Saturday, 14th December 2024

ನನ್ನ ನೆಚ್ಚಿನ ಪತ್ರೊಡೆಗೆ ಸಿಕ್ಕಿದೆಯಂತೆ ಡಾಕ್ಟರ್‌ ರೇಟ್‌ !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@gmail.com

ಅತ್ಯಂತ ಇಷ್ಟದ ತಿಂಡಿ ಯಾವುದು ಎಂದು ನನ್ನನ್ನು ಯಾರಾದರೂ ಕೇಳಿದರೆ ನಿದ್ದೆಯಲ್ಲೂ ನಾನು ಕೊಡಬಹುದಾದ ಉತ್ತರ: ಪತ್ರೊಡೆ! ಎಷ್ಟು ಇಷ್ಟವೆಂದರೆ
ತಿಂಡಿಗಳಿಗೆ ಕ್ರಮಾಂಕ ಕೊಡುತ್ತ ಹೋದರೆ ಮಿಕ್ಕ ತಿಂಡಿಗಳು ಇದರ ಹತ್ತಿರಕ್ಕೂ ಬಾರವು.

ಕಾಳಿದಾಸನ ಶ್ರೇಷ್ಠತೆಯನ್ನು ಬಣ್ಣಿಸುವ ಶ್ಲೋಕವಿದೆಯಲ್ವಾ ಹಾಗೆಯೇ. ಕವಿಗಳ ಗಣನೆಯನ್ನು ಕಿರುಬೆರಳಿಂದ ಆರಂಭಿಸಿದಾಗ ಮೊದಲ ಹೆಸರು ಕಾಳಿದಾಸನ ದಾಯ್ತು; ಎರಡನೆಯವರಾರು ಎಂದು ಎಷ್ಟು ಹುಡುಕಿದರೂ ಕಾಳಿದಾಸನ ಶ್ರೇಷ್ಠತೆಗೆ ಹತ್ತಿರ ಬರುವ ಇನ್ನೊಬ್ಬ ಕವಿಯೇ ಸಿಗಲಿಲ್ಲವಂತೆ! ಆದ್ದರಿಂದ ಎರಡನೆಯ ಬೆರಳಿಗೆ ‘ಅನಾಮಿಕಾ’ ಎಂಬ ಹೆಸರು ಸಾರ್ಥಕವಾಯಿತು. ಹಾಗೆ ಫೇವರಿಟ್ ತಿಂಡಿಗಳ ಕ್ರಮಾಂಕ ಗಣನೆಯನ್ನು ನಾನೇನಾದರೂ ಮಾಡಿದರೂ ಡಿಟ್ಟೋ ಪರಿಸ್ಥಿತಿ. ಕಿರುಬೆರಳಿಗೆ ಪತ್ರೊಡೆ. ನೆಕ್ಸ್ಟ್ ಯಾವುದು? ಊಹುಂ, ಹತ್ತಿರದ್ದು ಯಾವುದೂ ಇಲ್ಲ.

ಸಿಹಿತಿಂಡಿಗಳ ವ್ಯಾಮೋಹವಂತೂ ಮೊದಲಿಂದಲೂ ಇಲ್ಲ. ಹಾಗಾಗಿ ಎರಡನೆಯ ಬೆರಳು ಇಲ್ಲೂ ಅನಾಮಿಕಾ ಆಗಿಯೇ ಇರುತ್ತದೆ. ಇದು ನನ್ನೊಬ್ಬನ ಕಥೆ ಅಂದ್ಕೊಳ್ಳಬೇಡಿ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ಪತ್ರೊಡೆ ಗೊತ್ತಿರುವಂಥದ್ದೇ. ಅದರಲ್ಲಿ ಹಲವರಿಗೆ ನನ್ನಂತೆ ಪತ್ರೊಡೆಯೇ ಮೋಸ್ಟ್ ಫೇವರಿಟ್ ತಿಂಡಿ ಆಗಿರುವ ವಿಚಾರವೂ ಗೊತ್ತಿರುವಂಥದ್ದೇ. ಹೀಗಿರುವಾಗ ಪತ್ರೊಡೆ ಪ್ರಿಯರಿಗೆಲ್ಲ ಮೊನ್ನೆ ಒಂದು ಸಿಹಿಸುದ್ದಿ ಸಿಕ್ಕಿದೆ! ಅದೇನೆಂದರೆ ಭಾರತ ಸರಕಾರದ ಆಯುಷ್ ಸಚಿವಾಲಯವು ಪ್ರಕಟಿಸಿರುವ ‘ಆಯುಷ್ ವೈದ್ಯ ಪದ್ಧತಿಯ ಆರೋಗ್ಯಪೂರ್ಣ ಆಹಾರದ ಪಟ್ಟಿ’ಯಲ್ಲಿ ನಮ್ಮೆಲ್ಲರ ನೆಚ್ಚಿನ ಪತ್ರೊಡೆಗೂ ಸ್ಥಾನ ಲಭಿಸಿದೆ!

