ದಿಸ್‌ಪುರ್: ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದೆ. ಈ ಸಮಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 40 ಜನರು ಗಾಯಗೊಂಡಿದ್ದು, 6 ಪೊಲೀಸರು ಮೃತಪಟ್ಟಿದ್ದಾರೆ.
ಹಿಂಸಾಚಾರ ನಡೆದ ಕುರಿತು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆಯುತ್ತಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಸಚಿವ ಪಿಜೂಷ್ ಹಜಾರಿಕಾಗೆ ಗಡಿ ಪ್ರದೇಶಕ್ಕೆ ಭೇಟಿ ನೀಡಲು ಸೂಚನೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿ ಸಂಘರ್ಷದ ಕುರಿತು ಸಭೆ ನಡೆಸಿದ್ದರು. ದಕ್ಷಿಣ ಅಸ್ಸಾಂನ ಕಚಾರ್ ಮತ್ತು ಮಿಜೋರಾಂನ ಕೊಲಾಸಿಬ್ ಜಿಲ್ಲೆಗಳು ಗಡಿಯನ್ನು ಹಂಚಿಕೊಂಡಿವೆ. ಅಂತರರಾಜ್ಯ ಗಡಿಯಲ್ಲಿರುವ ಅಸ್ಸಾಂನ ಪೊಲೀಸ್ ಠಾಣೆ ಸಮೀಪ ಹಿಂಸಾಚಾರ ನಡೆದಿದೆ.
ಕಳೆದ ಸೋಮವಾರ ಅಸ್ಸಾಂನ 200ಕ್ಕೂ ಹೆಚ್ಚು ಪೊಲೀಸರು ಗಡಿಯೊಳಕ್ಕೆ ಬಂದು ಆಟೋ ನಿಲ್ದಾಣದಲ್ಲಿದ್ದ ಪೊಲೀಸರನ್ನು ಒತ್ತಾಯ ಪೂರ್ವಕವಾಗಿ ಕಳಿಸಿದ್ದಾರೆ ಎಂದು ಮಿಜೋರಾಂ ಮುಖ್ಯಮಂತ್ರಿ ಜೋರಮಾಥಂಗಾ ಹೇಳಿದ್ದಾರೆ.
ಈ ಸಮಯದಲ್ಲಿ ಉಂಟಾದ ಘರ್ಷಣೆಯಲ್ಲಿ ಮಿಜೋರಾಂ ಪೊಲೀಸರು ಸಹ ಪ್ರತಿದಾಳಿ ಮಾಡಿದ್ದಾರೆ. ಘರ್ಷಣೆಯಲ್ಲಿ 6 ಪೊಲೀಸರು ಮೃತಪಟ್ಟಿದ್ದಾರೆ. ಆದರೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮಾ, ಮಿಜೋರಾಂ ಪೊಲೀಸರು ನಮ್ಮ ಗಡಿ ಪೊಲೀಸ್ ಠಾಣೆಯನ್ನು ಆಕ್ರಮಿಸಿಕೊಂಡಿದ್ದರು. ಅದನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ” ಎಂದು ಹೇಳಿದ್ದಾರೆ.