ಶುಲ್ಕ ಕಟ್ಟಲು ಸಾಧ್ಯವಾಗದೇ ಸರಕಾರಿ ಶಾಲೆ ಮೊರೆ
ಕಳೆದ ಎರಡು ವಾರದಲ್ಲಿ ೧೫ ಲಕ್ಷ ವಿದ್ಯಾರ್ಥಿಗಳು ದಾಖಲು
ಬೆಂಗಳೂರು: ಸರಕಾರಿ ಶಾಲೆಗಳ ಬದಲು, ಖಾಸಗಿ ಶಾಲೆಗಳ ಕದ ತಟ್ಟುತ್ತಿದ್ದ ಮಂದಿ ಇದೀಗ ಪುನಃ ಸರಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕರೋನಾ ಕಾಲಘಟ್ಟದಲ್ಲಿ ಕಳೆದ ಎರಡು ವರ್ಷಗಳಿಂದ ಶಾಲೆಗಳೇ ನಡೆಯದಿರುವ ಈ ಸಮಯದಲ್ಲಿ, ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಬದಲಿಗೆ ಸರಕಾರಿ ಶಾಲೆಗಳಿಗೆ ಸೇರಿಸುವುದಕ್ಕೆ ಹೆಚ್ಚು ಉತ್ಸಾಹರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದಕ್ಕೆ ಪ್ರಮುಖವಾಗಿ ಆರ್ಥಿಕ ಹೊಡೆತ, ಖಾಸಗಿ ಶಾಲೆಗಳ ಭಾರಿ ಶುಲ್ಕ ಹಾಗೂ ಶಾಲೆ ನಡೆಯದಿದ್ದರೂ, ಶುಲ್ಕ ಪಾವತಿಸಬೇಕಾದ ಅನಿರ್ವಾಯತೆ ಎನ್ನುವ ಮಾತುಗಳು ಕೇಳಿಬಂದಿವೆ.
ಕಳೆದ ಒಂದೂವರೆ ವರ್ಷದಿಂದಲೂ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿದ್ದು, ಆನ್‌ಲೈನ್, ಯೂಟ್ಯೂಬ್ ಪಾಠ ಮಾಡಲಾಗುತ್ತಿದೆ. ಆದರೂ, ಖಾಸಗಿ ಆಡಳಿತ ಮಂಡಳಿಗಳು ಶಾಲೆಯನ್ನು ಆರಂಭಿಸದಿದ್ದರೂ, ಪೂರ್ಣ ಶುಲ್ಕ ಕಟ್ಟಬೇಕೆಂಬ ಒತ್ತಡವನ್ನು ಪೋಷಕರ ಮೇಲಾಕುತ್ತಿದ್ದಾರೆ. ಆದ್ದರಿಂದ ಇದೀಗ ಅನೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯ ಬದಲು ಸರಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ.
ಪ್ರಸಕ್ತ ಸಾಲಿನ ದಾಖಲಾತಿಯಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರಕಾರಿ ಶಾಲೆಗಳು ದಾಖಲೆ ಮಟ್ಟದಲ್ಲಿ ದಾಖಲಾತಿ ನಡೆಯುತ್ತಿದೆ. ೧ರಿಂದ ೧೦ನೇ ತರಗತಿವರೆಗೂ ಸರಕಾರಿ ಶಾಲೆಗಳಿಗೆ ಲಕ್ಷಾಂತರ ಮಕ್ಕಳು ದಾಖಲಾಗಿದ್ದಾರೆ. ಜೂನ್ 15ರಿಂದ ದಾಖಲು ಪ್ರಕ್ರಿಯೆ ಆರಂಭವಾಗಿದ್ದು, ಕೇವಲ 15 ದಿನದ ಸರಕಾರಿ ಶಾಲೆಗಳಿಗೆ ಒಟ್ಟು 16,52,613 ಮಕ್ಕಳು ಸೇರ್ಪಡೆಯಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ಖಾಸಗಿ ಶಾಲೆಗಳ ಪೋಷಕರು ಶುಲ್ಕ ಕಟ್ಟಲಾಗದೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಿzರೆ. ಇದರೊಂದಿಗೆ ಕರೋನಾ ಭಯಕ್ಕೆ ತಮ್ಮ ಸ್ವಂತ ಊರುಗಳನ್ನು ಸೇರಿರುವ ಪೋಷಕರು