ತನ್ನಿಮಿತ್ತ
ಡಾ.ಭಾರತಿ ಮರವಂತೆ
baratim22@gmail.com
ಹಬ್ಬ ಬಂತೆಂದರೆ ಮನೆ ಮನಗಳಲ್ಲಿ ಸಡಗರ ಸಂಭ್ರಮ. ವಿಭಿನ್ನವಾದ ಸಿಹಿ ಊಟ, ಹೊಸ ಬಟ್ಟೆ, ಮಾವಿನ ಎಲೆಗಳ ತೋರಣ, ಅಲ್ಲಲ್ಲಿ ಸೇಡಿ ಮತ್ತು ಅಕ್ಕಿ ಹಿಟ್ಟಿನ ಚಿತ್ತಾರಗಳ ಶೃಂಗಾರ. ದೂರದಲ್ಲಿ ನೆಲೆ ನಿಂತವರ ಆಗಮನದ ಈ ಸಂದರ್ಭ ಬಂಧುತ್ತ್ವ, ಪ್ರೀತಿ, ಕಾಳಜಿ, ಗೌರವ, ಆದರಗಳ ಸಂಕೇತವೂ ಹೌದು.
ಪ್ರಸ್ತುತದಲ್ಲಿ ಸಂಪ್ರದಾಯ ಮೌಢ್ಯವೆಂಬಂತೆ ತೋರಿದರೂ ಜನಪದರ ಸೂಕ್ಷ್ಮ ಸಂವೇದನೆಗಳು ಆರಾಧನೆ – ಆಚರಣೆಯ ರೂಪದ ಸಾಮಾಜಿಕ ಸಾಮರಸ್ಯವೇ ಇಲ್ಲಿ ಪ್ರಧಾನ ಸಂಗತಿ. ಮಾನವೀಯ ಸಂಬಂಧಗಳ ಬೆಸುಗೆ, ಕೊಡುಕೊಳ್ಳುವಿಕೆ, ಮುರಿದುಬಿದ್ದ ಹಳೇ ಸಂಬಂಧಗಳ ಕೂಡುವಿಕೆ, ಪ್ರಕೃತಿಯೊಡಗಿನ ಅವಿನಾ ಭಾವ ಸಂಬಂಧ, ಹಳೆಯದನ್ನು ಮರೆತು ಮರುಜೋಡಣೆಯ ಸಡಗರ ಈ ದಿನದ ಸೂಕ್ಷ್ಮ ಮಾನಸಿಕ ಸ್ಥಿತಿಗಳಲ್ಲಿ ಗೋಚರ ವಾಗುತ್ತದೆ.
ನಾಗರಪಂಚಮಿ ವರ್ಷದ ಆರಂಭದ ಹಬ್ಬವಾಗಿದ್ದು ‘ಪಂಚಮಿ ಹಬ್ಬ’ ಎಂದೇ ಮನೆಮಾತಾಗಿದೆ. ನಾಗನ ಆರಾಧನೆ ಜನಪದ ಸಂಸ್ಕೃತಿಯಲ್ಲಿ ವಿಶೇಷ. ಜನಪದರು ನಾಗಪ್ಪ, ನಾಗದೇವರು, ಕಣ್ಣಿಗೆ ಕಾಣುವ ದೇವರು ಎಂದೇ ಕರೆಯುತ್ತಾರೆ. ಈ ಹಬ್ಬಕ್ಕೆ ವಾರದ ಪೂರ್ವದಲ್ಲಿಯೇ ಎಲ್ಲಾ ತಯಾರಿ ಆರಂಭ. ಮದುವೆ ಯಾದ ನವದಂಪತಿಗಳು ಈ ಸಂದರ್ಭದಲ್ಲಿ ತವರಿಗೆ ಬರಲೇಬೇಕೆಂಬ ನಂಟು ಜನಪದರಲ್ಲಿದೆ. ಏಳು ಹೆಡೆಯ ಆದಿಶೇಷ ಇಡೀ ಭೂ ಮಂಡಲವನ್ನು ಹೊತ್ತು ಕೊಂಡಿದ್ದಾನೆ, ತಲೆಯಿಂದ ಇನ್ನೊಂದೆಡೆಗೆ ಬದಲಿಸುತ್ತಾನೆ ಆಗ ಪ್ರಕೃತಿಯಲ್ಲಿ ಗಾಳಿ ಮಳೆ ಭೂಕಂಪ ಏರುಪೇರಾಗುತ್ತದೆ ಇತ್ಯಾದಿ ಊಹಾತ್ಮಕ ಕಥೆಗಳು ಐತಿಹ್ಯಗಳು ಜನಪದರಲ್ಲಿದೆ. ಕರಾವಳಿ ಭಾಗದಲ್ಲಂತೂ ಮನೆಮನೆಗಳ ಆವರಣಗಳಲ್ಲಿಯೂ ನಾಗಬನವಿದೆ.
