ತನ್ನಿಮಿತ್ತ
ನಂ.ಶ್ರೀಕಂಠ ಕುಮಾರ‍್
namsree.mysore@gmail.com
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧರಾಗಿದ್ದು, ಅಂದಿನ ಕರ್ನಾಟಕ-ಮಹಾರಾಷ್ಟ್ರ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯದ ಬಿರುಗಾಳಿಯ ಕಿಚ್ಚನ್ನು ಹಚ್ಚಿಸಿದವರು ಗಂಗಾಧರ ರಾವ್ ದೇಶಪಾಂಡೆ.
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಋಗ್ವೇದಿ ಬ್ರಾಹ್ಮಣ ದೇಶಸ್ಥ ಪಾರಂಪರಾಗತ ಶ್ರೀಮಂತ ಜಮೀನ್ದಾರ ಮನೆತನದ ಬಾಲಕೃಷ್ಣ ಮತ್ತು ರಾಧಾ
ಬಾಯಿ ದಂಪತಿಗಳ ಹಿರಿಯ ಮಗನಾಗಿ ಮಾರ್ಚ್ 31, 1871ರಲ್ಲಿ ತಾತನ ಊರಾದ ಜಲಾಲಪುರದಲ್ಲಿ ಜನಿಸಿದರು. ಅವರ ಕುಟುಂಬದ ಭಾಷೆ ಕನ್ನಡ
ವಾದರೂ ಸಾಂಧರ್ಭಿಕವಾಗಿ ಶಿಕ್ಷಣವನ್ನು ಮರಾಠಿ ಭಾಷೆಯಲ್ಲಿ ಬೆಳಗಾವಿಯ ಪ್ರಸಿದ್ಧ ಸರದಾರ್ಸ ಪ್ರಾಥಮಿಕ ಶಾಲೆಯಲ್ಲಿ ಪಡೆದರು.
ಬಾಲಕ ಗಂಗಾಧರರಾವರಿಗೆ ಬಾಲ್ಯದಿಂದಲೇ ನಾಟಕದ ಗೀಳು. ಅಣ್ಣಾ ಸಾಹೇಬ ಕಿರ್ಲೋಸ್ಕರ್‌ರವರು ತುಂಬಾ ಪ್ರಸಿದ್ಧವಾದ ನಾಟಕ ಕತೃವಾಗಿದ್ದರು. ಅವರ ಕೃಷ್ಣ ಪಾರಿಜಾತ ಕನ್ನಡ ನಾಟಕವು ಹಾಗೆಯೇ ಮರಾಠಿ ಯ ಶಕುಂತಲಾ ಮತ್ತು ಸುಭದ್ರಾ ಪರಿಣಯ ನಾಟಕಗಳು ಬೆಳಗಾವಿ, ಮುಂಬಯಿ ಮತ್ತು ಪುಣೆ ಪ್ರದೇಶ ಗಳಲ್ಲಿ ಜನಪ್ರಿಯವಾಗಿ, ಕಲಾರಂಗದಲ್ಲೂ ಸಹ ಗಂಗಾಧರರಾವರು ಆಸಕ್ತಿ ಬೆಳೆಸಿಕೊಂಡಿದ್ದರು.
ವಕೀಲರಾದ ತಂದೆ ಬಾಲಕೃಷ್ಣರವರು ಮಗನನ್ನು ನ್ಯಾಯಾಲಯದಲ್ಲಿನ ಪ್ರಮುಖ ನ್ಯಾಯ ವಿಶ್ಲೇಷಣೆ ನಡೆಯುತ್ತಿದ್ದಾಗ ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ನ್ಯಾಯವಾದಿಗಳನ್ನು ಇವರು ಬಾಲ್ಯದಿಂದಲೇ ತಿಳಿದುಕೊಂಡಿದ್ದರು. ಗಂಗಾಧರರಾವ್‌ರವರು ಉನ್ನತ ವಿದ್ಯಾಭ್ಯಾಸ ಪದವಿಯನ್ನು ಪುಣೆಯಲ್ಲಿ ಪಡೆದು ನಂತರ ಮುಂಬಯಿಗೆ ತೆರಳಿ ಕಾನೂನು ಶಿಕ್ಷಣವನ್ನು ಪಡೆದರು. ಆನಂತರ ಉದರ ನಿರ್ವಹಣೆಗಾಗಿ ವಕೀಲಿ ವೃತ್ತಿಯನ್ನು ಬೆಳಗಾವಿಯಲ್ಲೇ ಆರಂಭಿಸಿದರು. ತಂದೆ ಬಾಲಕೃಷ್ಣರವರು ಬೆಳಗಾವಿ ಮುನ್ಸಿಪಾಲಿಟಿ ಸದಸ್ಯ ರಾಗಿದ್ದುದರಿಂದ ತಂದೆಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ನಂತರ ಬೆಳಗಾವಿಯ ಮುನ್ಸಿಪಾಲಿಟಿಗೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದರು.
