Sunday, 15th December 2024

ಜಗತ್ತಿನ ಏಕೈಕ ಅದ್ಭುತವೇ ಭಾರತ

ದಾಸ್‌ ಕ್ಯಾಪಿಟಲ್‌

ಟಿ.ದೇವಿದಾಸ್, ಬರಹಗಾರ, ಶಿಕ್ಷಕ

dascapital1205@gmai

ಭಾರತ ಜಗತ್ತಿನ ಅದ್ಭುತವಾದ ಏಕೈಕ ರಾಷ್ಟ್ರ. ಹೌದು, ಈ ದೇಶ ಹಲವು ವಿಭಿನ್ನವಾದುದನ್ನು, ವೈಶಿಷ್ಟ್ಯವಾದುದನ್ನು, ವಿಕ್ಷಿಪ್ತವಾದುದನ್ನು, ವಿಚಿತ್ರವಾದುದನ್ನು ವೈರುದ್ಧ್ಯ ವಾದುದನ್ನು ಒಳಗೊಂಡಿದೆ. ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಗಳು ಬೆಳೆದ ಪರಿ ಅನನ್ಯವಾದುದು.

ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಕ್ರೀಡೆ, ಮಾನವಿಕ ಕ್ಷೇತ್ರಗಳಲ್ಲಿ ನಮ್ಮವರದು ಅತೀತವಾದ ಪ್ರಜ್ಞೆ ಇರುವುದರಿಂದ ನಾವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬದುಕನ್ನು ಕಟ್ಟಿಕೊಂಡು ಅಂದಿನ ಮತ್ತು ಇಂದಿನ ಸನ್ನಿವೇಶಗಳಲ್ಲೂ ವೈಚಾರಿಕತೆಯ ಭಾಗವಾಗಿರುವ ವ್ಯವಹಾರಿಕತೆಯ ಕಾಠಿಣ್ಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತಾ ವಿಶ್ವಸಂಸ್ಕೃತಿಯ ವಾರಸುದಾರರೆಂಬಂತೆ ಚಿರಂಜೀವಿಗಳಾಗಿದ್ದೇವೆ. ಆದ್ದರಿಂದ ಈ ದೇಶದ, ಈ ನೆಲದ ಸಂಸ್ಕೃತಿ, ನಾಗರಿಕತೆ, ಪರಂಪರೆ,
ಔನ್ನತ್ಯವನ್ನು ಅರ್ಥೈಸಿಕೊಂಡಷ್ಟು ಇದರ ವ್ಯಾಪ್ತಿಯ ಹರಹು ವಿಸ್ತಾರಗೊಳ್ಳುತ್ತಲೇ ಹೋಗುತ್ತದೆ.

ಡಿಸ್ಕವರಿ ಆಫ್ ಇಂಡಿಯಾದಲ್ಲಿ ನೆಹರೂ ಬರೆದದ್ದು: ರಾಮಾಯಣ ಮಹಾಭಾರತಗಳು ಎಲ್ಲ ಭಾರತೀಯ ವರ್ಗದ ಜನರಿಗೂ, ಪ್ರಗತಿಗೆ, ಉನ್ನತ ಬೌದ್ಧಿಕತೆ ಯಿಂದ ಹಿಡಿದು ಸಾಮಾನ್ಯತೆಯವರೆಗೆ, ಓದು – ಬರಹ ಬಾರದ ಹಳ್ಳಿಗರಿಗೂ ಆವಶ್ಯವಾದ ಅಂಶಗಳು ಸಿಗುವಂತೆ ಮಾಡಿವೆ. ಬಹುಮುಖಿ ಸಮಾಜವನ್ನು ಏಕತ್ವದಲ್ಲಿ ಹಿಡಿದಿಟ್ಟ ಪ್ರಾಚೀನ ಭಾರತೀಯರ ಗುಟ್ಟು ಇಲ್ಲಿದೆ. ಆ ಬಹುಮುಖತ್ವ ಜಾತಿಗಳಲ್ಲಿರಬಹುದು, ಸ್ವಭಾವದಲ್ಲಿರಬಹುದು. ಆದರೆ ಎಲ್ಲರಿಗೂ ವೀರೋಚಿತ ಸಂಸ್ಕೃತಿ, ಪರಂಪರೆ ನೈತಿಕ ಜೀವನಾಧಾರದ ಹಿನ್ನೆಲೆಗಳನ್ನು ಸಮಾನವಾಗಿ ಇವು ಒದಗಿಸಿವೆ.