ರಾಷ್ಟ್ರ ಮಟ್ಟದ ಈ ಸುದ್ದಿಯು ಕನ್ನಡದ ಪತ್ರಿಕೆಗಳಲ್ಲಷ್ಟೇ ಅಲ್ಲ, ಆಸೇತುಹಿಮಾಚಲ ಅರ್ಥಾತ್ ದಕ್ಷಿಣದ ‘ದ ಹಿಂದೂ’ ವಿನಿಂದ ಹಿಡಿದು ಉತ್ತರದ ‘ದ ಹಿಂದು ಸ್ಥಾನ್ ಟೈಮ್ಸ್’ವರೆಗಿನ ಇಂಗ್ಲಿಷ್ ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ಇ-ಪೇಪರ್ ಕ್ಲಿಪ್ಪಿಂಗ್‌ಗಳು ವಾಟ್ಸಪ್‌ನಲ್ಲಿಯೂ ಹರಿದಾಡಿವೆ. ನಮ್ಮ ಕರ್ನಾಟಕದವರಾರಿ ಗಾದರೂ ಭಾರತರತ್ನ ಸನ್ಮಾನ ಸಿಕ್ಕಿದ್ದರೂ ನಮಗೆಲ್ಲ ಇಷ್ಟು ಸಂಭ್ರಮವಾಗುತ್ತಿತ್ತೋ ಇಲ್ಲವೋ. ಪತ್ರೊಡೆಗೆ ಸಿಕ್ಕಿದ ರಾಜಮಾನ್ಯತೆಯನ್ನು ನಾನಂತೂ
ಅದಕ್ಕಿಂತಲೂ ಹೆಚ್ಚಿನ ಗೌರವ ಎಂದುಕೊಂಡಿದ್ದೇನೆ. ಮತ್ತೆ, ಆಯುಷ್ ಸಚಿವಾಲಯವು ಈ ‘ಆರೋಗ್ಯಪೂರ್ಣ ಆಹಾರದ ಪಟ್ಟಿ’ ತಯಾರಿಸಿರುವುದು ಅನುಭವಿ ವೈದ್ಯರ ಶಿಫಾರಸಿನ ಮೇಲೆಯೇ ಆದ್ದರಿಂದ, ಪಟ್ಟಿಯಲ್ಲಿರುವ 26 ಖಾದ್ಯಗಳೆಲ್ಲವೂ, ಅಂದರೆ ನಮ್ಮ ಪತ್ರೊಡೆಯೂ, ಡಾಕ್ಟರ್-ರೇಟ್ ಪಡೆದುವೆಂದೇ
ನನ್ನದೊಂದು ಪದವಿನೋದಮಯ ಅಂಬೋಣ.

ಬೇಡ, ನಿಮಗೆ ಆ ಪನ್ ಹಿಡಿಸಲಿಲ್ಲವಾದರೆ ಇನ್ನೊಂದು ತಗೊಳ್ಳಿ: ‘ಆಯುಷ್ ಮಾನ್ ಭವ ಎಂದು ಭಾರತ ಸರಕಾರದಿಂದ ಹರಸಿಕೊಂಡ ಪತ್ರೊಡೆ!’
‘ಆಯುಷ್ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಇ – ಪುಸ್ತಿಕೆಯಲ್ಲಿ 26 ಸಾಂಪ್ರದಾಯಿಕ ಖಾದ್ಯಗಳನ್ನು ಆಯ್ಕೆ ಮಾಡಿದ್ದು, ಆ ಪೈಕಿ ಪತ್ರೊಡೆಯೂ ಸೇರಿದೆ. ಪುಸ್ತಿಕೆಯಲ್ಲಿ ಪ್ರತಿಯೊಂದು ಖಾದ್ಯಕ್ಕೆ ಬೇಕಾಗುವ ಸಾಮಗ್ರಿ, ತಯಾರಿ ವಿಧಾನ, ಆರೋಗ್ಯಕ್ಕೆ ಆಗುವ ಲಾಭಗಳ ಕುರಿತು ಚಿತ್ರಸಹಿತ ವಿವರ ನೀಡಲಾಗಿದೆ.’ ಎಂದು ನಾನೋದಿದ್ದು ಉದಯವಾಣಿಯಲ್ಲಿ. ಮರುಕ್ಷಣದಲ್ಲೇ ನಾನು ಮಾಡಿದ ಕೆಲಸ ಗೂಗಲ್ ಮೂಲಕ ಆಯುಷ್ ಸಚಿವಾಲಯದ ವೆಬ್‌ಸೈಟ್ ತಲುಪಿ ಅಲ್ಲಿಂದ ಇ-ಪುಸ್ತಿಕೆಯ ಪಿಡಿಎಫ್ ಇಳಿಸಿಕೊಂಡದ್ದು.

ಏಕೆಂದರೆ ಬರಿ ಸುದ್ದಿ ಮಾತ್ರ ಸಾಲದು, ಪುಸ್ತಿಕೆಯಲ್ಲಿ ಪತ್ರೊಡೆಯನ್ನು ಹೇಗೆ ಚಿತ್ರಿಸಿದ್ದಾರೆ ಎಂದು ತೀವ್ರ ಕುತೂಹಲ ನನಗೆ! ಬೇಕಾಗುವ ಸಾಮಗ್ರಿ ಮತ್ತು
ಮಾಡುವ ವಿಧಾನ ನಮ್ಮ ಕರಾವಳಿಯ ಅಥೆಂಟಿಕ್ ವಿಧಾನದಂತೆಯೇ ಇದೆ ತಾನೆ ಎಂದು ದೃಢವಾಗುವವರೆಗೆ ಕೊಂಚ ಆತಂಕ ಕೂಡ. ಪಿಡಿಎಫ್‌ನ ಪುಟಗಳನ್ನು ತೆರೆಯುತ್ತಿದ್ದಂತೆ ಪರಿವಿಡಿಯಲ್ಲಿ 26 ಖಾದ್ಯಗಳ ಪೈಕಿ ಕ್ರಮಸಂಖ್ಯೆ ೨೨ರಲ್ಲಿ ರಾರಾಜಿಸುತ್ತಿದ್ದಾರೆ ನಮ್ಮ ಪತ್ರೊಡೆ ಮಹಾರಾಜರು!

