Thursday, 12th December 2024

ಕ್ಲಬ್‌ ಹೌಸ್‌ನಲ್ಲಿ ವಿಶ್ವವಾಣಿ ವಿಕ್ರಮ

ವಿಶ್ವದ ಟಾಪ್ 1 ಸಂವಾದ ಎನಿಸಿಕೊಂಡ ಪ್ರತಾಪ್, ಸುಧಾಮೂರ್ತಿ ಕಾರ್ಯಕ್ರಮ

ನಿತ್ಯವೂ ಟಾಪ್ 10 ಪಟ್ಟಿಯಲ್ಲಿ ವಿಶ್ವವಾಣಿ ಸಂವಾದಕ್ಕೆ ಸ್ಥಾನ 

ಇದು ಕ್ಲಬ್‌ಹೌಸ್ ಬಿಡುಗಡೆ ಮಾಡಿರುವ ಅಂಕಿ-ಅಂಶ

ಬೆಂಗಳೂರು: ಪತ್ರಿಕೋದ್ಯಮದ ವಿನೂತನ ಪ್ರಯತ್ನ ವಿಶ್ವವಾಣಿಯ ಕ್ಲಬ್‌ಹೌಸ್ ಟಾಪ್ ಸಂವಾದ ಎಂಬ ಹೆಗ್ಗಳಿಕೆ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ಜತೆಗೆ, ಪ್ರತಿದಿನದ ಸಂವಾದ ವಿಶ್ವದ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದೆ.

ಕ್ಲಬ್‌ಹೌಸ್ ಇತ್ತೀಚೆಗೆ ಜನಪ್ರಿಯತೆ ಪಡೆದ ಒಂದು ಸಾಮಾಜಿಕ ಧ್ವನಿ ಮಾಧ್ಯಮ. ಈ ಮಾಧ್ಯಮವನ್ನು ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೊದಲ ಬಾರಿಗೆ ವಿಶ್ವವಾಣಿ ಸಮರ್ಪಕವಾಗಿ ಬಳಸಿಕೊಂಡಿದೆ. ವಿಶ್ವವಾಣಿ ಕ್ಲಬ್ ಹೌಸ್ ಮೂಲಕ ಆರಂಭವಾದ ಸಂವಾದ ಸರಣಿ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸಿ ಕೊಳ್ಳುತ್ತಿದೆ.

ರಾಜ್ಯದಲ್ಲಿ ಮಾತ್ರವಲ್ಲದೇ ಕ್ಲಬ್‌ಹೌಸ್ ಇತಿಹಾಸದಲ್ಲೇ ವಿಶ್ವದ ಟಾಪ್ 1 ಸ್ಥಾನಕ್ಕೇರುವ ಮೂಲಕ ವಿಶ್ವವಾಣಿ ಕ್ಲಬ್‌ಹೌಸ್‌ನ ಸಂವಾದ ದಾಖಲೆ ನಿರ್ಮಿಸಿದೆ. ವಿಶ್ವವಾಣಿ ಕ್ಲಬ್‌ಹೌಸ್ ಆರಂಭವಾದಾಗಿನಿಂದ ಇಲ್ಲಿವರೆಗೆ ಪ್ರೊ.ಕೃಷ್ಣೇಗೌಡ, ಸುಧಾಮೂರ್ತಿ, ನಟಿ ಜಯಮಾಲಾ, ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್, ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಽಕಾರಿ ಅಣ್ಣಾಮಲೈ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಸಿಎಂ ಇಬ್ರಾಹಿಂ, ಅವಧೂತ ವಿನಯ್ ಗುರೂಜೀ, ಡಾ.ಸಿ.ಎನ್.ಮಂಜುನಾಥ್, ವಿದ್ಯಾಭೂಷಣರು, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದಾರೆ. ಜತೆಗೆ, ವಿಶ್ವವಾಣಿ ಅಂಕಣಕಾರ ರದೊಂದಿಗೆ ಸಂವಾದ ನಡೆಸುವ ವಿಭಿನ್ನ ಕಾರ್ಯಕ್ರಮವೂ ಕ್ಲಬ್‌ಹೌಸ್‌ನಲ್ಲಿ ಬಿತ್ತರಗೊಂಡಿದೆ.

ಶುಕ್ರವಾರದ ಕಾರ್ಯಕ್ರಮ ದಾಖಲೆ: ಶುಕ್ರವಾರ ಸಂಜೆ 7 ಗಂಟೆಗೆ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮ ವಿಶ್ವದ ನಂ.1 ಕಾರ್ಯಕ್ರಮವಾಗಿತ್ತು ಎಂದು ಕ್ಲಬ್‌ಹೌಸ್ ಅನಾಲಿಟಿಕ್ ತಿಳಿಸಿದೆ. ಬರೋಬ್ಬರಿ 2984 ಕೇಳುಗರು ಕಾರ್ಯಕ್ರಮ ಕೇಳಿದ್ದು, ೧೦ ಸಾವಿರಕ್ಕೂ ಹೆಚ್ಚು ಕೇಳುಗರು ಸಂವಾದ ಕೇಳಲು ಕ್ಲಬ್‌ಹೌಸ್ ಪ್ರವೇಶ ಮಾಡಿದ್ದಾರೆ.

ಕಳೆದ ಶನಿವಾರ ನಡೆದ ಸುಧಾ ಮೂರ್ತಿ ಅವರೊಂದಿಗಿನ ಕಾರ್ಯಕ್ರಮವೂ ಟಾಪ್ ಸ್ಥಾನದಲ್ಲಿತ್ತು. ಎರಡು ಬಾರಿ ವಿಶ್ವದ ಟಾಪ್ 1 ಸಂವಾದದ ಪಟ್ಟಿಗೆ
ವಿಶ್ವವಾಣಿ ಕ್ಲಬ್‌ಹೌಸ್ ಸೇರ್ಪಡೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ. ಜತೆಗೆ ಕಳೆದೊಂದು ವಾರದಿಂದ ನಡೆಯುತ್ತಿರುವ ಸಂವಾದಗಳಲ್ಲಿ ಟಾಪ್ 10
ಸಂವಾದಗಳ ಪಟ್ಟಿಯಲ್ಲಿ ವಿಶ್ವವಾಣಿ ಸಂವಾದ ಸ್ಥಾನ ಪಡೆಯುತ್ತಲೇ ಇರುವುದು ವಿಶೇಷ.