ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ಆಂಗ್ಲಭಾಷಾ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕೇವಲ ಒಂದು ಭಾಷೆಯಾಗಿ ಎಷ್ಟು ಬೇಕೋ ಅಷ್ಟು ಕಲಿಸಿದರೆ ಸಾಕು ಎಂಬ ಬಹುತೇಕದ ಸಾರ್ವತ್ರಿಕ ಉಡಾಫೆಯ ಉದಾಸೀನದ ನಿರ್ಲಕ್ಷ್ಯ ಮನೋಭಾವವೇ ಕನ್ನಡ ಕಲಿಕೆ ಮತ್ತು ಬೋಧನೆಯನ್ನು ನಿಸ್ತೇಜಗೊಳಿಸುತ್ತಿದೆ. ಆ ಮೂಲಕ ಕನ್ನಡವನ್ನು ಇಂಗ್ಲಿಷಿನ ಮುಂದೆ ಕಡೆಗಣಿಸುವ, ನಿರಾಕರಿಸುವ, ದಮನಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ.
ಪ್ರಾಥಮಿಕ ಹಂತದ ಬೋಧನೆ ಮತ್ತು ಕಲಿಕೆ ಕೇವಲ ಅಂಕಗಳಿಕೆಯ ಉಪಾಯದ ಮಾರ್ಗವಾಗಿ ಬೋಧಕ ರಿಗೂ ಪೋಷಕರಿಗೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶಿಕ್ಷಕರು ಇದಕ್ಕೆ ಸರಿಯಾಗಿ ತಮ್ಮ ಪಾಠಗಳನ್ನು ಯೋಜಿಸಿ ಕೊಳ್ಳುತ್ತಾರೆ. ಇದರಿಂದಾಗಿ ಗದ್ಯಪದ್ಯಗಳ ವಿಷಯವಸ್ತುಗಳ ಅಗಾಧತೆ, ರಚನಿಕ ವೈಶಿಷ್ಟ್ಯ, ಪದರಚನೆ ಮತ್ತು ಬಳಕೆ, ಭಾಷಿಕ ರಚನೆ, ಧ್ವನಿ, ವಾಕ್ಯ ಪ್ರಾಕಾರಗಳು ಇವುಗಳು ಕಡೆಗಣಿತವಾಗುತ್ತಿದೆ. ಒಬ್ಬ ಲೇಖಕರ ಬರೆಹದ ವಿಭಿನ್ನತೆ, ವಿಶೇಷತೆಯನ್ನು ಮಕ್ಕಳಿಗೆ ಹೇಳಲು ಬೋಧಕರಿಗೆ ಸಾಧ್ಯವಾಗುತ್ತಿಲ್ಲ.
ಪೋಷಕರ ಮನಸ್ಥಿತಿ ಹೇಗಿದೆಯೆಂದರೆ ತನ್ನ ಮಗ ಅಥವಾ ಮಗಳು ತನ್ನ ಕನ್ನಡದಲ್ಲಿ ಏನು ಪ್ರಭುತ್ವವನ್ನು ಪಡೆದಿzನೆಂಬುದಕ್ಕಿಂತ, ಅಂಕಗಳು ಮಾತ್ರ ಬಂದರೆ ಪೂರ್ತಿ ಬಂದರೆ ಸಾಕು ಎನ್ನುವಂತಿದೆ. ಪ್ರಸಕ್ತ ಶೈಕ್ಷಣಿಕ ಪದ್ಧತಿ- ಪಠ್ಯಪುಸ್ತಕ ರಚನೆ- ಶಿಕ್ಷಣದ ಬಗೆಗೆ ಸಾಮಾಜಿಕವಾದ ನಿಲುವುಗಳು ಕೂಡ ಶಿಕ್ಷಣದ ಒಟ್ಟು ಮೌಲ್ಯ ಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಂತದ ಕುಸಿಯುವಂತಿವೆ. 7ನೆಯ ತರಗತಿಯಲ್ಲಿ ಮೊದಲು ಪಬ್ಲಿಕ್ ಪರೀಕ್ಷೆ ಇತ್ತು. ಆಗ ಓದಲೇಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೂ, ಬೋಧನೆ ಮಾಡಲೇ ಬೇಕಾದ ಅನಿವಾರ್ಯತೆ ಶಿಕ್ಷಕರಿಗೂ ಇತ್ತು.