ಮೊದಲ ೨೧ ಖಾದ್ಯಗಳ ಸಚಿತ್ರ ವಿವರಗಳಿಗೆ ತಲಾ ಒಂದೊಂದೇ ಪುಟ ಮೀಸಲಾದರೆ ನಮ್ಮ ಪತ್ರೊಡೆಗೆ ಸೆಂಟರ್‌ಸ್ಪ್ರೆಡ್ ಎಡ-ಬಲ ಎರಡು ಫುಲ್ ಪೇಜುಗಳು! ಪುಸ್ತಿಕೆಯ ಭಾಷೆ ಇಂಗ್ಲೀಷು. ಪತ್ರೊಡೆ ವಿವರಗಳನ್ನು ಗಮನವಿಟ್ಟು ಓದಿದೆ. ಬೇಕಾಗುವ ಸಾಮಗ್ರಿ, ಮಾಡುವ ವಿಧಾನ ಎಲ್ಲವೂ ಪಕ್ಕಾ ನಮ್ಮ ಅಮ್ಮ ಮಾಡು ತ್ತಿದ್ದಂತಯೇ. ಅಥವಾ ಈಗ ಪರಂಪರೆ ಮುಂದುವರಿದು ನನ್ನ ಅಕ್ಕಂದಿರು, ಅತ್ತಿಗೆಯಂದಿರು ಮಾಡುವಂತೆಯೇ. ಸುರುಳಿ ಸುತ್ತಿ ಬೇಯಿಸಿದ ಹಂತವಷ್ಟೇ ಅಲ್ಲ, ಆಮೇಲೆ ಆ ಸುರುಳಿಗಳನ್ನು ಬಿಸಿಯಿರುವಾಗಲೇ ಸಣ್ಣಗೆ ಹೆಚ್ಚಿ, ಬೆಲ್ಲ ಕಾಯಿತುರಿ ಸೇರಿಸಿ ಒಗ್ಗರಣೆ ಮಾಡುವವರೆಗೂ, ತೆಂಗಿನೆಣ್ಣೆ ಹಾಕ್ಕೊಂಡು ನ್ನುವವ ರೆಗೂ ಸಂಪೂರ್ಣವಾಗಿ ನಮ್ಮದೇ ವಿಧಾನ. ಬಹಳ ಸಂತೋಷವಾಯಿತು ಓದಿದಾಗ.

ಆಮೇಲೆ ಪುಸ್ತಿಕೆಯ ಪುಟಗಳನ್ನು ಮೊದಲಿಂದ ಓದಲಾರಂಭಿಸಿದೆ. ಪತ್ರೊಡೆಯ ಜೊತೆಗೇ ರಾಜಮಾನ್ಯತೆ ಪಡೆದ ಇತರ ಖಾದ್ಯಗಳಾವುವು ಎಂಬುದನ್ನೂ ಗಮನಿಸಿದೆ. ಆಮಲಕೀ ಪಾನಕ (ನೆಲ್ಲಿಕಾಯಿ ಜ್ಯೂಸ್), ಖರ್ಜೂರಾದಿ ಮಂಥ, ರಾಗಿ – ಬನಾನಾ ಸ್ಮೂಥಿ, ಕುಲತ್ತ ರಸಂ (ಹುರುಳಿ ಸಾರು), ಗುಲ್ಕಂದ್,
ಬೀಟ್‌ರೂಟ್ ಹಲ್ವಾ, ಖರ್ಜೂರ ಲಡ್ಡು, ನುಗ್ಗೆಸೊಪ್ಪಿನ ದೋಸೆ… ಮುಂತಾಗಿ ಬಾಯಿಯಲ್ಲಿ ನೀರೂರಿಸುವಂಥವು ಒಂದಿಷ್ಟು ಕಂಡುಬಂದವು.

ಆದರೆ ಪತ್ರೊಡೆಯ ಮುಂದೆ ಅವೆಲ್ಲ ಏನೂ ಅಲ್ಲ. ಪುಸ್ತಿಕೆಯ ಪ್ರಸ್ತಾವನೆ ಬರೆದವರ ಹೆಸರುಗಳೆರಡೂ ನನ್ನನ್ನು ಆಕರ್ಷಿಸಿದವು. ಅವರ ಭಾವಚಿತ್ರಗಳೂ ಇದ್ದವು. ಒಬ್ಬರು ಡಾ.ಎ.ರಘು, ಇನ್ನೊಬ್ಬರು ಡಾ.ಸುಲೋಚನಾ ಭಟ್. ಮೊದಲನೆಯವರ ಬಗ್ಗೆ ಖಂಡಿತವಾಗಿ ಹೇಳಲಾರೆನಾದರೂ ಎರಡನೆಯವರಂತೂ ನಮ್ಮ ಕರಾವಳಿ – ಮಲೆನಾಡು ಪ್ರದೇಶದವರೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮತ್ತು ಪತ್ರೊಡೆಗೆ ಈ ಪುಸ್ತಿಕೆಯಲ್ಲಿ ಸ್ಥಾನ ಸಿಗುವಂತೆ ಮಾಡುವುದರಲ್ಲಿ
ಅವರ ಕೈವಾಡವೂ ಇದೆ ಎನ್ನುವುದರಲ್ಲೂ ನನಗ್ಯಾವ ಸಂದೇಹವೂ ಇಲ್ಲ. ಪ್ರಸ್ತಾವನೆಯಲ್ಲಿ ಅವರೇನೂ ಪತ್ರೊಡೆಯನ್ನು ವಿಶೇಷವಾಗಿ ಉಲ್ಲೇಖಿಸಿಲ್ಲವಾದರೂ ಈ ಇಬ್ಬರು ಡಾಕ್ಟರರೇ ಪತ್ರೊಡೆಗೆ ಡಾಕ್ಟರ್ ರೇಟ್ ಕೊಡಿಸಿದವರೆಂಬುದು ಸುಸ್ಪಷ್ಟ.

