ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@gmail.com
ಆಟ ೧: ನಾಯಕನೊಬ್ಬನ ಸಾಮ್ರಾಜ್ಯ. ಅಲ್ಲಿ ಮತ್ತೊಬ್ಬ ನಾಯಕಿಯ ಆರ್ಭಟ. ದೂರದ ಮಹಾನಾಯಕನೊಬ್ಬ ಈ ನಾಯಕಿಯನ್ನು ಪ್ರಚೋದಿಸಿ ಆ ನಾಯಕನ ವಿರುದ್ಧ ಎತ್ತಿಕಟ್ಟಿ ಆತನ ನೆಮ್ಮದಿಯನ್ನು ಹಾಳುಗೆಡಹುವ ಕೆಲಸಗಳನ್ನು ಮಾಡಿಸುತ್ತಾನೆ. ಇದರಿಂದ ಕೆರಳಿದ ಆ ನಾಯಕ ತನ್ನ ಪರವಾಗಿರಬಹುದಾದ ಮಹಾನಾಯಕನ ಸಾಮ್ರಾಜ್ಯದಲ್ಲಿದ್ದ ಹದಿನೈದಕ್ಕೂ ಹೆಚ್ಚು ನಾಯಕರನ್ನು ಸಂಪರ್ಕಿಸಿ ದೂರದ ಮಹಾನಾಯಕನ ಸಾಮ್ರಾಜ್ಯದ ಬುಡಕ್ಕೆ ಗಡಪಾರಿಯಿಟ್ಟು ಸಿಂಹಾಸನವನ್ನು ಉರುಳಿಸುತ್ತಾನೆ. ಈ ಹದಿನೈದಕ್ಕೂ ಹೆಚ್ಚಿನ ತಂಡವೊಂದು ಮತ್ತೊಬ್ಬ ಜನಪ್ರಿಯ ನಾಯನನ್ನು ಬೆಂಬಲಿಸಿ ಹೊಸ ಸಾಮ್ರಾಜ್ಯ ಸ್ಥಾಪಿಸಿ ತನ್ನೊಂದಿಗೆ ತನ್ನವರಿಗೆ ಆಸ್ಥಾನದಲ್ಲಿ ಸ್ಥಾನ ಕಲ್ಪಿಸುತ್ತಾನೆ. ತಾನೂ ಒಂದು ಪುಟ್ಟ ಸಾಮ್ರಾಜ್ಯಕ್ಕೆ ಮಾಂಡಲಿಕನಾಗುತ್ತಾನೆ.
ಆಟ ೨: ಇಷ್ಟಕ್ಕೆ ಸಮಾಪ್ತಿಯಾಗದೆ, ಇಲ್ಲಿ ಮುಖಭಂಗವಾದ ಆ ಮಹಾನಾಯಕ ಹೊಸದೊಂದು ತಂತ್ರ ಹೂಡುತ್ತಾನೆ. ಅದಕ್ಕೆ ಒಂದು ಹೆಣ್ಣನ್ನು ಬಳಸಿಕೊಂಡು ಆ ನಾಯಕನನ್ನು ಗೂಬೆಯನ್ನಾಗಿಸಿ ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಮಾನ ಮರ್ಯಾದೆ ಹರಾಜು ಹಾಕುತ್ತಾನೆ. ಇದರಿಂದ ಅನಿವಾರ್ಯವಾಗಿ ಹೊಸ ನಾಯಕನ ಸಾಮ್ರಾಜ್ಯದಿಂದ ಈ ನಾಯಕ ಹೊರಬರಬೇಕಾಗಿ ಬರುತ್ತದೆ. ಜತೆಗೆ ಹೊಸ ಸಾಮ್ರಾಜ್ಯ ಕಟ್ಟಲು ನೆರವಾದ ನನಗೆ, ಖಂಡಿತಾ ಹೊಸ ನಾಯಕ ನೆರವಾಗುತ್ತಾನೆಂಬ ಭರವಸೆಯನ್ನು ಇರಿಸಿಕೊಳ್ಳುತ್ತಾನೆ.
