ಶಿಶಿರ್ ಕಾಲ
ಶಿಶಿರ್ ಹೆಗಡೆ
shishirh@gmail.com
ನಮ್ಮ ಹಳ್ಳಿಯಲ್ಲಿ ಒಂದು ಎಲೆಕ್ಟ್ರಿಕ್ ಕಂಬವಿತ್ತು. ಊರಿನ ಉದ್ದಗಲಕ್ಕೆ ನೂರೆಂಟು ಎಲೆಕ್ಟ್ರಿಕ್ ಕಂಬವಿದ್ದರೂ ಇದೊಂದು ವಿಶೇಷ ಕಂಬ. ಅದೇನು ಪೀಸಾ
ಗೋಪುರದಂತೆ ವಾಲಿಕೊಂಡದ್ದೇನಲ್ಲ ಅಥವಾ ಇನ್ಯಾವುದೇ ಗುಣ ವಿಶೇಷ ವಸ್ತುವಿನಿಂದ ತಯಾರಿಸಿದ ಸ್ಪೆಷಲ್ ಕಂಬವೂ ಅಲ್ಲ.
ಅದು ಇದ್ದದ್ದು ಊರಿನ ಅಂಗಡಿ – ಬಸ್‌ಸ್ಟ್ಯಾಂಡ್ ನಿಂದ ಸ್ವಲ್ಪ ದೂರದಲ್ಲಿ. ಸಂಜೆ ಕೂಲಿ ಕೆಲಸ ಮುಗಿಸಿ ಹಳ್ಳಿಯ ಈ ಚಿಕ್ಕ ಪೇಟೆಗೆ ಬಂದವರು ಹಾಗೆಯೇ ಸ್ವಲ್ಪ ಹರಟೆ ಹೊಡೆದು ನಿಧಾನವಾಗಿ ರಸ್ತೆಯಿಳಿದು ಹೆಂಡದ ಅಂಗಡಿಯತ್ತ ಹೊರಡುತ್ತಿದ್ದರು. ಹಾಗೆ ಹೊರಟವರು ಹೆಂಡದಂಗಡಿಯ ಎದುರು ನಡೆಯುವಾಗ ಫಕ್ಕನೆ ಒಳ ಹೊಕ್ಕು ಮಾಯವಾಗಿ ಬಿಡುತ್ತಿದ್ದರು. ಆಮೇಲೆ ಒಂದೈದು ನಿಮಿಷದ ನಂತರ ಮತ್ತೆ ರಸ್ತೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದರು. ಅಲ್ಲಿಂದ ಹಾಗೆಯೇ ಮುಂದೆ ಸಾಗಿ ಈ ಎಲೆಕ್ಟ್ರಿಕ್ ಕಂಬದ ಹತ್ತಿರ ಹೋಗಿ ಅಲ್ಲೇನನ್ನೋ ನೋಡಿ ವಾಪಸ್ಸಾಗುತ್ತಿದ್ದರು. ಆ ಎಲೆಕ್ಟ್ರಿಕ್ ಕಂಬದ ಮೇಲೊಂದು ಸಂಖ್ಯೆ ಬರೆದಿಡಲಾಗುತ್ತಿತ್ತು. ಅದನ್ನು ಪ್ರತಿ ದಿನ ಬದಲಾಯಿಸಿ ಬರೆಯಲಾಗುತ್ತಿತ್ತು. ಅದು ಓಸಿ ಎಂಬ ಜೂಜಿನ ಆ ದಿನದ ಫಲಿತಾಂಶದ ಸಂಖ್ಯೆ. ಓ.ಸಿ. ಎಂದರೆ ಓಪನ್ ಕ್ಲೋಸ್ – ಒಂದು ತೀರಾ ವ್ಯವಸ್ಥಿತ ಎರಡಂಕಿ ಲಾಟರಿ.
ಊರಿನಲ್ಲಿ ಒಬ್ಬ ಈ ಲಾಟರಿಯ ಏಜೆಂಟ್ ಇದ್ದ. ಜನರು ನಾಲ್ಕಾಣೆಯಿಂದ ಎಷ್ಟು ದುಡ್ಡಿನವರೆಗೂ ಓಸಿ ಏಜೆಂಟ್ ಹತ್ತಿರ ಹೋಗಿ ಕಟ್ಟಬಹುದು. ಹೀಗೆ ಹಣ ಕಟ್ಟುವಾಗ 00 ಇಂದ 99 ರ ಒಳಗೆ ಒಂದು ಸಂಖ್ಯೆಯನ್ನು ಆಯ್ಕೆ ಮಾಡಬೇಕು. ಹಾಗೆ ಆಯ್ಕೆ ಮಾಡಿಕೊಂಡ ಸಂಖ್ಯೆಯನ್ನು, ಕಟ್ಟಿದ ಹಣವನ್ನು ಏಜೆಂಟ್ ಒಂದು ಚಿಕ್ಕ ಚೀಟಿಯಲ್ಲಿ, ಕೈ ಬರಹದಲ್ಲಿ ಬರೆದುಕೊಡುತ್ತಿದ್ದ. ಮಾರನೆಯ ದಿನ ಒಂದು ಡಬಲ್ ಡಿಜಿಟ್ ಸಂಖ್ಯೆ ಕಂಬದ ಮೇಲೆ ಘೋಷಿಸ ಲ್ಪಡುತ್ತಿತ್ತು.
ಜೂಜುಕೋರರು ಈ ಸಂಖ್ಯೆಯನ್ನು ನೋಡಿ ಒಂದೊಮ್ಮೆ ಅವರು ಹಿಂದಿನ ದಿನ ಆಯ್ಕೆ ಮಾಡಿಕೊಂಡ ಸಂಖ್ಯೆಯೇ ಬಂದರೆ ಅವರಿಗೆ ಒಂದು ರುಪಾಯಿಗೆ ತೊಂಭತ್ತೆರಡು ರೂಪಾಯಿ ಸಿಗುತ್ತಿತ್ತು. ಕೇವಲ ಕೈಬರಹದ ಚೀಟಿಯನ್ನು ನೋಡಿಯೇ ಆ ಏಜೆಂಟ್ ಗೆದ್ದವರಿಗೆ ತಪ್ಪದೇ ಹಣ ಸಂದಾಯ ಮಾಡುತ್ತಿದ್ದ. ಹೀಗೆ ಸಂಖ್ಯೆ ಆಯ್ಕೆ ಮಾಡುವಾಗ ಓಪನ್ ಮತ್ತು ಕ್ಲೋಸಿಂಗ್ ನಂಬರ್ ಅನ್ನು ಕೂಡ ಆಯ್ಕೆ ಮಾಡಿಕೊಂಡು ಅದು ಹೊಂದಿ ಬಂದರೆ ಅದಕ್ಕೆ ಕಡಿಮೆ ಮೊತ್ತ ಸಿಗುತ್ತಿತ್ತು.
