Thursday, 12th December 2024

ನ್ಯಾಯದ ಎರಡು ವಿಭಿನ್ನ ಮುಖಗಳು

ನಾಡಿಮಿಡಿತ 

ವಸಂತ ನಾಡಿಗೇರ

vasanth.nadiger@gmail.com

ನಮ್ಮ ಸಂವಿಧಾನದ ಮೂರನೇ ಅಂಗವಾದ ನ್ಯಾಯಾಂಗದ ಕೆಲಸ ನ್ಯಾಯದಾನ. ಇದನ್ನು ಬಹುತೇಕವಾಗಿ ವ್ಯಾಜ್ಯ ಪರಿಹಾರದ ಮೂಲಕ ಅದು ಮಾಡುತ್ತದೆ. ನ್ಯಾಯಾಲಯಗಳು, ಅವುಗಳ ತೀರ್ಪು, ಕಾರ್ಯವೈಖರಿ ಬಗ್ಗೆ ಮೊದಲಿನಿಂದಲೂ ಗೌರವವಿದೆ. ಕೆಲವು ಸಂದರ್ಭಗಳಲ್ಲಿ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೂ, ‘ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ’ ಎಂದು ಅನೇಕ ಸಂದರ್ಭಗಳಲ್ಲಿ ಹೇಳುವಂತೆ, ಅದನ್ನು ಒಪ್ಪಿಕೊಳ್ಳುತ್ತೇವೆ.

ಅದೇ ರೀತಿ ತೀರ್ಪನ್ನು ಪರಾಮರ್ಶೆ ಮಾಡಲು, ಟೀಕೆ ಟಿಪ್ಪಣಿ ಮಾಡಲು ಹೋಗುವುದಿಲ್ಲ. ಇದಕ್ಕೆ ನ್ಯಾಯಾಂಗ ನಿಂದನೆಯ ಭಯವೂ ಇದ್ದೀತು. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಬಗೆಗೂ ಒಂದಷ್ಟು ಪರಾಮರ್ಶೆ ನಡೆಯುತ್ತಿವೆ. ಪ್ರಶಾಂತ್ ಭೂಷಣ್ ಅವರಂಥವರು ಅಂದಿನ ಮುಖ್ಯ ನ್ಯಾಯಮೂರ್ತಿ ಯವರ ಬಗ್ಗೆ ಟೀಕೆ ಟಿಪ್ಪಣಿ ಮಾಡಿ ಕೊನೆಗೆ ನ್ಯಾಯಾಂಗ ನಿಂದನೆ ಕೇಸ್ ಎದುರಿಸಿದ ಉದಾಹರಣೆಗಳೂ ಇವೆ. ನ್ಯಾಯಾಂಗ ಕ್ರಿಯಾ ಶೀಲತೆಯ ಬಗೆಗೂ ಆಗಾಗ ಒಂದಷ್ಟು ಅಪಸ್ವರಗಳು ಕೇಳಿಬರುವುದುಂಟು.

ಇತ್ತೀಚಿನ ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯಗಳಿಗೆ ಆಮ್ಲಜನಕ ಪೂರೈಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಒಂದಷ್ಟು ಖಡಕ್ ಆದೇಶಗಳನ್ನು ನೀಡಿತ್ತು. ಸರಕಾರದ ಕ್ರಮಗಳನ್ನು ಕಟುವಾಗಿ ಟೀಕಿಸಿತ್ತು. ಸರಕಾರದ ನಿಧಾನ ಪ್ರವೃತ್ತಿಯ ಬಗ್ಗೆ ಟೀಕಿಸುವ ನ್ಯಾಯಾಂಗವು, ನ್ಯಾಯ ನೀಡಿಕೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿಲ್ಲವೆ ಎಂಬ ಪ್ರಶ್ನೆ ಆಗ ಕೇಳಿಬಂದಿದ್ದುಂಟು.