ಪುಸ್ತಿಕೆಯ ಪೀಠಿಕೆಯಲ್ಲಿ ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೆಚ ಎಂಬುವವರು, ಮತ್ತು ಜಂಟಿಕಾರ್ಯದರ್ಶಿ ರೋಶನ್ ಜಗ್ಗಿ ಎಂಬುವವರು ಬರೆದ ಚಿಕ್ಕದೊಂದು ಮುನ್ನುಡಿಯಲ್ಲಿ, ಆರೋಗ್ಯಲಾಭಕ್ಕಾಗಿ ಭಾರತೀಯ ಸಾಂಪ್ರದಾಯಿಕ ಖಾದ್ಯ – ಪೇಯಗಳ ಸೇವನೆಯನ್ನು ಶಿಫಾರಿಸಿದ್ದಾರಷ್ಟೇ ಅಲ್ಲ, ಇಂಗ್ಲಿಷ್ ನಲ್ಲಿರುವ ಈ ಪುಸ್ತಿಕೆಯನ್ನು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮತಮ್ಮ ಭಾಷೆಗೆ ಅನುವಾದ ಮಾಡಿ ಪ್ರಕಟಿಸ ಬೇಕೆಂದು ಕೂಡ ಸಲಹೆ ನೀಡಿದ್ದಾರೆ.

ಅದರಂತೆ ಮುಂದೊಮ್ಮೆ ನಮ್ಮ ಕನ್ನಡ ಭಾಷೆಗೂ ಪುಸ್ತಿಕೆಯು ತರ್ಜುಮೆಯಾಗುತ್ತದೆಂದು ಆಶಿಸೋಣ. ಸರಕಾರಿ ವ್ಯವಸ್ಥೆಯಲ್ಲಿ ಅದು ಯಾವಾಗ ಆಗುತ್ತದೋ ಗೊತ್ತಿಲ್ಲ, ಆದರೆ ಪತ್ರೊಡೆಯ ಭಾಗವನ್ನಷ್ಟೇ ಕನ್ನಡಕ್ಕೆ ಇಲ್ಲಿ ನಾನೇ ಅನುವಾದ ಮಾಡಿ ಬರೆಯುತ್ತಿದ್ದೇನೆ: ‘ಪತ್ರೊಡೆ (ಕೊಲ್ಕಾಸಿಯಾ ಲೀಫ್ ರೋಲ್ಸ್): ಬೇಕಾಗುವ ಸಾಮಗ್ರಿಗಳು: ಕೆಸುವಿನ ಎಲೆ ಮಧ್ಯಮ ಗಾತ್ರದ್ದು 16, ಅಕ್ಕಿ 2 ಕಪ್, ಕೆಂಪು ಮೆಣಸು 8 ಅಥವಾ ನಿಮ್ಮ ರುಚಿ ಮಟ್ಟದಷ್ಟು, ಕೊತ್ತಂಬರಿ ಬೀಜ 4 ಟೀಸ್ಪೂನ್, ಅರಿಶಿನ 1 ಟೀಸ್ಪೂನ್, ಕಾಯಿತುರಿ 1/2 ಕಪ್, ಹುಣಿಸೆ ಒಂದು ನಿಂಬೆಹಣ್ಣಿನ ಗಾತ್ರದಷ್ಟು, ಬೆಲ್ಲ ಒಂದು ನಿಂಬೆಹಣ್ಣಿನ ಗಾತ್ರದಷ್ಟು, ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ: ಕಾಯಿತುರಿ 1/4 ಕಪ್, ಬೆಲ್ಲದ ಪುಡಿ 20 ಗ್ರಾಂ, ಸಾಸಿವೆ 1 ಟೀಸ್ಪೂನ್, ಕೆಂಪು ಮೆಣಸು 2, ಕರಿಬೇವಿನೆಲೆ 10, ಎಣ್ಣೆ 4 ಟೀಸ್ಪೂನ್. ಇದಿಷ್ಟರಿಂದ ಸುಮಾರು 15 ರಿಂದ 20 ಪತ್ರೊಡೆ ತುಂಡುಗಳು ಆಗುತ್ತವೆ. ತಯಾರಿಸುವ ವಿಧಾನ: ಅಕ್ಕಿಯನ್ನು 8 ಗಂಟೆ ಕಾಲ ನೀರಲ್ಲಿ ನೆನೆಸಿಟ್ಟು ಆಮೇಲೆ ಕೆಂಪು ಮೆಣಸು, ಕೊತ್ತಂಬರಿ ಬೀಜ, ಅರಿಸಿನ, ಕಾಯಿತುರಿ, ಹುಣಿಸೆ, ಬೆಲ್ಲ, ಉಪ್ಪು ಸೇರಿಸಿ ರುಬ್ಬಿಟ್ಟುಕೊಳ್ಳಿ.

ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ ಒಣಗಿಸಿ. ಒಂದೊಂದು ಎಲೆಯನ್ನೂ ಬೋರಲಾಗಿ (ನುಣುಪಾದ ಹೊಳೆಯುವ ಬದಿ ಕೆಳಗೂ ದೊರಗಾದ ಬದಿ ಮೇಲಕ್ಕೂ ಇರುವಂತೆ) ಹಿಡಿದು ಎಲೆಯ ‘ನಾಡಿ’ಗಳು ದಪ್ಪವಿದ್ದರೆ ಚೂರಿಯಿಂದ ಕೆತ್ತನೆ ಮಾಡಿ ಅವುಗಳನ್ನು ತೆಗೆಯಿರಿ. ಮೊದಲಿಗೆ ದೊಡ್ಡದೊಂದು ಎಲೆಯನ್ನು ಮೇಜಿನ ಮೇಲೋ ನೆಲದಲ್ಲಿ ಪೇಪರ್ ಹಾಸಿಯೋ ಬೋರಲಾಗಿಯೇ ಇಡಿ. ರುಬ್ಬಿದ ಮಸಾಲೆಯನ್ನು ಮುಷ್ಟಿಯಷ್ಟು ತೆಗೆದುಕೊಂಡು ಎಲೆಯ ಮೇಲೆಲ್ಲ ಕೈಯಿಂದಲೇ ಸಾರಿಸಿ. ಮಸಾಲೆ ಸವರಿದ ಆ ಎಲೆಯ ಮೇಲೆ ಇನ್ನೊಂದು ಎಲೆಯನ್ನು ಬೋರಲಾಗಿಡಿ. ಅದರ ಬೆನ್ನಿಗೂ ಮಸಾಲೆ ಸಾರಿಸಿ.

