ನವದೆಹಲಿ: ಛತ್ರಸಲ್ ಕ್ರೀಡಾಂಗಣದಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿ ಪಟು ಸುಶೀಲ್ ಕುಮಾರ್ ಮತ್ತು 19 ಇತರ ಮಂದಿ ವಿರುದ್ಧ ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಸುಶೀಲ್ ಕುಮಾರ್ ಅವರನ್ನು ಮುಖ್ಯ ಆರೋಪಿಯನ್ನಾಗಿ ಹೆಸರಿಸಿದ ಅಂತಿಮ ವರದಿಯನ್ನು ಮುಖ್ಯ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಸತ್ವೀರ್ ಸಿಂಗ್ ಲಂಬಾ ಅವರಿಗೆ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಹದಿನೈದು ಆರೋಪಿಗಳನ್ನು ಬಂಧಿಸಲಾಗಿದ್ದು, ಐವರು ತಲೆಮರೆಸಿಕೊಂಡಿದ್ದಾರೆ.
ಮೇ 4ರ ಮಧ್ಯರಾತ್ರಿ ಸುಶೀಲ್ ಕುಮಾರ್ ಮತ್ತು ಆತನ ಸಹಚರರು, ಕುಸ್ತಿಪಟು ಸಾಗರ್ ಧನ್ಕರ್ ಹಾಗೂ ಅವನ ಇಬ್ಬರು ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಧನ್ಕರ್ ಮೃತಪಟ್ಟಿದ್ದರು.
ಸುಶೀಲ್ ಅವರೇ ಪ್ರಕರಣದ ‘ಪ್ರಮುಖ ಆರೋಪಿ ಮತ್ತು ಕೊಲೆಯ ಮಾಸ್ಟರ್ ಮೈಂಡ್’ಎಂದು ಪೊಲೀಸರು ಆರೋಪಿಸಿದ್ದರು.