ತಮ್ಮ ಮಕ್ಕಳಿಗೆ ಗ್ರಾಮೀಣ ಭಾಗದ ಶಿಕ್ಷಣ ಕೊಡಿಸಲು ಮುಂದಾಗಿದ್ದು, ಸರಕಾರಿ ಶಾಲೆಗಳಿಗೆ ಹೆಚ್ಚು ಅಡ್ಮೀಷನ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚು: ಹಾಗೆ ನೋಡಿದರೆ ಸರಕಾರಿ ಶಾಲೆಗಳ ಮೇಲಿನ ಮೋಹ ಬೆಂಗಳೂರು ಹಾಗೂ ಮಹಾನಗರ ಗಳಿಗಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಹೇಗಿದ್ದರೂ ಆನ್‌ಲೈನಲ್ಲಿಯೇ ಶಿಕ್ಷಣ ನೀಡಬೇಕಿರುವುದರಿಂದ, ಖಾಸಗಿ ಶಾಲೆಗಳ ಬದಲು, ಸರಕಾರಿ ಶಾಲೆಯಲ್ಲಿಯೇ ಒಂದೆರಡು ವರ್ಷ ಓದಲಿ. ಕರೋನಾ ಕಾಟ ನಿಂತ ಬಳಿಕ ಬೇಕಿದ್ದರೆ ಪುನಃ ಮರು ದಾಖಲು ಮಾಡಿದರಾಯಿತು ಎನ್ನುವ ಲೆಕ್ಕಾಚಾರದಲ್ಲಿ ಅನೇಕರಿದ್ದಾರೆ.
ಹಾವೇರಿ, ಮಂಡ್ಯ, ಮೈಸೂರು, ದಾವಣಗೆರೆ, ಬೀದರ್, ಕಲಬುರಗಿ, ಗದಗ, ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಬೆಂ.ಗ್ರಾಮಾಂತರ ಜಿಗಳಲ್ಲಿ ಸರಕಾರಿ ಶಾಲೆಗೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ.
ಸರಕಾರಿ ಶಾಲೆಗೆ ಸೇರಲು ಕಾರಣವೇನು?
*ಖಾಸಗಿ ಶಾಲೆಗಳ ಶುಲ್ಕದ ಒತ್ತಡ
*ನಗರ ತೊರೆದು ಗ್ರಾಮೀಣ ಭಾಗಕ್ಕೆ ಹೋಗಿರುವ ಪೋಷಕರು
*ಈ ವರ್ಷವೂ ಆನ್‌ಲೈನ್ ತರಗತಿಯೇ ನಡೆಯುವುದರಿಂದ, ದುಂದು ವೆಚ್ಚವೇಕೆ ಎನ್ನುವ ಮನಸ್ಥಿತಿ
*ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಇಲಾಖೆಯಿಂದ ಆಗುತ್ತಿರುವ ಅಭಿಯಾನ
***
ಕರೋನಾ ಸೋಂಕು ಹೆಚ್ಚಾಗಿರುವುದರಿಂದ ಅನೇಕ ಪೋಷಕರು ಬೆಂಗಳೂರು ಹಾಗೂ ಇತರ ನಗರ ಪ್ರದೇಶ ತೊರೆದು ಗ್ರಾಮೀಣ ಪ್ರದೇಶಗಳಿಗೆ ಹೋಗಿದ್ದಾರೆ. ಆದ್ದರಿಂದ ಹೆಚ್ಚಿನ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
– ಅನ್ಬು ಕುಮಾರ್ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
ಕರೋನಾ ಕಾಲದಲ್ಲಿ ಹೇಗಿದ್ದರೂ, ಆಫ್ಲೈನ್ ಶಾಲೆಗಳು ನಡೆಯುವುದಿಲ್ಲ. ಹೀಗಿರುವಾಗ 50ರಿಂದ 60 ಸಾವಿರ ಕಟ್ಟಿ ಆನ್‌ಲೈನ್ ಶಿಕ್ಷಣ ಕೊಡಿಸುವ
ಬದಲು, ಸರಕಾರಿ ಶಾಲೆಗೆ ಸೇರಿಸುವುದು ಸೂಕ್ತ. ಸರಕಾರಿ ಶಾಲೆಯಲ್ಲಿದ್ದರೆ ವಿದ್ಯಾಗಮದೊಂದಿಗೆ ಯೂಟ್ಯೂಬ್‌ನಲ್ಲಿಯೂ ಪಾಠ ಮಾಡುತ್ತಿದ್ದಾರೆ. ಇದರೊಂದಿಗೆ ಅಗತ್ಯವಿದ್ದರೆ ನಾವು ಸಹ ಮಕ್ಕಳಿಗೆ ಕಲಿಸಬಹುದು. – ಲಕ್ಷಣ ಪೋಷಕರು