ಪ್ರಚಲಿತ
ರಮೇಶ್ ಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ
ಬಸಣ್ಣ ಅಲಿಯಾಸ್ ಬಸವರಾಜ ಬೊಮ್ಮಾಯಿ ಈ ರಾಜ್ಯದ ನೂತನ ಮುಖ್ಯಮಂತ್ರಿ. ಆತ್ಮೀಯರಿಂದ ಹಾಗೂ ಕ್ಷೇತ್ರದ ಜನರಿಂದ ಬಸಣ್ಣ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಬಸವರಾಜ ಬೊಮ್ಮಾಯಿ ಅವರನ್ನು ಅದೃಷ್ಟದ ಮೂಲಕ ಮುಖ್ಯಮಂತ್ರಿ ಸ್ಥಾನ ಅಪ್ಪಿಕೊಂಡಿದೆ.
ತಮ್ಮ ಸರಳತೆಯ ಮೂಲಕ ರೈತ ಹಾಗೂ ಕೆಳವರ್ಗದ ಜನರನ್ನು ತಲುಪುವ ಉದ್ದೇಶದಿಂದ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಕೃಷಿಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಒಂದು ಸಾವಿರ ಕೋಟಿ ರುಪಾಯಿ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಹಾಗೂ ಅಂಗವಿಕಲ ವೇತನ ಯೋಜನೆಗಳ ಒಟ್ಟು ಮೊತ್ತದ ಏರಿಕೆಯ ಮುಖಾಂತರ ಜನಪರ ಸಂದೇಶ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸೋಮಪ್ಪ ರಾಯಪ್ಪ ಬೊಮ್ಮಾಯಿರವರ ಸುಪುತ್ರರಾದ ಬಸವರಾಜ ಬೊಮ್ಮಾಯಿ ರಾಜಕೀಯದ ಹಿನ್ನೆಲೆಗಾಗಿ ತಂದೆಯ ಹೆಸರು ಅನಿವಾರ್ಯವಾದರೂ, ಪ್ರಾರಂಭದ ದಿನಗಳಿಂದಲೂ ರಾಜಕೀಯವಾಗಿ ತಮ್ಮದೇ ಆದ ಪೊಲಿಟಿಕಲ್ ಐಡೆಂಟಿಟಿ ಉಳಿಸಿಕೊಂಡು ರಾಜಕಾರಣದಲ್ಲಿ ತಮ್ಮದೇ ಆದ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಬಂದರು. ಸಮಾಜವಾದಿ ಎಸ್.ಆರ್.ಬೊಮ್ಮಾಯಿರವರು ವೃತ್ತಿಯಲ್ಲಿ ವಕೀಲರಾಗಿದ್ದು, ತಂದೆಯ ಸಾಮಾಜಿಕ ಚಿಂತನೆಗಳು ಹಾಗೂ ಜನಪರ ನಿಲುವುಗಳು ಬಸವರಾಜ ಬೊಮ್ಮಾಯಿರವರಲ್ಲಿ ನಾವು ಕಾಣಬಹುದು.
ಲೋಕನಾಯಕ ಜಯಪ್ರಕಾಶ ನಾರಾಯಣರ ಚಿಂತನೆಗಳಿಗೆ ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಆಕರ್ಷಿತರಾದ ಬಸವರಾಜ ಬೊಮ್ಮಾಯಿರವರು, ಸ್ವಾಭಾವಿಕವಾಗಿ ಪ್ರಾರಂಭದ ದಿನಗಳಲ್ಲಿ ಜನತಾ ಪರಿವಾರದ ಮೂಲಕ ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಂಡರು. ಸಂಯುಕ್ತ ಜನತಾದಳದ ಕರ್ನಾಟಕ ಶಾಖೆಯ ಪದಾಧಿಕಾರಿ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದ ಬಸವರಾಜ ಬೊಮ್ಮಾಯಿರವರು, ಜನತಾ ಪರಿವಾರ ದಲ್ಲಿ ಇದ್ದಷ್ಟೂ ದಿನ ಸೈದ್ಧಾಂತಿಕವಾಗಿ ಭಾರತೀಯ ಜನತಾ ಪಕ್ಷವನ್ನು ಪ್ರಬಲವಾಗಿ ವಿರೋಧ ಮಾಡುತ್ತಿದ್ದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೊಬ್ಬ ಹಳೆಯ ಜನತಾ ಪರಿವಾರದ ನಾಯಕರಾದ ಸಿ.