ಹೀಗೆ ಐದಾರು ಎಲೆಗಳಿಗೆ ಮಸಾಲೆ ಲೇಪನ ಮಾಡುತ್ತ ಒಂದರಮೇಲೊಂದಿಡುತ್ತ ಹೋಗಿ. ಈಗ ಎಲೆಗಳ ಎಡ-ಬಲ ಬದಿಗಳನ್ನು ತುಸು ಒಳಕ್ಕೆ ಮಡಚಿ ಕೊಂಡು, ಆಮೇಲೆ ಆ ಇಡೀ ಅಟ್ಟೆಯನ್ನು ಹಾಸಿಗೆಯಂತೆ ಸುರುಳಿ ಸುತ್ತಿ. ಆ ಸುರುಳಿಯ ಮೇಲ್ಮೈಗೆ ಮತ್ತೊಂದಿಷ್ಟು ಮಸಾಲೆ ಸವರಿ. ಬಿಚ್ಚಿಹೋಗಬಹುದು
ಅಂತನಿಸಿದರೆ ಬಾಳೆಹಗ್ಗದಿಂದಲೋ ನೂಲಿನಿಂದಲೋ ಕಟ್ಟಿ, ಇಲ್ಲವಾದರೆ ಹಾಗೇ ಸುರುಳಿಯನ್ನಿಟ್ಟರೂ ಸರಿಯೇ ಹಬೆಪಾತ್ರೆಯಲ್ಲಿಟ್ಟು ಅರ್ಧ ಗಂಟೆ ಕಾಲ ಬೇಯಿಸಿ.

ಬಿಸಿಯಿರುವಾಗಲೇ ಪಾತ್ರೆಯಿಂದ ತೆಗೆದು ಬೆಂದ ಸುರುಳಿಗಳನ್ನು ಚಕ್ರಾಕಾರದಲ್ಲಿ ಕತ್ತರಿಸಿ. ತೆಂಗಿನೆಣ್ಣೆ, ಬೆಣ್ಣೆ, ಅಥವಾ ತುಪ್ಪದೊಂದಿಗೆ ಬಡಿಸಿ ಸವಿಯಿರಿ.
ಸುರುಳಿಗಳನ್ನು ಚಕ್ರಾಕಾರವಲ್ಲದೆ ಸಣ್ಣಸಣ್ಣ ತುಂಡುಗಳಾಗಿ ಹೆಚ್ಚಿಕೊಂಡು, ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಕಾಯಿಸಿ ಸಾಸಿವೆ ಸಿಡಿಸಿ ಕೆಂಪು ಮೆಣಸಿನ ಚೂರುಗಳು ಮತ್ತು ಕರಿಬೇವಿನೆಲೆಗಳನ್ನೂ ಸೇರಿಸಿ, ಪತ್ರೊಡೆ ಚೂರುಗಳು, ಕಾಯಿತುರಿ, ಬೆಲ್ಲದ ಪುಡಿ, ಉಪ್ಪು ಸೇರಿಸಿ ಕಲೆಸಿದರೆ ಅದೂ ಒಂದು ಪರಮದಿವ್ಯ ಭಕ್ಷ್ಯ!

ಆರೋಗ್ಯಲಾಭ: ಪತ್ರೊಡೆಯು ಕೆಸುವಿನ ಎಲೆಗಳಿಂದ ಮಾಡಿದ್ದಾದ್ದರಿಂದ, -ಬರ್ ಅಂಶ ಇರುವುದರಿಂದ, ತಾನೂ ಸುಲಭವಾಗಿ ಜೀರ್ಣವಾಗುತ್ತದೆ; ಒಟ್ಟಾರೆಯಾಗಿ ಶರೀರದೊಳಗೆ ಪಚನಕ್ರಿಯೆಗೆ ನೆರವಾಗುತ್ತದೆ. ಕೆಸುವಿನ ಎಲೆಗಳಲ್ಲಿ ಕಬ್ಬಿಣದ ಅಂಶವಿರುವುದರಿಂದ ಹಿಮೊಗ್ಲೊಬಿನ್ ಅಭಿವೃದ್ಧಿಗೆ ಸಹಾಯಕ.
ಹಾಗೆಯೇ ಎಲೆಗಳಲ್ಲಿರುವ ಫೆನೊಲ್ಸ್, ಟ್ಯಾನಿನ್ಸ್, ಫ್ಲೇವನಾಯ್ಡ್ಸ್, ಗ್ಲೈಕೋಸೈಡ್ಸ್, ಸ್ಟೆರೊಲ್ಸ್ ಮುಂತಾದ ಅಂಶಗಳು ರುಮೇಟಾಯ್ದ್ ಆರ್ಥೈಟಿಸ್‌ನಂಥ ಕಾಯಿಲೆಗಳಿಗೆ ರಾಮಬಾಣ. ಎಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕೆರೊಟಿನ್ ಇರುವುದರಿಂದಲೂ ಆರೋಗ್ಯಕ್ಕೆ ಉತ್ತಮ.

ಆದರೆ ತಯಾರಿಯಲ್ಲಿ ಸಾಕಷ್ಟು ಎಣ್ಣೆಯ ಬಳಕೆ ಇರುವುದರಿಂದ ಹೃದ್ರೋಗಿಗಳು, ಸಕ್ಕರೆ ಕಾಯಿಲೆಯವರು, ಸ್ಥೂಲಶರೀರಿಗಳು ತುಸು ಎಚ್ಚರಿಕೆ ವಹಿಸಬೇಕು.
ಹೆಚ್ಚು ಖಾರ ಸೇವನೆಯೂ ಆರೋಗ್ಯಕ್ಕೆ ಮಾರಕವಾದೀತೆಂದು ಗೊತ್ತಿರಬೇಕು.’

