Sunday, 15th December 2024

ಆರ್ಥಿಕತೆಯ ಅನಿರೀಕ್ಷಿತ ಆಘಾತಗಳಿಂದ ಪಾರಾಗಬೇಕು

ಅಭಿಪ್ರಾಯ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

sachidanandashettyc@gmail.com

ಆರ್ಥಿಕತೆಯೊಂದಿಗೆ ಪ್ರಾಮುಖ್ಯ ವಿಚಾರವೆಂದರೆ ‘ಕೋಟ್ಯಾನುಕೋಟಿ ಜನರ ಉಣ್ಣುವ ತಟ್ಟೆ, ಹೊಟ್ಟೆ ತುಂಬುವ ಮೊದಲೇ ಖಾಲಿಯಾಗಬಾರದು’ ಮತ್ತು ‘ತೆರಿಗೆಯೂ ದುಂಬಿ ಹೂವಿನಿಂದ ಮಕರಂದವನ್ನು ಹೀರುವ ರೀತಿಯಲ್ಲಿರಬೇಕು’ ಮತ್ತು ಆರ್ಥಿಕತೆಗೆ ಪೂರಕವಾಗುವಂತಿರಬೇಕು.

ಕಳೆದ ಮೂರು ದಶಕಗಳಲ್ಲಿ ಭಾರತವು ಅದ್ಬುತ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ, ಆದರೆ ಕೋವಿಡ್-19 ಸೃಷ್ಠಿಸಿರುವ ದುರಂತ ಆರ್ಥಿಕ ಅಭ್ಯುದಯಕ್ಕೆ ಕೊಡಲಿ ಯೇಟನ್ನು ನೀಡಿದೆ. ಕೋವಿಡ್ ಪೂರ್ವದಲ್ಲಿ ಆರ್ಥಿಕ ಅಭಿವೃದ್ಧಿಯ ಧಾವಂತಕ್ಕೆ ಮುನ್ನುಗ್ಗಿದ ದೇಶ ಈಗ ಮುಗ್ಗರಿಸುತ್ತಿದೆ. ತರ್ಕಬದ್ಧವಾಗಿ ವಿಮರ್ಶಿಸಿದರೆ ಆರ್ಥಿಕತೆಗೆ ಆಘಾತವಾಗಿರುವುದು ಬೃಹದಾಕಾರವಾಗಿ ನಿಂತಿರುವ ವಿತ್ತೀಯ ಕೊರತೆ ಮತ್ತು ಸಾಲದ ಹೊರೆ ಹಾಗೂ ಹಣದುಬ್ಬರದಿಂದ ಮತ್ತು ಇದಕ್ಕೆ ಪ್ರತ್ಯಕ್ಷ ಕಾರಣ ಕರೋನಾ ಸಾಂಕ್ರಾಮಿಕವೇ ಆಗಿದೆ.

ಕೊರತೆ ಹಣಕಾಸು ಎಂಬುದು ಬೆಂಕಿಯಿದ್ದಂತೆ. ಅದನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಅದು ಬೆಳಕು ಹಾಗೂ ಸಂತೋಷವನ್ನು ಕೊಡಬಲ್ಲದು. ಇದೀಗ ದೇಶಕ್ಕೆ ಸವಾಲಾಗಿರುವ ವಿತ್ತೀಯ ಕೊರತೆಯಿಂದ ಸಾಲದ ಪ್ರಮಾಣವು ಹೆಚ್ಚಿದೆ. ಕೇಂದ್ರ ಸರಕಾರವು ತನ್ನ ಬಹುಪಾಲು ಆದಾಯಕ್ಕೆ ಸಾಲವನ್ನು ಅವಲಂಬಿಸಿದೆ. ಸಾಲ ಮಿತಿ ಮೀರಿದೆ. ಮಿತಿ ಮೀರಿದ ಕೊರತೆ ಹಣಕಾಸಿನ ಅವಲಂಬನೆ ಯಾವತ್ತೂ ಕ್ಷೇಮಕರವಲ್ಲ, ಆದರೆ ಇದು ಅನಿರೀಕ್ಷಿತ, ಆಕಾಸ್ಮಾತ್ ಹಾಗೂ ಅಪಾಯದ ಪರಿಸ್ಥಿತಿಯಾದುದರಿಂದ ಪೂರ್ವ ನಿರ್ಧಾರಗಳು ಸಹ ಅಸಂಭವ ನೀಯ ಮತ್ತು ದೇಶ ಎದುರಿಸುತ್ತಿರುವುದು ಅಸಾಮಾನ್ಯ ಸಂದರ್ಭ.

