Wednesday, 30th October 2024

ಅರ್ಚಕರೊಂದಿಗೆ ಅನುಚಿತ ವರ್ತನೆ: ಬಿಜೆಪಿ ಸಂಸದರ ವಿರುದ್ದ ಪ್ರಕರಣ ದಾಖಲು

ಡೆಹ್ರಾಡೂನ್: ಜಗೇಶ್ವರ ಧಾಮ ದೇವಸ್ಥಾನದಲ್ಲಿ ಗಲಭೆ ಸೃಷ್ಟಿಸಿದ ಮತ್ತು ಅರ್ಚಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಓನ್ಲಾದ ಬಿಜೆಪಿ ಸಂಸದ ಧರ್ಮೇಂದ್ರ ಕಶ್ಯಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಅರ್ಚಕರೊಂದಿಗೆ ಕಶ್ಯಪ್ ಮತ್ತು ಆತನ ಸಹಚರರು ತೀವ್ರ ವಾಗ್ವಾದದಲ್ಲಿ ತೊಡಗಿರುವ ವಿಡಿಯೋ ವೈರಲ್ ಆದ ಮಾರನೆ ದಿನ ಬಿಜೆಪಿ ಸಂಸದರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ರಾಜ್ಯ ಬಿಜೆಪಿ, ಘಟನೆಯ ಕುರಿತು ವಿವರಗಳನ್ನು ಸಂಗ್ರಹಿಸುತ್ತಿದೆ ಮತ್ತು ಕೇಂದ್ರ ನಾಯಕರಿಗೆ ತಿಳಿಸುವುದಾಗಿ ಹೇಳಿದೆ.

ಕಶ್ಯಪ್ ಮತ್ತು ಆತನ ಸಹಚರರು ಶನಿವಾರ ಮಧ್ಯಾಹ್ನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕೋವಿಡ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಪ್ರತಿದಿನ ಸಂಜೆ 6 ಗಂಟೆಗೆ ದೇವಾಲಯ ಮುಚ್ಚಲಾಗುತ್ತದೆ. ಆದರೆ 6.30 ಆದರೂ ಸಂಸದ ಮತ್ತು ಆತನ ಸ್ನೇಹಿತರು ದೇವಸ್ಥಾನದ ಒಳಗೆ ಇದ್ದರು ಎಂದು ಜಗೇಶ್ವರ ಧಾಮ ಮಂದಿರ ಸಮಿತಿ ವ್ಯವಸ್ಥಾಪಕ ಭಗವಾನ್ ಭಟ್ ಹೇಳಿದ್ದಾರೆ.