ಎಲ್ಲ ವೈವಿಧ್ಯ, ದ್ವಂದ್ವ, ವೈರಸ್ಯಗಳನ್ನು ಮೀರಿ ಉಳಿಯಬಲ್ಲ ಏಕತೆಯನ್ನು ಬೇಕೆಂತಲೇ ಪ್ರಾಚೀನರು ಇಲ್ಲಿ ಉಳಿಸಿಬಿಟ್ಟರು. ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ – ಶ್ರೇಷ್ಠ ವಿಚಾರಗಳು ವಿಶ್ವದೆಡೆಯಿಂದ ನಮಗೆ ಬರಲಿ ಎಂದ ದೇಶ ಭಾರತ. ಈಗಲೂ ಜಗತ್ತಿನ ಒಳಿತನ್ನು ಸ್ವೀಕರಿಸುವ ಔದಾರ್ಯ ಈ ನೆಲದ್ದು. ಜಗತ್ತಿನ ರಾಷ್ಟ್ರಗಳ ಅಧ್ಯಾತ್ಮದಲ್ಲಿ ಬೇರುಬಿಟ್ಟ ನಾಗರಿಕತೆ ನಮ್ಮದು ಮಾತ್ರ. ಜಾತಿ – ಮತಗಳನ್ನು ನೋಡದೆ ಎಲ್ಲರಿಗೂ ಒಳಿತನ್ನು ಬಯಸುವ ನಮ್ಮದು ವಿಶ್ವದೇಕೈಕ ಸನಾತನ ಧರ್ಮ. ಈ ರಾಷ್ಟ್ರದ ರಾಷ್ಟ್ರೀಯತೆಯ ಮೂಲಸೂತ್ರವೂ ಇದೇ.

ವೇದೋಪನಿಷತ್ತುಗಳು, ಪುರಾಣ – ಗೀತೆಗಳಲ್ಲಿ ಇಲ್ಲದ್ದು ಏನಿದೆ, ಎಲ್ಲಿದೆ? ನಮ್ಮದ್ದನ್ನೇ ನಮಗೆ ತಿರುಗಿ ಯಾರೇ ಕೊಟ್ಟಿದ್ದರೂ ಸ್ವೀಕರಿಸಿ ಹಿರಿತನವನ್ನು ಮೆರೆದ ರಾಷ್ಟ್ರೀಯತೆ ನಮ್ಮದು. ಇದು ನಮ್ಮ ಔದಾರ್ಯ, ದೌರ್ಬಲ್ಯವಲ್ಲ! ಅನಾಗರಿಕ ಪ್ರಪಂಚ ಪ್ರಜ್ಞೆಯಿಂದ ನಾಗರಿಕ ಪ್ರಜ್ಞೆ ಯನ್ನು ರೂಢಿಸಿಕೊಂಡ ಗಳಿಗೆಯಿಂದ ಸರಿಹೊತ್ತಿನವರೆಗೆ ಆದ ಸ್ಥಿತ್ಯಂತರಗಳು ಮನುಷ್ಯ ವಿಕಾಸದ ಪಥ ಏರುದಾರಿಯಲ್ಲಿ ಸಾಗುತ್ತಿದೆ. ಪ್ರಾಣಿಯಂತೆ ಬದುಕುತ್ತಿದ್ದ ಮನುಷ್ಯ ಪ್ರಾಣಿಯಾಗಿಯೇ ಇರದೆ ತನ್ನ ಅಸ್ತಿತ್ವವನ್ನು ಪ್ರಾಣಿಸಹಜ ನಾಗರಿಕತೆ ಮತ್ತು ಸಂಸ್ಕೃತಿಯಿಂದ ಪಲ್ಲಟಗೊಳಿಸಿಕೊಂಡ.

