Friday, 20th September 2024

ಅತ್ಯಾಚಾರ ಸಮಸ್ಯೆಗೆ ವೇಶ್ಯಾವಾಟಿಕೆ ಪರಿಹಾರವೇ ?

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಇಂತಹ ಸುದ್ದಿ ಕೇಳಿದಾಗಲೆಲ್ಲ ಮೈ ಕೈ ರಕ್ತ ಕುದಿಯುತ್ತದೆ. ಒಂದು ರೀತಿಯ ಅಸಹಾಯಕತೆ, ಹತಾಷೆ, ಸಮಾಜದೆಡೆಗೆ ವೈರಾಗ್ಯ. ಛೇ, ಇಂತಹ ಸ್ಥಿತಿ, ಮೃಗೀಯ ಜನರು ನಮ್ಮ ನಡುವೆ ಇದ್ದಾರೆಯೇ ಎನ್ನುವ ಪ್ರಶ್ನೆ. ಇವರೆಲ್ಲ ಸಮಾಜದಲ್ಲಿ ಬದುಕಲೇ ನಾಲಾಯಕ್ ಎಂದೆನಿಸುತ್ತದೆ.

ಅದೆಲ್ಲೋ ಇರುವ ದೆಹಲಿ, ಅಲ್ಲೊಂದು ಹೆಣ್ಣು ಮಗು, 9 ವರ್ಷದ ಹಸುಗೂಸನ್ನು ರೇಪ್ ಮಾಡಿ ಸುಟ್ಟುಬಿಡುತ್ತಾರೆ ಎಂದರೆ ಪುರಾಣಗಳಲ್ಲಿ ಬರುವ ರಾಕ್ಷಸರೆಂದರೆ ಇಂಥವರೇ ಇರಬಹುದೇ ಎನ್ನುವ ಪ್ರಶ್ನೆ ಮೂಡುತ್ತದೆ. ಇಂತಹ ಅಮಾನುಷರ ಎದುರು ಕಥೆಗಳಲ್ಲಿ ಕೇಳುವ ರಾಕ್ಷಸರೂ ಕೆಲವೊಮ್ಮೆ ತೀರಾ ಸಾಚಾ, ಡಿಗ್ನಿಫೈಡ್ ಎಂದೆನಿಸಿಬಿಡುತ್ತಾರೆ. ಅದೆಂತಹ ಮೃಗವನ್ನು ಕೂಡ ಕ್ಷಮಿಸಿಬಿಡಬಹುದು ಆದರೆ ಇಂಥವರಿಗೆ ಮರಣ ದಂಡನೆ ಕೂಡ ಕಡಿಮೆ ಅನ್ನಿಸಿಬಿಡುತ್ತದೆ. ಅದೆಷ್ಟೇ ಅಹಿಂಸಾ ಪ್ರತಿಪಾದಕರಾದರೂ ಇಂಥಹ ಸುದ್ದಿ ಕೇಳಿದಾಗ ಇವರಿಗೆಲ್ಲ ಸುಲಭದ, ನೇರ ಮರಣ ಕೂಡ ನ್ಯಾಯವಲ್ಲ ಎಂದೆನಿಸುತ್ತದೆ. ಈ ದೆಹಲಿಯಲ್ಲಾದ ಹೇಯ ಕೃತ್ಯ ದೇಶದಲ್ಲೆಲ್ಲ ನಿನ್ನೆ ಸುದ್ದಿಯಾಗಿ ಇವತ್ತು ಬಹುತೇಕ ಅಂತಾ ರಾಷ್ಟ್ರೀಯ ಸುದ್ದಿ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಜಗತ್ತಿನಲ್ಲೆಲ್ಲ ಹರಡಿದೆ.

ದಲಿತ ಎಂಬ ಜಾತಿ ವಿಚಾರ ಇದೆಲ್ಲದರ ಜತೆ ಅಂಟಿಕೊಂಡಿರುವುದು ಬೇರೆ. ಒಂದು ಕಡೆ ಪಿ.ವಿ.ಸಿಂಧು ಕಂಚಿನ ಪದಕ ಹಿಡಿದ ಚಿತ್ರ – ಅದರ ಪಕ್ಕದಲ್ಲೇ ಒಂಭತ್ತು ವರ್ಷದ ಹಸುಗೂಸಿನ ರೇಪ್ ಆದ ಸುದ್ದಿ. ಅದೆಂಥಹ ವೈರುದ್ಧ್ಯ !!? ನಮ್ಮ ದೇಶದಲ್ಲಿ ರಿಪೋರ್ಟ್ ಆಗುವ ರೇಪ್ ಸಂಖ್ಯೆಯ ಪ್ರಕಾರ ಜಗತ್ತಿನ ದೇಶಗಳ ಪಟ್ಟಿ ಯಲ್ಲಿ ಅರವತ್ತನೇ ಸ್ಥಾನದಲ್ಲಿದೆ. ಇದರರ್ಥ ನಮ್ಮಲ್ಲಿ ಆಗುವ ರೇಪ್‌ಗಳಿಗೆ ನೇರ ಅನುಪಾತ ಕಲ್ಪಿಸುವಂತಿಲ್ಲ, ನಾವು ಇಲ್ಲಿದ್ದೇವೆ – ಅವರು ಅಲ್ಲಿದ್ದಾರೆ ಎಂದೆಲ್ಲ ತಾಳೆ ಲೆಕ್ಕ ಹಾಕುವಂತಿಲ್ಲ. ರಿಪೋರ್ಟ್ ಆಗುವ ಸಂಖ್ಯೆ – ಸಮಾಜ, ಕಾನೂನು ಸ್ಥಿತಿ, ಅದು ವ್ಯವಹರಿಸುವ ರೀತಿ ಹೀಗೆ ಹತ್ತಾರು ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ.

