Sunday, 15th December 2024

ಬಿಗ್‌ ಬಾಸ್‌ನಲ್ಲಿ ಸದ್ದು ಮಾಡಿದ ಫಿಂಗರ್‌ ಆಫ್ ಸ್ಪೀಚ್‌

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ
ಮೊನ್ನೆ ಮೊನ್ನೆ ನಟ ದರ್ಶನ್ ತಮ್ಮ ಮೇಲೆ ಬಂದ ಸಾಲು ಸಾಲು ಆಪಾದನೆಗಳಿಂದ ಬೇಸತ್ತೋ ಏನೋ ಮಾತಿನ ಭರದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರು. ಅವನಿಗೇನು ಎರಡು ಕೊಂಬಿದೆಯಾ, ಅವನೇನು ದೊಡ್ಡ ಪುಡುಂಗಾ, ಅವನಿಗೆ ೧೦೦ ದಿನ ಕಾಲ್ ಶೀಟ್ ಕೊಡಬೇಕಾ ಎನ್ನುವ ಮಾತುಗಳನ್ನಾಡಿದ್ದರು ದರ್ಶನ್.

ಇದರಿಂದ ದರ್ಶನ್ ಮೇಲೆ ಹಲವು ನಿರ್ದೇಶಕರು ಮುನಿಸಿಕೊಂಡಿದ್ದರು. ಜತೆಗೆ ಜೋಗಿ ಪ್ರೇಮ್ ಅಭಿಮಾನಿ ಗಳಿಗೂ ಇದು ಅಸಮಾಧಾನ ಉಂಟು ಮಾಡಿತ್ತು. ತಮಗೆ ಕರಿಯದಂಥ ಸೂಪರ್ ಹಿಟ್ ಸಿನಿಮಾ ಕೊಟ್ಟು ತಮ್ಮ ಕೆರಿಯರ್ ಅನ್ನು ಬಲಪಡಿಸಿದ ಪ್ರೇಮ್ ಅವರಂಥ ನಿರ್ದೇಶಕರ ಬಗ್ಗೆ ದರ್ಶನ್ ಈ ರೀತಿ ಮಾತನಾಡಬಾರದಿತ್ತು ಅನ್ನೋದು ಅವರ ಅನಿಸಿಕೆ ಆಗಿತ್ತು. ಇದಕ್ಕೆ ಪ್ರೇಮ್ ಕೂಡಾ ಪತ್ರಿಕಾಗೋಷ್ಟಿ ನಡೆಸಿ ತಮ್ಮ ಅಸಮಾಧಾನ ಹೊರಹಾಕಿ, ಅವರಿಗೆ ನನ್ನ ಸ್ಟೈಲ್ ಸರಿ ಹೊಂದಲ್ಲ ಎನ್ನಿಸಿದರೆ ಅವರಿಗೆ ಹೊಂದುವಂಥ ನಿರ್ದೇಶಕರ ಜತೆ ಕೆಲಸ ಮಾಡಲಿ, ನಾನು ನನಗೆ ಹೊಂದುವ ನಟರ ಜತೆ ಕೆಲಸ ಮಾಡ್ತೀನಿ ಎನ್ನುತ್ತಾ ದರ್ಶನ್ ಜತೆ ಸಿನಿಮಾ ಮಾಡುವ ಆಸಕ್ತಿ ನನಗೇನೂ ಇಲ್ಲ ಎಂಬ ಧಾಟಿಯಲ್ಲಿ ಮಾತನಾಡಿದ್ದರು.