ಪರಂಪರೆ ಮತ್ತು ಸಂಸ್ಕೃತಿಯಲ್ಲಿ ವಿಕಾಸದ ಪಥವನ್ನು ಕೊಂಡುಕೊಂಡ. ಇದು ಮನುಷ್ಯನ ಅರಿವಿನ ಆಗಿರುವುದೂ ಹೌದಾದರೂ ಪ್ರಕೃತಿಯ ಪ್ರಭಾವ ಇಲ್ಲವೆನ್ನು ವುದು ಅಸಾಧ್ಯ. ಪ್ರಾಣಿಪಕ್ಷಿಗಳಿದ್ದರೋ ಸಂಸ್ಕೃತಿಯ ವಿಕಾಸಕ್ಕೆ ಪರಂಪರೆಯಿಂದ ಬರುವ ಎಲ್ಲಾ ಬೆಳವಣಿಗೆಗಳು ಹಿರಿಯರಿಂದ ಅಭ್ಯಾಸ
ವಾಗಿರು ವಂಥದ್ದು. ಆದ್ದರಿಂದ ಅವುಗಳನ್ನು ಮೀರಿದ ವಿಕಾಸಕ್ಕೆ ಅವುಗಳ ಪರಂಪರೆಯು ಹೇತುವಾಗಲಾರದು.

ಆದರೆ, ಮನುಷ್ಯನಿಗೆ ಇದು ಅಸಾಧ್ಯದ ಮಾತು. ಈ ಪ್ರಕೃತಿಯ ಎಲ್ಲ ಬೆಳವಣಿಗೆಗಳು ಅವನ ವಿಕಾಸಕ್ಕೆ ಗತಿಶೀಲವಾಗುತ್ತಲೇ ಸ್ಪಂದಿಸುತ್ತದೆ. ಮನುಷ್ಯನ ಭಾಷೆ – ಸಂಸ್ಕೃತಿ – ವೇಷಭೂಷಣಗಳು – ಆಹಾರಕ್ರಮ – ಜೀವನಕ್ರಮ – ಸಾಮಾಜಿಕ ಸಂಬಂಧಗಳು – ಇವೆಲ್ಲ ಅಂಥ ಸ್ಪಂದನೆಗಳ ಫಲವಾಗಿಯೇ ಆವಿರ್ಭವಿಸಿದ್ದು. ಇದರಿಂದಾಗಿ ಮನುಷ್ಯನಲ್ಲಿ ವಿಕಾಸವೆಂಬುದು ಆತನ ಬದುಕಿನಲ್ಲಿ ಹಾಸುಹೊಕ್ಕಾಗುತ್ತಾ ಬಂದು ಎಲ್ಲ ನೆಲೆಯಿಂದಲೂ ಎಲ್ಲವನ್ನೂ ಅರಗಿಸಿಕೊಳ್ಳಬಹುದಾದ ತಾಕತ್ತನ್ನು ಹೊಂದಿ ಸೃಷ್ಟಿಯ ಕಿರೀಟವಾಗಿದ್ದಾನೆ. ತನ್ನ ಅಸ್ತಿತ್ವವನ್ನೇ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಾ ಹೋದದ್ದರಿಂದ ವೈಯುಕ್ತಿಕ ಸ್ವಾತಂತ್ರ್ಯವೆಂಬುದು ಗಹನಾತೀಗಹನವಾದ ಸಂಗತಿಯಾಗಿದೆ.

ರಾಷ್ಟ್ರದ ಸಂವಿಧಾನ ನೀಡುವ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತಲೂ ಮೊದಲೇ ಪ್ರತಿಯೊಂದೂ ಜೀವಕ್ಕೆ, ಜೀವನಕ್ಕೆ ಈ ಬಗೆಯ ಸ್ವಾತಂತ್ರ್ಯವಿದೆ. ಪ್ರತಿ ಜೀವನಕ್ಕೂ
ಒಂದು ಸಂವಿಧಾನವಿದೆ. ಈ ಜೀವನ ಸಂವಿಧಾನದ ಹೊರತಾದ ಸಂವಿಧಾನ ನಾವು ನಿರ್ಮಿಸಿಕೊಂಡ ರಾಷ್ಟ್ರದ ಸಂವಿಧಾನ. ಒಟ್ಟಿಗೆ ಎರಡು ಸಂವಿಧಾನಗಳು. ರಾಷ್ಟ್ರದ ಸಂವಿಧಾನ ನಮ್ಮ ಇರುವಿಕೆಯನ್ನು ಅಧಿಕೃತವಾಗಿ ಗುರುತಿಸಿ, ಮಾನ್ಯತೆಯನ್ನು ನೀಡಿ ನಮಗೊಂದು ‘ಬಾಹ್ಯ ವ್ಯಕ್ತಿತ್ವ’ ವನ್ನು ನೀಡಿ ಆದರಿಸುತ್ತದೆ. ವೈಯಕ್ತಿಕವಾದ ಸ್ವಾತಂತ್ರ್ಯವನ್ನು ರಕ್ಷಿಸುತ್ತಾ ನಮ್ಮನ್ನು ನಿಯಂತ್ರಿಸುತ್ತದೆ.