ಅತ್ಯಾಚಾರ – ಇದೇನು ನಮ್ಮ ದೇಶವೊಂದರದ್ದೇ ಕಥೆ – ವ್ಯಥೆ ಅಂದುಕೊಳ್ಳಬೇಡಿ. ಮಧ್ಯಪ್ರಾಚ್ಯ ದೇಶಗಳನ್ನು ಬಿಟ್ಟು ಉಳಿದ ದೇಶಗಳ ಹಣೆಬರಹವೂ ಅದೇ
– ಸ್ವಲ್ಪ ಹೆಚ್ಚು ಕಡಿಮೆ ಅಷ್ಟೇ. ದಕ್ಷಿಣ ಆಫ್ರಿಕಾ, ಅಮೆರಿಕ, ಸ್ವೀಡನ್, ಬೆಲ್ಜಿಯಂ, ಸ್ಪೇನ್ ಸೇರಿದಂತೆ ಮೊದಲಾದ ದೇಶಗಳ ರೇಪ್ ಸ್ಟ್ಯಾಟಿಸ್ಟಿಕ್ಸ್ ನೋಡಿದರೆ ಬೆಚ್ಚಿ ಬೀಳುವಂತಿದೆ. ಕೆಲವು ದೇಶಗಳು ಅಲ್ಲಿ ಆಗುವ ಅತ್ಯಾಚಾರಗಳ ಲೆಕ್ಕವನ್ನು ಸಾರ್ವಜನಿಕವಾಗಿ ಪ್ರಕಟಿಸುವುದೇ ಇಲ್ಲ. ಎಲ್ಲ ಸಭ್ಯ ದೇಶಗಳಲ್ಲೂ ಇಂತಹ ತೀರಾ ಅಮಾನವೀಯ ಕೃತ್ಯ ನಡೆದಾಗ ಒಂದಿಷ್ಟು ಸುದ್ದಿ, ಚರ್ಚೆ ಮತ್ತು ಸಭ್ಯ ಜನರ ಅಸಹಾಯಕತೆ ಮತ್ತು ಹತಾಶೆ ಮುನ್ನೆಲೆಗೆ ಬರುತ್ತದೆ.

ಸಂಖ್ಯೆ ಹೆಚ್ಚಿದಾಗಲೆಲ್ಲ ಜನರಲ್ಲಿ ಇನ್ನಷ್ಟು ಇನ್ಸೆನ್ಸಿಟಿವಿಟಿ ಹೆಚ್ಚುತ್ತ ಹೋಗುತ್ತದೆ. ನಿರ್ಭಯಾ ಕೇಸ್‌ನ ಸಮಯದಲ್ಲಿ, ಅದಕ್ಕಿಂತ ಮೊದಲು ಮತ್ತು ಆಮೇಲೆ ಅದೆಷ್ಟೋ ಇಂತಹ ಅಮಾನವೀಯ ಕೃತ್ಯಗಳು ನಡೆದಿವೆ – ಎಲ್ಲವೂ ಅಷ್ಟು ಪ್ರಚಾರ ಪಡೆದುಕೊಂಡಿಲ್ಲ. ಕೆಲವು ಫಕ್ಕನೆ ಸುದ್ದಿಯಾಗಿ ಮಾರನೆಯ ದಿನವೇ ಮಸುಕಾಗಿ ಹೋಗಿದೆ. ಹೀಗಾದಾಗಲೆಲ್ಲ – ಇದೆಲ್ಲ ಇರುವುದೇ ಹೀಗೆ – ಏನೂ ಮಾಡಲಿಕ್ಕೆ ಸಾಧ್ಯವಿಲ್ಲ ಎಂಬಿತ್ಯಾದಿ ಮಾತುಗಳು ಒಬ್ಬ ಸಹೃದಯಿ ನಾಗರಿಕನ ಹೃದಯವನ್ನು ಹಿಂಡುತ್ತದೆ. ರೇಪ್ ಕೇವಲ ಮಹಿಳೆಯರ ಮೇಲಷ್ಟೇ ಆಗುವುದಲ್ಲ – ಪುರುಷರ ಮೇಲೆ, ಅದರಲ್ಲಿಯೂ ಅಪ್ರಾಪ್ತ ಬಾಲಕರ ಮೇಲೆ ಕೂಡ ಆಗುತ್ತದೆ
ಎನ್ನುವುದೆಲ್ಲ ತಿಳಿದ ವಿಚಾರವೇ ಸರಿ. ಆದರೆ ಹೆಣ್ಣಿನ ಮೇಲೆ ಆಗುವ ಅತ್ಯಾಚಾರ ಯಾವುದೇ ದೇಶ ರಾಜ್ಯ ತೆಗೆದುಕೊಂಡರೂ ಅದರ ಪ್ರಮಾಣ ಐದಾರು ಪಟ್ಟು ಹೆಚ್ಚು.