ಕಾರಣ ಕೋವಿಡ್ 19 ಎಂಬುದು ನಿರ್ವಿವಾದ. ದೇಶದ ಸಮಗ್ರ ವೆಚ್ಚವು ಸಮಗ್ರ ಆದಾಯಕ್ಕಿಂತ ಹೆಚ್ಚಾದಾಗ ಕೊರತೆ ಸಂಭವಿಸುತ್ತದೆ. ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆಯ ಕಾಯಿದೆಯ ಪ್ರಕಾರ (ಎಫ್ಆರ್‌ಎಂಬಿ) 2020-2021ರಲ್ಲಿ ಕೊರತೆ ಶೇ.3 ರೊಳಗಿರಬೇಕಾಗಿತ್ತು. ಆದರೆ ಈ ಕೋವಿಡ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ಈ ಸಾಂಕ್ರಾಮಿಕದಿಂದಾಗಿ ಜಾರಿಗೆ ತಂದ ಲಾಕ್‌ಡೌನ್ ಆರ್ಥಿಕ ಚಟುವಟಿಕೆಗಳ ಚಕ್ರವನ್ನೇ ತಡೆದು ನಿಲ್ಲಿಸಿತು. 2019-20ರಲ್ಲಿ ವಿತ್ತೀಯ ಕೊರತೆ ಶೇ.4.6ಕ್ಕೆ ಇಳಿದಿತ್ತು. 2020-21ಕ್ಕೆ ಶೇ.3.5ಕ್ಕೆ ಇಳಿಸುವ ನಿರೀಕ್ಷೆ ಇತ್ತು. ಆದರೆ ಈ ಸೋಂಕಿನ ಆಘಾತಕಾರಿ ಸನ್ನಿವೇಶ ಗಳಿಂದ ಸರಕಾರದ ಬೊಕ್ಕಸ ಬರಿದಾಗುತ್ತಿವೆ. ಪ್ರಥಮ ಅಲೆಯಿಂದ ಚೇತರಿಸಿ ಕೊಳ್ಳುತ್ತಿರುವ ಸಂದರ್ಭ ದಲ್ಲಿ ಎರಡನೆಯ ಅಲೆ ಚಂಡಮಾರುತದಂತೆ ಅಪ್ಪಳಿಸಿ ಆರ್ಥಿಕತೆಯ ರಚನೆಯನ್ನು ಪುನಃ ಹಾಳುಗೆಡಹಿತು.

