ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
‘ರಾಜಾಧಿರಾಜ, ರಾಜಮಾತಾಂಡ, ಶ್ರೀಮನ್ಮಹಾರಾಜ, ಬಹು ಪರಾಕ್, ಬಹುಪರಾಕ್…’ ‘ಮಹಾರಾಜರು ಬರುತ್ತಿದ್ದಾರೆ ದಾರಿ ಬಿಡಿ…’ ಒಂದು ಕಾಲವಿತ್ತು, ಆಸ್ಥಾನದಲ್ಲಿ ಮಹಾರಾಜರ ಆಗಮನ ಆಗುತ್ತಿದ್ದಂತೆ ಭಟರು ಪರಾಕು ಮೊಳಗಿಸುತ್ತಿದ್ದರು.
ಆಸ್ಥಾನದಲ್ಲಷ್ಟೇ ಅಲ್ಲ, ಮಹಾರಾಜರು ಪುರದಲ್ಲಿ ಮೆರವಣಿಗೆ ಹೊರಟಾಗಲೂ ಈ ರೀತಿಯ ಉದ್ಘೋಷಗಳು ಹೊರಡುತ್ತಿದ್ದವು. ಉದ್ಘೋಷದ ಬೆನ್ನಲ್ಲೇ ಒಂದಷ್ಟು ಭಟರೊಂದಿಗೆ ಆನೆಯ ಮೇಲೋ, ಕುದುರೆಯ ಮೇಲೋ ಸವಾರಿ ಮಾಡಿ ಪುರ ಪ್ರವೇಶ ಮಾಡಿದ ತಮ್ಮ ದೊರೆಯ ದರ್ಶನಕ್ಕೆ ಪ್ರಜೆಗಳು ಮಾರ್ಗದ ಇಕ್ಕೆಲ ಗಳಲ್ಲಿ ಕಾದು ನಿಲ್ಲುತ್ತಿದ್ದರು. ಅದೊಂದು ಯ, ಭಕ್ತಿ, ಭಾವಗಳ ಸಮಾಗಮ. ಪ್ರಜೆಗಳಿಗೆ ಅದೊಂದು ಕೌತುಕದ, ಸಂಭ್ರಮದ ಕ್ಷಣ.
ಇದೆಲ್ಲ ಕೇಳಿದ್ದು, ಓದಿದ್ದು, ಸಿನಿಮಾದಲ್ಲಿ, ಕಿರುತೆರೆಯ ಧಾರಾವಾಹಿಗಳಲ್ಲಿ ನೋಡಿದ್ದು ಶಿವಾಯ್ ಪ್ರತ್ಯಕ್ಷ ಕಂಡದ್ದಿಲ್ಲ. ಆದರೆ ಅದಕ್ಕೆ ಸರಿಸಮನಾದ ಝಲಕ್ ಅಥವಾ ಮಿನುಗು ನೋಟ ನನಗೆ ಕಂಡದ್ದು ಸೌದಿ ಅರೇಬಿಯಾದ ಮರಳುಗಾಡಿನಲ್ಲಿ. ಅದೊಂದು ಮೌನ ಮೆರವಣಿಗೆ. ಅಲ್ಲಿ ಉದ್ಘೋಷಗಳಿಲ್ಲ, ಜಯಘೋಷ ಗಳಿಲ್ಲ. ಚಲಿಸುವ ವಾಹನದ ಶಬ್ದವೇ ಎಲ್ಲ. ಆದರೂ ಚಲಿಸುವ ವಾಹನಗಳ ಆ ಸಮೂಹವನ್ನು ಕಂಡಾಗ ರಾಜ ಮಹಾರಾಜರುಗಳ ಮೆರವಣಿಗೆಯ ಕಲ್ಪನೆ ಮೂಡುತ್ತದೆ. ಅದನ್ನು ’Rig move’ ಎನ್ನುತ್ತಾರೆ.
ರಿಗ್ ಮೂವ್ ಎಂದರೆ ತೈಲ ಅಥವಾ ಅನಿಲದ ಬಾವಿ ಕೊರೆಯುವ ಯಂತ್ರ ಮತ್ತು ಇತರ ಸಲಕರಣೆಗಳನ್ನು ಸಾಗಿಸುವ ಕಾರ್ಯ. ಆದರೆ ಅಷ್ಟು ಸುಲಭದ ಕೆಲಸವೂ ಅಲ್ಲ. ಕೊಲ್ಲಿ ರಾಷ್ಟ್ರಗಳ ಜೀವ ಸೆಲೆಯಾದ ತೈಲ ಮತ್ತು ಅನಿಲವನ್ನು ಭೂ ಗರ್ಭದಿಂದ ಹೊರಗೆ ತರಲು ಪ್ರಮುಖ ಮತ್ತು ಏಕೈಕ ಸಾಧನವಾದ ‘ರಿಗ್’ ಚಲಿಸುವಾಗ ಅಷ್ಟೂ ಮರ್ಯಾದೆ ಸಿಗದಿದ್ದರೆ ಹೇಗೆ? ಸೌದಿ ಅರೇಬಿಯಾ ಹಾಗೂ ಇತರ ಕೊಲ್ಲಿ ರಾಷ್ಟ್ರಗಳ ಬಹುತೇಕ ಭೂಭಾಗ ಮರಳಿನಿಂದ ಆವರಿಸಿ ಕೊಂಡಿದೆ. ಕೆಲವೊಂದು ಪ್ರದೇಶದಲ್ಲಿ ನಿಂತು ನೋಡಿದರೆ, ಕಣ್ಣು ಹಾಯಿಸಿದಷ್ಟೂ ಬರೀ ಮರಳೇ ಮರಳು. ಆ ಪ್ರದೇಶದಲ್ಲಿ ಮರ ಗಿಡ ಬಿಡಿ, ಸಣ್ಣ ಕುರುಚಲು ಹುಲ್ಲೂ ಕಾಣುವುದಿಲ್ಲ.
ನೀರಿನ ಸುಳಿವೇ ಇಲ್ಲದ ಪ್ರದೇಶದಲ್ಲಿ ಅದು ಹುಟ್ಟುವುದಾದರೂ ಹೇಗೆ ಅಲ್ಲವೇ? ಆದರೆ, ಇಂದು ವಿಶ್ವವನ್ನೇ ಬೆರಗುಗೊಳಿಸಿದ ತೈಲ ನಿಕ್ಷೇಪ ಇರುವುದು ಇದೇ ಮರುಭೂಮಿಯ ಒಡಲಿನಲ್ಲಿ. ಸಮುದ್ರ ಮಧ್ಯದಲ್ಲಿಯೂ ಕೆಲವು ಕಡೆ ತೈಲ ನಿಕ್ಷೇಪಗಳು ಕಾಣಸಿಗುತ್ತವೆಯಾದರೂ ಹೆಚ್ಚಿನ ನಿಕ್ಷೇಪಗಳಿರುವುದು ಭೂಮಿಯ ಮೇಲೆಯೇ. ಸೌದಿ ಅರೇಬಿಯಾದ ದಕ್ಷಿಣ ಘವಾರ್ ಪ್ರದೇಶದಲ್ಲಿ ಉತ್ಮಾನಿಯಾ ಎಂಬ ಸ್ಥಳವಿದೆ. ಆ ಪ್ರದೇಶದ ಐವತ್ತು ಕಿಲೋ ಮೀಟರ್ ಪರಿಧಿಯಲ್ಲಿ ಸುಮಾರು ಎರಡೂವರೆ ಸಾವಿರ ತೈಲ ಮತ್ತು ಅನಿಲದ ಬಾವಿಗಳಿವೆ. ದೇಶದ ಉಳಿದ ಕಡೆಯಾಗಲಿ, ಇತರ ಕೊಲ್ಲಿ ರಾಷ್ಟ್ರಗಳಲ್ಲಾಗಲಿ ತೈಲ ಬಾವಿಗಳು ಈ ಪ್ರಮಾಣದ ಸಾಂದ್ರತೆಯಲ್ಲಿ ಇಲ್ಲವಾದರೂ ತೀರಾ ಕಮ್ಮಿಯೂ ಇಲ್ಲ.