ಆಯುಷ್ ಸಚಿವಾಲಯದ ಈ ಉಪಕ್ರಮವು ನಿಜಕ್ಕೂ ಪ್ರಶಂಸಾರ್ಹವಾದುದು. ಪತ್ರೊಡೆಗೆ ಸ್ಥಾನ ಸಿಕ್ಕಿದೆ ಯೆಂಬುದಕ್ಕಷ್ಟೇ ಅಲ್ಲ, ಬೇರೆ ರೀತಿಯಲ್ಲೂ ಒಳ್ಳೆಯದೇ. ಸ್ವಾದಿಷ್ಟ, ಸಾಂಪ್ರದಾಯಿಕ, ಸ್ವದೇಶಿ ಖಾದ್ಯಗಳನ್ನು ಮತ್ತೊಮ್ಮೆ ಜನಪ್ರಿಯ ಗೊಳಿಸುವುದಕ್ಕೆ, ತನ್ಮೂಲಕ ಪಿಜ್ಜಾ ಪಾಸ್ತಾ ಬರ್ಗರ್ ನೂಡಲ್ಸ್ ಮಂಚೂರಿಯಾ ಮುಂತಾದ ವಿದೇಶಿ ಜಂಕ್ ಆಕ್ರಮಣಕಾರರನ್ನು ಬಗ್ಗುಬಡಿಯುವುದಕ್ಕೆ ಇದು ಬಹು ಯೋಗ್ಯವಾದ ಮತ್ತು ಪರಿಣಾಮಕಾರಿಯಾಗ ಬಹುದಾದ ಯೋಜನೆ. ಪುಸ್ತಿಕೆಯು ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟವಾದರೆ, ಟಿವಿಯಲ್ಲಿ ಅಡುಗೆ ಪ್ರದರ್ಶನ ಮಾಡುವವರು ಈ ಖಾದ್ಯಗಳನ್ನೂ ವಿಶೇಷವಾಗಿ ಮಾಡಿ
ತೋರಿಸಿದರೆ, ಮೋದಿಯವರ ‘ಮೇಕ್ ಇನ್ ಇಂಡಿಯಾ’ ಕನಸು ನನಸಾಗುವುದಕ್ಕೆ ಸಹಾಯವಾಗುತ್ತದೆ. ಆತ್ಮನಿರ್ಭರತೆಗೆ ಅನುವಾಗುತ್ತದೆ.

ಮತ್ತೆ ಪತ್ರೊಡೆಯ ವಿಚಾರಕ್ಕೇ ಬರುವುದಾದರೆ ನಿಮ್ಮಲ್ಲಿ ಈಗಾಗಲೇ ಒಂದು ಕುತೂಹಲ ಮೂಡಿರಬಹುದು. ಈ ಆಸಾಮಿ ಇರೋದು ಅಮೆರಿಕದಲ್ಲಿ, ಅಲ್ಲಿ ಕೆಸುವಿನ ಎಲೆ ಸಿಗುತ್ತದೆಯೇ ಎಂಬ ಪ್ರಶ್ನೆ. ಹೌದು ಸಿಗುತ್ತದೆ. ಇಲ್ಲಿಯ ‘ಪಟೇಲ್ ಬ್ರದರ್ಸ್’ ಅಂಗಡಿಗಳಲ್ಲಿ ಸಿಗುತ್ತದೆ. ಏಕೆಂದರೆ ಗುಜರಾತಿಗಳು ಸಹ ನಮ್ಮ
ಪತ್ರೊಡೆಯಂಥದ್ದೇ ‘ಪತ್ರ’ ಎಂಬ ಖಾದ್ಯ ತಯಾರಿಸುತ್ತಾರೆ. ನಾವು ಅಕ್ಕಿಹಿಟ್ಟಿನ ಮಸಾಲೆ ಮಾಡುವುದಾದರೆ ಅವರು ಕಡ್ಲೆಹಿಟ್ಟಿನದನ್ನು ಬಳಸುತ್ತಾರೆ. ಅಮೆರಿಕದ ಕೆಲ ನಗರಗಳಲ್ಲಿರುವ ಕೊರಿಯನ್ ಗ್ರೋಸರಿ ಶಾಪ್‌ಗಳಲ್ಲೂ ‘ಟಾರೊ ಲೀವ್ಸ್’ ಎಂದು ಕೆಸುವಿನ ಎಲೆಗಳು ನಿರ್ದಿಷ್ಟವಾದೊಂದು ಸೀಸನ್‌ನಲ್ಲಿ ಸಿಗುತ್ತವೆ. ಅದಕ್ಕಿಂತ ನನಗೆ ವೈಯಕ್ತಿಕವಾಗಿ ಕೆಸುವಿನ ಎಲೆ ಸರಬರಾಜಿನ ಒಳ್ಳೆಯದೊಂದು ಆಕರ ಇದೆ.

