Thursday, 19th September 2024

ಸಮುದ್ರದಾಳದ ಜೀವಿಗಳ ವಿಚಿತ್ರ , ಸೂಕ್ಷ್ಮ ಸೆಕ್ಸ್ ಜೀವನಗಳು

ಶಿಶಿರ ಕಾಲ

ಶಿಶಿರ್‌ ಹೆಗಡೆ ನ್ಯೂಜೆರ್ಸಿ

ಸೆಕ್ಸ್. ಈ ವಿಷಯದ ಮೇಲೆ ಮಾತಿನ ಮಂಟಪ ಕ್ಲಬ್ ಹೌಸ್‌ನಲ್ಲಿ ಮೊನ್ನೆ ಒಂದು ಚರ್ಚೆ ನಡೆಯುತ್ತಿತ್ತು. ಐದುನೂರು ಮಂದಿ ಅಲ್ಲಿ ಸೇರಿದ್ದರು. ಅಲ್ಲಿ ಏನಿಲ್ಲ ವೆಂದರೂ ಐವತ್ತು ದೇಶದವರಿದ್ದರು. ಕೆಲವರು ತಮ್ಮ ಅನುಭವಗಳನ್ನು, ತಾವು ಕೇಳಿದ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲಿ ವಿಜ್ಞಾನಿ ಗಳಿದ್ದರು, ಮನಃ ಶಾಸ್ತ್ರಜ್ಞರಿದ್ದರು, ರಾಜಕಾರಣಿಗಳಿದ್ದರು, ಹತ್ತಾರು ವಿಭಾಗಗಳಲ್ಲಿ ಅಪ್ರತಿಮ ಸಾಧನೆಗೈದ ಸೆಲಿಬ್ರಿಟಿಗಳಿದ್ದರು, ಜನಸಾಮಾನ್ಯರೂ ಇದ್ದರು. ಅದೊಂದು
ಸೀರಿಯಸ್ ಚರ್ಚೆ.

ಅಲ್ಲಿ ಸಹಜ ಸೆಕ್ಸ್, ಹಸ್ತ ಮೈಥುನ, ಸಲಿಂಗ ಕಾಮ, ಮದುವೆಗಿಂತ ಮೊದಲು ಸೆಕ್ಸ್ ಬೇಕೋ ಬೇಡವೋ, ಕಿನ್ಸಿ ಸ್ಕೇಲ, ಹೆಟೆರೋ ಸೆಕ್ಸ್, ಸೆಕ್ಸ್‌ನಲ್ಲಿ ಹೆಣ್ಣು
ಮತ್ತು ಗಂಡಿನ ತೃಪ್ತಿಯ ಮಟ್ಟ, ಮನುಷ್ಯನ ಲೈಂಗಿಕ ನಡವಳಿಕೆ ಹೀಗೆ ನೂರೆಂಟು ವಿಚಾರಗಳು ಬಂದು ಹೋದವು. ಮದುವೆ ಆಗುವುದೇ ಸೆಕ್ಸ್‌ಗೋಸ್ಕರ
ಎನ್ನುವವರೂ ಅಲ್ಲಿದ್ದರು. ಮುಕ್ತ ಲೈಂಗಿಕತೆಯೇ ಸರಿ ಎಂದು ಕೆಲವರು, ಅಯ್ಯೋ ಅದೆಲ್ಲ ಇಡೀ ಸಮಾಜದ ನಯವಾದ ರಚನೆಯನ್ನೇ ಹಾಳುಮಾಡಿಬಿಡುತ್ತದೆ ಎಂದು ಇನ್ನೊಂದಿಷ್ಟು ಮಂದಿ. ಹೀಗೆ ಚರ್ಚೆಗೆ ಏಕ ದಿಶೆ ಇರಲಿಲ್ಲ.

ಅದೊಂದು ಮುಕ್ತ ಆದರೆ ಬಹಳ ಪ್ರಬುದ್ಧ ಚರ್ಚೆ. ಕೆಲವು ವಿಜ್ಞಾನಿಗಳು ಸೆಕ್ಸ್ ಅನ್ನು ವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಿಸುತ್ತಿದ್ದರು. ಇನ್ನು ಕೆಲವರು ಸಾಮಾಜಿಕ ಕೋನದಲ್ಲಿ. ಸೆಕ್ಸ್ ಕೇವಲ ಒಂದು ದೈಹಿಕ ಅವಶ್ಯಕತೆ ಎಂದು ಕೆಲವರ ವಾದ. ಒಟ್ಟಾರೆ ಇದೊಂದು ತೀರಾ ಸಹಜ ಆದರೆ ಕೊಂಪ್ಲೆಕ್ಸ್ ವಿಚಾರ ಎಂದು ನಿಮಿಷ ನಾಲ್ಕು ಕಳೆಯುವುದರೊಳಗೆ ಅನ್ನಿಸತೊಡಗಿತು.

