Sunday, 15th December 2024

’ಜಪಾನ್’ ಭಾರತಕ್ಕೆ ಹಸ್ತಾಂತರಿಸಿದ ಬೋಸರ ಸಂಪತ್ತೇನಾಯಿತು ?

ವೀಕೆಂಡ್ ವಿಥ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಮಹಾತ್ಮ ಗಾಂಧಿಯವರ ಶಾಂತಿ ಮಂತ್ರದಿಂದ ಭಾರತ ಮಾತೆಯೂ ಬ್ರಿಟಿಷರ ಕಪಿಮುಷ್ಟಿಯಿಂದ ಹೊರಬರಲು ಸಾಧ್ಯವಿಲ್ಲವೆಂದು ತಿಳಿದಿದ್ದಂತಹ ಸುಭಾಷರು, ಬ್ರಿಟಿಷರ ವಿರುದ್ಧ ಯುದ್ಧ ಸಾರಿಯೇ ಸ್ವಾತಂತ್ರ್ಯ ಪಡೆಯಬೇಕೆಂಬ ನಿರ್ಧಾರಕ್ಕೆ ಬಂದಾಗಿತ್ತು.

ವಿದೇಶಿ ಕಲೆಕ್ಟರ್ ಒಬ್ಬನಿಂದ ಸ್ಥಾಪಿತವಾಗಿದ್ದಂತಹ ಕಾಂಗ್ರೆಸ್ ಪಕ್ಷವು, ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಹೆಚ್ಚಾಗಿ ನೆಹರು ನೇತೃತ್ವದಲ್ಲಿ ರಾಜಕೀಯ ಮಾಡು ವೆಡೆಗೆ ಗಮನ ಹರಿಸಿತ್ತು. ಮಹಾತ್ಮಗಾಂಽಯವರು ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ನಿರ್ಧಾರಗಳನ್ನು ಬೆಂಬಲಿಸುತ್ತಿದ್ದರು, ಕಾಂಗ್ರೆಸ್ ಪಕ್ಷದವರೇ ಆಗಿದ್ದಂತಹ ಸುಭಾಷರು ಸ್ವಾತಂತ್ರ್ಯಕ್ಕಿಂತಲೂ ರಾಜಕೀಯವೇ ಹೆಚ್ಚಾಗಿ ಕಾಣುತ್ತಿದಂತಹ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೊರ ನಡೆದಿದ್ದರು.

ಬ್ರಿಟಿಷರ ವಿರುದ್ಧ ಕ್ರಾಂತಿಕಾರಿಯಾಗಿ ತಿರುಗಿ ಬೀಳುವ ಸುಭಾಷರ ಯೋಜನೆ ಸ್ಪಷ್ಟವಾಗಿತ್ತು, ಬ್ರಿಟಿಷರಿಗೆ ದಂಡ ವೊಂದೇ ಮಂತ್ರವೆಂಬುದನ್ನು ಅರಿತ್ತಿದ್ದಂತಹ ಬೋಸರು ಭಾರತದಾಚೆಗಿನ ಬ್ರಿಟಿಷ್ ವೈರಿಗಳ ಸಹಾಯ ಪಡೆಯಲು ನಿರ್ಧರಿಸಿಯಾಗಿತ್ತು. ಜರ್ಮನಿ, ಜಪಾನ್, ವಿಯೆಟ್ನಾಂ, ಸಿಂಗಪೂರ್, ಇಟಲಿ, ಆಸ್ಟ್ರಿಯಾ ಹಾಗೂ ರಷ್ಯಾ ದೇಶಗಳ ಸಹಾಯ ಪಡೆದು ಬ್ರಿಟಿಷ್ ಆಡಳಿತದಲ್ಲಿ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡು ಸೆರೆ ಸಿಕ್ಕಂತಹ ಅಲ್ಲಿನ ಭಾರತೀಯ ಯುದ್ಧ ಕೈದಿಗಳ ಸಹಾಯದಿಂದ ದೊಡ್ಡದೊಂದು ಸೈನ್ಯವನ್ನು ನಿರ್ಮಿಸಿ ಬ್ರಿಟಿಷರ ವಿರುದ್ಧ ಆಕ್ರಮಣ ಮಾಡುವ ಯೋಜನೆ ತಯಾರಾಗಿತ್ತು.

ಒಂದು ದೊಡ್ಡ ಸೈನ್ಯವನ್ನು ಕಟ್ಟುವುದು ಸುಲಭದ ಮಾತಲ್ಲ, ಅದರಲ್ಲಿಯೂ ಜಗತ್ತಿನೆಡೆ ‘ಕಾಲೋನಿ’ಗಳ ಮೂಲಕ ನೂರಾರು ದೇಶಗಳನ್ನು ಆಕ್ರಮಿಸಿಕೊಂಡು ಕೊಳ್ಳೆ ಹೊಡೆಯುತ್ತಿದಂತಹ ಬ್ರಿಟಿಷರ ವಿರುದ್ಧ ಯುದ್ಧ ಮಾಡುವ ಮೂಲಕ ಭಾರತವನ್ನು ಸ್ವಾತಂತ್ರ್ಯಗೊಳಿಸುವುದು ಸುಲಭದ ಮಾತಾಗಿರಲಿಲ್ಲ. ಇತ್ತ ಭಾರತ ದಲ್ಲಿನ ಕಾಂಗ್ರೆಸ್ ಸರಕಾರ ಸುಭಾಷರ ಯೋಜನೆಗೆ ಎಳ್ಳಷ್ಟೂ ಸಹಾಯ ಮಾಡಲಿಲ್ಲ, ಬದಲಾಗಿ ಸುಭಾಷರ ವಿರುದ್ಧವೇ ನೆಹರು ಹೇಳಿಕೆಗಳನ್ನು ಕೊಡಲು ಶುರು ಮಾಡಿದ್ದರು. ಆದರೆ ಸುಭಾಷರ ಅನುಯಾಯಿಗಳು ನೆಹರು ಮಾತಿಗೆ ಕೊಂಚವೂ ಸೊಪ್ಪು ಹಾಕುತ್ತಿರಲಿಲ್ಲ, ಗಾಂಧಿಯ ಅಹಿಂಸಾವಾದದಿಂದ ಸ್ವಾತಂತ್ರ್ಯ ಲಭಿಸುವುದಿಲ್ಲವೆಂಬ ಸ್ಪಷ್ಟತೆ ಸುಭಾಷರ ಅನುಯಾಯಿಗಳಿಗಿತ್ತು.