ಪ್ರೇಮ್ ಪತ್ನಿ ನಟಿ ರಕ್ಷಿತಾ ಕೂಡಾ ಆಗ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ಈಗ ರಕ್ಷಿತಾ ಎಲ್ಲವನ್ನೂ ಮರೆತಂತೆ ಉಲ್ಟಾ ಹೊಡೆ ದಿದ್ದಾರೆ. ದರ್ಶನ್ ಜತೆಗಿರುವ ಫೋಟೋ ಹಾಕಿಕೊಂಡು, ಸಂಧಾನದ ಮತ್ತು ಸಮಾಧಾನದ ಮಾತುಗಳನ್ನಾಡಿದ್ದಾರೆ. ದರ್ಶನ್ ಎಂದಿದ್ದರೂ ನನ್ನ ಸ್ನೇಹಿತ ಎನ್ನುವ ಮೂಲಕ ಈ ಸುಂಟರಗಾಳಿಗಳನ್ನೆ ನಾವು ಎಷ್ಟೋ ನೋಡಿದ್ದೇವೆ. ನಾವು ಕಲಾಸಿಪಾಳ್ಯದಿಂದ ಜತೆಗಿರೋರು, ಗಾಂಧಿನಗರದಲ್ಲಿ ಇದೆ ಕಾಮನ್ ಅನ್ನೋ ಆಟಿಟ್ಯೂಡ್ ತೋರಿಸಿದ್ದಾರೆ ರಕ್ಷಿತಾ ಅವರು. ಹಾಗಾಗಿ ಗಾಳಿ ಬಂದ್ ಕಡೆ ತೂರ್ಕೊಳ್ಳೋಲೋ ಎನ್ನುವಂತೆ ದರ್ಶನ್ ಮತ್ತು ಪ್ರೇಮ್ ಮಧ್ಯೆ ಇರಬಹುದಾದ ಮುನಿಸಿಗೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ ರಕ್ಷಿತಾ ಎನ್ನಬಹುದು. ಆದರೆ ಇದು ಪ್ರೇಮ್ ಮತ್ತು ಅವರ ಅಭಿಮಾನಿಗಳಿಗೆ ಎಷ್ಟರ ಮಟ್ಟಿಗೆ ಜೀರ್ಣ ಆಗುತ್ತೋ ಅನ್ನೋದನ್ನೋ ಕಾದು ನೋಡಬೇಕಿದೆ.

ಲೂಸ್ ಟಾಕ್
ಬಸವರಾಜ ಬೊಮ್ಮಾಯಿ (ಕಾಲ್ಪನಿಕ ಸಂದರ್ಶನ)
ಮುಖ್ಯಮಂತ್ರಿಗಳೇ, ಈ ಟಿಎನ್ ಸೀತಾರಾಮ್ ಸೀರಿಯಲ್‌ಗಳಲ್ಲಿ ಅವರ ಅಸಿಸ್ಟೆಂಟ್ ಒಬ್ಬ ಬಸವರಾಜ್ ಅಂತ ಇರ್ತಾನೆ, ನೋಡಿದಿರಾ?
– ಏನ್ರೀ, ನಾನು ಯಡಿಯೂರಪ್ಪ ಅವರ ಅಸಿಸ್ಟೆಂಟ್ ಅಂತ ಆಡ್ಕೊತಾ ಇದ್ದೀರಾ?
ಏ, ಇಲ್ಲಾ ಸಾರ್, ಅದ್ ಬಿಡಿ, ಈ ಬಾಂಬೆ ಶಾಸಕರನ್ನೆ ಈಗ ಹೆಂಗೆ ನಿಭಾಯಿಸ್ತೀರ ನೀವು ಅನ್ನೋ ಕುತೂಹಲ ಎಲ್ಲರಿಗೂ ಇದೆ. ಏನ್ ನಿಮ್ಮ ಪ್ಲ್ಯಾನು ?
– ಅಲ್ಲಿರೋ ಡೆಲ್ಲಿಗೆ ಹೋಗದೇನೇ ಸಿಎಂ ಆದವನು ನಾನು, ಇನ್ನು ಇಲ್ಲೇ ಇರೋ ಬಾಂಬೆ ಗಿರಾಕಿಗಳನ್ನು ಮ್ಯಾನೇಜ್ ಮಾಡೋದ್ ಬರಲ್ವಾ?
ಅದೂ ನಿಜ ಬಿಡಿ, ಅಂದಂಗೆ, ಕೇಂದ್ರ ಸರಕಾರದ ಕಡೆಯಿಂದ ಕರ್ನಾಟಕಕ್ಕೆ ಇಷ್ಟು ದಿನ ಆಗ್ತಾ ಇದ್ದ ಅನ್ಯಾಯ ನೀವು ಬಂದ ಮೇಲಾದರೂ ಸರಿಹೋಗಬಹುದಾ ?
– ಅಯ್ಯೋ, ಅದೃಷ್ಟಕ್ಕೆ ಸಿಎಂ ಸೀಟು ಸಿಕ್ಕಿದೆ. ಅವೆ ನಂಗೆ ಬೇಕಾ? ಬಸವಾ ನೀ ಮಡಗ್ದಂಗಿರು ಅಂತ ಇರೋದೇ ಬುದ್ಧಿವಂತಿಕೆ.

