Friday, 22nd November 2024

ಪೂಜಾರ- ರಹಾನೆ ನಾಜೂಕಾಟ, ರಿಷಭ್‌ ಮೇಲೆ ನಿರೀಕ್ಷೆಯ ಭಾರ

ಲಾರ್ಡ್ಸ್: ಬ್ಯಾಟಿಂಗ್ ಲಯ ಕಂಡುಕೊಂಡ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ (45 ರನ್) ಮತ್ತು ಉಪನಾಯಕ ಅಜಿಂಕ್ಯ ರಹಾನೆ (61 ರನ್) ದಿಟ್ಟ ಜತೆಯಾಟದ ನೆರವಿನಿಂದ ಭಾರತ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೋಲಿನ ಅಪಾಯದಿಂದ ಪಾರಾಗುವತ್ತ ಮುನ್ನಡೆದಿದೆ.

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ 4ನೇ ದಿನದಾಟ ಭಾನುವಾರ, 27 ರನ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಮಂದ ಬೆಳಕಿನಿಂದ ದಿನದಾಟ ಬೇಗನೆ ಸ್ಥಗಿತಗೊಂಡಾಗ 6 ವಿಕೆಟ್‌ಗೆ 181 ರನ್ ಕಲೆ ಹಾಕಿದೆ.

ಸದ್ಯ ಭಾರತ 154 ರನ್ ಮುನ್ನಡೆ ಸಾಧಿಸಿದ್ದು, ಸೋಲಿನ ಭೀತಿಯಿಂದ ಬಹುತೇಕ ಪಾರಾಗಿದೆ. ಅಂತಿಮ ದಿನ ವಿಕೆಟ್‌ ಕೀಪರ್‌ ರಿಷಭ್ ಪಂತ್ (14*) , ಇಶಾಂತ್ ಶರ್ಮ (4*) ಕ್ರೀಸ್‌ನಲ್ಲಿದ್ದು, ಅಂತಿಮ ದಿನ ಮೊದಲ ಹೊತ್ತಿನ ಆಟ ಕುತೂಹಲ ಕೆರಳಿಸಿದೆ.

ಭಾರತ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜತೆಗೂಡಿದ ಪೂಜಾರ-ರಹಾನೆ ಆಪದ್ಭಾಂದವರಾದರು. ಪ್ರವಾಸದ ಈ ಹಿಂದಿನ ಇನಿಂಗ್ಸ್‌ಗಳಲ್ಲಿ ರನ್‌ಬರ ಎದುರಿಸಿದ್ದ ಜೋಡಿ ಸೂಕ್ತ ಸಮಯದಲ್ಲಿ ಭಾರತದ ರಕ್ಷಣೆಗೆ ನಿಂತಿತು. ಆತಿಥೇಯ ಬೌಲರ್‌ಗಳಿಗೆ ಕಗ್ಗಂಟಾದ ಜೋಡಿ 4ನೇ ವಿಕೆಟ್‌ಗೆ 49.3 ಓವರ್ ಎದುರಿಸಿ ಭರ್ತಿ 100 ರನ್ ಸೇರಿಸಿತು. ನಂತರ 12 ರನ್ ಅಂತರದಲ್ಲಿ ಇಬ್ಬರೂ ಪೆವಿಲಿಯನ್ ಸೇರಿದರು.