ನವದೆಹಲಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೊದಲ ದೆಹಲಿ ಪ್ರವಾಸ ಕೈಗೊಂಡಿದ್ದು ಈಗಾಗಲೇ ರಾಜಧಾನಿ ತಲುಪಿದ್ದಾರೆ.
ಶುಕ್ರವಾರ ಮಧ್ಯಾಹ್ನ ಪ್ರದಾನಿ ಮೋದಿ ಅವರನ್ನು ಭೇಟಿ ಮಾಡಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಂತರ ಅಮಿತ್ ಶಾ, ಅಧ್ಯಕ್ಷ ಜೆ ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಸಹ ಭೇಟಿ ಮಾಡಲಿದ್ದಾರೆ.
ವರಿಷ್ಠರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸಲಿದ್ದಾರೆಯೇ, ನೂತನ ಸಚಿವರ ಪಟ್ಟಿ ಸಿದ್ದ ಮಾಡಿಕೊಂಡೇ ಹೋಗಿದ್ದಾರೆಯೇ ಎಂಬ ಕುತೂಹಲ ಮನೆಮಾಡಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕೇವಲ ಧನ್ಯವಾದ ಹೇಳಲು ಬಂದಿರುವ ಭೇಟಿ, ಸಂಪುಟ ರಚನೆ ಬಗ್ಗೆ ಚರ್ಚಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿಯವರು ಹೇಳಿದರೂ, ಸಚಿವಾಕಾಂಕ್ಷಿ ಶಾಸಕರು ಈಗ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಕೇರಳದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದ್ದು ಕೇರಳದೊಂದಿಗೆ ಹೊಂದಿಕೊಂಡಿರುವ ಮೂರು ಗಡಿ ಜಿಲ್ಲೆಗಳು ನಮ್ಮ ರಾಜ್ಯದಲ್ಲಿವೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಜಾಗೃತರಾಗಿರುವಂತೆ ಮತ್ತು ಕೋವಿಡ್ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದರು.