Friday, 20th September 2024

ಜಾವೆಲಿನ್ ಥ್ರೋ: ಶಿವಪಾಲ್ ಸಿಂಗ್ ವಿಫಲ, ಫೈನಲ್ಸ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ

ಟೋಕಿಯೊ: ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ಶಿವಪಾಲ್ ಸಿಂಗ್, ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.

ಭಾರತದ ಅಗ್ರ ಸ್ಪರ್ಧಿ ನೀರಜ್ ಚೋಪ್ರಾ ಸಾಧನೆಯನ್ನು ಸಮಗಟ್ಟುವಲ್ಲಿ ವಿಫಲರಾದರು. ‘ಬಿ’ ಗುಂಪಿನಲ್ಲಿ ಸ್ಪರ್ಧಿಸಿದ್ದ ಶಿವಪಾಲ್ ಸಿಂಗ್ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 76.40, 74.80 ಹಾಗೂ 74.81 ಮೀಟರ್ ದೂರ ಜಾವೆಲಿನ್ ಎಸೆದರು.

ಅರ್ಹತಾ ಸುತ್ತಿನಲ್ಲಿ ಒಟ್ಟು 31 ಅಥ್ಲೀಟ್‌ಗಳು ಭಾಗವಹಿಸಿದ್ದು, ಫೈನಲ್ಸ್‌ಗೆ ಅಗ್ರ 12 ಅಥ್ಲೀಟ್‌ಗಳು ಅರ್ಹತೆ ಪಡೆದಿದ್ದಾರೆ.

ಭಾರತದ ಎರಡನೇ ಶ್ರೇಷ್ಠ ಜಾವೆಲಿನ್ ಎಸೆತಗಾರ ಶಿವಪಾಲ್ ಗರಿಷ್ಠ 76.40 ಮೀಟರ್ ದೂರ ಜಾವೆಲಿನ್ ಎಸೆದರೂ ಇದು ಫೈನಲ್‌ಗೆ ಪ್ರವೇಶಿಸಲು ಅರ್ಹವಾಗಲಿಲ್ಲ. ‘ಎ’ ಗುಂಪಿನ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿರುವ ನೀರಜ್ ಚೋಪ್ರಾ, ಮೊದಲ ಪ್ರಯತ್ನದಲ್ಲಿಯೇ 86.5 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೇರವಾಗಿ ಫೈನಲ್ಸ್‌ಗೆ ಅರ್ಹತೆ ಪಡೆದರು.

ಪಾಕಿಸ್ತಾನದ ಆರ್ಶದ್ ನದೀಮ್ 85.16 ದೂರ ಜಾವೆಲಿನ್ ಎಸೆಯುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ.