Saturday, 14th December 2024

ನೆನೆಯೋಣ ಸ್ವಾತಂತ್ರ‍್ಯ ಸಮರದ ಅಜ್ಞಾತ ಯೋಧರನು

ತಿಳಿರುತೋರಣ

ಶ್ರೀವತ್ಸ ಜೋಶಿ

srivathsajoshi@yahoo.co.in

ಅಜ್ಞಾತ ಅಥವಾ ಅನಾಮಿಕ ಯೋಧರು ಎನ್ನುವುದಕ್ಕಿಂತಲೂ, ಇಂಗ್ಲಿಷ್‌ನಲ್ಲಿ UnsungHeroes ಎನ್ನುತ್ತೇವಲ್ಲ ಹಾಗೆಂದರೇನೇ ಮತ್ತಷ್ಟು ಗೌರವ. ಆ ಥರದವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹುತಾತ್ಮರಾಗಿದ್ದಾರೆ ಭಾರತ ಮಾತೆಯನ್ನು ದಾಸ್ಯಶೃಂಖಲೆಯಿಂದ ಬಿಡಿಸುವ ಏಕೈಕ ಗುರಿ ಇಟ್ಟುಕೊಂಡಿದ್ದವರು.

ದುರ್ದೈವವೆಂದರೆ ‘ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ಹೆಸರು ಹೇಳಿ’ ಎಂದೊಡನೆ ನಮ್ಮಲ್ಲಿ ಹೆಚ್ಚಿನವರಿಗೆ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು,
ಸುಭಾಷ್ ಚಂದ್ರ ಬೋಸ್, ಬಿ.ಆರ್.ಅಂಬೇಡ್ಕರ್, ಝಾನ್ಸಿರಾಣಿ ಲಕ್ಷ್ಮೀಬಾಯಿ – ಇದಕ್ಕಿಂತ ಮುಂದೆ ಹೋಗುವುದಿಲ್ಲ ಪಟ್ಟಿ. ಅಲ್ಪ ಸ್ವಲ್ಪ ದೇಶಭಕ್ತಿ ಬೆಳೆಸಿ ಕೊಂಡವರೂ ಇನ್ನೊಂದೈದು ಹೆಸರುಗಳನ್ನು ಹೆಚ್ಚು ಸೇರಿಸಿಯಾರು ಅಷ್ಟೇ. ಭಗತ್ ಸಿಂಗ್, ಚಂದ್ರಶೇಖರ ಆಝಾದ್, ವಿನಾಯಕ ದಾಮೋದರ ಸಾವರ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಬಾಲಗಂಗಾಧರ ತಿಲಕ್.

ಎರಡು ಕೈಗಳ ಬೆರಳೆಣಿಕೆ ಮುಗಿದ ಮೇಲೆ ಊಹುಂ. ಅದರಲ್ಲೂ ಈ ಶತಮಾನದಲ್ಲಿ ಹುಟ್ಟಿ ಬೆಳೆದವರಿಗಂತೂ ಇವಿಷ್ಟು ಹೆಸರು/ವ್ಯಕ್ತಿಗಳ ಬಗ್ಗೆ ಕೇಳಿ ಓದಿ ಗೊತ್ತಿರುವುದೂ ಅನುಮಾನವೇ. ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಗಾಂಧೀ ನೆಹರು ತಿಲಕ್ ಪಟೇಲ್ ಬೋಸ್ ಅಂಬೇಡ್ಕರ್ ಮುಂತಾದ ನೇತಾರರ ಯೋಗದಾನ ಹೆಚ್ಚಿನದು ಮತ್ತು ಮಹತ್ತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಅವರದಷ್ಟೇ ಗುಣಗಾನ ಮಾಡಿದರೆ ಸಾಕೇ? ಅದೂ ಬಹುತೇಕ ಸಂದರ್ಭ ಗಳಲ್ಲಿ ಅರೆ ಮನಸ್ಸಿನಿಂದ ಬರೀ ಕಾಟಾಚಾರಕ್ಕೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರವು ಈ ಬಾರಿ ‘ಆಝಾದಿ ಕಾ ಅಮೃತ್ ಮಹೋತ್ಸವ್’ ಸಂದರ್ಭದಲ್ಲಿ ಸ್ವಾತಂತ್ರ್ಯಸಂಗ್ರಾಮದ ‘ಅನ್‌ಸಂಗ್ ಹೀರೋ’ಗಳ ಪಟ್ಟಿ ಮಾಡಿ ಅವರಿಗೆ ಸಲ್ಲಬೇಕಿದ್ದ ಮರ್ಯಾದೆ ಗೌರವ ಗಳನ್ನು ಈಗಲಾದರೂ ಅವರೆಲ್ಲರ ಸ್ಮರಣೆಯ ಮೂಲಕ ಸಲ್ಲಿಸಲು ಹೊರಟಿರುವುದು ಸ್ವಾಗತಾರ್ಹ, ಪ್ರಶಂಸಾರ್ಹ ಕಾರ್ಯ.

