Friday, 20th September 2024

ಯಡಿಯೂರಪ್ಪ ಬಿಟ್ಟ ಪ್ರಶ್ನೆಗಳಿಗೆ, ಬೊಮ್ಮಾಯಿ ಉತ್ತರವಾಗಿದ್ದಾರೆ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಇತ್ತೀಚಿನ ದಿನಗಳಲ್ಲಿ ಬಿಜೆಪಿ ರಾಷ್ಟ್ರೀಯ ವರಿಷ್ಠರು ಮತ್ತು ಸಂಘ ಪರಿವಾರದ ಜ್ಯೇಷ್ಠರನ್ನು ಅತಿಯಾಗಿ ಕಾಡಿದ ಪ್ರಶ್ನೆಯೆಂದರೆ ಯಡಿಯೂರಪ್ಪನವರ ನಂತರ
ಯಾರು? ಎಂಬುದು. ಈ ಪ್ರಶ್ನೆಗೆ ಉತ್ತರ ಸಿಗುವ ತನಕ, ಯಡಿಯೂರಪ್ಪನವರನ್ನು ಅಧಿಕಾರದಲ್ಲಿ ಮುಂದುವರಿಯುವಂತೆ ಹೇಳುವುದು ಅನಿವಾರ್ಯವಾಗಿತ್ತು. ಉತ್ತರಾಧಿಕಾರಿ ಸಿಗದೇ, ಸದ್ಯ ಅಧಿಕಾರದಲ್ಲಿರುವವರನ್ನು ಇಳಿಸುವುದಾದರೂ ಹೇಗೆ? ಕರ್ನಾಟಕ ಬಿಜೆಪಿಯನ್ನು ನಖಶಿಖಾಂತ ಆವರಿಸಿದವರು
ಯಡಿಯೂರಪ್ಪನವರು.

ಬಿಜೆಪಿಯ ಪಾಲಿಗೆ ಅವರು ಇಡೀ ಕರ್ನಾಟಕವನ್ನು ಆವರಿಸಿದ, ವ್ಯಾಪಿಸಿದ ಆಲದ ಮರ. ಆ ಮರದ ಬುಡದಲ್ಲಿ ಬೇರೆ ಯಾವ ಸಸ್ಯಗಳೂ ಬೆಳೆಯುವುದಿಲ್ಲ ಎಂಬಂತೆ, ಅವರಿಗೆ ಸರಿಸಾಟಿಯಿಲ್ಲದ ನಾಯಕರು ಬೆಳೆಯಲೇ ಇಲ್ಲ. ಅದರಲ್ಲೂ ಅನಂತಕುಮಾರ ಕಾಲವಾದ ನಂತರ, ಯಡಿಯೂರಪ್ಪನವರಿಗೆ ಪ್ರತಿಸ್ಪರ್ಧಿ ಗಳೇ ಇಲ್ಲ ಎನ್ನುವಂತಾ ಯಿತು. ಅವರ ಸೈಜಿನ ಚಪ್ಪಲಿ, ಉಳಿದವರೆಲ್ಲರಿಗೂ ದೊಡ್ಡದೇ ಆಯಿತು.

ಪ್ರತಿ ಸಲ ಯಡಿಯೂರಪ್ಪನವರನ್ನು ಬದಲಿಸಬೇಕು ಎಂಬ ಪ್ರಸ್ತಾಪ ಎದುರಾದಾಗಲೆಲ್ಲ, ಅವರನ್ನು ಬಿಟ್ಟರೆ ಯಾರಿದ್ದಾರೆ ಎಂಬ ಪ್ರಶ್ನೆ ಬೃಹದಾಕಾರವಾಗಿ ರೂಪ ತಾಳಿ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಯಡಿಯೂರಪ್ಪ ನವರು ಅಧಿಕಾರದಲ್ಲಿ ಮುಂದುವರಿಯುವಂತಾಗುತ್ತಿತ್ತು. ಯಡಿಯೂರಪ್ಪನವರು ಏರಿದ ಎತ್ತರವನ್ನು ಪಕ್ಷದಲ್ಲಿ ಬೇರೆ ಯಾರೂ ಏರಿಲ್ಲದ್ದರಿಂದ, ಅವರಿಗೆ ಉತ್ತರಾಧಿಕಾರಿಯೇ ಇಲ್ಲದಂತಾಗಿ, ಅವರ ಮಾರ್ಗ ಸುಲಲಿತವಾಗು ವಂತಾಗಿತ್ತು. ಆದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕಾದ ಅನಿವಾರ್ಯ ಬಿಜೆಪಿಗೆ ಎದುರಾಗಿತ್ತು.

