ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ಈ ಲೇಖನದಲ್ಲಿ ಬರುವ ಯಾವ ಪಾತ್ರಗಳೂ, ಸಂದರ್ಭಗಳೂ ಕಾಲ್ಪನಿಕವಲ್ಲ. ಇದರಲ್ಲಿ ಬರುವ ಪಾತ್ರಗಳು, ಸಂದರ್ಭಗಳು ಬದುಕಿರದ ಅಥವಾ ಬದುಕಿರುವ ಯಾರನ್ನಾದರೂ ಹೋಲಿದರೆ ಅದು ವಾಸ್ತವ!
ಆಕೆಯ ಹೆಸರು ನಂದಾ. ನೀಲವೇಣಿ, ಮತ್ಸ್ಯನಯನೆ, ಮುಗ್ಧ ನಗುವಿನ, ಸ್ನಿಗ್ಧ ಸೌಂದರ್ಯದ, ಮುದ್ದು ಮೊಗದ, ಕುಸುಮ ಕೋಮಲೆ ‘ನಂದಾ’. ಜೀವನದ ಮೊದಲ ಕೆಲವು ವರ್ಷ ‘ಬೇಬಿ ನಂದಾ’ ಆಗಿದ್ದರಿಂದ ಕೆಲವರ ಪಾಲಿಗೆ ಆಕೆ ಕೊನೆಯವರೆಗೂ ಬೇಬಿ ನಂದಾ. ಈಗಲೂ ಆಕೆ ಯಾರೆಂದು ನೆನಪಾಗದಿದ್ದರೆ, ‘ಯೇ ಸಮಾ, ಸಮಾ ಹೈ ಯೆ ಪ್ಯಾರಕಾ…’ ಎಂದು ತೆರೆಯ ಮೇಲೆ ಹಾಡಿದವಳನ್ನು ನೆನಪಿಸಿಕೊಳ್ಳಿ, ನಂದಾಳ ಮುಖ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಆಕೆ ಮಾಸ್ಟರ್ ವಿನಾಯಕ ಎಂದೇ ಹೆಸರುವಾಸಿಯಾಗಿದ್ದ ಕೊಲ್ಹಾಪುರ ಮೂಲದ ವಿನಾಯಕ ದಾಮೋದರ ಕರ್ನಾಟಕಿಯವರ ಮಗಳು.
ಮುಂದುವರಿಯುವುದಕ್ಕಿಂತ ಮುಂಚೆ ಮಾಸ್ಟರ್ ವಿನಾಯಕ ಅವರ ಕುರಿತು ಸ್ವಲ್ಪ ಹೇಳಬೇಕು. ಮಾಸ್ಟರ್ ವಿನಾಯಕ 1930 ಮತ್ತು 40 ದಶಕದಲ್ಲಿ ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಹೆಸರುಮಾಡಿದವರು. ಅವರು ಮರಾಠಿ ಚಿತ್ರೋದ್ಯಮದ ದಿಗ್ಗಜರಾದ ಭಲ್ಜಿ ಪೆಂಡಾರಕರ್, ಛಾಯಾ ಗ್ರಾಹಕ ಬಾಬುರಾವ್ ಪೆಂಡಾರಕರ್ ಕಿರಿಯ ಸಹೋದರ. ಇನ್ನೋರ್ವ ದಿಗ್ಗಜ ನಿರ್ದೇಶಕ ವಿ.ಶಾಂತಾರಾಂ, ವಿನಾಯಕ ಅವರ ಚಿಕ್ಕಪ್ಪ. ಅವರು ಮಂಗೇಶ್ಕರ್ ಪರಿವಾರ ದೊಂದಿಗೂ ಆಪ್ತರಾಗಿದ್ದವರು.
