Sunday, 15th December 2024

ಬಾಲಿವುಡ್‌ನ ಮೊದಲ ಖಾನ್‌ ಮೊದಲ ದೇಶಭಕ್ತ ಕೂಡ

ಅವಲೋಕನ

ಎಂ.ಜೆ.ಅಕ್ಬರ್‌

ಹಿರಿಯ ಪತ್ರಕರ್ತ, ಮಾಜಿ ಕೇಂದ್ರ ಸಚಿವ

ಯುವಕನಾಗಿದ್ದ ಯೂಸುಫ್(ದಿಲೀಪ್ ಕುಮಾರ್) ತನ್ನ ಬದುಕಿಗೊಂದು ದಾರಿ ಕಂಡುಕೊಳ್ಳಲು ಅನೇಕ ಕೆಲಸಗಳನ್ನು ಪ್ರಯತ್ನಿಸಿದ್ದ. ಆದರೆ ಯಾವುದೂ ಕೈಗೂಡಿರಲಿಲ್ಲ. ನಂತರ ಒಮ್ಮೆ ಬಾಂಬೆ ಟಾಕೀಸ್‌ನ ಮಾಲಿಕರಾದ ಪ್ರಸಿದ್ಧ ನಟಿ ದೇವಿಕಾ ರಾಣಿ ಹಾಗೂ ಆಕೆಯ ಪತಿ ಹಿಮಾಂಶು ರೈ ಅವರ ಭೇಟಿಯಾ ಯಿತು. ಅವರು ಯೂಸುಫ್’ನ ಸೌಂದರ್ಯ, ವಾಕ್ಚಾತುರ್ಯ, ನಡಿಗೆ ಹಾಗೂ ಪ್ರತಿಭೆಗೆ ಮಾರುಹೋಗಿ ಆಗಿನ್ನೂ ಶೈಶವಾವಸ್ಥೆಯಲ್ಲಿದ್ದ ಚಿತ್ರರಂಗದಲ್ಲಿ ಕೆಲಸ ಕೊಟ್ಟರು.

ಬದುಕು ಕೂಡ ಸಾವಿನಷ್ಟೇ ಗೊಂದಲದಿಂದ ಕೂಡಿರಬಹುದು. ಒಮ್ಮೊಮ್ಮೆ ಅದು ನಮಗೆ ದಿಕ್ಕು ತೋಚದಂತೆ ಮಾಡಿಬಿಡುತ್ತದೆ. ಇದ್ದಕ್ಕಿದ್ದಂತೆ ಘಟಿಸುವ
ಯಾವುದೋ ಒಂದು ಆಘಾತಕಾರಿ ಘಟನೆ, ನಮ್ಮ ಕಲ್ಪನೆಗೂ ಸಿಗದಂತೆ ಇನ್ನಾವುದೋ ದಾಳದ ರೂಪದಲ್ಲಿ ಅವಿತುಕೊಂಡಿದ್ದ ಅದರ ಕಾರಣ, ನಮ್ಮ
ನಿಯಂತ್ರಣಕ್ಕೆ ಸಿಗದಂತೆ ಚಾಚಿಕೊಂಡ ಅದರ ಪರಿಣಾಮ ಇವೆಲ್ಲವೂ ನಮ್ಮನ್ನು ಹಿಂದಿನ ಎಲ್ಲಾ ನಂಬಿಕೆಗಳಿಂದ ಹೊರಗೆ ತಂದು ಇನ್ನಾವುದೋ ಅಜ್ಞಾತ ಸಾಗರವೊಂದರಲ್ಲಿ ಎಸೆಯಬಹುದು.