ಯಾವುದೇ ಪ್ರಿಂಟ್ ಮಾಡಿದ ಲಾಟರಿಯಿಲ್ಲದೇ, ಒಂದು ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದ್ದ ಎರಡಂಕಿ ಲಾಟರಿ ಇದು. ಈ ಸಂಖ್ಯೆ ಅದೆ ಮುಂಬೈಯಿಂದ ಬರುತ್ತದೆಯಂತೆ, ಅದನ್ನು ನಡೆಸುವವರು ತುಂಬಾ ಡೇಂಜರ್ ವ್ಯಕ್ತಿಗಳಂತೆ, ಅವರು ಈ ಕೈ ಬರಹದ ಚೀಟಿಯನಾದರೂ ಮೋಸ ಮಾಡಿದರೆ ಊರಿಗೆ ಬಂದು
ಹೊಡೆದು, ಕೈಕಾಲು ಮುರಿದು ಹೋಗುತ್ತಾರಂತೆ ಎಂಬಿತ್ಯಾದಿ ನೂರೆಂಟು ಊಹಾಪೋಹಗಳಿದ್ದವು. ಈ ಹೆದರಿಕೆಯಿಂದಲೋ ಏನೋ – ಈ ಇಡೀ ವ್ಯವಸ್ಥೆ ಒಂದಿಷ್ಟೂ ಲೋಪವಿಲ್ಲದೆ ನಡೆಯುತ್ತಲೇ ಇತ್ತು.
ಇದು ಉತ್ತರ – ದಕ್ಷಿಣ ಕನ್ನಡ, ಹುಬ್ಬಳ್ಳಿ, ಬೆಳಗಾವಿ, ಬೀದರ್‌ನಿಂದ ಹಿಡಿದು ಕೋಲಾರ, ಮೈಸೂರು ಮತ್ತು ಬೆಂಗಳೂರಿನಲ್ಲಿ ಹೀಗೆ ರಾಜ್ಯದ ಉದ್ದಗಲಕ್ಕೂ ನಡೆಯುತ್ತಿತ್ತು. ಒಂದು ದಿನ ಇದನ್ನು ಪರೀಕ್ಷೆ ಮಾಡಲಿಕ್ಕೆಂದು ಬೆಳಗಾವಿಯ ಮತ್ತು ಚಿಕ್ಕಬಳ್ಳಾಪುರದ ಸ್ನೇಹಿತರಲ್ಲಿ ಅಂದಿನ ಸಂಖ್ಯೆ ಕೇಳಿದಾಗ ಅದು
ನಮ್ಮೂರಿನ ಎಲೆಕ್ಟ್ರಿಕ್ ಕಂಬದ ಮೇಲಿದ್ದ ಸಂಖ್ಯೆಯ ಜತೆ ಸರಿ ಹೊಂದಿತ್ತು. ಇದು ದೇಶಾದ್ಯಂತ ನಡೆಯುತ್ತದೆಯಂತೆ ಎಂಬ ಮಾತು, ಸುದ್ದಿಗಳಿದ್ದವು. ನಮ್ಮ ಊರಿನಲ್ಲಿ ಬಿಡಿ ಇಡೀ ರಾಜ್ಯದ ಅತ್ಯಂತ ವ್ಯವಸ್ಥಿತವಾಗಿ ನಡೆಯುವ, ಬಹುಷಃ ಏಕೈಕ (ಅ)ವ್ಯವಹಾರ ಇದಾಗಿತ್ತು.
ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ. ಒಟ್ಟಾರೆ ಕೈಬರಹದ ಚೀಟಿ, ಎಲೆಕ್ಟ್ರಿಕ್ ಕಂಬದ ಮೇಲೆ ಪ್ರಕಟವಾಗುತ್ತಿದ್ದ ಸಂಖ್ಯೆ, ಅದಕ್ಕೆ ತಪ್ಪದೇ, ಮರು ಪ್ರಶ್ನಿಸದೇ ಸಂದಾಯವಾಗುತ್ತಿದ್ದ ಗೆದ್ದ ಹಣ ಇವೆಲ್ಲ ಅತ್ಯಂತ ಆಶ್ಚರ್ಯವೆನ್ನುವ ರೀತಿಯಲ್ಲಿ ಅಷ್ಟು ಸುಲಲಿತವಾಗಿ, ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಇದು ಎರಡಂಕಿ ಲಾಟರಿಯ, ಜೂಜಿನ ಕಥೆಯಾಯಿತು. ಯಾವುದೇ ವ್ಯವಹಾರ, ವ್ಯಾಪಾರವಿರಲಿ ಅಲ್ಲಿ ಒಂದಿಷ್ಟು ನಿಯಮ, ನಿಯತ್ತು, ನಂಬಿಕೆ ಇಲ್ಲದಿದ್ದರೆ ಅದು ದೀರ್ಘಕಾಲ ನಡೆಯಲು ಸಾಧ್ಯವಿಲ್ಲ. ಇದೆಲ್ಲ ಪೊಲೀಸರಿಗೆ ಗೊತ್ತಿದ್ದೇ ನಡೆಯುತ್ತಿತ್ತೋ ಎಂಬೆಲ್ಲ ಪ್ರಶ್ನೆ ಇಲ್ಲಿ ಅಪ್ರಸ್ತುತ. ಆದರೆ ಈ ವ್ಯವಹಾರ ಇಡೀ ಕಾನೂನು ವ್ಯವಸ್ಥೆ ಮತ್ತು ಸಮಾಜವನ್ನು ಅಣಕಿಸುತ್ತಿತ್ತು.