ಆಟ ೩: ಕಾಲ ಉರುಳುತ್ತದೆ. ಮಾಡಿದ ತಪ್ಪಿಗೆ ಶಿಕ್ಷೆಯಾಗುವ ಕಾಲ ಸನ್ನಿಹಿತವಾಗುತ್ತಲೇ ಹೊಸ ನಾಯಕನ ಭರವಸೆ ಈಡೇರಿಕೆ ಅಸಾಧ್ಯವಾಗಿ ಅನಾಥ ನಂತಾಗುತ್ತಾನೆ. ಆಗಲೇ ನೋಡಿ ನಿಜವಾದ ಆಟ ಶುರುವಾಗುತ್ತದೆ. ಇತ್ತ ಮಹಾನಾಯಕನ ಬುಡಕ್ಕೆ ನೀರುಬಿಟ್ಟು ಮತ್ತೊಬ್ಬ ಮಹಾ ಮಹಾನಾಯಕ
ಪಟ್ಟವೇರಲು ಸಿದ್ದನಾಗುತ್ತಾನೆ. ಇದರಿಂದ ಕಂಗಾಲಾದ ಮಹಾನಾಯಕ ಮೊದಲಿಗೆ ಆರೋಪಿ ನಾಯಕನ ಜತೆಯಲ್ಲಿದ್ದ ಹದಿನೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ
ನಾಯಕರನ್ನು ತನ್ನೊಂದಿಗೆ ಬರುವಂತೆ ಆಹ್ವಾನಿಸಿ ತನಗೆ ಬೆಂಗಾವಲಾವಾಗಿ ಒಲಿಸಿಕೊಳ್ಳುವ ಪ್ರಯತ್ನಕ್ಕಿಳಿಯುತ್ತಾನೆ. ಇದರಲ್ಲಿನ ಮಹದಾಶ್ಚರ್ಯವೆಂದರೆ ತನಗೆ ಸಹಾಯ ಮಾಡದೆ ಕೈಬಿಟ್ಟ ಹೊಸ ಸಾಮ್ರಾಜ್ಯದ ನಾಯಕನ ವಿರುದ್ಧ ಹಲ್ಲುಮಸೆಯುತ್ತಿದ್ದ ಆರೋಪಿ ನಾಯಕ ಈ ಗುಂಪಿನ ನಾಯಕರ ಜತೆ ಕೂಡಿಕೊಂಡು ಮಹಾನಾಯಕನ ಹಿಂದಿನ ತಂತ್ರಕುತಂತ್ರ, ಮತ್ಸರಗಳನ್ನೆ ತಿಪ್ಪೆಗೆಸೆದು ಒಗ್ಗೂಡಿಸಿಕೊಂಡು ಮಹಾನಾಯಕ ತನ್ನ ಸಾಮ್ರಾಜ್ಯಕ್ಕೆ ರಾಜನಾಗಲು ಕೊನೆಯ ಅಸ ಹೂಡುತ್ತಾನೆ.
ಆಟ ೪: ಈ ಚಿತ್ರಣದಲ್ಲಿನ ಮಹಾನಾಯಕ, ಕುಲಗೆಟ್ಟ ನಾಯಕರೊಂದಿಗೆ ಆಶ್ಚರ್ಯಕರ ಪಾತ್ರದಲ್ಲಿ ಈ ಹಿಂದೆ ಸಂಚಿಗೆ ಬಲಿಯಾದ ಆ ಹೆಣ್ಣುಮಗಳೂ ವಿಶೇಷ ಮತ್ತು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಇಬ್ಬರೂ ನಾಯಕರೊಂದಿಗೆ ರಾಜಕೀಯ ಅಖಾಡಕ್ಕೆ ಇಳಿದು ಆದರ್ಶ ಮಹಿಳಾ ನಾಯಕಿಯಾಗುತ್ತಾಳೆ. ಕೊನೆಗೆ, ಎಲ್ಲಿ ಮಲಗಿದ್ದಮ್ಮ – ಕಟ್ಟೆ ಮುಂದೆ ಬಂದು ಮಲಗಮ್ಮ ಖ್ಯಾತಿಯ ಸಮಯಸಾಧಕ ಡಬಲ್ ಗೇಮ್ ನಾಯಕನ ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು ಎಂಬ ಮಹಾವಾಕ್ಯ ಅಕ್ಷರಶಃ ಅನುಷ್ಠಾನವಾಗಿಬಿಡುತ್ತದೆ. ಅಲ್ಲಿಗೆ ಪ್ರಜಾಪ್ರಭುತ್ವ ಮತ್ತು ರಾಜಕಾರಣ ಮುಂಡಮೋಚಿ ಕೊಂಡು ಮಲಗಿದಂತಾಗುತ್ತದೆ. ಇದೆಲ್ಲಾ ಆಟಗಳು ರಾಜಕೀಯದಲ್ಲಿ ಮಾತ್ರ ಸಾಧ್ಯ.