ಸೆಕ್ಸ್ ಎಂಬುದು ಸಹಜ ದೈಹಿಕ ವಿಚಾರವಾದರೂ ನಮ್ಮ ಸಮಾಜದಲ್ಲಿ ಅದೊಂದೇ ವಿಚಾರದ ಹಿನ್ನೆಲೆಯನ್ನಿಟ್ಟುಕೊಂಡು ಏನೆನೇ ನಡೆಯುತ್ತಿರುತ್ತವೆ. ಅದನ್ನು
ವಿವರಿಸುತ್ತಾ ಹೋದರೆ ಈ ಸೆಕ್ಸ್ ಮತ್ತು ಸಮಾಜದ ನಾಜೂಕುತನ ಮತ್ತು ಹುಳುಕುಗಳನ್ನು ವಿಷಯ ವಾಗಿಸಿಕೊಂಡೇ ಒಂದು ಮಹಾ ಗ್ರಂಥ ಬರೆಯಬಹುದು.
ಸೆಕ್ಸ್ ಎಂಬ ವಿಚಾರದ ಸುತ್ತ ಮನುಷ್ಯ ಸಮಾಜದಲ್ಲಿ ಅಷ್ಟು ಸಂಕೀರ್ಣತೆಗಳಿವೆ. ಏನೇನೆಲ್ಲ ವಿಚಿತ್ರವೆನ್ನಿಸುವ, ಬೆರಗೆನ್ನಿಸುವ ವ್ಯವಹಾರಗಳು ಇದೊಂದು ವಿಚಾರದ ಸುತ್ತ ನಡೆಯುತ್ತಿರುತ್ತವೆ.

ಹಾಗಾದರೆ ಉಳಿದ ಜೀವ ಜಗತ್ತಿನಲ್ಲಿ ಈ ಸೆಕ್ಸ್ ಎನ್ನುವುದು ಸರಳವೇ? ಎಲ್ಲ ಪ್ರಾಣಿಗಳಲ್ಲಿ ಉಸಿರಾಟದಷ್ಟೇ ಸಹಜ ಮತ್ತು ಅವಶ್ಯಕ ಸೆಕ್ಸ್. ಅದರ ಮಹತ್ವ, ಅವಶ್ಯಕತೆ ಇವೆಲ್ಲದರ ಬಗ್ಗೆ ಇಲ್ಲಿ ಪಟ್ಟಾಂಗ ಬೇಕಿಲ್ಲ. ಇಂಗ್ಲಿಷ್‌ನಲ್ಲಿ  Let us fall in love ಎನ್ನುವ ಪದ್ಯವಿದೆ – Birds do it, bees do it, Even educated fleas do it. Let’s do it, let’s fall in love. In Spain, the best upper sets do it, Lithuanians and Letts do it, Let’s do it, let’s fall in love. The Dutch in old Amsterdam do it, Goldfish in the privacy of bowls do it, Let’s do it, let’s fall
in love.  ಹೀಗೆ ಸಾಗುತ್ತದೆ ಆ ಪದ್ಯ. ತಾತ್ಪರ್ಯ ಇಷ್ಟೇ.

ಸೆಕ್ಸ್ ಎನ್ನುವುದು ಎಲ್ಲ ಜೀವಿಗಳಲ್ಲೂ ಸಹಜ – ಆ ವಿಷಯದಲ್ಲಿ ಸಂಕೋಚವೇಕೆ! ಈ ಪದ್ಯದಲ್ಲಿ ಹೇಳುವಂತೆ ಜೀವಿ ಎಂದಾಕ್ಷಣ ಸೆಕ್ಸ್ ಅಲ್ಲಿರಲೇ ಬೇಕು.
ಅದಿಲ್ಲದೆ ಜೀವಿಯಿಲ್ಲ – ಜೀವವಿಲ್ಲ. ಆದರೆ ಜೀವಿಗಳಲ್ಲ ಸೆಕ್ಸ್ ಎನ್ನುವುದು ಕೇವಲ ಗಂಡು ಹೆಣ್ಣು ಸೇರುವುದೆನ್ನುವಷ್ಟು, ನಾವಂದುಕೊಂಡಷ್ಟು ಸರಳವೇ? ಈ
ವಿಚಾರವಾಗಿ, ಅದರಲ್ಲೂ ಸಮುದ್ರದಲ್ಲಿನ ಕೆಲವು ಮೀನುಗಳ ವಿಚಿತ್ರ ಸೆಕ್ಸ್ ಜೀವನವನ್ನು ಇಲ್ಲಿ ನಿಮ್ಮ ಮುಂದಿಡುವವನಿದ್ದೇನೆ. ಇದು ಜೀವಜಗತ್ತಿನ ವಿಚಿತ್ರ
ವೆನ್ನಿಸುವ ಕೆಲವು ಉದಾಹರಣೆಗಳ ಜೊತೆ ಒಂದಿಷ್ಟು ಆಯಾಮಗಳನ್ನು ಕಟ್ಟಿಕೊಡುವ ಪ್ರಯತ್ನ.

ನೀವು ಅನಿಮೇಟೆಡ್ ಚಲನಚಿತ್ರವನ್ನು ನೋಡುವವರಾಗಿದ್ದರೆ ಈ ಚಲನಚಿತ್ರವನ್ನು ನೋಡಿಯೇ ಇರುತ್ತೀರಿ. ಫೈಂಡಿಂಗ್ ನೀಮೋ. ಅದು ಚಿಕ್ಕ ಕ್ಲೌನ್ ಮೀನಿನ
ಅನಿಮೇಟೆಡ್ ಸಾಹಸ ಕಥೆ. ತಂದೆತಾಯಿಯಿಂದ ನೀಮೋ ಎಂಬ ಹೆಸರಿನ ಮೀನು ಒಂದು ಅಕಸ್ಮಾತ್ ಘಟನೆಯಲ್ಲಿ ಬೇರೆಯಾಗಿಬಿಡುತ್ತದೆ. ಹೀಗೆ ಸಾಗರದಲ್ಲಿ ಬೇರೆಯಾದ ತಂದೆ ತಾಯಿ ಮತ್ತು ಮರಿ ಮೀನು ಒಬ್ಬರನ್ನೊಬ್ಬರು ಹುಡುಕುತ್ತ ಕೊನೆಯಲ್ಲಿ ಜೊತೆ ಸೇರುವ, ನೋಡಲೇಬೇಕಾದ ಬ್ಲಾಕ್ ಬಸ್ಟರ್ ಚಿತ್ರ. ಈ ಕ್ಲೌನ್
ಮೀನಿನ ಸೆಕ್ಸ್ ಮತ್ತು ಜೀವನ ಬಹಳ ವಿಚಿತ್ರ. ಪ್ರತಿಯೊಂದು ಕ್ಲೌನ್ ಮೀನು ಹುಟ್ಟುವಾಗ ಗಂಡಾಗಿರುತ್ತದೆ.

