ಮುಂದಿನ ಇಪ್ಪತ್ತು ವರ್ಷಗಳಲ್ಲೇ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಲಿದೆ ಉಷ್ಣತೆ
ನವದೆಹಲಿ: ಈ ಶತಮಾನದ ಅಂತ್ಯಕ್ಕೆ ಸರಾಸರಿ ಉಷ್ಣತೆ ಹೆಚ್ಚಳವನ್ನು 1.5 ಡಿ. ಸೆಲ್ಷಿಯಸ್ಗೆ ಸೀಮಿತಗೊಳಿಸಲು ಜಗತ್ತು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರು ವಂತೆಯೇ ವಿಶ್ವಸಂಸ್ಥೆಯ ಸಮಿತಿಯೊಂದು ಹೊಸ ಬಾಂಬ್ ಸಿಡಿಸಿದೆ.
ಮುಂದಿನ ೨೦ ವರ್ಷಗಳಲ್ಲೇ ವಿಶ್ವದ ತಾಪಮಾನ ಸರಾಸರಿ 1.5 ಡಿಗ್ರಿ ಸೆಲ್ಷಿಯಸ್ ಏರಿಕೆಯಾಗಲಿದೆ ಎಂದು ಹವಾಮಾನ ಬದಲಾವಣೆ ಕುರಿತಾದ ವಿಶ್ವ ಸಂಸ್ಥೆಯ ಅಂತರ್ ಸರಕಾರದ ಸಮಿತಿ (ಐಪಿಸಿಸಿ) ತನ್ನ ಹೊಸ ವರದಿಯಲ್ಲಿ ತಿಳಿಸಿದೆ. ಈ ವರದಿಯು ನಿಜವಾದದ್ದೇ ಆದರೆ ಅದು ಸಾಕಷ್ಟು ಅನಾಹುತ ಕಾರಿ ಪರಿಣಾಮ ಗಳನ್ನು ಉಂಟುಮಾಡಲಿದೆ.
ಬಿಸಿಅಲೆ, ಸುದೀರ್ಘ ಬೇಸಿಗೆ ಋತು, ಕಡಿಮೆ ಶೀತಕಾಲ, ಸಮುದ್ರಮಟ್ಟದಲ್ಲಿ ತ್ವರಿತ ಏರಿಕೆ ಮೊದಲಾದವು ಈ ಪರಿಣಾಮಗಳು. ಭಾರತದ ಹಲವು ಪ್ರದೇಶ ಗಳಲ್ಲಿ ಈ ರೀತಿಯ ಹವಾಮಾನ ವೈಪರೀತ್ಯಗಳು ಈಗಾಗಲೇ ಗೋಚರಿಸತೊಡಗಿವೆ. ಹಿಮಾಲಯ ಭಾಗದಲ್ಲಿ ನೀರ್ಗಲ್ಲುಗಳು ಕರಗುವುದು ಇಂಥದೊಂದು ವಿದ್ಯಮಾನ. ಹವಾಮಾನ ಬದಲಾವಣೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿರುವ ಐಪಿಸಿಸಿ, 3000 ಪುಟಗಳ ಸುದೀರ್ಘ ವರದಿಯನ್ನು ಪ್ರಕಟಿಸಿದೆ
ಈ ವರದಿಯ ನಾಲ್ಕು ಮುಖ್ಯಾಂಶಗಳು
ಮಾನವ ನಿರ್ಮಿತ: ವಾತಾವರಣದಲ್ಲಿ ಉಷ್ಣಾಂಶದಲ್ಲಿ ಏರಿಕೆಯು ಔದ್ಯಮೀಕರಣ ಸಮಯದಲ್ಲಿ ಪ್ರಾರಂಭವಾಯಿತು. ತೈಲ, ಕಲ್ಲಿದ್ದಲು, ಕಟ್ಟಿಗೆ ಮೊದಲಾದ
ಪಳೆಯುಳಿಕೆ ಇಂಧನ ಬಳಕೆಯಿಂದ ಕಾರ್ಬನ್ ಡೈ ಆಕ್ಸೈಡ್, ಮೀಥೇನ್ ಮೊದಲಾದ ಬಿಸಿ ಅನಿಲಗಳ ಬಿಡುಗಡೆಗೆ ಕಾರಣವಾಗಿದೆ.
ಪ್ಯಾರಿಸ್ ಗುರಿ: 2015ರ ಪ್ಯಾರಿಸ್ ಒಪ್ಪಂದಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಸಹಿ ಹಾಕಿವೆ. ತಾಪಮಾನ ಏರಿಕೆಯ ಸರಾಸರಿ ಏರಿಕೆ 2 ಡಿಗ್ರಿ ಹಾಗೂ ಈ ಶತಮಾನದ ಅಂತ್ಯಕ್ಕೆ 1.5 ಡಿಗ್ರಿ ಸೆಲ್ಷಿಯಸ್ಗೆ ಮಿತಿಗೊಳಿಸಲು ಆದರೆ ಮುಂದಿನ 20 ವರ್ಷಗಳಲ್ಲೇ ಈ ಮಿತಿಯನ್ನು ದಾಟುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ವಿಪರೀತ ಪರಿಣಾಮಗಳು: ಮಂಜಿನಗಡ್ಡೆಯ ಕರಗುವಿಕೆ ಹಾಗೂ ಸಮುದ್ರಮಟ್ಟ ಹೆಚ್ಚಳದಂಥ ಪರಿಣಾಮಗಳು ಈಗಾಗಲೇ ಗೋಚರಿಸತೊಡಗಿವೆ. ಉಷ್ಣಾಂಶ
ಹೆಚ್ಚಳ, ಚಂಡಮಾರುತಗಳು ಹೆಚ್ಚುತ್ತಿವೆ. ಹಸಿರುಮನೆ ಅನಿಲಗಳ ಪರಿಣಾಮದಿಂದ ಈ ಸ್ಥಿತಿ ಉಲ್ಬಣಗೊಳ್ಳಲಿದೆ.
ಒಂದಷ್ಟು ಆಶಾಭಾವ: ವರದಿಯ ಬಹುತೇಕ ಅಂಶಗಳು ನಿರಾಶಾಭಾವ ಮೂಡಿಸುವಂತಿವೆ. ಆದರೂ ಒಂದಷ್ಟು ಆಶಾಭಾವವೂ ಇದೆ. ಉದಾಹರಣೆಗೆ ಹಿಮದ ಪದರಗಳು ಸಮುದ್ರದ ಅಲೆಗಳನ್ನು ತಡೆಗಟ್ಟಬಹುದು. ಇದು ಅಪರೂಪದ ಸಾಧ್ಯತೆ ಆದರೂ ಅಸಾಧ್ಯವೇನಲ್ಲ ಎನ್ನುತ್ತದೆ ವರದಿ.