ನಾಗನನ್ನು ಆರಾಧಿಸುವ ಹುತ್ತಕ್ಕೆ ‘ಸ್ವಾಮಿ ಮನೆ’ ಎಂದೇ ಕರೆಯುತ್ತಾರೆ. ಈ ಭಾಗ ‘ನಾಗಲೋಕ’ವಾಗಿತ್ತು, ನಾಗಸಾಧುಗಳು ಸಂಚರಿಸುತ್ತಿದ್ದರು ಎನ್ನುವ ಐತಿಹ್ಯವೂ ಇದೆ. ಇಲ್ಲಿ ಮನೆಮಕ್ಕಳಿಗೆಲ್ಲಾ ನಾಗರಾಜ, ನಾಗ, ನಾಗಿ, ಸುಬ್ರಹ್ಮಣ್ಯ (ಸುಬ್ಬು, ಸುಬ್ಬಣ್ಣ, ಸುಬ್ರಾಯ) ಇತ್ಯಾದಿ ಹೆಸರುಗಳನ್ನೇ ಭಕ್ತಿಯ ದ್ಯೋತಕ ವಾಗಿ ಇಟ್ಟಿರುತ್ತಾರೆ. ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ನಾಗನ ಆರಾಧನೆ ವಿಶೇಷ. ಕೇರಳದಲ್ಲಿ ಬುಡಕಟ್ಟು ಜನಸಮುದಾಯದರು ಇಷ್ಟಾರ್ಥ ಈಡೇರಿಸಿ ಕೊಳ್ಳಲು ವರ್ಣರಂಜಿತವಾದ ಬೃಹತ್ ಮಂಡಲವನ್ನೇ ಬರೆಯುತ್ತಾರೆ. ಪಂಜಾಬ್ ರಾಜ್ಯದಲ್ಲಿ ಮನೆ ಮನೆಗಳಿಗೆ ಸರ್ಪಬಾಧೆ ಬರಬಾರದು ಎಂದೇ ಗೋಡೆಗಳಲ್ಲಿ ಕಪ್ಪುಬಣ್ಣದ ನಾಗನ ಚಿತ್ರ ಬರೆಯುತ್ತಾರೆ.
ಉತ್ತರ ಪ್ರದೇಶದಲ್ಲಿಯೂ ಮನೆಗಳ ಗೋಡೆಗಳ ಮೇಲೆ ಸರ್ಪ ಹಾಗೂ ಗರುಡನ ಚಿತ್ರ ಬರೆಯುತ್ತಾರೆ. ಭಾರತದ ಬುಡಕಟ್ಟು ಜನಸಮುದಾಯದವರ ಮನೆಗಳ ಗೋಡೆಗಳಲ್ಲಿ ವಿಶಿಷ್ಟ ಶೈಲಿಯ ನಾಗಪ್ಪನ ಚಿತ್ರಗಳು ಆಕರ್ಷಕವಾಗಿರುತ್ತವೆ. ಉತ್ತರ ಕರ್ನಾಟಕದಲ್ಲಿ ಬೆಳದಿಂಗಳಪ್ಪನ ರಂಗೋಲಿ ಚಿತ್ರ ಬರೆಯುವಾಗ
ಎದುರುಬದುರಾಗಿರುವ ನಾಗಪ್ಪನ ಮರಿಗಳ ಚಿತ್ರಗಳು, ಗುಡಿಹುಣ್ಣಿಮೆಯ ಬೆಳದಿಂಗಳ ಚಿತ್ರಗಳಲ್ಲಿ ನಾಗಪ್ಪನ ಚಿತ್ರಗಳೇ ಪ್ರಧಾನ. ಮೈಮೇಲೆ ಹಚ್ಚೆ ಚಿತ್ರಗಳಲ್ಲಿ ನಾಗರ ಹೆಡೆ, ನಾಗರ ಜಡೆ, ಗೆಜ್ಜೆ ನಾಗಪ್ಪ, ಜೋಡು ನಾಗಪ್ಪ, ಇತ್ಯಾದಿ ನಾಗನ ಚಿತ್ರಗಳು ಕುತೂಹಲ ಹುಟ್ಟಿಸುತ್ತವೆ. ಕರಾವಳಿಯ ಬುಡಕಟ್ಟು ಜನಸಮು ದಾಯದವರು ಕಾಡ್ಯ ಅಂದರೆ ಕಾಳಿಂಗ ಸರ್ಪನ ಆರಾಧನೆಯಲ್ಲಿ ರಂಗು ರಂಗಿನ ಮಂಡಲಗಳನ್ನು ರಚಿಸುತ್ತಾರೆ.