ನಿಜ, ನೀವು ಈ ವಾಕ್ಯವನ್ನು ಸರಿಯಾಗಿಯೇ ಓದಿದಿರಿ. ಕ್ಲೌನ್ ಫಿಶ್‌ಗೆ ಹೆಣ್ಣು ಹುಟ್ಟುವುದೇ ಇಲ್ಲ. ಹುಟ್ಟಿದ ಮಗು ಗಂಡೋ ಹೆಣ್ಣೋ ಎಂದು ಕೇಳುವ ಪ್ರಶ್ನೆಯೇ ಅಲ್ಲಿಲ್ಲ, ಹುಟ್ಟುವಾಗ ಎಲ್ಲವೂ ಗಂಡೇ. ಹಾಗಾದಲ್ಲಿ ಈ ಮೀನುಗಳ ಸಂತಾನೋತ್ಪತ್ತಿ ಹೇಗೆ ಎನ್ನುವುದು ಸಹಜ ಪ್ರಶ್ನೆ. ಈ ರೀತಿ ಗಂಡು ಕ್ಲೌನ್ ಮೀನುಗಳು ಗುಂಪಿನಲ್ಲಿ ಜೊತೆಯಾಗಿ ಬಾಳಲು ಶುರುಮಾಡುತ್ತವೆ. ಈ ಗುಂಪಿನಲ್ಲಿ ಯಾವ ಮೀನು ದೇಹದಲ್ಲಿ ದೊಡ್ಡದಿರುತ್ತದೆಯೋ ಅದು ಕ್ರಮೇಣ ಹೆಣ್ಣಾಗಿ ದೇಹ ಬದಲಾವಣೆ ಮಾಡಿಕೊಳ್ಳುತ್ತದೆ. ಮೀನುಗಳಲ್ಲಿ ದೊಡ್ಡ ಮೀನುಗಳಿಗೆ ಹೆಚ್ಚಿಗೆ ಮೊಟ್ಟೆಯಿಡುವ ಸಾಮರ್ಥ್ಯ. ಅಲ್ಲಿ ವೀರ್ಯ ಅಗ್ಗ.

ಒಂದು ಚಿಕ್ಕ ಮೀನು ಸಾವಿರ ವೀರ್ಯಗಳನ್ನು ಉತ್ಪಾದಿಸಬಲ್ಲದು. ಆದರೆ ಸಾವಿರ ಮೊಟ್ಟೆಯನ್ನು ಹೊರಲು ಗಟ್ಟಿ ಮತ್ತು ದೊಡ್ಡ ದೇಹದ ಅವಶ್ಯಕತೆಯಿರುತ್ತದೆ. ಕ್ಲೌನ್ ಮೀನು ಪ್ರತೀ ವಾರ ನೂರರಿಂದ ಒಂದೂವರೆ ಸಾವಿರ ಮೊಟ್ಟೆ ಇಡಬಲ್ಲದು. ಈ ರೀತಿ ದೊಡ್ಡ ಗಾತ್ರದ ಹೆಣ್ಣಾಗಿ ಮಾರ್ಪಾಡು ಹೊಂದಿದ ಮೀನು ತನ್ನ ಗಂಡು ಸಂಗಾತಿಯನ್ನು ಸದಾ ಪೀಡಿಸುತ್ತಿರುತ್ತದೆ. ಅದೇ ಸಮಯದಲ್ಲಿ ಈ ಗಂಡು ಮೀನು ಉಳಿದ ಚಿಕ್ಕ ಗಂಡು ಮೀನುಗಳನ್ನು ತನ್ನ ಹೆಣ್ಣು ಸಂಗಾತಿಯ ಹತ್ತಿರ
ಸುಳಿಯದಂತೆ ನೋಡಿಕೊಳ್ಳುತ್ತದೆ. ಈ ರೀತಿ ಒಂದು ಗುಂಪಿನಲ್ಲಿ ಉಳಿದ ಚಿಕ್ಕ ಗಂಡು ಮೀನುಗಳಿಗೆ ಸಂಗಾತಿಯಿರದಂತೆ ನೋಡಿಕೊಳ್ಳುತ್ತದೆ.