ಈಗ ವಾಸ್ತವಕ್ಕೆ ಬರುವುದಾದರೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿಜಕ್ಕೂ ಉತ್ತಮ ಕುಟುಂಬಸ್ಥ ಮನೆತನದವರು. ಉತ್ತರ ಕರ್ನಾಟಕದಲ್ಲಿ ಕೆಲವಷ್ಟು
ಮಂದಿಗೆ ನೆರವಾಗುವುದರ ಮೂಲಕ ಅವರ ಬಾಯಲ್ಲಿ ಸಾಹುಕಾರ ಎಂದು ಕರೆಸಿಕೊಂಡ ಜನಪ್ರಿಯ ವ್ಯಕ್ತಿ. ಹಣೆಯಲ್ಲಿ ಸದಾ ದೇವರ ಕುಂಕುಮವನ್ನಿಟ್ಟುಕೊಂಡು ದಿನ ಆರಂಭಿಸುವ ದೈವಭಕ್ತ. ತನ್ನದೇ ಆದ ಉದಾರ ವ್ಯಕ್ತಿತ್ವದಿಂದ ಜನಾನುರಾಗಿಯಾಗಿ ಮೇಲೆಬಂದ ಪ್ರಭಾವಿ ನಾಯಕ. ಇವರು ಎಷ್ಟು ಬಲಶಾಲಿಯೆಂದರೆ ತನ್ನದೇ ವಿಶ್ವಾಸನೀಯ ಶಾಸಕರ ಬಳಗವನ್ನು ಕಟ್ಟಿಕೊಂಡು ಕಳೆದ ಕುಮಾರಸ್ವಾಮಿ ಸರಕಾರವನ್ನು ಉರುಳಿಸಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದಕ್ಕೆ ಸಹಕರಿಸುವ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ನೆರವಾದವರು. ಆ ಮೂಲಕ ಬಿಜೆಪಿ ಹೈಕಮಾಂಡ್‌ಗೆ ರಮೇಶ್ ಜಾರಕಿಹೊಳಿ ಗೌರವಯುತ ಮತ್ತು ಆಪತ್ಭಾಂಧವ ರಾಜಕಾರಣಿಯಂತೆ ಕಂಗೊಳಿಸಿದರು.
ಬಿಜೆಪಿ ಹೈಕಮಾಂಡ್ ಇವರನ್ನು ಎಷ್ಟು ಜಾಗರೂಕತೆಯಿಂದ ನೋಡಿತೆಂದರೆ ಇವರದೇ ಸಮುದಾಯದ ಮೂಲ ಬಿಜೆಪಿ ನಾಯಕ ಶ್ರೀರಾಮುಲು ಬೆಳವಣಿಗೆಗೆ
ಕ್ಲಚ್ ಅದುಮಿ ಹಿಡಿಯಲಾಯಿತು. ಆದರೆ ರಾಜಕೀಯದಲ್ಲಿ ತನ್ನ ಅನುಕೂಲಕ್ಕಾಗಿ ಹೆತ್ತ ತಾಯಿಯನ್ನೂ ಬಿಡದ ಪಿಶಾಚಿಗಳಿರುವುದರಿಂದ ತಮ್ಮ ವಿರೋಧಿಯ ಪಂಚೆ ಪ್ಯಾಂಟುಚಡ್ಡಿಯನ್ನು ಬಿಚ್ಚಿಸಲು ಎಂಥ ಹೇಸಿಗೆ ಕೆಲಸವನ್ನೂ ಮಾಡಲು ಕೆಲವರು ಸಿದ್ದರಾಗಿರುತ್ತಾರೆ. ಇಡೀ ದೇಶಕ್ಕೆ ತಿಳಿದಿರುವಂತೆ ರಮೇಶ್
ಜಾರಕಿಹೊಳಿ ಮೊಬೈಲ್ ಬಾಲೆಯ ಬಲೆಗೆ ಬಿದ್ದು ಇದ್ದ ಮಾನ ಮರ್ಯಾದೆಯನ್ನು ಕಳೆದುಕೊಂಡರು.