ಈಗ ಬಸವರಾಜ ಬೊಮ್ಮಾಯಿ ಆ ಪ್ರಶ್ನೆಗೆ ಉತ್ತರವಾಗಿದ್ದಾರೆ! ಪ್ರಾಯಶಃ ಬೊಮ್ಮಾಯಿ ಅವರಿಗಿಂತ ಬೇರೆ ಉತ್ತಮ ಆಯ್ಕೆ ಇರಲಿಲ್ಲವೇನೋ. ಬೇರೆ ಯಾರೇ ಆಗಿದ್ದರೂ, ನಾಯಕತ್ವ ಪ್ರಶ್ನೆ ಇಷ್ಟು ಸರಳೀತವಾಗಿ ಬಗೆಹರಿಯುತ್ತಿರಲಿಲ್ಲ. ಅಷ್ಟರಮಟ್ಟಿಗೆ ಬೊಮ್ಮಾಯಿ ಆಯ್ಕೆ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ. ರಾಜಕಾರಣ ದಲ್ಲಿ ಯಾವುದೇ ಹುದ್ದೆಗೆ ವ್ಯಕ್ತಿಯನ್ನು ನೇಮಿಸುವಾಗ, ಆಯ್ಕೆ ಮಾಡುವಾಗ, ಬೇಕೋ – ಬೇಡವೋ, ಜಾತಿಯನ್ನು ಪ್ರಧಾನವಾಗಿ ಪರಿಗಣಿಸುವುದು ಸಾಮಾನ್ಯ ವಾಗಿ ಬಿಟ್ಟಿದೆ. ಈ ಅಂಶಕ್ಕೆ ಮತ್ತು ಯಡಿಯೂರಪ್ಪನವರು ಹಾಕಿದ ಕಣ್ಣೀರಿಗೆ ಬೊಮ್ಮಾಯಿ ಆಯ್ಕೆ ಸೂಕ್ತ ಉತ್ತರವಾಗಿದೆ.

ಮೂಲತಃ ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ, ಸನ್ನಿವೇಶದಲ್ಲಿ ಎಲ್ಲಾ ದೃಷ್ಟಿಯಿಂದಲೂ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹ ವ್ಯಕ್ತಿಯೇ. ಅವರಿಗೆ ಜನಪ್ರಿಯ mandate ಇಲ್ಲದಿರಬಹುದು. ಆದರೆ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಚಾಕಚಕ್ಯತೆಯನ್ನು ಅವರು ಹೊಂದಿದ್ದಾರೆ. ಬೊಮ್ಮಾಯಿ ಅವರಿಗೆ ಅಧಿಕಾರ ಹೊಸತೇ ನಲ್ಲ. ಅವರು ಬಾಲ್ಯದಿಂದಲೂ ಅಧಿಕಾರ ಕೇಂದ್ರದ ಪ್ರಭಾವಲಯದಲ್ಲಿಯೇ ಬೆಳೆದವರು. ಅದನ್ನು ಹತ್ತಿರದಿಂದ ಅದನ್ನು ನೋಡಿದವರು. ಅವರ ತಂದೆಯವರಾದ ಎಸ್.ಆರ್.ಬೊಮ್ಮಾಯಿ ಮಂತ್ರಿಯಾದವರು, ಮುಖ್ಯಮಂತ್ರಿಯಾದವರು, ಕೇಂದ್ರದಲ್ಲಿ ಮಂತ್ರಿಯಾದವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾದವರು.

