ತನ್ನಿಮಿತ್ತ
ಲತಾ ಸಂತೋಷ್ ಶೆಟ್ಟಿ, ಮುದ್ದುಮನೆ
lathasanthoshmuddumane@gmail.com
ಸರ್ವ ಜನಾಂಗದ ಶಾಂತಿಯ ತೋಟ ಎಂದು ಕನ್ನಡ ನಾಡನ್ನು ಕುವೆಂಪು ಬಣ್ಣಿಸಿದಂತೆ ನಮ್ಮದು ಬಹು ಭಾಷಾದೇಶ ಇಲ್ಲಿ ಎಲ್ಲಾ ಮಾತೃಭಾಷೆ ಬೆಳೆದು ಭಾಷಾ ಕಂಪು ಸದಾ ಪಸರಿಸುತ್ತಿರಲು ಮನುಷ್ಯನೇ ಭಾಷಾ ಕೇಂದ್ರ ಬಿಂದುವಾಗಿರುವುದು ನಿಜ.
ಭಾಷಾವಾರು ವಿಂಗಡನೆಯ ದಿನದಂದು ಆಯಾಯ ರಾಜ್ಯದಲ್ಲಿ ಅಲ್ಲಿನ ರಾಜ್ಯ ಭಾಷೆಗೆ ಸಂಬಂಧ ಪಟ್ಟ ಸಂಭ್ರಮಾಚರಣೆಗಳು ನಡೆಯುತ್ತವೆ. ಆದರೆ ಕಡಲು ನದಿಗಳ ಸುಂದರ ಸಂಗಮದ ಊರು ದ್ವೀಪಗಳ ತೊಟ್ಟಿಲು ಎಂಬ ಹೆಗ್ಗಳಿಕೆಯ ಕುಂದಾಪುರದ ಮುಕುಟಕ್ಕೆ ಬೆಳ್ಳಿಗೆರೆಯ ಮೇಲೊಂದು ಚಿನ್ನದ ಚುಕ್ಕೆ ಎಂಬಂತೆ ಇಲ್ಲಿನ ಆಡುಭಾಷೆ ಕುಂದಾಪ್ರ ಕನ್ನಡ. ಅಗಸ್ಟ್ ೮ರ ಆಷಾಡ (ಆಸಾಡಿ) ಅಮಾವಾಸ್ಯೆ ಅಂದರೆ ಕರ್ಕಾಟಕ ಅಮಾವಾಸ್ಯೆ ಯಂದು ವಿಶ್ವಾದ್ಯಂತ ನೆಲೆಸಿರುವ ಕುಂದ ಕನ್ನಡಿಗರಲ್ಲಿ ಸ್ಪೂರ್ತಿ ತುಂಬುವ ವಿಶ್ವ ಕುಂದಾಪ್ರ ಕನ್ನಡ ದಿನದ ಆಚರಣೆ ನಡೆಯುತ್ತಿದೆ.
ಕುಂದಾಪ್ರ ಕನ್ನಡದ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಹೊಸ ತಲೆಮಾರಿಗೂ ಭಾಷಾ ಸವಿಯ ಉಣಿಸಿ, ಗ್ರಾಮೀಣ ಸೊಗಡನ್ನು ಹೊಂದಿರುವ ಭಾಷೆಗೆ ಕುಂದು ಬರದೆ ಹಬ್ಬಲಿ ಎಂಬ ಮನೋಭಾವದ ಭಾಷಾಭಿಮಾನಕ್ಕೆ ತಲೆ ದೂಗಲೇಬೇಕು. ಒಟ್ಟಿನಲ್ಲಿ ಭಾಷೆ ಬೆಳವಣಿಗೆಗೆ ಇಲ್ಲಿ ಆದ್ಯತೆ. ಇದ್ ದೊಡ್ಡ ಸಂಗ್ತಿ ಮಾರಾಯ್ರೆ, ಒಳ್ಳೆ ಕತಿ ಆಯ್ತ ಅಲ್ಲದೆ ಕಣ್- ಬಾಯ್ ಬಿಡ್ಬೇಡಿ… ಹೌದೆ ನಮ್ ವಿಶ್ವ ಕುಂದಾಪ್ರ ಕನ್ನಡ ದಿನ ಅಂಬ್ರ ನಮ್ ಭಾಷಿ ನಮ್ಗ್ ಚಂದು.. ಎನ್ನುತ್ತಾ ಆಚರಣೆಗೆ ಅಣಿಯಾಗಿದ್ದಾರೆ ಕುಂದಾಪುರದ ಜನರು.