ಇಂತಿರ್ಪ ತೈಲವನ್ನೋ, ಅನಿಲವನ್ನೋ ಭೂಮಿಯ ಒಳಗಿಂದ ಮೇಲಕ್ಕೆ ಎತ್ತಲು ರಿಗ್‌ಗಳು ಹಗಲು ರಾತ್ರಿ ಎನ್ನದೆ, ವರ್ಷದ ಮುನ್ನೂರ ಅರವತ್ತೈದು ದಿನ, ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುತ್ತವೆ. ಮರುಭೂಮಿಯಲ್ಲಿಯೇ ಆದರೂ ಒಂದು ರಿಗ್ ಬಾವಿ ಕೊರೆಯುತ್ತಿದೆ ಎಂದರೆ, ತಾತ್ಕಾಲಿಕವಾಗಿ ಅಲ್ಲೊಂದು ಪುಟ್ಟ ಊರು ನಿರ್ಮಾಣ ಗೊಳ್ಳುತ್ತದೆ. ಒಂದು ಕ್ಯಾಂಪ್‌ನಲ್ಲಿ ರಿಗ್‌ನ ಗಾತ್ರಕ್ಕೆ ಅನುಗುಣವಾಗಿ ಐವತ್ತರಿಂದ ನೂರು ಜನ ಕೆಲಸ ಮಾಡುತ್ತಾರೆ. ಇವರಲ್ಲಿ ತಾಂತ್ರಿಕ ವರ್ಗದವರು, ಸಹಾಯಕರು, ಲಾಂಡ್ರಿಯವರು, ವಾಹನ ಚಾಲಕರ ಜತೆಗೆ ಅಡುಗೆಯವರೂ ಇರುತ್ತಾರೆ.
ಮತ್ತೆ, ಅಷ್ಟೊಂದು ಜನರಿಗೆ ಹೊತ್ತು ಹೊತ್ತಿಗೆ ಬಿಸಿ ಬಿಸಿ ಕೂಳು ಬೇಯಿಸಿ ಹಾಕಲು ಯಾರಾದರೂ ಬೇಕಲ್ಲ! ಅಷ್ಟು ಜನರ ವಸತಿಗೆ ಮನೆಗಳು ಬೇಕು, ವಿದ್ಯುತ್
ಸೌಕರ್ಯ (ಜನರೇಟರ್) ಬೇಕು, ಟೆಲಿಫೋನ್, ಟಿವಿ, ವಾಹನಕ್ಕೆ ಪೆಟ್ರೋಲ್, ರಿಗ್‌ಗೆ ಡೀಸೆಲ್, ಎಲ್ಲವೂ ಬೇಕು. ತಾತ್ಕಾಲಿಕವಾಗಿ ಆ ಎಲ್ಲಾ ಸೌಕರ್ಯಗಳೂ ಅಲ್ಲಿ ಇರುತ್ತವೆ. ಒಂದು ರಿಗ್ ಒಂದು ಕಡೆ ಅಬ್ಬಬ್ಬಾ ಎಂದರೆ ಮೂರರಿಂದ ನಾಲ್ಕು ವಾರ ಇದ್ದು, ಬಾವಿ ಕೊರೆದು ಮುಂದಿನ ಕ್ಷೇತ್ರಕ್ಕೆ ಹೊರಡುತ್ತದೆ. ಆದ್ದರಿಂದ ಯಾವುದೇ ರಿಗ್ ಆಗಲಿ, ಕೆಲಸ ಮಾಡುವವರಾಗಲಿ ಒಂದು ಕಡೆ ಸ್ಥಿರವಾಗಿ ನೆಲೆ ನಿಲ್ಲುವುದು ಅಸಂಭವ. ಎರಡರಿಂದ ನಾಲ್ಕು ವಾರದ ಒಳಗೆ ಅವರ ಎತ್ತಂಗಡಿ ಕಟ್ಟಿಟ್ಟ ಬುತ್ತಿ. ಹಾಗಂತ ಇರುವಷ್ಟು ದಿನ ಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಂಡಿರಬೇಕು ತಾನೆ? ಅದಕ್ಕೆ ಬೇಕಾಗಿ ಎಲ್ಲ ಸೌಲಭ್ಯಗಳೂ, ವ್ಯವಸ್ಥೆಗಳೂ ಆ ಕ್ಯಾಂಪ್‌ನಲ್ಲಿ ಇರುತ್ತವೆ.