ನಾಡಿನಲ್ಲಿ ಭಗೀರಥನಂತೆ ಹರಿಸಬಹುದಾಗಿದ್ದ ನೀರಾವರಿ ಯೋಜನೆಯನ್ನು ಮರೆತು ಸಮಾಜದಲ್ಲಿ ಸಣ್ಣವರಾಗಿ ಹೋದದ್ದು ಇನ್ನೂ ಜನ ಮರೆತಿಲ್ಲ. ಇಂಥ
ರಾಜಕಾರಣಿ ಒಂದು ಹೆಣ್ಣಿನೊಂದಿಗೆ ನಡೆಸಿದ ರಸಿಕತನದ ರಾಸಲೀಲೆಯಿಂದಾಗಿ ಭವಿಷ್ಯವನ್ನೇ ಹಾಳುಮಾಡಿಕೊಳ್ಳುವಂತಾಯ್ತು. ಆದರೆ ಇದು ರಾಜಕಾರಣ. ಇಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಹೆಣ್ಣುಬಾಕತನಗಳಂಥ ಅಪರಾಧವೆ ಜಸ್ಟ್ ಹೆಲ್ಮೆಟ್ ಇಲ್ಲದೆ ಸಿಕ್ಕಿಬಿದ್ದು ದಂಡ ಕಟ್ಟಿ ಮುಂದೆ ಸಾಗಿದಂತೆ.
ಹೀಗಾಗಿ ರಮೇಶ್ ಜಾರಕಿಹೊಳಿ ಸಿಡಿಲೇಡಿ ಪ್ರಕರಣದಿಂದ ಹೊರಬಂದು ತನ್ನ ರಾಜಕೀಯ ಭವಿಷ್ಯವನ್ನು ಪುನರ್‌ಸ್ಥಾಪಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಓಡಾಡುತ್ತಿದ್ದಾರೆ. ಇರಲಿ, ತಪ್ಪು ಮಾಡುವುದು ಸಹಜ ಮತ್ತು ಅದರಿಂದ ಪರಿವರ್ತನೆಗೊಂಡು ನಡೆಯುವುದು ನೈಜ. ಆದರೆ ಇದು ಒಂದು ರಾಜ್ಯ ಒಂದು ಪ್ರಜಾಪ್ರಭುತ್ವ ಒಂದು ನಾಗರಿಕ ಸಮಾಜದಲ್ಲಿನ ಬದುಕು. ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಪ್ರಾಯಶ್ಚಿತ ಅನುಭವಿಸಲೇ ಬೇಕೆಂಬುದು ಸಮಾಜದ ಆಶಯ ಮತ್ತು ಆದರ್ಶ.
ಹೀಗಾದಲ್ಲಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಬಹುದಾದ ಅವಕಾಶ ಅಮೂಲ್ಯ. ಅದರಲ್ಲೂ ಒಂದು ಉನ್ನತವಾದ ಸ್ಥಾನದಲ್ಲಿ ಕೂರುವುದೆಂದರೆ ಆತ
ಹರಿಶ್ಚಂದ್ರನಲ್ಲದಿದ್ದರೂ ಸಂಭಾವಿತ ಮರ್ಯಾದಸ್ಥನಾಗಿಯಾದರೂ ಇರಲೇಬೇಕೆಂದು ಜನ ನಿರೀಕ್ಷಿಸುತ್ತಾರೆ. ವೈಯಕ್ತಿಕವಾಗಿ ತೀಟೆತೆವಲು ಗಳಿದ್ದರೂ ಒಂದು ಗೌರವಸ್ಥಾನದಲ್ಲಿ ಕುಂತಾಗ ಅಂಥ ಲೀಲೆಗಳಿಗೆ ಭದ್ರಬೀಗ ಹಾಕಿಕೊಂಡಿರಲೇಬೇಕು. ಇದು ಸಮಾಜ ನಿಯಮ.