ಈಗಾಗ್ಲೇ ಇವರನ್ನು ಹೆಂಗ್ ಕೆಳಗೆ ಇಳಿಸೋದು ಅಂತ ತುಂಬಾ ಜನ ತಲೆಗೆ ಬಸವನ ಹುಳ ಬಿಟ್ಕೊಂಡಿರ್ತಾರೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯ?
– ಅಂಥ ಹುಳು ಮಾನವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ.

ಸರಿ, ಎಲ್ಲರೂ ನಂಗೆ ಮಿನಿಸ್ಟರ್ ಪದವಿ ಬೇಕು ಅಂತ ಕ್ಯಾತೆ ತೆಗೆದು, ಪಕ್ಷದಲ್ಲಿ ಭಿನ್ನ ಮತ ಬಂದ್ರೆ ಏನ್ ಮಾಡ್ತೀರಾ?
– ಇದರ ಬಗ್ಗೆ ಮುಂದಿನ ವಾರ ಮಂತ್ರಿ ಡೆವಲಪರ್ಸ್ ಜತೆ ಒಂದ್ ಮೀಟಿಂಗ್ ಅರೇಂಜ್ ಮಾಡಿದ್ದೀನಿ. ನೋಡೋಣ.

ನೆಟ್ ಪಿಕ್ಸ್
ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು.

ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಖೇಮು ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ ಶುರು ಮಾಡಿದ. ಮೊದಲು ಕೆಟ್ಟ ರಾಜನ ಸರದಿ ಬಂತು. ಕಾವಲುಗಾರ ಖೇಮು ಅವನ ಹಿಸ್ಟರಿ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು, ಬನ್ನಿ ಸ್ವಾಮಿ ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ.

ಇದನ್ನೆ ನೋಡುತ್ತಿದ್ದ ಒಳ್ಳೆಯ ರಾಜ, ಅಂಥ ಕೆಟ್ಟವನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ ಎಂದುಕೊಂಡು ಖುಷಿಯಿಂದ ಮುಂದೆ ಹೋದ. ಇವನನ್ನು ತಡೆದು ನಿಲ್ಲಿಸಿದ ಖೇಮು ಇವನ ಹಿಸ್ಟರಿ ತೆಗೆದು ನೋಡಿದ. ನಂತರ ತಲೆ ಎತ್ತಿ ಇವನ ಮುಖ ನೋಡಿದವನೇ, ತನ್ನ ಮುಖ ಸಿಂಡರಿಸಿ ಕೊಂಡು, ನಿನಗೆ ಇಲ್ಲಿ ಜಾಗವಿಲ್ಲ, ನೀನು ನರಕಕ್ಕೆ ಹೋಗಬಹುದು ಅಂದ. ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೇ ಬಂತು.

ಅದೇ ಸಿಟ್ಟಿನಲ್ಲಿ, ಇದ್ಯಾವ ನ್ಯಾಯ? ಅವನು ಪ್ರಜೆಗಳಿಗೆ ಎಷ್ಟೆ ಕಿರುಕುಳ ಕೊಟ್ಟವನು, ವನಿಗೆ ನೋಡಿದರೆ ಅಷ್ಟೊಂದು ಮರ್ಯಾದೆ, ಗೌರವ, ನಾನು ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವನು. ನನಗೆ ಯಾಕೆ ಇಂಥಾ ಅನ್ಯಾಯ? ದೇವ ಲೋಕದಲ್ಲೂ ಈ ರೀತಿ ಮೋಸವೇ? ಅಂತ ಕಾವಲುಗಾರ ಖೇಮು ನನ್ನು ಕೇಳಿದ. ಅದಕ್ಕೆ ಖೇಮು ಹೇಳಿದ, ನೋಡಪ್ಪಾ, ಇದರಲ್ಲಿ ಮೋಸ ಏನಿಲ್ಲ, ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ ಅದೇ ಅವನ ಆಡಳಿತದಲ್ಲಿ ಪ್ರತಿ ಕ್ಷಣವೂ ದೇವರೇ ನಮ್ಮನ್ನ ಕಾಪಾಡು ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಪ್ರಯತ್ನ ಮುಖ್ಯ ಅಲ್ಲ, ರಿಸಲ್ಟ ಮುಖ್ಯ ಗೊತ್ತಾಯ್ತಾ?