ಸಾಮಾನ್ಯವಾಗಿ ಇಂತಹ ಘಟನೆಯಾದಾಗ ಎಲ್ಲ ಸಮಾಜದಲ್ಲಿ, ದೇಶದಲ್ಲಿ ಇದರ ಪರಿಹಾರೋಪಾಯದ ಬಗ್ಗೆ ಒಂದಿಷ್ಟು ಚರ್ಚೆಯಾಗುತ್ತದೆ. ನಮ್ಮಲ್ಲಿಯೂ ದುಬೈ, ಮಧ್ಯ ಪ್ರಾಚ್ಯ ದೇಶಗಳಂತೆ ಕಠಿಣ ಕಾನೂನು ಬೇಕು, ತ್ವರಿತ ನ್ಯಾಯ ವಿಲೇವಾರಿ, ಸ್ಪೆಷಲ್ ಕೋರ್ಟ್ ಬೇಕು ಎಂಬಿತ್ಯಾದಿ ಕಾನೂನಿನ ಬದಲಾವಣೆಯ ಮಾರ್ಗವೇ ಸರಿ ಎನ್ನುವುದು ಒಂದು ವರ್ಗದ ಮಂದಿಯ ಅಭಿಪ್ರಾಯ. ಇನ್ನು ಕೆಲವರ ವಾದ ಸಮಾಜದಲ್ಲಿ ಮೌಲ್ಯಕ್ಕೆ ಸಂಬಂಧಿಸಿದ್ದು. ಮತ್ತೊಂದು ವರ್ಗದ ವಾದ ವೇಶ್ಯಾವಾಟಿಕೆಯನ್ನು ಸಮಾಜ ಒಪ್ಪಿಕೊಳ್ಳಬೇಕು, ಅದೇ ಪರಿಹಾರ ಎನ್ನುವುದು. ಒಟ್ಟಾರೆ ನಮ್ಮ ಸುತ್ತಲೂ ಆಗಿ ಹೋಗುವ ಅತ್ಯಾಚಾರಗಳಿಗೆ ಪರಿಹಾರ ಹುಡುಕಿ ಹೊರಟಾಗ ಎದುರಿಗೆ ಸಿಗುವ ಎಲ್ಲ ವಿಚಾರಗಳಲ್ಲಿಯೂ ಒಂದೊಂದು ನ್ಯೂನತೆಗಳು ಪುನಃ ಮುನ್ನೆಲೆಗೆ ಬಂದು ಒಂದಿಷ್ಟು ಗೊಂದಲಗಳಾಗುತ್ತವೆ.

ಎಲ್ಲವೂ ಆಗ ಬೇಕು – ಕಾನೂನು ಬದಲಾಯಿಸಿಕೊಳ್ಳುವುದರ ಜತೆ ವೇಶ್ಯಾವಾಟಿಕೆ ಕೂಡ ಇರಬೇಕು ಎನ್ನುವ ಮಿಶ್ರ ವಾದ ಮಂಡಿಸುವ ಇನ್ನೊಂದು ವರ್ಗವೂ ಇದೆ. ವೇಶ್ಯಾವಾಟಿಕೆಯ ಜಾಗತಿಕ ಇತಿಹಾಸವನ್ನು ಬಿಚ್ಚಿಡುವ ಒಂದೊಳ್ಳೆ ಪುಸ್ತಕ ’ಲವ್ -ರ್ ಸೇಲ್’. ಇದನ್ನು ಬರೆದವರು ನಾರ್ವೆ ದೇಶದ ಬರಹಗಾರ ನಿಲ್ಸ್ ಜೋಹಾನ್ ರಿಂಗ ದಾಲ್. ನೀಲ್ಸ್ ಒಂದು ಕಡೆ ’ಯಾರೇ ತಮ್ಮ ದೇಹವನ್ನು ಕಾಮಕ್ಕಾಗಿ ಮಾರಿಕೊಳ್ಳ ಬಯಸಿದಲ್ಲಿ ಮತ್ತು ಅದು ಒತ್ತಾಯ ಪೂರ್ವಕವಾಗಿಲ್ಲ ದಿದ್ದಲ್ಲಿ ಕಾಮವನ್ನು ಬಯಸುವ ಮತ್ತು ಒದಗಿಸುವ – ಹೀಗೆ ಇಬ್ಬರನ್ನೂ ಶಿಕ್ಷೆಗೆ ಗುರಿಪಡಿಸುವುದು ಎಷ್ಟು ಸರಿ?’ ಎಂದು ಪ್ರಶ್ನಿಸುತ್ತಾರೆ.

ಈ ರೀತಿ ಒತ್ತಾಯವಲ್ಲದ ವೇಶ್ಯಾವಾಟಿಕೆ ಒಂದು ರೀತಿಯ ಖಾಸಗಿ ವ್ಯವಹಾರ. ಇದನ್ನು ಪ್ರಶ್ನಿಸಲು ಸರಕಾರಕ್ಕೆ ಅಧಿಕಾರವಿಲ್ಲ ಎಂದು ಪ್ರತಿಪಾದಿಸುತ್ತಾರೆ. ನೀಲ್ಸ್ ಇದೇ ಪುಸ್ತಕದಲ್ಲಿ ಭಾರತವೂ ಸೇರಿದಂತೆ ಹತ್ತು ಹಲವು ದೇಶಗಳ ವೇಶ್ಯಾವಾಟಿಕೆಯ ಇತಿಹಾಸ ಬಿಚ್ಚಿಡುತ್ತಾರೆ. ಈ ಪುಸ್ತಕವನ್ನು ಓದಿದಾಗ ವೇಶ್ಯಾ ವಾಟಿಕೆಯ ಬಗ್ಗೆ ಒಂದು ಹೊಸ ಆಯಾಮವೇ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಮನುಷ್ಯ ಸಮಾಜದ ಅತಿ ಹಳೆಯ ಮತ್ತು ಲಾಭದಾಯಕ ವೃತ್ತಿಯಲ್ಲಿ ಈ ವೇಶ್ಯಾವಾಟಿಕೆ ಕೂಡ ಒಂದು. ಎಷ್ಟು ಹಳೆಯದು ಎನ್ನುವುದಕ್ಕೆ ಯಾವುದೇ ಇತಿಹಾಸದ ಪುಟ ತೆರೆದು ನೋಡಿದರೂ ಅಲ್ಲಿರುವ ಉಲ್ಲೇಖಗಳು, ಕಥೆಗಳೇ
ಸಾಕ್ಷಿ.