ಎಲ್ಲಕ್ಕಿಂತ ಹೆಚ್ಚಾಗಿ, ಲತಾ ಮಂಗೇಶ್ಕರ್ ಎಂಬ ಅಸಾಮಾನ್ಯ ಗಾಯಕಿಯನ್ನು ತಮ್ಮ ಪಹೀಲಿ ಮಂಗಳಗೌರ ಚಿತ್ರದಲ್ಲಿ ಮೊದಲ ಬಾರಿ ಹಾಡಿಸಿ, ಚಿತ್ರರಂಗಕ್ಕೆ ಅನರ್ಘ್ಯ ರತ್ನವೊಂದನ್ನು ನೀಡಿದವರು. ಹಂಸ ಪಿಕ್ಚರ್ಸ್ ಹೆಸರಿನ ಸಂಸ್ಥೆ ಹುಟ್ಟುಹಾಕಿ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡವರು. ಇಪ್ಪತ್ತಕ್ಕೂ ಹೆಚ್ಚು ಚಿತ್ರ ಗಳಲ್ಲಿ ನಾಯಕನಾಗಿ ನಟಿಸಿ, ಹತ್ತೊಂಬತ್ತು ಚಿತ್ರಗಳನ್ನು ನಿರ್ದೇಶಿದವರು. ‘ಬ್ರಹ್ಮಚಾರಿ’ ಅವರು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಅತ್ಯುತ್ತಮ ಮರಾಠಿ
ಚಿತ್ರ. ಆ ಚಿತ್ರದಲ್ಲಿ ನಾಯಕ ನಟಿಗೆ ಸ್ನಾನದ ಉಡುಪು ತೊಡಿಸಿದ್ದಕ್ಕಾಗಿ ಆ ಕಾಲದಲ್ಲಿ (1938) ಸಾಕಷ್ಟು ವಿವಾದವನ್ನೂ ಎದುರಿಸಿದರು. ಮಾಸ್ಟರ್ ವಿನಾಯಕ
ಅವರ ಮಗುವೇ ಈ ಲೇಖನದ ಕಥಾ ನಾಯಕಿ, ಹಿಂದಿ ಚಿತ್ರಲೋಕ ಕಂಡ ವಿಭಿನ್ನ ಅಭಿನೇತ್ರಿ, ನಂದಾ ಕರ್ನಾಟಕಿ.
ಆಕೆ ಹುಟ್ಟಿದ್ದು 1939ರಲ್ಲಿ. ಬಾಲ್ಯದಲ್ಲಿ ತಂದೆ ಹೇಳುತ್ತಿದ್ದ ದೇಶಭಕ್ತಿಯ, ರಾಷ್ಟ್ರೀಯತೆಯ, ಇತಿಹಾಸದ ಕತೆಗಳನ್ನು ಕೇಳುತ್ತಾ ಬೆಳೆದವಳು. ತಂದೆಗೂ ಮಗಳಲ್ಲಿ ಅತೀವ ಭರವಸೆ. ತನ್ನ ಮಗಳು ಮುಂದೊಂದು ದಿನ ದೇಶದಾದ್ಯಂತ ಹೆಸರು ಮಾಡುತ್ತಾಳೆಂಬ ಭರವಸೆ. ಆಕೆ ಐದು ವರ್ಷದವಳಾಗಿದ್ದಾಗ ವಿನಾಯಕ ಅವಳನ್ನು ಮೊದಲ ಬಾರಿ ಅವರದ್ದೇ ಸಿನಿಮಾದಲ್ಲಿ ಅಭಿನಯಿಸಲು ಹೇಳಿದರು. ಅದು ಚಿಕ್ಕ ಹುಡುಗನ ಪಾತ್ರವಾಗಿದ್ದು, ಕೂದಲು ಕತ್ತರಿಸಬೇಕಾಗಿತ್ತು. ತನ್ನ ಕೂದಲು ಕತ್ತರಿಸಲು ಸಮ್ಮತಿಸದ ಬಾಲಕಿ, ಕೊನೆಗೆ ಅಮ್ಮನ ಒತ್ತಾಯಕ್ಕೆ ಮಣಿದು ಒಪ್ಪಿದಳು.