ಎಂ.ಉದಾಸಿರವರ ಸಲಹೆ ಮತ್ತು ಒತ್ತಾಯದ ಕಾರಣಕ್ಕೆ ಭಾರತೀಯ ಜನತಾ ಪಕ್ಷವನ್ನು ಅಪ್ಪಿಕೊಂಡರು. ಸೌಜನ್ಯತೆ ಮತ್ತು ಹೊಂದಾಣಿಕೆಯ ಗುಣಗಳು ಬಸವರಾಜ ಬೊಮ್ಮಾಯಿರವರು ತಮ್ಮ ಶಿಗ್ಗಾವಿ ಕ್ಷೇತ್ರದಲ್ಲಿ, ಭಾರತೀಯ ಜನತಾ ಪಕ್ಷದಲ್ಲಿ ಮತ್ತು ಪಕ್ಷ ರಾಜಕಾರಣ ಮೀರಿ ರಾಜಕೀಯ ಪಡಸಾಲೆಯಲ್ಲಿ ರಾಜಕೀಯ ಉನ್ನತಿ ಸಾಧಿಸಲು ಅಡಿಪಾಯವಾಯಿತು. ರಾಜಕೀಯ ವಿಷಯವಿರಲಿ ಆಡಳಿತಾತ್ಮಕ ವಿಷಯವಿರಲಿ, ಭಿನ್ನಾಭಿಪ್ರಾಯ ತಲೆ ದೋರಿದಾಗ ಮಧ್ಯ ಪ್ರವೇಶ ಮಾಡಿ ಅದನ್ನು ಮಾತುಕತೆಯ ಮೂಲಕ ಶಮನ ಮಾಡುವ ಕಲೆಗಾರಿಕೆಯನ್ನು ಇವರು ಅಳವಡಿಸಿಕೊಂಡಿದ್ದಾರೆ.
ಇದೇ ಕಾರಣಕ್ಕಾಗಿ ಯಡಿಯೂರಪ್ಪ ಸರಕಾರದ ಟ್ರಬಲ್ ಶೂಟರ್ ಆಗಿ ಬಹಳಷ್ಟು ಸಂದಂರ್ಭಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಒಮ್ಮೆ ಕಾನೂನು ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿರವರು ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ಕನಕವೃತ್ತ ನಿರ್ಮಾಣದ ಸಂಬಂಧ ಗೊಂದಲ ಮಾಡಿಕೊಂಡು ಆ ಸಮುದಾಯದ ಕೋಪಕ್ಕೆ ತುತ್ತಾಗಿ ಮುಖ್ಯಮಂತ್ರಿಗಳೇ ಕ್ಷಮೆ ಕೇಳುವಂತಾಯಿತು. ವಿಷಯದ ವಿಷಮತೆ ಅರಿತ ಬಸವರಾಜ ಬೊಮ್ಮಾಯಿಯವರು ಕಾಗಿನೆಲೆ ಶ್ರೀಗಳ ಜತೆ ಮಾಧುಸ್ವಾಮಿರವರ ಸಂಧಾನ ಮಾಡಿಸಿ ಸಮುದಾಯದ ಸಿಟ್ಟನ್ನು ತಣಿಸಿದರು.
ಇಷ್ಟೂ ದಿನ ಸಂಧಾನ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದ ಬಸವರಾಜ ಬೊಮ್ಮಾಯಿ ಅವರು ಅವರೇ ಮುಖ್ಯಮಂತ್ರಿ ಆಗುವುದರ ಮೂಲಕ ಪೈಲಟ್ ಸ್ಥಾನದಲ್ಲಿ ಬಂದು ಕೂತಿದ್ದಾರೆ. ಇಡೀ ರಾಜ್ಯದ ನಿರ್ವಹಣೆ ಅವರ ತೆಕ್ಕೆಗೆ ಬಂದಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡರಲ್ಲೂ ಸಾಕಷ್ಟು ಮಿತ್ರರನ್ನು ಹೊಂದಿರುವ ಹೊಸ ಮುಖ್ಯಮಂತ್ರಿಗಳಿಗೆ, ಮೇಲ್ನೋಟಕ್ಕೆ ಸುಗಮ ನಡೆ ಕಂಡರೂ ಬರುವ ದಿನಗಳು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಕಠಿಣವಾಗಲಿದೆ. ಇರುವ ಅಲ್ಪ ಸಮಯದಲ್ಲಿ ಸ್ವಪಕ್ಷದಲ್ಲಿರುವ ಗುಂಪುಗಾರಿಕೆ, ಪ್ರತಿ ಪಕ್ಷದ ನಡೆ, ಆಡಳಿತ ಯಂತ್ರದ ನಿಧಾನಗತಿ, ಸಂಪನ್ಮೂಲ ಕೊರತೆ, ಕೋವಿಡ್ ಪರಿಸ್ಥಿತಿಯ
ನಕಾರಾತ್ಮಕ ಪ್ರಭಾವ, ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಸಭೆಯ ಉಪಚುನಾವಣೆ ಇತ್ಯಾದಿಗಳನ್ನು ಸಮರ್ಥವಾಗಿ ಎದುರಿಸುವ ಅನಿವಾರ್ಯತೆ
ಮುಖ್ಯಮಂತ್ರಿಗಳ ಮುಂದೆ ಇರುತ್ತದೆ.