1947ರಲ್ಲಿ ಭಾರತದ ವಿಭಜನೆಯಾದಾಗ ಮೊಹಮ್ಮದ್ ಯೂಸುಫ್ ಖಾನ್‌ಗೆ 28 ವರ್ಷ. ಭಾರತ ಒಡೆದು ಪಾಕಿಸ್ತಾನ ಸೃಷ್ಟಿಯಾದಾಗ ಅವರ ಹುಟ್ಟೂರು ಪೇಶಾವರವು ಮುಸ್ಲಿಂ ಪಾಕಿಸ್ತಾನದ ಭಾಗವಾಯಿತು. ಅವರ ತಂದೆ ಲಾಲಾ ಗುಲಾಮ್ ಸರ್ವಾರ್ ಖಾನ್ ಹಣ್ಣಿನ ವ್ಯಾಪಾರಿಯಾಗಿದ್ದರು. ಪೇಶಾವರದಲ್ಲಿ ಅವರಿಗೊಂದು ಹಣ್ಣಿನ ತೋಟವೂ ಇತ್ತು.

1930ರ ದಶಕದಲ್ಲಿ ಅವರು ತಮ್ಮ ಕುಟುಂಬವನ್ನು ಮಹಾರಾಷ್ಟ್ರಕ್ಕೆ ಕರೆದುಕೊಂಡು ಬಂದು ನೆಲೆಗೊಂಡಿದ್ದರು. ಕುಟುಂಬದ ಸರ್‌ನೇಮ್ ‘ಲಾಲಾ ಬಗ್ಗೆ ಅವರಿಗೆ ಬಹಳ ಹೆಮ್ಮೆ. ವಾಯವ್ಯ ಪ್ರಾಂತ್ಯದಲ್ಲಿ ಅದು ಜಾತ್ಯತೀತ ಸೌಹಾರ್ದತೆಯ ಪ್ರತೀಕವಾಗಿತ್ತು. ಆದರೆ ಈ ಸೌಹಾರ್ದ ಸಮಾಜದಲ್ಲಿ ರಾಜಕೀಯದ ವಿಷ ಹರಿಯತೊಡಗಿತು. ಭಾರತಕ್ಕೆ ರೈಲ್ವೆಯನ್ನು ಪರಿಚಯಿಸಿದವರು ಬ್ರಿಟಿಷರು ಎಂಬುದು ಶಾಲೆಯ ಮಕ್ಕಳಿಗೂ ಗೊತ್ತು. ದುರದೃಷ್ಟವಶಾತ್ ಇಂದಿಗೂ ನಮ್ಮ ಶಾಲಾ ಮಕ್ಕಳಿಗೆ ಬ್ರಿಟಿಷರು ರೈಲ್ವೆಯ ಮೂಲಕ ಈ ದೇಶದಲ್ಲಿ ಮತೀಯವಾದವನ್ನು ಕೂಡ ಬಿತ್ತಿದರು ಎಂಬುದನ್ನು ಹೇಳಿಕೊಡುತ್ತಿಲ್ಲ. ಫ್ರಂಟಿಯರ್ ಮೇಲ್‌ನಲ್ಲಿ
ಪ್ರಯಾಣಿಸುವಾಗ ಯೂಸುಫ್’ಗೆ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂಗಳಿಂದ ಚಹಾ ಮಾರುವವರು ‘ಹಿಂದು ಚಾಯ್ ‘ಮುಸ್ಲಿಂ ಚಾಯ್ ಎಂದು ಕೂಗುವುದು
ಕೇಳಿಸುತ್ತಿತ್ತು.