ಇನ್ನು ಅದೆಷ್ಟು ಲಾಭದಾಯಕ ಎಂಬ ಪ್ರಶ್ನೆ. ಇದಕ್ಕೆ ಅರ್ಬನ್ ಇನ್ಸ್ಟಿಟ್ಯೂಟ್ ಅಮೆರಿಕದ ಹತ್ತು ನಗರಗಳಲ್ಲಿ ನಡೆಸಿದ ತನಿಖೆ ಒಂದಿಷ್ಟು ಬೆಳಕು ಚೆಲ್ಲುತ್ತದೆ. ಅಮೆರಿಕದ ಅಟ್ಲಾಂಟಾದ ಅತ್ಯಂತ ದುಬಾರಿ ವೇಶ್ಯೆ ಪ್ರತಿ ವಾರಕ್ಕೆ ಸುಮಾರು 33000 ಡಾಲರ್ ಸಂಪಾದಿಸುತ್ತಾಳಂತೆ. ಇದು ವರ್ಷಕ್ಕೆ ಅನ್ವಯಿಸಿದರೆ ರುಪಾಯಿ ಲೆಕ್ಕದಲ್ಲಿ ಹನ್ನೆರಡು ಕೋಟಿ. ಈ ಸಂಖ್ಯೆ ಮೊದಲು ನೋಡಿದಾಗ ನಾನು ಕೂಡ ಕಣ್ಣುಜ್ಜಿ ಇನ್ನೊಮ್ಮೆ ಸೊನ್ನೆಗಳನ್ನು ಲೆಕ್ಕ ಹಾಕಿದ್ದೆ. ಹಾಗಂತ ಇಷ್ಟು ದುಡ್ಡು ಅಮೆರಿಕದ ವೇಶ್ಯೆಯರೆಲ್ಲ ಮಾಡುತ್ತಾರೆಂದಲ್ಲ. ’ಇಷ್ಟು ಲಾಭವೇ! ಈಗ ಕಾಲ ಕೆಟ್ಟು ಹೋಗಿದೆ ಹಾಗಾಗಿ ಇದು ಇಷ್ಟು ಲಾಭ ತರುವ ವೃತ್ತಿಯಾಗಿದೆ’ ಎಂದು ಮೂಗು ಮುರಿಯಬೇಕಿಲ್ಲ.

ಬಹಳ ಹಿಂದಿನ ಕಾಲದಿಂದಲೂ ಅತ್ಯಂತ ಲಾಭ ತರುವ ವೃತ್ತಿ ವೇಶ್ಯಾವಾಟಿಕೆ ಎನ್ನುವುದು ಲವ್ ಫಾರ್ ಸೇಲ್ ಪುಸ್ತಕದಿಂದ ತಿಳಿಯುತ್ತದೆ. ಫ್ರೀಕಾ
ನೊಮಿಕ್ಸ್ ಖ್ಯಾತಿಯ ಸ್ಟೀವನ್ ಲೆವಿಟ್ ಮತ್ತು ಕಿನ್ಸ್ಲೆ ಇನ್ಸ್ಟಿಟ್ಯೂಟ್‌ನ ವರದಿಯ ಪ್ರಕಾರ 1900ರಲ್ಲಿ ಅಂದಿನ ಹಣದ ಬೆಲೆಯನ್ನು ಇಂದಿಗೆ ಹೋಲಿಸಿಕೊಂಡಲ್ಲಿ ವೇಶ್ಯೆಯೊಬ್ಬಳು ಇಂದಿಗಿಂತ ಎರಡು ಪಟ್ಟು ಹೆಚ್ಚು ಅಂದು ಸಂಪಾ ದಿಸುತ್ತಿದ್ದಳು. ಇದನ್ನು ಅರ್ಥಶಾಸ್ತ್ರಜ್ಞರು ನೋಡುವುದು ಡಿಮ್ಯಾಂಡ್ ಮತ್ತು ಸಪ್ಲೈ ಮಸೂರ ದಲ್ಲಿಟ್ಟು. 1948 ರಲ್ಲಿ ಹಣ ಕೊಟ್ಟು ಸೆಕ್ಸ್ ಪಡೆಯುವ ಪುರುಷರ ಸಂಖ್ಯೆ ಅಮೆರಿಕದಲ್ಲಿ 69 ಪ್ರತಿಶತವಿತ್ತು. ಉಳಿದ ರಾಷ್ಟ್ರಗಳಲ್ಲೂ ಪ್ರಮಾಣ ಬಹುತೇಕ ಇಷ್ಟೇ ಇತ್ತು. ಈಗ ಅದರ ಪ್ರಮಾಣ ಶೇ.೧೦-೧೨ಕ್ಕೆ ಇಳಿದಿದೆ.

