ನಾಟಿಂಗಮ್: ಆಗಸ್ಟ್ ನಾಲ್ಕರಿಂದ ಭಾರತ-ಇಂಗ್ಲೆಂಡ್ ಮಧ್ಯೆ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ವೇಳೆ, ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ದಾಖಲೆ ಬರೆಯುವ ಸಾಧ್ಯತೆಯಿದೆ.
ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆಗಸ್ಟ್ 4 ರಿಂದ ಆರಂಭವಾಗಲಿದೆ. ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿಗೆ ಅವಕಾಶ ನೀಡುವ ನಿರೀಕ್ಷೆಯಿದೆ. ಶಮಿ ಇದುವರೆಗೆ ಟೀಂ ಇಂಡಿಯಾ ಪರ 51 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 184 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶಮಿ 16 ವಿಕೆಟ್ ಪಡೆದರೆ, ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದಂತಾಗುತ್ತದೆ.
ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ( 619 ವಿಕೆಟ್ )ಮೊದಲ ಸ್ಥಾನದಲ್ಲಿದ್ದಾರೆ. ಕಪಿಲ್ ದೇವ್ 434 ವಿಕೆಟ್, ಹರ್ಭಜನ್ ಸಿಂಗ್ 417 ವಿಕೆಟ್ ಹಾಗೂ ಆರ್. ಅಶ್ವಿನ್ 413 ವಿಕೆಟ್ ಪಡೆದಿದ್ದಾರೆ. ಜಹೀರ್ ಖಾನ್ 311 ವಿಕೆಟ್ ಹಾಗೂ ಇಶಾಂತ್ ಶರ್ಮಾ 306 ವಿಕೆಟ್ ಪಡೆದಿದ್ದಾರೆ.
ಬಿಶನ್ ಸಿಂಗ್ ಬೇಡಿ 266 ವಿಕೆಟ್ ಪಡೆದರೆ, ಬಿಎಸ್ ಚಂದ್ರಶೇಖರ್ 242 ವಿಕೆಟ್ ಪಡೆದಿದ್ದಾರೆ. ಜಾವಗಲ್ ಶ್ರೀನಾಥ್ 236, ರವೀಂದ್ರ ಜಡೇಜಾ 221, ಮೊಹಮ್ಮದ್ ಶಮಿ 184 ವಿಕೆಟ್ ಪಡೆದಿದ್ದಾರೆ.