ನೂತನ ಮುಖ್ಯಮಂತ್ರಿಗಳಿಗೆ ಪ್ರತಿ ಪಕ್ಷಗಳನ್ನು ಎದುರಿಸುವುದಕ್ಕಿಂತಲೂ ತನ್ನದೇ ಪಕ್ಷದ ಆಂತರಿಕ ಗುಂಪುಗಾರಿಕೆಯನ್ನು ಎದುರಿಸುವುದು ಯಕ್ಷ ಪ್ರಶ್ನೆ ಆಗಿದೆ.
ಭಾರತೀಯ ಜನತಾಪಕ್ಷದ ಶಾಸಕಾಂಗ ಪಕ್ಷ ಅವಿರೋಧವಾಗಿ ಬಸವರಾಜ ಬೊಮ್ಮಾಯಿರವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರೂ, ಯಡಿಯೂರಪ್ಪ ನವರ ವಿರೋಧಿ ಬಣದ ಅನಿಸಿಕೆ ಮತ್ತು ಅಭಿಪ್ರಾಯಗಳು (ಬಾಡಿ ಲಾಂಗ್ವೇಜ್) ಅಷ್ಟು ಮುಕ್ತವಾಗಿ ಇರಲಿಲ್ಲ. ನೂತನ ಮುಖ್ಯಮಂತ್ರಿಗಳು ಯಡಿಯೂರಪ್ಪರವರ ಸೂಚನೆಯ ಅಡಿಯಲ್ಲಿ ಕೆಲಸ ಮಾಡುವುದಿಲ್ಲ ಎಂಬ ಭಾವನೆ ಒಂದು ವರ್ಗಕ್ಕೆ ಇದೆ.
ಒಂದು ವೇಳೆ ನೂತನ ಮುಖ್ಯಮಂತ್ರಿಗಳು ಯಡಿಯೂರಪ್ಪರವರ ಅಥವಾ ಅವರ ಕುಟುಂಬದ ಸೂಚನೆಗಳನ್ನು ಪಾಲಿಸಿದರೆ ಈ ವರ್ಗ ತಮ್ಮ ಅಸಹಕಾರ ಹಾಗೂ ಟೀಕೆಗಳನ್ನು ಮುಂದುವರೆಸುವ ಸಾದ್ಯತೆ ಇದೆ. ಅದೇ ರೀತಿ ತಮ್ಮ ಸೂಚನೆಗಳನ್ನು ಪಾಲಿಸದೇ ಹೋದರೆ ಯಡಿಯೂರಪ್ಪರವರು ಅಸಹಕಾರ ಮತ್ತು ಸಿಟ್ಟಿಗೆ ಈಡಾಗಬೇಕಾಗುತ್ತದೆ. ಇದನ್ನು ಈ ಹಿಂದೆ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾದ ಸಂದಂರ್ಭದಲ್ಲಿ ನಾವು ನೋಡಿರು ತ್ತೇವೆ. ಇದರ ಜತೆಗೆ ಬಿಜೆಪಿ ದೆಹಲಿ ಹೈಕಮಾಂಡ್ ಅನ್ನು ಸುಪ್ರೀತಿಗೊಳಿಸುವ ಜವಾಬ್ದಾರಿಯು ಇವರ ಮೇಲಿದೆ.