ಈಗ ಪಬ್ಲಿಕ್ ಪರೀಕ್ಷೆ ಇಲ್ಲ. ಎಂಟನೆಯ ತರಗತಿಯವರೆಗೆ ಯಾರನ್ನೂ ಫೇಲ್ ಮಾಡುವಂತಿಲ್ಲ. ಸರ್ವಶಿಕ್ಷಣ ಅಭಿಯಾನದಲ್ಲಿ ಎಲ್ಲರೂ ಪಡೆಯುವಂತಾದ ಶಿಕ್ಷಣ ಯಾವ ಮಟ್ಟದ್ದು ಎಂಬುದು ನಿರ್ಧರಿತವಾಗುವುದು 10ನೆಯ ತರಗತಿಯಲ್ಲಿ. ಅಂದರೆ ೮ರವರೆಗೆ ಫೇಲು ಮಾಡಲು ಶಿಕ್ಷಕರಿಗೆ ಅಧಿಕಾರವಿರಲೇ ಇರಲಿಲ್ಲ ವಾಗಿತ್ತು. (ಈಗಿನ ಕೇಂದ್ರ ಸರಕಾರ ಅಲ್ಲೇ ಅಧಿಕಾರ ಕೊಟ್ಟಿದೆ) ವಿದ್ಯಾರ್ಥಿಗಳ ಮೇಲೆ ಯಾವ ಗೆಯಲ್ಲೂ ನಿಯಂತ್ರಣ ಇಲ್ಲದೇ ಇದ್ದಾಗ ಬೋಧನೆ ಮತ್ತು ಕಲಿಕೆ ಪರಿಣಾಮಕಾರಿಯಾಗಿ ಇರೋದು ಹೇಗೆ ಸಾಧ್ಯ? ಹಿಂದೆ ಈ ಪರಿಸ್ಥಿತಿಯಿರಲಿಲ್ಲ. ಅದರಲ್ಲೂ ಈಗ ಕನ್ನಡ ಕಲಿಕೆಯ ಬಗ್ಗೆ ಇರುವ ಅಸಡ್ಡೆ, ನಿರ್ಲಕ್ಷ್ಯ, ತಾತ್ಸಾರ, ಉದಾಸೀನತೆ ಪೋಷಕರಿಂದ ವಿದ್ಯಾರ್ಥಿಗಳಿಗೂ ರವಾನೆಯಾಗಿ ಕನ್ನಡ ಅಂದರೆ ಅಲರ್ಜಿಯಾಗಿ ಬಿಟ್ಟಿದೆ.
ಅದೂ ಮುಖ್ಯವಾಗಿ ಆಂಗ್ಲಮಾಧ್ಯಮ ಶಾಲೆಗಳಲ್ಲಿ. ಕನ್ನಡವನ್ನು ಕಲಿಯುವ ಆರಂಭದ ಹಂತದಲ್ಲಿ ಸಹಜವಾಗಿ ಕಲಿಯದೆ ಆಂಗ್ಲಭಾಷೆಗೇ ಹೆಚ್ಚು ಮಹತ್ವ ಕೊಟ್ಟು ಒಟ್ಟಾರೆಯಾಗಿ ಕನ್ನಡವನ್ನು ಕಲಿತು, ಕಲಿಸಿ, ಕಲಿಕೆಯ ಮೂಲಾಂಶಗಳಾದ ಆಡುವ, ಕೇಳುವ, ಬರೆಯುವ, ಓದುವ- ಇವುಗಳ ಬಗ್ಗೆ ಯಾವ ಸೂಕ್ಷ್ಮತೆಯೂ ಇಲ್ಲದೆ ಕೇವಲ ಪಾಸಾಗುವಷ್ಟು ಮಾತ್ರ ಅಂಕ ಪಡೆದು ಅಥವಾ ಹೆಚ್ಚಿನ ಶಾಲೆಗಳಲ್ಲಿ ಅಂಕಗಳನ್ನು ಕೊಟ್ಟು ಪಾಸು ಮಾಡುವುದರಿಂದ ಕನ್ನಡದ ಬಗ್ಗೆ ಯಾವ ಸಾಮಾನ್ಯವಾದ ಕಲಿಕೆಯ ಸಾಮರ್ಥ್ಯವೂ ಇಲ್ಲದೆ ಪ್ರೌಢಶಾಲೆಗೆ ಬಂದು 9ನೆಯ ತರಗತಿಯವರೆಗೆ ಪಾಸಾಗಿ 10ನೆಯ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆಯನ್ನು
ಎದುರಿಸಿದಾಗ ಕನ್ನಡದಲ್ಲಿ ಅಂಕ ಕಡಿಮೆ ಬರೋದು ಸಹಜವೇ ಆಗಿರುತ್ತದೆ.
ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಕೆಯ ಬಗ್ಗೆ ಏನೂ ತಲೆಬಿಸಿ ಮಾಡದ ಪೋಷಕರು ಪ್ರೌಢಶಾಲೆಯಲ್ಲಿ ತಮ್ಮ ಮಕ್ಕಳು ಕಡಿಮೆ ಅಂಕ ಪಡೆದಾಗ ಮನೆಗೆ ಬೆಂಕಿ ಬಿದ್ದವರಂತೆ ಒಮ್ಮೆಲೇ ಕಂಗಾಲಾಗಿ ಶಿಕ್ಷಕರ ಮುಂದೆ ಬೊಬ್ಬೆಯಿಡುವುದಕ್ಕೆ ಆರಂಭಿಸುತ್ತಾರೆ. ಇದರ ಅರ್ಥ ಅವರ ಕನ್ನಡದ ಮೇಲಿನ ಅಭಿಮಾನ ಅಲ್ಲ.
ಕನ್ನಡಕ್ಕಿರುವ 125 ಅಂಕಗಳ ಮೇಲಿನ ಅಭಿಮಾನ. 9ನೆಯ ತರಗತಿಯವರೆಗೆ 30ಅಂಕಗಳನ್ನು ಪಡೆದು ಪಾಸಾಗಿ 10ನೆಯ ತರಗತಿಯಲ್ಲಿ ಬೋರ್ಡು ನಡೆಸುವ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಸಿಗಲೇಬೇಕೆಂದು ಅತಿಯಾಸೆ ಪಡುವ ಪೋಷಕರು 1 ರಿಂದ 9ರವರೆಗೆ ತಮ್ಮ ಮಕ್ಕಳ ಕನ್ನಡ ಕಲಿಕೆಯ ಬಗ್ಗೆ ಯಾವ ಎಚ್ಚರವನ್ನೂ ಹೊಂದಿರುವುದಿಲ್ಲ.
10ನೆಯ ತರಗತಿಯಲ್ಲಿ ನಡೆಯುವ 4 ರೂಪಣಾತ್ಮಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅಂಕ ಕಡಿಮೆ ಬಂದಾಗ ಪೋಷಕರು ಕನ್ನಡ ಅಧ್ಯಾಪಕರಲ್ಲಿ ಮಗನ ಕನ್ನಡ
ಕಲಿಕೆಯಲ್ಲಿನ ಲೋಪದೋಷದ ಬಗ್ಗೆ ವಿಚಾರಿಸದೇ ನೇರವಾಗಿ ಅವರ ಬೋಧನೆ, ಮೌಲ್ಯಮಾಪನದ ಬಗ್ಗೆಯೇ ಪ್ರಶ್ನೆಗಳನ್ನು ಮಾಡುತ್ತಾರೆ. ಏರು ದನಿಯಲ್ಲಿ ಮಾತಾಡುತ್ತಾರೆ. ಒಂದು ತಮಾಷೆಯೆಂದರೆ, ಅವರ ಮಕ್ಕಳ ಕನ್ನಡ ಕಲಿಕೆಯ ಸಾಮರ್ಥ್ಯ ಅವರಿಗೆ ಗೊತ್ತಿದ್ದೇ ಆ ಅಧ್ಯಾಪಕರಿಗೆ ಹೀಗೆ ಪ್ರಶ್ನೆಮಾಡುವುದು. ಇದು ಬಹುತೇಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಡೆಯುವಂಥದ್ದು.
ಅದೇ ಪೋಷಕರು ಮುಂದೆ ಪಿಯುಸಿಯಲ್ಲಿ ತಮ್ಮ ಮಕ್ಕಳಿಗೆ ಇಂಗ್ಲಿಷ್ ಅಥವಾ ಹಿಂದಿಯನ್ನು ಓದಿಸುತ್ತಾರೆ. ಅಲ್ಲಿಗೆ ಕನ್ನಡದ ಕತೆ ಆ ಮಕ್ಕಳ ಜೀವನದಲ್ಲಿ ಮುಗೀತು. 1ರಿಂದ 10ರವರೆಗೂ ಕನ್ನಡವನ್ನು ಈ ರೀತಿಯಲ್ಲಿ ಅಭ್ಯಾಸ ಮಾಡಿದ ಮಕ್ಕಳಿಗೆ ಬಸ್ಸಿನ ಬೋರ್ಡನ್ನೂ ಓದಲು ಬರುವುದಿಲ್ಲ. ಆಂಗ್ಲಭಾಷಾ ಮೋಹದ ಪೋಷಕರ ಪ್ರೆಸ್ಟೀಜಿಗೆ ಮಕ್ಕಳ ಕನ್ನಡ ಸತ್ತಿದ್ದು ಹೀಗೆ. ಇದು ಕನ್ನಡದ ಮಕ್ಕಳ ದುರಂತ ಚಿತ್ರಣ. ಇಂಗ್ಲಿಷಿನ ಮಾತಾಡುವ, ಮಾತನಾಡಿಸುವ, ಮಾತಾಡು ವಂತೆ ಆಗ್ರಹಪಡಿಸುವ ಇಂಥ ಶಾಲೆಗಳಲ್ಲಿ ಕಲಿಯುವ ಮಕ್ಕಳು ಕನ್ನಡದಲ್ಲಿ ಹೇಗೆ ಸಾಮಾನ್ಯ ಸಾಮರ್ಥ್ಯವನ್ನು ಪಡೆಯುವುದು? ಅಪ್ಪ ಅಮ್ಮಂದಿರಿಗೂ ತಮ್ಮ ಮಕ್ಕಳು ಇಂಗ್ಲಿಷಿನ ಮಾತಾಡಬೇಕೆಂಬ ಹಠ.
ಫೀಸಿಗಾಗಿ ಹಣ ಹೊಂದಿಸಲು ಎಷ್ಟೇ ಕಷ್ಟವಾದರೂ ಸರಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುವವರೇ ಹೆಚ್ಚಿರುವಾಗ, ಆಂಗ್ಲಭಾಷೆಯ ಹುಚ್ಚೇ ಎಲ್ಲೂ ಹಿಡಿದಿರುವಾಗ ಕನ್ನಡದ ಮೇಲೆ ಕಾಳಜಿಯಾಗಲೀ, ಪ್ರೀತಿಯಾಗಲೀ, ಏಳ್ಗೆಯಾಗಲೀ ಹೇಗೆ ಸಾಧ್ಯ? ಕನ್ನಡ ಕಲಿಕೆಯ ವಾತಾವರಣವನ್ನು ಬಲಗೊಳಿಸಲು ಆಂಗ್ಲಮಾಧ್ಯಮ ಶಾಲೆಗಳು ಅನುಸರಿಸುವ ಕ್ರಮದಲ್ಲಿ ಏರುಪೇರಿದೆ. ಕನ್ನಡವನ್ನು ಮೂಲೆ ಗುಂಪಾಗಿಸಿ ಆಂಗ್ಲಭಾಷೆಯ ಮೋಹ ಬೆಳೆಸುವಲ್ಲಿ ಕಾರ್ಪೋ
ರೇಟ್ ಪ್ರಪಂಚದ ಹುನ್ನಾರವಿದೆ. ಪೋಷಕರು ಅಂಥ ಹುನ್ನಾರಕ್ಕೇ ಒಲಿಯತ್ತಿದ್ದಾರೆ.