ವ್ಯಕ್ತಿ, ಕುಟುಂಬ, ಸಮಾಜ, ರಾಜ್ಯ, ಪ್ರಭುತ್ವ, ಸೈನ್ಯ ಈ ಪರಿಕಲ್ಪನೆಗಳು ಮನುಷ್ಯನ ನಾಗರಿಕತೆ ಪ್ರಜ್ಞೆಯ ವಿಕಾಸದ ಕುರುಹುಗಳು. ಈ ಎಲ್ಲ ವಿಕಾಸಗಳೂ ಎರಡೂ ಸಂವಿಧಾನಗಳ ಕೊಡುಗೆಯೇ ಆಗಿದೆ. ಜೀವನ ಸಂವಿಧಾನ ನಮ್ಮ ಹುಟ್ಟಿನೊಂದಿಗೆ ಬರುವುದಾದ್ದರಿಂದ ಜೀವನ ವಿಧಾನ, ಜೀವನ ಸಂಹಿತೆಗಳು, ಜೀವನ ಮೌಲ್ಯಗಳು ನಮ್ಮ ಆಂತರಿಕ ಮತ್ತು ಬಾಹ್ಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಮೊದಲು ‘ಒಬ್ಬ’ ನೇ ಇದ್ದ. ಆಮೇಲೆ ‘ಎರಡು’ ಆದ. ಕಾಲಕ್ರಮೇಣ ‘ಬಹು’ ವಾಗುತ್ತಾ ಬಂದ.

ಈ ಕ್ರಿಯೆ ಬೆಳೆಯುತ್ತ ಬೆಳೆಯುತ್ತಾ, ಇಂದು ನಿರ್ದಿಷ್ಟ ರಾಷ್ಟ್ರದೊಂದಿಗೆ ತನ್ನನ್ನು ಗುರುತಿಸಿಕೊಂಡು ಬದುಕುತ್ತಿದ್ದರೂ ಮೂಲದಲ್ಲಿ ಪ್ರತಿಯೊಬ್ಬರೂ ‘ಒಂದೇ’
ಆಗಿರುತ್ತೇವೆ; ಮನುಷ್ಯ ಎಂಬ ಅರಿವಿನಲ್ಲಿ. ಇದೇ ನಮ್ಮ ನಿಜವಾದ ಅಂತಃಸತ್ತ್ವ ಮತ್ತು ಆಂತರ್ಯವಾಗಿದೆ. ಪ್ರತಿಯೊಂದೂ ಜೀವಿಯ ಹುಟ್ಟು ಮತ್ತು ಸಾವು ಹೀಗೆಯೇ ಅಲ್ಲವೆ? ಹಳ್ಳಿಗಳು ಅಭಿವೃದ್ಧಿ ಹೊಂದುತ್ತಾ ರಾಷ್ಟ್ರದ ವಿಸ್ತಾರತೆಯನ್ನು ಪಡೆದವು. ಇಂಥ ಹಲವು ರಾಷ್ಟ್ರಗಳ ಒಟ್ಟೂ ಮೊತ್ತವೇ ಜಗತ್ತು. ಜಗತ್ತು ರಾಷ್ಟ್ರಗಳಲ್ಲಿ ತನ್ನ ಇರುವಿಕೆಯನ್ನು ಮೂರ್ತಗೊಳಿಸುತ್ತದೆ. ಪ್ರತಿ ರಾಷ್ಟ್ರವೂ ತನ್ನ ಭೌಗೋಳಿಕವಾದ ಇರುವಿಕೆಯ ಜತೆಯಲ್ಲಿ ತನ್ನ ಜನತೆಯ ಭಾಷೆ-ಸಂಸ್ಕೃತಿ-ನಾಗರಿಕತೆ-ಪರಂಪರೆಯನ್ನು ಗೌರವಿಸುತ್ತಾ ಅವುಗಳಿಗೆ ಧಕ್ಕೆ ಉಂಟಾದಲ್ಲಿ, ತನ್ನ ಅಸ್ತಿತ್ವಕ್ಕೇ ತೊಂದರೆಯಾದಲ್ಲಿ ಸೈನ್ಯವನ್ನು ರಚಿಸಿಕೊಂಡು ತನ್ನ ಭದ್ರತೆ ಯನ್ನು ಕಾಪಿಟ್ಟುಕೊಂಡು ಜನತೆಯ ಪ್ರಗತಿಯನ್ನು, ಏಳ್ಗೆಯನ್ನು ಬಯಸುತ್ತಾ ಪ್ರತಿ ರಾಷ್ಟ್ರವೂ ಉತ್ಕೃಷ್ಟತೆಯ ಹಂಬಲದೊಂದಿಗೆ ಊರ್ಧ್ವಮುಖೀಯಾಗಿ ಪ್ರಗತಿಯನ್ನು ಕಾಣಬಯಸುತ್ತದೆ.

