ಅಭಿಮತ
ಬಾಲಾಜಿ ಕುಂಬಾರ ಚಟ್ನಾಳ
ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಸದ್ದು ಗದ್ದಲದ ಮಧ್ಯೆ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಅಽಕಾರ ವಹಿಸಿಕೊಂಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಪರಿಸ್ಥಿತಿ ಉದ್ಭವಗೊಳ್ಳಲು ಪಕ್ಷದಲ್ಲಿನ ಭಿನ್ನಮತ ಚಟುವಟಿಕೆಗಳೇ ಕಾರಣ ಎನ್ನುವುದೂ ಇಲ್ಲಿ ಉಲ್ಲೇಖನೀಯ. ಇದರಿಂದ ರಾಜ್ಯದ ಜನತೆಗೆ ಆಶಾಭಂಗವಾಗಿದ್ದು ಸುಳ್ಳಲ್ಲ.
ರಾಜ್ಯದ ಜನತೆ ಕೋವಿಡ್ ಬಿಕ್ಕಟ್ಟಿನ ಕರಾಳ ಸಂಕಷ್ಟದಿಂದ ಹೊರಬಂದಿಲ್ಲ. ಈ ನಡುವೆ ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಅತಿವೃಷ್ಟಿ ಸೃಷ್ಟಿಯಾಗಿದೆ. ಇದರಿಂದ ಕೈಗೆ ಬಂದಿರುವ ಸಾವಿರಾರು ಹೆಕ್ಟೇರ್ ಬೆಳೆ ಸಂಪೂರ್ಣ ನೀರುಪಾಲಾಗಿದೆ, ಮಳೆಯ ರಭಸದಿಂದ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಮನೆ ಕಳೆದು ಕೊಂಡವರ ಪಾಡು ಹೇಳತೀರದು. ಕೋವಿಡ್ ಮೂರನೇ ಅಲೆಯ ಆತಂಕ ಮತ್ತೆ ಶುರುವಾಗುತ್ತಿದೆ. ಇಂಥ ಕಠಿಣ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ರಾಜಕೀಯದಲ್ಲಿ ‘ಕುರ್ಚಿ ಗುದ್ದಾಟ’ ನಡೆದೋಯ್ತು.
ಬಿ.ಎಸ್. ಯಡಿಯೂರಪ್ಪನವರ ಅಂದಿನ ಕಣ್ಣೀರಿನ ರಾಜೀನಾಮೆ’ ಯಡಿಯೂರಪ್ಪ ಅನುಯಾಯಿಗಳ ಅತೀವ ನೋವಿಗೂ ಕಾರಣವಾಗಿತ್ತು. ಇದೊಂದು ಅವಧಿಯನ್ನು ಪೂರ್ಣಗೊಳಿಸಲು ಬಿಎಸ್‌ವೈ ಅವರಿಗೆ ಅವಕಾಶ ಕೊಡಬೇಕಿತ್ತು ಎಂದು ಹೈಕಮಾಂಡ್ ನಿರ್ಧಾರವನ್ನು ಬಹುತೇಕರು ವಿರೋಧಿಸಿದರು. ಆದರೆ ಹೈಕಮಾಂಡ್ ಮೇಲೆ ಮುನಿಸಿಕೊಂಡವರಿಗೆ ‘ಬಸವರಾಜ ಬೊಮ್ಮಾಯಿ’ ಅವರ ಅನಿರೀಕ್ಷಿತ ಸಿಎಂ ಆಯ್ಕೆ ಎಲ್ಲರ ಕೋಪವೂ ತಣಿಸಿತ್ತು.
ಬೊಮ್ಮಾಯಿ ಅವರು , ಮುಂದಿನ ಉಳಿದ ಅವಧಿಯಲ್ಲಿ ದಕ್ಷ, ಸ್ವಚ್ಚ, ಪ್ರಾಮಾಣಿಕ ಆಡಳಿತ ನೀಡುವ ಮೂಲಕ ರಾಜ್ಯದ ಜನತೆಯ ನಿರೀಕ್ಷೆ ಉಳಿಸಿಕೊಳ್ಳಲು ಮುಂದಾಗಬೇಕಾಗಿದೆ.