ಅದಾಗಲೇ ಸ್ವಾತಂತ್ರ್ಯದ ಚಳವಳಿಯು ಭಾರತದ ಎಲ್ಲೆಡೆ ಹಬ್ಬಲಾರಂಭಿಸಿತ್ತು. ಬೆಳಗಾವಿಯಲ್ಲೂ ಹೋರಾಟದ ತೀವ್ರತೆ ಉಂಟಾಗಿ ಗಂಗಾಧರರಾವ್‌ರವರ ಮೇಲೆಯೂ ಲೋಕಮಾನ್ಯ ಬಾಲಗಂಗಾಧರ ತಿಲಕರು, ದಾದಾಬಾಯಿ ನವರೋಜಿ ರವರುಗಳ ಭಾಷಣಗಳು ಪ್ರಭಾವ ಬೀರಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರಣೆಯಾ ಯಿತು. ಹಾಗಾಗಿ ತಿಲಕರ ಅನುಯಾಯಿಯಾಗಿ ಇವರು ರೂಪು ಗೊಂಡರು.
ಒಮ್ಮೆ ಬೆಳಗಾವಿಯ ಮಾರುತಿ ಮಂದಿರದಲ್ಲಿ ದೊಡ್ಡ ಸಾರ್ವಜನಿಕ ಸಭೆಯನ್ನು ಏರ್ಪಡಿಸಿ ಹೆಚ್ಚಿನ ಜನ ಸೇರಿದ್ದ ಆ ಸಭೆಯಲ್ಲಿ ಗಂಗಾಧರರಾವ್‌ರವರು ಭಾಷಣ ಮಾಡಿ ಜನರ ಮೆಚ್ಚುಗೆಗಳಿಸಿ ಜನನಾಯಕರಾದರು. ಇಂತಹ ಹಲವಾರು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡರು. ಮಹಾತ್ಮ ಗಾಂಧೀಜಿರವರ ಸ್ವದೇಶಿ ಆಂದೋಲನದಿಂದ ಪ್ರೇರಿತರಾಗಿ ಮುಂಬಯಿ ಮತ್ತು ಬೆಳಗಾವಿಯಲ್ಲೂ ಡೆಕ್ಕನ್ ಸ್ಟೋರ‍್ಸ್ ಎಂಬ ಸ್ವದೇಶಿ ವಸ್ತುಗಳ ಮಾರಾಟ ಮಳಿಗೆಯನ್ನು ಪ್ರಾರಂಭಿಸಿದರು. 1906ರಲ್ಲಿ ಬೆಳಗಾವಿಯಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಸಾರ್ವಜನಿಕ ಸಭೆಯನ್ನು ಏರ್ಪಡಿಸಿ ಸ್ವಾತಂತ್ರ ಸಂಗ್ರಾಮ ಹಾಗೂ ಸ್ವದೇಶಿ ಚಳವಳಿಯನ್ನು ತೀವ್ರಗೊಳಿಸಿದರು.