ಪೇಶಾವರದಿಂದ ಹಿಡಿದು ಢಾಕಾವರೆಗೆ ನೀರಿನ ನಲ್ಲಿಗಳಿಗೂ ‘ಹಿಂದು ಪಾನಿ ‘ಮುಸ್ಲಿಂ ಪಾನಿ ಎಂದು ಲೇಬಲ್ ಅಂಟಿಸಿಡುತ್ತಿದ್ದರು. ಯುವಕನಾಗಿದ್ದ ಯೂಸುಫ್ ತನ್ನ ಬದುಕಿಗೊಂದು ದಾರಿ ಕಂಡುಕೊಳ್ಳಲು ಅನೇಕ ಕೆಲಸಗಳನ್ನು ಪ್ರಯತ್ನಿಸಿದ್ದ. ಆದರೆ ಯಾವುದೂ ಕೈಗೂಡಿರಲಿಲ್ಲ. ನಂತರ ಒಮ್ಮೆ ಬಾಂಬೆ ಟಾಕೀಸ್‌ನ
ಮಾಲಿಕರಾದ ಪ್ರಸಿದ್ಧ ನಟಿ ದೇವಿಕಾ ರಾಣಿ ಹಾಗೂ ಆಕೆಯ ಪತಿ ಹಿಮಾಂಶು ರೈ ಅವರ ಭೇಟಿ ಯಾಯಿತು. ಅವರು ಯೂಸುಫ್’ನ ಸೌಂದರ್ಯ, ವಾಕ್ಚಾ ತುರ್ಯ, ನಡಿಗೆ ಹಾಗೂ ಪ್ರತಿಭೆಗೆ ಮಾರುಹೋಗಿ ಆಗಿನ್ನೂ ಶೈಶವಾವಸ್ಥೆಯಲ್ಲಿದ್ದ ಚಿತ್ರರಂಗದಲ್ಲಿ ಕೆಲಸ ಕೊಟ್ಟರು. ದೇವಿಕಾ ರಾಣಿ (ನಂತರ ದೇವಿಕಾ ರಾಣಿ ರೋರಿಚ್ ಆದರು, ಬೆಂಗಳೂರಿನಲ್ಲಿರುವ ರೋರಿಚ್ ಎಸ್ಟೇಟ್‌ನ ಒಡತಿ ಈಕೆ) ಒಂದಷ್ಟು ಹೆಸರುಗಳನ್ನು ಮುಂದಿಟ್ಟು, ಸಿನಿಮಾದಲ್ಲಿ ಗುರುತಿಸಿಕೊಳ್ಳಲು ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೋ ಅಂದರು.

ಯೂಸುಫ್ ‘ದಿಲೀಪ್ ಕುಮಾರ್’ ಎಂಬ ಹೆಸರು ಆಯ್ದುಕೊಂಡರು. ಅವರ ಮೊದಲ ಸಿನಿಮಾ ‘ಜ್ವರ್ ಭಾಟಾ’ ಗೆಲ್ಲಲಿಲ್ಲ. 1949ರಲ್ಲಿ ‘ಅಂದಾಜ್’ ಬರದಿದ್ದರೆ
ಬಹುಶಃ ದಿಲೀಪ್ ಕುಮಾರ್ ಭಾರತದಲ್ಲಿ ಮನೆಮಾತಾಗುತ್ತಿರಲಿಲ್ಲ. ಆ ಸಿನಿಮಾದಲ್ಲಿ ಪೇಶಾವರದಲ್ಲೇ ಜನಿಸಿದ ತನ್ನ ಸ್ನೇಹಿತ ರಾಜ್ ಕಪೂರ್ ಜೊತೆ ಅವರು ನಟಿಸಿದ್ದರು. 1947ರಲ್ಲಿ ಯೂಸುಫ್ ಖಾನ್ ಅಲಿಯಾಸ್ ದಿಲೀಪ್ ಕುಮಾರ್ ಭಾರತೀಯ ಚಿತ್ರರಂಗದ ದಂತಕತೆ ಯಾಗುತ್ತಾರೆ ಎಂಬ ಯಾವ ಲಕ್ಷಣಗಳೂ ಇರಲಿಲ್ಲ.