ಕೆಲ ಸಮಯದ ನಂತರ, ಗುಂಪಿನಲ್ಲಿರುವ ಹೆಣ್ಣು ಮೀನು ಸತ್ತ ನಂತರ ಅದರ ಸಂಗಾತಿ ಗಂಡು ಮೀನು ತನ್ನ ದೇಹವನ್ನು ಬಹಳ ಕಡಿಮೆ ಸಮಯದಲ್ಲಿ ಹೆಣ್ಣಾಗಿ ಬದಲಾಯಿಸಿಕೊಳ್ಳುತ್ತದೆ ಮತ್ತು ಇನ್ನೊಂದು ಬಲಿಷ್ಠ ಗಂಡನ್ನು ತನ್ನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಹೀಗೆ ಈ ಒಂದು ಗುಂಪಿನಲ್ಲಿರುವ ಕ್ಲೌನ್
ಮೀನುಗಳು ಒಂದಾದ ನಂತರ ಒಂದರಂತೆ ಸರತಿಯಲ್ಲಿ ಮೊದಲು ಗಂಡಾಗಿ ಆಮೇಲೆ ಹೆಣ್ಣಾಗಿ ಸಂತಾನೋತ್ಪತ್ತಿ ಯಲ್ಲಿ ತೊಡಗಿಕೊಳ್ಳುತ್ತವೆ. ಈ ಫೈಂಡಿಂಗ್ ನೀಮೋ ಚಲನಚಿತ್ರ ಬಂದ ನಂತರ ಜಗತ್ತಿನಾದ್ಯಂತ ಈ ಕ್ಲೌನ್ ಮೀನನ್ನು ಸಾಕುವವರ ಸಂಖ್ಯೆ ಒಮ್ಮಿಂದೊಮ್ಮೆಲೆ ಹೆಚ್ಚಿದೆ.

ಇದರ ತರುವಾಯ ರೀಫ್ ಗಳಲ್ಲಿ ಈ ಮೀನನ್ನು ಹಿಡಿಯುವುದು ಮತ್ತು ಅದನ್ನು ಮಾರುಕಟ್ಟೆಯಲ್ಲಿ ಮಾರುವುದು ಕೂಡ ಎಲ್ಲಿಲ್ಲದಂತೆ ಹೆಚ್ಚಿದೆ. ಇಂದು ಕ್ಲೌನ್ ಮೀನು ಅತಿ ಹೆಚ್ಚು ಮಾರಾಟವಾಗುವ ಮೀನುಗಳಲ್ಲಿ ಒಂದು. ಈ ರೀತಿ ಈ ಮೀನುಗಳನ್ನು ಹಿಡಿಯುವಾಗ, ನಂತರ ಮಾರಾಟ ಮಾಡುವಾಗ ಅದರ ಗಾತ್ರಕ್ಕನು ಗುಣವಾಗಿ ಅದನ್ನು ವರ್ಗೀಕರಿಸಿ ಮಾರುವುದು ನಡೆಯುತ್ತದೆ. ಇಲ್ಲಿ ಸೂಕ್ಷ್ಮ ಅರಿವಿನ ಕೊರತೆಯಿಂದಾಗಿ ಹೆಣ್ಣು ಮೀನುಗಳನ್ನು ಮತ್ತು ಗಂಡು ಮೀನುಗಳನ್ನು ಬೇರ್ಪಡಿಸಲಾಗುತ್ತದೆ.

ದೊಡ್ಡ ಗಾತ್ರದ ಕ್ಲೌನ್ ಮೀನುಗಳಿಗೆ ಹೆಚ್ಚಿನ ಬೇಡಿಕೆ. ಹಾಗಾಗಿ ಹೆಣ್ಣು ದೇಹವುಳ್ಳ ಮೀನುಗಳನ್ನಷ್ಟೇ ಸಮುದ್ರದಿಂದ ಹಿಡಿಯುವುದರಿಂದ ಕ್ಲೌನ್ ಮೀನಿನ
ಜೀವನ ಚಕ್ರವೇ ಸಂಪೂರ್ಣವಾಗಿ ಬುಡಮೇಲಾಗಿ ಬಿಡುತ್ತದೆ. ಇದರಿಂದಾಗಿ ಅಲ್ಲಿ ಗಂಡು ಹೆಣ್ಣಿನ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗುವುದರ ಜೊತೆ ಅಲ್ಲಿ ಹಿಡಿಯದೇ ಬಿಟ್ಟ, ಇನ್ನೂ ಬೆಳೆಯದ ಗಂಡು ಮೀನುಗಳನ್ನು ಒತ್ತಾಯಕ್ಕೆ ಅಪ್ರಬುದ್ಧ ಸ್ಥಿತಿಯಲ್ಲಿ ಹೆಣ್ಣಾಗಿ ಬದಲಾಗುವಂಥ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿ ಒಂದು ಚಿಕ್ಕ ಮನುಷ್ಯ ಕಿತಾಪತಿಯಿಂದ, ನಮ್ಮ ನೀಮೋ ಮೀನು ಸಾಕುವ ಹವ್ಯಾಸದಿಂದಾಗಿ ಈ ಮೀನಿನ ಸಂತತಿಯ ಅವಸಾನಕ್ಕೆ ನಾವು ಕರಣವಾಗುತ್ತೇವೆ. ಅದಲ್ಲದೇ ಈ ಮೀನಿನ ಜೀವನಕ್ಕೆ ಕನೆಕ್ಟ್ ಆಗಿರುವ ಉಳಿದೆಲ್ಲ ಮೀನು, ಜಲಚರ ಜೀವಿಗಳ ಜೀವನವೂ ಬುಡಮೇಲಾಗುತ್ತದೆ.