ಇಲ್ಲಿಯ ನಾಗಾರಾಧನೆಯ ನಾಗಮಂಡಲವಂತೂ ಪ್ರಾಕೃತಿಕ ವರ್ಣಗಳಿಂದ ಮಂಡಲ ಚಿತ್ತಾರಗಳಲ್ಲಿ 4-8-16 ಗಂಟುಗಳ(ಪವಿತ್ರ) ನಾಗನ ಚಿತ್ರ ಅಚ್ಚರಿ
ಹುಟ್ಟಿಸುತ್ತದೆ. ಇಲ್ಲಿ ಬಳಸುವ ರಂಗಿನ ವರ್ಣಗಳೆಲ್ಲವೂ ಪ್ರಕೃತಿಯ ಎಲೆಗಳು, ಬೀಜಗಳು, ಗಡ್ಡೆಗಳಿಂದಲೇ ತಯಾರಿಸಿರುತ್ತಾರೆ. ಬುಡಕಟ್ಟು ಜನಸಮು ದಾಯದಿಂದ ತೊಡಗಿ ಎಲ್ಲೆಡೆ ಫಲವಂತಿಕೆಯ ಸಂಕೇತವಾಗಿ ನಾಗಾರಾಧನೆ ಪ್ರಚಲಿತದಲ್ಲಿದೆ. ಸರ್ಪಹುಣ್ಣು (ಸರ್ಪ ಸುತ್ತು) ಕಾಯಿಲೆ ಬಂದಾಗ ಹುಣ್ಣಿರುವ ಭಾಗದಲ್ಲಿ ಹುತ್ತದ ಕೆಂಪು ಮಣ್ಣಿಗೆ ಪ್ರಾಕೃತಿಕ ದ್ಯವ್ಯಗಳನ್ನು ಮಿಶ್ರ ಮಾಡಿ ರೇಖಾ ವಿನ್ಯಾಸಗಳನ್ನು ಬರೆಯುವ ಜನಪದ ವೈದ್ಯರು ಇದ್ದಾರೆ. ಇದರಿಂದ ವ್ಯಕ್ತಿಯ ದೇಹ ತಂಪಾಗಿ ರೋಗ ಗುಣವಾಗುತ್ತದೆ ಎನ್ನುವ ನಂಬಿಕೆ ಜನಪದರಲ್ಲುಂಟು.