ಆದರೆ, ದೇಶ ವಿಭಜನೆ ಅವರಿಗೆ ಆಯ್ಕೆ ನೀಡಿತು. ಪಾಕಿಸ್ತಾನದ ಚಿತ್ರರಂಗ ಕೂಡ ಪ್ರತಿಭೆಗಳಿಗಾಗಿ ಹಾತೊರೆಯುತ್ತಿತ್ತು. ಆದರೆ, ಇನ್ನಿತರ ಅಸಂಖ್ಯ ಮುಸ್ಲಿಮ ರಂತೆ 1947ರಲ್ಲಿ ಮೊಹಮ್ಮದ್ ಯೂಸುಫ್ ಖಾನ್ ಪಾಕಿಸ್ತಾನದ ಬದಲು ಭಾರತವನ್ನು ಆಯ್ಕೆ ಮಾಡಿಕೊಂಡರು. ಒಂದೇ ಧರ್ಮವನ್ನು ನಂಬಬೇಕು ಎಂಬ ಮಾನಸಿಕ ಸಂಕೋಲೆಗಿಂತ ಜಾತ್ಯತೀತ ಸಮಾಜದ ಬಹು-ಸಂಸ್ಕೃತಿಯ ಸೌಂದರ್ಯ ಅವರನ್ನು ಸೆಳೆದಿತ್ತು. ಅದರೊಂದಿಗೆ ಮುಂಬೈನ ಅದ್ಭುತ ಚಿತ್ರರಂಗದ ಮೊಟ್ಟಮೊದಲ ಖಾನ್ ಭಾರತದ ಮೊದಲ ಅಪ್ರತಿಮ ದೇಶಭಕ್ತ ಕೂಡ ಆದರು. ಈಗ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿವೆ.

ಆದರೆ 1947ರಲ್ಲಿ ಇದ್ದ ಒತ್ತಡಗಳನ್ನು ನಾವು ಮರೆಯಬಾರದು. ದೇಶ ಅಂದು ಉದ್ದೇಶಪೂರ್ವಕವಾಗಿ ಹಚ್ಚಿದ ಬೆಂಕಿಯಲ್ಲಿ ಬೇಯುತ್ತಿತ್ತು. ಹಿಂದು ಹಾಗೂ ಮುಸ್ಲಿಮರ ಜನಸಂಖ್ಯೆ ಹೆಚ್ಚು ಬೆರೆತಿರುವ ಇನ್ನಾವುದೇ ನಗರದಂತೆ ಮುಂಬೈ ಕೂಡ ಸಾಕಷ್ಟು ಅಪಾಯದಲ್ಲಿತ್ತು. ಪಾಕಿಸ್ತಾನವನ್ನು ಆಗಷ್ಟೇ ಒಂದು
ಸಮುದಾಯಕ್ಕೆ ಮಾರಾಟ ಮಾಡಲಾಗಿತ್ತು. ಆ ಸಮುದಾಯಕ್ಕೆ ಅದೊಂದು ಕನಸಿನ ಭೂಮಿಯೆಂಬಂತೆ ಬಿಂಬಿಸಲಾಗಿತ್ತು. ಹಾಗಿರುವಾಗ ಪೇಶಾವರದಲ್ಲಿ ಹುಟ್ಟಿದ ಯುವಕನ ಮನಸ್ಸಿನಲ್ಲೂ ತಾನು ತಾಯ್ನಾಡಿಗೆ ವಲಸೆ ಹೋಗಬೇಕು, ವಾಯವ್ಯ ಪ್ರಾಂತ್ಯದ ತನ್ನ ಹಿಂಡ್ಕೋ ಎಂಬ ಆಕರ್ಷಕ ಭಾಷೆಯ ನೆರಳಿನಲ್ಲಿ ಬದುಕಬೇಕು ಎಂಬ ಯೋಚನೆ ಬರುವುದು ಸಹಜ.

ಆದರೆ, ದಿಲೀಪ್ ಕುಮಾರ್ ಅಂಥ ಎಲ್ಲ ಬಾಹ್ಯ ಆಕರ್ಷಣೆಗಳನ್ನು ಮೀರಿ ಭಾರತದಲ್ಲೇ ಉಳಿಯಲು ನಿರ್ಧರಿಸಿದ್ದು ಅವರ ಸೈದ್ಧಾಂತಿಕ ಬದ್ಧತೆಯನ್ನು ತೋರಿಸು ತ್ತದೆ. ದಿಲೀಪ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ರಾಜ್ಯಸಭೆಗೆ ಆಯ್ಕೆ ಮಾಡಿದ್ದರೂ ಅವರಿಗೆ ರಾಜಕೀಯದ ಬಗ್ಗೆ ಹೆಚ್ಚೇನೂ ಒಲವಿರಲಿಲ್ಲ. ಆದರೆ, ಜಾತ್ಯತೀತತೆ, ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವೆಂಬ ಮೂಲಸ್ತಂಭಗಳ ಮೇಲೆ ನಿರ್ಮಿಸಿದ ಭಾರತದ ಬಗ್ಗೆ ಅವರಿಗೆ ಅಸೀಮ ಬದ್ಧತೆಯಿತ್ತು.