ಅಂದಿನ ಕಾಲದಲ್ಲಿ ಸಾಮಾಜಿಕ ಕಾರಣ ಗಳಿಂದಾಗಿ ಸೆಕ್ಸ್ ಅನ್ನು ಹಣ ಪಡೆದು ನೀಡುವ ವೇಶ್ಯೆಯರ ಸಂಖ್ಯೆ ಕಡಿಮೆಯಿತ್ತು ಎನ್ನುವ ಕಾರಣದಿಂದಾಗಿ ಸಹಜ ವಾಗಿ ಸೆಕ್ಸ್ ಪಡೆಯಲು ಹೆಚ್ಚಿನ ಹಣ ತೆರಬೇಕಾಗಿತ್ತು. ಇಂದು ವೇಶ್ಯಾವಾಟಿಕೆಗೆ ಇಂಟರ್‌ನೆಟ್ ಬಜಾರಿದೆ, ದಂಧೆಗೆ ಹತ್ತಾರು ಮಾರ್ಗಗಳಿವೆ. ಇಂಟರ್‌ ನೆಟ್‌ನಲ್ಲಿ ಸುಲಭದಲ್ಲಿ ಸೆಕ್ಸ್ ಮಾರಾಟ ಮಾಡಲು ಅವಕಾಶಗಳಿವೆ. ಇಂಟರ್‌ನೆಟ್ ಕಾರಣದಿಂದಾಗಿಯೇ ಕಾನೂನು ಬಾಹಿರ ವೇಶ್ಯಾವಾಟಿಕೆಯನ್ನು ನಿಲ್ಲಿಸು ವುದು, ಬಂಧಿಸುವುದು ಇವೆಲ್ಲ ಇನ್ನಷ್ಟು ಕಷ್ಟಕರವಾಗಿದೆ.

ಹಾಗಂತ ಕಾನೂನು ಬಾಹಿರ ವೇಶ್ಯಾವಾಟಿಕೆ ಇಂದಿನ ದಿನದಲ್ಲಿ ಅಂದುಕೊಂಡಷ್ಟು ಸುಲಭದ್ದಲ್ಲ. ಹಿಂದೆಲ್ಲದಕ್ಕಿಂತ ಇಂದು ಕಾನೂನುಬಾಹಿರ ವೇಶ್ಯಾವಾಟಿಕೆ ಮುಂದುವರಿದ ಪೊಲೀಸ್ ವ್ಯವಸ್ಥೆ ಮತ್ತು ಕಠಿಣ ಶಿಕ್ಷೆಗಳ ಕಾರಣದಿಂದ ಇನ್ನಷ್ಟು ಕಷ್ಟ ಸಾಧ್ಯವಾಗಿದೆ. ಇನ್ನು ಈ ಕಾರಣಕ್ಕೆ ಕಾನೂನುಬದ್ಧ ವೇಶ್ಯಾವಾಟಿಕೆಯ ಬೇಡಿಕೆ ಹೆಚ್ಚುತ್ತಿದೆ ಎಂದು ನೀವಂದುಕೊಂಡಿದ್ದರೆ ಅದು ಕೂಡ ತಪ್ಪು. ಅದಕ್ಕೆ ಕೆಲವೊಂದು ವಿಚಿತ್ರವೆನಿಸುವ ಕಾರಣಗಳಿವೆ. ಇಂದು ಅಮೆರಿಕ ಸೇರಿದಂತೆ
ಬಹುತೇಕ ರಾಷ್ಟ್ರಗಳಲ್ಲಿ ಕಾನೂನುಬದ್ಧ ವೈಶ್ಯಾಗೃಹಗಳು ತೀರಾ ನಷ್ಟ ಅನುಭವಿಸುತ್ತಿವೆ.

ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಗೊಳಿಸಿದ್ದಲ್ಲಿ ಸರಕಾರವೇ ಒಂದಿಷ್ಟು ನೀತಿ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಸಾಮಾನ್ಯವಾಗಿ ಸರಕಾರ ವೆ.ವಾ. (ವೇಶ್ಯಾವಾಟಿಕೆ) ಗೆಂದೇ ಒಂದಿಷ್ಟು ಪ್ರದೇಶ ಗೊತ್ತುಮಾಡಿರುತ್ತದೆ. ಅಲ್ಲಿ ಮಾತ್ರ ವೆ.ವಾ. ಗೆ ಒಪ್ಪಿಗೆಯಿರುತ್ತದೆ. ಅಲ್ಲದೆ ಈ ರೀತಿ ಲೀಗಲ್ ವೆ.ವಾ. ಕ್ಕೆ ನೂರೆಂಟು ಕಟ್ಟಳೆಗಳಿರುತ್ತವೆ. ಈ ರೀತಿ ಸರಕಾರಿ ಒಪ್ಪಿಗೆ ಪಡೆದ ವೇಶ್ಯಾಗೃಹದಲ್ಲಿ ಕೆಲಸ ಮಾಡುವವರು ವಾರಕ್ಕೊಮ್ಮೆ ಗುಪ್ತ ರೋಗಗಳ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಇಲ್ಲಿ ಬರುವ ಆದಾಯಕ್ಕೆ ತೆರಿಗೆ ಕಟ್ಟಬೇಕು, ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷಿಸಿಕೊಳ್ಳಬೇಕು, ಅಲ್ಲದೇ ಗ್ರಾಹಕನಿಗೆ ಗುಪ್ತ ರೋಗ ಹತ್ತಿಕೊಂಡರೆ ಅದರ ಜವಾಬ್ದಾರಿ ವೆ.ವಾ. ಗೃಹವೇ ಹೊರಬೇಕು – ಹೀಗೆ ಹತ್ತಾರು ಕಾನೂನು ಕಿರಿಕಿರಿಗಳು.