ಆದರೆ ರಮೇಶ್ ಜಾರಕಿಹೊಳಿ ಮಾಡುತ್ತಿರುವುದೇನು?. ಅರವತ್ತು ದಾಟಿದರೂ ಮೂವತ್ತರ ಮೋಹಕ್ಕೆ ಒಳಗಾದರು. ಮೊದಲಿಗೆ ಸಿಡಿ ಲೇಡಿಯೇ ಗೊತ್ತಿಲ್ಲ ಎಂದರು. ನಂತರ ಇಬ್ಬರೂ ಒಪ್ಪಿಕೊಂಡು ನಡೆಸಿದ ಲೀಲೆ ಎನ್ನಲಾಯಿತು. ಮಾಧ್ಯಮಗಳಲ್ಲಿ ವರದಿಯಾದಂತೆ ತಪ್ಪನ್ನು ಒಪ್ಪಿಕೊಂಡ ನಂತರ ಕೂಡಲೇ ಕ್ಲೀನ್‌ಚಿಟ್ ಬೇಕೆಂದು ಬಯಸುತ್ತಿದ್ದಾರೆ. ಅದಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರುವುದು, ಅದಕ್ಕಾಗಿ ಮಹಾರಾಷ್ಟ್ರ ದೆಹಲಿ ನಾಯಕರಿಗೆ ದಂಬಾಲು ಬೀಳಲು ಆರಂಭಿಸಿದರು.
ಮಠಗಳು ಸ್ವಾಮೀಜಿಗಳ ಮುಂದೆ ಉದೋಉದೋ ಎಂದು ಬಿದ್ದರು. ಕ್ಲೀನ್‌ಚಿಟ್ ದೊರಕುವುದು ಅಸಾಧ್ಯವೆಂದು ಮನವರಿಕೆಯಾದ ಕೂಡಲೇ ಸರಕಾರಕ್ಕೆ ಬ್ಲಾಕ್ಮೇಲ್ ಮಾಡುವ ತಂತ್ರಕ್ಕೆ ಇಳಿದು ರಾಜಿನಾಮೆ ಮಾತುಗಳು ಕೇಳಿಬಂದವು. ಇಷ್ಟು ಸಾಲದೆಂಬಂತೆ ತನ್ನ ಸ್ಥಾನಕ್ಕೆ ತನ್ನ ಸೋದರ ಬಾಲಚಂದ್ರ ಜಾರಕಿ ಹೊಳಿಯನ್ನು ತಂದು ಕೂರಿಸಿ ತನ್ನ ಸ್ಥಾನಕ್ಕೆ ಗೂಟ ಹೊಡೆಯುವ ಪ್ರಯತ್ನ ಮಾಡುವ ಮಾತುಕತೆಗಳಾಗಿರುವ ವರದಿಯಾಗಿದೆ. ಇದು ಸಾಧ್ಯವಾಗದಿದ್ದರೆ ತನ್ನ ಅಣ್ಣನಿಗೆ ಬೆಂಬಲಿಸಲು ಸಿದ್ದವಾಗಿರುವ ಕಾಂಗ್ರೆಸ್‌ನಲ್ಲಿರುವ ಲಖನ್ ಜಾರಕಿಹೊಳಿಯನ್ನು ಬಿಜೆಪಿಗೆ ಕರೆತಂದು ಮುಂದಿನ ಡಿಸೆಂಬರ್‌ನಲ್ಲಿ ಅವಧಿ ಮುಗಿಯುವ ಬಿಜೆಪಿ ಸದಸ್ಯ ಮಹಂತೇಶ್ ಕವಟಗಿಮಠ ಅವರ ಸ್ಥಾನದಲ್ಲಿ ಕೂರಿಸಿ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ, ನಂತರ ರಾಜಕಾರಣವನ್ನು ಏನೆಂದು ತಿಳಿದಿದ್ದಾರೆ ರಮೇಶ್ ಜಾರಕಿಹೊಳಿ? ಮಂತ್ರಿಯನ್ನಾಗಿ ಅಲಂಕರಿಸಿ ಆನಂತರ ತಮ್ಮದೇ ಫೇವರೆಟ್ ನೀರಾವರಿ ಖಾತೆಯನ್ನು ಈತನಿಗೆ ನೀಡುವ
ಯೋಜನೆಗಳನ್ನು ರಣಬೇಡಿಕೆಗಳನ್ನಾಗಿಡುತ್ತಾರೆಂದರೆ, ಇಷ್ಟಕ್ಕೂ ಇವರು ರಾಜಕಾರಣ ಮತ್ತು ಪ್ರಜಾಪ್ರಭುತ್ವವನ್ನು ಏನೆಂದು ತಿಳಿದುಕೊಂಡಿದ್ದಾರೆ?.
