Saturday, 23rd November 2024

ದೀದಿಗೆ ದಂಡ ವಿಧಿಸಿದ ಕೋಲ್ಕತ್ತಾ ಹೈಕೋರ್ಟ್‌

ಕೊಲ್ಕತ : ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆ ಕೋಲ್ಕತ ಹೈಕೋರ್ಟ್​ 5 ಲಕ್ಷ ರೂ.ಗಳ ದಂಡ ವಿಧಿಸಿದೆ.

ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವಿನ ವಿರುದ್ಧದ ಕೇಸನ್ನು ನ್ಯಾಯಮೂರ್ತಿ ಕೌಶಿಕ್​ ಚಂದ ಅವರು ವಿಚಾರಣೆ ನಡೆಸಬಾರದೆಂದು ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸುತ್ತಾ, ಕೋರ್ಟ್ ಈ ಆದೇಶ ಹೊರಡಿಸಿದೆ.

ನ್ಯಾಯಾಧೀಶರಾಗಿ ನೇಮಕವಾಗುವ ಮುನ್ನ ತಮ್ಮ ವಕಾಲತ್ತಿನ ದಿನಗಳಲ್ಲಿ ನ್ಯಾಯಮೂರ್ತಿ ಚಂದ ಅವರು ಬಿಜೆಪಿ ಸರ್ಕಾರಕ್ಕಾಗಿ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಗಿ ಕೆಲಸ ಮಾಡಿದ್ದರು. ಇದನ್ನೇ ಕಾರಣವಾಗಿಟ್ಟುಕೊಂಡು, ನ್ಯಾ.ಚಂದ ಅವರು ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರು ಕೇಸಿನಲ್ಲಿ ನಿಷ್ಪಕ್ಷಪಾತ ನಿರ್ಧಾರ ಕೈಗೊಳ್ಳಲಾರರು ಎಂಬ ಶಂಕೆ ವ್ಯಕ್ತಪಡಿಸಿದ್ದ ಬ್ಯಾನರ್ಜಿ ಅವರ ವಕೀಲರು, ಕೇಸನ್ನು ಬೇರೊಬ್ಬ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರಾದ ಮಮತಾ ಬ್ಯಾನರ್ಜಿ ಅವರ ಮೇಲೆ ದಂಡ ವಿಧಿಸಿದ ನ್ಯಾಯಮೂರ್ತಿಗಳು, ತದನಂತರ ತಮ್ಮ ಮುಂದೆ ಈ ಕೇಸಿನ ವಿಚಾರಣೆ ನಡೆಯ ಕೂಡದು ಎಂದು ಆದೇಶ ನೀಡಿದರು.