ನನ್ನೊಬ್ಬ ಹಿರಿಯ ಸ್ನೇಹಿತ, ಮೂಲತಃ ಕಾರ್ಕಳದವರೇ ಆದ, ಸುಧಾಕರ ಶೆಣೈಯವರು ಟೆಕ್ಸಸ್ ಸಂಸ್ಥಾನದ ಹ್ಯೂಸ್ಟನ್ ನಗರದಲ್ಲಿ ಅವರ ಮನೆಯ ಹಿತ್ತಲಲ್ಲಿ ಪ್ರತಿ ಬೇಸಗೆಯಲ್ಲಿ ಯಥೇಚ್ಛವಾಗಿ ಕೆಸುವಿನ ಎಲೆ ಬೆಳೆಸುತ್ತಾರೆ. ಹಾಗೆಯೇ ತೊಂಡೆಕಾಯಿ, ಹೀರೆಕಾಯಿ, ಪಡವಲ, ಅಲಸಂದೆ ಮುಂತಾದ ತರಕಾರಿಗಳನ್ನೂ. ಪ್ರತಿವರ್ಷ ಬೇಸಗೆಯಲ್ಲಿ ಒಮ್ಮೆಯಾದರೂ ಒಂದಿಷ್ಟು ಕೆಸುವಿನೆಲೆಗಳನ್ನು ಓವರ್‌ನೈಟ್ ಕೊರಿಯರ್‌ನಲ್ಲಿ ನನಗೆ ಬಲು ಪ್ರೀತಿಯಿಂದ ಕಳುಹಿಸುತ್ತಾರೆ. ಎರಡು ವರ್ಷಗಳ ಹಿಂದೆ ಅವರು ಹಾಗೆ ಕೆಸುವಿನೆಲೆ ಕಳುಹಿಸಿದ್ದರ ಪತ್ರೊಡೆ ಮಾಡಿದ್ದಾಗ ಇಲ್ಲಿ ನಮ್ಮನೆಗೆ ಆಗ ಅತಿಥಿಯಾಗಿ ಬಂದಿದ್ದ ‘ಅಕ್ಕಿಕಾಳು ವೆಂಕಟೇಶ್’
ಅವರಿಗೂ ಪತ್ರೊಡೆ ಆತಿಥ್ಯ ಸಿಕ್ಕಿತ್ತು. ಸ್ವಾರಸ್ಯವೆಂದರೆ ಆಗ ನನ್ನ ಪತ್ನಿ – ಪುತ್ರ ಬೇಸಗೆರಜೆಯಲ್ಲಿ ಬೆಂಗಳೂರಿಗೆ ಹೋಗಿದ್ದರು, ಇಲ್ಲಿ ನನ್ನದೇ ನಳಪಾಕದಲ್ಲಿ ಪತ್ರೊಡೆ ವೈಭವ! ‘ನೀವೇನೋ ಅಕ್ಕಿಕಾಳಿನ ಮೇಲೆ ಹೆಸರು ಬರೆದು ವಿಶ್ವದಾಖಲೆ ಸ್ಥಾಪಿಸಿದವರು, ಆದರೆ ಈ ಪತ್ರೊಡೆ ಎಲೆಗಳ ಮೇಲೆ ನಿಮ್ಮ ಹೆಸರು ಬರೆದದ್ದಿತ್ತು ಎಂಬ ಕಲ್ಪನೆ ನಿಮಗಿತ್ತೇ?’ ಎಂದು ವೆಂಕಟೇಶ್ ಅವರನ್ನು ತಮಾಷೆಗಾಗಿ ಕೇಳಿದ್ದೆ.

ಈ ಸಲವೂ ಸುಧಾಕರ ಶೆಣೈಯವರಿಂದ ಕೆಸುವಿನೆಲೆ ಕಟ್ಟಿನ ಒಂದು ಪಾರ್ಸೆಲ್ ನನಗೆ ಬರುವುದಿದೆ. ಸುಧಾಕರ ಶೆಣೈಯವರ ಮತ್ತು ಪತ್ರೊಡೆಯ ಉಲ್ಲೇಖ
ಒಟ್ಟೊಟ್ಟಿಗೆ ಆದಾಗ ಇದೊಂದು ಜೋಕ್‌ಅನ್ನೂ ನೆನಪಿಸಿಕೊಳ್ಳಬೇಕು. ಇದು ಮೊನ್ನೆಮೊನ್ನೆ ವಾಟ್ಸಪ್‌ನಲ್ಲಿ ಹರಿದಾಡಿದ ಒಂದು ಕೊಂಕಣಿ ಜೋಕು. ಇದರಲ್ಲಿ ಶೆಣೈ ಅಲ್ಲ ಕಾಮತ್ ಮಾಮ್ ಎಂಬ ಕಾಲ್ಪನಿಕ ವ್ಯಕ್ತಿ ಹರಿಕಥೆಯಲ್ಲಿ ಹೇಳುವ ಉಪಕಥೆ: ದೇವರು ಪತ್ರೊಡೆ ಇಷ್ಟಪಡುತ್ತಾನೆಯೇ ಇಲ್ಲವೇ ಎಂಬ ಜಿಜ್ಞಾಸೆ. ಅದಕ್ಕೆ ಉತ್ತರ, ಖಂಡಿತ ಇಷ್ಟಪಡುತ್ತಾನೆ.

ಏಕೆಂದರೆ ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮನೇ ಹೇಳಿದ್ದಾನೆ: ‘ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ| ತದಹಂ ಭಕ್ತು ಪಹೃತ – ಮಶ್ನಾಮಿ ಪ್ರಯತಾತ್ಮನಃ||’ ಇದರಲ್ಲಿ ಪತ್ರಂ ಅಂದರೆ ಪತ್ರೊಡೆ. ಪುಷ್ಪಂ ಅಂದರೆ ಬಾಳೆಯ ಹೂ(ಅದರದೂ ಪಲ್ಯ ತುಂಬ ಚೆನ್ನಾಗಿ ಆಗುತ್ತದೆ). ಫಲಂ ಅಂದರೆ ಹಲಸಿನಹಣ್ಣು. ತೋಯಂ ಅಂದರೆ ಕೊಂಕಣಿಗರ ಸಿಗ್ನೇಚರ್ ಡಿಷ್ ‘ದಾಳಿತೊವ್ವೆ’! ನಿಜ, ಇದು ತಮಾಷೆಗಾಗಿ ಯಾರೋ ಕಲ್ಪಿಸಿದ ವ್ಯಾಖ್ಯಾನ. ಆದರೆ, ಪತ್ರೊಡೆ
ಮತ್ತು ಕೃಷ್ಣನಿಗೆ ಸಂಬಂಧವಿರುವ ಒಂದು ಧಾರ್ಮಿಕ ನಂಬಿಕೆ ಅಥವಾ ಸಂಪ್ರದಾಯವು ನಮ್ಮ ದಕ್ಷಿಣಕನ್ನಡದ ಕೆಲ ಸಮುದಾಯಗಳಲ್ಲಿದೆ.