1920ರಲ್ಲಿ ನಾಗಪುರದಲ್ಲಿ ಕಾಂಗ್ರೆಸ್ ಅಧಿವೇಶನವು ನಡೆಯಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ಪ್ರಾಂತ್ಯದಿಂದ ಸಂಘಟಿಸಿ ಗಂಗಾಧರ ರಾವ್‌ರವರ
ನೇತೃತ್ವದಲ್ಲಿ ಸುಮಾರು 800ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಅಂದಿನ ಅಽವೇಶನದಲ್ಲಿ ಭಾಷಾವಾರು ಪ್ರಾಂತ ರಚನೆಯನ್ನು ಅಂಗೀಕರಿಸ ಲಾಯಿತು. ಅಧಿವೇಶನದಲ್ಲಿ ಮೊದಲ ಬಾರಿಗೆ ಕರ್ನಾಟಕ ಕಾಂಗ್ರೆಸ್ ಸಮಿತಿ ಅಸ್ತಿತ್ವಕ್ಕೆ ಬಂದಿತು. ಗಂಗಾಧರರಾವ್ ರವರು ನೂತನ ಕಾಂಗ್ರೆಸ್ ಸಮಿತಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಗಾಂಧೀಜಿರವರು ಕರ್ನಾಟಕದಲ್ಲಿ ಪ್ರವಾಸ ಮಾಡಬೇಕೆಂಬ ಅಪೇಕ್ಷೆಯಿಂದ ಗಂಗಾಧರರಾವ್‌ರವರಿಗೆ ಪತ್ರ ಬರೆದರು.
ಗಾಂಧೀಜಿರವರ ಮಾರ್ಗದರ್ಶನದಂತೆ ನವೆಂಬರ್ 8, 1920 ರಂದು ನಿಪ್ಪಾಣಿಯಲ್ಲಿ ಸಾರ್ವಜನಿಕರ ಸಭೆಯನ್ನು ಆಯೋಜನೆ ಮಾಡಲಾಯಿತು. ಸಭೆ
ಯಲ್ಲಿ ಗಂಗಾಧರರಾವ್‌ರವರು ಗಾಂಧೀಜಿ ರವರಿಗೆ ಹಾರ್ದಿಕ ಸ್ವಾಗತ ಕೋರಿದರು. ನಂತರ ಗಾಂಧೀಜಿರವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿ
ದರು. ಗಾಂಧೀಜಿರವರ ಅಂದಿನ ಭಾಷಣದಿಂದ ಪ್ರೇರಿತರಾಗಿ ಅನೇಕ ಹೆಣ್ಣುಮಕ್ಕಳು ತಾವು ಧರಿಸಿದ್ದ ಬೆಲೆಬಾಳುವ ಆಭರಣಗಳನ್ನು ಸಭೆಯಲ್ಲಿ ಗಾಂಧೀಜಿ
ರವರಿಗೆ ಸಮರ್ಪಿಸಿದರು. ತಕ್ಷಣ ಅವುಗಳನ್ನು ಗಾಂಧೀಜಿರವರು ಗಂಗಾಧರರಾವ್‌ರವರಿಗೆ ಹಸ್ತಾಂತರಿಸಿ ರಾಷ್ಟ್ರೀಯ ಶಿಕ್ಷಣಕ್ಕೆ, ಸ್ವದೇಶಿ ಪ್ರಚಾರಕ್ಕೆ ಇವು ಸದ್ಭಳಕೆಯಾಗಲಿ ಎಂದು ಆದೇಶಿಸಿದರು.
1921 ರಲ್ಲಿ ಕಾಂಗ್ರೆಸ್ ನಾಯಕರುಗಳ ಸಭೆಯಲ್ಲಿ ಗಂಗಾಧರರಾವ್‌ರವರು ಗಾಂಧೀಜಿರವರಿಗೆ ಮನವಿಯನ್ನು ಸಲ್ಲಿಸಿ ಕರಾಚಿ ನಿರ್ಣಯ ವನ್ನು ಅಂಗೀಕರಿಸ
ಬೇಕೆಂದು ಒತ್ತಾಯಿಸಿದರು. ಅಂದಿನ ಸಭೆಯಲ್ಲಿ ಲಾಲಾ ಲಜಪತರಾಯ್, ವಿಠಲಭಾಯಿ ಪಟೇಲ್, ವಲ್ಲಭಬಾಯಿ ಪಟೇಲ್, ಪಂಡಿತ ಮೋತಿಲಾಲ ನೆಹರು, ಸರೋಜಿನಿ ನಾಯ್ಡು, ಚಕ್ರವರ್ತಿ ಸಿ.ರಾಜಗೋಪಾಲಾಚಾರಿ, ಡಾ. ಬಾಬು ರಾಜೇಂದ್ರ ಪ್ರಸಾದ್, ಪಂಡಿತ ಜವಾಹರಲಾಲ್ ನೆಹರು ಮುಂತಾದ ನಾಯಕರುಗಳು
ಗಂಗಾಧರರಾವ್‌ರವರ ಮನವಿಗೆ ದನಿಗೂಡಿಸಿದರು.
ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ದಲ್ಲಿ ಗಂಗಾಧರರಾವ್ ಮತ್ತು ಶ್ರೀನಿವಾಸ ಕೌಜಲಗಿ ರವರ ಬೇಡಿಕೆಯ ಮೇರೆಗೆ ಮುಂದಿನ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಗಂಗಾಧರ ರಾವ್‌ರವರು ಸಭೆಯಲ್ಲಿ ಮುಂದಿನ ಬೆಳಗಾವಿ ಅಽವೇಶನದ ಸ್ವಾಗತ
ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಶ್ರೀನಿವಾಸರಾವ್ ಕೌಜಲಗಿ ಮತ್ತು ಬೆಳವಿರವರು ಉಪಾಧ್ಯಕ್ಷರಾಗಿಯೂ, ಮಾಧವರಾವ್ ಕೆಂಭಾವಿ, ಭೀಮರಾವ್ ಪೋತೆದಾರ್, ಬಾಬಾ ಸಾಹೇಬ ಸೋಮನರವರು ಕಾರ್ಯದರ್ಶಿಯಾಗಿ ಆರಿಸಲಾಯಿತು.
ಸ್ವಯಂ ಸೇವಕ ಪಡೆಯ ಮುಖ್ಯಸ್ಥರಾಗಿ ಡಾ.ನಾ.ಸು.ಹರ್ಡೀಕರ್ ರವರನ್ನು ನಿಯೋಜಿಸಲಾಯಿತು. ಡಿಸೆಂಬರ್ 26 ಮತ್ತು 27, 1924 ರಂದು ಕಾಂಗ್ರೆಸ್ ಅಧಿವೇಶನವು ಬೆಳಗಾವಿಯಲ್ಲಿ ಜರುಗಿತು. ಮಹಾತ್ಮ ಗಾಂಧೀಜಿರವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ಮೂಲೆ ಮೂಲೆಗಳಿಂದ ಜನರು, ಕಾರ್ಯಕರ್ತರು, ಪ್ರತಿನಿಧಿಗಳು ಬಹು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಧಿವೇಶನದಲ್ಲಿ ಭಾಗವಹಿಸಿದ ಎಲ್ಲರನ್ನೂ ಗೌರವ, ಪ್ರೀತಿಯಿಂದ ಬರಮಾಡಿ ಕೊಂಡು ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಸ್ವಾಗತ ಸಮಿತಿಯು ಏರ್ಪಾಡು ಮಾಡಿತ್ತು.
ಗಂಗಾಧರರಾವ್‌ರವರು ಕರ್ನಾಟಕದ ವಿವಿಧ ಭಾಗಗಳಿಗೆ ಕುದುರೆಯ ಮೇಲೆ ಸವಾರಿ ಮಾಡಿ ಭೇಟಿ ನೀಡಿ ಹಣ ಸಂಗ್ರಹಣೆ ಮಾಡಿದರು. ಜನರೂ ಸಹ ಪೂರ್ಣ ಸಹಕಾರ ನೀಡಿದರು. ಅಧಿವೇಶನದ ಅಧ್ಯಕ್ಷೀಯ ಭಾಷಣದಲ್ಲಿ ಗಾಂಧೀಜಿರವರು ಹೇಗೆ ಸ್ವರಾಜ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಪರಿಣಾಮಕಾರಿಯಾಗಿ ಹೇಳಿದರು. ಸಾವಿರ, ಸಾವಿರ ಸಂಖ್ಯೆ ಯಲ್ಲಿ ನಮ್ಮ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಚರಕವನ್ನು ಬಳಸಿ ನೂಲುವ ಮೂಲಕ ಖಾದಿ ತಯಾರಿಸಿ, ಧರಿಸಿ ಸ್ವರಾಜ್ಯವನ್ನು ತರಬಲ್ಲರು ಎಂದು ಹೇಳಿದರು.