ಇಷ್ಟೆಲ್ಲ ಪೀಠಿಕೆಗೆ ಕಾರಣ, ಈಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಬಂದಿರುವ ಎರಡು ಪ್ರಕರಣಗಳನ್ನು ಅವಲೋಕಿಸಿ ದಾಗ ಮತ್ತೆ ಅದರ ಕಾರ್ಯವೈಖರಿಯ ಕುರಿತು ಒಂದಷ್ಟು ಚಿಂತನೆಗೆ ತೊಡಗುವಂತೆ ಮಾಡಿತು. ಎರಡೂ ಪ್ರಕರಣಗಳು ಬೇರೆ ಬೇರೆ ಆದರೂ ಪ್ರಕರಣಗಳನ್ನು ನ್ಯಾಯಾಯಲಯಗಳು ನೋಡುವ ಮತ್ತು ನಿರ್ವಹಿಸುವ ರೀತಿ ಹೇಗಿರುತ್ತದೆ ಎಂಬುದರ ಒಂದು ಅಂದಾಜು ಬರುತ್ತದೆ. ಇದಕ್ಕಾಗಿ ಎರಡೂ ಪ್ರಕರಣಗಳ ವಿವರಗಳನ್ನು ನೋಡಬೇಕಾಗುತ್ತದೆ.

ಪ್ರಕರಣ ಒಂದು: ಅದೊಂದು ವಿಚ್ಛೇದನ ಪ್ರಕರಣ. ಆಂಧ್ರಪ್ರದೇಶದ ಈ ದಂಪತಿ ಕಳೆದ 20 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ವ್ಯಾಜ್ಯ
ಬಗೆಹರಿದಿರಲಿಲ್ಲ. ವಿಚಿತ್ರವೆಂದರೆ ಗಂಡನ ಮೇಲೆ ದೌರ್ಜನ್ಯದ ಕೇಸನ್ನು ಹೆಂಡತಿ ಹಾಕಿದ್ದಳು. ಆ ಪ್ರಕಾರ ಶಿಕ್ಷೆಯೂ ಆಗಿತ್ತು. ಆದರೂ ಆತ ಕಳೆದ 18 ವರ್ಷ ಗಳಿಂದ ಹೆಂಡತಿ, ಮಗುವನ್ನು ನೋಡಿಕೊಳ್ಳುತ್ತಿದ್ದ. ಈ ವ್ಯಕ್ತಿ ರಾಜ್ಯ ಸರಕಾರದ ಕಂದಾಯ ಇಲಾಖೆಯ ನೌಕರನಾಗಿದ್ದ. ಹೆಂಡತಿ ಗೃಹಿಣಿ. ಜೀವನದಲ್ಲಿ
ಹೊಂದಾಣಿಕೆಯಾಗದೆ ಅವರಿಬ್ಬರೂ 2001ರಲ್ಲಿ ಬೇರೆಯಾದರು. ಇದಾದ ಬಳಿಕ ಹೆಂಡತಿಯು ಗಂಡನ ಮೇಲೆ ದೌರ್ಜನ್ಯದ ಪ್ರಕರಣ ದಾಖಲಿಸಿದಳು. 2002 ರಲ್ಲಿ ಗುಂಟೂರು ವಿಚಾರಣಾ ನ್ಯಾಯಾಲಯವು ಆತನನ್ನು ದೋಷಿ ಎಂದು ತೀರ್ಪಿತ್ತಿತು. ಈ ನಡುವೆ ಮಹಿಳೆಯು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ, ತನಗೆ ಪರಿತ್ಯಕ್ತ ಗಂಡನಿಂದ ಜೀವನಾಂಶ ಕೊಡಿಸಬೇಕೆಂದು ಮೊರೆ ಇಟ್ಟಳು.