ಅಭಿನಯ ಲೋಕದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವಾಗಲೇ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಾಲ್ಕೇ ದಿನದ ನಂತರ, ನಲವತ್ತೊಂದು ವರ್ಷದ ಆಕೆಯ ತಂದೆ ಈ ಲೋಕವನ್ನೇ ಬಿಟ್ಟು ಹೊರಟುಹೋದರು. ಆಕೆಯ ತಂದೆ ವಿನಾಯಕ ಆರಂಭಿಸಿದ, ಆಕೆಯ ಮೊದಲ ಚಿತ್ರ ‘ಮಂದಿರ’ವನ್ನು ನಂತರ ದಿನಕರ ಪಾಟೀಲ್ ಮುಗಿಸಿ ದರು. ಕೆಲವೇ ದಿನಗಳಲ್ಲಿ ಅವರ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಅವಳಿಗೆ ಅರಿವಿಲ್ಲದಂತೆಯೇ, ಏಳು ವರ್ಷದ ಮೃದು ಭುಜಗಳ ಮೇಲೆ ಜವಾಬ್ದಾರಿಯ ಭಾರ ಬಿದ್ದಾಗಿತ್ತು.
ತಂದೆ ತೀರಿಹೋದ ಎರಡು ವರ್ಷಗಳ ಮನೆಯ ಹೊಣೆ ಹೊರಲು ಆಕೆ ಸಿದ್ಧಳಾಗಿದ್ದಳು. ಆಕೆ ಬಾಲ ನಟಿಯಾಗಿ ಅಭಿನಯಿಸಲು ಆರಂಭಿಸಿದಳು. ಮೊದಲ ಚಿತ್ರ ‘ಮಂದಿರ’ದಿಂದ ಆರಂಭಿಸಿ, ಜಗ್ಗು, ಅಂಗಾರೆ, ಜಾಗೃತಿ ಮೊದಲಾದ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸಿ, ಬೆಳ್ಳಿ ಪರದೆಯ ‘ಬೇಬಿ ನಂದಾ’ ಎಂದು ಗುರುತಿಸಿಕೊಂಡು ಹೆಸರುಮಾಡಿದಳು. ಅವಳ ಗಳಿಕೆ ಮನೆಯ ಖರ್ಚು ಸರಿದೂಗಿಸಲಷ್ಟೇ ಅಲ್ಲದೆ ಆರು ಜನ ಸಹೋದರ ಸಹೋದರಿಯರನ್ನು ಓದಿಸುವಲ್ಲೂ ಸಹಕಾರಿಯಾಯಿತು.
ನಟನೆಯಲ್ಲಿ ವ್ಯಸ್ತವಾಗಿದ್ದ ಆಕೆ ಶಾಲಾ ಶಿಕ್ಷಣದಿಂದ ವಂಚಿತಳಾದರೂ ಮನೆಯ ಓದುತ್ತಿದ್ದಳು. ಆಕೆ ಹದಿನಾರು ವರ್ಷದವಳಿರುವಾಗಲೇ ನಾಯಕ ನಟಿಯಾಗುವ ಅವಕಾಶ ಒದಗಿಬಂತು. ಆಕೆಯ ತಂದೆಯ ಚಿಕ್ಕಪ್ಪ, ಖ್ಯಾತ ನಿರ್ದೇಶಕ ವಿ.ಶಾಂತಾರಾಂ ಸಹೋದರ – ಸಹೋದರಿಯ ಕಥಾವಸ್ತುವನ್ನು ಇಟ್ಟುಕೊಂಡು ‘ದಿಯಾ ಔರ್ ತೂಫಾನ್’ ಎಂಬ ಚಿತ್ರ ನಿರ್ಮಿಸಿದರು. ಅಲ್ಲಿಗೆ, ಬಾಲ ಕಲಾವಿದೆಯಾಗಿ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಂದಾ ಪ್ರಮುಖ ಪಾತ್ರದಲ್ಲಿ ನಟಿಸಿದ ಮೊದಲ ಚಿತ್ರದಲ್ಲೂ ಸಹೋದರಿಯ ಪಾತ್ರವನ್ನೇ ನಿಭಾಯಿಸಬೇಕಾಯಿತು.