ಲಾಬ್ಸ್ಟರ್ (ನಳ್ಳಿ) ಅನ್ನು ನೀವು ನೋಡಿರಬಹುದು. ಹತ್ತು ಕಾಲು, ಉದ್ದ ಮೀಸೆಯುಳ್ಳ – ಮೀನು, ಏಡಿ, ಶೆಟ್ಲಿ, ಆಮೆ, ಜೇಡ ಈ ಐದು ಜೀವಿಗಳನ್ನು ಒಟ್ಟಿಗೆ ಸೇರಿಸಿ – ಒಂದೊಂದರಿಂದ ಒಂದೊಂದು ಅಂಗವನ್ನು ತೆಗೆದು ಜೋಡಿಸಿದಂತಿರುವ ಜೀವಿ ಇದು. ಲಾಬ್ಸ್ಟರ್ ಎಂದರೆ ಮುಂದಿನ ಭಾಗ ಏಡಿಯಂತೆ, ತಲೆ ಭಾಗ ಆಮೆ ಯಂತೆ ಗಟ್ಟಿ ಶೆಲ್ ಇರುವ ಇದರ ಮುಖ ಭಾಗ ಶೆಟ್ಲಿಯಂತೆ, ಕಾಲುಗಳು ಜೇಡದಂತೆ ಮತ್ತು ಬಾಲ ಮೀನಿನಂತೆ. ವಿಚಿತ್ರ ಲಕ್ಷಣವಾದ ಜೀವಿಯಾದರೂ ಇದು ವಿಲಕ್ಷಣದ ಕಾರಣದಿಂದ ಮನೆಯಲ್ಲಿ, ಅಕ್ವೇರಿಯಂನಲ್ಲಿ ಸಾಕುವ ಜಲಚರವಲ್ಲ.

ಆದರೆ ಸಮುದ್ರಾಹಾರ ಪ್ರಿಯರಿಗೆ ಇದೆಂದರೆ ಒಂಚೂರು ಜಾಸ್ತಿಯೇ ಇಷ್ಟ. ಇಂಥ ವಿಲಕ್ಷಣ ಸಮುದ್ರಜೀವಿ ತನ್ನ ನಿಜ ಜೀವನದಲ್ಲಿ ಅತ್ಯಂತ ರೋಮ್ಯಾಂಟಿಕ್. ಸಂಯೋಗದ ಸಮಯದಲ್ಲಿ ಹೆಣ್ಣು ಲಾಬ್ಸ್ಟರ್ ಬಯಸುವುದು ದೊಡ್ಡ ಗಾತ್ರದ ಗಂಡು ಲಾಬ್ಸ್ಟರ್ ಅನ್ನು. ಆದರೆ ಗಂಡು ಲಾಬ್ಸ್ಟರ್ ತುಂಬಾ ಆಕ್ರಮಣಕಾರಿ. ಬಲಿಷ್ಠ ಗಂಡು ಲಾಬ್ಸ್ಟರ್‌ನ ಸ್ವಭಾವ ಹೇಗೆಂದರೆ ಅವಕ್ಕೆ ಗಂಡು ಹೆಣ್ಣಿನ ಭೇದವಿಲ್ಲ. ಯಾವುದೇ ಲಾಬ್ಸ್ಟರ್ ಹತ್ತಿರ ಬಂದರೂ ಗಂಡು ಎಗರಿ ಬೀಳುತ್ತದೆ, ಹೊಡೆದಾಟಕ್ಕೆ ತಯಾರಾಗಿಬಿಡುತ್ತದೆ. ಆದರೆ ಹೆಣ್ಣು ಲಾಬ್ಸ್ಟರ್‌ಗೆ ಮಾತ್ರ ಇದೇ ಖಳನಾಯಕನಂಥ ಗಂಡು ಬೇಕು. ಅದಕ್ಕಾಗಿ ಹೆಣ್ಣು ಲಾಬ್ಸ್ಟರ್ ಸರಿಯಾದ ಸಮಯಕ್ಕೆ ಕಾಯುತ್ತ ಗಂಡಿನ ಮನೆಯ ಎದುರು ರೌಂಡ್ ಹಾಕುತ್ತಿರುತ್ತದೆ.

ಲಾಬ್ಸ್ಟರ್‌ಗಳು ತಮ್ಮ ಮೇಲ್ಮೆ ನ ಕವಚ (ಶೆಲ) ಅನ್ನು ವರ್ಷಕ್ಕೆ ನಾಲ್ಕೆ ದು ಬಾರಿ ಕಳಚಿ ಹೊಸತನ್ನು ಬೆಳೆಸಿಕೊಳ್ಳುತ್ತವೆ. ಈ ರೀತಿ ಶೆಲ್ ಅನ್ನು ಕಳಚಿಕೊಳ್ಳುವ
ಸಮಯ ಗಂಡು ಲಾಬ್ಸ್ಟರ್‌ನ ಅತ್ಯಂತ ದುರ್ಬಲ ಸಮಯ. ಈ ರೀತಿ ಶೆಲ್ ಕಳಚಿಕೊಂಡ ತಕ್ಷಣ ಅಂಗಳದಲ್ಲಿ ಓಡಾಡುತ್ತಿರುವ ಹೆಣ್ಣು ಲಾಬ್ಸ್ಟರ್ ಒಂಚೂರು ಧೈರ್ಯ ಮಾಡಿ ಗಂಡು ಲಾಬ್ಸ್ಟರ್‌ನ ಮನೆಯೊಳಗೆ ಕಾಲಿಡುತ್ತವೆ ಮತ್ತು ತನ್ನ ಪ್ರೇಮ ನಿವೇದನೆಯನ್ನು ಗಂಡಿನ ಮುಂದಿಡುತ್ತದೆ. ಈ ಪ್ರೇಮ ನಿವೇದನೆ ಮಾಡುವ ರೀತಿ ಬಹಳ ಮಜವಿದೆ. ಹೆಣ್ಣು ಲಾಬ್ಸ್ಟರ್ ಮೂತ್ರವನ್ನು ಗಂಡಿನ ಮುಖಕ್ಕೆ ಪ್ರೋಕ್ಷಣೆ ಮಾಡುತ್ತದೆ.