ನಾಗರಪಂಚಮಿಯ ದಿನ ಕರ್ನಾಟಕದ ಅನೇಕ ಭಾಗಗಳಲ್ಲಿ ನಾಗಪ್ಪನಿಗೆ ಹಾಲೆರೆದು ಅರಶಿನವನ್ನು ಒಪ್ಪಿಸಿ ಎಳನೀರು, ಬಾಳೆಹಣ್ಣಿನ ಗೊನೆಗಳನ್ನು ಅರ್ಪಿಸುವ ಸಂಪ್ರದಾಯ ಎಲ್ಲೆಡೆಯಿದೆ. ಮುಂಜಾನೆ ಅಂಗಳದಲ್ಲಿ ಅಕ್ಕಿಹಿಟ್ಟು ಮತ್ತು ಅರಶಿನ ಮಿಶ್ರಣದಿಂದ ನಾಗನ ಮರಿಗಳು ಮನೆ ಒಳಗೆ ಬಂದಂತೆ, ಸಂಜೆ ನಾಗನ ಮರಿಗಳು ಮನೆ ಒಳಗಡೆಯಿಂದ ಹೊರ ಹೋದಂತೆ ರಚಿಸುತ್ತಾರೆ. ಈ ದಿನ ಬೆಣಚು ಕಲ್ಲಿನ ಪುಡಿಗಳಿಂದ ರಂಗೋಲಿ ಬರೆಯಬಾರದು ಅದರಿಂದ ಬರೆದರೆ ನುಣುಪಾದ ನಾಗನ ಮೈಗೆ ಚುಚ್ಚುತ್ತದೆ ಎನ್ನುವ ನಂಬಿಕೆ ಜನರ ಸೂಕ್ಷ್ಮ ಸಂವೇದನೆಯನ್ನು ವ್ಯಕ್ತಗೊಳಿಸುತ್ತದೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಕೆಮ್ಮಣ್ಣಿನಿಂದ ನಾಗನ ರಂಗೋಲಿ ಚಿತ್ರಗಳನ್ನು ಬರೆದು ಅದನ್ನು ಅಲಂಕರಿಸುತ್ತಾರೆ. ಹೊಸ್ತಿಲ ಮೇಲೂ ಈ ದಿನ ಎರಡೆರಡು ಎಳೆಗಳಿಂದ ನಾಗನ ಚಿತ್ರವನ್ನು ಹೋಲುವ ವಿನ್ಯಾಸದ ರಂಗೋಲಿ ಬರೆಯುತ್ತಾರೆ. ಈ ರೀತಿ ನಾಗಗಳನ್ನು ಚಿತ್ರಿಸುವುದರಿಂದ ವರ್ಷವಿಡೀ ನಾಗಗಳ ಭಯ ವಿರುವುದಿಲ್ಲ, ಚರ್ಮ ರೋಗಗಳು ಬರುವುದಿಲ್ಲ, ದೇಹದ ಮೈಕಾಂತಿ ಹೆಚ್ಚಾಗುತ್ತದೆ ಇತ್ಯಾದಿ ನಂಬಿಕೆಗಳು ಜನಪದರಲ್ಲಿದೆ. ನಾಗನ ಚಿತ್ತಾರಗಳಲ್ಲಿ ಪ್ರಕೃತಿಗೆ ಸಹಜವಾದ (ಕೃತಕವಲ್ಲದ) ಪರಿಕರಗಳನ್ನೇ ಬಳಸುವುದು ಗಮನಾರ್ಹ.
ರಂಗೋಲಿಯಲ್ಲಿ ನಾಗ : ಪ್ರಕೃತಿಯಲ್ಲಿನ ಸಕಲಜೀವ ಸಂಕುಲಗಳ ಸಂರಕ್ಷಣೆ, ಪೋಷಣೆ ಅದನ್ನು ದೈವತ್ತ್ವದಲ್ಲಿ ಕಾಣುವುದು ನಾಗಾರಾಧನೆಯಲ್ಲಿದೆ. ನನ್ನ
ಬಾಲ್ಯದಲ್ಲಿ ನಾಗರಪಂಚಮಿ ದಿನ ನಮ್ಮ ಮನೆ ಒಳಗೆ ನಾಗ ಬಂದಿತ್ತು. ನನ್ನ ಅಜ್ಜಿ ಜನಪದರಲ್ಲಿದ್ದ ಜ್ಯೋತಿಷ್ಯದ ನಂಬಿಕೆಯಂತೆ ಅವರೂ ಅದೇ ದಾರಿ ಹಿಡಿ ದಿದ್ದರು.
‘ಬೇಲಿ ಮೇಲಿದ್ದ ಮರಗಳನ್ನು ಕಡಿದದ್ದರಿಂದಾಗಿ’ ಮನೆ ಒಳಗೆ ನಾಗ ಬಂದಿದೆ ಎಂದು ಊರಲ್ಲೆಲ್ಲಾ ಸುದ್ದಿಯಾಗಿತ್ತು. ಇದರ ಹಿಂದಿನ ರಹಸ್ಯದ ಬಗ್ಗೆ ಯಕ್ಷಪ್ರಶ್ನೆ ನನಗೆ ಚಿಕ್ಕವಳಿರುವಾಗ ಕಾಡುತ್ತಿತ್ತು. ನಾಗನ ಬನವಿದೆ ಎಂದಾಗ ಅಲ್ಲಿ ಬೃಹತ್ ಆಕಾರದ ಹಣ್ಣಿನ ಮರಗಳು, ತಪ್ಪಲಲ್ಲಿ ಹೂವಿನಗಿಡಗಳು, ಆಸುಪಾಸಿನಲ್ಲಿ
ಕಲ್ಪವೃಕ್ಷಗಳನ್ನು ನೆಡುತ್ತಾರೆ. ಆ ಬನವನದ ಆಸುಪಾಸಿನ ಭಾಗಗಳೂ ಶುಚಿತ್ತ್ವದಲ್ಲಿರುತ್ತದೆ. ಮಲಿನ ಮಾಡಿದರೆ ನಾಗದೇವರಿಗೆ ಕೋಪಬರುತ್ತದೆ ಎಂಬ ಬಲವಾದ ನಂಬಿಕೆಯಿದೆ. ಬನದ ಸುತ್ತಲೆಲ್ಲಾ ಗಿಡಮರಬಳ್ಳಿಗಳು ಸೊಂಪಾಗಿ ರಾಶಿರಾಶಿಯಾಗಿ ಸಾಕಷ್ಟು ಬೆಳೆದಿರುತ್ತವೆ.