ನಂತರದಲ್ಲಿ ಭ್ರಷ್ಟಾಚಾರ ಅಥವಾ ಇನ್ಯಾವುದೇ ಅವ್ಯವಹಾರ ಕಂಡಾಗಲೂ ಇದೆಲ್ಲ ಹೇಗೆ ಅಷ್ಟು ವ್ಯವಸ್ಥಿತವಾಗಿ ಸಮಾಜಕ್ಕೆ ಸಮಾನಾಂತರವಾಗಿ ನಡೆಯಬಲ್ಲ
ದು ಎಂಬ ಪ್ರಶ್ನೆ ಏಳುತ್ತಿತ್ತು. ಸಮಾಜದಲ್ಲಿನ ಕುಸಿದ ಮೌಲ್ಯ, ಬಡತನ, ಶ್ರೀಮಂತ ಬಡವರ ನಡುವಿನ ಅಂತರ ಎಂಬಿತ್ಯಾದಿ ಪೀಡೆಗಳಿಂದಾಗಿ ಇವೆಲ್ಲ ನಡೆಯುತ್ತವೆ ಎಂಬುದೇ ಉತ್ತರವೆನ್ನಿಸಿದರೂ ಇದೊಂದು ವ್ಯವಸ್ಥೆಯ ಸಮಾನಾಂತರದಲ್ಲಿ ಇನ್ನೊಂದು ವ್ಯವಸ್ಥೆಯಾಗಿ, ವ್ಯವಸ್ಥಿತವಾಗಿ, ಅಷ್ಟೇ ಗೌಪ್ಯವಾಗಿ ನಡೆಯುವುದು ಒಂದು ಸೋಜಿಗವೇ ಸರಿ.
ವೀರಪ್ಪನ್ ಇದ್ದದ್ದು ಮನುಷ್ಯ ಸಾಮಾನ್ಯ ಬೇಧಿಸಲಾಗದಷ್ಟು ದಟ್ಟವಾದ ಕಾಡಿನಲ್ಲಿ. ಆತನ ಕೈ ಅಲ್ಲೂ ಹಣ ಓಡಾಡುತ್ತಿತ್ತು. ಆತನೂ ಮದ್ದುಗುಂಡು, ಬಂದೂಕನ್ನು ಖರೀದಿಸುತ್ತಿದ್ದ. ಆತನಿಂದ ಆನೆಯ ದಂತವನ್ನು ಖರೀದಿಸುವ ವ್ಯವಸ್ಥೆಯಿತ್ತು. ಇನ್ನೊಂದು ಹಂತ ಮೇಲಕ್ಕೆ ಹೋಗಿ ನೋಡಿದರೆ, ಅಲ್ಲಿ ಕಾಣಿಸುವುದು ಇದೆಲ್ಲದರ ಮುಂದುವರಿದ ಭಾಗವಾದ ಅಂತಾರಾಷ್ಟ್ರೀಯ ಲೆವೆಲ್ಲಿನಲ್ಲಿ ನಡೆಯುವ ಭಯೋತ್ಪಾದಕ ವ್ಯಾಪಾರ ವ್ಯವಹಾರಗಳು. ಈ ಭಯೋ ತ್ಪಾದಕರಿಗೆ, ತಾಲಿಬಾನಿಗಳಿಗೆ, ಲಷ್ಕರ್, ಹಿಜಬುಲ್ ಎಂಬಿತ್ಯಾದಿ ಭಯೋತ್ಪಾದಕ ಸಂಘಟನೆಗಳಿಗೆ ಹಣ, ಮದ್ದುಗುಂಡು ಇವೆಲ್ಲ ಸರಬರಾಜಾಗು ವುದಾದರೂ ಹೇಗೆ? ಅಮೆರಿಕ ವಿರುದ್ಧ ನಾಲ್ಕಾರು ದೇಶಗಳಿದ್ದರೂ ಅಲ್ಲಿ ಪುಕ್ಸಟ್ಟೆ ಯಾರೂ ಇವರೆಲ್ಲರಿಗೆ ಇದೆಲ್ಲವನ್ನು ಸರಬರಾಜು ಮಾಡುವುದಿಲ್ಲವಲ್ಲ.
ಹೆಚ್ಚಿನ ಭಯೋತ್ಪಾದಕ ಪೋಷಕ ದೇಶಗಳು ನೆಟ್ಟಗೆ ಊಟಕ್ಕೆ ಗತಿಯಿಲ್ಲದವು. ಹಾಗಾದರೆ ಈ ಎಲ್ಲ ಹಣ ಎಲ್ಲಿಂದ ಬರುತ್ತದೆ? ಈ ವ್ಯವಹಾರ ವ್ಯಾಪಾರ ಹೇಗೆ ನಡೆಯುತ್ತದೆ? ಈ ಎಲ್ಲ ಪ್ರಶ್ನೆಗಳು ಇನ್ನೊಂದು ಮುಂದುವರಿದ ಹೊಸ ಲೋಕವನ್ನೇ ನಮ್ಮೆದುರಿಗೆ ತೆರೆದಿಡುತ್ತವೆ. ಇದು ಒಂದೆರಡು ರುಪಾಯಿಯ ವ್ಯವಹಾರ ವಲ್ಲ. ಅಮೆರಿಕ, ಯುಕೆ, ಭಾರತದಂತಹ ದೇಶಗಳ ಜತೆ ಹೊಡೆದಾಟಕ್ಕೆ ನಿಲ್ಲಬೇಕು, ದಶಕ ವರ್ಷದ ಲೆಕ್ಕದಲ್ಲಿ ಹೋರಾಡಬೇಕು ಎಂದಾದರೆ ಅಲ್ಲಿ ಕೂಡ ಅತ್ಯಂತ ವ್ಯವಸ್ಥಿತವಾದ ಒಂದು ವ್ಯವಹಾರ ಇರಬೇಕಲ್ಲವೇ? ಕೆಲವು ದೇಶಗಳಲ್ಲಿ ಕೆಲವು ಭಯೋತ್ಪಾದಕ ಸಂಘಟನೆಗಳು ತಮ್ಮ ಹಿಡಿತದಲ್ಲಿರುವ ಪೆಟ್ರೋಲ್ ಬಾವಿ ಗಳಿಂದ ಪೆಟ್ರೋಲಿಯಂ ಎತ್ತಿ ಯಥೇಚ್ಛ ಹಣ ಸಂಪಾದಿಸಿಕೊಳ್ಳುತ್ತವೆ.