ಕೊರತೆ ಹಣಕಾಸಿನ ಅತ್ಯಂತ ಮುಖ್ಯವಾದ ದುಷ್ಪರಿಣಾಮವೆಂದರೆ ಹಣದುಬ್ಬರ. ಇದು ಬೆಲೆ ಏರಿಕೆಗೆ ಕಾರಣವಾಗುವುದಲ್ಲದೆ ಸರಕುಗಳ ಕೊರತೆಯ ಸನ್ನಿವೇಶಕ್ಕೆ ಕಾರಣವಾಗುತ್ತಿದೆ. ಇದರಿಂದ ಕಾಳಸಂತೆ ಮಾರಾಟ, ಕೃತಕ ಅಭಾವ ಮತ್ತು ನಿರ್ದಿಷ್ಟ ಆದಾಯ ಪಡೆಯುವ ಮತ್ತು ಜನಸಾಮಾನ್ಯರನ್ನು ತೊಂದರೆಗೆ ಸಿಲುಕಿಸುತ್ತದೆ. ಬೆಲೆ ಏರಿಕೆಯಿಂದ ಖರ್ಚು ಹೆಚ್ಚಾಗಿ ಉಳಿತಾಯ ಕಡಿಮೆಯಾಗುತ್ತಿದೆ. ಎಲ್ಲಾ ಆರ್ಥಿಕ ಚಟುವಟಿಕೆಗಳು ಮತ್ತು ವಹಿವಾಟು ಕಡಿಮೆಯಾಗಿ ಅಂತಾರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಕಡಿಮೆಯಾಗಿ ವಿದೇಶಿ ಸಾಲವೂ ದುಬಾರಿಯಾಗುತ್ತದೆ. ಇದೀಗ ಹಲವಾರು ಬಾಹ್ಯ ಮತ್ತು ಆಂತರಿಕ ಆರ್ಥಿಕ ಒತ್ತಡಗಳಿಂದಾಗಿ ಅನಿವಾರ್ಯವಾದ ಇಂಧನ ಸಂಬಂಧಿ ತೆರಿಗೆಗಳನ್ನು ಇಳಿಸಲಾಗುತ್ತಿಲ್ಲ.

ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆಯಿಂದ ಸರಕಾರಕ್ಕೆ 4.24 ಲಕ್ಷ ಕೋಟಿ ರು. ವಾರ್ಷಿಕ ಆದಾಯವಿದೆ. ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಸರಿದೂಗಿಸಲಾಗದು. ಇದೀಗ ಸರಕಾರವು ತೀವ್ರ ತೊಂದರೆಗೊಳಗಾದ ಉದ್ದಿಮೆಗಳ ಆರ್ಥಿಕ ಉತ್ತೇಜನಕ್ಕಾಗಿ ಘೋಷಿಸಿದ 6.29 ಲಕ್ಷ ಕೋಟಿ ಪ್ಯಾಕೇಜ್‌ನಿಂದ ದೇಶೀಯ ವಿತ್ತೀಯ ಕೊರತೆ ಪುನಃ ಹೆಚ್ಚಾಗುವುದು ಖಚಿತ. ಸಾಲ ನೀಡುವುದಕ್ಕಿಂತಲೂ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಠಿಯಾಗುವ ಕೆಲಸ ಆಗಬೇಕಾಗಿದೆ.

ಸಂಕಷ್ಟದಲ್ಲಿರುವ ಉದ್ದಿಮೆಗಳಿಗೆ ಸಾಲ ನೀಡುವ ಬ್ಯಾಂಕ್‌ಗಳು ಉತ್ಸುಕರಾಗಿಲ್ಲ. ಗ್ರಾಹಕರು ಕೋವಿಡ್‌ಗೂ ಮುಂಚಿನ ರೀತಿ ಖರೀದಿಸುತ್ತಿಲ್ಲ. ಇಂಧನ ದರ
ಏರಿಕೆಯಿಂದ ಗೃಹ ಬಳಕೆಯ ವಸ್ತುಗಳು ದುಬಾರಿಯಾದುದರಿಂದ ಬಡ, ಮಧ್ಯಮ ವರ್ಗದ ಬದುಕು ದುಸ್ತರವಾಗಿದೆ. ಉಳಿತಾಯವಿಲ್ಲ, ಬ್ಯಾಂಕ್ ಠೇವಣಿಗಳೂ ಇಳಿಮುಖವಾಗುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಬ್ರೆಂಟ್ ಕಚ್ಚಾತೈಲ ಗಣನೀಯ ಏರಿಕೆ ಸಂಭವಿಸಿರುವುದರಿಂದ ಪೆಟ್ರೋಲ್, ಡಿಸೇಲ್ ಬೆಲೆ
ನಿಯಂತ್ರಣ ತಪ್ಪುತ್ತಿದೆ. ಚಿಲ್ಲರೆ ಹಣದುಬ್ಬರ ಶೇ.7.5 ತಲುಪುವ ಕಳವಳವಿದೆ.