ನಾಲ್ಕು  ದಶಕಗಳ ಕಾಲ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರಾಜಕಾರಣದ ಮುಂಚೂಣಿಯಲ್ಲಿದ್ದವರು. ಹೀಗಾಗಿ ಇದರ ದತ್ತಫಲ ಸಹಜವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಸಿಕ್ಕಿದೆ. ಜನರನ್ನು, ಜನರ ಸಮಸ್ಯೆಗಳನ್ನು, ಸಮಾಜವನ್ನು, ಸಮಾಜಕಾರಣವನ್ನು ರಾಜಕಾರಣವನ್ನು ತೀರಾ ಹತ್ತಿರದಿಂದ ನೋಡುವ ಸುಯೋಗ ಅವರಿಗೆ ಆರಂಭದ ದಿನಗಳಿಂದಲೂ ದೊರೆತಿದೆ. ಇದರ ಜತೆಗೆ ಅವರೂ ಶಾಸಕರಾಗಿ, ಮಂತ್ರಿಯಾಗಿ ಅಧಿಕಾರವನ್ನು ಹತ್ತಿರದಿಂದ ನೋಡಿದವರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಅವರಿಗೆ ಆಪ್ತರಾಗಿ, ಅಧಿಕಾರವನ್ನು ಸನಿಹದಿಂದ ನೋಡಿದವರು ಮತ್ತು ಅನುಭವಿಸಿದವರು. ಇಷ್ಟಾದರೂ ಕೈ-ಬಾಯಿ ಕೆಡಿಸಿಕೊಂಡವರಲ್ಲ. ವಿವಾದ ವನ್ನು ಮೈಮೇಲೆ ಎಳೆದುಕೊಂಡವರಲ್ಲ. ಯಾವುದೇ ಕಳಂಕವನ್ನು ಮೆತ್ತಿಕೊಂಡವರಲ್ಲ.

ಜನತಾ ಪರಿವಾರದಿಂದ ಬಂದ ಬೊಮ್ಮಾಯಿ ಅವರಿಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿzರೆ. ಅವರೆಲ್ಲರ ಜತೆ ಉತ್ತಮ ಸಂಬಂಧವನ್ನು ಅವರು ಹೊಂದಿದ್ದಾರೆ. ಹಾಗೆಂದು ಅವರ ಬೇರು ಬಿಜೆಪಿಯಲ್ಲಿ ತಳವೂರಿದೆ. ಇದರ ಜತೆಗೆ ರಾಜಕಾರಣಕ್ಕೆ ಬೇಕಾಗುವ ಸಮಚಿತ್ತ, ಸಮತೋಲನ ಭಾವ ಅಥವಾ ಟೆಂಪರಮೆಂಟ್ ಇದೆ. ಅವರದು ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವ, ಎಲ್ಲರನ್ನೂ ಒಳಗೊಳ್ಳುವ ವ್ಯಕ್ತಿತ್ವ. ಹೀಗಾಗಿ ಬೊಮ್ಮಾಯಿ ಅವರಿಂದ ಒಂದಷ್ಟು ಉತ್ತಮ ಸಂಗತಿ ಗಳನ್ನು ನಿರೀಕ್ಷಿಸಬಹುದು.

Punಡಿತರ ನಡುವೆ..
ಹಿಂದಿನ ತಿಂಗಳು ’ವಿಶ್ವ ಅಪ್ಪಂದಿರ ದಿನ’ ಆಯ್ತಲ್ಲ, ಆಗ ನಮ್ಮ ಪತ್ರಿಕೆ ಅಂಕಣಕಾರ ಹರಿ ’ವಿಶ್ವವಾಣಿ ಅಂಕಣಕಾರರ ವಾಟ್ಸಾಪ್ ಗ್ರುಪ್’ನಲ್ಲಿ ಒಂದು ಮೆಸೇಜ್ ಹಾಕಿದ್ದರು. ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಬೆಸ್ಟ್ Punಡಿತರಲ್ಲಿ ಹರಿ ಕೂಡ ಒಬ್ಬರು. ಪತ್ರಕರ್ತ ವೈಎನ್‌ಕೆ ಅವರೇನಾದರೂ ಇದ್ದಿದ್ದರೆ, ಹರಿ ಅವರಿಗೆ ತಮ್ಮ ಆಸ್ಥಾನದಲ್ಲಿ ಒಂದು ಆಸನ ಮೀಸಲಿಟ್ಟಿರುತ್ತಿದ್ದರು.