ಅಲ್ಲಿ ಕೂಡ ಪೆಟ್ರೋಲ್ ಅನ್ನು ಖರೀದಿಸುವ ಒಂದಿಷ್ಟು ದೇಶ ಮತ್ತು ಗ್ರಾಹಕ ಕಂಪನಿಗಳು ಬೇಕು. ಅದು ಒಂದು ಮಗ್ಗುಲಾಯಿತು. ಅದರ ಜತೆ ಇಂದಿನ ಆಧುನಿಕ ಇಂಟರ್ ನೆಟ್ ವ್ಯವಸ್ಥೆಯನ್ನು ಬಳಸಿಕೊಂಡು ಹಣ ಮಾಡುವ ವ್ಯವಹಾರದ್ದು ಇನ್ನೊಂದು ಮಗ್ಗುಲು. ಇಂಟರ್‌ನೆಟ್ ಅನ್ನು ಮೂರು ಭಾಗವಾಗಿ ವಿಂಗಡಿಸ ಬಹುದು. ಮೊದಲನೆಯದು ನಾವು ನೀವು ಬಳಸುವ ಜನಸಾಮಾನ್ಯರ ಇಂಟರ್‌ನೆಟ. ಎರಡನೆಯದು ಡೀಪ್ ವೆಬ್. ಇದು ಸಾಮಾನ್ಯವಾಗಿ ಅತ್ಯಂತ ನಾಜೂಕಿನ, ಗೌಪ್ಯ ಮಾಹಿತಿಯ ಇಂಟರ್‌ನೆಟ್‌ನಲ್ಲಿನ ಮಾಹಿತಿಗಳಿರುವ ಜಾಗ.
ನಾವು ನೀವು ನೋಡುವ ಇಂಟರ್‌ನೆಟ್‌ನ ಸಾಮಾನ್ಯ ಪೇಜ್ ಗಳಿಗೆ ಸಂಬಂಧಿಸಿದ ವಿವರಗಳು ಒಂದು ಪರಿವಿಡಿಯ ರೀತಿಯಲ್ಲಿ ಮಾಹಿತಿ ಶೇಖರವಾಗಿರುತ್ತದೆ. ಗೂಗಲ್‌ನಲ್ಲಿ ಅದನ್ನು ಹುಡುಕಿದರೆ ಈ ಇಂಡೆಕ್ಸ್ ಪ್ರಕಾರ ಅದು ಪರದೆಯ ಮೇಲೆ ಮೂಡುತ್ತವೆ. ಆದರೆ ಈ ಡೀಪ್ ವೆಬ್ ನಲ್ಲಿನ ಮಾಹಿತಿಗಳು ಇಂಡೆಕ್ಸ್ ಆಗಿರದ ಕಾರಣಕ್ಕಾಗಿ ಅವು ಗೂಗಲ್ ನಲ್ಲಿ ಹುಡುಕಿದರೆ ಸಿಗುವುದಿಲ್ಲ. ವೈಜ್ಞಾನಿಕ ಗೌಪ್ಯ ಮಾಹಿತಿಗಳು, ಅಂತಾರಾಷ್ಟ್ರೀಯ ಕಾನರೆಗೆ ಸಂಬಂಧಿಸಿದ ಅಥವಾ ಸಂಸ್ಥೆ ಯೊಂದರ ಅತಿಗೌಪ್ಯ ಮಾಹಿತಿಗಳು ಸಾಮಾನ್ಯವಾಗಿ ಈ ಡೀಪ್ ವೆಬ್‌ನಲ್ಲಿ ಅಡಗಿರುತ್ತವೆ. ಅದು ಸಾಮಾನ್ಯರ ಕೈಗೆ ಸಿಗಲಾರದಂತೆ ಇಟ್ಟುಕೊಳ್ಳ ಬೇಕಾಗುತ್ತದೆ.
ಮೂರನೆಯದೇ ಡಾರ್ಕ್ ವೆಬ್. ಇದೊಂದು ಅತ್ಯಂತ ಗೌಪ್ಯ ಮತ್ತು ಅವ್ಯವಹಾರಕ್ಕೆಂದೇ ಬಳಕೆಯಾಗುವ ಇಂಟರ್‌ನೆಟ್ ನ ಮಗದೊಂದು ವಿಭಾಗ. ಡ್ರಗ್ ಮತ್ತು ಇತರೆ ಕಾನೂನು ಬಾಹಿರ ವ್ಯವಹಾರಗಳು, ಭಯೋತ್ಪಾದಕ ಸಂಬಂಧಿ ವ್ಯವಹಾರಗಳು ನಡೆಯುವುದು ಇಲ್ಲಿ. ಇದನ್ನು, ಇದರಲ್ಲಿರುವ ವೆಬ್ ಪೇಜ್‌ಗಳನ್ನು ನೋಡಲು ಒಂದಿಷ್ಟು ವಿಶೇಷ ತಂತ್ರಜ್ಞಾನ ಮತ್ತು ಬ್ರೌಸರ್‌ಅನ್ನು ಬಳಸಬೇಕಾಗುತ್ತದೆ. ಅದೆಲ್ಲ ತೀರಾ ಟೆಕ್ನಿಕಲ್. ಹಾಗಾಗಿ ಆ ಹೆಚ್ಚಿನ ವಿವರಣೆ ಇಲ್ಲಿ ಬೇಡ.