ಮೋದಿಯವರ ಪಟ್ಟಿಯಲ್ಲಿ 147 ಜನ ‘ಅನ್‌ಸಂಗ್ ಹೀರೋ’ಗಳ ಹೆಸರುಗಳಿವೆಯಂತೆ. ಅಂದಹಾಗೆ ನಾನು ಈ ಸುದ್ದಿಯನ್ನೋದಿದ್ದು ಹಿಂದುಸ್ತಾನ್ ಟೈಮ್ಸ್  ಪತ್ರಿಕೆಯ ವೆಬ್ ಆವೃತ್ತಿಯಲ್ಲಿ. ಅಲ್ಲಿ 147 ಹೆಸರುಗಳ ಯಾದಿ ಯನ್ನೇನೂ ಕೊಟ್ಟಿರಲಿಲ್ಲ. ಆದರೆ ಸುದ್ದಿಯ ಕೊನೆಗೆ ಕಾಂಗ್ರೆಸ್ಸಿಗನೊಬ್ಬನ ಕೆಂಗಣ್ಣಿನ ಟ್ವೀಟ್‌ನ ಉಲ್ಲೇಖವಿತ್ತು. ‘ಭಾರತ  ಸ್ವಾತಂತ್ರ್ಯಸಂಗ್ರಾಮಕ್ಕೆ ಏನೇನೂ ಸಂಬಂಧವಿಲ್ಲದವರು, ಗಾಂಧೀಜಿಯವರನ್ನು ನಿರಂತರವಾಗಿ ವಿರೋಧಿಸುತ್ತಲೇ ಇದ್ದವರು, ಈಗ ಆಝಾದಿ ಕಾ ಅಮೃತ್ ಮಹೋತ್ಸವ್‌ದಲ್ಲಿ ಮೆರೆಯುತ್ತಿರುವುದು ಎಂಥ ವಿಪರ್ಯಾಸ!’ ಎಂದು ಆತನ ಬಡಬಡಿಕೆ.

ಯಥಾಪ್ರಕಾರ ಮೋದಿ ಮಾಡಿದ್ದೆಲ್ಲದ್ದಕ್ಕೆ ಮೊಂಡು ಮಾತೆತ್ತುವ ಮಂದಿಯದು ಇದರಲ್ಲೂ ಅಪಸ್ವರ ಇದ್ದೇ ಇರುತ್ತದೆನ್ನಿ. ದೇಶದ ಘನತೆ ಹೆಚ್ಚಿಸುವ ಸತ್ಕಾರ್ಯ ಗಳನ್ನು ತಾವು ಸ್ವತಃ ಮಾಡುವುದಿಲ್ಲ ಬೇರೆಯವರು ಮಾಡುವುದಕ್ಕೆ ಬಿಡುವುದಿಲ್ಲ ಎಂಬುದೇ ಅಂಥವರ ಜಾಯಮಾನವೆಂದ ಮೇಲೆ ಅದರಲ್ಲೇನೂ ಆಶ್ಚರ್ಯ ಪಡುವಂಥದ್ದೂ ಇಲ್ಲವೆನ್ನಿ. ಅವರ ಹಳವಂಡಗಳನ್ನೆಲ್ಲ ಅವರಿಗೇ ಬಿಟ್ಟು, ಸ್ವಾತಂತ್ರ್ಯಸಮರದ ಅಜ್ಞಾತ ಯೋಧರನ್ನು ಈ ಸಂದರ್ಭದಲ್ಲಿ ನೆನೆಯುವುದು ನಮ್ಮೆಲ್ಲರ
ಆದ್ಯ ಕರ್ತವ್ಯ. ಕೇಂದ್ರ ಸರಕಾರವು 147 ಜನರ ಪಟ್ಟಿಯನ್ನು ಮಾಡಿದ್ದು ಪ್ರಾತಿನಿಽಕವಾಗಿಯೇ ಇರಬಹುದು, ಅದು ನಮಗಿಲ್ಲಿ ಮುಖ್ಯವಲ್ಲ. ಆದರೆ ಮನೆ-ಮಠ-ಮಡದಿ-ಸಂಸಾರ ಎಲ್ಲವನ್ನೂ ಬಿಟ್ಟು ದೇಶಕ್ಕಾಗಿ ಹೋರಾಡಿದವರು, ಅಮಾನವೀಯ ಶಿಕ್ಷೆಗಳನ್ನೆದುರಿಸಿದವರು, ನಿರ್ದಯದಿಂದ ಗಲ್ಲಿಗೇರಿಸಲ್ಪಟ್ಟವರು, ಶಿಕ್ಷೆ ತಪ್ಪಿಸಲಿಕ್ಕೆಂದು ತಾವೇ ಮಡಿದವರು… ಒಬ್ಬರೇ ಇಬ್ಬರೇ!

ಅಷ್ಟೇ ಅಲ್ಲ, ಕೆಚ್ಚೆದೆಯ ಕಡುಗಲಿಗಳಾಗಿ ಮುನ್ನುಗ್ಗುತ್ತಿದ್ದವರಿಗೆ ಬೆಂಗಾವಲಿನಂತೆ ನಿಂತು ತಮ್ಮಿಂದಾದ ಸಹಾಯ ಮಾಡಿ ಸ್ವಾತಂತ್ರ್ಯಸಂಗ್ರಾಮದಲ್ಲಿ ತಾವೂ
ಅಳಿಲು ಸೇವೆ ಅರ್ಪಿಸಿದ ಹೆಂಡತಿ ಮಕ್ಕಳು ಬಂಧುಬಳಗ… ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು ಖಂಡಿತವಾಗಿಯೂ ಸಲ್ಲಲೇಬೇಕಾದ್ದೇ.
ಖುದಿರಾಮ್ ಬೋಸ್. ಬ್ರಿಟಿಷರ ವಿರುದ್ಧ ಸೆಣಸಿ ಆಗಸ್ಟ್ 11, 1908ರಂದು ಗಲ್ಲಿಗೇರಿದಾಗ ವಯಸ್ಸು ಕೇವಲ 18 ವರ್ಷ 7 ತಿಂಗಳು 11 ದಿನ! ನೇಣಿಗೆ ಕೊರಳೊಡ್ಡುವ ಮೊದಲು ಆತನ ಬಾಯಿಯಿಂದ ಬಂದ ಮಾತು ‘ವಂದೇ ಮಾತರಂ’ ಎಂದೇ.