ಲಾಬ್ಸ್ಟರ್‌ನ ಮೂತ್ರ ಕೋಶ ತಲೆಯಲ್ಲಿ ಮೆದುಳಿನ ಮೇಲ್ಭಾಗದಲ್ಲಿರುತ್ತದೆ. ಕಣ್ಣಿನ ಕೆಳಗಿನ ರಂಧ್ರಗಳಲ್ಲಿ ಹೆಣ್ಣು ಗಂಡಿನ ಮುಖಕ್ಕೆ ಮತ್ತೆ ಮತ್ತೆ ಮೂತ್ರದ ಪಿಚಕಾರಿ
ಹಾರಿಸುತ್ತದೆ. ಈ ಕೆಲಸವನ್ನು ಕೆಲವು ದಿನ ತಪ್ಪದೇ ಹೆಣ್ಣು ಮಾಡುತ್ತದೆ. ಖಳನಾಯಕನಂತಿರುವ ಗಂಡು ಲಾಬ್ಸ್ಟರ್ ಕ್ರಮೇಣ ಹೆಣ್ಣಿನ ಪ್ರೇಮ ಮಿಶ್ರಿತ ಮೂತ್ರಕ್ಕೆ ಮಾರುಹೋಗಿ ಕ್ರಮೇಣ ಅಪ್ರತಿಮ ಪ್ರೇಮಿಯಾಗಿ ಬದಲಾಗುತ್ತದೆ. ಈ ರೀತಿ ಒಂದು ವಾರದೊಳಗೆ ಗಂಡು ಹೆಣ್ಣನ್ನು ಮನೆಯೊಳಕ್ಕೆ ಬಿಟ್ಟುಕೊಂಡು ಗಂಡ ಹೆಂಡತಿಯರಂತೆ ಬಾಳಲು ಶುರುಮಾಡುತ್ತವೆ.

ನಂತರ ಹೆಣ್ಣು ಕೂಡಲು ತಯಾರಾದ ಸಮಯದಲ್ಲಿ ತನ್ನ ಶೆಲ್ ಅನ್ನು ಕಳಚಿ ಗಂಡಿನೊಂದಿಗೆ ಕೂಡುತ್ತದೆ. ಈ ಕ್ಷಣದಲ್ಲಿ ಹೆಣ್ಣು ಶೆಲ್ ಇಲ್ಲದ ಕಾರಣದಿಂದ
ದುರ್ಬಲ. ಹಾಗಾಗಿ ಮೂಲತಃ ಖಳನಾಯಕನಾದ, ಆಮೇಲೆ ಪ್ರೇಮಿಯಾದ ಗಂಡು ಲಾಬ್ಸ್ಟರ್ ಹೆಣ್ಣನ್ನು ಮನೆಯ ಹೊರಗೆ ನಿಂತು ಕಾಯುತ್ತದೆ. ಮೊಟ್ಟೆಯಿಡುವ
ಸಮಯ ಬಂದ ಕೂಡಲೇ ಹೆಣ್ಣು ಎದ್ದು ನಿಲ್ಲುತ್ತದೆ ಮತ್ತು ಮನೆಬಿಟ್ಟು ಹೊರಟುಬಿಡುತ್ತದೆ. ಮತ್ತೆ ಈ ಹೆಣ್ಣು ಗಂಡು ತನ್ನಿಡೀ ಜೀವನದಲ್ಲಿ ಒಂದಕ್ಕೊಂದು ಭೇಟಿಯೇ
ಆಗುವುದಿಲ್ಲ. ಭಗ್ನ ಪ್ರೇಮಿ ಗಂಡು ತನ್ನ ಆಕ್ರಮಣಕಾರಿ ಸ್ವಭಾವವನ್ನು ಪುನಃ ಪಡೆಯುತ್ತದೆ. ಆಗ ಇನ್ನೊಂದು ಹೆಣ್ಣು ಹೊಂಚು ಹಾಕಿ ಮನೆಯಂಗಳಕ್ಕೆ ಬಂದು ನಿಲ್ಲುತ್ತದೆ. ಹೀಗೆ ಈ ಪ್ರೇಮ ಚಕ್ರ ಮುಂದುವರಿಯುತ್ತದೆ.

ಈ ಲಾಬ್ಸ್ಟರ್ ಪ್ರೇಮವಿವಾಹದಲ್ಲಿ ಅತ್ಯಂತ ಮಹತ್ವದ್ದು ಪ್ರೇಮನಿವೇದನೆ. ಪ್ರೇಮನಿವೇದನೆಯಲ್ಲಿ ಮುಖ್ಯ ಪಾತ್ರ ಮೂತ್ರದ್ದು. ಅಲ್ಲಿ ಮೂತ್ರದಲ್ಲಿನ ರಾಸಾಯನಿಕ ಮತ್ತು ಆ ರಾಸಾಯನಿಕದ ಗ್ರಹಿಕೆ ಇಡೀ ಸಂಬಂಧವನ್ನು ನಿರ್ದೇಶಿಸುತ್ತವೆ. ಮನುಷ್ಯನ ಅತಿ ವ್ಯವಹಾರದಿಂದಾಗಿ ಇಂದು ಸಮುದ್ರದ ನೀರಿನಲ್ಲಿನ ಆಮ್ಲದ ಪ್ರಮಾಣದಲ್ಲಿ ಏರಿಳಿತ ವಾಗುತ್ತಿದೆ. ಇದರಿಂದಾಗಿ ಈ ಲಾಬ್ಸ್ಟರ್‌ನ ಮೂತ್ರದ ರಾಸಾಯನಿಕದಲ್ಲಿ ಬದಲಾವಣೆಯಾಗಿರುವು ದಲ್ಲದೆ ಗಂಡು ಲಾಬ್ಸ್ಟರ್‌ನ ರುಚಿಯ ಗ್ರಹಿಕೆಯಲ್ಲಿ ಕೂಡ ವ್ಯತ್ಯಯವಾಗಿದೆ. ಇದರಿಂದಾಗಿ ಆಮ್ಲದ ಪ್ರಮಾಣ ಹೆಚ್ಚಿರುವ ಜಾಗಗಳಲ್ಲಿ, ಸಮುದ್ರ ತಟಕ್ಕೆ ಹತ್ತಿರವಿರುವ ಸ್ಥಳಗಳಲ್ಲಿ ಗಂಡು ಹೆಣ್ಣು ಒಬ್ಬರ ಸಂದೇಶವನ್ನು ಇನ್ನೊಬ್ಬರು ಗ್ರಹಿಸುವುದರಲ್ಲಿ ತಪ್ಪಿ ಬೀಳುತ್ತಿವೆ.