ಅಂದಹಾಗೆ, ಸೌದಿ ಅರೇಬಿಯಾ ಒಂದರಲ್ಲೇ ಇಂತಹ ಸುಮಾರು ಐವತ್ತು ರಿಗ್ ಕೆಲಸ ಮಾಡುತ್ತವೆ. ಹೀಗಿರ್ಪ ರಿಗ್‌ಗಳಲ್ಲಿ ಕೆಲಸ ಮಾಡುವವರಿಗೆ ಸೌಲಭ್ಯಗಳೂ ಇತರರಿಗಿಂತ ಭಿನ್ನವಾಗಿರುತ್ತವೆ. ಕೆಲವು ರಿಗ್‌ಗಳಲ್ಲಿ ಎಂಟು ತಾಸಿನ ಮೂರು ಶಿಫ್ಟ್’ಗಳಲ್ಲಿ ಜನ ಕೆಲಸ ಮಾಡಿದರೆ ಇನ್ನು ಕೆಲವುದರಲ್ಲಿ ಹನ್ನೆರಡು ತಾಸಿನ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವರಿಗೆ ಒಂದು ತಿಂಗಳು ಕೆಲಸ ಮಾಡಿದ ನಂತರ ಒಂದು ತಿಂಗಳು, ಕೆಲವರಿಗೆ ಮೂರು ತಿಂಗಳು ಕೆಲಸ
ಮಾಡಿದ ನಂತರ ಮೂರು ತಿಂಗಳು ರಜೆ ಇರುತ್ತದೆ. ಬಹುತೇಕ ಬಾವಿ ಕೊರೆಯುವ ಸ್ಥಳದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಈ ಸೌಲಭ್ಯವಿರುತ್ತದೆ.
ಕಾರಣ ಇಷ್ಟೇ, ಆ ಸ್ಥಳದಲ್ಲಿ ಗಾಳಿಯೊಂದಿಗೆ ಸಣ್ಣ ಪ್ರಮಾಣದಲ್ಲಿ ವಿಷಕಾರಿ ಅನಿಲ ಸೇರುವ ಸಾಧ್ಯತೆ ಇರುತ್ತದೆ. ಜತೆಗೆ ಸದಾ ಕರ್ಕಶವಾದ ಸದ್ದು ಬರುವ
ಜಾಗವೂ ಅದಾಗಿರುತ್ತದೆ. ಅಂತಹ ಸ್ಥಳದಲ್ಲಿ ಸತತವಾಗಿ ದುಡಿದು ದಣಿದ ದೇಹಕ್ಕೆ ಪುನಃಶ್ಚೇತನ ಒದಗಿಸಿಕೊಡುವ ಕಾರಣದಿಂದ ಈ ಸೌಲಭ್ಯ ಒದಗಿಸ ಲಾಗುತ್ತದೆ. ಇದರ ಜತೆಗೆ, ದಿನದ ಇಪ್ಪತ್ನಾಲ್ಕು ಗಂಟೆಯೂ ಕ್ಯಾಂಟೀನ್, ಸಣ್ಣ ಪುಟ್ಟ ಆಟ ಆಡುವ ವ್ಯವಸ್ಥೆಯೂ ಇರುತ್ತದೆ. ಊಹಿಸಿ, ಇಂತಹ ಒಂದು ಪುಟ್ಟ ಊರೇ ಕಿತ್ತು ಹೊರಟರೆ ಹೇಗಿರಬೇಡ? ಅದು ಬಡತನದಿಂದಲೋ, ಬರಗಾಲದಿಂದಲೋ ಗುಳೆ ಎದ್ದು ಹೋಗುವುದಲ್ಲ. ದೇಶದ ಖಜಾನೆ ಭರಿಸಲು, ಕೈಗೆತ್ತಿ ಕೊಂಡ ಕಾರ್ಯವನ್ನು ಪೂರ್ಣಗೊಳಿಸಿ, ಮತ್ತೆ ಖಜಾನೆ ತುಂಬಿಸಲು ಮುಂದಿನ ಸ್ಥಳಕ್ಕೆ ಹೋಗುವುದು ಅಂದರೆ ರಾಜ ಠೀವಿಯಲ್ಲಿಯೇ ಹೋಗಬೇಕು ತಾನೆ? ರಿಗ್ ಸವಾರಿಯೂ ಹಾಗೆಯೇ.