ಇದರಿಂದ ತಮ್ಮ ಪಕ್ಷದ ವರ್ಚಸ್ಸನ್ನು ಅವರು ಹೆಚ್ಚಿಸಬಹುದಾಗಿದೆ. ರಚನೆಯಾಗಿರುವ ಸಚಿವ ಸಂಪುಟ ಆದಷ್ಟು ಬೇಗ ತಮ್ಮ ಕೆಲಸವನ್ನು ಆರಂಭಿಸಬೇಕಿದೆ. ರಾಜಕೀಯ ಸರ್ಕಸ್ ಬದಿಗಿಟ್ಟು ಉತ್ತಮ ಆಡಳಿತ ನೀಡಲು ಸಿಎಂ ಬೊಮ್ಮಾಯಿ ಅವರು ಶ್ರಮಿಸಬೇಕಿದೆ. ಸಚಿವ ಸಂಪುಟ ರಚನೆ ನಂತರ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತ ಸ್ಪೋಟವಾಗದಂತೆ ಹೈಕಮಾಂಡ್ ಎಚ್ಚರವಹಿಸಬೇಕು.
ಉಳಿದ ಈ ಅವಽಯಲ್ಲಿ ರಾಜ್ಯ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಹೈಕಮಾಂಡ್ ಎಲ್ಲಾ ರೀತಿಯ ಸಹಕಾರ ಕೊಟ್ಟು ಕೈಜೋಡಿಸಿಬೇಕಾಗಿದೆ. ಮುಖ್ಯ ಮಂತ್ರಿ ಬದಲಾವಣೆ ಪ್ರಕ್ರಿಯೆ ಹಿಂದಿರುವ ತಂತ್ರಗಾರಿಕೆ ಹಾಗೂ ರಾಜ್ಯ ರಾಜಕಾರಣದ ಬೆಳವಣಿಗಳನ್ನೆಲ್ಲ ಕಂಡು ಜನರು ತೀವ್ರವಾಗಿ ನಿರಾಸೆಗೊಂಡಿದ್ದಾರೆ. ಇನ್ಮುಂದೆ ರಾಜ್ಯದ ಅಭಿವೃದ್ಧಿಗೆ
ಹಿನ್ನಡೆಯಾಗುತ್ತದೆ ಎಂದು ಹಲವರಿಗೆ ಮನದಟ್ಟಾಗಿದೆ. ಹೀಗಾಗಿ ಹೊಸ ಸರಕಾರ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಜನತೆಯ ನಿರಾಸೆ ದೂರವಾಗ ಬಹುದು. ಇದರಿಂದ ಅಭಿವೃದ್ಧಿಯ ಆಡಳಿತ ಯಂತ್ರ ಸರಿಪಡಿಸಿಕೊಳ್ಳಬಹುದು. ರಾಜ್ಯದ ಜನತೆಯನ್ನು ಸಂಕಷ್ಟ್ಟದಿಂದ ಪಾರು ಮಾಡಬಹುದು. ಜನತೆಯನ್ನು ನೆರೆ ಪರಿಸ್ಥಿತಿ, ಕೋವಿಡ್ ಬಿಕ್ಕಟ್ಟು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹರಿಸಿದರೆ ಜನರ ನಿರೀಕ್ಷೆ, ಭರವಸೆ ಉಳಿಸಿಕೊಳ್ಳಲು ಸಾಧ್ಯ. ಅನಿರೀಕ್ಷಿತವಾಗಿ ಒದಗಿ ಬಂದಿರುವ ಈ ಸದಾವಕಾಶವನ್ನು ಬೊಮ್ಮಾಯಿ ಅವರು ಸದ್ಬಳಕೆ ಮಾಡಿಕೊಂಡರೆ ಯಡಿಯೂರಪ್ಪನವರ ಕನಸು ಸಾಕಾರಗೊಳ್ಳಬಹುದು, ರಾಜ್ಯದ ಅಭಿವೃದ್ಧಿಯೂ ಕಾಣಬಹುದು. ಹಾಗೇ ಬಸವರಾಜ ಬೊಮ್ಮಾಯಿ ಅವರು ಇನ್ನುಳಿದ ಅವಽಯನ್ನು ಅವರೇ ಉತ್ತಮವಾಗಿ ಪೂರೈಸಲಿ ಎಂದು ಹಾರೈಕೆಗಳು.