ಬ್ರಿಟಿಷ್ ಅಧಿಕಾರಿಗಳ ಮೇಲೆ ನಾಡಬಾಂಬ್‌ಗಳನ್ನೆಸೆದು ಅವರನ್ನು ಫಡ್ಚ ಮಾಡುವುದೇ ಖುದಿರಾಮ್‌ನ ಗುರಿ. ಮ್ಯಾಜಿಸ್ಟ್ರೇಟನಾಗಿದ್ದ ಕಿಂಗ್ಸ್‌ಫೋರ್ಡ್ ಮೇಲೂ
ಬಾಂಬೆಸೆದಿದ್ದನು ಖುದಿರಾಮ್. ಅವನಂತೆಯೇ ಬಿಸಿರಕ್ತದ ತರುಣರನೇಕರು ಜೀವದ ಹಂಗು ತೊರೆದು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕುತ್ತಿದ್ದರು. ಒಬ್ಬೊಬ್ಬರೂ ಬೆಂಕಿಯ ಚೆಂಡುಗಳೇ. ಖುದಿರಾಮನೇ ಅವರಿಗೆಲ್ಲ ಮುಂದಾಳು. ಸ್ವಾತಂತ್ರ್ಯಸಂಗ್ರಾಮದ ಆ ಕಾಲಘಟ್ಟವನ್ನು ಆತ ‘ಅಗ್ನಿ ಯುಗ’ ಎಂದೇ ಗುರುತಿಸುತ್ತಿದ್ದನಂತೆ. ವೈಸ್‌ರಾಯ್ ಮತ್ತು ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಹಾರ್ಡಿಂಜ್‌ನ ಮೇಲೆ ಬಾಂಬ್ ಎಸೆಯುವ ಯೋಜನೆ ಹಾಕಿದವನು ಅವಧ್ ಬಿಹಾರಿ ಎಂಬ ಇನ್ನೊಬ್ಬ ಯೋಧ. ಆತನ ಕಾರ್ಯಕ್ಷೇತ್ರ ಉತ್ತರಪ್ರದೇಶ ಮತ್ತು ಪಂಜಾಬ್ ಪ್ರಾಂತ್ಯ.

1914 ಫೆಬ್ರವರಿಯಲ್ಲಿ ಬಂಧನಕ್ಕೊಳಗಾಗಿ ಮೇ 1, 1915ರಂದು ಗಲ್ಲು ಶಿಕ್ಷೆಗೆ ಗುರಿಯಾದನು. ಮತ್ತೊಬ್ಬ ಬಾಂಬ್ ಶೂರ ಬಟುಕೇಶ್ವರ ದತ್ತ್. ಭಗತ್‌ಸಿಂಗ ನೊಡನೆ ಸೇರಿಕೊಂಡು ಬ್ರಿಟಿಷ್ ಅಧಿಕಾರಿಗಳ ನಿದ್ದೆಗೆಡಿಸಿದವನು. 8 ಏಪ್ರಿಲ್ 1929ರಂದು ಹೊಸದಿಲ್ಲಿಯ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ ಅಧಿವೇಷನ ನಡೆಯುತ್ತಿರುವಾಗಲೇ ‘ಇನ್ ಕ್ವಿಲಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತ ಬಾಂಬ್ ಗಳನ್ನೆಸೆದವನು. ಅದಕ್ಕಾಗಿ ಭಗತ್‌ಸಿಂಗ್‌ನೊಟ್ಟಿಗೇ ಜೀವಾವಧಿ ಶಿಕ್ಷೆ ಪಡೆದವನು. ಸೆರೆಮನೆಯಲ್ಲಿ ಕೈದಿಗಳಿಗೆ ಬ್ರಿಟಿಷರು ನೀಡುತ್ತಿದ್ದ ಅಮಾನವೀಯ ಶಿಕ್ಷಾವಿಧಾನಗಳನ್ನು ಖಂಡಿಸಿ ಅವರಿಬ್ಬರೂ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಒಂದಿಷ್ಟು ಯಶಸ್ಸನ್ನೂ ಪಡೆದಿದ್ದರು. ಭಗತ್‌ಸಿಂಗ್‌ಗೆ ಬೇರೊಂದು ಅಪರಾಧಕ್ಕಾಗಿ 1931ರಲ್ಲಿ ಗಲ್ಲುಶಿಕ್ಷೆಯಾಯಿತು.