ಕನ್ನಡವನ್ನು ಕಲಿಯುವ , ಕಲಿಸುವ ಎರಡೂ ಪರಿಕಲ್ಪನೆಗಳ ವಿನ್ಯಾಸವನ್ನು ಬಲಪಡಿಸದ ಹೊರತು ಕನ್ನಡ ಬೋಧನೆ ಮತ್ತು ಕಲಿಕೆ ಕೃತಕವಾಗೇ ಮುಂದು ವರೆಯುತ್ತದೆ. ಶಿಕ್ಷಕರು ವಿದ್ಯಾರ್ಥಿಯ ಸಾಮರ್ಥ್ಯ ಆಧಾರಿತ ಕಲಿಕೆಗೆ ಮಹತ್ವ ಕೊಡದೆ ಕೇವಲ ಅಂಕಗಳಿಕೆಗೆ ಪೂರಕವಾಗಿ ಪಾಠಾಂಶಗಳನ್ನು ಪ್ರಶ್ನೋತ್ತರ
ರೂಪದಲ್ಲಿ ಕೊಟ್ಟು ಅದನ್ನೇ ಉರುಹೊಡೆಸಿ ಪರೀಕ್ಷೆಗೆ ಬೇಕಾದಷ್ಟು ಸಿದ್ಧಗೊಳಿಸಿ ಅಂಕ ಬರುವಂತೆ ಮಾಡಿ 9ನೇ ತರಗತಿಯವರೆಗೆ ಪಾಸು ಮಾಡುತ್ತಾರೆ. ನಿಜವಾದ ಸಮಸ್ಯೆ ಹುಟ್ಟುವುದು 10ನೆಯ ತರಗತಿಯಲ್ಲಿ.
9 ವರ್ಷಗಳಲ್ಲಿ ಕಲಿಯದ ಕನ್ನಡವನ್ನು ಆಗ ಕಲಿಯಲು ಆರಂಭಿಸಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದೋ ? ವಿಷಯವನ್ನು ಅರ್ಥೈಸಿಕೊಳ್ಳುವುದೋ? ಹೆಚ್ಚು ಅಂಕಗಳನ್ನು ಗಳಿಸುವುದೋ? ಇವೆಲ್ಲವೂ ಒಂದೇ ವರ್ಷದಲ್ಲಿ ಆಗಲು ಸಾಧ್ಯವೇ ಇಲ್ಲ ಎಂಬುದು ಹೆತ್ತವರಿಗೆ ಅರ್ಥವಾಗಲ್ಲ ಅಥವಾ ಅರ್ಥ ಮಾಡಿ ಕೊಳ್ಳಲ್ಲ! ಅಂಕಗಳು ಕಡಿಮೆ ಬಂದುದಕ್ಕೆ ಆ ಶಿಕ್ಷಕರನ್ನೇ ಗುರಿ ಮಾಡಿ ಎಗರಾಡಿ ರಂಪಾಟ ಮಾಡುವ ಬದಲು ತಮ್ಮ ಮಕ್ಕಳ ಕನ್ನಡ ಕಲಿಕೆಯನ್ನು ಉತ್ತಮ ಗೊಳಿಸಿಕೊಳ್ಳಲು ಬೇಕಾದ ರಚನಾತ್ಮಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬೇಕೆಂಬ ಸಾಮಾನ್ಯ ಅರಿವು ಪೋಷಕರಿಗೆ ಇರಬೇಕು.
ಒಂಬತ್ತು ವರ್ಷಗಳಲ್ಲಿ ಚೆನ್ನಾಗಿ ಕಲಿಯದೆ 10ನೆಯ ತರಗತಿಗೆ ಬೇಕಾದಷ್ಟು ಸಿದ್ಧತೆ ಮಾಡಿ, 10ನೆಯ ತರಗತಿಯಲ್ಲಿ ಒಮ್ಮೆಲೇ ಕಲಿಕಾ ಸಾಮರ್ಥ್ಯವೂ, ಅಂಕವೂ ಪ್ರಗತಿಯಾಗಬೇಕೆಂದರೆ ಹೇಗೆ ಸಾಧ್ಯ? ಒಂದು ಶಾಲೆಯ ಅಸ್ತಿತ್ವವನ್ನು, ಗುಣಮಟ್ಟವನ್ನು ಅದು ಹೊಂದಿರುವ ಕಲಿಕಾ ಮಾಧ್ಯಮದ ಮೇಲೆ ಹಾಗೂ
10ನೆಯ ತರಗತಿ ಫಲಿತಾಂಶದ ಮೇಲೆ ನಿರ್ಧರಿತವಾಗುತ್ತಿರುವ ವರ್ತಮಾನದಲ್ಲಿ ಪ್ರತಿ ಶಾಲೆಯೂ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಸರ್ವಾಂಗೀಣ ವಾಗಿ ಹೊಂದಿರಬೇಕಾಗುತ್ತದೆ.
