ಪೋರ್ಟ್-ಒ-ಪ್ರಿನ್ಸ್ (ಹೈಟಿ): ಏರಿಯಲ್ ಹೆನ್ರಿ ಅವರು ಹೈಟಿಯ ನೂತನ ಪ್ರಧಾನಿಯಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ವೃತ್ತಿಯಿಂದ ನರರೋಗ ಶಸ್ತ್ರಚಿಕಿತ್ಸಕ ಹೆನ್ರಿ, ಈ ಮೊದಲು ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ ಅವರು, ‘ನಾವು ಮಾಡಬೇಕಾದ ಕಾರ್ಯಗಳು ಬಹಳ ಕಠಿಣ ಹಾಗೂ ಸಂಕೀರ್ಣವಾದವುಗಳಾಗಿವೆ. ಎಲ್ಲರೂ ಒಗ್ಗಟ್ಟಿನಿಂದ ಈ ಸವಾಲುಗಳನ್ನು ಎದುರಿಸೋಣ’ ಎಂದರು. ಜೊವೆನೆಲ್ ಮೊಯಿಸ್ ಅವರ ಹತ್ಯೆ ಕುರಿತು ನಡೆಯುತ್ತಿರುವ ತನಿಖೆಗೆ ಮಿತ್ರ ರಾಷ್ಟ್ರಗಳ ಸಹಕಾರ ಕೋರುವೆ. ಈ ದುಷ್ಕೃತ್ಯಕ್ಕೆ ಕಾರಣರಾದವರಿಗೆ ಶಿಕ್ಷಿಸದೇ ಬಿಡುವುದಿಲ್ಲ ಎಂದರು.
ಅಧ್ಯಕ್ಷರಾಗಿದ್ದ ಜೊವೆನೆಲ್ ಮೊಯಿಸ್ ಅವರನ್ನು ಜುಲೈ 7ರಂದು ಮುಂಜಾನೆ ಅವರ ಮನೆಯಲ್ಲಿಯೇ ಸಶಸ್ತ್ರ ವ್ಯಕ್ತಿಗಳ ಗುಂಪು ಹತ್ಯೆ ಮಾಡಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ, ಕ್ಲಾಡ್ ಜೋಸೆಫ್ ಅವರು ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.