥಾಪನೆಯಾದ ಮೊಟ್ಟ ಮೊದಲ ಫಾರ್ಮ್ ಹೌಸ್. ಆದರೆ ಏನು ಮಾಡಬೇಕೆಂಬ ಅಂದಾಜೇ ಇರಲಿಲ್ಲ. ಹಾಗಾಗಿ ಬ್ರೀಡಿಂಗ್ ಮತ್ತು ಅದರ
ಉತ್ಪನ್ನಗಳ ಜತೆಗೆ ಸುಮಾರು ಅರವತ್ತಕ್ಕೂ ಹೆಚ್ಚು ಜಾತಿಯ ಒಂಟೆಗಳನ್ನು ಪತ್ತೆ ಹಚ್ಚುವ ಮೂಲಕ ಕಾರ್ಯಾರಂಭ ಮಾಡಿದ ಬಿಕಾನೆರ್ ಸೆಂಟರ್‌ನಲ್ಲಿ ಇವತ್ತು ಸುಮಾರು ಸಾವಿರ ಒಂಟೆಗಳು ಸೇರಿಕೊಂಡಿವೆ. ನೋಡಿದರೆ ಆಸುಪಾಸಿನ ಇರುವ ಇವುಗಳ ಆವಾಸದಲ್ಲೂ ಹಲವು ರೀತಿಯಲ್ಲಿ ಜೈವಿಕ ಮತ್ತು ಪ್ರಾಕೃತಿಕ
ವ್ಯತ್ಯಾಸಗಳಿವೆ. ಸೂಕ್ಷ್ಮವಾಗಿ ನೋಡಿದಾಗ ಮಾತ್ರ ವ್ಯತ್ಯಾಸ ಗೊತ್ತಾಗುವ ಒಂಟೆಗಳ ಬಾಹ್ಯ ಲಕ್ಷಣ ಹೆಚ್ಚಿನಂಶ ಒಂದೇ.

ಆದರೆ ಕೆಲವು ಪ್ರಕಾರದವು ಕೇವಲ ಮರಳಿನಲ್ಲಿ ಮಾತ್ರವೇ ಕೂರುವ ಅಭ್ಯಾಸ ಹೊಂದಿದ್ದರೆ, ಕೆಲವಕ್ಕೆ ಎಷ್ಟೇ ಮರುಳು ಗಾಡಿನ ಪ್ರಾಣಿ ಎನ್ನಿಸಿಕೊಂಡಿದ್ದರೂ ಅಂಡು ಊರಲು ಮಣ್ಣಿನ ಘಮಲು ಇರಲೇ ಬೇಕು. ಹಾಗೆ ಕೆಲವು ಜಾತಿಯ ಒಂಟೆಗಳಿಗೆ ಮರಿಗಳನ್ನು ತಂದು ನಿಲ್ಲಿಸಿಕೊಂಡರೆ ಮಾತ್ರ ಹಾಲು ಕರೆಯಲು ಬಿಡುವ ಅಭ್ಯಾಸಕ್ಕೆ ಹಸುವಿನಂತೆ ಪಕ್ಕಾಗಿವೆ. ಮೂಲತಃ ರಾಜಸ್ಥಾನದ್ದೇ ಆದರೂ ಬಿಕಾನೇರ್‌ನ ಇಪ್ಪತ್ತೆರಡು ತಳಿ ಒಂಟೆಗಳಿದ್ದು, ಅದರಲ್ಲಿ ಫಾರ್ಮ್ ಬ್ರೀಡ್ ಮಾಡಿ ವಿದೇಶಿ ತಳಿಗಳ ಹೊಸ ಉತ್ಪನ್ನಕ್ಕೆ ಸಂಶೋಧನೆ ಕೂಡಾ ನಡೆದಿದೆ. ಬಿಕಾನೇರಿ, ಜೈಸಲ್ಮೇರ್, ಜೋದ್‌ಪುರ್, ಉದಯಪುರ್, ಗಂಗ್ವಾರ್, ಚಿತ್ತೋರ್ ಹೀಗೆ ಆಯ್ದ ಊರುಗಳ ಲೆಕ್ಕದ ತಳಿಗಳಾಗಿದ್ದು, ಇದರ ಹಾಲಿಗೆ ಯಾಕಿಷ್ಟು ಡಿಮಾಂಡು. ಕಾರಣ ಹಸುವಿನಂತೆ ದಿನಕ್ಕೆ ಒಂದೆರಡು ಲೆಕ್ಕದ ಬಾಬತ್ತಲ್ಲ ಒಂಟೆಯದ್ದು. ಕರೆಯಲು ಶುರು ಮಾಡಿದರೆ ಸೀದಾ ಎಳೆಂಟು ಲೀಟರ್‌ವರೆಗೂ ಮೋಸವಿಲ್ಲದ ಉತ್ಪತ್ತಿ.