ಬಟುಕೇಶ್ವರ ದತ್ತ್ ಸ್ವಾತಂತ್ರ್ಯ ಸಿಕ್ಕಿದಮೇಲೂ ಕೆಲಕಾಲ ಬದುಕಿದ್ದನು, ಅತ್ಯಂತ ಬಡತನದಲ್ಲಿ. ಸ್ವತಂತ್ರ ಭಾರತವು ಈತನಿಗೆ ಯಾವೊಂದು ಮನ್ನಣೆಯನ್ನೂ ಕೊಡದೆ ಸೌಕರ್ಯವನ್ನೂ ಒದಗಿಸದೆ ಕೃತಘ್ನತೆ ಮೆರೆಯಿತು. ರಾಮಪ್ರಸಾದ್ ಬಿಸ್ಮಿಲ್ ಎಂಬ ಸ್ವಾತಂತ್ರ್ಯಯೋಧ ಕಾಕೋರಿ ರೈಲು ಡಕಾಯಿತಿ ಕೇಸ್‌ನ ರೂವಾರಿ. ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್ ಎಂಬ ಕ್ರಾಂತಿಕಾರಿ ಸಂಘಟನೆಯ ಸ್ಥಾಪಕ ಸದಸ್ಯ. ಈತ ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ದೇಶ ಭಕ್ತಿಯ ಕವಿತೆಗಳನ್ನೂ ರಚಿಸುತ್ತಿದ್ದನು. ‘ಸರ್ಫರೋಷೀ ಕೀ ತಮನ್ನಾ’ ಎಂಬ ಕವಿತೆಯನ್ನು ಸ್ವಾತಂತ್ರ್ಯಚಳುವಳಿಯ ಕ್ರಾಂತಿಗೀತೆಯನ್ನಾಗಿಸಿದ್ದೂ ರಾಮಪ್ರಸಾದ್ ಬಿಸ್ಮಿಲ್‌ನೇ.

ಕಾಕೋರಿ ರೈಲು ಡಕಾಯಿತಿ ಕೇಸ್‌ನಲ್ಲಿ ಅಷ್‌ಫಕುಲ್ಲಾ ಖಾನ್ ಮತ್ತು ಇನ್ನಿಬ್ಬರೊಂದಿಗೆ ರಾಮಪ್ರಸಾದ್ ಬಿಸ್ಮಿಲ್‌ಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ಡಿಸೆಂಬರ್ 19, 1927ರಂದು ನೇಣಿಗೆ ಕೊರಳೊಡ್ಡಿದಾಗ ಆತನ ವಯಸ್ಸು 30 ವರ್ಷ. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಆದೇಶ ನೀಡಿದ್ದ ಜನರಲ್ ಮೈಕೇಲ್ ಡಾಯರ್‌ ನನ್ನು ಗುಂಡಿಕ್ಕಿ ಕೊಂದ ಉಧಮ್ ಸಿಂಗ್ ಮತ್ತೊಬ್ಬ ‘ಅನ್‌ಸಂಗ್ ಹೀರೋ’. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಕಣ್ಣಾರೆ ಕಂಡು ಎದೆಯಲ್ಲಿ ರೋಷ ತುಂಬಿಕೊಂಡಿದ್ದ ಉಧಮ್ ಸಿಂಗ್, ಮೈಕೇಲ್ ಡಾಯರ್‌ನನ್ನು ಒಂದಲ್ಲ ಒಂದು ದಿನ ಮುಗಿಸುತ್ತೇನೆಂದು ಆವತ್ತೇ ಪಣ ತೊಟ್ಟಿದ್ದನು.

21 ವರ್ಷಗಳವರೆಗೆ ಆ ಹಗೆಯ ಧಗೆಯನ್ನು ಪೋಷಿಸಿಕೊಂಡು ಕೊನೆಗೂ ಡಾಯರ್‌ನ ಹತ್ಯೆ ಮಾಡುವಲ್ಲಿ ಯಶಸ್ವಿಯಾದನು. ಆತನ ಈ ಕೃತ್ಯವನ್ನು ಗಾಂಽಜಿ ಮತ್ತು ನೆಹರು ಇಬ್ಬರೂ ಖಂಡಿಸಿದ್ದರು. ಸ್ವಾತಂತ್ರ್ಯ ಗಳಿಸುವುದಕ್ಕೆ ಆ ರೀತಿಯ ಸೇಡು ಸರಿಯಾದ ಮಾರ್ಗವಲ್ಲ, ನಾನು ಇದರಿಂದ ತುಂಬ ನೊಂದಿದ್ದೇನೆ ಎಂದು ಗಾಂಽಜಿಯವರೆಂದರೆ, ಉಧಮ್ ಸಿಂಗ್ ಮಾಡಿದ್ದು ಸರಿಯಲ್ಲ, ಇದರಿಂದ ರಾಜಕೀಯ ಧ್ರುವೀಕರಣ ಆಗದಿರಲಿ ಎಂಬುದೇ ನನ್ನ ಆಶಯ ಎಂದು ನೆಹರು ತನ್ನ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಬರೆದರು.