ಕೋರ್ಟ್ ಆದೇಶದ ಅನ್ವಯ ಆ ಮನುಷ್ಯ ಆಕೆಗೆ 2003 ರಿಂದ ಜೀವನಾಂಶ ನೀಡಲಾರಂಭಿಸಿದ. ಶಿಕ್ಷೆ ಆದ ಬಳಿಕವೂ ಪಾಪ, ಜೀವನಾಂಶ ನೀಡುವುದನ್ನು
ಮುಂದುವರಿಸಿದ್ದ. ಈ ನಡುವೆ 2010ರಲ್ಲಿ ಪ್ರಕರಣ ಹೈಕೋರ್ಟ್ ತಲುಪಿತು. ಅಲ್ಲಿ ವಿಚಾರಣೆ ನಡೆದ ಬಳಿಕ, ಆತನ ಶಿಕ್ಷೆಯನ್ನು ಈಗ ಆತ ಅನುಭವಿಸಿರುವ
ಜೈಲುಶಿಕ್ಷೆಗೆ ಕಡಿತಗೊಳಿಸಿತು. ಇದರಿಂದ ಅಸಮಾಧಾನಗೊಂಡ ಮಹಿಳೆ ಇದರ ವಿರುದ್ದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದಳು. ಗಂಡನ ಜೈಲುಶಿಕ್ಷೆಯ ಅವಧಿಯನ್ನು ಹೆಚ್ಚಿಸಬೇಕೆಂಬುದು ಆಕೆಯ ಮನವಿಯಾಗಿತ್ತು. ತನ್ನ ದೂರಿಗೆ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ. ಆತನಿಗೆ ವಿಽಸಲಾಗಿರುವ ಶಿಕ್ಷೆ ಜುಜುಬಿಯಾಗಿದೆ. ಅಲ್ಲದೆ ಅವನ ಕೆಲಸವೂ ಮರಳಿ ಸಿಗಲಿದೆ.

ಇದ್ಯಾವ ನ್ಯಾಯ ಎಂಬುದು ಆಕೆಯ ವಾದವಾಗಿತ್ತು. 2012 ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇದನ್ನು ಬಗೆಹರಿಸಲು ಯತ್ನ ನಡೆಸಿತು. ಸಂಧಾನ, ರಾಜಿಗೆ ನಡೆಸಿದ ಯತ್ನ ಫಲ ನೀಡಲಿಲ್ಲ. ತೀರ ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿ ಎನ್.ರಮಣ ಅವರು ಮಧ್ಯಪ್ರವೇಶಿಸಿ ರಾಜಿ ಸಾಧ್ಯವೇ ಎಂದು ಮತ್ತೆ ವಕೀಲರನ್ನು ಕೇಳಿದರು. ಆದರೆ ನ್ಯಾಯವಾದಿಗಳು ಬರಿಗೈಯಲ್ಲಿ ಮರಳಿದರು. ಗಂಡನ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲೇಬೇಕು ಎಂದು ಪತ್ನಿ ಪಟ್ಟು ಹಿಡಿದಿದ್ದಾಳೆ ಎಂಬ ಮಾಹಿತಿ ನೀಡಿದರು.