ಜತೆಗೆ ವಗಾತಿ ಮಾಡುವಲ್ಲಿ ಬಾಕಿ ಪ್ರಾಣಿಗಳ ಹಾಗಲ್ಲ. ಒಂದಿಷ್ಟು ಸೊಪ್ಪು ಸದೆ, ನೀರು ನಿಡಿ ಇಟ್ಟರಾಯಿತು. ತನ್ನ ಪಾಡಿಗೆ ಹಾಯಾಗಿರುತ್ತೆ. ಹಾಗಾಗಿ ಕ್ರಮೇಣ ಒಂಟೆ ಹಾಲನ್ನೂ ಜನಪ್ರಿಯ ಮಾಡುವ ಪ್ರಯತ್ನ ನಡೆದಿದೆ. ಜತೆಗೆ ಹಸುವಿನಗಿಂತ ಗಾಢ ಇದರ ಜಿಡ್ಡು. ಹಾಗಾಗಿ ಸಿಹಿ ಉತ್ಪನ್ನಗಳಿಗೆ ದಿನಕ್ಕೆ ಸುಮಾರು ಐನೂರು ಲೀ. ವರೆಗೂ ಹಾಲು ಇಲ್ಲಿಂದ ಸರಬರಾಜಾಗುತ್ತಿದ್ದು, ಪ್ರವಾಸಿಗರೂ ಸೇರಿದಂತೆ ಸ್ಥಳೀಯವಾಗಿ ದಿನಕ್ಕೆ ಬಳಕೆಯಾಗುವ ಹಾಲು ಸುಮಾರು ಮುನ್ನೂರು ಲೀ. ಉತ್ಪನ್ನ ಎರಡು ಸಾವಿರ ಲೀ. ವರೆಗೆ ಇದ್ದರೂ ಬಳಸಿಕೊಳ್ಳಲೊಲ್ಲದ ಸ್ಥಳೀಯರ ಕಾರಣ ಎಲ್ಲ ತುಪ್ಪ ಐಸ್ಕ್ರೀಮ್ ಇತ್ಯಾದಿ ಆಗುತ್ತಿದೆ.

1890ರ ಯುದ್ಧದಲ್ಲಿ ಒಂಟೆ ಸೈನ್ಯವೆಂದೆ ಖ್ಯಾತಿ ಪಡೆದ ದಂಡು ಮಹಾರಾಜ ಗಂಗಾಸಿಂಗ್ ಬಿಕಾನೇರ್ ಆಳುವಾಗ ಸಾಕುತ್ತಿದ್ದ. ಮುಂದೆ ಇದೇ ದಂಡು ಮೊದಲನೆಯ ಮತ್ತು ಎರಡನೆ ಮಹಾ ಯುದ್ಧದಲ್ಲೂ ದೊಡ್ಡ ಪಾತ್ರ ವಹಿಸಿದವು. ಆಗಿನಿಂದ ಪುಷ್ಕರ ಮತ್ತು ರಾಜಸ್ಥಾನದ ಗಂಗ್ವಾನರ್ ಮೇಳಗಳಲ್ಲಿ ಯುದ್ಧದ ಸನ್ನಿವೇಶ ಆಯೋಜಿಸಿ ಪುನರ್ ಪ್ರಾತ್ಯಕ್ಷಿಕೆ ಕೊಡುತ್ತಿದ್ದರೆ, ಈಗೀಗ ಸರ್ಕಸ್ ಮಾದರಿಯಲ್ಲೂ ಒಂಟೆಗಳು ಎರಡೇ ಕಾಲು, ಸಣ್ಣ ಚಪ್ಪಡಿ ಕಲ್ಲಿನ ಮೇಲೆ ನಿಂತು ಹೂಂಕರಿಸುವ ಹಲವು ಆಟಗಳನ್ನು ತೋರಿಸುತ್ತಾರೆ.

ರಾಜಸ್ಥಾನ ಹೊರವಲಯದಲ್ಲಿ ಕೇವಲ ಎಂಟುಕಿ.ಮೀ ದೂರ ಇರುವ ಒಂಟೆ ಫಾರ್ಮ್ ಪ್ರತ್ಯಕ್ಷ ನೋಡಿದಾಗ ಹಲವು ಬಗೆಯ ರೂಪ ವೈವಿಧ್ಯದ ಒಂಟೆಯ ನೋಟ ಚಿತ್ರಣಕ್ಕೆ ಸಿಕ್ಕುತ್ತದೆ. ಇಲ್ಲದಿದ್ದರೆ ಒಂಟೆ ಒಂಟೆ ಅಷ್ಟೆ. ಅಲ್ಲ ಎಷ್ಟು ವರ್ಷದಿಂದ ಈ ಹಾಲು ಬಳಕೆಯಾಗುತ್ತದೆ. ಇದರ ಬಗ್ಗೆ ಸೈಡ್ ಎಫೆಕ್ಟ್ ಅಥವಾ ಇನ್ನೇನಾದರೂ ಡೌಟು ನಿಮಗೆ ಬರಲಿಲ್ಲವಾ ಎಂದೆ ಈಶ್ವರ್ ಸಿಂಗ್‌ಗೆ. ತನ್ನ ಬಲವಾದ ತೋಳು ಮತ್ತು ಮೀಸೆ ಕುಣಿಸುತ್ತಾ, ಇದರಲ್ಲಿ ಎದರೂ ವೀಕ್ ಪಾಯಿಂಟ್ ಇದೆಯ ನೋಡು ಎಂದು ಪರೀಕ್ಷಿಸುವ ಗೋಜಿಗೆ ಹೋಗಲಿಲ್ಲ. ಅದಕ್ಕೆ ಹೇಳಿದ್ದು .. ಹಾಲು ಯಾವುದಾದರೇನು ರುಚಿ ನವನವೀನ..