ಸುಭಾಷರು ಭಾರತದಲ್ಲಿದ್ದುಕೊಂಡು ಬ್ರಿಟಿಷರ ವಿರುದ್ಧ ಯುದ್ಧ ಮಾಡಲು ಬೇಕಿದ್ದಂತಹ ಸಂಪನ್ಮೂಲಗಳನ್ನು ಸೇರಿಸುವುದು ಸುಲಭವಿರಲಿಲ್ಲ, ಬ್ರಿಟಿಷರ ಕಣ್ಗಾವಲು ಹಾಗು ಕಾಂಗ್ರೆಸ್ ಪಕ್ಷದ ಪರೋಕ್ಷ ಬೆಂಬಲದಿಂದ ಸುಭಾಷರು ದೇಶ ಬಿಟ್ಟು ಹೋಗಿ ಹೊರಗಿನಿಂದ ಬ್ರಿಟಿಷರ ಮೇಲೆ ಆಕ್ರಮಣ ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಭಾರತದ ಹೊರಗೆ ಒಂದು ದೊಡ್ಡ ಸೈನ್ಯವನ್ನು ಕಟ್ಟಿ ಬ್ರಿಟಿಷರ ವಿರುದ್ಧ ತಿರುಗಿ ಬೀಳಲು ಸುಭಾಷರಿಗೆ ದೊಡ್ಡ ಮಟ್ಟದ ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಇತ್ತು.

ಸುಭಾಷರು ತಮ್ಮ ಹೋರಾಟಕ್ಕೆ ಬೇಕಿರುವ ಆರ್ಥಿಕ ಸಹಾಯವನ್ನು ಕ್ರೋಢೀಕರಿಸಲು ಬಹಿರಂಗವಾಗಿ ಭಾರತೀಯರಿಗೆ ಕರೆ ಕೊಟ್ಟಿದ್ದರು. ಬ್ರಿಟಿಷರ ವಿರುದ್ದದ ತಮ್ಮ ಮೆರವಣಿಗೆಗಳಲ್ಲಿ ಜನರ ಮುಂದೆ ಸಹಾಯ ಹಸ್ತ ಚಾಚುವ ಮೂಲಕ ಸುಭಾಷರು ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿದ್ದರು. ಬ್ರಿಟಿಷರ ಗೃಹ ಬಂಧನದಿಂದ ತಪ್ಪಿಸಿಕೊಂಡು ಜರ್ಮನಿ ಹಾಗು ಜಪಾನ್ ದೇಶಗಳ ಸಹಾಯ ಪಡೆಯಲು, ಹಿಟ್ಲರ್ ಹಾಗೂ ಜಪಾನಿ ನಾಯಕರನ್ನು ಭೇಟಿ ಮಾಡಿದ ಬೋಸರಿಗೆ ‘ಇಂಡಿಯನ್ ನ್ಯಾಷನಲ್ ಆರ್ಮಿ’ ಕಟ್ಟಲು ಭಾರತೀಯ ಯುದ್ಧ ಕೈದಿಗಳನ್ನು ಹಸ್ತಾಂತರಿಸಲು ನಿರ್ಧರಿಸಲಾಯಿತು.

ಭಾರತೀಯ ಯುದ್ಧ ಕೈದಿಗಳಿಗೆ ಆತ್ಮಸ್ಥೈರ್ಯವನ್ನು ತುಂಬಿ ಭಾರತದ ಸೈನ್ಯವನ್ನು ಕಟ್ಟುವಲ್ಲಿ ಬೋಸರು ಯಶಸ್ವಿಯಾಗಿದ್ದರು. ಶತ್ರುವಿನ ಶತ್ರು ಮಿತ್ರನೆಂಬಂತೆ
ಜಪಾನ್ ಹಾಗೂ ಜರ್ಮನಿ ಬ್ರಿಟಿಷರ ಶತ್ರುಗಳಾಗಿದ್ದರ ಕಾರಣಕ್ಕಾಗಿ ಬೋಸರಿಗೆ ನೇರ ಬೆಂಬಲ ಸಿಕ್ಕಿತ್ತು. ಹಿಟ್ಲರ್‌ನ ನೇತೃತ್ವದಲ್ಲಿ ಮುನ್ನುಗ್ಗುತ್ತಿದಂತಹ ಜರ್ಮನಿಗೆ ಎರಡನೇ ಮಹಾಯುದ್ಧದ ಕೊನೆಯಲ್ಲಿ ಜಯ ದೊರಕಲಿಲ್ಲ. ಹಿಟ್ಲರ್ ಸತ್ತುಹೋದ, ಅತ್ತ ಜಪಾನಿನ ಹಿರೋಷಿಮಾ ಹಾಗೂ ನಾಗಸಾಕಿ ನಗರಗಳ ಮೇಲೆ ಅಮೆರಿಕ ಅಣುಬಾಂಬ್ ದಾಳಿ ಮಾಡುವ ಮೂಲಕ ಎರಡನೇ ಮಹಾಯುದ್ಧದಲ್ಲಿ ವಿಶ್ವದ ದೊಡ್ಡಣ್ಣನಾಗಿ ಹೊರ ಹೊಮ್ಮಿತ್ತು.

