Friday, 22nd November 2024

ಸರಕು ಮತ್ತು ಸೇವಾ ತೆರಿಗೆ ಸಂಗ್ರಹ: ಜುಲೈನಲ್ಲಿ ಶೇ.33 ಹೆಚ್ಚಳ

ನವದೆಹಲಿ: ಕಳೆದ ವರ್ಷ 2020ರ ಜುಲೈಗೆ ಹೋಲಿಕೆ ಮಾಡಿದರೆ, ಪ್ರಸಕ್ತ ವರ್ಷದ ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ 1.16 ಲಕ್ಷ ಕೋಟಿ ರೂ. ಆಗಿದೆ. ಎಂದರೆ ಸಂಗ್ರಹ ಪ್ರಮಾಣ ಶೇ.33 ಹೆಚ್ಚಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಮಾಹಿತಿ ನೀಡಿದೆ.

ಸಂಗ್ರಹವಾಗಿರುವ 1,16,393 ಕೋಟಿ ರೂ.ಗಳ ಪೈಕಿ ಕೇಂದ್ರದ ಜಿಎಸ್‌ಟಿ ಮೊತ್ತ 22,197 ಕೋಟಿ ರೂ., ರಾಜ್ಯ ಗಳ ಜಿಎಸ್‌ಟಿ ಮೊತ್ತ 28,541 ಕೋಟಿ ರೂ., ಏಕೀಕೃತ ಜಿಎಸ್‌ಟಿ (ಐಜಿಎಸ್‌ಟಿ) 57,864 ಕೋಟಿ ರೂ. ಎಂದು ಸರ್ಕಾರ ತಿಳಿಸಿದೆ.

ಕಳೆದ ಜುಲೈನಲ್ಲಿ 87,422 ರೂ.ಮೊತ್ತ ಜಿಎಸ್‌ಟಿ ಸಂಗ್ರಹವಾಗಿತ್ತು. 1.16 ಲಕ್ಷ ಕೋಟಿ ರೂ. ಸಂಗ್ರಹ ವಿತ್ತೀಯ ಕೊರತೆ ನೀಗಿಸುವಲ್ಲಿ ಕೊಂಚ ನೆರವು ನೀಡಲಿದೆ. ಜೂನ್‌ನಲ್ಲಿ ಮಾತ್ರ 92,849 ಕೋಟಿ ರೂ. ಸಂಗ್ರಹವಾಗಿತ್ತು.

ಸೋಂಕು ತಡೆ ನಿಯಮಗಳಲ್ಲಿ ರಿಯಾಯಿತಿ ತೋರಿಸಿದ್ದರಿಂದ ದೇಶದ ಅರ್ಥ ವ್ಯವಸ್ಥೆಯ ವಿವಿಧ ಚಟುವಟಿಕೆಗಳು ಚೇತರಿಕೆ ಕಂಡಿವೆ.