ಹರಿ ಅವರ ಅಣ್ಣ ಅಪಾರ ಅರ್ಥಾತ್ ರಘು ಕೂಡ ಒಳ್ಳೆಯ Punಡಿತರೇ. ಇಬ್ಬರೂ ಎಂಥ ಸನ್ನಿವೇಶದಲ್ಲೂ ಬೆರಗು ಮೂಡಿಸುವ ಪನ್ ಮಾಡಬಲ್ಲರು. ’ವಿಶ್ವವಾಣಿ’ ಯಲ್ಲಿ ಹರಿ, ಪ್ರತಿ ಭಾನುವಾರ ಬರೆಯುವ ಅಂಕಣ ನನಗೆ ಇಷ್ಟ. ಈ ವಿಷಯದಲ್ಲಿ ನನಗೆ ಸ್ನೇಹಿತರಾದ ನವೀನ ಸಾಗರ ಕೂಡ ಇಷ್ಟವಾಗುತ್ತಾರೆ. ಅವರೂ ಕೂಡ ಅಷ್ಟೇ ಸಲೀಸಾಗಿ ಪನ್ ಮಾಡಬಲ್ಲರು. ಮನೆಯ ಮೇಲಿನ ಟೆರೆಸ್ ಮೇಲೆ ನಡೆದಾಡುವ ತಾಯಂದಿರನ್ನು ಮದರ್ ತೆರೆಸಾ ಎನ್ನಬಹುದೇ ಎಂದು ಅವರು ಪನ್ ಮಾಡಿದ್ದರು.

ಸರಿ, ’ವಿಶ್ವ ಅಪ್ಪಂದಿರ ದಿನ’ದಂದು ಹರಿ ಮೆಸೇಜ್ ಮಾಡಿದ್ದರು – ‘ಮಗನಿಗೆ ಶೂ ತಗೋಬೇಕು ಅಂತ ಆಸೆಯಾಯ್ತು. ಆದರೆ ಅಪ್ಪ ಕೊಡಿಸುತ್ತಾನೋ ಇಲ್ಲವೋ ಅಂತ ಅನುಮಾನ. ನೋಡೋಣ, ಕೊಡ್ಸಿದ್ರೆ, ಕೊಡಿಸ್ಲಿ, ಇಲ್ಲಾ ಅಂದ್ರೆ ಹವಾಯಿ ಚಪ್ಲಿನೇ ಕೇಳೋದು ಅಂದುಕೊಂಡು ಅಪ್ಪನನ್ನು ಕೇಳಿದ – ‘ಅಪ್ಪ ಶೂ ಕೊಡಿಸ್ತೀಯಾ, ಇಲ್ಲಾ ಚಪ್ಲಿ ತಗಳ್ಳಲಾ?’ ಅದಕ್ಕೆ ನಮ್ಮ ಮತ್ತೊಬ್ಬ ಅಂಕಣಕಾರ ಶ್ರೀವತ್ಸ ಜೋಶಿ ಪ್ರತಿಕ್ರಿಯಿಸಿದ್ದರು – ‘ಅದು ಮಗ ಅಪ್ಪನತ್ತ ಬಿಟ್ಟ ಪಾ‘ಶೂ’ ಪತಾಸ ಎನ್ನೋಣವೇ?’ ಅಣಬೆ ಕುರಿತು ‘ತಪ್ಪು-ಒಪ್ಪು’ ಕೆಲವು ವರ್ಷಗಳ ಹಿಂದೆ, ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆಯ ‘Corrections and Clarifications’ (ತಪ್ಪು-ಒಪ್ಪು) ಅಂಕಣದಲ್ಲಿ ಹೀಗೊಂದು ಸ್ಪಷ್ಟನೆ ಪ್ರಕಟವಾಗಿತ್ತು – We misspelled the word misspelled twice, as mispelled, in the corrections and clarifications column on Sept…. page30.