ಕಳೆದ ಮೂರು ದಶಕದಲ್ಲಿ ಪ್ರವರ್ಧಮಾನಕ್ಕೆ ಬಂದ ಬಾಲಿವುಡ್‌ನ ಮೂರು ಖಾನ್‌ಗಳಾದ ಶಾರುಖ್, ಆಮಿರ್ ಹಾಗೂ ಸಲ್ಮಾನ್‌ಗೆ ತಮಗೊಂದು ‘ಸ್ಕ್ರೀನ್
ನೇಮ್’ ಬೇಕು ಎಂಬುದರ ಅಗತ್ಯ ಯಾವತ್ತೂ ಕಾಣಿಸಿರಲಿಕ್ಕಿಲ್ಲ. ಚಿತ್ರರಂಗದ ಉತ್ಪನ್ನಗಳನ್ನು ಬಹಳ ಪ್ರೀತಿಯಿಂದ ಖರೀದಿಸುವ ಭಾರತೀಯರು 1940
ದಶಕದ ಸಂಕುಚಿತ ಮನಸ್ಥಿತಿಯನ್ನು ಮೀರಿ ಇಂದು ಸಾಕಷ್ಟು ಮೇಲೆ ಬಂದಿದ್ದಾರೆ. ಇಲ್ಲಿರುವ ವ್ಯತ್ಯಾಸ ಇಷ್ಟೆ. ಯೂಸುಫ್ ಖಾನ್ ಬ್ರಿಟಿಷ್ ಇಂಡಿಯಾದಲ್ಲಿ
ದಿಲೀಪ್ ಕುಮಾರ್ ಆದರು. ಶಾರುಖ್, ಅಮೀರ್ ಹಾಗೂ ಸಲ್ಮಾನ್ ಖಾನ್ ಇಂಡಿಯನ್ ಇಂಡಿಯಾದಲ್ಲೇ ಹುಟ್ಟಿ ಬೆಳೆದರು.

ದೇಶದಲ್ಲಿ ಪುರುಷ ನಟರ ಪೈಕಿ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರು ದಿಲೀಪ್ ಕುಮಾರ್. ಆ ಕಾಲದಲ್ಲೇ ಒಂದು ಸಿನಿಮಾಕ್ಕೆ 100000 ರುಪಾಯಿ ಸಂಭಾವನೆ ಪಡೆಯುತ್ತಿದ್ದ ಮೊದಲ ನಟ ಕೂಡ ಅವರೇ. ‘ಲಾರೆನ್ಸ್ ಆಫ್ ಅರೇಬಿಯಾದಲ್ಲಿ ನಟಿಸಲು ಡೇವಿಡ್ ಲೀನ್ ನೀಡಿದ್ದ ಆಹ್ವಾನ ಒಪ್ಪಿಕೊಂಡಿದ್ದರೆ ಪ್ರಾಯಶಃ ದಿಲೀಪ್ ಕುಮಾರ್ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ಆಗಿರುತ್ತಿದ್ದರು. ಇವರು ನಿರಾಕರಿಸಿದ ಆ ಪಾತ್ರವನ್ನು ಈಜಿಪ್ಟ್‌ನ ಓಮರ್ ಶರೀಫ್ ಮಾಡಿದರು. ದಿಲೀಪ್ ಕುಮಾರ್ ಅವರ ಪ್ರಸಿದ್ಧಿಯ ಜತೆಗೆ ನನಗಿರುವ ಒಂದು ತಕರಾರೆಂದರೆ ‘ಟ್ರಾಜಿಡಿ ಕಿಂಗ್’ ಎಂಬ ಅವರ ಹೆಗ್ಗಳಿಕೆ.