ಉಪಾಯಗಾಣದೆ ಮತ್ತೊಂದು ಸುತ್ತಿನ ವಿಚಾರಣೆಗೆ ವೇದಿಕೆ ಸಜ್ಜಾಯಿತು. ವಿಡಿಯೊ ಕಾನರೆನ್ಸ್ ಮೂಲಕ ವಿಚಾರಣೆಗೆ ವ್ಯವಸ್ಥೆ ಮಾಡಲಾಯಿತು. ಈ ಪೀಠದಲ್ಲಿ ಸಿಜೆಐ ಎನ್.ರಮಣ ಅವರಲ್ಲದೆ ನ್ಯಾ.ಎ.ಎಸ್.ಬೋಪಣ್ಣ ಹಾಗೂ ನ್ಯಾ.ಸೂರ್ಯಕಾಂತ್ ಅವರೂ ಇದ್ದರು. ಗಂಡ ಹೆಂಡತಿ ಇಬ್ಬರೂ ಹಾಜರಾಗಿದ್ದರು. ವಿಚಾರಣೆ ಆರಂಭವಾಯಿತು. ಸಾಮಾನ್ಯವಾಗಿ ಕೋರ್ಟ್‌ನಲ್ಲಿ ವಾದ ವಿವಾದ ನಡೆಯುವುದು ಇಂಗ್ಲಿಷ್‌ನಲ್ಲಿ. ಅದಿಲ್ಲದಿದ್ದರೆ ಹಿಂದಿಯಲ್ಲಿ ನಡೆಯುವುದುಂಟು.
ತೀರ ಇತ್ತೀಚೆಗೆ ಇತರ ಭಾಷೆಗಳಲ್ಲೂ ನಡೆಸಲು ವ್ಯವಸ್ಥೆ ಮಾಡಲಾಯಿತು. ಇರಲಿ. ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರಲಾಗಿ, ಪತ್ನಿ ಎನ್ನಿಸಿಕೊಂಡವಳು ತನಗೆ ಇಂಗ್ಲಿಷ್ ತಿಳಿಯುವುದಿಲ್ಲ ಎಂದು ಅಲವತ್ತುಕೊಂಡಳು.

ಆಗ ನ್ಯಾ.ರಮಣ ಅವರು ಒಂದು ಉಪಾಯ ಮಾಡಿದರು. ಹೇಗಿದ್ರೂ ಆವರು ಆಂಧ್ರದವರು. ತೆಲುಗು ಮಾತನಾಡಲು ಬರುತ್ತದೆ. ಆದ್ದರಿಂದ ‘ಆಕೆ ತೆಲುಗಿನಲ್ಲೇ ಮಾತನಾಡಲಿ. ನಾನು ಕೇಳಿಕೊಂಡು ನಿಮಗೆ ತಿಳಿಸುತ್ತೇನೆ’ ಎಂದರು. ಆ ಪ್ರಕಾರ ಅವರು ಮಹಿಳೆಯೊಂದಿಗೆ ತೆಲುಗಿನಲ್ಲೇ ಸಂವಾದ ಆರಂಭಿಸಿದರು. ಆಕೆ ಹೇಳುವುದನ್ನು ಕೇಳಿದರು. ಜತೆಗೆ ಪತಿಗೆ ಶಿಕ್ಷೆ ಹೆಚ್ಚಾದರೆ ಏನಾಗುತ್ತದೆ ಎಂಬುದನ್ನು ತಿಳಿ ಹೇಳಿದರು. ಹಾಗಾದಲ್ಲಿ ಆತನ ಕೆಲಸ ಹೋಗುತ್ತದೆ. ಅಂಥ ಸಂದರ್ಭದಲ್ಲಿ ನಿಮಗೆ ಜೀವನಾಂಶ ನೀಡಲು ಸಾಧ್ಯವಾಗುವುದಿಲ್ಲ.

ಜೀವನಾಂಶವಿಲ್ಲದೆ ಬದುಕುವುದು ಮೇಲೋ, ಇಲ್ಲವೆ ಆತನೊಂದಿಗೆ ರಾಜಿಯಾಗಿ ಒಟ್ಟಿಗೆ ಬಾಳುವುದು ಲೇಸೋ ಎಂಬುದನ್ನು ಯೋಚಿಸಿ’ ಎಂದು ಕೇಳಿ
ಎರಡರ ಸಾಧಕ ಬಾಧಕಗಳನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಇತ್ತ ಗಂಡನನ್ನೂ ಕರೆಸಿ ಅವನ ಅಭಿಪ್ರಾಯಕ್ಕೂ ಕಿವಿಯಾದರು. ‘ನೀವಿಬ್ಬರೂ
ಮೊದಲಿನಂತೆ ಗಂಡ ಹೆಂಡತಿಯಾಗಿ ಒಟ್ಟಿಗೇ ಬಾಳುವ ಇಚ್ಛೆ, ಇರಾದೆ ಹೊಂದಿದ್ದೀರಾ?’ ಎಂದು ಕೇಳಿದರು.