ಮುಂದೆ ಮೂರರಿಂದ ನಾಲ್ಕು ರಕ್ಷಣಾ ವಾಹನ, ಅದರ ಹಿಂದೆ ದೈತ್ಯಾಕಾರದ ರಿಗ್ ಹೊತ್ತ, ಅಷ್ಟೇ ದೈತ್ಯಾಕಾರದ ಟ್ರೈಲರ್ ಅಥವಾ ಸಾಗಣೆಗೆ ಬಳಸುವ ವಾಹನ. ಅದರ ಹಿಂದೆ ಒಂದಷ್ಟು ಯಂತ್ರಗಳನ್ನು, ಇತರ ಸಲಕರಣೆಗಳನ್ನು ಹೊತ್ತ ವಾಹನ, ನಂತರ ವಸತಿಗೆ, ಕಚೇರಿಗೆ ಬಳಸುವ ಪೋರ್ಟ್ ಕ್ಯಾಬಿನ್‌ಗಳು, ನೀರಿನ ಟ್ಯಾಂಕರ್‌ಗಳು, ಅದರ ಹಿಂದೆ ಸಿಬ್ಬಂದಿಗಳನ್ನು ಹೊತ್ತ ಬಸ್, ಕೊನೆಯಲ್ಲಿ ಮತ್ತೆ ಒಂದೋ ಎರಡೊ ರಕ್ಷಣಾ ವಾಹನಗಳು. ಇಲ್ಲಿ ರಕ್ಷಣಾ ವಾಹನ ಗಳೆಂದರೆ ಕಳ್ಳತನ, ದರೋಡೆಗಳಾಗುತ್ತವೆ ಎಂಬ ಭಯದಿಂದ ಇರುವಂಥದ್ದಲ್ಲ. ಮರಳುಗಾಡಿನ ಸಮಸ್ಯೆಯೇ ಬೇರೆ ಇದೆ.
ಸಾಮಾನ್ಯವಾಗಿ ಮರುಭೂಮಿಯಲ್ಲಿ ರಿಗ್ ಸಾಗಿಸಲು ನಿರ್ಮಿಸುವ ರಸ್ತೆಗಳು ಹತ್ತರಿಂದ ಹನ್ನೆರಡು ಮೀಟರ್ ಅಗಲವಾಗಿರುತ್ತವೆ. (ಕೆಲವೊಮ್ಮೆ ದೊಡ್ಡ ರಿಗ್ ಚಲಿಸಲು ಬೇಕಾಗಿಇನ್ನೂ ಅಗಲವಾದ ರಸ್ತೆ ನಿರ್ಮಿಸುವುದೂ ಇದೆ. ಅನಿಲದ ಬಾವಿ ಕೊರೆಯುವ ರಿಗ್‌ಗಳು ತೈಲದ ಬಾವಿ ಕೊರೆಯುವ ರಿಗ್‌ಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ) ಇದು ರಿಗ್ ವರ್ಗಾವಣೆ ಮಾಡಲು ಬಳಸುವ ವಾಹನದ ಅಗಲಕ್ಕಿಂತ ಒಂದೋ ಎರಡೋ ಮೀಟರ್ ಹೆಚ್ಚೇ ಅಗಲವಾಗಿರುತ್ತದೆ. ಆದರೆ
ಕೆಲವೊಮ್ಮೆ, ತಿರುವಿನಲ್ಲಿ ಅಥವಾ ಭಾರ ಹೆಚ್ಚಾದಾಗ, ವಾಹನಗಳ ಚಲಿಸುವಿಕೆಯಿಂದ ರಸ್ತೆ ಸಡಿಲವಾದಾಗ (ಬಹುತೇಕ ರಸ್ತೆಗಳೆಲ್ಲ ಮಣ್ಣಿನದ್ದಗಿರುವುದರಿಂದ)
ವಾಹನಗಳು ಹೂತು ಹೋಗುವ ಸಂಭವ ಇರುತ್ತದೆ.