ಅದೇ ಗೋಕುಲಾಷ್ಟಮಿಗೂ ಪತ್ರೊಡೆಗೂ ಇರುವ ಸಂಬಂಧ (ಹೌದು, ಇಮಾಂ ಸಾಬಿಗೆ ಇಲ್ಲದಿರಬಹುದು ಆದರೆ ಪತ್ರೊಡೆಗೆ ಇದೆ)! ಅದರ ಪ್ರಕಾರ ಗೋಕುಲಾಷ್ಟಮಿಯ ಹಿಂದಿನ ದಿನ ಪತ್ರೊಡೆ ಮಾಡಿ ತಿನ್ನಬೇಕು. ಆಮೇಲಿನ ಮೂರು ದಿನಗಳಲ್ಲಿ ಕೆಸುವಿನ ಎಲೆ ಬೇಯಿಸುವುದಿರಲಿ ಮುಟ್ಟಲೂಬಾರದು!
ಅದಕ್ಕೊಂದು ಪುರಾಣದ ಕಥೆಯ ಆಧಾರ. ಕೃಷ್ಣ ಹುಟ್ಟಿದ ಕೂಡಲೆ ವಸುದೇವ ಅವನನ್ನು ರಾತೋರಾತ್ರಿ ಸೆರೆಮನೆಯಿಂದ ಹೊತ್ತೊಯ್ದು ನಂದಗೋಕುಲದಲ್ಲಿ ಯಶೋದೆಯ ಬಳಿ ಬಿಟ್ಟುಬಂದನಲ್ಲವೆ? ಆ ನಟ್ಟಿರುಳಿನಲ್ಲಿ ಪ್ರಳಯಸದೃಶ ಮಳೆ ಸುರಿಯುತ್ತಿದ್ದಾಗ ಬಾಲಕೃಷ್ಣನನ್ನು ಒಂದು ದೊಡ್ಡ ಕೆಸುವಿನೆಲೆಯಲ್ಲಿಟ್ಟು ಮೇಲೆ ಛತ್ರಿಯಂತೆ ಇನ್ನೊಂದು ಕೆಸುವಿನೆಲೆ ಹಿಡಿದು ಮಳೆಯಿಂದ ರಕ್ಷಿಸಿದ್ದನಂತೆ ವಸುದೇವ. ನವಜಾತ ಶಿಶುವಿಗೆ ಆಸರೆಯೊದಗಿಸಿದ ಕೆಸುವಿನೆಲೆಗೆ ಮೂರು ದಿನ
‘ಜಾತಾಶೌಚ’ ಹಾಗಾಗಿ ಅದನ್ನು ಮುಟ್ಟಬಾರದು! ಇದಿಷ್ಟು ಕಥೆ. ಇದಕ್ಕೆ ಇನ್ನೊಂದಿಷ್ಟು ಮಸಾಲೆಯನ್ನೂ ಸೇರಿಸಬಹುದು.

ಏನೆಂದರೆ, ಆಗತಾನೆ ಹುಟ್ಟಿದ ಮಗುವಿನ ಮೈಯ ಎಣ್ಣೆಯಂಶ ತಾಗಿದ್ದರಿಂದಲೇ ಕೆಸುವಿನ ಎಲೆಯ ಮೇಲ್ಮೈ ನೀರಿನಿಂದ ಒದ್ದೆಯಾಗುವುದಿಲ್ಲ, ನೀರಿನ ಹನಿ ಹರಳಾಗಿ ಹೊಳೆಯುತ್ತದೆ. ಪತ್ರೊಡೆ ಮಾಡುವಾಗ ಕೆಸುವಿನೆಲೆಯ ಬೆನ್ನಿನ ಭಾಗಕ್ಕಷ್ಟೇ ಮಸಾಲೆ ಹಚ್ಚುವುದೂ ಕೃಷ್ಣನ ಮೇಲಿನ ಗೌರವದಿಂದಲೇ. ಕೃಷ್ಣನ ಕೋಮಲ ಶರೀರವನ್ನು ಸೋಕಿದ ಎಲೆಯ ಮೇಲ್ಮೈಗೆ ಖಾರ ಹಚ್ಚುವಂತಿಲ್ಲ! ಆಯುಷ್ ಸಚಿವಾಲಯದ ಪುಸ್ತಿಕೆಯಲ್ಲಿ ಪತ್ರೊಡೆ ಬಗೆಗಿನ ಬರಹವನ್ನು ನನ್ನಿಂದೇನಾದರೂ ಬರೆಸಿದ್ದರೆ ನಾನು ಖಂಡಿತ ಈ ವಿಚಾರವನ್ನೂ ಸೇರಿಸುತ್ತಿದ್ದೆ. ಆಗ ದ್ವಾರಕಾ – ನಾಡಿನವರಿಗಷ್ಟೇ ಅಲ್ಲ, ಮಥುರಾನಗರಿಗೂ ಪತ್ರೊಡೆ ಪ್ರಸಿದ್ಧಿ ಹರಡುತ್ತಿತ್ತು!

ಈಗಲಾದರೂ ಒಪ್ಪುತ್ತೀರಾ ‘ಆಯುಷ್ಮಾನ್ ಭವ’ ಎಂದು ಪತ್ರೊಡೆಯ ಖ್ಯಾತಿ ಅಜರಾಮರವಾಗುವಂತೆ ಹಾರೈಕೆಯನ್ನು?