ಲೈನ್ ಮ್ಯಾನ್
ಮೇಕೆದಾಟು ವಿಷಯದಲ್ಲಿ ಕರ್ನಾಟಕದ ವಿರುದ್ಧ ಅಣ್ಣಾಮಲೈ ಪ್ರತಿಭಟನೆ
– ಸಿಂಗಂ ಮೇಕೆ ಮೇಲೆ ಕಣ್ಣು ಹಾಕಿದೆ.
ಶ್ರೀಲಂಕಾ ಇಂಡಿಯಾ ಸೀರೀಸ್‌ನಲ್ಲಿ ಬ್ಯಾಟ್ಸಮನ್‌ಗಳ ಕೊರತೆ
– ನೆಟ್ ಬೌಲರ್ಸ್‌ಗಳಿಗೆಲ್ಲ ಮ್ಯಾಚ್ ಆಡೋಕೆ ಚಾ ಸಿಕ್ಕಾಗ ನೆಟ್ ರನ್ ರೇಟ್ ಕಮ್ಮಿ ಅಂತ ತಲೆಕೆಡಿಸಿಕೊಳ್ಳಬಾರದು.
ಕರೋನಾದಿಂದ ತುಂಬಾ ಜನ ಪ್ಲೇಯರ್ಸ್ ರೆನಲ್ಲಿದ್ದುದರಿಂದ ಆಯ್ಕೆ ಮಾಡೋಕೆ 
ಸಿಕ್ಕಿದ್ದೇ ೫ ಜನ ಬ್ಯಾಟ್ಸಮನ್‌ಗಳು
– ಸೋ, ಈ ಮ್ಯಾಚ್‌ಗಳು ನಡೆದಿದ್ದು ಶ್ರೀಲಂಕಾ ವರ್ಸಸ್ ರೆಸ್ಟ್ ಆಫ್ ಇಂಡಿಯಾ ಮಧ್ಯೆ.
ಈ ಟಿ 20 ಸರಣಿಯ ಮ್ಯಾನ್ ಆಫ್ ದಿ ಸೀರೀಸ್
– ಕೃನಾಲ್ ಪಾಂಡ್ಯ. ಎಲ್ಲರಿಗೂ ಕರೋನಾ ಸೋಂಕಿಸಿ ಸೀರೀಸ್ ನ ಹಣೆಬರಹ ನಿರ್ಧಾರ ಮಾಡಿದ್ದು ಅವನೇ.
ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ನಲ್ಲಿ ತೋರಿಸಿದ್ದು ಬೆರಳಾದರೂ ಜನ ಆಡಿಕೊಂಡಿದ್ದು
– ಅಂಗೈ ತೋರಿಸಿ ಅವಲಕ್ಷಣ ಮಾಡಿಕೊಂಡ ಅಂತ

ಇದರಿಂದ ಚಕ್ರವರ್ತಿ ಕಲಿತ ಪಾಠ
– ಫಿಗರ್ ಕಡೆ ಫಿಂಗರ್ ತೋರಿಸಬಾರದು
ಬೆರಳು ತೋರಿಸಿದ ಚಕ್ರವರ್ತಿ ಅದಕ್ಕೆ ಬೇರೆ ಅರ್ಥ ಇದೆ ಅಂತ ಹೇಳಿದ್ದು
– ಫಿಂಗರ್ ಆಫ್ ಸ್ಪೀಚ್
ಕತ್ತಲಲ್ಲಿ ಮಾಡೋ ಮೋಸ
– ಇರುಳು ಮರುಳು
ಕಾಂಗ್ರೆಸ್ ಮುಕ್ತ ಭಾರತ ಮಾಡೋ ಬಿಜೆಪಿ ನಾಯಕನ ಬಗ್ಗೆ ಆಡೋ ಮಾತು
– ಬೆರಳು ತೋರಿಸಿದ್ರೆ ಹಸ್ತನೇ ನುಂಗ್ತಾನೆ
ಆಶ್ಚರ್ಯ ಮತ್ತು ಅಸಹ್ಯಗಳ ನಡುವಿನ ವ್ಯತ್ಯಾಸ
– ಒಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು, ಇನ್ನೊಂದು ಮೂಗಿನ ಒಳಗೆ ಬೆರಳಿಟ್ಟುಕೊಳ್ಳೋದು.