ಈ ‘ತಪ್ಪು-ಒಪ್ಪು’ ಅಂಕಣವನ್ನು ನಿಭಾಯಿಸುವ ವಿಭಾಗದ ಮುಖ್ಯಸ್ಥರದು ವಿಚಿತ್ರ ಸ್ಥಿತಿ. ಆತ ವರದಿಗಾರ ಮತ್ತು ಓದುಗರ ಮಧ್ಯೆ ಸೇತುವೆಯಾಗಿ ಕೆಲಸ ಮಾಡಬೇಕಾಗುತ್ತದೆ. ಪತ್ರಿಕೆಯಲ್ಲಿ ತಪ್ಪಾದಾಗ, ಅದು ಯಾರಿಂದ ಆಗಿದೆ ಎಂಬುದನ್ನು ಪತ್ತೆ ಹಚ್ಚಿ, ಅವರಿಂದ ಸ್ಪಷ್ಟನೆ, ವಿವರಗಳನ್ನು ಪಡೆದು, ಓದುಗರಿಗೆ
ಸರಿಯಾದ ಮಾಹಿತಿ ನೀಡಬೇಕಾಗುತ್ತದೆ. ತಪ್ಪು ಮಾಡಿದ ವರದಿಗಾರ ಅಥವಾ ಡೆಸ್ಕ್ ಪತ್ರಕರ್ತ ಜಗಳಕ್ಕೆ ನಿಲ್ಲುವ ಸಂದರ್ಭವಿರುತ್ತದೆ.

ಇಲ್ಲವೇ ಆತ ಸಹಕರಿಸದೇ ಇರಬಹುದು. ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸಬಹುದು. ಆಗ ತಪ್ಪು ಹೇಗೆ ಆಗಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯ ವಾಗದೇ ಹೋಗಬಹುದು. ಇದರಿಂದ ಓದುಗರಿಗೆ ಪಾರದರ್ಶಕತೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ಒಮ್ಮೆ ಪತ್ರಿಕೆಯೊಂದು, ಸೇವಿಸಬಹುದಾದ ಅಣಬೆಗಳ (edible mushroom) ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿತ್ತು. ಅದರ ಜತೆ ಅಣಬೆಯ ಫೋಟೋವನ್ನು ಪ್ರಕಟಿಸಿತ್ತು.

ಇದನ್ನು ಗಮನಿಸಿದ ಓದುಗರೊಬ್ಬರು, ‘ತಿನ್ನಬಹುದಾದ ಅಣಬೆಗಳ ಬಗ್ಗೆ ಲೇಖನ ಪ್ರಕಟಿಸಿ, ತಿನ್ನಲೇಬಾರದ ಅಣಬೆಯ ಫೋಟೋ ಪ್ರಕಟಿಸಿದ್ದೀರಿ. ನೀವು ಪ್ರಕಟಿಸಿದ ಅಣಬೆಯ ಹೆಸರು amanita muscaria ಅಂತ. ಅದು ಅತ್ಯಂತ ವಿಷಕಾರಿ ಅಣಬೆ. ಅದನ್ನು ಸೇವಿಸಿ ಅನೇಕರು ಸತ್ತಿದ್ದಾರೆ. ನಿಮ್ಮ ಪತ್ರಿಕೆಯ
ಲೇಖನವೇ ಒಂದು, ಪ್ರಕಟಿಸಿದ ಫೋಟೋವೇ ಇನ್ನೊಂದು. ಆ ಫೋಟೋ ಲೇಖನದ ಆಶಯಕ್ಕೆ ವಿರುದ್ಧವಾದುದು. ಇದನ್ನು ಸೇವಿಸಿ ಯಾರಾದರೂ ಸತ್ತರೆ ಅದಕ್ಕೆ ನೀವು ಹೊಣೆ ಹೊರುತ್ತೀರಾ?’ ಎಂದು ಖಾರವಾಗಿ ಪತ್ರ ಬರೆದರು. ಈ ಪತ್ರ ‘ತಪ್ಪು-ಒಪ್ಪು’ ವಿಭಾಗದ ಮುಖ್ಯಸ್ಥರಿಗೆ ಬಂತು. ಅವರು ಆ ಲೇಖನ ಬರೆದ, ತಿದ್ದಿದ ಮತ್ತು ವಿನ್ಯಾಸ ಮಾಡಿದವರನ್ನು ಕರೆಯಿಸಿ ವಿಚಾರಣೆ ನಡೆಸಿದರು.