ನಾವು ಲಕ್ಷಗಟ್ಟಲೆ ಫೀಸು ಕಟ್ಟುತ್ತೇವೆ, ಅದರಿಂದ ನಮಗೆ ಅಂಕಗಳು ಬೇಕು ಎಂದು ಪೋಷಕರಾಗಲೀ, ನಾವು ನಿಮಗೆ ಕೈತುಂಬಾ ಸಂಬಳ ಕೊಡುತ್ತೇವೆ, ಆದ್ದರಿಂದ ಫಲಿತಾಂಶದಲ್ಲಿ ನಮ್ಮ ಶಾಲೆಯೇ ಅತ್ಯುತ್ತಮ ಸ್ಥಿತಿಯಲ್ಲಿರಬೇಕೆಂದು ಮ್ಯಾನೇಜ್ಮೆಂಟಿನವರು ಆಗ್ರಹವನ್ನು ಶಿಕ್ಷಕರ ಮೇಲೆ ಬಲವಂತವಾಗಿ ಹೊರಿಸಿದಾಗ ಸಾಮರ್ಥ್ಯ ಆಧಾರಿತ ಕಲಿಕೆ ಕುಸಿದು ಕೇವಲ ಅಂಕಗಳಿಕೆಗಾಗಿ ಸುಲಭದ ಮಾರ್ಗವನ್ನು ಕಂಡುಕೊಳ್ಳಲು ಮುಂದಾಗಿರುವುದರಿಂದಲೇ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವುದು.
ಸಾಕ್ಷರರ ಪ್ರಮಾಣ ಹೆಚ್ಚಾಗಬಹುದೇ ಹೊರತು ಕಲಿಕೆಯ ನಿಜವಾದ ಉದ್ದೇಶ ವರ್ತಮಾನದಲ್ಲಿ ಈಡೇರುತ್ತಿಲ್ಲ. ಅದರಲ್ಲೂ ಅನ್ನವನ್ನು ಹುಟ್ಟಿಸದ ಭಾಷೆಯೆಂದೇ ತಿಳಿಯಲಾದ ಕನ್ನಡವಂತೂ ವರ್ಷದಿಂದ ವರ್ಷಕ್ಕೆ ಶಿಕ್ಷಣರಂಗದಲ್ಲಿ ಸೊರಗುತ್ತಿದೆ. ಇಂಗ್ಲಿಷನ್ನು ಕಲಿಸುವ ಕ್ರಮಕ್ಕೂ ಕನ್ನಡವನ್ನು ಕಲಿಸುವ ರೀತಿಗೂ ಕಲಿಸುವ ಹಂತದಲ್ಲಿ ಅಪಾರ ವ್ಯತ್ಯಾಸವಿದೆ ಎಂಬುದೇ ಹಲವರಿಗೆ ಗೊತ್ತಿದ್ದಂತಿಲ್ಲ. ಬೇರು ಗಟ್ಟಿಗೊಳ್ಳುವಂತೆ ಗಿಡವನ್ನು ಬೆಳೆಸಬೇಕು. ಮರವಾದ ಮೇಲೆ ಬೇರನ್ನು ಗಟ್ಟಿಗೊಳಿಸುವುದಕ್ಕೆ ಮುಂದಾದರೆ ಪ್ರಯತ್ನ ವ್ಯರ್ಥವಾದೀತು. ಪ್ರಾಥಮಿಕ ಹಂತದಲ್ಲಿ ಕಲಿಕೆ ಸರಿಯಾಗಿ ನಡೆಯುತ್ತಿದೆಯೇ ಎಂದು ಪೋಷಕರು ತಮ್ಮ ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಪದೇ ಪದೇ ಗಮನಿಸಿ ಅರಿಕೆ ಮಾಡಿಕೊಳ್ಳಬೇಕು. ಶಿಕ್ಷಕರು ಆ ಕೆಲಸವನ್ನು ಶಾಲೆಯಲ್ಲಿ ಮಾಡಿಯೇ ಮಾಡುತ್ತಾರೆ. ಆದರೆ
ಮನೆಯಲ್ಲೂ ಅದಕ್ಕೆ ಪೂರಕವಾದ ಸನ್ನಿವೇಶವನ್ನು ಒದಗಿಸುವುದು ಪೋಷಕರ ಕರ್ತವ್ಯ.