ಗಾಂಧೀಜಿರವರು ಅಧ್ಯಕ್ಷತೆ ವಹಿಸಿದ್ದು ಈ ಅಧಿವೇಶನದಲ್ಲಿ ಮಾತ್ರ. ಅಂದು ಸಂಜೆ ಅಧಿವೇಶನದಲ್ಲಿ ಮೈಸೂರು ಸಂಸ್ಥಾನದ ಆಸ್ಥಾನ ಸಂಗೀತಗಾರರಾದ
ವಿದ್ವಾನ್ ವೀಣೆಶೇಷಣ್ಣರವರ ಸಂಗೀತ ಕಾರ್ಯಕ್ರಮವನ್ನು ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸಹಕಾರ ದೊಂದಿಗೆ ಏರ್ಪಡಿಸಲಾಗಿತ್ತು. ಸಂಗೀತ ಕಾರ್ಯಕ್ರಮದಲ್ಲಿ ಗಾಂಧೀಜಿರವರು ಉಪಸ್ಥಿತರಿದ್ದು ತಮ್ಮ ಸಂತೋಷ, ಸಮಾಧಾನಗಳನ್ನು ವ್ಯಕ್ತಪಡಿಸಿದರು.
ಮಾರನೆ ದಿನದ ಅಧಿವೇಶನದಲ್ಲಿ ಗುಲ್ಬರ್ಗಾದ ದಂಗೆಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪವಾಯಿತು.
ಮದ್ಯಪಾನ ಮತ್ತು ಗಾಂಜಾ ಬಳಸುವುದು ನೈತಿಕವಾಗಿ ಜನತೆಯ ಮೇಲೆ ದುಷ್ಪರಿಣಾಮ ಬೀರುವುದು. ಗಾಂಜಾ ಕೃಷಿ ಮಾಡುವುದನ್ನು ನಿಲ್ಲಿಸಬೇಕು ಎಂದು
ಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಲಾಯಿತು. ಹಾಗೂ ಗೋರಕ್ಷಣಾ ಸಮಿತಿಯ ಸಭೆಯನ್ನು ಉದ್ದೇಶಿಸಿ ಗಾಂಧೀಜಿರವರು ಗೋವುಗಳನ್ನು ರಕ್ಷಿಸಲು
ಉಪಾಯವನ್ನು ಕಂಡುಹಿಡಿಯದಿದ್ದರೆ ಸ್ವರಾಜ್ಯಕ್ಕೆ ಅರ್ಥವೇ ಇಲ್ಲ. ಗೋವುಗಳನ್ನು ರಕ್ಷಿಸಿ ಅವುಗಳಿಗೆ ಯೋಗ್ಯ ಗೌರವವನ್ನು ತೋರಿಸುವುದು ಹಿಂದೂ
ಧರ್ಮ ಎಂದು ತಿಳಿಸಿದರು. ಅಧಿವೇಶನ ಮುಗಿದ ಕೂಡಲೇ ಗಾಂಽಜಿರವರು ಗಂಗಾಧರರಾವ್‌ರವರ ಸಂಘಟನಾ ಶಕ್ತಿಯ ಮತ್ತು ಅಧಿವೇಶನದ ಅಚ್ಚುಕಟ್ಟು
ಆಯೋಜನೆ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿಸಿದರು.