ನಮ್ಮ ಭಾಷೆ ನಮ್ಮ ಹೆಮ್ಮೆ: ಕುಂದಾಪ್ರ ಕನ್ನಡದ ಶ್ರೀಮಂತಿಕೆಗೆ ದ್ಯೋತಕವಾಗಿ ಈ ಊರಿನ ಜನರ ಭಾಷಾ ಪ್ರೀತಿಯೇ ಇದರ ಉಳಿವು ಹಾಗೂ ಇಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಿ ಕೊಳ್ಳುವ ವಿಶ್ವ ಕುಂದಾಪ್ರಕನ್ನಡ ದಿನದ ಕಂಪು. ಇದು ಕೇವಲ ಭಾಷೆ ಮಾತ್ರವಲ್ಲ ಅಲ್ಲಿನ ಮಣ್ಣಿನ ಸಾಂಸ್ಕೃತಿಕ ತನವನ್ನು ಪ್ರತಿನಿಧಿಸುವ ಮಾಧ್ಯಮ. ಇದು ಚುರುಕಿನ ಭಾಷೆ ಕೇವಲ ಮಾತಿನ ಯಾಂತ್ರಿಕ ಕ್ರಿಯೆಯಲ್ಲ. ದೊಡ್ಡ ಪದ ಸಮೂಹ ವನ್ನು ಚಿಕ್ಕದುಗೊಳಿಸಿ ಎರಡೆ ಅಕ್ಷರಗಳಲ್ಲಿ ಉದಾಹರಣೆಗೆ ಹೋಗುತ್ತೇನೆ ಅನ್ನುವುದಕ್ಕೆ ಹೋವ್ತೆ. ಕುಳಿತು ಕೊಳ್ಳುವುದಕ್ಕೆ ಕುಕೊ ಆಗಬಹುದು ಅನ್ನಲು ಅಕ್ ಎನ್ನುತ್ತಾರೆ. ಅಷ್ಟೇ ಅಲ್ಲದೆ ಧ್ವನಿಯ ಏರಿಳಿತ ಶುತ್ರಿಯೊಂದಿಗೆ ವ್ಯಾಕರಣದ ಗಟ್ಟಿರೂಪವು ಇದರಲ್ಲಿದೆ. ಆದರೆ ಮಹಾಪ್ರಾಣಗಳು ಅತಿ ವಿರಳವಾಗಿದ್ದು ಮಾತಿನಲ್ಲಿ ಉಕಾರ ಹೆಚ್ಚಾಗಿ ಉಚ್ಚಾರಣೆಯಾಗುತ್ತದೆ. ಹೊಪುದು, ಬೆಚ್ಚುದು, ಕಾಂಬುದು, ಜಂಬುನಾಥು, ಕೇಂಬುದು, ಕೊಡುದು , ಉಂಬುದು ಹೀಗೆ.
ಕುಂದಾಪ್ರ ಭಾಷೆ ಕೇಂಬುಕೆ ಚಂದ. ಜೋಡಿ ಶಬ್ದ ಬಳಕೆಯು ಅತಿಯಾಗಿ ಕಂಡು ಬರುತ್ತದೆ. ಚ್ಯೊಯ್-ಚ್ಯೊಯ್ ದೋಸಿ ಹೊಯ್ಯವುದ್. ಸರಪರ ಪಾಯಸ ಸುರುದ್, ಕಯ್ಯ ಇಲ್ಲ ಕುಯ್ಯ ಇಲ್ಲ ತಾನಾಯ್ತ ತನ್ನ ಕೆಲ್ಸಾ ಆಯ್ತ್. ಪಿಳಿ-ಪಿಳಿ ಕಣ್-ಕಣ್ ಬಿಟ್ಟಕಂಡ್ ಅಂಬ್ ಈ ಭಾಷೆಯೊಳಗೊಂದು ವೈವಿಧ್ಯತೆ ಇದೆ. ಪ್ರಾದೇಶಿಕ ವ್ಯತ್ಯಾಸಗಳು ಕೇಳ ಸಿಗುತ್ತದೆ. ಅಷ್ಟೇ ಅಲ್ಲದೇ ಒಂದೊಂದು ಸಮೂದಾಯದ ಜನರ ಉಚ್ಚಾರಣೆ, ಶಬ್ದ ಬಳಕೆಯಲ್ಲಿ ಭಿನ್ನತೆ ಕಂಡುಬರುತ್ತದೆ.
ಕುಂದಾಪ್ರ ಕನ್ನಡಕ್ಕೆ ಅದರದೆ ಆದ ಸೊಗಡಿದೆ. ಇಲ್ಲಿ ಬೇರೆ ಬೇರೆ ಮಾತೃ ಭಾಷೆ ಆಡುವ ಜನರಿದ್ದು ಅವರವರ ಭಾಷಾ ಓರಣ ಕುಂದಾಪ್ರ ಕನ್ನಡಕ್ಕೆ ಅಲ್ಪ ಸಲ್ಪ ವಾಗಿ ತಾಗಿದಂತೆ ಕೇಳಿಬರುತ್ತದೆ.
ಭಾಷಾ ಶ್ರೀಮಂತಿಕೆ: ಕುಂದಾಪ್ರ ಕನ್ನಡದ ಶ್ರೀಮಂತಿಕೆಯ ಅಗಾಧತೆ ನೋಡುವಾಗ ಇದು ಉಪಭಾಷೆ, ಪ್ರಾದೇಶಿಕ ಭಾಷೆ ಅಂತ ಅನ್ನಿಸುವುದೇ ಇಲ್ಲ. ಇದರೊಳಗೆ ಏನ್ನುಂಟು ಏನಿಲ್ಲ ಅಗೆದಷ್ಟು ಬಗೆದಷ್ಟು ಸಮೃದ್ಧವಾಗಿದೆ. ಸರ್ವಕಾಲಿಕ ಸಂದೇಶವನ್ನು ಸಾರುವ ಬದುಕಿಗೆ ಪೂರಕವಾದ ತಮ್ಮ ಜೀವನಾನು ಭವದಿಂದ ಕಂಡು ಕೊಂಡ ವಿಚಾರಗಳ ಸಾರ ಸಂಗ್ರಹದ ಭತ್ತ ಕುಟ್ಟುವ ಹಾಡುಗಳು, ದೈನಂದಿನ ವ್ಯವಹಾರದಲ್ಲಿ ನಮಗರಿವಿಲ್ಲದೆ ಸಂದರ್ಭ ಅನುಸಾರವಾಗಿ ಮೂಡಿಬರುವ ಶಬ್ದಗಳ ಸುಳಿ ತನ್ನ ತನವನ್ನು ಬಿಟ್ಟು ಕೊಡದ ಭಾಷೆ ಇದು.
ಉದಾಹರಣೆಗೆ ಹ್ಯಾಂಗ್ ಇದ್ರಿ ಎಂದು ನಮ್ಮವರನ್ನು ವಿಚಾರಿಸಿ ಕೊಳ್ಳುವ ಭಾಷಾ ಶೈಲಿ. ಹಂಬ್ಲಾಯಿ ಹೇಳಿ ಬಲ್ಯ ಅನ್ನುವುದು ಹಂಬ್ಲಾಯ್ದೆ ಹೋರ್ ಯಾಪಾರ ಹೆಸ್ಕಿ ಆತಿತ್….ಇಂತಹ ಆಡು ಭಾಷೆ ಎಂದೂ ಅಳಿಯದು ಕಾರಣ ಇಷ್ಟೇ. ಮಾನವ ಸಂಘ ಜೀವಿ ಮಾತು ಮಾನವನ ಅಸ್ತ್ರ ಮಾತಾಡದೆ ಇರಲಾರ ಹಾಗೆಂದ ಮೇಲೆ ಮಾತಿಗೆ ಭಾಷೆ ಬಳಸಲೇ ಬೇಕುತಾನೆ ಭಾಷೆ ಬಳಸಿದಷ್ಟು ಸಮೃದ್ಧವಾಗುವುದು.