‘ಊರಿಗೊಂದು ವನ’ ಎಂಬಂತೆ ‘ಮನೆಗೊಂದು ನಾಗಬನ’ ಕರಾವಳಿಯಲ್ಲಿ ಕಾಣುತ್ತೇವೆ. ಬನದಲ್ಲಿರುವ ಒಂದು ಎಲೆಯನ್ನೂ ಕೀಳಲು ಜನ ಹೆದರುತ್ತಾರೆ. ಅಲ್ಲಿ ಅನಗತ್ಯ ಪ್ರವೇಶ ಯಾರೂ ಮಾಡುವುದಿಲ್ಲ. ಬನದೊಳಗೆ ಕಾಗೆಗಳು, ಕೀಟಗಳು ಪ್ರವೇಶಿಸುತ್ತಿರುತ್ತದೆ. ಮನೆಮನೆಗಳಲ್ಲಿ ಗಿಡ-ಮರ-ಬಳ್ಳಿಗಳನ್ನು ಬೆಳೆಸಬೇಕು
ಕಡಿಯಬಾರದು ಅದರಿಂದಲೇ ಆಮ್ಲಜನಕ ದೊರೆಯುತ್ತದೆ, ಪರಿಸರವನ್ನು ಸ್ವಚ್ಟತೆಯಿಂದ ಇಟ್ಟುಕೊಳ್ಳಬೇಕು ಇಲ್ಲವಾದರೆ ಅನಾಹುತ ಕಟ್ಟಿಟ್ಟ ಬುತ್ತಿ ಎನ್ನುವ ಎಚ್ಚರಿಕೆಯ ಪರಿಸರ ಸಂದೇಶ ನಾಗಾರಾಧನೆಯಲ್ಲಿದೆ.
ಮನೆ ಅಂಗಳಕ್ಕೆ ನಾಗ ಬಂದರೆ ಮನೆಯ ಯಜಮಾನನಿಗೆ ಏನೋ ಸಮಸ್ಯೆ ಇದೆ ದೇವ್ರು ಅದನ್ನು ಹೇಳಲು ಬಂದ್ರು ಎಂಬ ನಂಬಿಕೆಯೊಂದಿಗೆ ಅದರೊಂದಿಗೆ ಮಾತನಾಡುತ್ತಾರೆ. ಮಕ್ಕಳು ಮರಿಗಳು ಓಡಾಡುತ್ತಿರುತ್ತಾರೆ ಹೆದರುತ್ತಾರೆ ಎಂದು ಕೈ ಮುಗಿದು ಅಕ್ಕಿಕಾಳು ಅರಶಿನ ಹಾಕಿ ‘ನಿನ್ನ ಬನವಿದೆ ಅಲ್ಲಿಗೆ ಮರಳಿ ಹೋಗು’ ಎಂದು ವಿನಂತಿಸುತ್ತಾರೆ. ಪ್ರಕೃತಿಯೊಡನೆ ಜನಪದರ ಅಂತರಂಗದ ನಿವೇದನೆ ಈ ಆರಾಧನೆಯಲ್ಲಿದೆ. ನಾಗರ ಪಂಚಮಿ ಹಬ್ಬದಂದು ಜೋರಾಗಿ ಮಳೆ ಬಂದು, ನಾಗನ ಕಲ್ಲಿಗೆ ಮಾಡಿದ ಅಭಿಷೇಕ ಮಳೆಯ ನೀರೊಂದಿಗೆ ಸಮುದ್ರ ಅಲ್ಲಿಂದ ನಾಗಲೋಕ ಸೇರುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಜನರಿಗೂ ಪ್ರಕೃತಿಗೂ ನಡುವಿನ ಒಡನಾಟದ ಸಂಕೇತವಾಗಿದೆ. ನಾಗನಿಗೆ ಹಾಲು-ಜೇನು, ಹಸುವಿನ ತುಪ್ಪ, ಬಾವಿಯ ನೀರು, ಕಲ್ಪವೃಕ್ಷದ ಎಳನೀರು, ಹೂವುಗಳು, ಬಾಳೆಹಣ್ಣಿನ ಕೊನೆ, ಅರಶಿನದ ತನು ಈ ದಿನದಂದು ಅರ್ಪಿಸುತ್ತಾರೆ. ಹಸುವಿನ ಉತ್ಪನ್ನವೇ ಆಗಿರಬೇಕು ಎನ್ನುವ ನಂಬಿಕೆ ಪಶುಪಾಲನಾ ಸಂಸ್ಕೃತಿಯ ಸಂಕೇತವಿದು.