ನಂತರ ಆಕೆ ಅಭಿನಯಿಸಿದ ಬಾಭಿ, ದೇವಾನಂದ್ ಸಹೋದರಿಯಾಗಿ ನಟಿಸಿದ ಕಾಲಾ ಬಝಾರ್, ರಾಜ್ ಕುಮಾರ್ ಸಹೋದರಿಯಾಗಿ ಅಭಿನಯಿಸಿದ ದುಲ್ಹನ್
ಚಿತ್ರಗಳು ಆಕೆಗೆ ಹೆಸರು ತಂದುಕೊಟ್ಟವು. ಆಕೆಯ ಅಭಿನಯ ಕಂಡ ದೇವಾನಂದ್, ಮುಂದೊಂದು ದಿನ ನೀನು ನನ್ನ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕು
ಎಂದಿದ್ದರು. ಅಂತೆಯೇ, ದೇವಾನಂದ್ ಜತೆ ಹಮ್ ದೋನೊ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದಳು. ನಂದಾಗೆ ಖ್ಯಾತಿ ತಂದುಕೊಟ್ಟ ಚಿತ್ರ 1959ರಲ್ಲಿ
ಬಿಡುಗಡೆಯಾದ ಛೋಟಿ ಬೆಹೆನ್. ಆ ಚಿತ್ರದಲ್ಲಿ ಆಕೆ ನಾಯಕ ನಟ ಬಲರಾಜ್ ಸಹಾನಿಯ ಕುರುಡು ತಂಗಿಯ ಪಾತ್ರ ನಿರ್ವಹಿಸಿದ್ದಳು.
‘ಭಯ್ಯಾ ಮೆರೆ, ರಾಖಿಕೆ ಬಂಧನ್ ಕೊ ನಿಭಾನಾ…’ ಎಂದು ಆಕೆ ಹಾಡಿದ್ದು ಎಲ್ಲರಿಗೂ ನೆನಪಿರಬಹುದು. ಆ ಚಿತ್ರ ನೋಡಿದ ದೇಶದ ಜನ ಸಾವಿರಾರು ಸಂಖ್ಯೆ ಯಲ್ಲಿ ನಂದಾಗೆ ರಾಖಿ ಕಳಿಸಿಕೊಟ್ಟಿದ್ದರು. ನೋಡ ನೋಡುತ್ತಿದ್ದಂತೆ ಆಕೆ ಇಡೀ ದೇಶದ ಸಹೋದರಿಯಾದಳು. ಅದೇ ವರ್ಷ ಆಕೆ ನಟಿಸಿದ ಧೂಲ್ ಕಾ ಫೂಲ್ ಕೂಡಾ ಸುಪರ್ ಹಿಟ್ ಚಿತ್ರವಾಗಿತ್ತಾದರೂ ಸಹೋದರಿಯ ಪಟ್ಟ ಆಕೆಯನ್ನು ಬಿಡಲೇ ಇಲ್ಲ.
ನಂದಾ, ಅಶೋಕ್ ಕುಮಾರ್, ದೇವಾನಂದ್, ಮನೋಜ್ ಕುಮಾರ್ ಸುನೀಲ್ ದತ್, ರಾಜೇಶ್ ಖನ್ನಾ, ಜೀತೇಂದ್ರ ಸೇರಿದಂತೆ ಬಹುತೇಕ ಎಲ್ಲಾ ನಾಯಕ ನಟರ ಜತೆಯೂ ಅಭಿನಯಿಸಿದಳು. ಒಂದು ಕಾಲದಲ್ಲಿ ನಟಿಯರು ಶಶಿ ಕಪೂರ್ ಜತೆ ಅಭಿನಯಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ನಂದಾ ಆತನೊಂದಿಗೆ ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದಳು. ಅದರಲ್ಲಿ ಜಬ್ ಜಬ್ ಫುಲ್ ಖಿಲೆಯಂತಹ ಯಶಸ್ವಿ ಚಿತ್ರಗಳೂ ಸೇರಿವೆ. ಆಕೆ ಅಭಿನಯಿಸಿದ ಶೋರ್, ಬಾಭಿ, ಆಹಿಸ್ತಾ ಆಹಿಸ್ತಾ, ಗುಮ್ನಾಮ, ಬಡೀ ದೀದಿ ಚಿತ್ರಗಳೆಲ್ಲ ಆಕೆಗೆ ಹೆಸರು ತಂದುಕೊಟ್ಟ ಚಿತ್ರಗಳು. ಆಕೆ ಆಂಚಲ್ ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನೂ ಪಡೆದಳು.