ಅಲ್ಲದೇ ವೇಶ್ಯಾಗೃಹಕ್ಕೆ ಅನುಮತಿ ಪಡೆಯಬೇಕೆಂದರೆ ಅದಕ್ಕೆ ಬೃಹತ್ ಮೊತ್ತ ತೆರಬೇಕು. ಇದೆಲ್ಲದರ ಹೊರೆ ಬೀಳುವುದು ಗ್ರಾಹಕನ ಮೇಲೆ. ಆ ಕಾರಣಕ್ಕೆ ಲೀಗಲ್ ವೆ.ವಾ. ಯಾವತ್ತೂ ತುಟ್ಟಿ ಮತ್ತು ರಗಳೆ. ವೆ.ವಾ. (ವೇಶ್ಯಾವಾಟಿಕೆ) ಗೃಹಗಳು ಇದೆಲ್ಲವನ್ನು ನೋಡಿಕೊಳ್ಳುವ ಕಾರಣದಿಂದ ವೇಶ್ಯೆ ಆಕೆಯ
ಆದಾಯದ ಅರ್ಧದಷ್ಟು ಮೊತ್ತವನ್ನು ಈ ವೆ.ವಾ. ಗೃಹಕ್ಕೆ ಕೊಡಬೇಕು. ಇದು ಆಕೆಗೆ ಪೂರೈಸುವ ಮಾತಲ್ಲ. ಆ ಕಾರಣಕ್ಕೇ ಕಾನೂನು ಬದ್ಧವಾಗಿಸಿದರೂ ಅದರ ಪಕ್ಕದಲ್ಲಿಯೇ ಅದಕ್ಕಿಂತ ಜೋರಾಗಿ ಕಾನೂನು ಬಾಹಿರ ವೆ.ವಾ. ಚಟುವಟಿಕೆ ನಡೆಯುತ್ತದೆ. ಕಾನೂನಾತ್ಮಕಗೊಳಿಸಿದ ಎಲ್ಲ ದೇಶಗಳ ಕಥೆಯೂ ಹೆಚ್ಚು ಕಡಿಮೆ ಇದೇ ಆಗಿದೆ. ಈ ಕಾರಣಕ್ಕೆ ಸಾಮಾನ್ಯವಾಗಿ ಮೊದಲು ಕಾನೂನುಬದ್ಧ ವೆ.ವಾ.ದಲ್ಲಿ ಕೆಲಸ ಶುರುಮಾಡುವ ವೇಶ್ಯೆ ಕ್ರಮೇಣ ಅದರಿಂದ ಹೊರಬಂದು ನೇರ ವಾಗಿ ತನ್ನ ಗ್ರಾಹಕರನ್ನು ಸಂಧಿಸಲು ಶುರುಮಾಡುತ್ತಾಳೆ.

ಇಲ್ಲಿ ಒಂದನ್ನು ಗ್ರಹಿಸಬೇಕು – ಕಾನೂನುಬದ್ಧ ವೇಶ್ಯಾವಾಟಿಕೆಯೇ ಬೇರೆ, ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ ಎನ್ನುವ ಕಾನೂನು ವ್ಯವಸ್ಥೆ ಬೇರೆ. ಎರಡನೆಯ ಕಾನೂನು ವ್ಯವಸ್ಥೆಯಲ್ಲಿ ವೇಶ್ಯಾವಾಟಿಕೆ ನಡೆಸುವುದು ಕಾನೂನು ಬಾಹಿರವಲ್ಲ. ಆದರೆ ಸರಕಾರ ಈ ವ್ಯವಸ್ಥೆಯ ತಂಟೆಗೆ ಹೋಗುವುದಿಲ್ಲ –
ಅದರಷ್ಟಕ್ಕೆ ಅದನ್ನು ಬಿಟ್ಟುಬಿಡುವ ಸ್ಥಿತಿ. ಇದು ಇನ್ನೊಂದು ಕಾರಣಕ್ಕೆ ಡೇಂಜರ್. ಇದರಿಂದಾಗಿ ವೆ.ವಾ. ಸುತ್ತ ಹತ್ತಾರು ಕಾನೂನು ಬಾಹಿರ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಈ ನೋಡಿಯೂ ಸುಮ್ಮನಿರುವ ಪದ್ಧತಿ ಇರುವಲ್ಲಿ ಅಲ್ಲಿನ ಸರಕಾರ ಕೆಲವೊಂದು ಪ್ರದೇಶದಲ್ಲಿ ವೆ.ವಾ. ಗೆ ಅನುವು ಮಾಡಿ ಕೊಟ್ಟು ಆ ಗಡಿ ದಾಟಿ ವ್ಯವಹಾರವಾದರೆ ಮಾತ್ರ ಶಿಕ್ಷಿಸಲು ಮುಂದಾಗುತ್ತವೆ.