ಅರಶಿನ ಎಲೆಯಿಂದ ಸಿಹಿ ಕಡುಬು, ಹಾಲು ಕಡುಬು ಈ ದಿನದ ವಿಶೇಷ ಸಿಹಿಯಾಗಿದೆ. ಅರಶಿನವಂತೂ ರೋಗನಿರೋಧ ಶಕ್ತಿಯಾಗಿ ಬಳಸುತ್ತೇವೆ. ಪ್ರಕೃತಿಯ ಎಲ್ಲಾ ಉತ್ಪನ್ನಗಳನ್ನು ವರ್ಷಕ್ಕೆ ಒಂದು ದಿನವಾದರೂ ಪೂಜಿಸುವ ಪ್ರಕೃತಿಯನ್ನು ಪೋಷಿಸುವ ಸಂದೇಶ ಈ ನಾಗರಪಂಚಮಿಯಂದು ವಿಶೇಷವಾಗಿ ಕಾಣು ತ್ತೇವೆ. ನಾಗನ ಕಲ್ಲಿನ ತಳದಲ್ಲಿರುವ ಮೃತ್ತಿಕೆಯನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವುದು ಭೂತಾಯಿಗೆ ನೀಡುವ ಗೌರವವಾಗಿದೆ. ನಾಗಮಂಡಲದ ಪ್ರದರ್ಶನದ ಸಂದರ್ಭದಲ್ಲಿ ಮಂಡಲದ ನೇರ ಮೇಲ್ಭಾಗ ಬಾಳೆ, ತೆಂಗು, ಅಡಿಕೆ, ಸಿಂಗಾರದ ಕೊನೆಗಳು ಇತ್ಯಾದಿ ಪ್ರಾಕೃತಿಕ ಸೌಂದರ್ಯವೇ ಇಲ್ಲಿ ಪ್ರಧಾನ.
ಮೇಲ್ಭಾಗದಲ್ಲಿ ದೇವತೆಗಳು ಆಸೀನರಾಗಿ ಮಂಡಲದ ವೈಭವ ವೀಕ್ಷಿಸುತ್ತಾರೆ ಎನ್ನುವ ನಂಬಿಕೆಯಿದೆ. ಈ ವೈಭವವು ಪ್ರಕೃತಿಮಾತೆಯ ಆರಾಧನೆಯಾಗಿದೆ.
ನಾರಾರಾಧನೆಯ ಸೂಕ್ಷ್ಮತೆಗಳನ್ನು ಗಮನಿಸಿದಾಗ “ಬೆಳಗಾಗ ನಾನೆದ್ದು ಯಾರ‍್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂತಾಯ ಎದ್ದೊಂದು ಗಳಿಗೇ ನೆನೆದೇನ” ಎನ್ನುವ ಮೌಖಿಕ ಪರಂಪರೆಯ ತ್ರಿಪದಿ ಮತ್ತೆ ಮತ್ತೆ ಗುಣಗುಣಿಸುವುದಂತೂ ಸತ್ಯ. ಒಟ್ಟಾರೆ ನಾಗನ ಆರಾಧನೆ ಪರೋಕ್ಷವಾಗಿ ಇದೊಂದು ಪ್ರಕೃತಿಯ ಆರಾಧನೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.