ಸುಮಾರು ಎಪ್ಪತ್ತಕ್ಕೂ ಹೆಚ್ಚು ಹಿಂದಿ ಚಿತ್ರಗಳು, ಎಂಟು ಗುಜರಾತಿ ಚಿತ್ರಗಳಲ್ಲಿಯೂ ನಟಿಸಿ ಹೆಸರು ಮಾಡಿದ ನಂದಾ, ಶೇವ್ಗ್ಯಾಚಾ ಶೆಂಗಾ, ಆಯಿ ವಿನಾ ಬಾಳ್, ದೇವ್ಘರ್, ಕುಲದೈವತ್ ಮೊದಲಾದ ಮರಾಠಿ ಚಿತ್ರಗಳೂ ಸೇರಿದಂತೆ ಸುಮಾರು ನೂರು ಚಿತ್ರಗಳಲ್ಲಿ ನಟಿಸಿದಳು. ಶೇವ್ಗ್ಯಾಚಾ ಶೆಂಗಾ ಚಿತ್ರದಲ್ಲಿ
ಆಕೆ ನಿಭಾಯಿಸಿದ ಸಹೋದರಿಯ ಪಾತ್ರ ಕಂಡು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಆಕೆಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಿದ್ದರು. ಇತ್ತೆಫಾಕ್ ಚಿತ್ರದಲ್ಲಿನ ಆಕೆಯ ಖಳನಾಯಕಿಯ ಪಾತ್ರವನ್ನಾಗಲೀ, ನಯಾ ನಶಾ ಚಿತ್ರದಲ್ಲಿನ ಆಕೆಯ ಡ್ರಗ್ ಎಡಿಕ್ಟ್ ಪಾತ್ರವನ್ನಾಗಲೀ ಪ್ರೇಕ್ಷಕರು ಅಷ್ಟು ಇಷ್ಟಪಡಲಿಲ್ಲ. ಅಸಲಿಗೆ ನಂದಾಳನ್ನು ಆ ರೀತಿಯ ಪಾತ್ರಗಳಲ್ಲಿ ನೋಡಲು ಅವರು ಸಿದ್ಧರಾಗಿರಲಿಲ್ಲ!
1965 ಆಕೆಯ ಜೀವನದಲ್ಲಿ ಅವಿಸ್ಮರಣೀಯ ವರ್ಷ. ಆ ವರ್ಷ ಆಕೆಯ ಆರು ಚಿತ್ರಗಳು ಬಿಡುಗಡೆಯಾದವು. ಅದರಲ್ಲಿ ಗುಮ್ನಾಮ, ತೀನ್ ದೇವಿಯಾ, ಜಬ್ ಜಬ್ ಫೂಲ್ ಖಿಲೆ ಸುಪರ್ ಹಿಟ್ ಚಿತ್ರಗಳು. ಸುಮಾರು ನಾಲ್ಕು ದಶಕಗಳ ವರೆಗೆ ಹಿಂದಿ ಚಿತ್ರರಂಗದಲ್ಲಿ ತನ್ನ ಅಸ್ತಿತ್ವ ಮೆರೆದ ನಂದಾ, ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಳು. 1960 ರಿಂದ 65ರವರೆಗೆ ನೂತನ್, 1966 ರಿಂದ 69ರವರೆಗೆ ವಹೀದಾ ರೆಹಮಾನ್, 1970 ರಿಂದ 73ರವರೆಗೆ ಸಾಧನಾ ಅವರೊಂದಿಗೆ ಸಮಾನವಾಗಿ ಸಂಭಾವನೆ ಪಡೆಯುತ್ತಿದ್ದ, ಬೇಡಿಕೆಯ ನಟಿಯಾಗಿದ್ದರು.