ಒಂದರ ನಿರ್ಲಕ್ಷ್ಯ ಅಥವಾ ಆದ್ಯತೆ ಮತ್ತೊಂದರ ಸಮಸ್ಯೆಯಾಗಿ ಕಾಡುವ ಸಂದರ್ಭಗಳೇ ಹೆಚ್ಚಾಗುವ ಸಾದ್ಯತೆ ಇದೆ. ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಬಂದರೆ, ರಾಜ್ಯದಲ್ಲಿ ಸಂಪನ್ಮೂಲಗಳ ಕೊರತೆಯಿದೆ. ಯಡಿಯೂರಪ್ಪರವರು ಮಾಡಿರುವ ಘೋಷಣೆಗಳಿಗೆ ಹಣದ ಕೊರತೆಯಿದೆ. ನಿಯಮ ಮೀರಿ ಯೋಜನೆ ಗಳಿಗೆ ಅನುಮೋದನೆ ನೀಡಲಾಗಿದೆ. ಕಳೆದ ಎರಡು ವರ್ಷದಲ್ಲಿ ಸುಮಾರು 2.4 ಲಕ್ಷ ಕೋಟಿ ರುಪಾಯಿಗಳ ಸಾಲ ಮಾಡಲಾಗಿದೆ. ಈ ಸಾಲ ರಾಜ್ಯದ
ಆರ್ಥಿಕ ಕೊರತೆ ಕಾಯಿದೆಯ ಉಲ್ಲಂಘನೆ ಆಗಿದ್ದು, ನಿಗದಿತ ಬಾಬುಗಳಲ್ಲಿ ರೆವೆನ್ಯೂ ಕೊರತೆ ಆಗಿದೆ.
ಕೇಂದ್ರದಿಂದ ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಜಿಎಸ್‌ಟಿ ಸಂಪನ್ಮೂಲ ದೊರೆಯುತ್ತಿಲ್ಲ. ಆಡಳಿತ ವೆಚ್ಚ ಹೆಚ್ಚಾಗಿದ್ದು, ಅಭಿವೃದ್ದಿ ಕಾರ್ಯಗಳಿಗೆ ಸಂಪನ್ಮೂಲ ದೊರೆಯುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಕಠಿಣವಾಗಿದ್ದು, ಹೊಸ ಮುಖ್ಯಮಂತ್ರಿಗಳಿಗೆ ಇದರ ನಿರ್ವಹಣೆ ಒಂದು ಸವಾಲಾಗಿದೆ. ಕೋವಿಡ್ 1 ಮತ್ತು 2ನೇ ಅಲೆಯ ಕಾರಣಕ್ಕಾಗಿ ಲಕ್ಷಾಂತರ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೋವಿಡ್ ಕಾರಣಕ್ಕಾಗಿ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ, ಅನಾಥರಾದ ಮಕ್ಕಳಿಗೆ ರಾಜ್ಯ ಸರಕಾರ ಆಸರೆ ಆಗಬೇಕಾಗಿದೆ.
ಕೋವಿಡ್ ಪರಿಸ್ಥಿತಿಯ ನಕಾರಾತ್ಮಕ ಬೆಳವಣಿಗೆ ರಾಜ್ಯದ ಆರ್ಥಿಕತೆಗೆ ಹೊಡೆತ ಕೊಡುವುದರ ಜತೆಗೆ, ರಾಜ್ಯದಲ್ಲಿ ಉಂಟಾದ ಪ್ರವಾಹ ಮತ್ತು ಬರ ಪರಿಸ್ಥಿತಿ ಆರ್ಥಿಕ ಅವನತಿಯ ಜತೆಗೆ ಸಂತ್ರಸ್ಥರಿಗೆ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ಸರಕಾರ ಮಾಡಬೇಕಾಗಿದೆ. ಹೊಸ ಮುಖ್ಯಮಂತ್ರಿಗಳು ರಾಜ್ಯದ ಸಂಪನ್ಮೂಲ ಕ್ರೋಡೀಕರಣದ ಜತೆಗೆ ಕೇಂದ್ರದ ಬಾಗಿಲು ತಟ್ಟುವ ಅನಿವಾರ್ಯತೆ ಇದೆ.