ಮೂವರಲ್ಲಿ ಯಾರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಒಬ್ಬರು ಮತ್ತೊಬ್ಬರ ಮೇಲೆ ತಪ್ಪು ಹೊರಿಸುತ್ತಿದ್ದರು. ಕೊನೆಗೆ ಫೋಟೋ ಆಯ್ಕೆ ಮಾಡಿದ ವಿನ್ಯಾಸಕಾರನೇ ಈ ಚಿತ್ರವನ್ನು ಆಯ್ಕೆ ಮಾಡಿದ್ದು ಗೊತ್ತಾಯಿತು. ಆದರೆ ಆತ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ‘ನಾನು ಅಣಬೆಯ ಕುರಿತಾದ ಲೇಖನವೆಂದು ಭಾವಿಸಿ ಅಣಬೆಯ ಚಿತ್ರ ಹಾಕಿದೆ. ಆದರೆ ಅದು ವಿಷಕಾರಿ ಅಣಬೆಯ ಚಿತ್ರ ಎಂಬುದು ಗೊತ್ತಿರಲಿಲ್ಲ. ಅಷ್ಟಕ್ಕೂ ಅಣಬೆಗಳನ್ನು ತಿನ್ನುತ್ತಾರೆಂದೂ, ತಿಂದರೆ ಸಾಯುತ್ತಾರೆಂದೂ ನನಗೆ ಗೊತ್ತಿರಲಿಲ್ಲ’ ಎಂದುಬಿಟ್ಟ.

ನಂತರ ‘ತಪ್ಪು-ಒಪ್ಪು’ ವಿಭಾಗದ ಮುಖ್ಯಸ್ಥ ಸಂಪಾದಕರ ಜತೆ ಸಮಾಲೋಚಿಸಿ, ಓದುಗರಿಗೆ ವಾಸ್ತವ ತಿಳಿಸಿ, ವಿಷಾದ ಪ್ರಕಟಿಸಲು ನಿರ್ಧರಿಸಿದರು. ಪುಣ್ಯವಶಾತ್ ಆ ಲೇಖನ ಓದಿ, ಯಾರೂ ಆ ವಿಷಕಾರಿ ಅಣಬೆಯನ್ನು ಸೇವಿಸಿ ತೊಂದರೆ ಅನುಭವಿಸಲಿಲ್ಲವೆನ್ನಿ.

ಗೀತೆಯ ಮಹತ್ವ !
ಆ ದಿನ ವ್ಯಕ್ತಿತ್ವ ವಿಕಸನ ಗುರು ಹೇಳುವುದನ್ನು ಸಭಿಕರೆಲ್ಲ ಧ್ಯಾನಾಸಕ್ತರಾಗಿ ಕೇಳುತ್ತಿದ್ದರು. ‘ನಾನು ಕಳೆದ ಮೂವತ್ತೈದು ವರ್ಷಗಳಿಂದ ಗೀತಾ ಹೇಳುವುದನ್ನು ಕೇಳುತ್ತಿದ್ದೇನೆ. ಅದರ ಪ್ರಕಾರವೇ ನನ್ನ ಜೀವನವನ್ನು ರೂಪಿಸಿಕೊಂಡಿದ್ದೇನೆ. ಒಂದು ರೀತಿಯಲ್ಲಿ ನಾನು ನನ್ನ ಜೀವನವನ್ನು ಅದಕ್ಕೇ ಅರ್ಪಿಸಿಕೊಂಡಿದ್ದೇನೆ. ಇದರಿಂದ ನನಗೆ ಮಾನಸಿಕ ಶಾಂತಿ, ಸಮಾಧಾನ ಲಭಿಸಿದೆ. ನನ್ನ ಬದುಕಿಗೆ ಒಂದು ವಿಶೇಷ ಅರ್ಥ ಬಂದಿದ್ದರೆ, ಅದಕ್ಕೆ ಗೀತಾ ಕಾರಣ.’ ಎಂದು ವ್ಯಕ್ತಿತ್ವ ವಿಕಸನ ರು ಹೇಳಿದ.