ಈ ಡಾರ್ಕ್ ವೆಬ್‌ನಲ್ಲಿ ಅದೆಷ್ಟೋ ವೆಬ್‌ಸೈಟ್‌ಗಳಿವೆ. ಅಲ್ಲಿ ಕಾನೂನು ಬಾಹಿರ ವಸ್ತುಗಳ ಮಾರುಕಟ್ಟೆಯೇ ಇದೆ. ಈ ಡಾರ್ಕ್ ವೆಬ್‌ನ ಒಳ ಹೊಕ್ಕು ನೋಡಿದರೆ ಅಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ವಸ್ತುಗಳು ಮಾರಾಟವಾಗುವಂತೆ ಇಲ್ಲಿ ಡ್ರಗ್, ಹೆಣ್ಣು ಎಲ್ಲವೂ ಮಾರಾಟಕ್ಕಿರುತ್ತದೆ.
ಅದನ್ನು ಹಣ ಕೊಟ್ಟು ಖರೀದಿಸಬಹುದು – ಅಲ್ಲಿ ಮಾರಾಟ ಮಾಡುವವನ ಮಾಹಿತಿ, ಖರೀದಿಸುವವನ ಮಾಹಿತಿ, ಸ್ಥಳ, ದೇಶ ಎಲ್ಲವೂ ಅತಿ ಗೌಪ್ಯ – ಸರಕಾರ ಗಳಿಗೂ ಅಲಭ್ಯ. ಈ ಎಲ್ಲ ವ್ಯವಹಾರ ನಡೆಯುವುದು ಬಿಟ್ ಕಾಯಿನ್ ಎಂಬಿತ್ಯಾದಿ ಡಿಜಿಟಲ್ ಹಣದಿಂದ. ಈ ಡಾರ್ಕ್ ವೆಬ್‌ನಲ್ಲಿ ಕಾಳದಂಧೆ ನಡೆಸುವವು ಮಾತ್ರ ಡ್ರಗ್ ಕಾರ್ಟೆಲ್‌ಗಳು ಮತ್ತು ಹೆಚ್ಚಾಗಿ ಭಯೋತ್ಪಾದಕರು.
ಈ ಕರಾಳ ವ್ಯವಸ್ಥೆಯಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಒಬ್ಬ ಸಾಮಾನ್ಯನಿಗೆ ಅ ಇನ್ನೊಂದು ದೇಶದಲ್ಲಿರುವವ ಕೊಕೇನ್, ಹೆರೋಯಿನ್ ಮಾರಾಟ ಮಾಡಬಹುದು. ಆಫ್ರಿಕಾದ ಬಂಡುಕೋರರು ಇಲ್ಲಿ ಬಂದು ಸೆಕೆಂಡ್ ಹ್ಯಾಂಡ್ ಅಥವಾ ಹೊಸ ಬಂದೂಕುಗಳನ್ನು, ಜಿಲೆಟಿನ್ ಕಡ್ಡಿಗಳನ್ನು ಖರೀದಿಸಬಹುದು. ಯಾರು ಖರೀದಿಸುತ್ತಾರೆ, ಯಾರು ಮಾರಾಟ ಮಾಡುತ್ತಾರೆ, ಹೀಗೆ ಈ ಇಡೀ ವ್ಯವಹಾರ ಎನ್ಕ್ರಿಪ್ಟೆಡ್ (ಇನ್ನೊಬ್ಬರಿಗೆ ಓದಲಾಗದ ರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸುವುದು). ಇಲ್ಲಿ ಭಯೋತ್ಪಾದಕ ಸಂಘಗಳು ದಾನವನ್ನು ಕೂಡ ಬೇಡುತ್ತವೆ. ಈ ಮುಜಾಹಿದೀನ್‌ಗೆ ಒಂದು ಬಂದೂಕನ್ನು ಇಷ್ಟು ಹಣ (ಬಿಟ್ ಕಾಯಿನ್) ಕೊಡುವುದರ ಮೂಲಕ ಇಲ್ಲಿ ದಾನ ಮಾಡಬಹುದು.
ಇಂಥದ್ದೊಂದು ಪೇಜ್ ಅನ್ನು ತಂತ್ರಾಂಶ ಬಳಸಿ ಡಾರ್ಕ್ ವೆಬ್ ಗೆ ಹೊಕ್ಕಿ ನೋಡಿದಾಗ ಅಲ್ಲಿನ ಜಾಹಿರಾತುಗಳು ಹೇಗಿದ್ದವು ಎಂದರೆ – ಇನ್ನೂರು ಡಾಲರ್ ದಾನ ಮಾಡಿ ಈ ಭಯೋತ್ಪಾದಕನಿಗೆ ಒಂದು ಏಕೆ ೪೭ ಕೊಡಿ – ಹೀಗೆ. ಇದೊಂದು ರೀತಿಯಲ್ಲಿ ಕುರುಡನಿಗೆ ಕಣ್ಣು ಅಪರೇಷನ್‌ಗೆ ಹಣ ದಾನ ಮಾಡಿ ಎಂದು ಎನ್.ಜಿ.ಓ ಕೇಳಿಕೊಂಡಂತೆ. ಸಿರಿಯಾದ ನೆಲದಲ್ಲಿ ಅರ್ಮುಡ್ -ರ್ಸ್, ಹಿಜಬುಲ್, ಐಸಿಸ್, ಅಲ್ ಖೈದಾ ಇನ್ನಿತರ ಸಂಘಟನೆಗಳು, ನಂತರದಲ್ಲಿ ಆಫ್ರಿಕಾದ ಮಾಲಿ, ಬರ್ಕಿನೋ -ಸೊ, ಅಲಜೇರಿಯಾ, ಲಿಬಿಯಾದ ಈ ದೇಶಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಜಾಸ್ತಿ ಭಯೋತ್ಪಾದಕ ಸಂಘಟನೆಗಳಿವೆ.