ಅಣುಬಾಂಬಿನ ದಾಳಿಗೆ ತತ್ತರಿಸಿದ್ದಂತಹ ಜಪಾನ್ ಆಗ 15 -1945ರಂದು ಶರಣಾಗತಿಯನ್ನು ಘೋಷಿಸಿತು. ಅಲ್ಲಿಗೆ ಎರಡನೇ ಮಹಾಯುದ್ಧ ಅಂತ್ಯ ಗೊಂಡಿತ್ತು. ಜರ್ಮನ್ ಹಾಗೂ ಜಪಾನ್ ದೇಶಗಳು ಯುದ್ಧದಲ್ಲಿ ಸೋತಿದ್ದರೆ ಪರಿಣಾಮ ನೇರವಾಗಿ ಬೋಸರ ಮೇಲೆ ಬಿದ್ದಿತ್ತು. ತನಗೆ ಬೆನ್ನೆಲುಬಾಗಿದ್ದಂತಹ ಎರಡೂ ದೇಶಗಳು ಸೋತ ನಂತರ ಬೋಸರು ರಷ್ಯಾದೆಡೆಗೆ ಮುಖ ಮಾಡಿದರು. ಯುದ್ಧದಲ್ಲಿ ಸೋತ ನಂತರ ಜಪಾನ್ ಆಗ್ನೇಯ ಏಷ್ಯಾ ದೇಶಗಳ ಮೇಲೆ
ತನ್ನ ಹಿಡಿತವನ್ನು ಕಳೆದುಕೊಂಡಿತು. ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಬೋಸರು ಸಿಂಗಪೂರವನ್ನು ಬಿಟ್ಟು ಹೊರಡಲೇಬೇಕಿತ್ತು.

ಅದಾದ ನಂತರ 17 ನೇ ಆಗ 1945 ರಂದು ಆಗ್ನೇಯ ಏಷ್ಯಾದ ವಿಯೆಟ್ನಾಂನಿಂದ ಬೋಸರು, ಜಪಾನಿನ ಉನ್ನತ ಮಿಲಿಟರಿ ಅಧಿಕಾರಿಯೊಬ್ಬರ ಜತೆ
ವಿಮಾನದಲ್ಲಿ ಹೊರಟರು. ತದ ನಂತರ ಆ ವಿಮಾನ ’ತೈಪೆ’ ಬಳಿ ಅಪಘಾತವಾಯಿತೆಂದು ಇದುವರೆಗೂ ಹೇಳಲಾಗುತ್ತಿದೆ. ಆದರೆ ಬೋಸರು ಅಂದು ಆ ವಿಮಾನದಲ್ಲಿ ಇರಲೇ ಇಲ್ಲವೆಂದು ಹೇಳಲು ಹಲವು ಪುರಾವೆಗಳು ಸಿಕ್ಕಿವೆ. ಆಗ 17 ಹಾಗು 18 ರಂದು ಬೋಸರು ವಿಯೆಟ್ನಾಂ ದೇಶದ ಸೈಗಾಮ ನಗರದಲ್ಲಿ ಉಳಿದುಕೊಂಡಿದ್ದಕ್ಕೆ ಇಂದಿಗೂ ಪುರಾವೆಗಳಿವೆ.

ಬೋಸರ ಜತೆಗೆ ಜಪಾನಿನ ಮಿಲಿಟರಿ ಅಧಿಕಾರಿಯೂ ಸಹ ವಿಮಾನ ಅಪಘಾತದಲ್ಲಿ ಮೃತರಾದರೆಂದರೆ ಜಪಾನ್ ಸರಕಾರ ಅವರ ಅಂತ್ಯಕ್ರಿಯೆಯನ್ನು ಯಾಕೆ ಸಕಲ ಸರಕಾರಿ ಗೌರವದೊಂದಿಗೆ ಮಾಡಲಿಲ್ಲ? ಬೋಸರ ಮರಣ ಪ್ರಮಾಣಪತ್ರವನ್ನು 13-08-1988, ಅಂದರೆ ಸುಮಾರು 45 ವರ್ಷಗಳ ನಂತರ ನೀಡಲಾಯಿತು. ಬೋಸರು ವಿಮಾನ ಅಪಘಾತದಲ್ಲಿಯೇ ಸತ್ತಿದ್ದರೆ ಯಾಕೆ ಅಷ್ಟು ವಿಳಂಬವಾಗಿ ಮರಣ ಪ್ರಮಾಣಪತ್ರವನ್ನು ನೀಡಲಾಯಿತು ? ಡಿಸೆಂಬರ್
1945ರಲ್ಲಿ ಕಾಶ್ಮೀರದ ’ಗಿಲ್ಬಿಟ್’ ಪ್ರಾಂತ್ಯದಲ್ಲಿ ಭಾರತ ಸ್ವಾತಂತ್ರ್ಯ ಕ್ರಾಂತಿಯ ಮೂರು ಭಾಷಣಗಳು ಪ್ರಸಾರವಾಗಿದ್ದವು.