ಇದನ್ನು ಕೆಮಿಕಲ್ ಸಿಗ್ನಲ್ಲಿಂಗ್ ಎನ್ನುತ್ತಾರೆ. ಈ ಸಿಗ್ನಲ್ – ಪ್ರೇಮನಿವೇದನೆಗೆ ಈ ಎಲ್ಲ ವಾತಾವರಣದ ಬದಲಾವಣೆಯಿಂದ ದೊಡ್ಡ ಹೊಡೆತ ಬಿದ್ದು ಲಾಬ್ಸ್ಟರ್ ಸಂಕುಲ ನಾಶಕ್ಕೆ ನಾವೆಲ್ಲ ಕಾರಣವಾಗುತ್ತಿದ್ದೇವೆ. ಇನ್ನು ಸಮುದ್ರದಾಳಕ್ಕೆ ಹೋದಂತೆ ಸೆಕ್ಸ್ ಇನ್ನಷ್ಟು ವಿಚಿತ್ರವಾಗುತ್ತ ಸಾಗುತ್ತದೆ. ಆಂಗ್ಲೆರ್ ಫಿಶ್. ಈ ಮೀನು
ಸಮುದ್ರದ ಆಳದಲ್ಲಿ ಸುಮಾರು ಮೂರು ಸಾವಿರ ಫೀಟ್ ಆಳದಲ್ಲಿ ಬದುಕುವ ಮೀನಿನ ಪ್ರಭೇದ. ಸೂರ್ಯ ಕಿರಣಗಳೂ ತಲುಪದಷ್ಟು ಆಳ ಅದು. ಆಂಗ್ಲೆರ್
ಮೀನುಗಳಲ್ಲಿ ಗಂಡೆಂದರೆ ಅತ್ಯಂತ ದುರ್ಬಲ. ಅವಕ್ಕೆ ತಮ್ಮ ಆಹಾರವನ್ನು ಪಡೆಯುವ ತಾಕತ್ತು ಕೂಡ ಇರುವುದಿಲ್ಲ. ಹೆಣ್ಣು ಮೀನುಗಳು ಬಲಿಷ್ಠ ಮತ್ತು ಗಂಡಿಗಿಂತ ಹತ್ತು ಪಟ್ಟು ಹೆಚ್ಚಿನ ಗಾತ್ರ. ಗಂಡು ಮೀನಿಗೆ ಬದುಕಬೇಕೆಂದರೆ ತಕ್ಷಣ ಒಂದು ಹೆಣ್ಣನ್ನು ಹುಡುಕಿಕೊಳ್ಳಬೇಕು. ಹೆಣ್ಣು ಆಂಗ್ಲೆರ್ ಮೀನು ತನ್ನ ದೇಹದಿಂದ ಕೆಮಿಕಲ್ ಬಿಡುಗಡೆ ಮಾಡುತ್ತಿರುತ್ತದೆ. ಅದು ಗಂಡಿಗೆ ಆಹ್ವಾನ. ಈ ವಾಸನೆ ಯನ್ನು ಗ್ರಹಿಸುತ್ತ ಚಿಕ್ಕ ಗಂಡು ಮೀನು ಹೆಣ್ಣಿನತ್ತ ಆ ಕತ್ತಲೆಯ ಸಾಮ್ರಾಜ್ಯದಲ್ಲಿ ಈಜುತ್ತ ಸಾಗುತ್ತದೆ. ಹೆಣ್ಣು ಸಿಕ್ಕ ಕೂಡಲೇ ಗಂಡು ಹೋಗಿ ಹೆಣ್ಣನ್ನು ಕಚ್ಚುತ್ತದೆ.