ವಿಶೇಷವೆಂದರೆ ನಂದಾ ತನ್ನ ಎಲ್ಲಾ ಸಮಕಾಲೀನ ನಟಿಯರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅದರಲ್ಲೂ ವಹೀದಾ ರೆಹಮಾನ್ ಜತೆ ಅವರ ಗೆಳೆತನ ಹೆಚ್ಚು ಆಪ್ತವಾಗಿತ್ತು. ಆಕೆ ಒಮ್ಮೆಯೂ ಅಹಂಕಾರದಿಂದ ಬೀಗಿದ್ದಿಲ್ಲ, ಯಾರೊಂದಿಗೂ ಕಿತ್ತಾಡಿಕೊಂಡಿದ್ದಿಲ್ಲ, ಯಾರ ಮೇಲೂ ಕಂಪ್ಲೇಂಟ್ ಮಾಡಿದ್ದಿಲ್ಲ.
ನಂದಾ ಬಾಲ ಕಲಾವಿದೆಯಾಗಿದ್ದಾಗ ಹಿಂದಿ ಚಿತ್ರರಂಗದ ಶೋಮ್ಯಾನ್ ರಾಜ್ ಕಪೂರ್ ನಿರ್ಮಿಸುತ್ತಿದ್ದ ಬೂಟ್ ಪಾಲಿಶ್ ಚಿತ್ರದ ಆಡಿಶನ್‌ಗೆ ಹೋಗಿದ್ದರು.
ಅಂದು ರಾಜ್ ಕಪೂರ್ ‘ನೀನು ಮಾಸ್ಟರ್ ವಿನಾಯಕ ಮಗಳು ಎಂದು ಗೊತ್ತಿದೆ, ನೀನು ತುಂಬಾ ಚೆನ್ನಾಗಿ ಅಭಿನಯಿಸುತ್ತೀಯಾ ಎಂಬುದೂ ತಿಳಿದಿದೆ, ಆದರೆ ನನ್ನ ಚಿತ್ರದ ಈ ಪಾತ್ರಕ್ಕೆ ನೀನು ಹೊಂದಾಣಿಕೆಯಾಗುವುದಿಲ್ಲ’ ಎಂದು ಹೇಳಿ ಆಕೆಯನ್ನು ತಿರಸ್ಕರಿಸಿದ್ದರು.
ನಂತರದ ದಿನಗಳಲ್ಲಿ ಆಕೆಯೊಂದಿಗೆ ನಾಯಕ ನಟರಾಗಿ ಅಭಿನಯಿಸಿದ್ದಲ್ಲದೆ, ಅವರು ನಿರ್ಮಿಸಿದ ಪ್ರೇಮ್ ರೋಗ್ ಚಿತ್ರದಲ್ಲಿ ನಟಿಸಲು ಸ್ವತಃ ಅವರೇ ನಂದಾ ಳನ್ನು ಆಹ್ವಾನಿಸಿದರು. ಅದರ ನಂತರ ನಂದಾ ದಿಲೀಪ್ ಕುಮಾರ್ ಜತೆ ಮಜ್ದೂರ್ ಚಿತ್ರದಲ್ಲಿ ಅಭಿನಯಿಸಿದಳು. ಅದೇ ನಂದಾಳ ಕೊನೆಯ ಚಿತ್ರವಾಗುತ್ತದೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ!