ರಾಜಕೀಯ ಅಧಿಕಾರ, ಪದವಿ, ಸ್ಥಾನಮಾನಗಳನ್ನು ಮನಸೋಇಚ್ಛೆ ಬೇಕಾದಂತೆ ಉಪಯೋಗಿಸಿಕೊಳ್ಳಲು ಬಳಸಿಕೊಳ್ಳಲು ಅದೇನು ಸಿಡಿಲೇಡಿನಾ? ಇದು ಕೇವಲ ರಮೇಶ್ ಜಾರಕಿಹೊಳಿ ವಿಚಾರ ಮಾತ್ರವಲ್ಲ. ಇಂದಿನ ಬಹುತೇಕ ರಾಜಕಾರಣಿಗಳು ರಾಜಕಾರಣವನ್ನು ತಮ್ಮ ಪಿತ್ರಾರ್ಜಿತ ಆಸ್ತಿಗಳೆಂಬಂತೆ,
ಹುಟ್ಟಿನಿಂದಲೇ ಬಂದ ಬಳುವಳಿಯಂತೆ, ತಮ್ಮ ವಂಶಕ್ಕೆ ದೊರೆತ ಆಜನ್ಮ ಹಕ್ಕಿನಂತೆ, ಜೂಜಿನಲ್ಲಿ ಗೆದ್ದು ತಂದ ಬೆಲೆವೆಣ್ಣಿನಂತೆ ಭಾವಿಸಿದ್ದಾರೆ. ರಾಜಕಾರಣದ ಒಂದು ಸ್ಥಾನ, ಒಂದು ಪದವಿ, ಒಂದು ಅಧಿಕಾರವನ್ನು ಜೀವತಾವಧಿ ಮತ್ತು ವಂಶಪಾರಂಪರ್ಯವಾಗಿ ಅನುಭವಿಸಲೇಬೇಕಾದ ಸುಖವೆಂದು ತೀರ್ಮಾನಿಸಿ ದ್ದಾರೆ.
ಇದು ಪ್ರಜಾಪ್ರಭುತ್ವದಲ್ಲಿ ದೊಡ್ಡ ಮಾರಕ. ಸಿಡಿಲೇಡಿಯಂಥ ಪ್ರಕರಣದಿಂದಾಗಿ ಸಮಾಜದಲ್ಲಿ ಬೆತ್ತಲಾಗಿ ಮಾನ ಮರ್ಯಾದೆ ಚಾರಿತ್ರ್ಯ ಹಾಳಾದಾಗ ಅಂಥ ಒಬ್ಬ ಮುನುಷ್ಯ ಕೆಲಕಾಲ ತಲೆಮರೆಸಿಕೊಂಡು ಹೋಗುವುದು ಮೊದಲ ಉತ್ತಮ ಕೆಲಸ. ಇದನ್ನು ಕಾಂಗ್ರೆಸ್‌ನ ಎಚ್.ವೈ. ಮೇಟಿಯವರು ಮಾಡಿದ್ದಾರೆ. ಟಿವಿ ಮಾಧ್ಯಮಗಳಲ್ಲಿ ವಾರಗಳ ಕಾಲ ನೋಡಿದ ಮತದಾರರು, ಪ್ರಜೆಗಳು ಇಂಥ ರಾಜಕಾರಣಿಗಳನ್ನು ವಾಕರಿಕೆ ಬರುವಷ್ಟು ಅಸಹ್ಯವಾಗಿ ಕಂಡಿರುತ್ತಾರೆ. ಇಂಥ ಮನುಷ್ಯ ನಮ್ಮ ಸಮಾಜವನ್ನು ಆಳಬೇಕಾ ಎಂದು ಶಪಿಸುತ್ತಾರೆ. ಇಂಥವರಿಂದ ಯುವಪೀಳಿಗೆಗೆ ಮರ್ಯಾದಸ್ಥ ಸುಶಿಕ್ಷಿತ ಮನೆತನದ ಮಕ್ಕಳಿಗೆ ದೊರಕುವ ಸಂದೇಶ ಮತ್ತು ಪರಿಣಾಮ ಎಷ್ಟು ದುಬಾರಿಯೆಂಬುದನ್ನು ಅರ್ಥಮಾಡಿಕೊಳ್ಳಬೇಕು.