ಭಾಷಾ ಸೌಂದರ್ಯ: ಒಂದೊಂದು ಶಬ್ದಗಳು ತಳಿರು ತೋರಣ ಕಟ್ಟಿ ಶೃಂಗರಿಸಿದಂತೆ. ಅರ್ಥ ಪೂರ್ಣ ಗಾದೆ ಮಾತುಗಳಿವೆ. ಹೊಯ್….. ಬೆಲ್ಲ ಹಾಕರ್ ಅಷ್ಟೇ
ಪಾಯಸು ಆತ್ತ್ ಅಂಬುದ್. ಸುಳ್ಳ್ ಅಲ್ಲಾ ಕಾಣಿ ಅಂಬುದ್ ಇಲ್ಲಿ ಬೆಲ್ಲ ಮತ್ತು ಪಾಯಸ ಮುಖ್ಯವಲ್ಲ. ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ ಎಂದರ್ಥ. ಹೇಂಗಾರೂ
ಸೈಯ್ಯೆ ನಮ್ಗಂತೂ ಒಂದ್ ನಮನಿ ಹಬ್ಬು ಈ ವಿಶ್ವ ಕುಂದಾಪ್ರ ಕನ್ನಡ ದಿನ. ಒಂದು ಬೇಸರ ಸಂಗತಿ ಎಂದರೆ ಇತ್ತೀಚೆಗೆ ಕುಂದಾಪ್ರ ಕನ್ನಡ ಆಡುವ ಕೆಲವರು ಭಾಷೆಯ ಮೂಲ ಬೇರನ್ನು ಅಲುಗಾಡಿಸುತ್ತಿದ್ದು, ಭಾಷೆಯನ್ನು ತಿರುಚುತ್ತಾ ಪರಭಾಷಾ ಶಬ್ದಗಳನ್ನು ಕುಂದಾಪ್ರ ಕನ್ನಡದೊಳಗೆ ತುರಿಕಿಸುತ್ತಾ ಭಾಷೆಯ ಅಂದ ಗೆಡಿಸಿ ಭಾಷಾ ಅಸ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಭಾಷೆಯ ಸ್ವರೂಪದಲ್ಲಿ ಬದಲಾವಣೆಗಳಾಗುತ್ತಾ ಹೋಗಿ ಭಾಷಾ ಶ್ಯೆಲಿಯಲ್ಲಿ ಬದಲಾವಣೆ ಬರಬಾರದು.
ಆಧುನಿಕತೆ ಬೆಳೆದಂತೆ ಕೆಲವು ಕಾಯಕಗಳು ಮರೆಯಾಗಿ ಬಳಸುವ ವಸ್ತುಗಳ ಅಗತ್ಯ ವಿಲ್ಲದೆ, ಅದರ ಹೆಸರು ಮರೆಯಾಗುತ್ತಿದೆ. ಉದಾಹರಣೆಗೆ ಒನಕಿ, ಕಡಗೋಲ್, ತಿರಿ, ಗೆರಸಿ, ಸಾರಣಿಗಿ, ಕಡುಕಲ್. ಕುಂದಾಪ್ರ ಕನ್ನಡ ಯಾವ ಶಾಲೆಗೂ ಉದ್ಯೋಗಕ್ಕೂ ಮಾನದಂಡವಲ್ಲ. ಇದು ಮನದಂಗಳದ ಭಾಷೆ, ಮನೆ,
ಮನೆಯ ಭಾಷೆ, ಒಡಲಾಳದಲ್ಲಿ ಅಡಗಿರುವ ನಾಲಿಗೆ ಯಲ್ಲಿ ನಲಿವ ಸೋಲಿಲ್ಲದ ಭಾಷೆ. ಇದಕ್ಕೆ ಅಳಿವಿಲ್ಲ. ಮೌಖಿಕವಾಗಿ ಮೆರೆದಾಡುವ ಕುಂದ ಕನ್ನಡ, ಕುಂದಾಪ್ರ
ಕನ್ನಡ ಎಂದೆಲ್ಲಾ ಕರೆವ ಭಾಷೆ ಪಶ್ಚಿಮಕ್ಕೆ ಕಲ್ಯಾಣಪುರ ಹೊಳೆಯಿಂದ, ದಕ್ಷಿಣಕ್ಕೆ ಹೆಬ್ರಿ, ಉತ್ತರಕ್ಕೆ ಬೈಂದೂರು ಶಿರೂರುನಿಂದ ಮಾಬುಕಳ ಹೊಳೆಯವರೆಗೆ ಮೂಡಣ ಪರ್ವತ ಹಾಗೂ ಪಡುವಣ ಕಡಲ ತಡಿಯವರೆಗೆ ಇರುವ ಊರುಗಳಲ್ಲಿ ಕುಂದಾಪ್ರ ಕನ್ನಡ ಹಬ್ಬಿದೆ.