ಒಮ್ಮೆ ರಿಗ್ ಸಾಗಿಸುವ ವಾಹನ ಹೂತು ಹೋದರೆ ಹಿಂದಿನವರು ಮುಂದಾಗಲಿ, ಮುಂದಿನವರು ಹಿಂದಾಗಲಿ ಬರುವ ಸಾಧ್ಯತೆ ಇರುವುದಿಲ್ಲ. ಆ ಸಂದರ್ಭದಲ್ಲಿ ರಕ್ಷಣೆಗೆ ಇರುವ ವಾಹನಗಳು ಜಾಗೃತವಾಗುತ್ತವೆ. ಆದಷ್ಟು ಬೇಗ ರಿಗ್ ಅಲ್ಲಿಂದ ಹೊರಟು ಮುಂದುವರಿಯಲು ಕಾರ್ಯಪ್ರವೃತ್ತವಾಗುತ್ತವೆ. ಆಗಬೇಕಾದದ್ದೇ, ಏಕೆಂದರೆ ಒಂದು ರಿಗ್‌ನ ಒಂದು ಗಂಟೆ ವ್ಯರ್ಥವಾದರೆ ಐವತ್ತರಿಂದ ಅರವತ್ತು ಸಾವಿರ ಡಾಲರ್ (ಮುವತ್ತೇಳರಿಂದ ನಲವತ್ತೈದು ಲಕ್ಷ ರುಪಾಯಿ) ನಷ್ಟವಾಗುತ್ತ ದೆ! ಅನಿವಾರ್ಯವಲ್ಲದಿದ್ದರೆ ರಿಗ್ ಸಾಗಿಸುವ ವಾಹನಗಳು ದೇಶದ ಹೆದ್ದಾರಿಯಲ್ಲಾಗಲಿ ಅಥವಾ ಪ್ರಮುಖ ರಸ್ತೆಗಳಲ್ಲಾಗಲಿ ಚಲಿಸುವುದಿಲ್ಲ. ‘ನನ್ನ ಸ್ಟೈಲೇ ಬೇರೆ, ನನ್ನ ರೂಟೇ ಬೇರೆ’ ಎನ್ನುವಂತೆ ಅವುಗಳಿಗಾಗಿಯೇ ಪ್ರತ್ಯೇಕ ರಸ್ತೆಗಳಿರುತ್ತವೆ.
ರಿಗ್ ಮತ್ತು ಕ್ಯಾಂಪ್ ಹೊತ್ತ ವಾಹನಗಳ ಸಂಚಾರದ ವೇಗದ ಮಿತಿ ಪ್ರತಿ ಗಂಟೆಗೆ ಇಪ್ಪತ್ತರಿಂದ ಇಪ್ಪತ್ತೈದು ಕಿಲೋಮೀಟರ್ ಇರುವುದರಿಂದ ಈ ಪರ್ಯಾಯ
ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಇದೇ ರಸ್ತೆಗಳನ್ನು ಮುಂದೆ ತೈಲ ಅಥವಾ ಅನಿಲದ ಬಾವಿಗಳ ಸಂಪರ್ಕಕ್ಕೆ ಬಳಸಿಕೊಳ್ಳಲಾಗುತ್ತದೆ. ಆದರೆ ಏನು ಗೊತ್ತಾ, ರಿಗ್ ಒಂದು ಕಡೆಯಿಂದ ಇನ್ನೊಂದು ಕಡೆ ಸಂಚರಿಸುವಾಗ ನೋಡುವುದಿದೆಯಲ್ಲ, ಅದು ನಿಜಕ್ಕೂ ನೇತ್ರಾನಂದ.