ಹೀಗೆ ಕಚ್ಚಿದ ಕೂಡಲೇ ಅಂದು ಕೆಮಿಕಲ್ ರಿಯಾಕ್ಷನ್ ಶುರುವಾಗುತ್ತದೆ. ಹೆಣ್ಣನ್ನು ಕಚ್ಚಿದಾಕ್ಷಣ ಗಂಡಿನ ಹಲ್ಲಿನ ದವಡೆ ಕರಗಲು ಆರಂಭವಾಗಿ ಅಲ್ಲಿ ಅಂಗಾಂಶ ಬೆಳೆಯಲು ಆರಂಭವಾಗುತ್ತದೆ. ಈ ಮೂಲಕ ಗಂಡಿನ ಬಾಯಿ ಹೆಣ್ಣಿನ ದೇಹಕ್ಕೆ ವೆಲ್ಡ ಆಗಿ ಬಿಡುತ್ತದೆ. ನಂತರ ಗಂಡಿನ ಬಾಯಿ ಹೆಣ್ಣಿನ ದೇಹಕ್ಕೆ ಫ್ಯೂಸ್ ಆಗಿ, ರಕ್ತಪರಿಚಲನೆ ಒಂದಾಗಿ ಗಂಡಿನ ದೇಹ ಹೆಣ್ಣಿನ ದೇಹಕ್ಕೆ ಅಂಟಿಕೊಂಡ ಒಂದು ಬೆರಳಿನಂತೆ ಕಾಣಿಸುತ್ತದೆ. ಗಂಡಿನ ದೇಹದೊಳಗಿನ ಒಂದೊಂದೇ ಅಂಗಾಂಗ ಕರಗಲು ಶುರುವಾಗುತ್ತವೆ.

ಹೀಗೆ, ವೃಷಣವೊಂದನ್ನು ಬಿಟ್ಟು ಗಂಡಿನ ಉಳಿದೆಲ್ಲ ಅಂಗಾಂಗಗಳು ಕರಗಿಹೋಗುತ್ತವೆ. ಗಂಡಿನ ದೇಹದ ವೃಷಣ ಮಾತ್ರ ಉಳಿದುಕೊಂಡು ಅವು ವೀರ್ಯೋ ತ್ಪಾದನೆಯಲ್ಲಿ ತೊಡಗಿಕೊಳ್ಳುತ್ತವೆ. ಇದು ಗಂಡು ಜೀವಿಯೊಂದು ಹೆಣ್ಣಿಗೆ ಅಂಟಿಕೊಂಡು ಶಾಶ್ವತ ವೀರ್ಯೋತ್ಪಾದನೆಯ ಅಂಗದಂತಾಗಿಬಿಡುತ್ತದೆ. ಇಲ್ಲಿ ಕೂಡ ಕೆಮಿಕಲ್ ಸಿಗ್ನಲಿಂಗ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಮುದ್ರದಗುವ ಒಂದು ಚಿಕ್ಕ ಕೆಮಿಕಲ್ ಬದಲಾವಣೆ ಗಂಡು ಹೆಣ್ಣನ್ನು ತಲುಪದಂತೆ ಮಾಡಿಬಿಡ ಬಹುದು.

ಇಂಥದ್ದೇ ಹತ್ತೆಂಟು ವಿಚಿತ್ರ ಸಮುದ್ರದಾಳದ ಸೆಕ್ಸ್ ಉಲ್ಲೇಖಗಳನ್ನು Sex in the Sea by Marah Hardt’’ ಪುಸ್ತಕದಲ್ಲಿ ಓದಬಹುದು. ನೆಲವಿರ ಬಹುದು ಅಥವಾ ಸಮುದ್ರವಿರಬಹುದು – ಈ ಭೂಮಿಯಲ್ಲಿ ಪ್ರಕೃತಿಯ ಸಮತೋಲನ ಅತ್ಯಂತ ಸೂಕ್ಷ್ಮದ ವಿಚಾರ. ನಾನಿಲ್ಲಿ ಉದಾಹರಿಸಿದ್ದು ಕೇವಲ ಮೂರು ಜೀವಿಗಳ ವಿಚಾರ. ಸಮುದ್ರದಲ್ಲಿ ಎರಡು ಲಕ್ಷ ಜೀವ ವರ್ಗವನ್ನು ಇಲ್ಲಿಯವರೆಗೆ ಗುರುತಿಸಲಾಗಿದೆ. ಅದು ಬಿಟ್ಟು ಇನ್ನೂ ಗುರುತಿಸದ ಕನಿಷ್ಠ ಇಪ್ಪತ್ತು ಲಕ್ಷ ಜೀವ ಪ್ರಭೇದಗಳು ಅಲ್ಲಿವೆ ಎನ್ನುವುದು ಅಂದಾಜು. 0.02 ಮೈಕ್ರೊಮೀಟರ್‌ನಷ್ಟು ಚಿಕ್ಕ ಜೀವಿಗಳೂ ಅಲ್ಲಿವೆ, 35 ಮೀಟರ್ ಉದ್ದದ ಜೀವಿಗಳೂ ಅಲ್ಲಿ ವಾಸಿಸುತ್ತವೆ. ನೆಲದಲ್ಲಿ ಜೀವಿ ಬದುಕಬೇಕೆಂದರೆ ಸಮುದ್ರ ದಲ್ಲಿ ಎಲ್ಲ ಸರಿಯಿರಬೇಕು ಎನ್ನುವುದು ಪ್ರಕೃತಿಯ ಸೂಕ್ಷ್ಮ.

ಈ ರೀತಿಯ ಜೀವ ಜಗತ್ತಿನ ಕೌತುಕದ ಜತೆ, ನಮ್ಮ ಮನುಷ್ಯ ವ್ಯವಹಾರ ಅಲ್ಲಿಯೋ ಒಂದು ಜೀವ ಜೀವದ ನಡುವಿನ ಕೊಂಡಿಯನ್ನು ಕಡಿದುಹಾಕಿ ಶಾಶ್ವತ ಘಾಸಿಗೆ ಕಾರಣ ವಾಗಬಹುದು ಎನ್ನುವುದು ಇಲ್ಲಿನ ಇನ್ನೊಂದು ವಿಚಾರ.

Leave a Reply

Your email address will not be published. Required fields are marked *