ಮೂಲ ಹಣದುಬ್ಬರ ಶೇ.5.8ರಷ್ಟು ಅಧಿಕಗೊಂಡಿದೆ. ರಾಷ್ಟ್ರೀಯ ಸಗಟು ಹಣದುಬ್ಬರ ಶೇ.12.07ರಲ್ಲಿ ನಿಂತಿದೆ. ಇದೀಗ ತೈಲ ಕಂಪನಿಗಳು, ಸರಕಾರಗಳು
ಯಾವುದೇ ಬೆಲೆ ತೆತ್ತಾದರೂ ಇಂಧನ ಬೆಲೆ ಇಳಿಸಬೇಕಾಗಿದೆ. ಇನ್ನಷ್ಟು ಹೆಚ್ಚಿದರೆ ಮಾರಾಟ ಕಡಿಮೆಯಾಗಿ ಆರ್ಥಿಕ ಬೆಳವಣಿಗೆಗೂ ಇನ್ನಷ್ಟು ಹಾನಿಯಾಗಿ ಸರಕಾರದ ಬೊಕ್ಕಸ ಇನ್ನಷ್ಟು ಬರಿದಾದೀತು. ಇದು ಸರಕಾರಗಳಿಗೆ ತಿಳಿದಿರುವ ಮಗ್ಗಲ ಮುಳ್ಳಾಗಿದೆ. ಸರಕಾರಗಳು ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ತೆರಿಗೆ ನೀತಿಯ ಪಾರದರ್ಶಕತೆ ಮತ್ತು ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ಉತ್ಪಾದನೆ, ಹೂಡಿಕೆ ಮತ್ತು ಬೇಡಿಕೆ ಹೆಚ್ಚಲು ಯಾವುದೇ ಬಿಗಿ ಕ್ರಮ ಕೈಗೊಂಡರೂ ಸಾಕಾರವಾಗುತ್ತಿಲ್ಲ.

ಇದೀಗ ತೆರಿಗೆ ಕಡಿಮೆ ಮಾಡಿದರೆ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿ, ಉತ್ಪಾದನೆಗೂ ಪೂರಕವಾಗಿ ಆರ್ಥಿಕ ಚಟುವಟಿಕೆಗಳ ವೇಗ ಹೆಚ್ಚುವುದಲ್ಲದೆ ಉತ್ಪಾದನೆ ಹೆಚ್ಚುತ್ತದೆ. ನಿರುದ್ಯೋಗ ಪ್ರಮಾಣ ಶೇ.14.83ಕ್ಕೆ ತಲುಪಿರುವುದು ಮತ್ತೊಂದು ಸವಾಲಾಗಿದೆ. ಸರಕಾರ ಹಣಕಾಸಿನ ಬಲವರ್ಧನೆಗಾಗಿ ಹೊಸ
ರೂಪರೇಷೆ ಗಳನ್ನು ರಚಿಸಬೇಕು. ಬೆಳವಣಿಗೆಯೇ ಸರಕಾರದ ಮತ್ತು ವಿತ್ತ ಇಲಾಖೆಯ ಮೊದಲ ಆದ್ಯತೆಯಾಗಬೇಕು. ಕೋವಿಡ್ 19ರಿಂದಾದ ವಿತ್ತೀಯ ಆಘಾತಗಳನ್ನು ಸರಿಪಡಿಸಲು ಆರ್ಥಿಕಾಭಿವೃದ್ಧಿ ದರ ಹೆಚ್ಚಾಗಬೇಕು, ಹಣಕಾಸು ವಲಯದ ಪ್ರಗತಿ, ತೆರಿಗೆ, ಆದಾಯ ಹೆಚ್ಚಳ, ಬೆಲೆ ಮತ್ತು ವೇತನ ಹತೋಟಿ, ಸರಕು ಪೂರೈಕೆ ಹೆಚ್ಚಳ, ತೆರಿಗೆ ಯೇತರ ಆದಾಯಗಳಿಂದ ಸಾಧ್ಯ.