ರಿಗ್ ಹೊತ್ತ ವಾಹನಗಳು ದೂರದಲ್ಲಿ ಕಂಡರೂ ಸಾಕು, ಆ ಮಾರ್ಗದಲ್ಲಿ ಸಂಚರಿಸುತ್ತಿರುವ ಸಣ್ಣ ಪುಟ್ಟ ವಾಹನಗಳು ತಮ್ಮ ವೇಗ ತಗ್ಗಿಸುತ್ತವೆ, ಪಕ್ಕದಲ್ಲಿ
ನಿಂತು ರಿಗ್‌ನ ಮೆರವಣಿಗೆ ಸಾಗಿ ಹೋಗುವವರೆಗೆ ಕಾಯುತ್ತವೆ. ಇದನ್ನು ಭಯ ಎನ್ನಿ, ಗೌರವ ಎನ್ನಿ, ಕುತೂಹಲ ಎನ್ನಿ, ಚೆಂದ ಎನ್ನಿ, ಅದು ಅವರವರ ಭಾವಕ್ಕೆ ಬಿಟ್ಟ ಸಂಗತಿ.
ಮರುಭೂಮಿ ಪ್ರದೇಶದಲ್ಲಿ ಬಡೋಯಿನ್ ಅಥವಾ ಬದುವಿನ್ ಎಂದು ಕರೆಸಿಕೊಳ್ಳುವ ಅಲೆಮಾರಿಗಳು ಆಗಾಗ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವಾಗಲೂ ಈ ರೀತಿಯ ದೃಶ್ಯ ಕಾಣ ಸಿಗುತ್ತದೆ. ವ್ಯತ್ಯಾಸವೆಂದರೆ ಅದರ ಗಾತ್ರ ಚಿಕ್ಕದಾಗಿ ರುತ್ತದೆ. ವಾಹನಗಳ ಸಂಖ್ಯೆ, ಗಾತ್ರ ಕಮ್ಮಿ ಇದ್ದು, ಒಂಟೆ, ಕುರಿ ಇತ್ಯಾದಿ ಪ್ರಾಣಿಗಳು ಜತೆಗಿರುತ್ತವೆ. ಅದೊಂದು ಪ್ರತ್ಯೇಕ ಲೇಖನದ ವಸ್ತು. ಅದರ ಕುರಿತು ಮುಂದೊಂದು ದಿನ ವಿವರವಾಗಿ ಹೇಳುತ್ತೇನೆ. ಕೊನೆಯದಾಗಿ ಹೇಳುವುದೇನೆಂದರೆ, ಹಿಂದಿನ ಕಾಲದ ರಾಜರ ಮೆರವಣಿಗೆ ಕಣ್ಣಾರೆ ಕಾಣದಿದ್ದರೂ, ಮರುಭೂಮಿಯಲ್ಲಿ ಬಾವಿ ಕೊರೆಯುವ ಯಂತ್ರ ಮತ್ತು ತಂಡದ ಸಂಚಾರ ನೋಡಿದರೆ ಮಹಾರಾಜರ ಮೆರವಣಿಗೆಯನ್ನು ನೋಡಿದ ಸಣ್ಣ ಅನುಭವವಾಗುತ್ತದೆ.
ರಾಜ ಎಂಬ ಪದ ಹೇಗೆ ಶ್ರೀಮಂತಿಕೆಗೆ ಪ್ರತೀಕವೋ, ಹಾಗೆಯೇ ರಿಗ್ ಎಂಬ ಪದವೂ ಶ್ರೀಮಂತಿಕೆಯ ಪ್ರತೀಕವೇ. ಆಸ್ಥಾನವಾದರೇನು, ನಗರವಾದರೇನು, ಮರುಭೂಮಿಯಾದರೇನು, ಶ್ರೀಮಂತಿಕೆ ಶ್ರೀಮಂತಿಕೆಯೇ, ಗಾಂಭೀರ್ಯ ಗಾಂಭೀರ್ಯವೇ ಅಲ್ಲವೇ? ನನಗಂತೂ ಮರಳುಗಾಡಿನಲ್ಲಿ ರಿಗ್ ಸಂಚಾರ ಎಂದರೆ
ಮರುಭೂಮಿಯ ರಾಜನ ಮೆರವಣಿಗೆ!