ಉಧಮ್ ಸಿಂಗ್‌ಗೆ ಬೆಂಬಲ ನೀಡಿದ್ದು ಸುಭಾಸಚಂದ್ರ ಬೋಸ್ ಮಾತ್ರ. 31 ಜುಲೈ 1940ರಂದು ಪೆಂಟನ್‌ವಿಲ್ ಜೈಲಿನಲ್ಲಿ ಉಧಮ್ ಸಿಂಗ್‌ನನ್ನು ನೇಣುಗಂಬಕ್ಕೆ ಏರಿಸಲಾಯಿತು. ಇವೆಲ್ಲ ಬಿಸಿ ರಕ್ತದ ತರುಣರ ಕಥೆಗಳಾದರೆ ವೀರ ನಾರಿಯರೂ ಹಿಂದೆ ಬಿದ್ದಿರಲಿಲ್ಲ. ಅರುಣಾ ಅಸಫ್ ಆಲಿ ಎಂಬಾಕೆ, 33 ವರ್ಷಗಳ ಪ್ರಾಯ ದಲ್ಲಿ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮುಂಬಯಿಯ ಗೊವಾಲಿಯಾ ಟ್ಯಾಂಕ್ ಮೈದಾನದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ತ್ರಿವರ್ಣ ಧ್ವಜ ವನ್ನೇ ರಾಷ್ಟ್ರಧ್ವಜವೆಂದು ಹಾರಿಸಿ ಸ್ವಾತಂತ್ರ್ಯದ ಕಹಳೆಯೂದಿದಳು.

ಬ್ರಿಟಿಷರು ಆಕೆಯನ್ನು ಬಂಧಿಸಲಿಕ್ಕೆ ಮುಂದಾದಾಗ ತಪ್ಪಿಸಿಕೊಂಡು ಭೂಗತ ಚಳವಳಿ ಆರಂಭಿಸಿದಳು. ಆಕೆಯ ಆಸ್ತಿಪಾಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿ
ಮಾರಲಾಯಿತು. ಆಕೆಯನ್ನು ಹುಡುಕಿಕೊಟ್ಟವರಿಗೆ ಬ್ರಿಟಿಷ್ ಸರಕಾರವು 5000 ರುಪಾಯಿಗಳ ಇನಾಮನ್ನೂ ಘೋಷಿಸಿತ್ತಂತೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೂ ಅರುಣಾ ಅಸಫ್ ಆಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯಳಾಗಿಯೇ ಇದ್ದಳಾದರೂ ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನಳಾಗಲಿಲ್ಲ. ಕ್ವಿಟ್
ಇಂಡಿಯಾ ಚಳವಳಿ ಮತ್ತು ಅಸಹಕಾರ ಆಂದೋಲನದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಧೀರೆ ಮಾತಂಗಿನಿ ಹಾಜ್ರಾ ಎಂಬಾಕೆ.

ಘೋಷಣೆ ಕೂಗುತ್ತ ಹೋಗುತ್ತಿದ್ದವಳತ್ತ ಅಧಿಕಾರಿಗಳು ಮೂರ್ನಾಲ್ಕು ಸಲ ಗುಂಡು ಹಾರಿಸಿದರೂ ಹೇಗೋ ತಪ್ಪಿಸಿಕೊಂಡವಳು. ವಂದೇ ಮಾತರಂ ಎಂದು ಮುಗಿಲು ಮುಟ್ಟುವಂತೆ ಘೋಷಣೆ ಕೂಗುತ್ತಲೇ ಮೃತ್ಯುವನ್ನಪ್ಪಿದ ಮಾತಂಗಿನಿ ಒಬ್ಬ ದಿಟ್ಟ ಹೋರಾಟಗಾರ್ತಿ. ಇಂಡಿಯನ್ ಆರ್ಮಿಯಲ್ಲಿ ಆಫೀಸರಳಾಗಿದ್ದು ಎರಡನೆಯ ಪ್ರಪಂಚ ಯುದ್ಧದಲ್ಲೂ ಪಾಲ್ಗೊಂಡಿದ್ದ ಲಕ್ಷ್ಮಿ ಸೆಹಗಲ್ ಮತ್ತೊಬ್ಬ ಎಂಟೆದೆಯ ಗಂಡುಬೀರಿ. ನೇತಾಜಿ ಸುಭಾಷ್ ಚಂದ್ರ ಬೋಸರು ಮಹಿಳಾ ಸೈನಿಕರದೇ ಒಂದು ಸೇನೆ ಕಟ್ಟಲಿದ್ದಾರೆ ಎಂದು ತಿಳಿದುಬಂದಾಗ ಎಲ್ಲರಿಗಿಂತ ಮೊದಲಿಗೆ ತನ್ನ ಹೆಸರನ್ನು ನೋಂದಾಯಿಸಿದ ದಿಟ್ಟ ಮಹಿಳೆ.