ಇವು ನಮ್ಮ ವ್ಯವಸ್ಥೆಯಲ್ಲಿನ ಕಂಪನಿಗಳಂತೆ ವ್ಯವಹರಿಸುತ್ತವೆ. ಅಲ್ಲಿ ಯಾರು ಬೇಕಾದರೂ ಒಂದು ಹೆಸರನ್ನಿಟ್ಟು, ಒಂದು ಗುಂಪು ಮಾಡಿಕೊಂಡು ಅದನ್ನೇ ಸಂಘಟನೆ ಎಂದು ಹೇಳಿ ಭಯೋತ್ಪಾದನಾ ಕೆಲಸಕ್ಕಿಳಿಯಬಹುದು. ಅವುಗಳಲ್ಲಿಯೇ ಯಾರು ಹೆಚ್ಚು ಎನ್ನುವ ಬಗ್ಗೆ ಪೈಪೋಟಿ ಕೂಡ ಇರುತ್ತದೆ. ಈ ಭಯೋತ್ಪಾದನಾ ಸ್ಪರ್ಧೆಯಲ್ಲಿ ಅಗ್ರನಾಗಬೇಕು ಎಂದು ಹೆಣಗುವ ಅದೆಷ್ಟೋ ಸಂಘಟನೆಗಳಿವೆ. ಇವುಗಳಿಗೆ ಅಮೆರಿಕ ಮೊದಲಾದ ದೇಶಗಳ ಭಯೋತ್ಪಾದಕ ಸಂಘಟನೆಯ ಟಾಪ್ ಪಟ್ಟಿಯಲ್ಲಿ ಬಂದರೆ ಅದೇ ದೊಡ್ಡ ಸಾಧನೆ. ಈ ಸ್ಪರ್ಧೆಗೆ ಬಂದೂಕು, ಬಾಂಬುಗಳು ಬೇಕು. ಅದಕ್ಕೆ ಬಿಲಿಯನ್ ಡಾಲರುಗಳ ಲೆಕ್ಕದಲ್ಲಿ ಹಣ ಬೇಕು. ಆ ಕಾರಣಕ್ಕೆ ಈ ಸಂಘಟನೆಗಳು ಐಟಿ ಸೆಲ್‌ಗಳನ್ನು ಕೂಡ ತೆರೆಯುತ್ತವೆ.
ಕೆಲವು ಈ ರೀತಿಯ ಸೆಲ್‌ಗಳು ಬೇರಿನ್ನೊಂದು ದೇಶದಲ್ಲಿ ಕೂಡ ಕೆಲಸ ಮಾಡುತ್ತಿರುತ್ತವೆ. ಮಲ್ಟಿ ನ್ಯಾಷನಲ್ ಕಂಪನಿಯಂತೆ. ಅದೆಲ್ಲ ನಡೆಯುವುದು, ಸಾಧ್ಯ ವಾಗುವುದು ಈ ಡಾರ್ಕ್ ವೆಬ್ ನಿಂದಾಗಿ. ಹಾಗಾದರೆ ಇದನ್ನೆ ತಡೆಯಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿ ಹೇಳುವುದಿಲ್ಲ. ಈ ವ್ಯವಸ್ಥೆ ಇನ್ನೂ ಬದುಕಿದೆ ಎಂದರೆ ಅಂದು ಸಾಧ್ಯತೆಯಿದೆ ಎಂದಾಯಿತಲ್ಲ. ಈ ಕಾರಣಕ್ಕೆ ಇದೆಲ್ಲದನ್ನು ಹದ್ದು ಬಸ್ತಿನಲ್ಲಿಡಲು ಹಲವಾರು ದೇಶಗಳ ಭಯೋತ್ಪಾದಕ ನಿಗ್ರಹ
ಸರಕಾರಿ ಸಂಸ್ಥೆಗಳು ಮಾರುವೇಷದಲ್ಲಿ ಇದನ್ನು ಬೇಧಿಸಲು ಸದಾ ಹೆಣಗುತ್ತಲೇ ಇರುತ್ತವೆ.
ಡಾರ್ಕ್ ವೆಬ್‌ನಲ್ಲಿ ಡ್ರಗ್’ನ ಜತೆ ಕದ್ದ ಬೆಲೆಬಾಳುವ ವಸ್ತುಗಳು, ಕಿಡ್ನಾಪ್ ಮಾಡಿ ಹಣ ಪಡೆಯುವ ವ್ಯವಸ್ಥೆ ಎಲ್ಲ ಮಾಡಿಕೊಂಡಿರುತ್ತಾರೆ. ಅಲ್ಲದೆ ಇಲ್ಲಿ ಬಾಂಬ್ ತಯಾರಿ ಮಾಡುವುದು ಹೇಗೆ ? ಇವೇ ಮೊದಲಾದ್ ಎಕ್ಸ್ಟ್ರೀಮ್ ಎನ್ನುವ ವಿಡಿಯೊಗಳನ್ನು, ಮಾಹಿತಿಗಳನ್ನು ಭಯವಿಲ್ಲದೇ ಹಂಚಿಕೊಳ್ಳಲಾಗುತ್ತದೆ ಕೂಡ. ಈ
ವಿಡಿಯೊಗಳಲ್ಲಿ ಭಯೋತ್ಪಾದನೆಗೆ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡುವ ಡಾರ್ಕ್ ವೆಬ್ ಲಿಂಕ್‌ಗಳನ್ನು ಕೂಡ ಹಂಚಿಕೊಳ್ಳಲಾಗುತ್ತದೆ. ಡಾರ್ಕ್ ವೆಬ್ ಬಳಸಿ ಅಮೆರಿಕ ಅಥವಾ ಇಂಗ್ಲೆಂಡಿನಲ್ಲಿ ಕೂತು ಕೂಡ ಈ ವಸ್ತುಗಳನ್ನು ಭಯೋತ್ಪಾದಕರಿಂದ ಪರೋಕ್ಷವಾಗಿ ಖರೀದಿಸಬಹುದು.