ತೆರೆಯಮೇಲೆ ಸಾಕಷ್ಟು ಜನರ ಜತೆ ರೊಮಾನ್ಸ್ ಮಾಡಿದ ನಂದಾಗೆ ನಿಜ ಜೀವನದಲ್ಲಿ ಮಾತ್ರ ಕಂಕಣ ಭಾಗ್ಯ ಬರಲೇ ಇಲ್ಲ. ಆಕೆ ಜಬ್ ಜಬ್ ಫುಲ್ ಖಿಲೆ ಚಿತ್ರ
ಮಾಡುತ್ತಿರುವಾಗ ಮಹಾರಾಷ್ಟ್ರ ಮೂಲದ ಲೆಫ್ಟಿನೆಂಟ್ ಕರ್ನಲ್ ಒಬ್ಬರು ಮದುವೆಯಾಗಲು ಬಯಸಿದ್ದರು. ಯುವಕ ಸುಂದರವಾಗಿದ್ದು, ಒಳ್ಳೆಯ ನಡತೆಯವ
ನಾಗಿದ್ದರಿಂದ ತಾಯಿಯೂ ಅವಳ ಮನವೊಲಿಸಲು ಯತ್ನಿಸಿದರು. ತಾಯಿಯ ಒತ್ತಾಯಕ್ಕಾಗಲೀ, ನಂತರ ಆಕೆಯ ಸಹೋದರ ತಂದ ಸಾಕಷ್ಟು ಮದುವೆಯ
ಪ್ರಸ್ತಾಪಕ್ಕಾಗಲೀ ಆಕೆ ಸಮ್ಮತಿಸಲಿಲ್ಲ. ಬಹುಶಃ ಒಳಗೊಳಗೇ ಆಕೆ ನಿರ್ದೇಶಕ ಮನಮೋಹನ್ ದೇಸಾಯಿ ಯವರನ್ನು ಪ್ರೀತಿಸುತ್ತಿದ್ದುದು ಕಾರಣವಾಗಿತ್ತಾ?
ಗೊತ್ತಿಲ್ಲ. ಆದರೆ ಆಕೆ ತನ್ನ ಬಯಕೆಯನ್ನು ದೇಸಾಯಿ ಬಳಿ ಒಮ್ಮೆಯೂ ಹೇಳಿಕೊಂಡಿರಲಿಲ್ಲ. ಈ ನಡುವ ದೇಸಾಯಿ ಇನ್ನೊಬ್ಬಳನ್ನು ಮದುವೆಯಾಗಿದ್ದರು. ಕೆಲವು
ವರ್ಷಗಳ ನಂತರ ದೇಸಾಯಿಯವರ ಪತ್ನಿ ತೀರಿಹೋದ ನಂತರ ಗೆಳತಿ ವಹೀದಾ ರೆಹಮಾನ್ ಮಧ್ಯಸ್ಥಿಕೆಯಲ್ಲಿ ಇಬ್ಬರೂ ಮದುವೆಯಾಗಲು ಒಪ್ಪಿದರು.
ನಂದಾ ಮತ್ತು ದೇಸಾಯಿಯವರ ನಿಶ್ಚಿತಾರ್ಥವೂ ಆಯಿತು. ಆಗ ನಂದಾಗೆ ಐವತ್ತೆರಡು ವರ್ಷ ವಯಸ್ಸು. ವಿಧಿಯ ಆಟ ಬೇರೆಯೇ ಇತ್ತು. ಮದುವೆಗೆ ಸ್ವಲ್ಪ
ದಿನಕ್ಕೆ ಮುಂಚೆ ದೇಸಾಯಿ ತಮ್ಮ ಮನೆಯ ಛಾವಣಿಯಿಂದ ಕೆಳಗೆ ಬಿದ್ದು ತೀರಿಹೋದರು. ನಂದಾಗೆ ಅದು ತೀವ್ರ ಆಘಾತ ನೀಡಿತು. ಆ ಘಟನೆಯಿಂದ ಕುಗ್ಗಿ ಹೋದ ನಂದಾ ಕೆಲವು ಆತ್ಮೀಯರನ್ನು ಬಿಟ್ಟು ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಆ ಘಟನೆಯ ನಂತರ ಸದಾ ಬಿಳಿ ಸೀರೆ ಉಡಲು ಆರಂಭಿಸಿದ ನಂದಾ ಮತ್ತೆಂದೂ ಬಣ್ಣದ ಸೀರೆ ಉಡಲೇ ಇಲ್ಲ. ಮಾನಸಿಕವಾಗಿ ಆಕೆ ದೇಸಾಯಿಯನ್ನು ವರಿಸಿಯೂ ಆಗಿತ್ತು, ಪತಿಯೆಂದು ಸ್ವೀಕರಿಸಿಯೂ ಆಗಿತ್ತು, ಕಳೆದುಕೊಂಡೂ ಆಗಿತ್ತು.