ಸಭಿಕರೆಲ್ಲ ಅವರ ಮಾತಿಗೆ ಅಭಿಮಾನದಿಂದ ತಲೆಬಾಗಿ, ಚಪ್ಪಾಳೆ ತಟ್ಟಿದರು. ಭಗವದ್ಗೀತೆಯಂಥ ಒಂದು ಕೃತಿ ಒಬ್ಬನ ಜೀವನವನ್ನು ಈ ರೀತಿ ಪರಿವರ್ತಿಸ ಬಲ್ಲದು ಎಂಬ ಬಗ್ಗೆ ಅವರೆಲ್ಲರಿಗೂ ಆಶ್ಚರ್ಯವಾಗಿತ್ತು. ಆದರೂ ಅವರಬ್ಬನಿಗೆ ಸಣ್ಣ ಸಂದೇಹ. ಒಂದು ಪುಸ್ತಕ ಹೇಗೆ ಈ ರೀತಿ ಬದಲಾವಣೆ ಮಾಡಬಹುದು ಎಂಬ ಯೋಚನೆ ಆತನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಮನೆಗೆ ಹೋಗಿ ಕಂಪ್ಯೂಟರ್ ಆನ್ ಮಾಡಿ, ವ್ಯಕ್ತಿತ್ವ ವಿಕಸನ ಗುರುವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು
ಗೂಗಲ್ ಮಾಡಿದ. ಆಗ ಗೊತ್ತಾದ ಸಂಗತಿಯೇನೆಂದರೆ, ಆ ವ್ಯಕ್ತಿತ್ವ ವಿಕಸನ ಗುರುವಿನ ಹೆಂಡತಿಯ ಹೆಸರು ಗೀತಾ!

ತಮಾಷೆ ಹೆಡ್‌ಲೈನ್ಸ್
ಹೆಡ್‌ಲೈನ್ ಬರಹ ಒಂದು ಸೃಜನಾತ್ಮಕ ಕಲೆ. ಇಡೀ ಸುದ್ದಿಯನ್ನು ಐದಾರು ಪದಗಳಲ್ಲಿ ಹೇಳುವುದು ಸವಾಲು. ಹೆಡ್‌ಲೈನ್ ಬರಹಗಾರನಿಗೆ ಉದ್ದವಾಗಿ ಬರೆಯಲು ಸ್ಪೇಸ್ (ಜಾಗದ ಸಮಸ್ಯೆ. ಆತನ ಪಾಲಿಗೆ ಇದು ‘ಜಾಗ’ತಿಕ ಸಮಸ್ಯೆಯೇ!) ಅಭಾವ. ಸುದ್ದಿ ಬರೆಯುವ ವರದಿಗಾರನ ಪ್ರಮಾದವನ್ನು ಯಾರೂ ಗಮನಿಸದೇ ಹೋಗಬಹುದು. ಆದರೆ ಹೆಡ್ ಲೈನ್ ಬರೆಯುವವರ ಪ್ರಮಾದ ಹಾಗಲ್ಲ, ಎಲ್ಲರಿಗೂ ಎದ್ದು ಕಾಣುತ್ತದೆ.