ಮಾತೃಭಾಷೆಯನ್ನು ಚೆನ್ನಾಗಿ ಕಲಿತರೆ ಉಳಿದ ಭಾಷಿಕ ವಿನ್ಯಾಸಗಳು ಅರಿವಿಗೆ ತಾನಾಗಿಯೇ ವಿಸ್ತರಿಸಿಕೊಳ್ಳುತ್ತದೆಂಬುದು ಭಾಷಾತಜ್ಞರ ಅಭಿಪ್ರಾಯ. ಆಂಗ್ಲ ಕಲ್ಪಿತ ಭ್ರಮಾಲೋಕದಲ್ಲಿ ನಮ್ಮ ಮಕ್ಕಳಿಗೆ ವಿಷಯeನವೂ ಭಾಷಾeನವೂ ಸಿಗದಂತೆ ವಂಚಿಸುತ್ತಿದ್ದೇವೆ. ಇಂಗ್ಲಿಷ್ ಒಂದೇ ಕಲಿತರೆ ಸಾಕೆನ್ನುವ ಮನಸ್ಥಿತಿ ಇದ್ದರೆ ಕನ್ನಡ ಕಲಿಕೆ ನಾಟಕೀಯವಾಗಿ ಕುಂಟುತ್ತಾ ಸಾಗುತ್ತದೆ. ಇದು ಪೋಷಕರಿಗೂ, ಸರಕಾರಕ್ಕೂ, ಮ್ಯಾನೇಜ್‌ಮೆಂಟನವರಿಗೂ ಅರ್ಥವಾಗಬೇಕಾದ ಸಂಗತಿ.
ಇಲ್ಲವಾದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಅಂಕಗಳು ಬಂದಿವೆ ಎಂಬ ಭ್ರಮೆ ಪೋಷಕರಿಗೂ, ನಮ್ಮ ಶಾಲೆಯ ಶಿಕ್ಷಣವೇ ತುಂಬಾ standard ಆಗಿದೆಯೆಂಬ ಮೇಲರಿಮೆಯ ಭ್ರಮೆ ಮ್ಯಾನೇಜ್ಮೆಂಟನವರಿಗೂ, ನಮ್ಮ ರಾಜ್ಯವೇ ಕಲಿಕೆಯಲ್ಲಿ ಮುಂದಿದೆ ಎಂಬ ಅತ್ಮತಪ್ತಿ ಸರಕಾರಕ್ಕೆ ಇದ್ದು ಬಿಡುತ್ತದೆ. ಸರಕಾರ ಜಾರಿಗೆ ತರುವ ಶೈಕ್ಷಣಿಕ ಪದ್ಧತಿಗಳು ನಿಜವಾಗಿ ವಿದ್ಯಾರ್ಥಿಯ ಸಾಮರ್ಥ್ಯ ಆಧಾರಿತ ಕಲಿಕೆಗೆ ಪ್ರೇರಣೆ ನೀಡಬೇಕು. ಆ ಹಿನ್ನೆಲೆಯಲ್ಲಿ ನೋಡಿದರೆ ಪ್ರಸ್ತುತ ಇರುವ
CCE ಪದ್ಧತಿ ಸೂಕ್ತವಾಗಿಲ್ಲ ಎಂಬುದು ಸರ್ವವಿದಿತ.
ಯಾಕೆಂದರೆ ಸಿಸಿಇ ಪದ್ಧತಿಯಲ್ಲಿ ಬಹುಸಾಮರ್ಥ್ಯವಿರುವ ವಿದ್ಯಾರ್ಥಿಯಂತೆ ಪೂರ್ಣಪ್ರಮಾಣದ ಆಂತರಿಕ ಅಂಕಗಳನ್ನು ಸಾಮಾನ್ಯ ಕೌಶಲವಿರುವ ವಿದ್ಯಾರ್ಥಿಯೂ ಪಡೆಯುವಂತೆ ಈ ಶಿಕ್ಷಣ ಪದ್ಧತಿಯಿದೆ. ದಡ್ಡರನ್ನು ಉದ್ಧರಿಸಬೇಕೆಂದು ಬುದ್ಧಿವಂತರಿಗೆ ಅನ್ಯಾಯ ಮಾಡಬಾರದು. ಸಿಸಿಇಯಲ್ಲಿ ಕನ್ನಡ ಕಲಿಕೆಗಂತೂ ತೀರಾ ಮಾರಕವಾಗಿರುವುದರಿಂದ ಹೇಗಾದರೂ ಮಾಡಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗುವಷ್ಟು ಅಂಕ ಪಡೆಯಲು ಉಪಾಯವನ್ನು
ತೋರಿಸಿ ಚಟುವಟಿಕೆಗಳ ಮೂಲಕ ಆಂತರಿಕ ಅಂಕಗಳನ್ನು ಹೆಚ್ಚು ಕೊಟ್ಟಾಗ ಕೊನೆಯ ಪಕ್ಷ – ಕ್ಲಾಸಿಗಂತೂ ದೋಖಾ ಇಲ್ಲದಂತೆ ಮ್ಯಾನೇಜ್ ಮಾಡಿಕೊಳ್ಳ ಬಹುದು.
