Sunday, 24th November 2024

ನವದೆಹಲಿ: ಪೆಟ್ರೋಲ್‌ಗೆ ಪ್ರತಿ ಲೀ.ಗೆ 35 ಪೈಸೆ ಹೆಚ್ಚಳ

ನವದೆಹಲಿ: ಇಂಧನ ಬೆಲೆಗಳಲ್ಲಿ ಮೂರನೇ ಬಾರಿಗೆ ಭಾನುವಾರ ಹೆಚ್ಚಳಗೊಂಡಿದೆ. ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್‌ಗೆ ಪ್ರತಿ ಲೀ.ಗೆ 35 ಪೈಸೆ ಹಾಗೂ ಡೀಸಲ್‌ಗೆ ಲೀಟರ್‌ಗೆ 18 ಪೈಸೆ ಏರಿಕೆಯಾಗಿದೆ.

ಇದರೊಂದಿಗೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಶತಕದ ಗಡಿಯತ್ತ ತಲುಪಿದ್ದು, ಪ್ರತಿ ಲೀಟರ್‌ಗೆ ₹99.51 ಆಗಿದೆ. ಡೀಸೆಲ್‌ ಪ್ರತಿ ಲೀಟರ್ ಬೆಲೆ ₹89.36ಕ್ಕೆ ತಲುಪಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ 34 ಪೈಸೆ ಹೆಚ್ಚಳ ಕಂಡುಬಂದು, ಪ್ರತಿ ಲೀಟರ್‌ಗೆ ₹105.58 ತಲುಪಿದೆ. ಡೀಸೆಲ್ ಬೆಲೆ 19 ಪೈಸೆ ಏರಿಕೆಗೊಂಡು ಲೀಟರ್‌ಗೆ ₹96.91 ಆಗಿದೆ. ಚೆನ್ನೈಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯಲ್ಲಿ ಅನುಕ್ರಮವಾಗಿ 31 ಹಾಗೂ 19 ಪೈಸೆ ಹೆಚ್ಚಳಗೊಂಡಿವೆ. ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಅನುಕ್ರಮವಾಗಿ ಲೀಟರ್‌ಗೆ ₹100.44 ಹಾಗೂ ₹93.91 ತಲುಪಿದೆ.

ಕೋಲ್ಕತ್ತದಲ್ಲೂ ಪೆಟ್ರೋಲ್ ಬೆಲೆ 100ರ ಸನಿಹದಲ್ಲಿದ್ದು, ಲೀಟರ್‌ಗೆ ₹99.45 ಮತ್ತು ಡೀಸೆಲ್‌ಗೆ ₹92.27 ತಲುಪಿದೆ. ಬೆಂಗಳೂರು ಸೇರಿದಂತೆ ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಪುಣೆ ನಗರಗಳಲ್ಲಿ ಪೆಟ್ರೋಲ್ ಬೆಲೆ ₹100 ದಾಟಿದೆ.

ಕರ್ನಾಟಕ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ, ಪಂಜಾಬ್ ಮತ್ತು ಲಡಾಕ್ ಮುಂತಾದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹100 ದಾಟಿವೆ.