ಭಾರತವೂ ಇದಕ್ಕೆ ಹೊರತಲ್ಲ. ಇಂಥ ಸುವ್ಯವಸ್ಥೆಯಲ್ಲಿ ಜನತೆಯ ಔದಾರ್ಯತೆಗೆ ರಾಷ್ಟ್ರದ ಸಂವಿಧಾನವೂ, ರಾಷ್ಟ್ರದ ಘನತೆಗೆ ಜನತೆಯೂ ಸದಾಕಾಲ
ಬದ್ಧರಾಗಿರಬೇಕಾಗುತ್ತದೆ. ಅಂದರೆ ರಾಷ್ಟ್ರವೊಂದರ ನಿಜವಾದ ಅಸ್ತಿತ್ವ ಅನಾವರಣವಾಗುವುದು ಜನತೆಯ ಬದ್ಧತೆಯ ಅಭಿವ್ಯಕ್ತಿಯಿಂದ. ಭಕ್ತಿಯಿಂದ. ನಿಷ್ಠೆ ಯಿಂದ. ಈ ಬಗೆಯ ತಾದಾತ್ಮ್ಯವನ್ನು ಹೊಂದಿರುವಂಥವು ಮಾತ್ರ ಗತಿಶೀಲವಾದ ಪ್ರಪಂಚದಲ್ಲಿ ಜೀವಂತವಾಗಿ ಇರಲು ಸಾಧ್ಯವಾಗುತ್ತದೆ. ಭಾರತ ಈ ತೆರನಾದ ರಾಷ್ಟ್ರ. ಇದು ಜೀವಂತವಾದ ರಾಷ್ಟ್ರ. ಅದಕ್ಕಾಗಿಯೇ ಇದು ವಿಶ್ವದ ಏಕೈಕ ಅದ್ಭುತ. ಜಗತ್ತಿನ ಅನೇಕ ನಾಗರಿಕತೆಗಳು ಮಣ್ಣು ಪಾಲಾದವು. ಕೆಲವು ವಿನಾಶದ ಅಂಚಿನಲ್ಲಿವೆ. ಅನೇಕ ಸಾಮ್ರಾಜ್ಯಗಳು ವೈಭವದಿಂದ ಮೆರೆದು ನಿರ್ನಾಮವಾದವು.

ಅನೇಕ ರಾಷ್ಟ್ರಗಳ ಸಮೂಹವಾದ ಈ ವಿಶ್ವದಲ್ಲಿ ಒಂದು ರಾಷ್ಟ್ರದ ಒಟ್ಟೂ ಅಸ್ತಿತ್ವ ಇನ್ನೊಂದು ರಾಷ್ಟ್ರದ ಮೇಲೆ ಯಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ ಎಂದು ತಿಳಿಯುವುದಾದರೂ ಹೇಗೆ? ಹಾಗೆ ನಾಗರಿಕತೆಗಳು ಕೂಡ. ದೂರದ ಕೊರಿಯಾದಲ್ಲಿ ಅಣ್ವಸಗಳನ್ನು ಉಡಾಯಿಸಿದರೆ ಅದು ನಮಗೇನೂ ಪರಿಣಾಮ ವನ್ನು ಬೀರುವುದಿಲ್ಲ ಎಂದರೆ ಮೂರ್ಖತನವಾದೀತು! ಜಗತ್ತಿನ ಯಾವುದೇ ಪ್ರಭುತ್ವಗಳ ಮಧ್ಯೆ ಶತ್ರುತ್ವವಿರಬಹುದು; ಆದರೆ ಸಮಾಜಗಳ ಮಧ್ಯೆ
ಇರಲಾರದು. ಯಾಕೆಂದರೆ ಮನುಷ್ಯ ಸಂಘ ಜೀವನವನ್ನು ಆರಂಭಿಸಿದ ಮೇಲೆಯೇ ಸಮಾಜ ನಿರ್ಮಾಣವಾದುದು.

