Saturday, 23rd November 2024

ಸ್ಪೇನ್ ತಂಡ ಪರಾಭವ: ಫೈನಲಿಗೆ ಇಟಲಿ

ಲಂಡನ್‌: ಎರಡು ಗೋಲು ತಡೆದ ಗಿಯಾನ್‌ಲ್ಯೂಗಿ ಡೊನ್ನಾರುಮ್ಮಾ ಇಟಲಿ ತಂಡ, ಯೂರೊ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ತಲುಪುವಂತೆ ಮಾಡಿದರು. ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಪರಾಭವಗೊಳಿಸಿತು.

ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಇಟಲಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ 4-2ರಿಂದ ಜಯ ಒಲಿಯಿತು. ಭಾನುವಾರ ಇದೇ ಕ್ರೀಡಾಂಗಣದಲ್ಲಿ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಡೆನ್ಮಾರ್ಕ್ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಗಿತ್ತು. ಇಲ್ಲಿ ಇಟಲಿ ಪಾರಮ್ಯ ಮೆರೆಯಿತು. ಹೆಚ್ಚು ಅವಧಿಗೆ ಸ್ಪೇನ್ ತಂಡದ ನಿಯಂತ್ರಣದಲ್ಲೇ ಇದ್ದ ಹಣಾಹಣಿಯಲ್ಲಿ ಇಟಲಿಯ ಫೆಡರಿಕೊ ಚೀಸಾ ಮೋಡಿ ಮಾಡಿದರು. ಮೊದಲ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಅಲ್ವಾರಾ 80ನೇ ನಿಮಿಷದಲ್ಲಿ ಸ್ಪೇನ್‌ ಪರ ಗೋಲು ದಾಖಲಿಸಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

ಸತತ 33 ಪಂದ್ಯಗಳಲ್ಲಿ ಅಜೇಯವಾಗುಳಿದು ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಇಟಲಿ, ಟೂರ್ನಿಯಲ್ಲಿ ನಾಲ್ಕನೇ ಬಾರಿ ಫೈನಲ್‌ ಪ್ರವೇಶಿಸಿದೆ. 1968ರಲ್ಲಿ ತಂಡವು ಚಾಂಪಿಯನ್ ಆಗಿತ್ತು.