ಮುಂಬೈನಲ್ಲಿ ಕಾಮಾಟಿಪುರ ಎನ್ನುವ ಪ್ರದೇಶದ ಬಗ್ಗೆ ಕೇಳಿರಬಹುದು. ಹಿಂದೊಂದು ದಿನ ಮುಂಬೈ ವೆ.ವಾ. ಇಲ್ಲಿಯೇ ಕೇಂದ್ರಿತವಾಗಿತ್ತು. ಈಗಿನ ಅಸ್ಪಷ್ಟ ಕಾನೂನಿನಿಂದಾಗಿ ವೆ. ವಾ. ಉಳಿದ ಪ್ರದೇಶಗಳಿಗೂ ಹಬ್ಬಿದೆ. ಕೊಲ್ಕಾತ್ತಾದ ಸೋನಾಗಾಚಿ, ಪುಣೆಯ ಬುಧವಾರಪೇಟೆ, ಅಲಹಾಬಾದಿನ ವೀರಗಂಜ್, ದೆಹಲಿಯ ಜಿಬಿ ರಸ್ತೆ, ನಾಗಪುರದ ಇತ್ವಾರಿ, ಕಾಶಿಯ ಶಿವದಾಸಪುರ ಹೀಗೆ ಬಹುತೇಕ ಉತ್ತರದ ನಗರಗಳಲ್ಲಿ ವೆ.ವಾ. ಖುಲ್ಲಂಖುಲ್ಲಾ ಇದೆ. ಅಲ್ಲಿ ನಮ್ಮ ಸರಕಾರದ್ದು ಒತ್ತಾಯದ ಆದರೆ ಅನಿವಾರ್ಯದ ಕುರುಡು. ಇಲ್ಲಿಯವರೆಗೆ ಆಳಿದ ಎಲ್ಲ ಸರಕಾರಗಳಿಗೂ ಈ ವೆ.ವಾ. ಬಗ್ಗೆ ಇದಮಿತ್ಥಮ್ ಒಂದು ಗಟ್ಟಿ ನಿರ್ಧಾರ ಮತ್ತು ನಿಲುವನ್ನು ತೆಗೆದುಕೊಳ್ಳಲಾಗಿಲ್ಲ. ಅದು ಅಂದುಕೊಂಡಷ್ಟು ಸುಲಭದ್ದಲ್ಲ.

ಆ ಕಾರಣಕ್ಕೇ ಆಡಳಿತಕ್ಕೆ ಬರುವ ಎಲ್ಲ ಸರಕಾರ, ಪಾರ್ಟಿಗಳೂ ಇದರ ತಂಟೆಗೇ ಹೋಗುವುದಿಲ್ಲ. ಏಕೆಂದರೆ ಇದೊಂದು ಸಮಸ್ಯೆಯೇ ಅಥವಾ ಅಲ್ಲವೇ, ಸಮಾಜಕ್ಕೆ ಬೇಕೇ, ಬೇಡವೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಗೊಂದಲಗಳೇ ಜಾಸ್ತಿ. ಸಮಾಜಕ್ಕೆ, ವೋಟ್ ಮಾಡುವವರಲ್ಲಿ ಕೂಡ ಇದೊಂದು ಚರ್ಚೆ ಮಾಡುವ
ವಿಚಾರವೇ ಹೊರತು ಅದಕ್ಕಿಂತ ಮುಂದಿನ ಸ್ಪಷ್ಟತೆ ಇಲ್ಲ. ಆ ಕಾರಣಕ್ಕೆ ಬಹುತೇಕ ಸರಕಾರಗಳಿಗೆ ವೆ.ವಾ. ಒಂದು ಅಸ್ಪೃಶ್ಯ ವಿಭಾಗ. ಹೇಗಿದೆಯೋ ಹಾಗೆಯೇ ಇದ್ದುಬಿಡಲಿ ಬಿಡಿ ಎಂಬ ನಿಲುವು.

ಈ ವೆ.ವಾ.ಗೆ ಕಾನೂನಿನ ಒಳಗಡೆ ಅವಕಾಶ ಕೊಡುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟಇದನ್ನು ತಡೆದು ನಿಲ್ಲಿಸುವುದು. ವೆ.ವಾ. ವನ್ನು ನಿಲ್ಲಿಸಲು ಹೋರಟ
ದೇಶಗಳೂ ಸೋತಿವೆ, ಮುಕ್ತಗೊಳಿಸಿ ಒಪ್ಪಿಕೊಂಡ ದೇಶಗಳಿಗೂ ನಂತರದಲ್ಲಿ ಇದಕ್ಕೊಂದು ರೂಪುರೇಷೆ ಕೊಡುವಲ್ಲಿ ಯೂ ಎಡವಿವೆ. ವೆ.ವಾ. ನಿಲ್ಲಿಸಲು ಸ್ವೀಡನ್ ದೇಶ ಹೊಸತೊಂದು ಮಾದರಿಯ ಕಾನೂನನ್ನು 1999ರಲ್ಲಿ ಜಾರಿಗೆ ತಂದಿತು. ಇದರ ಪ್ರಕಾರ ವೇಶ್ಯೆಯರಿಗೆ ಶಿಕ್ಷೆಯಿಲ್ಲ, ಅಲ್ಲಿ ಗ್ರಾಹಕ ಮಾತ್ರ ಅಪರಾಧಿ. ಅಲ್ಲಿಂದ ಮುಂದೆ ಹಲವಾರು ದೇಶಗಳು ಇಂಥದ್ದೇ ಕಾನೂನನ್ನು ಜಾರಿಗೆ ತಂದು ನಿಯಂತ್ರಿಸುವಲ್ಲಿ ಸ್ವಲ್ಪ ಮಟ್ಟಿಗಿನ ಯಶಸ್ಸನ್ನು ಕಂಡುಕೊಂಡಿವೆ. ಡೆನ್ಮಾರ್ಕ್‌ನಲ್ಲಿ ವೇಶ್ಯಾವಾಟಿಕೆ, ಸೆಕ್ಸ್, ದೇಹವನ್ನು ಮಾರುವುದು ಮತ್ತು ಖರೀದಿಸುವುದು – ಎರಡೂ ಅಪರಾಧವಲ್ಲ.