ಆಮೇಲೆ ಪ್ರಭುತ್ವ ಹುಟ್ಟಿದ್ದು. ಪ್ರಭುತ್ವ ಹುಟ್ಟಿದ ಮೇಲೆ ಹುಟ್ಟಿದ್ದು ರಾಜ್ಯ, ಸಾಮ್ರಾಜ್ಯಗಳು. ಜೊತೆಯಲ್ಲಿ ಭಿನ್ನಾಭಿಪ್ರಾಯಗಳು, ಸಂಘರ್ಷಗಳು. ಇವುಗಳ ರಕ್ಷಣೆಗೆ
ಪ್ರಭುತ್ವ ಹುಟ್ಟಿಸಿದ್ದೇ ಸೈನ್ಯ. ಸೈನ್ಯಗಳು ಹುಟ್ಟಿದ ಮೇಲೆ ಹುಟ್ಟಿದ್ದು ಸಂಘರ್ಷಗಳು ಹೆಚ್ಚಾದವು. ಸಮಾಜಕ್ಕೆ ಯಾವುದೂ ನಿಷಿದ್ಧವಲ್ಲದ, ಸಾಧ್ಯವಿಲ್ಲದ ಕಾಲದಲ್ಲಿ ಇವೆಲ್ಲ ಹುಟ್ಟಿದ್ದು. ಇಂಥ ಸಮಾಜದಲ್ಲಿ ಯಾವ ಜೀವನ ಮೌಲ್ಯಗಳೂ ಅಸ್ವೀಕೃತವಾಗಲಾರದು. ಈಗಲೂ ಭಾರತದಲ್ಲಿ ಎಷ್ಟೋ ಸಮಾಜಗಳು ಯಾವ ಸಂಘರ್ಷವೂ ಇಲ್ಲದೆ ಬದುಕುತ್ತಿವೆ. ಜಗತ್ತಲ್ಲೂ ಕೂಡ.