ಅವೆಲ್ಲವನ್ನೂ ರಷ್ಯಾ ದೇಶದ ಮಾಸ್ಕೋ ರೆಡಿಯೊ ಮೂಲಕ ಪ್ರಸಾರ ಮಾಡಲಾಗಿತ್ತು. ಈ ಎಲ್ಲಾ ಭಾಷಣಗಳನ್ನು ಮಾಡಿದವರು ಸುಭಾಷ್ ಚಂದ್ರ ಬೋಸ ರೆಂದು ಅಂದಿನ ಬ್ರಿಟಿಷ್ ಗೂಢಚಾರಿ ಸಂಸ್ಥೆ ಹೇಳಿತ್ತು. ಇಪ್ಪತ್ತು ವರ್ಷಗಳ ನಂತರ ಅಂದರೆ 1967ರಲ್ಲಿ ಇಂದಿರಾ ಗಾಂಧಿ ಸರಕಾರದ ಮೇಲೆ ಪತ್ರಕರ್ತ ರೊಬ್ಬರು ಸೆಕ್ಷನ್ 420 ಅಡಿಯಲ್ಲಿ ದಾವೆಯನ್ನು ಹೂಡಿದ್ದರು. ತನಿಖೆಗೆ ಆದೇಶಿಸಿದ ಸರಕಾರ ಮಾಸ್ಕೋ ರೆಡಿಯೊ ಪ್ರಸರಣದಲ್ಲಿ ಭಾಷಣ ಮಾಡಿದ ಮೂವರು ಯುವಕರ ಹೆಸರು ಸುಭಾಷ್ ಚಂದ್ರರೆಂದು ಹೇಳಿ, ಅವರ್ಯಾರೂ ಸಹ ಸುಭಾಷ್ ಚಂದ್ರ ಬೋಸ್ ಅಲ್ಲವೆಂಬ ವರದಿಯನ್ನು ನೀಡಿತ್ತು. ಆದರೆ ಜಗತ್ತಿನ ಶಕ್ತಿಯುತ ರಾಷ್ಟ್ರ ರಷ್ಯಾ ಭಾರತದ ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಯಾರೋ ಮೂರು ಜನ ಅನಾಮಿಕ ವಿದ್ಯಾರ್ಥಿಗಳಿಗೆ ಹೇಗೆ ಅನುಮತಿ ನೀಡಿತೆಂಬುದಕ್ಕೆ ಇಂದಿರಾ ಗಾಂಧಿ ಸರಕಾರದ ಬಳಿ ಉತ್ತರವಿರಲಿಲ್ಲ!

ಅಕ್ಟೋಬರ್ 1996ರಲ್ಲಿ ಭಾರತೀಯ ಸಂಸತ್ತಿನ ನಿಯೋಗವೊಂದು ರಷ್ಯಾ ದೇಶದ ಮಾಸ್ಕೋ ನಗರಕ್ಕೆ ಸುಭಾಷ್ ಚಂದ್ರ ಬೋಸರ ಬಗ್ಗೆ ಮತ್ತಷ್ಟು ಮಾಹಿತಿ ಯನ್ನು ಕಲೆ ಹಾಕಲು ಹೋಗಿತ್ತು. ಆ ನಿಯೋಗದಲ್ಲಿ ಬೋಸರ ಫಾರ್ವರ್ಡ್ ಬ್ಲಾಕ್ ಸದಸ್ಯರಿಬ್ಬರು ಇದ್ದರು. ರಷ್ಯಾ ಮಿಲಿಟರಿ ಅಧಿಕಾರಿಗಳು ನಿಯೋಗದ ಸದಸ್ಯರಿಗೆ ಬೋಸರು 1945ರ ನಂತರ ರಷ್ಯಾ ದೇಶದಲ್ಲಿದ್ದುದ್ದಕ್ಕೆ ಬೇಕಿದ್ದಂತಹ ಹಲವು ಸಾಕ್ಷಿಗಳನ್ನು ಒದಗಿಸಿದ್ದರು. ಸಾಕ್ಷಿಗಳನ್ನು ಸಂಗ್ರಹಿಸಿ ಭಾರತಕ್ಕೆ ಬಂದ ನಂತರ, 1997 ರ ಅಕ್ಟೋಬರ್ ತಿಂಗಳಲ್ಲಿ ಫಾರ್ವರ್ಡ್ ಬ್ಲಾಕ್‌ನ ಸದಸ್ಯರೊಬ್ಬರು ಬಿಹಾರದ ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಹೃದಯಾ ಘಾತವಾಗಿ ಸತ್ತು ಹೋಗುತ್ತಾರೆ! ಬೋಸರ ರಷ್ಯಾ ನಂಟಿನ ಬಗ್ಗೆ ಬಹುಮುಖ್ಯವಾದಂತಹ ಸಾಕ್ಷಿಯನ್ನು ತಂದಂತಹ ಸದಸ್ಯರೊಬ್ಬರು ಕೇವಲ ಆರು ತಿಂಗಳಲ್ಲಿ ಸಾಯುತ್ತಾರೆಂದರೆ ಅದರ ಹಿಂದಿನ ಮರ್ಮವೇನಿರಬಹುದೆಂದು ನೀವೇ ಯೋಚಿಸಿ. ಹಾಗಂತ ಬೋಸರ ಮರಣದ ವಿಚಾರದಲ್ಲಿ ತನಿಖೆ ನಡೆಯುವ ವೇಳೆ
ಆದಂತಹ ಸಾವು ಇದು ಮೊದಲಲ್ಲ, ಇದಕ್ಕೂ ಮೊದಲು 1969 ರಲ್ಲಿ ಕೋಲ್ಕತ್ತಾ ನಗರದ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದಂತಹ ವೇಳೆಯಲ್ಲಿ, ಬೋಸರು ತನಗೆ ತಾವು ಉಪಯೋಗಿಸುತ್ತಿದಂತಹ ಖಡ್ಗವೊಂದನ್ನು ನೀಡಿರುವುದಾಗಿ ಹೇಳಿದ್ದನು.