ಹೌದಾದರೆ ಆಕೆಯನ್ನು ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಮತ್ತೆ ನಿನ್ನ ಶಿಕ್ಷೆ ಹೆಚ್ಚಾಗುತ್ತದೆ. ಜತೆಗೆ ನೌಕರಿಯೂ ಹೋಗುತ್ತದೆ’ ಯೋಚಿಸು ಎಂದರು. ಇದಕ್ಕೆ ಆ ಮನುಷ್ಯ ಆಕೆಯೊಡನೆ ಬಾಳುವ ಬಯಕೆ ವ್ಯಕ್ತಪಡಿಸಿದ. ಮಹಿಳೆಯೂ ಇದಕ್ಕೆ ಕಬೂಲಾದಳು. ಹೀಗೆ 20ವರ್ಷಗಳ ಪ್ರಕರಣವೊಂದು
ಇತ್ಯರ್ಥವಾಗಿತ್ತು. ಇದರ ಬಗ್ಗೆ ಪ್ರಕರಣದ ನ್ಯಾಯವಾದಿಗಳೊಬ್ಬರು ಹೇಳಿದ್ದು: ಸಿಜೆಐ ಅವರ ಯತ್ನವಿಲ್ಲದೆ ಈ ಪ್ರಕರಣ ಇತ್ಯರ್ಥವಾಗುತ್ತಿರಲಿಲ್ಲ. ಅವರ ಸಂಧಾನದ ಫಲವಾಗಿ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಂದಾಗಲು ಮುಂದಾಗಿದ್ದಾರೆ.

ಒಂದು ಮಾನವೀಯ ಸಮಸ್ಯೆಯನ್ನು ಸಿಜೆಐ ಅತ್ಯಂತ ಮಾನವೀಯ ನೆಲೆಯಲ್ಲಿ ಸೌಹಾರ್ದಯುತವಾಗಿ ಪರಿಹರಿಸಿದ್ದಾರೆ’ ಇಂದು ನ್ಯಾ.ರಮಣ ಅವರು ನಡೆಸಿದ
ಇಂಥದೊಂದು ಪ್ರಯತ್ನ ಆಂದೇ ನಡೆದಿದ್ದರೆ ಈ ಪ್ರಕರಣ ಇಷ್ಟೊಂದು ದೀರ್ಘ ಕಾಲ ಎಳೆದುಕೊಂಡು ಹೋಗದೆ ಎಂದೋ ಇತ್ಯರ್ಥವಾಗುತ್ತಿತ್ತಲ್ಲವೆ ?
ಮತ್ತೊಂದು ಪ್ರಕರಣವಿದು: ಮೂರ‍್ನಾಲ್ಕು ದಿನಗಳ ಹಿಂದಿನ ಘಟನೆ. ಝಾರ್ಖಂಡ್ ರಾಜ್ಯದ ಧನಬಾದ್ ನಗರದಲ್ಲಿ ನಡೆದಿದ್ದು. ಅಲ್ಲಿನ ಹೆಚ್ಚುವರಿ ಜಿಲ್ಲಾ
ನ್ಯಾಯಾಽಶರಾದ ಉತ್ತಮ್ ಆನಂದ್ ಅವರ ಸಾವಿಗೆ ಸಂಬಂಧಿಸಿದ್ದು. ನಡೆದಿದ್ದಿಷ್ಟು. ನ್ಯಾಯಾಧೀಶರು ಆ ದಿನ ಬೆಳಗಿನ ಜಾವ ಜಾಗಿಂಗ್ ಮಾಡುತ್ತಿದ್ದರು.
ಅದೊಂದು ವಿಶಾಲವಾದ ರಸ್ತೆ. ಇನ್ನೂ ಚುಮುಚುಮು ಬೆಳಗು. ಆವರು ತಮ್ಮ ಪಾಡಿಗೆ ತಾವು ರಸ್ತೆಯ ಒಂದು ಅಂಚಿನಲ್ಲಿ ಸಾಗುತ್ತಿದ್ದರು.