ಇದರ ಅರ್ಥವಿಷ್ಟೆ: ಬದುಕುವುದಕ್ಕೆ ಸಮಾಜ ಮುಖ್ಯವೇ ಹೊರತು ರಾಷ್ಟ್ರವಲ್ಲ. ಆದರೆ ಮನುಷ್ಯನ ಶೋಧನೆಗಳಿಗೆ ಕೊನೆಯಿಲ್ಲ. ಈ ಶೋಧನೆಗಳ ಮೂಲವಿರು ವುದು ಮನುಷ್ಯನ ಕುತೂಹಲದಲ್ಲಿ. ಕುತೂಹಲವೇ ಬುದ್ಧಿಯ ಅಸ್ತಿತ್ವಕ್ಕೆ ಪ್ರತೀಕವಾಗಿರುತ್ತದೆ. ಮನುಷ್ಯನ ಬುದ್ಧಿ ವಿಕಾಸವಾದಂತೆ ಅನೇಕ ಆವಿಷ್ಕಾರಗಳು ಆಗುತ್ತಾ ಹೋದವು. ಇವೆಲ್ಲ ವಿಕಾಸವೆಂದುಕೊಂಡರೆ ವಿಕಾಸವೇ ಹೌದು; ವಿನಾಶವೆಂದುಕೊಂಡರೆ ವಿನಾಶವೂ ಹೌದು. ಹೀಗೆ ವಿಕಾಸಗೊಂಡ ಈ ಮನುಷ್ಯ ಎಂಬ ಜಗತ್ತಿಗೆ ವಿಷಯದ ನಂಟು ಅಂಟಿಕೊಂಡಿತು. ಪರಿಣಾಮವಾಗಿ ಅವನ ಬುದ್ಧಿ ಮತ್ತು ಭಾವ ಪ್ರಪಂಚದ ಮಧ್ಯೆ ಕಂದಕ ಬೆಳೆದು ಸ್ವಾರ್ಥ ಹಾಗೂ ಸಂಕುಚಿ ತತೆಯೇ ಎಡೆಯೂ ವ್ಯಾಪಿಸಿ ಮನುಷ್ಯನ ವಿಕಾಸ ಪಥಕ್ಕೆ ಅಡ್ಡಿಯಾಗಿ ವಿನಾಶಕ್ಕೂ ಹೇತುವಾಗುತ್ತಾ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಜಾತಿ, ಕುಲ, ಮತ, ಪಂಥ, ಪಂಗಡ, ಧರ್ಮ- ಇವೆಲ್ಲ ಮನುಷ್ಯನ ಆವಿಷ್ಕಾರಗಳೇ ಆಗಿರುವುದರಿಂದ ಅವುಗಳಿಂದ ಅಪ್ರಾಕೃತಿಕ ಅಸ್ವಾಭಾವಿಕ ಭಿನ್ನತೆಗಳು ಕೃತಕತೆಯಲ್ಲಿ ಹುಟ್ಟಿಕೊಂಡವು. ತಾನು, ತಾವು, ತನ್ನದು, ತಮ್ಮದು ಎಂಬ ಭಾವ ಆಳವಾದ ಬಿರುಕು ಗಳನ್ನು ಸೃಷ್ಟಿಯಾಗಿ ಅವು ವೃದ್ಧಿಸುತ್ತಾ ವೈಮನಸ್ಯಕ್ಕೆ
ದ್ವೇಷಕ್ಕೆ ಕಾರಣವಾಗಿ ಒಂದು ಜೀವಂತ ಸಮಾಜಕ್ಕೆ ಮಾರಣಾಂತಿಕವಾದ ಆಘಾತವನ್ನು ನೀಡಿತು. ಅಷ್ಟೇ ಅಲ್ಲ ನೀಡುತ್ತಲೂ ಇದೆ. ಕೃತಕತೆಯಲ್ಲಿ ಹುಟ್ಟಿದ ಅಪ್ರಾಕೃತಿಕ ಅಸ್ವಾಭಾವಿಕ ಭಿನ್ನತೆಗಳು ಮನುಷ್ಯನ ಏಳ್ಗೆಗೆ ಪೂರಕವಾಗಿ ಒದಗುತ್ತಿಲ್ಲವೆಂಬ ಸತ್ಯ ಅರಿವಾಗದ ಮಟ್ಟಿಗೆ ಮನುಷ್ಯ ವರ್ತಮಾನದಲ್ಲಿ ನಿಂತು ಆಲೋಚಿಸುತ್ತಾ ಭವಿಷ್ಯದ ಗುಂಗಿನಲ್ಲಿ ಬದುಕುತ್ತಿದ್ದಾನೆ.

ಜಗತ್ತಿನ ನಾಗರಿಕತೆಗಳು ಬೆಳೆಸಿಕೊಂಡು ಬಂದ ಕುಟುಂಬ, ಸಾಮಾಜಿಕ ಜೀವನದ ವಿನ್ಯಾಸಗಳು ಆಕೃತಿಗಳು ಆಧುನಿಕ ಮಾನವನು ಸೃಷ್ಟಿಸಿದ ಕೃತಕತೆಯ ಸಂಬಂಧದಲ್ಲಿ ಹುದುಗಿ ಹೋಗಿ ಸದ್ಯದ ಪರಿಸ್ಥಿತಿಯಲ್ಲಿ ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಆಲೋಚಿಸುವಷ್ಟು ಸಹನೆಯೂ ಇಲ್ಲದೆ ಜಾತಿ, ಕುಲ, ಮತ,
ಧರ್ಮದ ಅಫೀಮಿನ ಧಾವಂತದ ಬದುಕಲ್ಲಿ ನಿರತನಾಗಿದ್ದಾನೆ. ಸ್ವ ಅರಿವಿನಲ್ಲಿಯೂ ಇದಕ್ಕೆ ಪರಿಹಾರವೇ ಇಲ್ಲವೆಂಬಂತೆ ಜಗತ್ತೂ ಓಡುತ್ತಿದೆ. ಜತೆಯಲ್ಲಿ ನಾವೂ…!