ಇದು ಪಬ್ಲಿಕ್ ಸೀಕ್ರೆಟ್. ಕನ್ನಡ ಕಲಿಯಬೇಕೆಂಬ ಅಭಿಮಾನ ಕೇವಲ ಹತ್ತನೆಯ ತರಗತಿಯಲ್ಲಿ ಪಾಸು ಮಾಡುವುದಕ್ಕೆ ಮಾತ್ರ ಸಾಕೆಂಬ ಪೋಷಕರ ಮನಸ್ಥಿತಿ ಮೊದಲು ಬದಲಾಗಬೇಕಿದೆ. ಸದ್ಯಕ್ಕೆ ಬಂದುದನ್ನು ಹೇಗೂ ಪರಿಹರಿಸಿಕೊಂಡರಾಯಿತು ಎಂಬ ಜಾರಿಕೊಳ್ಳುವ ಬುದ್ಧಿಯೇ ಕನ್ನಡದ ಅಸ್ತಿತ್ವಕ್ಕೆ ಶಾಶ್ವತವಾದ ಧಕ್ಕೆ ನೀಡುತ್ತಿದೆ. ಒಂದರಿಂದಲೇ ಮಾತೃಭಾಷೆಯಾದ ಕನ್ನಡವನ್ನು ಚೆನ್ನಾಗಿಯೇ ಕಲಿಸಿ ಎಲ್ಲ ಚಿಂತನೆಗಳು, ಆದರ್ಶಗಳು ಇಂಗ್ಲಿಷನ್ನು ಕಲಿತರೂ ಮಾತೃಭಾಷೆಯ ಹುಟ್ಟುವಂತೆ ತುರ್ತಿನ ಮನುಷ್ಯರಾಗುತ್ತಲೇ ಶಾಶ್ವತ ನೆಲೆಗೆ ಸಲ್ಲುವ ಕನ್ನಡವನ್ನು ನಮ್ಮ ಮಕ್ಕಳು ಕಲಿಯುವುದಕ್ಕೆ ಪೋಷಕರು, ಶಾಲೆ, ಸಮಾಜ ಹಾಗೂ ಸರಕಾರ ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ.
ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡದ, ಕನ್ನಡದ ಪತ್ರಿಕೆಗಳನ್ನು ಓದದ, ಕನ್ನಡ ಸುದ್ದಿವಾಹಿನಿಗಳನ್ನು ನೋಡದ, ಕನ್ನಡದಲ್ಲಿ ಮಾತಾಡದ, ಆದರೆ ಕನ್ನಡದಲ್ಲಿ ಮಾತ್ರ 125ಕ್ಕೆ 125ಅಂಕಗಳೇ ಬರಬೇಕೆನ್ನುವ ಮನಸ್ಥಿತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಆಂಗ್ಲಭಾಷಾ ಮಾಧ್ಯಮದ ಕಲ್ಪಿತ ಭ್ರಮಾಲೋಕದಲ್ಲಿ ಕನ್ನಡ ಬೋಧನೆಯೆಂಬುದು ಒಂದು ಪ್ರಹಸನವಾಗೇ ಇರುತ್ತದೆ. ಎಲ್ಲರೂ ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗಳಿಗೆ ಸೇರಿಸುವುದಕ್ಕೆ ಹಾತೊರೆಯುವುದರಿಂದ ಈ ಮಾತು ಸದ್ಯಕ್ಕೆ ಕನ್ನಡ ಮಾಧ್ಯಮದ ಶಾಲೆಗಳಿಗೆ ಹೊರತಾಗಿದೆ.