ಇವೆಲ್ಲ ವ್ಯವಹಾರಗಳಿಗೆ ಕೆಲವೊಮ್ಮೆ ಶೆಲ್ ಕಂಪನಿಗಳನ್ನು ಕೂಡ ಬಳಸಿಕೊಳ್ಳಲಾಗುತ್ತದೆ. ಕೆಲವೊಂದು ಬಲಿಷ್ಠವಲ್ಲದ, ಅರಾಜಕತೆ ಇರುವ ದೇಶಗಳಲ್ಲಿ ರಾಜಕೀಯ ಅಸ್ಥಿರತೆ ತಂದು ಆ ಪರಿಸ್ಥಿತಿಯನ್ನು ಭಯೋತ್ಪಾದನೆಗೆ, ಡ್ರಗ್ ದಂಧೆಗೆ ಬಳಸಿಕೊಳ್ಳುವುದು ಇದೆ. ಇದಕ್ಕೆ ಒಳ್ಳೆಯ ಉದಾಹರಣೆ ವೆನಿಜುಯೆಲಾ. ಈ ದೇಶದ ರಾಜಕೀಯ ಹಿಡಿತವನ್ನು ಹಿಜಬು ಭಯೋತ್ಪಾದಕ ಸಂಘಟನೆ ಸಾಧಿಸಿ ಆಮೇಲೆ ಅಮೆರಿಕದ ನೆಲದಲ್ಲಿ ಡ್ರಗ್ ವ್ಯವಹಾರಕ್ಕೆ ಬಳಸಿಕೊಂಡದ್ದರ ಬಗೆಗಿನ ಮಾಹಿತಿ ಇತ್ತೀಚಿಗೆ ಅಮೆರಿಕದ ಪೆಂಟಗಾನ್ ಹೊರಹಾಕಿದೆ. ಈ ಎಲ್ಲ ಹಣ ನಂತರದಲ್ಲಿ ಬಳಕೆಯಾಗುವುದು ಗನ್, ರಾಕೆಟ್, ಮದ್ದು ಗುಂಡುಗಳ ಖರೀದಿಗೆ.
ಹಿಜಬು ಸಂಘಟನೆ ಟನ್ ಲೆಕ್ಕದಲ್ಲಿ ಡ್ರಗ್ ಅನ್ನು ಅಮೆರಿಕದ ನೆಲದಲ್ಲಿ ಮಾರಾಟ ಮಾಡಿ ಅದೇ ಹಣವನ್ನು ಅಮೆರಿಕದ ವಿರುದ್ಧದ ಯುದ್ಧಕ್ಕೇ ಬಳಸಿಕೊಂಡದ್ದು
ಇತ್ತೀಚಿಗೆ ಹೊರ ಬಂದ ವಿಚಾರ.
ಹಿಜಬುಲ್ ಎಂದರೆ ಅದೊಂದು ಅಂತಾರಾಷ್ಟ್ರೀಯ ಸರಬರಾಜು ಕಂಪನಿಯಂತೆ ವ್ಯವಹರಿಸುವ, ಹಣ ಸಂಪಾದಿಸಿ ಇನ್ನಷ್ಟು ಭಯೋತ್ಪಾದನೆಗೆ ಬಳಸುವ ಭಯೋತ್ಪಾದಕ ಸಂಘಟನೆ. ಹಿಜಬುಲ್ ಇನ್ನೊಂದು ಭಯೋತ್ಪಾದನಾ ಸಂಘಟನೆಗೆ ಹಣವನ್ನು ಸಾಲದ ರೀತಿಯಲ್ಲಿ ಬ್ಯಾಂಕ್‌ನಂತೆ ಕೊಟ್ಟು ವ್ಯವಹರಿಸಿದ
ಉದಾಹರಣೆಗಳಿವೆ. ಈ ಭಯೋತ್ಪಾದಕ ಸಂಘಟನೆಗಳು ದೇಶದ ಸರಕಾರಗಳಂತೆ ಆರ್ಮ್ಸ್ ಡೀಲರ್ ಗಳ ಜತೆಯೂ ವ್ಯವಹರಿಸುತ್ತವೆ. ಇಲ್ಲೇ ಎಷ್ಟು ಕೈ ಆಚೀಚೆಯಾಗುತ್ತದೆಯೆಂದರೆ ಕೆಲವೊಮ್ಮೆ ಅಮೆರಿಕ ಅಥವಾ ಇನ್ನೊಂದು ದೇಶ ಭಯೋತ್ಪಾದಕರ ಜತೆ ಹೋರಾಡುವಾಗ ಆ ದೇಶದ ತಯಾರಾದ ಬಂದೂಕು
ಗಳನ್ನು ಭಯೋತ್ಪಾದಕರು ಅವರ ವಿರುದ್ಧ ಬಳಸುತ್ತಿರುತ್ತಾರೆ. ಸಾಮಾನ್ಯವಾಗಿ ಆಗೀಗ ಈ ಭಯೋತ್ಪಾದಕರು ಇಸ್ಲಾಮಿಕ್ ವಿರೋಧಿ ಎಂದೆನ್ನುತ್ತಾ ದೊಡ್ಡ ದೊಡ್ಡ ಐತಿಹಾಸಿಕ ಇಮಾರತುಗಳನ್ನು, ಮೂರ್ತಿಗಳನ್ನು ಮಾಡುವ ವಿಡಿಯೊ ಚಿತ್ರಗಳನ್ನು ನೋಡಿರಬಹುದು.
ಇಂದು ಸೂಕ್ಷ್ಮ ಗ್ರಹಿಸಬೇಕು. ಸಾಮಾನ್ಯವಾಗಿ ಈ ರೀತಿ ದ್ವಟಸ ಮಾಡುವ ವಿಡಿಯೊಗಳಲ್ಲಿ ದೊಡ್ಡ ದೊಡ್ಡ ಮೂರ್ತಿಗಳನ್ನಷ್ಟೇ ಈ ಭಯೋತ್ಪಾದಕರು ನಾಶಮಾಡುತ್ತಿರುತ್ತಾರೆ. ಅವರು ಸಾಮಾನ್ಯವಾಗಿ ಸ್ಮಗಲ್ ಮಾಡಲು ಸಾಧ್ಯವಾಗದ ವಸ್ತು ಗಳನ್ನಷ್ಟೇ ಈ ರೀತಿ ನಾಶ ಮಾಡುತ್ತಾರೆ. ಇನ್ನುಳಿದ ಚಿಕ್ಕ,
ಸಾಗಿಸಲಾಗುವ ವಸ್ತುಗಳನ್ನು, ಮೂರ್ತಿಗಳನ್ನು ನಾಶ ಮಾಡುವುದಿಲ್ಲ. ಬದಲಿಗೆ ಅದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯವಸ್ಥಿತವಾಗಿ ಮಾರಾಟ ಮಾಡಲಾಗುತ್ತದೆ. ಈ ಎಲ್ಲದರ ಲಾಭ ಕೊನೆಗೆ ಈ ಭಯೋತ್ಪಾದಕ ಸಂಘಟನೆಗಳಿಗೇ ಸೇರುತ್ತದೆ.
