Thursday, 31st October 2024

ಎರಡು ದಿನಗಳ ಭೇಟಿಗೆ ಗೋವಾಕ್ಕೆ ಆಗಮಿಸಿದ ನಡ್ಡಾ

ಪಣಜಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎರಡು ದಿನಗಳ ಭೇಟಿಗಾಗಿ ಗೋವಾಕ್ಕೆ ಆಗಮಿಸಿದ್ದಾರೆ. ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಸಭೆ ನಡೆಸಲಿದ್ದಾರೆ.

ಶನಿವಾರ ಗೋವಾ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆ.ಪಿ ನಡ್ಡಾರವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಬಿಜೆಪಿ ಗೋವಾ ಪ್ರಭಾರಿ ಸಿ.ಟಿ ರವಿ ಮತ್ತು ಪಕ್ಷದ ರಾಜ್ಯ ನಾಯಕರು ಸ್ವಾಗತ ಕೋರಿದರು. ಶನಿವಾರ ಮತ್ತು ಭಾನುವಾರ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ರವರು ಸರಣಿ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಜೆ.ಪಿ ನಡ್ಡಾರವರು ಭಾನುವಾರ ಗೋವಾದ ಪ್ರಸಿದ್ಧ ಮಂಗೇಶಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕುಂಡಯಿಯಲ್ಲಿರುವ ತಪೋಭೂಮಿಯ ಸಧ್ಗುರು ಬ್ರಹ್ಮೇಶಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಪಣಜಿಯ ಡೊನ್ ಬೋಸ್ಕೊ ಶಾಲೆಯಲ್ಲಿ ರುವ ಕೋವಿಡ್ ವ್ಯಾಕ್ಸಿನೇಶನ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.