ತಾನು ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದಂತಹ ವೇಳೆಯಲ್ಲಿ, 1945ರ ಸೆಪ್ಟೆಂಬರ್ ತಿಂಗಳಲ್ಲಿ ಬೋಸರನ್ನು ಸಿಂಗಾಪೂರ್ ಬಳಿ ಸಬ್ ಮರೀನ್ ಒಂದಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದಾನೆಂದು ಹೇಳಿದ್ದನು. ಈ ವಿಚಾರವಾಗಿ 1969 ರಲ್ಲಿ ಇದ್ದಂತಹ ಸರಕಾರವು ತನಿಖೆಯನ್ನು ನಡೆಸಿತ್ತು.
ತನಿಖೆಯ ವರದಿಯಲ್ಲಿ ಆತನಿಗೆ ಬೋಸರು ನೀಡಿರುವ ಖಡ್ಗವು ಬೋಸರದ್ದೇ ಎಂದು ಹೇಳಲಾಗಿತ್ತು. ಆದರೆ ಆತನು ಬೋಸರ ಬಗ್ಗೆ ಹೇಳಿದ್ದಂತಹ ವಿಷಯವನ್ನು
ಸುಳ್ಳೆಂದು ಹೇಳಲಾಗಿತ್ತು. ಇದಾದ ನಂತರ 1971ರ ಆಸುಪಾಸಿನಲ್ಲಿ ಆ ಪೊಲೀಸ್ ಅಧಿಕಾರಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಮಾನುಷವಾಗಿ ಕೊಲೆಯಾಗಿಹೋಗಿದ್ದ. ಆತನ ತಲೆಯನ್ನು ತುಂಡರಿಸಿ ಅವನ ಮನೆಯ ಮುಂದಿಡಲಾಗಿತ್ತು.

ಇಲ್ಲಿಯವರೆಗೂ ಆತನ ಕೊಲೆ ಮಾಡಿದವರ ಬಗ್ಗೆ ಒಂದೇ ಒಂದು ಸುಳಿವೂ ಸಹ ಸಿಕ್ಕಿಲ್ಲ. 1943ರಲ್ಲಿ ಸುಭಾಷ್ ಚಂದ್ರ ಬೋಸರು ಜಪಾನ್ ಹಿಡಿತದಲ್ಲಿದಂತಹ ಮಲೇಷಿಯಾ ದೇಶದ ಪೆನಾಂಗ್ ನಗರಕ್ಕೆ ಬಂದಿದ್ದರು. ಇಂಡಿಯನ್ ನ್ಯಾಷನಲ್ ಆರ್ಮಿಯ ಸೈನಿಕರಿಗೆ ಪೆನಾಂಗ್ ನಗರದಲ್ಲಿ ಬಹುದೊಡ್ಡ ಸಹಕಾರ ಸಿಕ್ಕಿತ್ತು, ಕಾರಣ ಪೆನಾಂಗ್ ನಗರದಲ್ಲಿ ತಮಿಳುನಾಡಿನ ಜನರು ಹೆಚ್ಚಾಗಿ ವಾಸಿಸುತ್ತಿದ್ದರು ಹಾಗು ಅಲ್ಲಿನ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ತಮಿಳರ ಪಾಲು ಬಹಳಷ್ಟಿತ್ತು.
ಇಂಡಿಯನ್ ಇಂಡಿಪೆಂಡೆ ಲೀಗ್ ಸಂಸ್ಥೆಯಲ್ಲಿ ಸುಭಾಷರ ಸೇನೆಗೆ ಅಗತ್ಯವಿರುವ ಆರ್ಥಿಕ ಸಹಾಯವನ್ನು ಮಾಡಲಾಗುತ್ತಿತ್ತು. ಇಬ್ಬರ ಉದ್ದೇಶವೂ ಸಹ ಬ್ರಿಟಿಷರ
ವಿರುದ್ಧ ಯುದ್ಧ ಮಾಡಿ ಗೆಲ್ಲುವುದೇ ಆಗಿತ್ತು. ಅಷ್ಟು ಹೊತ್ತಿಗಾಗಲೇ ಬೋಸರ ಮಾರ್ಗದರ್ಶನದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ಒಟ್ಟಾರೆ ಸೈನಿಕರ
ಸಂಖ್ಯೆಯು 40,000 ದಾಟಿತ್ತು. ಮತ್ತೊಂದು ಪ್ರಮುಖ ವಿಷಯವೆಂದರೆ 1943 ರಲ್ಲಿ ಪೆನಾಂಗ್ ಕಡಲನಗರದಲ್ಲಿ ಜರ್ಮನ್ ದೇಶದ ಸುಮಾರು 17 ಸಬ್ ಮರೀನ್ ಗಳಿದ್ದವು.