ಇವೆಲ್ಲ ಪ್ರಾಚ್ಯವಸ್ತುಗಳು ಹೆಚ್ಚಿನ ಸಮಯ ಮಾರಾಟವಾಗುವುದು ಪಾಶ್ಚಿಮಾತ್ಯ ದೇಶಗಳ. ಅಲ್ಲದೇ ಈ ರೀತಿ ನಾಶಮಾಡುವ ವಿಡಿಯೊಗಳಿಂದಾಗಿ ಉಳಿದ
ಪ್ರಾಚ್ಯ ವಸ್ತುಗಳು ತೀರಾ ಅಪರೂಪ ಮತ್ತು ಅಮೂಲ್ಯ ಎನ್ನುವ ಭಾವನೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಲಾಭ ಸಾಧ್ಯ. ಇದೊಂದು ಮೈಂಡ್ ಗೇಮ್. ಆಯೇಷಾ ಅಹ್ಮದ್ ಬರೆದಿರುವ ಒಜಿeZb Zb ಇಟ ಎನ್ನುವ ಪುಸ್ತಕದಲ್ಲಿ ಈ ಎಲ್ಲ ಭಯೋತ್ಪಾದಕರ ವ್ಯವಹಾರಗಳ ಬಗ್ಗೆ ಒಳ್ಳೆಯ, ವಿಸ್ತೃತ ವಿವರಣೆಯಿದೆ.
ಸಾಮಾನ್ಯ ಸಮಾಜದ ಅರ್ಥಶಾಸಕ್ಕೆ ಸಮಾನಾಂತರವಾಗಿ ನಡೆಯುವ ಈ ವ್ಯವಹಾರಗಳದು ಇನ್ನೊಂದು ಸಮಾನಾಂತರ ಆರ್ಥಿಕ ವ್ಯವಸ್ಥೆ. ಈ ಪುಸ್ತಕ ನಮ್ಮೆದುರಿಗೆ ಇನ್ನೊಂದು ಎಕಾನಾಮಿಕ್ ಅನ್ನು ಅನಾವರಣಗೊಳಿಸುತ್ತದೆ. ಶಸಾಸ, ಮನುಷ್ಯರ ಸ್ಮಗ್ಲಿಂಗ್‌ನ ನಂತರದ ದೊಡ್ಡ ವ್ಯವಹಾರ ಈ ಪ್ರಾಚ್ಯ ವಸ್ತು
ಗಳ ಸ್ಮಗ್ಲಿಂಗ್. ಇದೆಲ್ಲ ವ್ಯವಸ್ಥಿತ ಮತ್ತು ನ್ಯಾಯಯುತ ವ್ಯವಹಾರಕ್ಕೆ ಸಮಾನಾಂತರವಾಗಿ ನಡೆಯುವಂಥವುಗಳು. ಇಲ್ಲಿ ಭಯೋತ್ಪಾದಕರ ಶತ್ರು ರಾಷ್ಟ್ರಗಳೇ ಗ್ರಾಹಕರು. ಅದರಿಂದ ಬಂದ ಲಾಭಾಂಶದಿಂದಲೇ ಭಯೋತ್ಪಾದನೆ ನಡೆಯುತ್ತಿರುತ್ತದೆ. ಭಾರತದಲ್ಲಿ ಮೋದಿ ಸರಕಾರ ಬಂದಾಗಿನಿಂದ ಯಾವುದೇ ದೊಡ್ಡ ಭಯೋತ್ಪಾದನಾ ದಾಳಿಗಳು ನಡೆದಿಲ್ಲ.
ಇದಕ್ಕೆ ಮೇಲ್ನೋಟಕ್ಕೆ ಗುಪ್ತಚರ ಇಲಾಖೆಯ ಕಾರ್ಯಕ್ಷಮತೆ ಕಾರಣ ಎಂದೆನಿಸಿದರೂ ಆಂತರ್ಯದಲ್ಲಿ ಇನ್ನೊಂದು ಪ್ರಬಲ ಕಾರಣ ಈ ಎಲ್ಲ ಹಣದ ಅವ್ಯವ ಹಾರದ ಚಾನಲ್‌ಗಳನ್ನು ಬಂದು ಮಾಡಿದ್ದರಿಂದ. ಡಿಮಾನಿಟೈಸೇಷನ್ ಈ ಎಲ್ಲ ವ್ಯವಹಾರಕ್ಕೆ ಕೊಟ್ಟ ಹೊಡೆತವನ್ನು ವಿವರಿಸಲು ಮಾಹಿತಿಗಳಿಂದ ಸಾಧ್ಯ ವಾಗುವುದಿಲ್ಲ. ಆದರೆ ಆ ಕಾರಣದಿಂದ ಅದೆಷ್ಟೋ ಅವ್ಯವಹಾರಗಳಿಗೆ ಕೊಡಲಿ ಬಿದ್ದು ಅದರಿಂದ ಭಯೋತ್ಪಾದನೆ, ದಾಳಿ ಸೊನ್ನೆಯಾಗಿದ್ದು ಎನ್ನುವುದರ ಬಗ್ಗೆ ಯಾವುದೇ ಅನುಮಾನ ಬೇಡ.
ಒಟ್ಟಾರೆ ಒಂದು ಸಾಮಾಜಿಕ ವ್ಯವಸ್ಥೆಯ ಸಮಾನಾಂತರ ದಲ್ಲಿ ಈ ಎಲ್ಲ ಕಾಳ ದಂಧೆಗಳು, ಅವ್ಯವಹಾರಗಳು ಎಲ್ಲ ಸ್ಥರಗಳಲ್ಲಿ ವ್ಯವಸ್ಥಿತವಾಗಿ ನಡೆಯುವುದು ಒಂದು ಸೋಜಿಗವೇ ಸರಿ. ಅಲ್ಲವೇ?