ಕೋವಿಡ್ ನಂತರದಲ್ಲಿ ಉತ್ಪಾದನೆ ಮತ್ತು ಬೇಡಿಕೆ ಇವೆರಡರ ಮೇಲೆ ತೀರಾ ಕೆಟ್ಟ ಪರಿಣಾಮ ಉಂಟಾಗಿದೆ. ಸರಕಾರದ ಬಂಡವಾಳದೊಂದಿಗೆ ಖಾಸಗಿ
ಬಂಡವಾಳವೂ ಹರಿದು ಬಂದರೆ ಬೆಳವಣಿಗೆ ಸಾಧ್ಯ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದರೆ ಉದ್ಯಮಗಳ ಆರ್ಥಿಕ ಆರೋಗ್ಯ ಸುಧಾರಿಸಬಹುದು ಹಾಗೂ ಉದ್ಯಮಗಳಲ್ಲಿ ಕೆಲಸ ಮಾಡುವ ವರಿಗೆ ಒಂದಿಷ್ಟು ಭದ್ರತೆ ದೊರೆಯಬಹುದು. ವಿತ್ತೀಯ ಕೊರತೆಗೆ ಸಂಬಂಧಪಟ್ಟಂತೆ- 2020-21ರ ಕೊರತೆ ಶೇ.7.3 ಕ್ಕೆ ಜಿಗಿದಿದೆ.

ಹೆಚ್ಚಿನ ವೆಚ್ಚ ಹಾಗೂ ಕಡಿಮೆ ಆದಾಯದ ಕಾರಣದಿಂದಾಗಿ ವಿತ್ತೀಯ ಕೊರತೆಯು ಹಾಲಿ ಆರ್ಥಿಕ ವರ್ಷದಲ್ಲಿ 17.04 ಲಕ್ಷ ಕೋಟಿಯಿಂದ 17.33 ಲಕ್ಷ ಕೋಟಿ
ರು.ವರೆಗೆ ಜಾಸ್ತಿಯಾಗಬಹುದು. ವಿತ್ತೀಯ ಕೊರತೆಯು ಶೇ.7.8 ಆಗಬಹುದು ಶೇ.ಕ್ಕೂ ತಲುಪಬಹುದು ಎಂದು ಕೇರ್ ರೇಟಿಂಗ್ ವರದಿ ಹೇಳಿದೆ. ಇದು ಶೇ.3ಕ್ಕೆ ಇಳಿಯ ಬೇಕಾಗಿತ್ತು. ಅರ್ಥಶಾಸ್ತ್ರಜ್ಞರ ವ್ಯಾಖ್ಯಾನದ ಪ್ರಕಾರ ಮುಂದಿನ ವರ್ಷಕ್ಕೆ ಶೆ.8 ಕ್ಕೇರಬಹುದು. ತೆರಿಗೆಗಳು ಸರಕಾರದ ಮಹತ್ವಪೂರ್ಣ ಆದಾಯಗಳು. ಇವುಗಳಲ್ಲಿ ಕಾರ್ಪೋರೇಟ್ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್‌ನ ವಾಣಿಜ್ಯ ತೆರಿಕೆ, ಸುಂಕಗಳು, ಮಾರಾಟ ತೆರಿಗೆ, ಸುಂಕಗಳು, ಮನರಂಜನಾ ತೆರಿಗೆ ಇತ್ಯಾದಿ ಪ್ರತ್ಯಕ್ಷ ತೆರಿಗೆಗಳಾಗಿವೆ.