ಮುಂದೆ ನಂದಾ ಒಂಟಿಯಾಗಿಯೇ ಬದುಕಿದಳು. ತನ್ನ ಅಡುಗೆಯನ್ನು ತಾನೇ ತಯಾರಿಸಿಕೊಳ್ಳುತ್ತಿದ್ದಳು. ೨೦೧೪ರ ಮಾರ್ಚ್ ತಿಂಗಳ ಒಂದು ದಿನ ಮುಂಜಾನೆ
ಉಪಹಾರ ತಯಾರಿಸುವಾಗ ಅಡುಗೆಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಳು. ‘ಜಿಂದಗಿ ಔರ್ ಕುಛ್ ಭೀ ನಹೀ ತೇರಿ ಮೇರಿ ಕಹಾನಿ ಹೈ…’
ಎಂದು ಹಾಡಿದ ಹಿಂದಿ ಚಿತ್ರರಂಗದ ಚಿರ ಸಹೋದರಿ ಚಿರ ನಿದ್ರೆಗೆ ಜಾರಿದ್ದಳು. ಇಂದಿನ ಚಿತ್ರರಂಗವನ್ನು ನೋಡಿ, ನಂದಾಳ ಕಥೆ ಕೇಳಿದರೆ, ನಂಬಿಕೆ ಸಾಲುವು ದಿಲ್ಲ. ಇಂದಿನ ಚಿತ್ರರಂಗದ ಯುವ ಪೀಳಿಗೆಯ ಜಗಳ, ವೃತ್ತಿ ಮತ್ಸರ ನೋಡಿದಾಗ, ವಿವಾಹ ವಿಚ್ಛೇದನಗಳನ್ನು ಕಂಡಾಗ ನಂದಾ ನೆನಪಾಗುತ್ತಾರೆ.
ಕಾಸ್ಟಿಂಗ್ ಕೌಚ್, ಮೀ ಟೂ ವಿಷಯಗಳು ಕೇಳಿ ಬರುವಾಗ ನಂದಾ ನೆನಪಾಗುತ್ತಾರೆ. ಇಡೀ ಚಿತ್ರರಂಗವೇ ಹೊಲಸು ಎಂದು ಜನ ಮಾತಾಡಿಕೊಳ್ಳುವಾಗ ನಂದಾ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಚಿತ್ರರಂಗದಲ್ಲಿ ತಾರೆ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ನಾಲ್ಕು ದಶಕ ಗಳ ಕಾಲ ಚಿತ್ರರಂಗದಲ್ಲಿದ್ದು, ತಾರೆಯಾದರೂ ನೆಲ ಬಿಡದ ನಂದಾ ಕಾಣುತ್ತಾರೆ. ಗಾಸಿಪ್ ಇಲ್ಲದೆಯೇ ಚಿತ್ರರಂಗದಲ್ಲಿ ಬದುಕಬಹುದು ಎಂಬುದಕ್ಕೆ ಉದಾಹರಣೆ ಯಾಗಿ, ಯುವ ಪೀಳಿಗೆಗೆ ದಾರಿದೀಪವಾಗಿ ನಿಲ್ಲುತ್ತಾರೆ.