ಬೇರೇನೂ ಬೇಡ, ಸಿಡಿಲೇಡಿ ಪ್ರಕರಣದ ಸಿಡಿಯನ್ನು ಸಾಕ್ಷಾತ್ ರಮೇಶ್ ಜಾರಕಿಹೊಳಿ ಏಕಾಂತದಲ್ಲಿ ಕೂತು ಒಮ್ಮೆ ಅದನ್ನು ನೋಡಿದ ಬಳಿಕ ಯಾವುದಾದರು ಶಾಲೆ – ಕಾಲೇಜು ದೇಗುಲಕ್ಕೋ ಅಥವಾ ಸರ್ವ ಸಂಘ ಪರಿತ್ಯಾಗಿಗಳಾದ ಸ್ವಾಮೀಜಿಗಳ ಮುಂದೆ ನಿಲ್ಲಲಿ. ಆಗ ಅವರ ಆತ್ಮಸಾಕ್ಷಿಯೇ ಎದ್ದು ಬಡಿಯದಿದ್ದರೇ ನೋಡಿ. ದುರಂತವೆಂದರೆ ಅಂಥ ಯಾವುದೇ ಪಶ್ಚಾತಾಪವಾಗಲಿ, ಪ್ರಾಯಶ್ಚಿತವಾಗಲಿ ಇಂದಿನ ರಾಜಕಾರಣಿಗಳಲ್ಲಿ ನಿರೀಕ್ಷಿಸುವುದು ಮೂರ್ಖತನ. ಉನ್ನತ
ಅಽಕಾರದಲ್ಲಿರುವಾಗಲೇ ತನ್ನ ಧರ್ಮಪತ್ನಿಯ ಜೀವಂತ ಸಾಕ್ಷಿಯಾಗಿzಗಲೇ ಮತ್ತೊಬ್ಬಳೊಂದಿಗೆ ಸೈಲೆಂಟಾಗಿ ಸಂಸಾರ ಮಾಡಿ ಮಕ್ಕಳು ಮಾಡಿಕೊಂಡು
ತನ್ನ ಮತ್ತು ತನ್ನ ವಂಶದ ಉದ್ಧಾರಕ್ಕಾಗಿ ಅಹರ್ನಿಶಿ ಅಧಿಕಾರಕ್ಕಾಗಿ ರಾಜಕೀಯ ಮಾಡುವ ಬಾಹುಬಲಿಯೊಬ್ಬನಿಗೆ ಸಾಮಾನ್ಯ ಮತದಾರನೊಬ್ಬ ಅಯ್ಯಾ ನಿನ್ನ
ಎರಡನೇ ಮದುವೆ ಯಾವ ಛತ್ರದಲ್ಲಿ ಯಾರ ಪೌರೋತ್ಯದಲ್ಲಿ ನಡೆಯಿತು ಎಂದು ಕೇಳಿನೋಡಲಿ.