ಜಿಎಸ್‌ಟಿ, ಸೇವಾ ತೆರಿಗೆ, ಕೇಂದ್ರ ವಿಽಸುವ ಅಬಕಾರಿ ಸುಂಕ ಪರೋಕ್ಷ ತೆರಿಗೆಗಳಾಗಿವೆ. ಪರೋಕ್ಷ ತೆರಿಗೆಗಳು ಹೆಚ್ಚು ಉತ್ಪಾದಕರ. ಏಕೆಂದರೆ ಇವುಗಳಲ್ಲಿ ಮೂಲ ಬೆಲೆಗೆ ಸೇರಿಕೊಂಡಿರುತ್ತದೆ. ಒಂದು ದೇಶದಲ್ಲಿ ಪ್ರತ್ಯಕ್ಷ ತೆರಿಗೆಗಳ ಸಂಗ್ರಹವು ಪರೋಕ್ಷ ತೆರಿಗೆಯ ಸಂಗ್ರಹಣೆಗಿಂತ ಹೆಚ್ಚಾದಾಗ ದೇಶದ ಆರ್ಥಿಕತೆ
ತುಸು ಉತ್ತಮವಾಗಿರುತ್ತದೆ. ಆದರೆ ಭಾರತದಲ್ಲಿ ಶೇ.75 ಪರೋಕ್ಷ ತೆರಿಗೆ ಮತ್ತು ಶೇ.25 ಪ್ರತ್ಯಕ್ಷ ತೆರಿಗೆ ಇದು ತುಸು ಬದಲಾಗಬೇಕು. ಭಾರತವು ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒಪ್ಪಿಕೊಂಡು ಮೂರು ದಶಕಗಳು ಕಳೆದಿವೆ. ಈ ವ್ಯವಸ್ಥೆಯಲ್ಲಿ ಜನ ಬಡವರಾಗಿದ್ದರೆ, ಅವರಿಗೆ ಕೊಳ್ಳುವ ಶಕ್ತಿ ಇಲ್ಲದಿದ್ದರೆ ಸರಕಾರ ಗಳು ಆರ್ಥಿಕ ಸದೃಢತೆಯನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ.

ಸರಕಾರಗಳಲ್ಲಿ ಆರ್ಥಿಕತೆ ಚೈತನ್ಯಯುತವಾಗಿರದಿದ್ದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಕಳೆದುಕೊಳ್ಳುತ್ತವೆ. ಆದುದರಿಂದ ಜನರಲ್ಲಿ ಹೆಚ್ಚು ಹಣ ಚಲಾವಣೆ ಮಾಡಬೇಕಾಗಿರುವುದು ಈ ಹೊತ್ತಿನ ಜರೂರು. ಕರೋನಾ ವೈರಾಣು ತಡೆಯುವ ಉದ್ದೇಶದಿಂದ ಜಾರಿಗೆ ತಂದ ಲಾಕ್‌ಡೌನ್ ಪರಿಣಾಮವಾಗಿ ಮಾರುಕಟ್ಟೆಗಳು ಬಾಗಿಲು ಹಾಕಿದವು. ಉತ್ಪಾದನಾ ವಲಯದಲ್ಲಿನ ಅವಕಾಶ ಕ್ಷೀಣಿಸಿತು, ಹಾಗಾಗಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡರು. ವೇತನ ಕಡಿತ, ಆದಾಯ
ಕುಸಿತದ ಬಿಸಿ ಅನುಭವಿಸಿದವರು.