ಮಾನ್ಸೂನ್ ಗ್ರೂಪ್ ನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು, ಸುಭಾಷರು ರಹಸ್ಯ ಸಭೆಯೊಂದರಲ್ಲಿ ಜಪಾನ್ ಹಾಗು ಜರ್ಮನ್ ದೇಶದ ಸೈನ್ಯಾಧಿಕಾರಿಗಳನ್ನು ಅಲ್ಲಿಯೇ ಭೇಟಿಯಾಗಿದ್ದರು. 1945ರ ಯುದ್ಧದಲ್ಲಿ ಜಪಾನ್ ಸೋತ ನಂತರ ತನ್ನ ತೆಕ್ಕೆಯಲ್ಲಿದಂತಹ ಆಗ್ನೇಯ ಏಷ್ಯಾ ದೇಶಗಳೆಲ್ಲವನ್ನೂ ಬಿಟ್ಟು ಕೊಡಬೇಕಾ ದಂತಹ ಪರಿಸ್ಥಿತಿ ಎದುರಾಗಿರುವ ಕಾರಣ. ಬಿಟ್ಟು ಕೊಡುವ ಮೊದಲು ಆ ದೇಶಗಳಲ್ಲಿ ತಾನು ಕ್ರೋಡೀಕರಿಸಿರುವ ಸಂಪತ್ತುಗಳನ್ನು ಜಪಾನ್ ತನ್ನ ದೇಶಕ್ಕೆ ರವಾನಿಸಲು ತೀರ್ಮಾನಿಸಿತ್ತು.

ಟನ್ ಗಟ್ಟಲೆ ಚಿನ್ನದ ಗಟ್ಟಿಗಳನ್ನು ಜಪಾನ್ ಯುದ್ಧದ ಸಂದರ್ಭದಲ್ಲಿ ಕ್ರೂಡೀಕರಿಸಿತ್ತು. ದೊಡ್ಡ ದೊಡ್ಡ ನಗರಗಳನ್ನು ಆಕ್ರಮಿಸಿಕೊಂಡಂತ ನಂತರ ಅಲ್ಲಿ ಸಿಕ್ಕಂತಹ ಚಿನ್ನದ ಆಭರಣಗಳನ್ನು ಒಂದೆಡೆ ಸಂಗ್ರಹಿಸಲಾಗಿತ್ತು. ಬ್ರಿಟೀಷರ ವಿರುದ್ಧ ಹೋರಾಡಲು ‘ಇಂಡಿಯನ್ ನ್ಯಾಷನಲ್ ಆರ್ಮಿಗೆ ಆರ್ಥಿಕ ಸಂಪತ್ತಿನ
ಅವಶ್ಯಕತೆಯಿತ್ತು. ಜಪಾನ್ ಸರಕಾರ ತಾನು ವಶಪಡಿಸಿಕೊಂಡಂತಹ ಚಿನ್ನವನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಲು ‘ಇಂಡಿಯನ್ ನ್ಯಾಷನಲ್ ಆರ್ಮಿಯ ಸಹಾಯವನ್ನು ಕೇಳಿತ್ತು. ತನಗೆ ಮಾಡಿದ ಸಹಾಯಕ್ಕೆ ಜಪಾನಿಯರಿಗೆ ಬೋಸರು ಸಹಾಯ ಮಾಡಲು ಒಪ್ಪಿದ್ದರು, ಬ್ರಿಟಿಷ್ ಅಮಿಯು ಆಗ್ನೇಯ ಏಷ್ಯಾ ದೇಶಗಳೆಡೆಗೆ ಮುನ್ನುಗ್ಗುವ ಮೊದಲು ಚಿನ್ನ ಹಾಗೂ ವಜ್ರಗಳನ್ನು ಕರಗಿಸಿ ಜಪಾನಿಗೆ ಸಾಗಿಸಬೇಕಿತ್ತು.

ಸೈಗಾನ್ ವಿಯೆಟ್ನಾಂ ದೇಶದ ಮತ್ತೊಂದು ಬಹುದೊಡ್ಡ ನಗರ, ಹೆಚ್ಚಾಗಿ ತಮಿಳುನಾಡಿನ ಚೆಟ್ಟಿಯಾರ್‌ಗಳು ಇಲ್ಲಿ ವಾಸಿಸುತ್ತಿದ್ದರು. ಭಾರತದ ಸ್ವಾತಂತ್ರ್ಯ ಬಯಸಿದ್ದಂತಹ ಚೆಟ್ಟಿಯಾರ್‌ಗಳು ಬೋಸರ ‘ಇಂಡಿಯನ್ ನ್ಯಾಷನಲ್ ಆರ್ಮಿ’ಗೆ ಬಹುದೊಡ್ಡ ಮಟ್ಟದಲ್ಲಿ ಆರ್ಥಿಕ ಸಹಾಯ ಮಾಡಿದ್ದರು. ಚಿನ್ನ, ವಜ್ರ, ವೈಡೂರ್ಯ, ಹಣದ ಸಹಾಯವನ್ನು ಲೆಕ್ಕವಿಲ್ಲದಷ್ಟರ ಮಟ್ಟದಲ್ಲಿ ಚೆಟ್ಟಿಯಾರ್ ಗಳು ಬೋಸರಿಗೆ ನೀಡಿದ್ದರು. ಆಗ್ನೇಯ ಏಷ್ಯಾದ ಇತರ ರಾಷ್ಟ್ರದಲ್ಲಿದಂತಹ ಚೆಟ್ಟಿಯಾರ್‌ಗಳ ಬಳಿಯೂ ಸಂಪತ್ತನ್ನು ಸಂಗ್ರಹಿಸಿ ಸುಭಾಷರಿಗೆ ನೀಡಿದ್ದರು.