ಕಾಜಿ ಕಾಮ ಕೂಡ ಸ್ವಾತಂತ್ರ್ಯಸಂಗ್ರಾಮದಲ್ಲಿ ಹೋರಾಡಿದ ಒಬ್ಬ ವೀರ ನಾರಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಷ್ಟೇ ಅಲ್ಲ, ಲಿಂಗ ತಾರತಮ್ಯದ ವಿರುದ್ಧವೂ ದನಿಯೆತ್ತಿದವಳು. ತನ್ನ ಸ್ವಂತದ ಆಸ್ತಿಪಾಸ್ತಿಯನ್ನೆಲ್ಲ ಹೆಣ್ಮಕ್ಕಳ ಅನಾಥಾಶ್ರಮಕ್ಕೆ ಬರೆದುಕೊಟ್ಟವಳು. 1907ರಲ್ಲಿ ಜರ್ಮನಿಯ ಸ್ಟುಟ್‌ಗರ್ಟ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್ ಸೋಶಿಯಲಿಸ್ಟ್ ಸಮ್ಮೇಳನದಲ್ಲಿ  ಭಾರತದ ಧ್ವಜವನ್ನು ಅರಳಿಸಿದವಳು. 1857ರ ಸಿಪಾಯಿದಂಗೆಗಿಂತಲೂ ಹಿಂದಕ್ಕೆ ಹೋದರೆ ವೇಲು
ನಾಚಿಯಾರ್ ಎಂಬೊಬ್ಬ ಭಾರತೀಯ ನಾರಿಯ ಹೆಸರು ಕೂಡ ಚರಿತ್ರೆಯಲ್ಲಿ ಸಿಗುತ್ತದೆ. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದನಿಯೆತ್ತಿದ ಈಕೆ ರಾಮನಾಥಪುರಮ್‌ನ
ರಾಜಕುಮಾರಿಯಾಗಿದ್ದವಳು. ನಮ್ಮ ಕಿತ್ತೂರಚೆನ್ನಮ್ಮನಂತೆಯೇ, ಆಕೆಗಿಂತಲೂ ಮೊದಲೇ, ಬ್ರಿಟಿಷರಿಗೆ ಕಪ್ಪ ಕೊಡಲಾರೆ ಎಂದು ಖಡಾಖಂಡಿತವಾಗಿ ಹೇಳಿ ಅದರಂತೆಯೇ ನಡೆದವಳು. ರಾಣಿ ಗೈದಿನಿಲು ಎಂಬಾಕೆ ಇನ್ನೊಬ್ಬ ಹೋರಾಟಗಾರ್ತಿ.

ನಾಗಾ ಪಂಥದವಳು, ನಾಗಾಗಳನ್ನು ಕ್ರಿಶ್ಚಿಯಾನಿಟಿಗೆ ಮತಾಂತರ ಮಾಡುವುದನ್ನು ತೀವ್ರವಾಗಿ ವಿರೋಧಿಸಿದವಳು. 13 ವರ್ಷದವಳಾಗಿದ್ದಾಗ ಬ್ರಿಟಿಷರನ್ನು ಮಣಿಪುರದಿಂದ ಓಡಿಸುವುದಕ್ಕಾಗಿ ಹೇರಾಕಾ ಚಳವಳಿ ಕೈಗೊಂಡಳು. 16 ವರ್ಷದವಳಾಗಿದ್ದಾಗ ಬ್ರಿಟಿಷರಿಂದ ಜೀವಾವಧಿ ಶಿಕ್ಷೆಗೊಳಗಾದಳು. ‘ರಾಣಿ’ ಎಂಬ ಉಪಾಧಿ ಸಿಕ್ಕಿದ್ದು ಜವಹರಲಾಲ್ ನೆಹರು ಅವರಿಂದಲೇ. 17ರ ಹರೆಯದಲ್ಲಿ ಬ್ರಿಟಿಷರಿಂದ ಹತ್ಯೆಗೊಳಗಾದ ಮತ್ತೊಬ್ಬ ಧೀರೆ ಕನಕಲತಾ ಬರುಆ ಎಂಬ ಹೆಸರಿ ನವಳು. ಆಕೆ ಮಾಡಿದ ಅಪರಾಧ? ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಬ್ರಿಟಿಷರ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದ್ದು. ಇದನ್ನೆಲ್ಲ ಎಣಿಸಿಕೊಂಡರೆ ನಿಜಕ್ಕೂ ಮೈ ಝುಮ್ಮೆನ್ನುತ್ತದೆ! ಬ್ರಿಟಿಷರು ಅಷ್ಟು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಿದ್ದರೂ ಅದ್ಯಾವು ದಕ್ಕೂ ಅಂಜದೆ ಅಳುಕದೆ ಹದಿಹರೆಯದ ಹುಡುಗಿಯರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿ ಕೊಳ್ಳುತ್ತಿದ್ದರೆಂದರೆ ಅವರಲ್ಲಿ ದೇಶಭಕ್ತಿ ಮತ್ತು ಅದಕ್ಕೋಸ್ಕರ ಧೈರ್ಯ ಎಷ್ಟಿರಬೇಡ!