‘ಆಜಾದ್’ ‘ಕೊಹಿನೂರ್’ನಂಥ ಸಿನಿಮಾದಲ್ಲಿನ ಅದ್ಭುತ ನಟನೆಯನ್ನು ನೋಡಿದ ಯಾರು ತಾನೇ ಅವರನ್ನು ಟ್ರಾಜಿಡಿ ಕಿಂಗ್ ಎಂಬ ಏಕೈಕ ಪ್ರಕಾರಕ್ಕೆ
ಸೀಮಿತಗೊಳಿಸಲು ಸಾಧ್ಯ? ಅವರ ಸಾಧನೆಯ ಮೂಲ ಇರುವುದು ಸಮರ್ಪಣಾ ಮನೋಭಾವದಲ್ಲಿ ಹಾಗೂ ಒಂದು ಪಾತ್ರದ ಕುರಿತು ಅವರಿಗಿರುವ
ಬದ್ಧತೆಯಲ್ಲಿ. ‘ಮಧುಬನ್ ಮೆ ರಾಧಿಕಾ ನಾಚೇ ರೇ.. ಹಾಡಿನಲ್ಲಿ ಅವರು ಸಿತಾರ್ ನುಡಿಸುವುದನ್ನು ನೀವು ನೋಡಬೇಕು. ಎರಡು ತಾಸಿನ ಸಿನಿಮಾದಲ್ಲಿ ಬರುವ
ಐದು ನಿಮಿಷದ ಆ ದೃಶ್ಯಕ್ಕೆ ಅವರು ಮಾಡಿಕೊಂಡಿದ್ದ ಸಿದ್ಧತೆ ಅದೆಷ್ಟು ಸುದೀರ್ಘವಾಗಿತ್ತು.

ಹೆಚ್ಚುಕಮ್ಮಿ ಸಿತಾರನ್ನು ನಿಜವಾಗಿಯೂ ನುಡಿಸುವುದಕ್ಕೇ ಅವರು ಕಲಿತುಬಿಟ್ಟಿದ್ದರು. ಪ್ರತಿಭೆ ಸುಮ್ಮನೆ ಸಿದ್ಧಿಸುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮವೂ ಬೇಕು.
ದಿಲೀಪ್ ಕುಮಾರ್ ದೇವರನ್ನು ನಂಬುವ ಮನುಷ್ಯ. ಅಲ್ಲಾನಿಂದಲೇ ಅವರು ಬಂದಿದ್ದಾರೆ, ಅಲ್ಲಾ ಬಳಿಗೇ ಹೋಗಿ ಸೇರಿದ್ದಾರೆ ಎಂದು ಕುರಾನ್ ಹೇಳುತ್ತದೆ. ದಿಲೀಪ್ ಕುಮಾರ್ ನಮಗೆಲ್ಲ ಒಂದು ಸಂದೇಶ ಬಿಟ್ಟು ಹೋಗಿದ್ದಾರೆ: ಭಾರತದ ಮುಸ್ಲಿಂ ಒಬ್ಬ ದೇಶಭಕ್ತ.

ದೇಶದಲ್ಲಿ ಪುರುಷ ನಟರ ಪೈಕಿ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರು ದಿಲೀಪ್ ಕುಮಾರ್. ಆ ಕಾಲದಲ್ಲೇ ಒಂದು ಸಿನಿಮಾಕ್ಕೆ 100000 ರುಪಾಯಿ ಸಂಭಾವನೆ ಪಡೆಯುತ್ತಿದ್ದ ಮೊದಲ ನಟ ಕೂಡ ಅವರೇ. ‘ಲಾರೆನ್ಸ್ ಆಫ್ ಅರೇಬಿಯಾದಲ್ಲಿ ನಟಿಸಲು ಡೇವಿಡ್ ಲೀನ್ ನೀಡಿದ್ದ ಆಹ್ವಾನ ಒಪ್ಪಿಕೊಂಡಿದ್ದರೆ ಪ್ರಾಯಶಃ ದಿಲೀಪ್ ಕುಮಾರ್ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ಆಗಿರುತ್ತಿದ್ದರು.