ಆಗ 20 -1945 ನೇ ತಾರೀಕಿನಂದು ಅಜಾದ್ ಹಿಂದ್ ಸರಕಾರದ ವಿತ್ತ ಸಚಿವರಾಗಿದ್ದಂತಹ ಜನರಲ್ ಅ.ಇ. ಚಾರ್ಟಜಿ ಸಂಗ್ರಹಿಸಿದ್ದಂತಹ ಚಿನ್ನದ
ಆಭರಣಗಳನ್ನು ಕರಗಿಸಿ ಸುಮಾರು 150 ಕಿಲೋಗ್ರಾಮ್ ನಷ್ಟು ಚಿನ್ನದ ಗಟ್ಟಿಯನ್ನಾಗಿಸಿದ್ದರು. ಅಂದು ಅವರು ಕರಗಿಸಿದ್ದಂತಹ ಚಿನ್ನವು ಇಂದಿಗೂ ಎಲ್ಲಿಗೆ ಹೋಯಿತೆಂದು ಯಾರಿಗೂ ತಿಳಿದಿಲ್ಲ. ಕೆಲವರ ಪ್ರಕಾರ ಅಲ್ಪ, ಸ್ವಲ್ಪ ಚಿನ್ನದ ಗಟ್ಟಿಯನ್ನು ಫ್ರೆಂಚರು ವಶಪಡಿಸಿಕೊಂಡಿದ್ದರಂತೆ, ನಂತರ ಬ್ರಿಟೀಷರು ಇಂಡಿಯನ್ ನ್ಯಾಷನಲ್ ಆರ್ಮಿ ಸಂಗ್ರಹಿಸಿಟ್ಟಿದಂತಹ ಚಿನ್ನದ ಗಟ್ಟಿಯನ್ನು ಹುಡುಕಿಕೊಂಡು ಇಡೀ ಆಗ್ನೇಯ ಏಷ್ಯಾ ದೇಶಗಳಲ್ಲಿ ತಿರುಗಾಡಿದ್ದರು.

ಬ್ರಿಟೀಷ್ ಗ್ರಂಥಾಲಯದಲ್ಲಿರುವ ದಾಖಲೆಗಳ ಪ್ರಕಾರ ಇಂಡಿಯನ್ ನ್ಯಾಷನಲ್ ಆರ್ಮಿ ಹಾಗೂ ಇಂಡಿಯನ್ ಇಂಡಿಪೆಂಡೆ ಲೀಗ್ ಶರಣಾದಾಗ ಬ್ರಿಟೀಷರಿಗೆ
ಸುಮಾರು 262 ಕೆ.ಜಿ ಚಿನ್ನದ ಗಟ್ಟಿ, 262 ಬರ್ಮಾ ರೂಬಿಗಳು, ಚಿನ್ನ ಹಾಗೂ ಬೆಳ್ಳಿ ಆಭರಣಗಳು ಸಿಕ್ಕಿದ್ದವಂತೆ. ಭಾರತವು ಸ್ವಾತಂತ್ರ್ಯಗೊಂಡ ನಂತರ ಅಂತಾರಾಷ್ಟ್ರೀಯ ಒಪ್ಪಂದಗಳ ಪ್ರಕಾರ ಭಾರತಕ್ಕೆ ಸೇರಬೇಕಿದ್ದಂತಹ ಈ ಸಂಪತ್ತು ಎಲ್ಲಿ ಹೋದವೆಂದು ಇಂದಿಗೂ ಯಾರಿಗೂ ತಿಳಿದಿಲ್ಲ.

1947 ರಲ್ಲಿ ಆಸ್ಟ್ರೇಲಿಯಾದ ಪತ್ರಿಕೆಯೊಂದು ಬ್ರಿಟೀಷರು ವಶಪಡಿಸಿಕೊಂಡಂತಹ ಸಂಪತ್ತುಗಳನ್ನು ಜಪಾನ್ ದೇಶಕ್ಕೆ ನೀಡಲಾಗಿದೆಯೆಂದು ಬರೆದಿತ್ತು. ಅದಾದ ವರ್ಷಗಳ ನಂತರ ಅಂದರೆ 1952 ರಲ್ಲಿ ಜಪಾನ್ ದೇಶವು ಎರಡು ದೊಡ್ಡ ಸೂಟ್ ಕೇಸ್‌ಗಳನ್ನು ಭಾರತ ಸರಕಾರಕ್ಕೆ ಒಪ್ಪಿಸಿತ್ತು. ಈ ಸೂಟ್ ಕೇಸ್‌ಗಳಲ್ಲಿ ಬೋಸರು ವಿಮಾನ ಅಪಘಾತದಲ್ಲಿ ಮೃತರಾದ ನಂತರ ವಿಮಾನದಲ್ಲಿ ಸಿಕ್ಕಂತಹ ವಸ್ತುಗಳನ್ನು ನೀಡಲಾಗಿದೆಯೆಂದು ಹೇಳಲಾಗಿತ್ತು. ಇದಾದ ನಂತರ ಭಾರತ ಹಾಗೂ ಜಪಾನ್ ನಡುವೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದವನ್ನು ಶಾಂತಿ ಒಪ್ಪಂದವೆಂದು ಕರೆಯಲಾಗಿತ್ತು. ಹಾಗಾದರೆ ಬೋಸರ ಸೂಟ್ ಕೇಸ್‌ನಲ್ಲಿ ನೀಡಿದ್ದಂತಹ ವಸ್ತುಗಳು ’ಇಂಡಿಯನ್ ನ್ಯಾಷನಲ್ ಆರ್ಮಿ’ಯ ಸಂಪತ್ತಿನ ಒಂದು ಸಣ್ಣ ಭಾಗವೇ ? 2016ರಲ್ಲಿ ಭಾರತ ಸರಕಾರವು ಇದೇ ವಿಷಯ ವಾಗಿ ಹೆಚ್ಚಿನ ಮಾಹಿತಿಯನ್ನು ಜಪಾನ್ ಸರಕಾರಕ್ಕೆ ಕೇಳಿದಾಗ ಮತ್ತೊಂದು ಅಂಶವು ಬೆಳಕಿಗೆ ಬಂದಿತ್ತು,