ಅನಕೃ ಅವರು ಬರೆದ ‘ಗಿರಿಜವ್ವನ ರೊಟ್ಟಿ’ ಕಥೆ ಸಹ ನನಗಿಲ್ಲಿ ನೆನಪಾಗುತ್ತಿದೆ. ಈ ಹಿಂದೆ ಒಂದು ಅಂಕಣ ಬರಹದಲ್ಲಿ ಅದನ್ನು ಪ್ರಸ್ತಾವಿಸಿದ್ದೆ. ಬ್ರಿಟಿಷರ ಅಡಿ ಯಾಳಾಗಿ ಕೆಲಸ ನಿರ್ವಹಿಸುತ್ತಿದ್ದ ಗುರುಬಸಪ್ಪ ಎಂಬ ಪೊಲೀಸ್ ಅಧಿಕಾರಿಯ ಮನೆಗೆ ಆತನಿಲ್ಲದಿದ್ದ ಅಪರರಾತ್ರಿ ಹೊತ್ತಿನಲ್ಲಿ ದುಗ್ಗಪ್ಪನೆಂಬೊಬ್ಬವ ಸ್ವಾತಂತ್ರ್ಯ ಹೋರಾಟಗಾರನು ಆಶ್ರಯ ಕೇಳಿ ಬರುವನು. ಗುರುಬಸಪ್ಪನಿಂದಲೇ ಏಟು ತಿಂದು ಆತ ರಕ್ತಸಿಕ್ತನಾಗಿರುವನು. ಗುರುಬಸಪ್ಪನ ಹೆಂಡತಿ ಗಿರಿಜವ್ವ ಆತನಿಗೆ ಆಶ್ರಯ ಕೊಡುವಳು. ದುಗ್ಗಪ್ಪ ತನ್ನ ಕಥೆಯನ್ನೆಲ್ಲ ಗಿರಿಜವ್ವಳಿಗೆ ಹೇಳುವನು. ಆಕೆಗೆ ಕರುಣೆಯುಕ್ಕಿ ಬಂದು ಅವನ ಗಾಯಗಳಿಗೆ ಚಿಕಿತ್ಸೆ ಮಾಡುವಳು. ಹಸಿವು ನೀಗಿಸಲಿಕ್ಕಾಗಿ ಅವನಿಗೆ ರೊಟ್ಟಿ-ಪಲ್ಯ ಕೊಡುವಳು. ಮನೆಯೊಳಗಿನ ಉಗ್ರಾಣದಲ್ಲಿ ಕಂಬಳಿ ಹೊದ್ದು ಅವಿತುಕೊಳ್ಳಲು ಹೇಳುವಳು. ಗುರುಬಸಪ್ಪ ಡ್ಯೂಟಿ ಮುಗಿಸಿದವನು ತಡರಾತ್ರಿ ಮನೆಗೆ ಬಂದು ಊಟವನ್ನೂ ಮಾಡದೆ ಹಾಗೇ ಮಲಗುವನು.

ಗಿರಿಜವ್ವ ತುಟಿಪಿಟಿಕ್ಕೆನ್ನದೆ ಸುಮ್ಮನಿರುವಳು. ಮಾರನೆಯ ದಿನ ಬೆಳಗ್ಗೆ ಗುರುಬಸಪ್ಪ ಎದ್ದು ಹಿತ್ತಲಕಡೆಗೆ ಹೋದಾಗ ಅಲ್ಲಿ ಬಿದ್ದಿದ್ದ ರಕ್ತದ ಕಲೆಗಳು ಅವನಿಗೆ ಕಾಣಿಸುವವು. ಏನಾಗಿರಬಹುದೆಂದು ಅವನ ಊಹೆ ನಿಜವಾಗುವುದು. ಗುರುಬಸಪ್ಪನು ಹಿತ್ತಲಿಂದ ಮನೆಯೊಳಕ್ಕೆ ಬರುವಷ್ಟರಲ್ಲಿ ಅವನು ಬಿಚ್ಚಿಟ್ಟಿದ್ದ ಬೆಲ್ಟ್‌ಗೆ ಸಿಕ್ಕಿಸಿದ್ದ ರಿವಾಲ್ವರ್‌ಅನ್ನು ಎತ್ತಿಕೊಂಡು ದುಗ್ಗಪ್ಪ ಪರಾರಿ! ಅನಕೃ ಅವರು ಇದನ್ನು ಸತ್ಯಘಟನೆಯಾಧರಿಸಿಯೇ ಬರೆದಿರಬಹುದು. ಏಕೆಂದರೆ ಸ್ವಾತಂತ್ರ್ಯ ಸಂಗ್ರಾಮದ ಆ ಕಾಲವೇ ಹಾಗಿತ್ತು. ಹಳ್ಳಿಹಳ್ಳಿಯಲ್ಲೂ ದುಗ್ಗಪ್ಪನಂಥ ಕೆಚ್ಚೆದೆಯ ಕಡುಗಲಿಗಳಿರುತ್ತಿದ್ದರು. ಬ್ರಿಟಿಷರ ಬೂಟು ನೆಕ್ಕುತ್ತ ಅವರಿಗೆ ನೆರವಾಗುವ ಗುರುಬಸಪ್ಪನಂಥವರೂ ಅಲ್ಲೊಬ್ಬರು ಇಲ್ಲೊಬ್ಬರು ಸಿಗುತ್ತಿದ್ದರು. ಅಂಥವನ ಪತ್ನಿಯಾಗಿದ್ದೂ ಬಸಪ್ಪನಂಥ ಸ್ವಾತಂತ್ರ್ಯ ಯೋಧನಿಗೇ ಸಹಾಯ ಮಾಡಲಿಕ್ಕೆ ಹೊರಟ ಗಿರಿಜವ್ವರೂ ದಂಡಿಯಾಗಿ ಸಿಗುತ್ತಿದ್ದರು- ರಾಮಸೇತು ನಿರ್ಮಾಣಕಾರ್ಯದಲ್ಲಿ ಮರಳ ಕಣಗಳನ್ನು ಹೊತ್ತು ತಂದು ಪೇರಿಸುತ್ತಿದ್ದ ಅಳಿಲಿನಂಥವರು.
ಅವರಾರೂ ತಮ್ಮ ದೇಶಭಕ್ತಿಯನ್ನು ಪ್ರದರ್ಶನದ ವಸ್ತುವಾಗಿಸಲಿಲ್ಲ.