ಹಿಂದಿನಿಂದ ಆಟೊರಿಕ್ಷಾವೊಂದು ಬರುತ್ತಿತ್ತು. ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿತು. ನೋಡ ನೋಡುತ್ತಲೇ ನ್ಯಾಯಾಧೀಶರ ಮೇಲೆ ಹರಿದು ಅವರನ್ನು ಕೆಳಕ್ಕೆ
ಉರುಳಿಸಿ ಮುಂದೆ ಭರ್ರನೆ ಹೊರಟುಹೋಯಿತು. ರಸ್ತೆಯಲ್ಲೇ ಬಿದ್ದಿದ್ದ ನ್ಯಾಯಾಽಶರನ್ನು ಜನರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಪೊಲೀಸರು ಪ್ರಕರಣ ದಾಖಲಿಸಿದ್ದು ಈ ಸಂಬಂಧ ಆಟೊ ಚಾಲಕ ಹಾಗೂ ಮತ್ತೊಬ್ಬನನ್ನು ಬಂಧಿಸಿದ್ದಾರೆ. ಹಾಗೆಂದು ಬಂಧನ ಸುಲಭವಾಗೇನೂ ಆಗುವುದಿಲ್ಲ.

ಪ್ರಕರಣವನ್ನು ಕೈಗೆತ್ತಿಕೊಂಡ ಝಾರ್ಖಂಡ್ ಹೈಕೋರ್ಟ್, ಪ್ರಕರಣದಲ್ಲಿ ಎಫ್ಐಆರ್ ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ರಾಜ್ಯ ಸರಕಾರವನ್ನು ತರಾಟೆಗೆ
ತೆಗೆದುಕೊಂಡಿದೆ. ಇತ್ತೀಚೆಗೆ ಅಲ್ಲಿ ವಕೀಲರೊಬ್ಬರ ಹತ್ಯೆಯೂ ನಡೆದಿತ್ತು. ಇಂಥ ಪ್ರಕರಣಗಳು ನ್ಯಾಯಾಂಗದ ಮೆಲೆ ನಡೆದ ಹಲ್ಲೆ ಎಂದು ಹೈಕೋರ್ಟ್ ಬಣ್ಣಿಸಿದೆ. ಕೋರ್ಟ್ ಆದೇಶದ ಅನ್ವಯ ಜಾರ್ಖಂಡ್ ಸರಕಾರವು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಸುಪ್ರೀಂ
ಕೋರ್ಟ್‌ನಲ್ಲೂ ವಿಷಯ ಪ್ರಸ್ತಾಪಕ್ಕೆ ಬಂದಿತು. ತಾನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಝಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ
ಜತೆ ಮಾತನಾಡಿರುವುದಾಗಿ ಸಿಜೆಐ ತಿಳಿಸಿದ್ದಾರೆ.