1958 ಹಾಗು 1961 ರ ನಡುವೆ ಬೋಸರಿಗೆ ಸೇರಿದ್ದಂತಹ ಅತ್ಯಮೂಲ್ಯ ವಜ್ರ ಸಂಪತ್ತನ್ನು ಭಾರತೀಯ ರಾಯಭಾರ ಕಚೇರಿಗೆ ನೀಡಲಾಗಿತ್ತೆಂಬುದು  ತಿಳಿಯಿತು. 1958ರಲ್ಲಿ ಸುಮಾರು 18400 ಕ್ಯಾರಟ್/3.68 ಕೆಜಿ ತೂಕದ ಕತ್ತರಿಸದ ಪಚ್ಚೆಕಲ್ಲು, ಸುಮಾರು 17880 ಕ್ಯಾರಟ್/3.56 ಕೆಜಿ ತೂಕದ ಪಚ್ಚೆಕಲ್ಲಿನಿಂದ ಮಾಡಿದಂತಹ ಬುದ್ಧನ ವಿಗ್ರಹ ಹಾಗೂ 1961ರಲ್ಲಿ ಸುಮಾರು ಒಂದು ಅಡಿ ಉದ್ದದ ಸುಮಾರು 14700 ಕ್ಯಾರಟ್/2 ಕೆಜಿ ತೂಕದ ಪಚ್ಚೆಕಲ್ಲಿನಿಂದ ಮಾಡಿದ್ದಂತಹ ಬುದ್ಧನ ವಿಗ್ರಹವನ್ನು ಭಾರತೀಯ ಭೂತವಾಸ ಕಚೇರಿಗೆ ಟೋಕಿಯೋ ನಗರದಲ್ಲಿ ನೀಡಲಾಗಿತ್ತೆಂಬ ಅಂಶ ಬೆಳಕಿಗೆ ಬಂತು.

ಹಾಗಾದರೆ ಭಾರತೀಯ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ರಾಷ್ಟ್ರಭಕ್ತನೊಬ್ಬ ಸಂಗ್ರಹಿಸಿದ್ದಂತಹ ಬೆಲೆ ಕಟ್ಟಲಾಗದಂತಹ ಚಿನ್ನ, ವಜ್ರ, ವೈಡೂರ್ಯಗಳು ಎಲ್ಲಿ ಹೋದವು ? ಭಾರತೀಯರಾಗಿ ಅದನ್ನು ತಿಳಿದು ಕೊಳ್ಳುವ ಹಕ್ಕು ನಮ್ಮೆಲರಿಗೂ ಇದೆ. ಜರ್ಮನಿ ಹಾಗೂ ಜಪಾನ್ ಶರಣಾದ ಮೇಲೆ ರಹಸ್ಯ ಸಬ್ ಮರೀನ್, ಮಾನ್ಸೂನ್ ಗ್ರೂಪ್ ಬಗ್ಗೆ ಬೋಸರಿಗೆ ತಿಳಿದಿತ್ತು, ಸೈಗಾನ್ ನಗರದಿಂದ ಸಿಂಗಪುರಕ್ಕೆ ವಿಮಾನದಲ್ಲಿ ಬಂದಂತಹ ಬೋಸರನ್ನು ಕೋಲ್ಕತ್ತಾದಲ್ಲಿ ಹತ್ಯೆ
ಯಾದಂತಹ ಪೊಲೀಸ್ ಅಧಿಕಾರಿ ಸಬ್ ಮರೀನ್ ಬಳಿ ಕರೆದುಕೊಂಡು ಬಂದಿದ್ದ. ಆತನು ಪತ್ರಿಕೆಯೊಂದಕ್ಕೆ 1969ರಲ್ಲಿ ಹೇಳಿದ ಹಾಗೆ ಬೋಸರು ೧೮ನೇ ಸೆಪ್ಟೆಂಬರ್ 1945ರಂದು ಸಬ್ ಮರೀನ್ ಮೂಲಕ ರಷ್ಯಾಕ್ಕೆ ತೆರಳಿದ್ದರು.

ಬೋಸರ ಅಜಾದ್ ಹಿಂದ್’ ಸರಕಾರವನ್ನು ಅಧಿಕೃತವಾಗಿ ಗುರುತಿಸಿದ್ದಂತಹ ರಷ್ಯಾ ಬೋಸರಿಗೆ ಆಶ್ರಯ ನೀಡಿತ್ತೆಂಬುದು ಇತಿಹಾಸದ ಮತ್ತೊಂದು ಪುಟ. ಬೋಸರಿಗೆ ಆಸ್ಟ್ರಿಯಾ ದೇಶದ ವಿಯೆನ್ನಾನಗರದಲ್ಲಿ ಮಡದಿ ಹಾಗೂ ಮಗಳಿದ್ದರು. ಆಗ ಆಸ್ಟ್ರಿಯಾ ದೇಶವು ರಷ್ಯಾ ಒಕ್ಕೂಟದ ಭಾಗವಾಗಿತ್ತು. ಹಾಗಾದರೆ ಬೋಸರು ಬ್ರಿಟಿಷರ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಲು ಸಬ್ ಮರೀನ್‌ನಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯು ಸಂಗ್ರಹಿಸಿದ್ದಂತಹ
ಸಂಪತ್ತನ್ನು ತೆಗೆದುಕೊಂಡು ಹೋಗಿದ್ದರೇ ? ಮುಚ್ಚಿಟ್ಟ ಇತಿಹಾಸದ ಮತ್ತೊಂದು ಪುಟ ಅನಾವರಣಗೊಳ್ಳಬೇಕಿದೆ.