ಬೆಳಗಾವಿಯಲ್ಲಿ ನಡೆದ ಅಽವೇಶನ ದಿಂದ ಕನ್ನಡಿಗರ ರಾಜಕೀಯ ಆಶೋತ್ತರಗಳಿಗೆ ಸೂಕ್ತ ಸ್ಥಾನ ಪ್ರಾಪ್ತಿಯಾಯಿತು. ಅಧಿವೇಶನದಿಂದ ಹೆಚ್ಚಿನ ಪ್ರೇರಿತರಾಗಿ ಗಂಗಾಧರರಾವರವರು ಖಾದಿ ಪ್ರಚಾರ, ಆದರ್ಶ ಸತ್ಯಾಗ್ರಹ, ಹರಿಜನೋದ್ಧಾರ, ಗೋವು ರಕ್ಷಣೆ, ಗ್ರಾಮಗಳ ಅಭಿವೃದ್ಧಿಯನ್ನು ಆದ್ಯತೆಯಾಗಿ ಸ್ವೀಕರಿಸಿದರು. ತಮ್ಮ ಹುಟ್ಟೂರು ಹುದಲಿಯಲ್ಲಿ ಖಾದಿ ಗ್ರಾಮೋದ್ಯಕ್ಕೆ ಹೊಸ ಆಯಾಮ ನೀಡಿದರು. ಹಾಗೂ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಪುಣ್ಯ ಭೂಮಿ ಯನ್ನಾಗಿ ಮಾಡಿದರು. ಗಾಂಧೀಜಿರವರು ಸ್ಥಾಪಿಸಿದ ಅಖಲ ಭಾರತ ನೇಕಾರರ ಸಂಘ ಮತ್ತು ಅಖಿಲ ಭಾರತ ಗುಡಿ ಕೈಗಾರಿಕೆಗಳ ಸಂಘದ ಶಾಖೆಗಳನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದರು.
1926 ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ 43ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಬೆಂಗಳೂರಿನ ಕೋಟೆ
ಪ್ರದೇಶದಲ್ಲಿ ಖಾದಿ ವಸಾಲಯದ ಮಳಿಗೆಯನ್ನು ಸ್ಥಾಪಿಸಿದರು. ಜನಾನುರಾಗಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಗಂಗಾಧರರಾವ ದೇಶಪಾಂಡೆ ರವರು ದಿನಾಂಕ ಜುಲೈ 30, 1960 ರಂದು ಮುಂಜಾನೆ ಬೆಳಗಾವಿಯ ಅವರ ನಿವಾಸದಲ್ಲಿ ದೇಹಾವಸಾನ ಹೊಂದಿದರು. ಅಂದಿನ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ, ಬಿ.ಡಿ.ಜತ್ತಿ, ಬಿ.ಎನ್.ದಾತ್ತಾರ್ ಮುಂತಾದ ರಾಷ್ಟ್ರ ನಾಯಕರುಗಳು ಹಾಗೂ ರಾಜ್ಯ ನಾಯಕರಾದ ಡಾ.ನಾ.ಸು. ಹರ್ಡೀಕರ್ ರವರು ಗಂಗಾಧರರಾವ ದೇಶಪಾಂಡೆರವರನ್ನು ಕರ್ನಾಟಕ ಸಿಂಹ ಎಂದು ಹೆಸರಿಸಿ ಅವರ ದೇಶ ಸೇವೆಯನ್ನು ಸ್ಮರಿಸಿ ಕಂಬನಿ ಮಿಡಿದರು.
2016ರಲ್ಲಿ ಬೆಳಗಾವಿಯಲ್ಲಿ ಆಯೋಜಿಸಿದ್ದ ರಾಜ್ಯ ವಿಪ್ರ ಸಮ್ಮೇಳನದಲ್ಲಿ ಆ ಭಾಗದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಗಂಗಾಧರರಾವ್ ದೇಶಪಾಂಡೆ
ಅವರ ಹೆಸರನ್ನು ವೇದಿಕೆಗೆ ಹೆಸರಿಸಿ ಗೌರವ ಸಲ್ಲಿಸಲಾಯಿತು. ಆ ಸಂದರ್ಭದಲ್ಲಿ ದೇಶಪಾಂಡೆರವರ ಮೊಮ್ಮಗ ಪ್ರೊ.ಗಜೇಂದ್ರ ಸಿ.ದೇಶಪಾಂಡೆರವರ ಪರಿಚಯವಾಗಿ ಬೆಳಗಾವಿಯಲ್ಲಿನ ದೇಶಪಾಂಡೆ ಸ್ಮಾರಕ ಭವನಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದು ನನ್ನ ಜೀವನದ ಸ್ಮರಣೀಯ ಕ್ಷಣಗಳು.