ಇವುಗಳ ಜತೆಗೆ ಹೊಸ ಮುಖ್ಯಮಂತ್ರಿಗಳು ತಮ್ಮ ಸಾರರ್ಥ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭಾ ಉಪಚುನಾವಣೆ, ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಸಬೇಕಿದೆ. ಎರಡೂ ವಿಧಾನಸಭಾ ಉಪಚುನಾವಣೆ ವೀರಶೈವ ಮತದಾರರ ಪ್ರಾಬಲ್ಯದ ಕ್ಷೇತ್ರವಾಗಿರುವುದರಿಂದ ಬಸವರಾಜ ಬೊಮ್ಮಯಿರವರು ಸಮುದಾಯದಲ್ಲಿ ತಮ್ಮ ನಾಯಕತ್ವವನ್ನು ಮುನ್ನೆಲೆಗೆ ತರುವುದಕ್ಕೆ ಅವಕಾಶವಾಗಲಿದೆ. ಅದೇ ರೀತಿ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರಾಬಲ್ಯಗಳಿಸಿದರೆ ಇವರ ನಾಯಕತ್ವಕ್ಕೆ ಮುದ್ರೆ ಬೀಳಲಿದೆ.
ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಮ್ಮಿಶ್ರ ಸರಕಾರದ ಆಡಳಿತದ ಸಂದಂರ್ಭದಲ್ಲಿ ಆಡಳಿತಾತ್ಮಕ ಹಾಗೂ ರಾಜಕೀಯ ಒತ್ತಡಗಳಿಗಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿರವರು ಒಂದು ಕಾರ್ಯಕ್ರಮದಲ್ಲಿ ತಾವು ಸಾಂದರ್ಭಿಕ ಶಿಶು ಎಂದು ಅವಲತ್ತುಕೊಂಡಿದ್ದರು. ಅವರ ಹೇಳಿಕೆ ಯನ್ನು ಬೇರೆ ಬೇರೆ ರೀತಿ ಅಂದಿನ ರಾಜಕೀಯ ವರ್ತಮಾನಗಳಿಗೆ ಅನುಗುಣವಾಗಿ ವಿಮರ್ಶೆ ಮಾಡಲಾಗಿತ್ತು. ಬಿ.ಎಸ್.ಯಡಿಯೂರಪ್ಪರವರ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಖಾತರಿ ಆಗುತ್ತಿದ್ದಂತೆ ಭಾರತೀಯ ಜನತಾ ಪಕ್ಷದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಜಾತಿ ಮತ್ತು ಪಕ್ಷ ಬದ್ಧತೆ ಹೆಸರಿನಲ್ಲಿ ಮುಖ್ಯ ಮಂತ್ರಿ ಆಗಲು ಅನೇಕ ರೀತಿಯ ಕಸರತ್ತುಗಳನ್ನು ಮಾಡಿದರು.
ಆದರೆ ಎಲ್ಲರ ನಿರೀಕ್ಷೆ ಮೀರಿ ಬಸವರಾಜ ಬೊಮ್ಮಾಯಿರವರು ನೂತನ ಮುಖ್ಯಮಂತ್ರಿಯಾಗುವ ಮೂಲಕ ಮತ್ತೊಬ್ಬ ಸಾಂದರ್ಭಿಕ ಶಿಶುವಾಗಿ ಹೊರ ಹೊಮ್ಮಿ ದ್ದಾರೆ. ತಮ್ಮ ಕಾರ್ಯಚಟುವಟಿಕೆ ಮೂಲಕ ಮತ್ತು ಭಾರತೀಯ ಜನತಾ ಪಕ್ಷದ ಇತರ ನಾಯಕರ ಸಹಕಾರದ ಮೂಲಕ ಮಾತ್ರ ಬಸವರಾಜ ಬೊಮ್ಮಾಯಿ ರವರು ತಾವು ಸಹಜ ಶಿಶು ಎಂಬುದನ್ನು ರುಜುವಾತು ಮಾಡಲು ಸಾಧ್ಯ. ನೂತನ ಮುಖ್ಯಮಂತ್ರಿಗಳು ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸಿ, ಪರಿಪಕ್ವ ಆಡಳಿತದ ಮುಖಾಂತರ ಮತ್ತು ತಮ್ಮ ಸಜ್ಜನಿಕೆ ಹಾಗೂ ಸರಳತೆಯ ಮೂಲಕ ಕರ್ನಾಟಕದಲ್ಲಿ ಅಭಿವೃದ್ದಿಯ ಗೆರೆಗಳನ್ನು ಮೂಡಿಸುವರೆಂಬ ನಂಬಿಕೆ ಜನ ಸಾಮಾನ್ಯರದ್ದು. ಅವರ ಆಡಳಿತವಷ್ಟೇ ಇದಕ್ಕೆ ಉತ್ತರ ನೀಡಲಿದೆ.