ಆಗಲೂ ಈ ಆತ್ಮಸಾಕ್ಷಿ ಒಣಹುಣಸೇ ಮರಕ್ಕೆ ನೇಣುಬಿಗಿದುಕೊಂಡು ನೇತಾಡುತ್ತಿರುತ್ತದೆ. ಹೀಗಿರುವಾಗ ಒಂದು ರಾಸಲೀಲೆಯಾಡಿದ ಮಾತ್ರಕ್ಕೇ ತಲೆಮರೆಸಿ ಕೊಂಡು ಗಡಿಪಾರಾಗಬೇಕೆಂದು ನಿರೀಕ್ಷಿಸುವುದೇ ಇಂದು ಅನೈತಿಕವಾಗುತ್ತದೆ. ಇಂಥ ಅನಿಷ್ಠಗಳನ್ನೆ ಹತ್ತಿಕ್ಕಬೇಕಾದರೆ ಸಂವಿಧಾನದ ಬದಲಾವಣೆ ಗಳನ್ನು ತರಬೇಕು. ಸಾಮಾನ್ಯ ನಾಗರಿಕನಿಗೆ ವಿದೇಶಿ ಪಾಸೋರ್ಟ್ ನೀಡಲು ಇರುವ ಮಾನದಂಡದಂತೆ ಅಭ್ಯರ್ಥಿಯೊಬ್ಬ ಚುನಾವಣೆಗೆ ನಿಲ್ಲುವ ಸಂದರ್ಭದ ಆತನ ಮೇಲೆ ಯಾವುದೇ ಠಾಣೆಯಲ್ಲಿ ಯಾವುದೇ ದೂರುಗಳು ದಾಖಲಾಗಿರಬಾರದು. ಮತ್ತು ಚುನಾಯಿತನಾದ ಮೇಲೆ ಒಂದೊಮ್ಮೆ ಯಾವುದೇ ಕಾರಣಕ್ಕೆ ಎಫ್ಐಆರ್ ದಾಖಲಾದರೆ ಅಥವಾ ಯಾವುದೇ ಅನೈತಿಕ ವರ್ತನೆಗಳನ್ನು ತೋರಿದರೆ ಆತನ ಕುಟುಂಬವನ್ನೂ ಒಳಪಡಿಸಿ ಆತ ಶಾಶ್ವತವಾಗಿ ಚುನಾವಣೆಗಳಲ್ಲಿ
ಭಾಗಿಯಾಗದಂತೆ ನಿಯಮವನ್ನು ಜಾರಿಗೆ ತರಬೇಕಾದ ಅವಶ್ಯಕತೆಯಿದೆ. ಮಾಡಬಾರದ ಕೆಲಸವನ್ನು ಮಾಡಿ ಅದರಿಂದ ಹೇಸಿಗೆಯಾಗದೆ, ಮತ್ತೇ ಅಧಿಕಾರ ದಲ್ಲಿ ಕೂರುವ ಸರ್ಕಸ್, ರಣಯತ್ನಗಳನ್ನು ಮಾಡಿ, ಅದು ಈಡೇರದಿದ್ದಾಗ ಮತ್ತೇ ವೈರಿಗಳೊಂದಿಗೆ ಕೈಜೋಡಿಸಿ ಸಂವಿಧಾನಾತ್ಮಕ ಸರಕಾರಗಳನ್ನು ಬೀಳಿಸುವ ಇಂಥ ಅಪಾಯಕಾರಿ ರಾಜಕಾರಣವನ್ನು ಹಡೆಮುರಿ ಕಟ್ಟಲೇಬೇಕು.
ನಮ್ಮ ದೇಶದ ಮುಂದಿನ ರಾಜಕಾರಣ ಮತ್ತು ಶಾಸಕಾಂಗದ ಮೌಲ್ಯಗಳನ್ನು ಕಾಪಾಡಿಕೊಳ್ಳ ಬೇಕು. ಇಲ್ಲದಿದ್ದರೆ ಮುಂದಿನ ಯುವಸಮೂಹ ಇಂಥ ಅವತಾರ ಪುರುಷರನ್ನೇ ತಮ್ಮ ರೋಲ್ ಮಾಡೆಲ್‌ಗಳಾಗಿ ಮಾಡಿಕೊಳ್ಳುತ್ತವೆ. ಅಯ್ಯೋ ಅಂಥ ದೊಡ್ಡ ಮನುಷ್ಯರೇ ಮಾಡಬಾರದ್ದು ಮಾಡಿ ಆರಾಮಾಗಿ ಅಧಿಕಾರ ದಲ್ಲಿದ್ದಾರೆ ಇನ್ನು ನಾನು ಯಾವ ಲೆಕ್ಕ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆಗ ಕಾನೂನು ನ್ಯಾಯಾಲಯಗಳ ಬಗ್ಗೆಯೇ ತಾತ್ಸರ ಹುಟ್ಟಿ ಸಮಾಜ ಕುಲಗೆಟ್ಟು ಹೋಗುವುದರಲ್ಲಿ ಸಂಶಯವಿಲ್ಲ. ಸಮಾಜದಲ್ಲಿ ಅನೈತಿಕತೆಗಳು ಅಪರಾಧಗಳು ಹೆಚ್ಚಾಗಿ ಶಾಸಕಾಂಗವೆಂಬುದು ವ್ಯಭಿಚಾರದ ಅಡ್ಡ ಆಗುವುದರಲ್ಲಿ ಅನುಮಾನ ಗಳಿಲ್ಲ.