ಈಗ ನಾವು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಂದನ್ನೂ ಹೇಳಿಕೊಳ್ಳುವಂತೆ, ಲೈಕುಗಳಿಗೆ ಹಪಹಪಿಸುವಂತೆ, ಅವರು ಯಾರೆದುರಿಗೂ ಬಡಾಯಿ ಕೊಚ್ಚಿಕೊಳ್ಳಲಿಲ್ಲ. ದೇಶವು ಗುಲಾಮಗಿರಿಯಿಂದ ಮುಕ್ತವಾಗಬೇಕು ಎಂಬ ಏಕೈಕ ಕನಸಿನ ಹೊರತು ಅವರಿಗೆ ಸ್ವಂತದ ಗಳಿಕೆಯಾಗಲೀ, ಕೀರ್ತಿ-ಖ್ಯಾತಿಗಳ ಹಪಹಪಿಯಾಗಲೀ ಏನೂ ಇರುತ್ತಿರಲಿಲ್ಲ. ಆದರೆ ಸಾವಿಗೂ ಅಂಜದೆ ಧೈರ್ಯದಿಂದ ಮುನ್ನುಗ್ಗುತ್ತಿದ್ದರು. ಇತರರನ್ನೂ ಹುರಿದುಂಬಿಸುತ್ತಿದ್ದರು. ಎಷ್ಟೋ ಜನ
ವೀರಮರಣವನ್ನಪ್ಪಿದರು. ಇನ್ನೆಷ್ಟೋ ಜನ ಹೇಳಹೆಸರಿಲ್ಲದವರಾಗಿ ಹೋದರು. ಬದುಕುಳಿದವರೂ ಬಡತನದ ಬೇಗುದಿಯಲ್ಲೇ ನೊಂದು-ಬೆಂದು ದಿನದೂಡಿ ದರು. ಕೊನೆಗೊಂದು ದಿನ ಇಲ್ಲವಾದರು. ನಮಗೋ ಅದಾವುದರದೂ ಅರಿವು-ಅಂದಾಜು ಏನೂ ಇಲ್ಲ! ಸ್ವಾತಂತ್ರ್ಯ ದಿನಾಚರಣೆ, ಕ್ಯಾಲೆಂಡರ್‌ನಲ್ಲಿ ಆಗಸ್ಟ್ 15 ಕೆಂಪು ಬಣ್ಣದಲ್ಲಿರುತ್ತದೆ, ಈ ವರ್ಷ ಭಾನುವಾರದಂದೇ ಬಂದಿರುವುದರಿಂದ ಒಂದು ರಜೆಯೂ ನಷ್ಟವಾಯಿತೆಂಬ ಕೊರಗು. ಪ್ರಭಾತಫೇರಿ ಅಂತೆ, ಧ್ವಜಾ ರೋಹಣ ಅಂತೆ, ಒಣಭಾಷಣ ಅಂತೆ ಯಾರಿಗೆ ಬೇಕಾಗಿದೆ? ಎಲ್ಲಿಯವರೆಗೆಂದರೆ ಬಾವುಟವನ್ನು ಸರಿಯಾಗಿ ಹಗ್ಗಕ್ಕೆ ಕಟ್ಟಿ ಅದು ಕಂಬದ ತುದಿ ತಲುಪಿದಾಗ ಅರಳುವಂತೆ ಮಾಡುವ ವಿಧಾನವೂ ನಮಗೆ ಸರಿಯಾಗಿ ಗೊತ್ತಿಲ್ಲ.

ಹಸಿರು ಮೇಲೆ ಕೇಸರಿ ಕೆಳಗೆ ಆಗಿ ಹಾರಿದರೂ ಹಾರೀತು. ಹೆಚ್ಚೆಂದರೆ ಮಾರನೆದಿನ ಪತ್ರಿಕೆಯಲ್ಲಿ ಅದೊಂದು ಸುದ್ದಿಯಾದೀತು. ಅದಕ್ಕೇನಂತೆ, ಸುದ್ದಿಯಾಗಿ ಇಂತಿಂಥವರು ಧ್ವಜಾರೋಹಣ ಮಾಡಿದರು ಭಾಷಣ ಕೊರೆದರು ಎಂದು ಅಚ್ಚಾದರೆ ನಮಗೆ ಮತ್ತಷ್ಟು ಸಂತೋಷವೇ. ನಾನು ನನ್ನದು ಎಂಬ ಮಮಕಾರ ಅಹಂಕಾರ ನಮ್ಮಲ್ಲಿ ಅದೆಷ್ಟು ಮನೆ ಮಾಡಿದೆಯೆಂದರೆ ದೇಶ ಹಾಳಾಗಿಹೋದರೆ ನನಗೇನು, ನನ್ನ ಉದ್ಧಾರದ್ದೊಂದೇ ನನಗೆ ಅನವರತ ಚಿಂತೆ. ಛೇ! ದೇಶದ ಸ್ವಾತಂತ್ರ್ಯಕ್ಕಾಗಿ ಸಾವನ್ನಪ್ಪಿದ್ದ ಆ ಸಾವಿರಸಾವಿರ ‘ಅನ್‌ಸಂಗ್ ಹೀರೋ’ಗಳೆಲ್ಲಿ, ಸೋಮಾರಿಯಾಗಿ ಕುಳಿತು ಉಣ್ಣಲು ದೇಶದಿಂದ/ಸರಕಾರದಿಂದ ನನಗೇನು ಸಿಕ್ಕೀತು ಎಂದು ಆಸೆಗಣ್ಣಿಂದ ನೋಡುವ ನಾವುಗಳೆಲ್ಲಿ! ಅದೆಷ್ಟು ಕುಬ್ಜರಾಗಿ ಕಾಣಿಸುತ್ತೇವೆ, ಅಲ್ಲವೇ?.