ಆದರೆ ಇದನ್ನು ವ್ಯವಸ್ಥಿತವಾಗಿ ಸಂಸ್ಥೆಯಂತೆ ದಂಧೆ ನಡೆಸುವುದು ಅಪರಾಧ. ಅಲ್ಲಿ ವೇಶ್ಯೆಯರಿಗೆ ಅವಕಾಶವಿದೆ ಆದರೆ ವೈಶ್ಯಾಗಾರಕ್ಕೆ ಅವಕಾಶವಿಲ್ಲ. ಹೀಗೆ ಹತ್ತಾರು ರೀತಿಯ ಕಾನೂನುಗಳು ಜಗತ್ತಿನ ದೇಶಗಳಲ್ಲಿವೆ. ದಕ್ಷಿಣ ಅಮೆರಿಕ ದೇಶಗಳಲ್ಲಿ ಈ ವೆ.ವಾ. ಒಂದು ನಿರಂಕುಶ ಸಾಮ್ರಾಜ್ಯ. ಈ ಯಾವುದೇ
ಕಾನೂನುಗಳು ವೆ.ವಾ. ವನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಅಥವಾ ಅದರ ಸುತ್ತ ನಡೆಯುವ ಅನ್ಯ ಅಪರಾಧಗಳನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿಲ್ಲ.
ಹಾಗಾದರೆ ಕೊನೆಯಲ್ಲಿ ಮತ್ತೆ ಮೂಡುವ ಪ್ರಶ್ನೆ ಅದೇ.

ವೇಶ್ಯಾವಾಟಿಕೆ ಅತ್ಯಾಚಾರ ಸಮಸ್ಯೆಗೆ ಪರಿಹಾರವೇ? ವೇಶ್ಯಾವಾಟಿಕೆ ಕಾನೂನು ಬದ್ಧಗೊಳಿಸಿದರೆ, ಸಮಾಜ ಒಪ್ಪಿಕೊಂಡರೆ ಈ ರೀತಿಯ ಅತ್ಯಾಚಾರಗಳು ಕಡಿಮೆಯಾಗುತ್ತವೆಯೇ? ಈ ಪ್ರಶ್ನೆಗೆ ಅಂಕಿ-ಸಂಖ್ಯೆಗಳು ಕೂಡ ಅಷ್ಟೇ ಗೊಂದಲದ ಉತ್ತರ ಕೊಡುತ್ತವೆ. ಹಾಗಾಗಿ ಸಮಸ್ಯೆಗೆ ಇದೇ ಪರಿಹಾರ ಅಂದು ಒಪ್ಪಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅದು ಸಾಬೀತಾದರೂ ಅದನ್ನು ಲಾಗು ಮಾಡುವ ಮೊದಲು, ಅದರ ಸುತ್ತ ನಡೆಯುವ ಅಪರಾಧಗಳನ್ನು ಕೂಡ ಪರಿಗಣಿಸಬೇಕಾಗುತ್ತದೆ. ಈ ಎಲ್ಲ ಕಾರಣ ಮತ್ತು ಕ್ಲಿಷ್ಟತೆಯ ಕಾರಣದಿಂದಾಗಿಯೇ ನಮ್ಮಲ್ಲಿ ಆಡಳಿತ ಇದರ ತಂಟೆಗೇ ಹೋಗುವುದಿಲ್ಲ.

ಮೋದಿಯಿಂದ ರಾಹುಲ್‌ವರೆಗೆ, ದೀದಿಯಿಂದ ದಾದಿಯ ವರೆಗೆ ಯಾರೂ ಕೂಡ ಇದರ ಬಗ್ಗೆ ಮಾತನಾಡುವುದಿಲ್ಲ. ಅತ್ಯಾಚಾರ ಎನ್ನುವುದು ನೇರವಾಗಿ ಸಾಮಾಜಿಕ ಮೌಲ್ಯದ ಮಟ್ಟಕ್ಕೆ, ಶಿಕ್ಷಣಕ್ಕೆ ಮತ್ತು ಕಾನೂನಿನ ಗಟ್ಟಿತನಕ್ಕೆ ಹಿಡಿದ ಕನ್ನಡಿ ಎನ್ನುವುದರಲ್ಲಿ ಎರಡನೆ ಮಾತಿಲ್ಲ. ಎಲ್ಲೆಲ್ಲಿ ಈ ಮೂರು ಗಟ್ಟಿಯಾಗಿ ದೆಯೋ ಅಲ್ಲೆಲ್ಲ ಅತ್ಯಾಚಾರದ ಸಂಖ್ಯೆ (ಮತ್ತು ವೇಶ್ಯಾವಾಟಿಕೆ) ಕಡಿಮೆಯಿರುವುದು ಕಾಣಿಸುತ್ತದೆ. ಆ ಕಾರಣಕ್ಕಾಗಿಯೇ ಭಾರತದ ದಕ್ಷಿಣ ಭಾಗದಲ್ಲಿ ಅತ್ಯಾ ಚಾರದ ಸಂಖ್ಯೆ ಕಡಿಮೆ. ಉಳಿದದ್ದು ನಿಮ್ಮ ಜಿಜ್ಞಾಸೆಗೆ.