ಸಾವಿಗೀಡಾದ ನ್ಯಾಯಾಧೀಶರು ಕೆಲವು ಸೂಕ್ಷ್ಮ ಪ್ರಕರಣಗಳ ತನಿಖೆ ನಡೆಸುತ್ತಿದ್ದರು. ವಿಶೇಷವಾಗಿ ಮೋಟಾರು ವಾಹನಗಳ ಅದಾಲತ್ ನಡೆಸಿ ಸಂತ್ರಸ್ತರಿಗೆ
ಅಪಾರ ಪ್ರಮಾಣದ ಪರಿಹಾರ ಕೊಡಲು ಆದೇಶ ನೀಡಿದ್ದರು. ಇದು ವಾಹನ ಲಾಬಿಯನ್ನು ರೊಚ್ಚಿಗೆಬ್ಬಿಸಿತ್ತು ಎನ್ನಲಾಗಿದೆ. ಇದೂ ಅಲ್ಲದೆ ಅನೇಕ ಗೂಂಡಾಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನೂ ನಡೆಸುತ್ತಿದ್ದರು. ಇದರಲ್ಲಿ ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಸೇಡು ತೀರಿಸಿಕೊಳ್ಳಲು ಈ ರೀತಿಯ ಕ್ರಮ ಕೈಗೊಂಡಿದ್ದಾರೋ ಎಂಬುದರ ವಿವರಗಳು ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಕರಣದ ಕುರಿತಂತೆ ಹಲವು ಅಂಶಗಳನ್ನು ನಾವು ಇಲ್ಲಿ ಪರಿಗಣಿಸಬೇಕಾಗುತ್ತದೆ. ಆ ಪೈಕಿ ಮೊತ್ತ ಮೊದಲನೆಯದು-ಯಾವುದಾದರೂ ಲಾಬಿ, ಮಾಫಿಯಾಗೆ ನ್ಯಾಯಾಧೀಶರು ಬಲಿಯಾದರೆ ಎಂಬುದು. ಇದು ನಿಜವೇ ಆಗಿದ್ದಲ್ಲಿ ದಿಗಿಲು ಹುಟ್ಟಿಸುವಂಥದ್ದು. ಏಕೆಂದರೆ ನ್ಯಾಯಾಧೀಶರೊಬ್ಬರಿಗೇ ಈ ದುರ್ಗತಿ ಆದರೆ ಜನಸಾಮಾನ್ಯರ ಪಾಡೇನು? ಮತ್ತೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕು. ಒಬ್ಬ ಹಾಲಿ ಜಿಲ್ಲಾ ನ್ಯಾಯಾಧೀಶರಿಗೇ ರಕ್ಷಣೆ ಇಲ್ಲ ಎಂದರೆ ಅಸಹಾಯಕ ಜನರ ಜೀವಕ್ಕೆ ನೆಲೆ, ಬೆಲೆ ಎಲ್ಲಿದೆ ಎಂಬ ಭಯ ಕಾಡುತ್ತದೆ. ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿಲು ಏಕೆ ಮೀನಮೇಷ ಎಂದು ಕೇಳಿದ್ದು ಗಮನಾರ್ಹ.

ಏಕೆಂದರೆ ಇಂಥವರ ವಿರುದ್ಧ ಪ್ರಕರಣ ದಾಖಲಿಸಲೂ ಆಡಳಿತ ಹಿಂದೇಟು ಹಾಕಿದರೆ ಬಡವರು, ಸಾಮಾನ್ಯ ಜನರ ಪಾಡೇನು? ಅವರನ್ನು ಕೇಳುವರು ಯಾರು? ಬಹುಶಃ ಎಫ್ಐಆರ್ ದಾಖಲಿಸದೆ ಹಾಗೆಯೇ ಪ್ರಕರಣವನ್ನು ಮುಚ್ಚುಹಾಕಲಾಗುತ್ತಿತ್ತೋ ಏನೊ. ಗೊತ್ತಿಲ್ಲ. ಅದೇ ರೀತಿ ಈ ಪ್ರಕರಣಕ್ಕೆ ಇನ್ನೊಂದು ಆಯಾಮವೂ ಇದೆ. ಏನೆಂದರೆ ಇದು ನ್ಯಾಯಾಧೀಶರೊಬ್ಬರಿಗೆ ಸಂಬಂಧಿಸಿದ್ದಾಗಿತ್ತು. ಹೀಗಾಗಿ ಕೂಡಲೇ ಹೈಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಳ್ಳತ್ತದೆ. ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ.

ಸುಪ್ರೀಂ ಕೋರ್ಟ್ ಕೂಡ ಮಧ್ಯಪ್ರವೇಶ ಮಾಡಿ ಇದೇ ಧಾಟಿಯಲ್ಲಿ ಮಾತನಾಡುತ್ತದೆ. ನ್ಯಾಯಾಲಯಗಳೇ ಮಧ್ಯಪ್ರವೇಶ ಮಾಡಿದ ಮೇಲೆ ಅನಿವಾರ್ಯ ವಾಗಿಯಾದರೂ ಸರಕಾರ ಕಾರ್ಯಪ್ರವೃತ್ತವಾಗಲೇಬೇಕಾಗುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ನ್ಯಾಯಾಂಗವು ಇಷ್ಟೊಂದು ಸಕ್ರಿಯವಾಗಿ, ಚುರುಕಾಗಿ ಕೆಲಸ ಮಾಡುತ್ತಿತ್ತೆ ಎಂಬ ಪ್ರಶ್ನೆ ಎಲ್ಲರನ್ನು ಸಹಜವಾಗಿ ಕಾಡುತ್ತದೆ. ಏಕೆಂದರೆ ವ್ಯಕ್ತಿಗಳು ಸತ್ತ ಮೇಲೆ ಪ್ರಕರಣಗಳು ಇತ್ಯರ್ಥವಾದ ಅನೇಕ ಪ್ರಸಂಗಗಳಿವೆ. ನಮ್ಮ ನ್ಯಾಯಾಲಯಗಳಲ್ಲಿ ಬಾಕಿ ಉಳಿದ ಪ್ರಕರಣಗಳು, ಅವುಗಳಿಂದ ಜನರಿಗೆ ಆಗುತ್ತಿರುವ ತೊಂದರೆ, ಅನನುಕೂಲದ ಬಗ್ಗೆ ಪ್ರತ್ಯೇಕವಾಗಿ ಹೇಳುವುದೇ ಬೇಡ.

ಇದನ್ನೆಲ್ಲ ನೋಡಿದರೆ ಜನಸಾಮಾನ್ಯರಿಗೊಂದು ನ್ಯಾಯ, ಪ್ರಭಾವಿಗಳು- ಉಳ್ಳವರಿಗೆ ಬೇರೆಯದೇ ಆದ ನ್ಯಾಯವೆ ಎಂಬ ಸಂಶಯ ಬರುವುದೂ ಸಹಜ.
ಮೊದಲ ಪ್ರಕರಣದಲ್ಲಿ ನ್ಯಾಯಾಧೀಶರ ದೊಡ್ಡತನ ಮತ್ತು ಕ್ರಿಯಾಶೀಲತೆಯಿಂದ ಜಟಿಲ ಸಮಸ್ಯೆಯೊಂದು ಬಗೆಹರಿದುಬಿಡುತ್ತದೆ. ಆದರೆ ಎರಡನೇ ಕೇಸ್‌ನಲ್ಲಿ ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ಬೇರೆಯಾದೇ ಆದ ಚಿತ್ರಣವೊಂದು ನಮ್ಮ ಕಣ್ಮುಂದೆ ಬರುತ್ತದೆ. ಇವೆರಡರ ನಡುವಿನ ಮಧ್ಯಮಮಾರ್ಗದ ನಿರೀಕ್ಷೆಯಲ್ಲಿ ಜನರಿದ್ದಾರೆ.

ನಾಡಿಶಾಸ್ತ್ರ
ನಮ್ಮಂಥವರಿಗಾದರೆ ಒಂದು ನ್ಯಾಯ
ಬೇರೆಯವರಿಗೆ ಇನ್ನೊಂದು ನ್ಯಾಯ
ಎಂಬ ರೀತಿ ನೀತಿ ಬದಲಾಗಲೆಂದು
ಜನಸಾಮಾನ್ಯರು ಕಾಯುತಿಹರಿಂದ