ನವದೆಹಲಿ: ಕರೋನಾ ಸೋಂಕಿನಿಂದ ಇನ್ನೂ ಈಗೀಗ ಜನ ಸುಧಾರಿಸಿಕೊಳ್ಳುತ್ತಿದ್ದಾರೆ. ಆಗಲೇ ಆತಂಕ ಹುಟ್ಟಿಸಿರುವ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಬಲಿಯಾಗಿದೆ.
ದೆಹಲಿಯ ಏಮ್ಸ್ನಲ್ಲಿ ಹಕ್ಕಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದು ಹಕ್ಕಿ ಜ್ವರದಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ. ಏಮ್ಸ್ನ ಮಕ್ಕಳ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ H5N1 (ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್ನ ಎಲ್ಲ ಸಿಬ್ಬಂದಿಯೂ ಐಸೋಲೇಶನ್ನಲ್ಲಿ ಇದ್ದಾರೆ. ಏಮ್ಸ್ ವೈದ್ಯರು, ಈ ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು. ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದಿದ್ದಾರೆ.
ಈ ವರ್ಷದ ಪ್ರಾರಂಭದಲ್ಲಿ ದೇಶಾದ್ಯಂತ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ದೆಹಲಿ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಹರ್ಯಾಣಗಳಲ್ಲಿ ಹಕ್ಕಿ ಜ್ವರದಿಂದ ಅನೇಕ ಪಕ್ಷಿಗಳು ಮೃತಪಟ್ಟಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ನೀಡಿತ್ತು.
ಹಕ್ಕಿ ಜ್ವರಕ್ಕೆ ಏವಿಯನ್ ಇನ್ಫ್ಲ್ಯೂಯೆಂಜಾ, H5N1 ಎಂದೂ ಕರೆಯುತ್ತಾರೆ. ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪ. ಹಕ್ಕಿಗಳ ಸಂಪರ್ಕಕ್ಕೆ ಬರುವ ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಈ ಸೋಂಕು ಹರಡುತ್ತದೆ. ಇದು ಸಾಂಕ್ರಾಮಿಕವಾಗಿರುವುದರಿಂದ ಜನ ಸಹಜವಾಗಿಯೇ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಸೂಕ್ತ ಮುತುವರ್ಜಿ ವಹಿಸಿದರೆ ಪ್ರಾಣಾಪಾಯ ಉಂಟಾಗದಂತೆ ತಡೆಯಬಹುದಾಗಿದೆ.