ಕೆಲ ತಿಂಗಳ ಹಿಂದೆ ಓದಿದ ನಾಲ್ಕು ತಮಾಷೆ ಹೆಡ್ ಲೈನ್‌ಗಳು:
? Most Earthquake Damage is Caused by Shaking
? Safety Meeting Ends in Accident
? Breathing Oxygen Linked To Staying Alive
? State Population to Double by 2040, Babies to Blame

ನಿಜಲಿಂಗಪ್ಪ ಮತ್ತು ಪತ್ನಿ ಅಗಲಿಕೆ
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರ ಪತ್ನಿ ತೀರಿಕೊಂಡಿದ್ದರಂತೆ. ಗಣ್ಯರು ಬಂದು ಸಂತಾಪ ಸೂಚಿಸಿ ಹೋಗುತ್ತಿದ್ದರಂತೆ. ನಿಜಲಿಂಗಪ್ಪನವರು ಮ್ಲಾನವದನರಾಗಿ ಸುಮ್ಮನೆ ಕುಳಿತಿದ್ದರಂತೆ. ಅವರನ್ನು ನೋಡಲು ಜೆ.ಎಚ್.ಪಟೇಲರು ಹೋದರಂತೆ. ಪಟೇಲರು ಆಗಮಿಸುತ್ತಿದ್ದಂತೆ ನಿಜಲಿಂಗಪ್ಪನವರು ಸ್ವಲ್ಪ ಸಾವರಿಸಿಕೊಂಡು ‘ಬನ್ನಿ, ಬನ್ನಿ, ಪಟೇಲರೇ’ ಎಂದು ಕರೆದರಂತೆ.

ಪಟೇಲರು ನಿಜಲಿಂಗಪ್ಪನವರ ಪಕ್ಕದಲ್ಲಿಯೇ ಹೋಗಿ ಕುಳಿತರಂತೆ. ಏನು ಮಾತಾಡಬೇಕೆಂಬುದು ತಿಳಿಯದೇ ಕೆಲ ಕಾಲ ಪಟೇಲರು ಸುಮ್ಮನೆ ಕುಳಿತಿದ್ದರಂತೆ. ಬಂದಿದ್ದಕ್ಕೆ ಏನಾದರೂ ಸಾಂತ್ವನದ ಮಾತುಗಳನ್ನು ಹೇಳಲೇಬೇಕಲ್ಲ, ಪಟೇಲರು ನಿಧಾನವಾಗಿ ಸಾವರಿಸಿಕೊಂಡು, ಈ ವಯಸ್ಸಿನಲ್ಲಿ ಪತ್ನಿಯ ಸಾವನ್ನು
ಅರಗಿಸಿಕೊಳ್ಳುವುದು ಬಹಳ ಕಷ್ಟ , ಇನ್ನು ಮುಂದೆ ನೀವು ಹೇಗೆ ಜೀವನ ಸಾಗಿಸುತ್ತೀರೋ?’ ಎಂದು ಪಟೇಲರು ನಿಜಲಿಂಗಪ್ಪನವರಿಗೆ ಹೇಳಿದರಂತೆ. ಅದಕ್ಕೆ ನಿಜಲಿಂಗಪ್ಪನವರು, ಪಟೇಲರೇ, ಮೊದಲಾಗಿದ್ದರೆ ನನ್ನ ಪತ್ನಿ ಮನೆಯಲ್ಲಿ ಎಲ್ಲಿ ಇರುತ್ತಿದ್ದಳೋ, ಅಲ್ಲಿ ಮಾತ್ರ ಕಾಣಿಸುತ್ತಿದ್ದಳು.

ಈಗ ಹಾಗಲ್ಲ, ಅವಳ ನಿಧನದ ನಂತರ, ನನಗೆ ಮನೆಯಲ್ಲಿ ಎಲ್ಲಿ ನೋಡಿದರೂ ಅವಳೇ ಕಾಣುತ್ತಾಳೆ. ಅವಳು ಇಲ್ಲ ಎಂದು ಅನಿಸುತ್ತಲೇ ಇಲ್ಲ ಎಂದು ಹೇಳಿದರಂತೆ. ಎಂಥ ಮಾತು! ಪಟೇಲರು ಅಚ್ಚರಿಯಿಂದ ಕೆಲಕಾಲ ನಿಜಲಿಂಗಪ್ಪ ಅವರ ಮುಖವನ್ನೇ ದಿಟ್ಟಿಸುತ್ತಿದ್ದರಂತೆ.