ದೇಶದ ಪ್ರಸಕ್ತ ಸನ್ನಿವೇಶದ ಆದಾಯದ ಒಂದು ರುಪಾಯಿಯ 36 ಪೈಸೆ ಸಾಲದಿಂದ, ಜಿಎಸ್ ಟಿಯಿಂದ 15 ಪೈಸೆ, ಆದಾಯ ತೆರಿಗೆಯಿಂದ 14 ಪೈಸೆ, ಕಾರ್ಪೊರೇಟ್ ತೆರಿಗೆಯಿಂದ 13ಪೈಸೆ, ಅಬಕಾರಿಯಿಂದ 8 ಪೈಸೆ ಮತ್ತು ತೆರಿಗೆಯೇತರ 5 ಪೈಸೆ ಸಂಗ್ರಹವಾದರೆ ಖರ್ಚು ಒಂದು ರುಪಾಯಿಯಲ್ಲಿ 20 ಪೈಸೆ ಸಾಲದ ಬಡ್ಡಿಗಾಗಿ, 16 ಪೈಸೆ ರಾಜ್ಯಗಳಿಗೆ ಸುಂಕ ಮತ್ತು ತೆರಿಗೆ, 13 ಪೈಸೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ, 10 ಪೈಸೆ ಹಣ ವರ್ಗಾವಣೆಗೆ, ಇತರೆ ವೆಚ್ಚಕ್ಕೆ 10 ಪೈಸೆ, ಸಬ್ಸಿಡಿಗೆ 9 ಪೈಸೆ, 8 ಪೈಸೆ ರಕ್ಷಣೆಗಾಗಿ ವೆಚ್ಚ ಮಾಡುತ್ತಿದೆ.

ಸರಕಾರ ಸಾಲ ಮತ್ತು ಬಡ್ಡಿಯ ಶೂಲಕ್ಕೆ ಸಿಲುಕಿದೆ. ಸರಕಾರಗಳಿಗೆ ಇನ್ನೆರಡು 3 ವರ್ಷಗಳಾದರೂ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ.
ಪ್ರಸಕ್ತ ಕೋವಿಡ್ ಸಂದಿಗ್ಧತೆಯಲ್ಲಿಯೂ ಕೂಡಾ ತೆರಿಗೆ ವರಮಾನ ಸಂಗ್ರಹದಲ್ಲಿ ವೃದ್ಧಿಯಾಗುತ್ತಿದೆ. ಜುಲೈ ತಿಂಗಳಿನಲ್ಲಿ 1.16 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿರುವುದು. ಏಪ್ರಿಲ್ ಮೊದಲನೆಯ ಅಲೆಯ ಅಂತ್ಯದಲ್ಲಿ .141 ಲಕ್ಷ ಕೋಟಿ ರು. ಸಂಗ್ರಹಣೆ. ಇದು ಆರ್ಥಿಕ ವ್ಯವಸ್ಥೆಯ ಚೇತರಿಕೆಯ ಸಂಕೇತ. ಕೋವಿಡ್ ಎರಡನೆಯ ಅಲೆಯಿಂದ ಮೇ ತಿಂಗಳಲ್ಲಿ ಬಹುತೇಕ ರಾಜ್ಯ ಗಳು, ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಅಥವಾ ಭಾಗಶಃ ಲಾಕ್‌ಡೌನ್ ಹೇರಿದ್ದವು
ಆದ್ದರಿಂದ ಜೂನ್ ವರಮಾನದಲ್ಲಿ ಇಳಿಕೆಯಾಗಿತ್ತು.

ತೆರಿಗೆ ಸಂಗ್ರಹದಲ್ಲಿನ ಹೆಚ್ಚಳವು ಜೂನ್‌ನಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗಿರುವುದನ್ನು ಸೂಚಿಸುತ್ತದೆ. ಮುಂದಿನ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಸಂಗ್ರಹ ನಿರೀಕ್ಷಿಸಲಾಗಿದೆ ಅದಲ್ಲದೆ ಪರೋಕ್ಷ ತೆರಿಗೆಗಳು ನಮ್ಮ ಆರ್ಥಿಕತೆಗೆ ಬಲ ತುಂಬಬಲ್ಲವು.